ಅಳಿಯಲಾರದ ನೆನಹು-೧೦

-ಎಚ್ ಎಸ್ ವೆಂಕಟೇಶಮೂರ್ತಿ
ನನಗಾಗ ಏಳೋ ಎಂಟೋ ವರ್ಷವಿರಬೇಕು. ನಮ್ಮ ಸೀತಜ್ಜಿಗೆ ಇದ್ದಕ್ಕಿದ್ದಂತೆ ಮೈ ತೂಗು ಪ್ರಾರಂಭವಾಯಿತು. ಬೆಳಿಗ್ಗೆ ಪೂಜೆ ಮುಗಿಸಿ ದೇವರ ಮುಂದೆ ಕೂತಾಗ ಕೂತಂತೆಯೇ ಹಿಂದಕ್ಕೆ ಮುಂದಕ್ಕೆ ಮೈ ಒನೆಯುತ್ತಾ ಇದ್ದರು. ಅಜ್ಜ ಅವರನ್ನು ಬಿಗಿಯಾಗಿ ಹಿಡಿದುಕೊಂಡು ಕೂತರೂ ಅಜ್ಜನ ಸಮೇತ ತೂಗಾಟ ಮುಂದುವರೆಯುತ್ತಿತ್ತು. ದಾವಣಗೆರೆಗೆ ಹೋಗಿ ಇಂಗ್ಲಿಷ್ ಡಾಕ್ಟರ್ ನೋಡಿಕೊಂಡು ಬಂದರೂ ಏನೂ ಉಪಯೋಗವಾಗಲಿಲ್ಲ. ಕಂಚೀನಾಳಿಗೆ ಹೋಗಿ ಮಂಜಪ್ಪನಿಗೆ ಹರಕೆ ಕಟ್ಟಿ ಬಂದರು. ಜಾತ್ರೆಯಲ್ಲಿ ಎರಡು ಮಣ ಕೊಬ್ಬರಿ ಸುಡಿಸಿದರು. ದೊಣ್ಣೆ ಬಸಣ್ಣ(ಇವನು ನಮ್ಮೂರ ಮಂತ್ರವಾದಿ!) ಬಂದು ನಿಂಬೇಕಾಯಿ ಮಂತ್ರಿಸಿಕೊಟ್ಟು ಹೋದ. ಅಮಾವಾಸ್ಯೆ ರಾತ್ರಿ ಊರೇ ಸದ್ದು ಹೊಡೆದು ಮಲಗಿದ ಮೇಲೆ ಬಸಣ್ಣ ಹೂಂಕಾರ ಮಾಡುತ್ತಾ ಏನೇನೋ ನಿವಾಳಿಸಿ, ರಾವು ತೆಗೆದು, ಇದು ಗ್ರಹಚೇಷ್ಟೆ…ಯಾವುದೋ ಗಾಳಿ ಸೇರ್ಕಂಡಿದೆ….ಇವತ್ತು ಸರಿಯಾಗಿ ಕಟ್ಟು ಮಾಡಿದೀನಿ…ನಾಳೀನಿಂದ ಈ ಕಡೆ ಮಖ ಮಾಡಿದ್ರೆ ಕೇಳ್ರಿ ಭೋಸುಡ್ಕೆ…!ಎಂದು ಅಭಯಕೊಟ್ಟ.

ಇದಾದ ಎರಡು ದಿನ ಅಜ್ಜಿಯ ಮೈತೂಗು ನಿಂತಿತ್ತು. ಮೂರನೇ ದಿನ ಅಜ್ಜಿಯ ಮುಖ ಮತ್ತೆ ಭಯಗ್ರಸ್ತವಾಗಿತ್ತು. ಯಾಕೋ ಮೈ ತೂಗ್ತಾ ಇದೆ ನೋಡೇ…ಎಂದು ತಮ್ಮ ಅಕ್ಕ ಭೀಮಜ್ಜಿಯ ಮುಂದೆ ಅಲವತ್ತುಕೊಂಡರು. ಮತ್ತೆ ಯಥಾಪ್ರಕಾರ ಮೈ ಒನೆತ ಪ್ರಾರಂಭವಾಯಿತು. ಹುಣಿಸೇಕಟ್ಟೆಗೆ ಹೋಗಿ ಚೌಡಿಯನ್ನು ಹೊರಡಿಸಿ ಕೇಳಬೇಕು ಎಂದು ನಮ್ಮ ಮನೆಯ ಹಿರಿಯರು ಮಾತಾಡಿಕೊಂಡರು. ನಾವು ಮನೆಯಲ್ಲಿ ಇದ್ದವರು ನಾನು, ನನ್ನ ಅಮ್ಮ, ನನ್ನ ಅಜ್ಜಿ, ಅವರ ಅಕ್ಕ ಭೀಮಜ್ಜಿ ಮತ್ತು ನಮ್ಮ ಅಜ್ಜ-ಇಷ್ಟೇ ಜನ. ಈ ಐವರ ಮಧ್ಯೆ ಇದ್ದಕ್ಕಿದ್ದಂತೆ ಆರನೆಯ ಅಪರಚಿತ ವ್ಯಕ್ತಿಯೊಬ್ಬ ನಮ್ಮ ಜೊತೆಗೆ ಇದ್ದಾನೆಂಬ ಭಾವನೆಯಿಂದ ನಾನಂತೂ ಭಯಭೀತನಾಗಿ ಹೋದೆ. ಅಜ್ಜಿಯ ಬಳಿ ಮಲಗಲು, ಅವಳನ್ನು ಮುಟ್ಟಲು ನನಗೆ ಭಯವಾಗತೊಡಗಿತು. ಅಜ್ಜಿ ಆಗ ನಕ್ಕು, ಹೆದರಬೇಡ ಬಾ-ಎಂದು ಸನ್ನೆ ಮಾಡುತ್ತಿದ್ದರು. ಹಾಗೆ ನಕ್ಕವರು ನಮ್ಮ ಅಜ್ಜಿಯೋ ಅಥವಾ ಆ ಆರನೇ ಆಸಾಮಿಯೋ? ಈ ಯೋಚನೆಯಿಂದ ನಾನು ನಿಜವಾಗಿಯೂ ಹೈರಾಣಾಗಿ ಹೋದೆ.
ಹುಣಿಸೇಕಟ್ಟೆಗೆ ಅಜ್ಜಿಯೊಂದಿಗೆ ನಾನೂ ಹೋದೆ. ನಮ್ಮ ಅಜ್ಜಿಯ ಅಣ್ಣ ಅಲ್ಲಿ ಇದ್ದರು. ಅಣ್ಣ ಅಂದರೆ ದೊಡ್ಡಪ್ಪನ ಮಗ. ಅವರು ಆ ಊರಿನ ಶಾನುಭೋಗರೂ ಹೌದು. ಒಳ್ಳೇ ಜಬರ್ದಸ್ತ್ ಆಸಾಮಿ. ನಾವೆಲ್ಲಾ ಅವರನ್ನು ಹುಣಿಸೇಕಟ್ಟೆ ಹುಲಿ ಎಂದೇ ಕರೆಯುತ್ತಿದ್ದೆವು. ತುರುವನೂರು ತಾಲ್ಲೋಕಿನಲ್ಲಿರುವ ಹುಣಿಸೇಕಟ್ಟೆ ಒಂದು ಸಣ್ಣ ಹಳ್ಳಿ. ಆ ಊರಿನ ಚೌಡಿ ದೆವ್ವ ಬಿಡಿಸುವುದರಲ್ಲಿ ತುಂಬಾ ಫೇಮಸ್ಸಾಗಿದ್ದಳು. ರಾತ್ರಿ ನಾವೆಲ್ಲಾ ಅಜ್ಜಿಯ ಸಮೇತ ಚೌಡಿ ಗುಡಿಗೆ ಹೋದೆವು. ಚೌಡಿಗೆ ಮಂಗಳಾರತಿ ಬೆಳಗುತ್ತಿದ್ದಂತೇ ಪೂಜಾರಿಯ ಮೇಲೆ ಆವೇಶವಾಗಿ, ಆತ ರೌದ್ರಾವತಾರ ತಾಳಿ, ತನ್ನ ಕಟ್ಟಿದ ಕೂದಲ ಗಂಟು ಬಿಚ್ಚಿಕೊಂಡು ಬೆನ್ನ ಮೇಲೆ ಹರಡಿಕೊಂಡು, ಕೈಯಲ್ಲಿದ್ದ ಚಾವಟಿ ಜಳಪಿಸುತ್ತಾ-“ಸ್ವಾಮೀ ಮದ್ಲು ನಿಮ್ಮ ತಂಗೀನ ಈ ಕಡೆ ಕರಕಂಬನ್ನಿ..!” ಅಂತ ಅಬ್ಬರಿಸಿದ. ಚೌಡಿಗೂ ಶಾನುಭೋಗರ ಮೇಲೆ ಎಷ್ಟು ಗೌರವ ಅಂತ ನನಗೆ ಆಶ್ಚರ್ಯವಾಯಿತು.
ನಮ್ಮ ಹುಲಿಯ ಬಗ್ಗೆ ಮೊದಲೇ ಇದ್ದ ಗೌರವದ ಜತೆಗೆ ಈಗ ದಿಗಿಲೂ ಅಮರಿಕೊಂಡಿತು. ಇತ್ತ ನಮ್ಮ ಅಜ್ಜಿಯ ಮೈ ಒನೆತವೂ ಹೆಚ್ಚಾಗ ತೊಡಗಿತು. ಜೊತೆಗೆ ಈಗ ಅವರು ಗಟ್ಟಿಯಾಗಿ ರಾಗವಾಗಿ ಅಲಲಿಕ್ಕೆ ಶುರುಹಚ್ಚಿದರು. ನೀವು ಏನೇ ಅನ್ನಿ, ದೊಡ್ಡವರು ಅಳುವುದು ನೋಡಲಿಕ್ಕೆ ತುಂಬಾ ಅಸಹ್ಯವಾಗಿರತ್ತೆ. ಚೌಡಿ-ನೀನು ಯಾರು ಬಗಳು, ಎಂದು ಆರ್ಭಟಿಸಿದಾಗ, ನಮ್ಮ ಅಜ್ಜಿ “ನಾನು ಇವಳ ಎರಡನೇ ಮಲತಾಯಿ…ಪದ್ದಮ್ಮ!”ಅಂದುಬಿಡೋದೇ. ಪದ್ದಮ್ಮ ಸತ್ತು ಆಗಲೇ ಮೂವತ್ತು ವರ್ಷಕ್ಕೆ ಮೇಲಾಗಿತ್ತು. ಇಷ್ಟು ದಿನ ಈ ಪದ್ದಮ್ಮ ಎಲ್ಲಿದ್ದಳು? ಈಗ ಯಾಕೆ ನಮ್ಮ ಅಜ್ಜಿಯನ್ನು ಬಂದು ಹಿಡಿದುಕೊಂಡಿದ್ದಾಳೆ ತಿಳಿಯದೆ ನನಗೆ ಭಾರೀ ಗೊಂದಲವಾಗಿ ಹೋಯಿತು. ಪೂಜಾರಿ ಅಜ್ಜಿಯ ಕೊರಳಿಗೆ ಒಂದು ತಾಯತಿ ಕಟ್ಟಿ, “ನೀವೇನೂ ಕಾಳಜೀ ಮಾಡೋದು ಬ್ಯಾಡ. ನಾನು ಈ ಹೆಣ್ಣುಗ್ರಹಕ್ಕೆ ಟಿಕೆಟ್ ಕೊಟ್ಟಿವ್ನಿ. ಮತ್ತೆ ಆಕೆ ಕಾಟ ಕೊಡೋಣಿಲ್ಲ…”ಎಂದು ಅಭಯ ಪ್ರದಾನ ಮಾಡಿದ ಮೇಲೆ ನಾವು ಅರಾಮಾಗಿ ಊರಿಗೆ ಹಿಂದಿರುಗಿದೆವು.
ಚೌಡಿ ಮುಂದಿನ ಅಮಾವಾಸ್ಯೆ ರಾತ್ರಿ ನಮ್ಮ ಊರಿಗೆ ಬಂದು ಅಲ್ಲಿ ಮನೆಗೆ ಮಂತ್ರಕಟ್ಟು ಮಾಡಿ ಬರೋದಾಗಿ ಕೂಡಾ ಅಶ್ವಾಸನೆ ಕೊಟ್ಟಿದ್ದಳು. ನನಗೆ ಆಶ್ಚರ್ಯ. ಚೌಡಿ ಅಷ್ಟು ದೂರದಿಂದ ನಮ್ಮೂರಿಗೆ ಹೇಗೆ ಬರ್ತಾಳೆ? ಅವಳಿಗೆ ದಾರಿ ಗೀರಿ ತಪ್ಪೋದಿಲ್ಲವೆ? ನಮ್ಮ ಊರಿಗೆ ಬಂದಮೇಲೆ ನಮ್ಮ ಮನೆ ಗುರುತು ಅವಳಿಗೆ ಹೇಗೆ ಸಿಗತ್ತೆ? ಅಮಾವಾಸ್ಯೆ ರಾತ್ರಿ ನಮ್ಮ ಭೀಮಜ್ಜಿ ಮನೆಯ ಕಂಭದ ಕಿವಿಗಳ ಮೇಲೆಲ್ಲಾ ಊದಿನಕಡ್ಡಿ ಹಚ್ಚಿಟ್ಟಿದ್ದರು. ಬಾಗಿಲಿಗೆ ನೀರು ಹಾಕಿ ರಂಗೋಲಿ ಹಾಕಿದ್ದರು. ದೇವರ ಮುಂದೆ ಚೌಡಮ್ಮನಿಗೆ ಅಂತ ಅರಿಸಿನ ಕುಂಕುಮ ಹೂವು ಮಡಿಲಕ್ಕಿ ಇಟ್ಟಿದ್ದರು. ನಾನು ರಾತ್ರಿ ಬಹಳ ಹೊತ್ತು ಎಚ್ಚರವಾಗಿದ್ದೆ. ಚೌಡಮ್ಮ ಬರುವಾಗ ಗಮ್ಮಂತ ಹೂವಿನ ವಾಸನೆ ಬರುತ್ತೆ, ಘಲ್ ಘಲ್ ಅಂತ ಗೆಜ್ಜೆಯ ಸದ್ದು ಕೇಳತ್ತೆ ಅಂತ ಭೀಮಜ್ಜಿ ಹೇಳಿದ್ದರು. ಚೌಡಮ್ಮ ಯಾವ ಮಾಯದಲ್ಲಿ ಬಂದಳೋ, ಯಾವ ಮಾಯದಲ್ಲಿ ಹೋದಳೋ ನನಗಂತೂ ಒಂದೂ ತಿಳಿಯಲಿಲ್ಲ. ಬೆಳಿಗ್ಗೆ ಮಾತ್ರ ನಮ್ಮ ಮನೆ ಇವತ್ತೇನೋ ಬೇರೆ ಥರ ಇದೆ ಅಂತ ನನಗೆ ಅನ್ನಿಸತೊಡಗಿತು.
More
Like this:
Like ಲೋಡ್ ಆಗುತ್ತಿದೆ...
ಇತ್ತೀಚಿನ ಟಿಪ್ಪಣಿಗಳು