ಮಣಿಕಾಂತ್ ಬರೆಯುತ್ತಾರೆ: ನಾನೊಂದು ತೀರ, ನೀನೊಂದು ತೀರ..

ಎ ಆರ್  ಮಣಿಕಾಂತ್

ಚಿತ್ರ: ಅರುಣರಾಗ. ಗೀತೆರಚನೆ:  ದೊಡ್ಡರಂಗೇಗೌಡ

ಸಂಗೀತ:  ಎಂ. ರಂಗರಾವ್. ಗಾಯನ: ಕೆ.ಜೆ. ಏಸುದಾಸ್-ಚಿತ್ರಾ

ನಾನೊಂದು ತೀರ ನೀನೊಂದು ತೀರ

ನಾನೊಂದು ತೀರ ನೀನೊಂದು ತೀರ

ಮನಸು ಮನಸು ದೂರಾ

ಪ್ರೀತಿ ಹೃದಯ ಭಾರ ||ಪ||

ಹೂವು ಚೆಲುವಾಗಿ ಅರಳಿ ದುಂಬಿ ಸೆಳೆಯೋದು ಸಹಜ

ಹೆಣ್ಣು ಸೊಗಸಾಗಿ ಬೆಳೆದು ಗಂಡು ಬಯಸೋದು ಸಹಜ

ಹೀಗೇಕೆ ನಿನಗೆ ಏಕಾಂಗಿ ಬದುಕು

ಹೀಗೇಕೆ ನಿನಗೆ ಏಕಾಂಗಿ ಬದುಕು

ಸಂಗಾತಿ ಇರದೆ ಬಾಳೆಲ್ಲ ಬರಿದು ||೧||

ಭೂಮಿ ಆಕಾಶ ಸೇರಿ ಕಲೆತು ಕೂಡೋದು ಉಂಟೆ

ಕಡಲು ತಾನಾಗಿ ಹರಿದು ನದಿಗೆ ಸೇರೋದು ಉಂಟೆ?

ಚೂರಾದ ಹೃದಯ ಮತ್ತೊಮ್ಮೆ ಮಿಡಿದು

ಚೂರಾದ ಹೃದಯ ಮತ್ತೊಮ್ಮೆ ಮಿಡಿದು

ಜೀವಂತ ಬದುಕಿ ಸಂಬಂಧ ತರದು          ||೨||

ಅದು ಬಡವರ ಗುಡಿಸಲಿರಬಹುದು, ಶ್ರೀಮಂತರ ಬಂಗಲೆಯಿರಬಹುದು, ಮಹಾರಾಜರ ಅರಮನೆಯೇ ಆಗಿರಬಹುದು. ಅಲ್ಲೆಲ್ಲ ನಡೆದೇ ತೀರುವ ಒಂದು ತೀರಾ ಸಾಮಾನ್ಯ ಸಂಗತಿ ಎಂದರೆ ಗಂಡ ಹೆಂಡಿರ ಜಗಳ!

ಸ್ವಲ್ಪ ಜೋರಾಗಿಯೇ ಜಗಳವಾಯ್ತು ಅಂದುಕೊಳ್ಳಿ: ಅದರ ಪರಿಣಾಮವಾಗಿ, ಗಂಡ -ಹೆಂಡತಿ ಮಾತು ಬಿಡುತ್ತಾರೆ. ಮೌನದ ಮೊರೆ ಹೋಗುತ್ತಾರೆ. ಒಬ್ಬರಿಗೊಬ್ಬರು ಬೇಕೆಂದೇ ಸಿಗದೆ ತಪ್ಪಿಸಿಕೊಳ್ಳುತ್ತಾರೆ.  ಜಗಳವಾಡಿದ್ದೇವೆ ಎಂಬುದನ್ನೇ ನೆಪ ಮಾಡಿಕೊಂಡು ಪ್ರತ್ಯೇಕ ರೂಂಗಳಲ್ಲಿ ಮಲಗಲು ಶುರುಮಾಡುತ್ತಾರೆ. ಈ ಮಧ್ಯೆಯೇ ಛೆ, ನಾನು ದುಡುಕಬಾರದಿತ್ತು. ಜಗಳ ಮಾಡಬಾರದಿತ್ತು ಎಂದೆಲ್ಲ ಅಂದುಕೊಳ್ಳುತ್ತಾರೆ.

ಈ ಹಟವೆಲ್ಲಾ ಕೇವಲ ನಾಲ್ಕೇ ದಿನ. ಐದನೇ ದಿನದ ವೇಳೆಗೆ ಬೇಗ ರಾಜಿಯಾಗಬೇಕು, ಮಾತಾಡಬೇಕು, ಸರಸಕ್ಕೆ ಮುಂದಾಗಬೇಕು. ಈ ಸಂದರ್ಭದಲ್ಲೇ ‘ಸಾರಿ’ ಕೇಳಿಬಿಡಬೇಕು ಎಂಬ ಭಾವ ಇಬ್ಬರಿಗೂ ಬರುತ್ತದೆ. ಆದರೆ, ಅವನೇ ಮೊದಲು ಮಾತಾಡಿಸಲಿ ಎಂಬ ಹಟದಲ್ಲಿ ಇವಳು: ಅವಳೇ ಮೊದಲು ಹತ್ತಿರ ಬರಲಿ ಎಂಬ ಹಮ್ಮಿನಲ್ಲಿ ಇವನು ಉಳಿದುಬಿಡುತ್ತಾರೆ. ಅಂಥ ಸಂದರ್ಭದಲ್ಲಿ ಜಗಳವಾಡಿದ ಎಲ್ಲ ದಂಪತಿಯ ಮನದ ಪಿಸುಮಾತಿನಂತೆ ಕೇಳಿಬರುವ ಹಾಡೇ- ‘ನಾನೊಂದು ತೀರ, ನೀನೊಂದು ತೀರ, ಮನಸು ಮನಸು ದೂರ… ಪ್ರೀತಿ ಹೃದಯ ಭಾರ…’

More

%d bloggers like this: