ಕಾಫಿ ಡೇ

-ತಾರಿಣಿ ಶುಭದಾಯಿನಿ


ಇಲ್ಲಿ ಬೈಟೂ ಮಾತೇ ಇಲ್ಲ
ಸಖತ್ ಹಾಟ್ ಮಗಾ ಅಂತ
ಕಾಲರೇರಿಸಿ ಕೂತ ಬಿಳಿಯ ಮಂದಿಯ ಬಣ್ಣಕ್ಕೆ
ಬೆರಗಾಗಿ ತಂದಿಟ್ಟಿರಿ ಬಿಸಿಬಿಸಿ
ಹೊಗೆಯಾಡುವ
ಗುಳ್ಳೆಗುಳ್ಳೆ ಕಾಫಿ

ಸಣ್ಣ ದಾಲ್ಚಿನ್ನಿಚೂರಿಗೆ
ಬಂದವರು ಮಾರಾಯ
ಖುಷಿಗೆ ಕಾರ ಬೇಕೆಂದು
ಬೆವರಿ ಸೆಖೆಯೊಡೆದು
ಸುಖದ ತುತ್ತತುದಿಗೇರಲು
ಮಸಾಲೆ ಬೇಡಿದವರು

ಕಾಫಿ ಕಪ್ಪಿನಲ್ಲು ಬಿರುಗಾಳಿ!
ಸಂಸಾರಗಳು ಡೋಲಾಯಮಾನ
ದೇಶಿವಿದೇಶಿ ಎನ್ನದೆ ಹಡಗುಗಳ
ಟೊಂಕ ಮುರಿದು ಓಲಾಡಿ
ಸಣ್ಣ ಬಿರುಕಿಗೆ ಮನೆ ಒಡೆದು ಚೂರಾಗಿ..

-2-

ಗುಡ್ಡ ಕಣಿವೆಗಳಲಿ
ಹೊತ್ತಿ ಉರಿವ ಹಸಿರು
ಸುತ್ತ ಮಿಣಿಮಿಣಿ ಹಗಲು
ಇಳಿಜಾರು ಗುಡ್ಡ ಮರೆಯಲ್ಲಿ
ತಲೆಯೆತ್ತಿದೆ ಬಂಗಲೆ
ಏಕಚಕ್ರಾಧಿಪತಿಯ ಮುಂದೆ
ಖಾಯಷ್ ಪಡುವಂತೆ ಕಾಫಿ ಹೂಗಳು
ಅರಳಿ ವನವ ನಿಬ್ಬೆರಗುಗೊಳಿಸಿವೆ
ಇದೇ ಚೆಲುವು
ಮಾರಿಕೊಳ್ಳಲು
ತಕ್ಕ ಕಣಿವೆ ದಾರಿ

ಈಗೀಗ ತವರೂರ ತಿಟ್ಹತ್ತಿ ತಿರುಗಿ
ನೋಡಿದರೂ ಏನೂ ಕಾಣದು
ಹೂ ಬಂದ ಕಣ್ಣು
ಮಬ್ಬು ಮೆತ್ತಿದ ದೃಷ್ಟಿ
ದುಪ್ಪಟ್ಟಾದ ಖಾಯಿಲೆ…

-3-

ಕಾಫಿ ಕೊಡಿಸುತ್ತ
ಹದ ಚಪ್ಪರಿಸುತ್ತ
ನುಂಗುವವನಂತೆ ನೋಡುತ್ತ
ಯಾಮಾರಿಸಿದವನೆ ನಿನ್ನ
ಮದುವೆಯಾಗಿ ಮನೆ ಬಂದರೆ..

ನೀನು ಬಿಡು ಕಂಜೂಸ್
ನನಗಾಗಿ ಒಂದು ಹನಿ
ಕಣ್ಣೀರು ಹಾಕುವುದಿಲ್ಲ
ದೇವರಂತಹ ದೇವ ಶಿವನೇ
ಸತ್ತ ಉಮೆಗಾಗಿ ಅತ್ತಿದ್ದ
ನೀನು ಕನಿಷ್ಠ ಒಂದು ಗ್ಲಾಸ್
ಕಾಫಿ ಮಾಡಿಕೊಡುವುದಿಲ್ಲ,
ನಿರ್ದಯಿ.

ಶಾಲೆ ಎಂಬುದು ಹೀಗೆ…

ಶಾಲೆಯ ಬಗ್ಗೆ ಒಂದು ಪುಸ್ತಕ ಕಂಡೆ. going to school in india ಎನ್ನುವ ಪುಸ್ತಕ. ಅದು ನನ್ನ ಮನದೊಳಗೆ ಎರಡು ವರ್ಷಕ್ಕಿಂತಲೂ ಹೆಚ್ಚು ಕಾಲ ಉಳಿದು ಹೋಯ್ತು. ಕಾಡುವ ಪುಸ್ತಕ.

ಮಕ್ಕಳನ್ನು ಶಾಲೆಗೆ ಕಳಿಸುವ ಬಗ್ಗೆ ಜವಾಬ್ದಾರಿ ನೀಡುವ ಪುಸ್ತಕ. ದೇಶದ ಮೂಲೆ ಮೂಲೆಯಲ್ಲಿ ಶಾಲೆ ಎಂಬ ಕನಸನ್ನು ಬೆನ್ನಟ್ಟಲು ಹೇಗೆಲ್ಲಾ ಶ್ರಮಿಸುತ್ತಾರೆ ಎಂದು ನಾನು ಕಂಡು ಕೊಂಡ ಪುಸ್ತಕ. ಈ ಪುಸ್ತಕ ಇಂದು ಕೇವಲ ಪುಸ್ತಕ ಅಲ್ಲ, ಒಂದು ಚಳವಳಿ. ಆ ಹಿನ್ನೆಲೆಯಲ್ಲಿ ಮೂಡಿಬಂದ ನೆನಪುಗಳು ಇಲ್ಲಿವೆ.

-ಜಿ ಎನ್ ಮೋಹನ್

ಪಶ್ಚಿಮಘಟ್ಟದ ಆ ದಟ್ಟ ಕಾನನವನ್ನು ಮಣಿಸಿಯೇಬಿಡಬೇಕು ಎಂಬ ಹಂಬಲ. ಸರಿ ಬೆಂಗಳೂರಿನಿಂದ ಒಂದು ದೊಡ್ಡ ದಂಡೇ  ಕುದುರೆಮುಖ ಪರ್ವತ ಏರಲು ಆರಂಭಿಸಿತು. ಬೆಳ್ತಂಗಡಿಯಿಂದ ಆರಂಭಿಸಿ, ಕುದುರೆಮುಖ ನೆತ್ತಿ ಮುಟ್ಟಿ, ಕಳಸದಲ್ಲಿ ಮತ್ತೆ ರಸ್ತೆಗೆ ಸೇರಬೇಕು. ಬೆನ್ನಿಗೆ ಒಂದಷ್ಟು ದಿನದ ಊಟ, ಬಗಲಲ್ಲಿ ನೀರಿನ ಬಾಟಲಿಗಳನ್ನು ಹೊತ್ತು, ಹೆಜ್ಜೆ ಹೆಜ್ಜೆಗೂ ಏದುಸಿರು ಬಿಡುತ್ತಾ ಬೆಟ್ಟ ಹತ್ತುತ್ತಾ ಇದ್ದೆವು. ಎದುರಿಗೆ ಒಬ್ಬ ಹುಡುಗ. ಖಾಕಿ ಚೆಡ್ಡಿ, ಬಿಳಿ ಅಂಗಿ ತೊಟ್ಟು, ಬೆನ್ನಿಗೆ ಬ್ಯಾಗ್ ಏರಿಸಿಕೊಂಡು ಜಿಂಕೆಯ ವೇಗದಲ್ಲಿ ಬೆಟ್ಟ ಹತ್ತುತ್ತಾ ನೋಡ ನೋಡುತ್ತಿದ್ದಂತೆಯೇ ಆ ಘಟ್ಟಗಳಲ್ಲಿ ಮರೆಯಾಗಿಯೇ ಹೋದ. ಆತ ನೆಲ್ಸನ್, ಕುದುರೆಮುಖದ ನೆತ್ತಿಯಲ್ಲಿರುವ ಸೈಮನ್ ಲೋಬೋ ಕುಟುಂಬದ ಆತ ಅಕ್ಷರಗಳನ್ನು ಎಟುಕಿಸಿಕೊಳ್ಳಬೇಕಾದರೆ ಪ್ರತಿ ದಿನಾ ಕುದುರೆಮುಖವನ್ನು  ಹತ್ತಿ ಇಳಿಯಬೇಕು.

ಮಂಗಳೂರಿನ ಬಂದರು ಪ್ರದೇಶದಲ್ಲಿ ನಿಂತಿದ್ದೆ. ‘ಫೋಂ, ಫೋಂ’ ಎನ್ನುವ ದೊಡ್ಡ ಸದ್ದು ಕೇಳಿಸಿತು. ಅದೂ ನದಿಯ ಮೇಲಿನಿಂದ. ಎದುರಿಗೆ ಕಣ್ಣು ಹಾಯಿಸಿದರೆ ಅರೇಬಿಯಾ ಸಮುದ್ರವೂ, ನೇತ್ರಾವತಿ ನದಿಯೂ ತೆಕ್ಕೆಗೆ ಬಿದ್ದಂತೆ ಕಾಣಿಸುತ್ತಿತ್ತು. ಅದರ ಮಧ್ಯೆ ಇರುವುದೇ ಬೆಂಗ್ರೆ. ಅಲ್ಲಿಂದ ಈ ದೋಣಿ ಹಾದು ಬರುತ್ತಿತ್ತು. ನಾನು ದೋಣಿ ನೋಡುತ್ತಾ ನಿಂತೆ. ಆಗ ‘ಹೋ’ ಎನ್ನುವ ಹರ್ಷದ ಕೇಕೆ ಕೇಳಿಬಂತು. ಒಂದೇ ನಿಮಿಷಕ್ಕೆ ದೋಣಿಯೂ ಹೊಯ್ದಾಡುವಂತೆ ಮಾಡಿ ನೂರಾರು ಮಕ್ಕಳು ಆಚೆಗೆ ಜಿಗಿದರು. ಇವರೆಲ್ಲಾ ಆ ದ್ವೀಪದಿಂದ ನಗರದ ಹತ್ತಾರು ಶಾಲೆಗಳನ್ನು ಮುಟ್ಟಬೇಕಾದವರು. ಅಕ್ಷರದ ಬೆಳಕು ಕಾಣಬೇಕಾದರೆ ಪ್ರತಿ ನಿತ್ಯ ಈ ದೋಣಿಯಾಟ ನಡೆಯಲೇಬೇಕು. ದೋಣಿ ಇಲ್ಲದಿದ್ದರೆ ಮಂಗಳೂರು ನಗರಕ್ಕೆ ‘ನೀವು ಯಾರೋ, ಇನ್ನು ನಾವು ಯಾರೋ’ ಎನ್ನುವ ಮರೆವು.

ಇನ್ನು ಮೆಘಾನೆ. ಶಿವಮೊಗ್ಗದ ಎತ್ತರದ ಗುಡ್ಡದಲ್ಲಿ ಅರಳಿಕೊಂಡಿರುವ ಹಳ್ಳಿ. ಅಲ್ಲಿಗೆ ಹುಚ್ಚಪ್ಪ ಮಾಸ್ತರ್ ಅವರ ಜೊತೆ ಕಾಲಿಟ್ಟಿದ್ದೆ. ಇನ್ನೂ ಸೈಕಲ್ ನೋಡದ ಹತ್ತಾರು ಜನ ಅಲ್ಲಿದ್ದಾರೆ. ಪಕ್ಕಾ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಕ್ಯಾನ್ವಾಸ್ ಇರುವ ಹಳ್ಳಿ . ಅಲ್ಲಿಗೆ ಮುಟ್ಟಲು ನಾವು ಮೇಲೆ ಏರುತ್ತಿರುವಾಗ ಹುಡುಗ ಹುಡುಗಿಯರ ದೊಡ್ಡ ಗುಂಪು ಕೆಳಕ್ಕೆ ಇಳಿಯುತ್ತಿತ್ತು. ‘ಎಲ್ಲಿಗ್ರೋ’ ಅಂದ್ರು ಮಾಸ್ತರರು. ‘ಶಾಲೆಗೆ’ ಅನ್ನುತ್ತಾ ಮಕ್ಕಳು ಸರ,ಸರ ಹಾದು ಹೋದರು. ಅಕ್ಷರದ ಬೆಳಕು ಕಾಣಬೇಕಾದರೆ ಬೆಟ್ಟಗಳಿಂದ ಕೆಳಗೆ ಜಾರುಬಂಡಿಯಂತೆ ಇಳಿಯಬೇಕಿತ್ತು.

ಇನ್ನೊಮ್ಮೆ ಪಶ್ಚ್ಜಿಮ ಘಟ್ಟಗಳ ತಪ್ಪಲಿನ ಹಳ್ಳಿಗೆ ಕಾಲಿಟ್ಟಿದ್ದೆ. ಜುಳು ಜುಳು ಹರಿಯುವ ನದಿ. ಅದರ ಆಚೆಯಿಂದ ಮಕ್ಕಳು ಈ ದಡ  ಸೇರಬೇಕು ಒಂದು ಹಸಿರಿನ ಬಿದಿರು ಬೊಂಬು ಎರಡೂ ದಂಡೆಗಳನ್ನು ಬೆಸೆದಿತ್ತು. ಅದನ್ನು ಹಿಡಿದು ಹುಡುಗರು ತಂತಿಯ ಮೇಲಿನ ನಡಿಗೆಯಂತೆ ಸರ್ಕಸ್ ಮಾಡುತ್ತಾ ಈಚೆ ದಡ ಸೇರಿಯೇಬಿಟ್ಟರು. ಅಕ್ಷರದ ಬೆಳಕು ಕಾಣಬೇಕೆಂದರೆ ಆ ಸರ್ಕಸ್ ದಿನನಿತ್ಯ ನಡೆಯಬೇಕು

ನನ್ನ ಮಗಳೇ ಶಾಲೆಗೆ ಹೋಗುವ ಕಾಲ ಬಂತು. ಬ್ಯಾಗ್ ನಲ್ಲಿ ಅವಳಿಗೆ ಬೇಕಾದ ಪುಸ್ತಕ ಓರಣವಾಗಿಟ್ಟೆ. ಬೆಳ್ಳಂಬೆಳಗ್ಗೆ ಸ್ನಾನ ಮಾಡಿಸಿದ್ದಾಯ್ತು. ಯೂನಿಫಾರಂ ತೊಡಿಸಿ, ಕುತ್ತಿಗೆಗೆ ಟೈ ಬಿಗಿದು, ತಿಂಡಿ ತಿನ್ನಿಸಿ, ಬ್ಯಾಸ್ಕೆಟ್ ನಲ್ಲಿ ನೀರು, ಊಟದ ಡಬ್ಬಿ ಇಟ್ಟು  ಟಾಟಾ ಮಾಡಿ, ಗೇಟಿನ ಬಳಿ ನಿಲ್ಲಿಸಿದರೆ ಸಾಕು ಐದು ನಿಮಿಷದಲ್ಲಿ ಬರುವ ಘಮ್ಮತ್ತಿನ ಹಳದಿ ವ್ಯಾನ್ ಮಗಳನ್ನು ಎಗರಿಸಿಕೊಂಡು ಹೋಯಿತು. ಮತ್ತೆ ಸಂಜೆ ಆಫೀಸಿನಿಂದ ಬರುವ ವೇಳೆಗೆ ಅದೇ ಮಗಳು ಆರಾಮವಾಗಿ  ಟಾಮ್ ಅಂಡ್ ಜೆರ್ರಿ ಲೋಕದಲ್ಲಿ ಇಲಿ ಬೆಕ್ಕಿನ ಜೊತೆ ಗುದ್ದಾಡುತ್ತಾ ಕೂತಿದ್ದಳು. ಎಷ್ಟು ಸಲೀಸು..?

‘ಶಾಲೆಗೆ ಹೋಗುವೆವು.. ನಾವು ಶಾಲೆಗೆ ಹೋಗುವೆವು..’ ಅನ್ನುವ ದನಿ ಟಿ. ವಿ ಯಲ್ಲಿ ಕೇಳುತ್ತಿದ್ದಂತೆ ನನ್ನ ಮನಸ್ಸು ಒಂದು ಸುತ್ತು ಆ ಬೆಂಗ್ರೆಯನ್ನೂ, ಮೆಘಾನೆಯನ್ನೂ, ದಿಡುಪೆಯನ್ನೂ, ಕುದುರೆಮುಖವನ್ನೂ ಸುತ್ತಿ ಬರುತ್ತದೆ. ಹೌದಲ್ಲಾ ಮಕ್ಕಳು ಶಾಲೆಗೆ ಹೇಗೆಲ್ಲಾ ಹೋಗುತ್ತಾರೆ ಅಂತ ಒಂದು ದಿನ ಇಂಗ್ಲೆಂಡ್, ಕೆನಡಾ, ಅಮೇರಿಕಾ ಅಂತ ಸುತ್ತುತ್ತಿದ್ದ ಲೀಸಾ ಹೆದ್ಲಾಫ್ ಗೆ ಸಹಾ ಅನಿಸಿತು. ಒಂದು ದಿನ ಮಗ ಆಲಿವರ್ ಲೀಸಾಗೆ ಕೇಳಿದ ‘ಅಮ್ಮಾ, ಇಂಡಿಯಾದಲ್ಲಿ ಶಾಲೆಗೇ ಹೇಗೆ ಹೋಗ್ತಾರಮ್ಮಾ?’ ಅಂತ. ಲೀಸಾ ಮಗುವಿನ ಪ್ರಶ್ನೆಗೆ ನಕ್ಕು ಸುಮ್ಮನಾಗಿಬಿಡಬಹುದಿತ್ತು. ಲೀಸಾ ಸುಮ್ಮನೆ ಕೂರಲಿಲ್ಲ. ಬ್ಯಾಕ್ ಪ್ಯಾಕ್ ಏರಿಸಿಕೊಂಡು, ವೀಸಾ ರೆಡಿ ಮಾಡಿಕೊಂಡು ಭಾರತಕ್ಕೆ ಬಂದೇಬಿಟ್ಟಳು. ಅಲ್ಲಿಂದ ಆರಂಭ ಆಯ್ತು ನೋಡಿ ಶಾಲೆ ಮತ್ತು ಲೀಸಾ ನಂಟು. ದೇಶದ  ಮೂಲೆ ಮೂಲೆ ಶಾಲೆಗಳಿಗೆ ಭೇಟಿ ಕೊಟ್ಟಳು, ಪರ್ವತ ಏರಿ, ಮರಳುಗಾಡು ಹೊಕ್ಕು, ಸರೋವರದಲ್ಲಿ ಬೋಟ್ ಹತ್ತಿ, ತೂಗು ಸೇತುವೆಯಲ್ಲಿ ನಡೆದು ಹೋಗಿ ಮಕ್ಕಳು ಹೇಗೆಲ್ಲಾ ಶಾಲೆಗೇ ಹೋಗುತ್ತಾರೆ ಅಂತ ನೋಡಿಕೊಂಡು ಬಂದೇಬಿಟ್ಟಳು. ಹೋದಲ್ಲೆಲ್ಲಾ ನಿತಿನ್ ಉಪಾಧ್ಯೆ ಕ್ಯಾಮೆರಾ ಕ್ಲಿಕ್ ಕ್ಲಿಕ್ ಅಂತು. ಇಷ್ಟೆಲ್ಲಾ ಆದ ಮೇಲೆ ಲೀಸಾಗೆ ಅನಿಸಿತು ಇದನ್ನ ಆಲಿವರ್ ಗೆ ಮಾತ್ರ ಅಲ್ಲ ಇಡೀ ಜಗತ್ತಿಗೆ ಹೇಳಬೇಕು ಅಂತ. ಆಗ ಹೊರಬಂತು ನೋಡಿ ‘Going to School in India’ ಪುಸ್ತಕ.

ಕಿಲೋ ಮೀಟರ್ ಗಟ್ಟಲೆ ನಡೆದು, ಮಳೆಯಲ್ಲಿ ನೆಂದು, ಪ್ರವಾಹ ಬಂದಾಗ ಕಕ್ಕಾಬಿಕ್ಕಿಯಾಗಿ, ಮನೆಗೆ ಹೋಗುವ ರಸ್ತೆಗಳೇ ಮುಚ್ಚಿ ಹೋಗಿ, ದೋಣಿ ದಾಟುವಾಗ ಸಮುದ್ರವೇ ಮಕ್ಕಳನ್ನು ನುಂಗಿ ಹಾಕಿ, ಬಿರು ಧಗೆಯ ಮರಳುಗಾಡಲ್ಲಿ ಕಾಲಲ್ಲಿ ರಕ್ತ ಬರುವಂತೆ ನಡೆದು, ಎತ್ತಿನ ಬಂಡಿಯಲ್ಲಿ, ಟ್ರಕ್ ಗಳಲ್ಲಿ, ರೋಪ್ ವೇ ಗಳಲ್ಲಿ ಕೂತು ಮಕ್ಕಳು ಶಾಲೆ ಸೇರುತ್ತಿದ್ದಾರೆ. ಆ ಮಕ್ಕಳಿಗಿರುವುದು ‘ಚಿನ್ನ ಚಿನ್ನ ಆಸೈ’. ಓದಿ ದೊಡ್ಡವನಾಗಿ ಅಮ್ಮನನ್ನ ಸಾಕಬೇಕು, ಒಬ್ಬ ಒಳ್ಳೆ ಹುಡುಗಿ ಆಗಬೇಕು, ನಾನು ನೋಡಿದ ಟ್ರೇನ್ ನ ಡ್ರೈವರ್ ಆಗಬೇಕು, ನನ್ನ ಅಪ್ಪನನ್ನ ಹೆದರಿಸದ ಪೊಲೀಸ್ ಆಗಬೇಕು, ಎಲ್ಲಕ್ಕಿಂತ ಹೆಚ್ಚಾಗಿ ಇನ್ನೂ ಸಾಕಷ್ಟು ಮಕ್ಕಳಿಗೆ ಕಲಿಸುವ ಟೀಚರ್ ಆಗಬೇಕು.. ಎಷ್ಟೆಲ್ಲಾ ಕನಸುಗಳು…?

ಒಂದು ಪುಸ್ತಕವಾಗಿ ಬಂದ ಲೀಸಾ ಕನಸು ಈಗ ಪುಸ್ತಕ ಮಾತ್ರವಲ್ಲ. ದೊಡ್ಡ ಚಳವಳಿ. ಶಾಲೆಗೆ ಹೋಗುವ ಮಕ್ಕಳಿಗೆ ಶಾಲೆಯನ್ನು ಎಟುಕಿಸಿಕೊಡುವ ಪ್ರಯತ್ನ, ಅಕ್ಷರದ ಬೆಳಕಲ್ಲಿ ಬೆಳೆದು ಒಂದು ಮಾದರಿಯಾಗಿ ಎದ್ದು ನಿಂತವರ ಸ್ಫೂರ್ತಿ ಕಥೆಗಳನ್ನೂ ಹರಡುವ ಚಳವಳಿ. ಹೀಗೆ ‘ಶಾಲೆಗೆ ಹೋಗುವೆವು’ ಎನ್ನುವ ಹಾಡು ಕೇವಲ ಹಾಡಲ್ಲ . ಅದು ಬರಿಗಾಲಿನಲ್ಲಿ ಕನಸುಗಳನ್ನೂ ಬೆನ್ನತ್ತುತ್ತಿರುವವರ ಕಥೆ. ಹಾಗಾಗಿಯೇ ಇನ್ನೇನು ಶಾಲೆಯ ಬಾಗಿಲು ತೆರೆಯುತ್ತಿದೆ. ನನಗೆ ಮತ್ತೆ ನನ್ನ ಆ ಶಾಲೆಗೇ ಹೋಗಿ ಕೂರುವ ಮನಸ್ಸಾಗುತ್ತಿದೆ. ಬನ್ನಿ ನಮ್ಮ ವಯಸ್ಸು ಎಷ್ಟಿದ್ದರೇನು ಶಾಲೆಗೆ ಹೋಗೋಣ.

Film screening

ಇನ್ನೊಂದು ನಾಟಕ

%d bloggers like this: