ಕಳೆದ ಒಂದು ವಾರದಿಂದ ನೋವು ಗಾಢವಾಗಿ ಆವರಿಸಿದೆ.ಮನಸ್ಸು ಎಲ್ಲ ಆಸಕ್ತಿಗಳನ್ನು ನಿರಾಕರಿಸಿದೆ.ದೈನಂದಿನ ಯಾವುದೇ ಚಟುವಟಿಕೆಗಳೂ ನಿಂತಿಲ್ಲ.ಊಟ ತಿಂಡಿ, ಸ್ನಾನ ,ನಿದ್ರೆ,ಪಾಠ ,ಮಾತುಕತೆ,ಲ್ಯಾಪ್ ಟಾಪ್ ನಲ್ಲಿ ಊರಿನ ಪತ್ರಿಕೆಗಳ ಸುದ್ದಿಗಳನ್ನು ಓದುವುದು,ಸಂಜೆ ವಾಕಿಂಗ್ -ಹೀಗೆ ಎಲ್ಲವೂ.ಆದರೆ ಅವನ್ನು ಯಾವುದನ್ನೂ ಇಂದ್ರಿಯಗಳು ಸುಖಿಸುತ್ತಿಲ್ಲ.ಕಾತರ ತಲ್ಲಣ ಕುತೂಹಲ ಬೆರಗು ತೃಪ್ತಿ ಸಿಟ್ಟು -ಯಾವುದೂ ಅಲ್ಲಿ ಇಲ್ಲ.ಚೇತನ ಜಡವಾಗಿದೆ , ಮನಸ್ಸು ವಿಷಣ್ಣವಾಗಿದೆ.
ಕಳೆದ ವಾರ ಬುಧವಾರ ಬೆಳಗ್ಗೆ ಭಾರತೀಯ ಸಮಯ ಮಧ್ಯಾಹ್ನ ೧೨.೧೯ಕ್ಕೆ ಉಪ್ಪಿನಂಗಡಿ ಬಳಿ ಇರುವ ದೊಡ್ಡಕ್ಕನ ಮನೆಗೆ ಫೋನ್ ಮಾಡಿದೆ.ದೊಡ್ಡಕ್ಕ -ಜೀವನಕ್ಕ-ನೆ ಫೋನ್ ತೆಗೊಂಡರು.ಅಮ್ಮನ ಆರೋಗ್ಯ ವಿಚಾರಿಸಿದೆ.’ನಿನ್ನೆ ರಾತ್ರಿವರೆಗೆ ಚೆನ್ನಾಗಿದ್ದರು..ಅವರೇ ಊಟದ ಮೇಜಿನ ಬಳಿ ಬಂದು ಊಟಮಾಡಿದರು.ಆದರೆ ಈಗ ಬೆಳಗ್ಗಿನಿಂದ ಏಳುತ್ತಿಲ್ಲ.ಡಾಕ್ಟರ್ ಬಂದು ನೋಡಿ ಹೋದರು.ಕುಡಿಯಲು ಬಾಯಾರಿಕೆ ಕೊಟ್ಟಿದ್ದೇನೆ.’ಎಂದರು ಅಕ್ಕ.’ಸರಿ, ಮತ್ತೆ ಫೋನ್ ಮಾಡುತ್ತೇನೆ ‘ಎಂದವನೇ ,ಆತಂಕದಿಂದಲೇ ಬೆಂಗಳೂರಿನಲ್ಲಿ ಇರುವ ಮಗ ಸಮರ್ಥ ಮತ್ತು ಸೋದರಳಿಯ ಪ್ರದೀಪ್ ಇವರಿಗೆ ಇಮೈಲ್ ಮಾಡಿ ,ಅಮ್ಮನ ಆರೋಗ್ಯದ ಬಗ್ಗೆ ಫೋನ್ ನಲ್ಲಿ ವಿಚಾರಿಸಿ ,ನನಗೆ ಇಮೈಲ್ ಮಾಡುತ್ತಿರಲು ತಿಳಿಸಿದೆ.ಆದಿನ ಇಂಡಾಲಜಿ ವಿಭಾಗದಲ್ಲಿ ನನಗೆ ಕ್ಲಾಸ್ ಇರಲಿಲ್ಲ.
ಆದರೆ ವಿಭಾಗಕ್ಕೆ ಹೊಸತಾಗಿ ಬಂದ ಕನ್ನಡ ಪುಸ್ತಕಗಳನ್ನು ಪರಿಶೀಲಿಸಲು ಹೋಗಬೇಕಾಗಿತ್ತು.ಅದಕ್ಕೆಮುಂಚೆ ಅಗತ್ಯ ವಸ್ತು ತರಲೆಂದು ಪಕ್ಕದ ಸೂಪರ್ ಮಾರ್ಕೆಟ್ಟಿಗೆ ಹೋಗಿ ಬರುವಷ್ಟರಲ್ಲಿ ಗೆಸ್ಟ್ ಹೌಸ್ ನಲ್ಲಿ ಬಿಟ್ಟು ಹೋಗಿದ್ದ ನನ್ನ ಮೊಬೈಲ್ ನಲ್ಲಿ ಅಳಿಯ ಪ್ರದೀಪನ ಮಿಸ್ ಕಾಲ್ ಇತ್ತು.ಆತಂಕದಿಂದ ಅವನಿಗೆ ಫೋನ್ ಮಾಡಿದಾಗ ,ಆತ ಕೊಟ್ಟ ಸಂದೇಶ ‘ಅಮ್ಮ ಇಲ್ಲ’ಎಂದು.ಅಕ್ಕನಲ್ಲಿ ಫೋನ್ ನಲ್ಲಿ ಮಾತಾಡಿ ಒಂದೂವರೆ ಗಂಟೆ ಆಗಿತ್ತಷ್ಟೆ.ಏನು ಮಾಡಬೇಕೆಂದು ತೋಚದೆ ಕುಳಿತುಬಿಟ್ಟೆ.ನಾನು ಮನೆಯಿಂದ ಸಾವಿರಾರು ಮೈಲಿ ದೂರದ ಜರ್ಮನಿಯ ವ್ಯೂರ್ಜಬರ್ಗ್ನಲ್ಲಿ ಇದ್ದೇನೆ.ಇಲ್ಲಿಂದ ಫ್ರಾಂಕ್ ಫಾರ್ಟಿಗೆ ರೈಲಿನಲ್ಲಿ ,ಕಾರಿನಲ್ಲಿ ಹೋಗಲು ಎರಡು ಗಂಟೆಯಾದರೂ ಬೇಕು.ಅಲ್ಲಿಂದ ಬೆಂಗಳೂರು , ಮತ್ತೆ ಅಲ್ಲಿಂದ ಉಪ್ಪಿನಂಗಡಿ ರಸ್ತೆ ಮೂಲಕ.ಪ್ರೊ..ಬ್ರೂಕ್ನರ್ ಗೆ ವಿಷಯ ತಿಳಿಸಿ ,ವಿಮಾನ ಟಿಕೆಟ್ ಬುಕ್ ಮಾಡುವ ಎಲ್ಲ ಸಾಧ್ಯತೆ ನೋಡಿದೆವು.ಜೊತೆಗಿದ್ದ ಹೆಂಡತಿ ಕೋಕಿಲ ಎಲ್ಲ ಧೈರ್ಯ ತುಂಬಿದಳು..ಎಲ್ಲ ಕಣ್ಣೀರಿನ ನಡುವೆಯೂ ನಿರ್ಧಾರ ತೆಗೆದುಕೊಳ್ಳುವುದು ,ಮುಂದೆ ಸಾಗುವುದು ಎಷ್ಟು ಕಷ್ಟ ಎಂದು ಆಗ ಗೊತ್ತಾಯಿತು.
ಇತ್ತೀಚಿನ ಟಿಪ್ಪಣಿಗಳು