ನನ್ನೊಳಗೆ ‘ಭೂಮಿಗೀತ’ದ ನೆನಪು

ಸಾಹಿತ್ಯ ಸಂಜೆಯಲಿ ಭೂಮಿಗೀತದ ನೆನಪು

-ಎನ್ ಮಂಗಳಾ

ಸಂಚಯ ಮತ್ತು ಸುಚಿತ್ರ ಫಿಲ್ಮ್ ಸೊಸೈಟಿಯವರು ನಡೆಸಿದ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ಅಡಿಗರ ‘ಭೂಮಿಗೀತ’ ಸಂಕಲನದ ಕವನಗಳ ವಾಚನ, ಅವುಗಳ ಬಗ್ಗೆ ಮಾತುಕತೆ ನಡೆಯಿತು. ಆ ಸಂಧರ್ಭದಲ್ಲಿ ನಾನು ಭೂಮಿಗೀತ ಪದ್ಯ ಓದುತ್ತಿದ್ದರೆ, ನನಗೆ ನಾವು ರಂಗಾಯಣದಲ್ಲಿ ನಾಟಕ ಮಾಡಿದ್ದರ ನೆನಪು ಒತ್ತಿ ಬರುತ್ತಿತ್ತು.

ನಿರ್ದೇಶಕರಾಗಿದ್ದ ಜಯತೀರ್ಥ ಜೋಶಿ ಪದ್ಯದ ಸಾಲುಗಳನ್ನು ನೀಡಿ ನಮ್ಮಿಂದ ಆಶುವಿಸ್ತರಣೆ ಮಾಡಿಸುತ್ತಿದ್ದರು. ಒಂದೇ ಸಾಲನ್ನು ಹಿಡಿದು ಮೂರು ನಾಲ್ಕು ಗುಂಪುಗಳು ಬೇರೆ ಬೇರೆಯಾಗಿ ದೃಶ್ಯೀಕರಿಸುತ್ತಿದ್ದೆವು. ನಂತರ ಎಲ್ಲರೂ ಮಾಡಿ ತೋರಿಸಿದ ಮೇಲೆ. ಅದನ್ನು ತಿದ್ದಿ ತೀಡಿ ಒಂದು ರೂಪಕ್ಕೆ ತಂದು ನಿಲ್ಲಿಸುತ್ತಿದ್ದ ರೀತಿ; ಜಿ.ಹೆಚ್.ನಾಯಕರು, ಕೀರಂ ನಾಗರಾಜ ಅವರುಗಳು ನಮಗೆ ಪದ್ಯ ಅರ್ಥೈಸಿಕೊಡುತ್ತಿದ್ದ ತರಗತಿಗಳು; ರಘುನಂದನರು ಅದರ ವಾಚನ ಕುರಿತಂತೆ ನಡೆಸುತ್ತಿದ್ದ ಅಭ್ಯಾಸಗಳು, ಎಲ್ಲವೂ ಸಾಲು ಸಾಲಾಗಿ ನೆನಪಿನ ಪದರುಗಳಿಂದ ಬಿಚ್ಚಿಕೊಳ್ಳಲಾರಂಭಿಸಿದವು.

ಸತತವಾಗಿ ಮೂರು ತಿಂಗಳ ಕಾಲ ಆ ಪದ್ಯದ ಮೇಲೆ ನಾವೆಲ್ಲರೂ ಕೆಲಸ ಮಾಡಿದ್ದೆವು. ಆ ನಾಟಕಕ್ಕೆಂದೇ ದ್ವಾರಕೀ ಸರ್ ಗುಂಡನೆ ಸ್ಟೇಜ್ ಕಟ್ಟಿದ್ದರು. ಹಿಂಬದಿಯಲ್ಲಿ ಕಬ್ಬಿಣದ ದೊಡ್ಡ ದೊಡ್ಡ ಆಕೃತಿಗಳನ್ನು ನಿಲ್ಲಿಸಿದ್ದರು. ಷೋ ದಿನವೂ ನಿಗದಿಯಾಯ್ತು. ಇನ್ನೇನು ಇವತ್ತೇ ಷೋ, ಬೆಳಗ್ಗೆ ರಿಹರ್ಸಲ್ ಮುಗಿಸಿ ಎಲ್ಲರೂ ಊಟಕ್ಕೆ ಹಾಸ್ಟೆಲ್ಗೆ ಹೋಗಿ, ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಸಂಜೆ ಮೂರು ಗಂಟೆಗೆ ಮತ್ತೆ ಸ್ಟೇಜ್ ಗೆ ಬಂದೆವು. ನಾಲ್ಕು ಗಂಟೆಗೆ ಶುರುವಾದ ಮಳೆ ನಿಂತಿದ್ದು ಸಂಜೆ ಆರಕ್ಕೋ ಏನೋ. ರಂಗಾಯಣದಲ್ಲಿ ಒಂದು ಪ್ರತೀತಿ ಇದೆ. ಹೆಚ್ಚು ಕಡಿಮೆ ರಂಗಾಯಣದ ನಾಟಕಗಳ ಪ್ರಥಮ ಪ್ರದರ್ಶನ ಸರಾಗವಾಗಿ ನಡೆದಿಲ್ಲ. ಯಾವಾಗಲೂ ಪ್ರಥಮ ಪ್ರದರ್ಶನದ ವೇಳೆ ಮಳೆ ಬರುವುದು ಶಾಸ್ತ್ರವೇನೋ ಎಂಬಂತಾಗಿಬಿಟ್ಟಿದೆ. ಜೋರು ಮಳೆ ಬಂದು ನಾಟಕ ನಿಲ್ಲುವುದು ಅಥವಾ ನಾಟಕದ ಮದ್ಯೆ ಮದ್ಯೆ ಮಳೆ ಬಂದು, ನಿಂತು ಆಗುವುದು, ಅಥವಾ ನಾಟಕದ ಜೊತೆ ಜೊತೆಯಲ್ಲೇ ಮಳೆ ಆಟವಾಡುತ್ತ ಇರುವುದು, ಇಲ್ಲಾ, ನಾಟಕ ಮುಗಿದ ತಕ್ಷಣ ಪ್ರೇಕ್ಷಕರು ಮನೆಗೆ ಹೋಗಲಾಗದ ಹಾಗೆ ಜೋರು ಮಳೆ ಬರುವುದು ಹೀಗೆ ಆಗುವುದು ಯಾವಾಗಲೂ ನಡೆದು ಬಂದಿರುವ ರೀತಿ.

ಹಾಗೆಯೇ ‘ಭೂಮಿಗೀತ’ ಪ್ರದರ್ಶನದ ದಿನವೂ ಆಗಿತ್ತು. ಸಂಜೆ ರಂಗದ ಮೇಲಿರಬೇಕಾಗಿದ್ದ ಕಲಾವಿದರೆಲ್ಲ ಮಂಡಿವರೆಗೆ ಪ್ಯಾಂಟ್ ಮಡಚಿ, ಭೂಮಿಗೀತ ಸ್ಟೇಜ್ ನಲ್ಲಿ ಮಂಡಿವರೆಗೆ ನಿಂತಿದ್ದ ನೀರನ್ನು ಕೆಲವರು ದೋಚಿ ದೋಚಿ ಹೊರಗೆ ಹಾಕಿತ್ತಿದ್ದರೆ ಇನ್ನೂ ಕೆಲವರು ಪೊರಕೆ ಹಿಡಿದು ನೀರನ್ನು ಮೋರಿಗೆ ತಳ್ಳುವುದರಲ್ಲಿ ನಿರತರಾಗಿದ್ದರು. ಕೆಲವರು ಷೋ ಮಾಡಲು ಸಾಧ್ಯವಾಗಲಿಲ್ಲವಲ್ಲ ಅಂತ ಬೇಸರಿಸಿಕೊಳ್ಳುತ್ತಿದ್ದಾಗ ಕಾರಂತರು ಹೇಳಿದ ಮಾತು ನೆನಪಾಗುತ್ತದೆ. ಮಳೆಗಿಂತಲೂ ನಾಟಕ ಮುಖ್ಯ ಅಲ್ಲ. ಮಳೆ ಬಂದದ್ದು ಒಳ್ಳೇದಾಯಿತು. ಭೂಮಿ ತಣ್ಣಗಾಯಿತು. ನಾಟಕ ನಾಳೆ ಮಾಡಿದರಾಯಿತು ಎಂದು ಹೇಳಿ ಹೊರಟೇ ಬಿಟ್ಟರು.

ದ್ವಾರಕೀ ಸರ್, ಆ ನಾಟಕಕ್ಕೆಂದೇ ಗುಂಡನೆಯ ಸ್ಟೇಜ್ ಕಟ್ಟಿದ್ದರು. ಹಿಂಬದಿಯಲ್ಲಿ ಕಬ್ಬಿಣದ ದೊಡ್ಡ ದೊಡ್ಡ ಆಕೃತಿಗಳನ್ನು ನಿಲ್ಲಿಸಿದ್ದರು. ಈಗ ಅದೇ ಜಾಗದಲ್ಲಿ ಹೊಸದಾಗಿ ಪ್ರಸನ್ನ ಅವರ ವಿನ್ಯಾಸದಲ್ಲಿ ನಿರ್ಮಿತವಾಗಿರುವ ರಂಗಸ್ಥಳವೇ ಭೂಮಿಗೀತ. ರಂಗಸ್ಥಳದ ಆಕಾರ ಬದಲಾದರೂ ತನ್ನ ಹಳೆಯ ಹೆಸರಿನಲ್ಲಿಯೇ ಈ ಸ್ಟೇಜ್ ಉಳಿದಿದೆ. ಇದು ರಂಗಾಯಣದಲ್ಲಿರುವ ಇಂಟಿಮೇಟ್ ಪ್ರೊಸೀನಿಯಂ ಥಿಯೇಟರ್.

ನಾಟಕ ಪ್ರದರ್ಶನ ನಿರಂತರವಾಗಿ ಹತ್ತು ದಿನಗಳ ಕಾಲ ನಡೆಯಿತು. ಆಗ ನಾಟಕ ನೋಡಲೆಂದು ಬಂದ ಕೀರ್ತಿನಾಥ ಕುರ್ತುಕೋಟಿ, ಕೆ.ವಿ.ಸುಬ್ಬಣ್ಣ. ಎಂ.ಎಸ್.ಮರುಳಸಿದ್ದಪ್ಪ, ಕೀರಂ ನಾಗರಾಜ, ಯು.ಆರ್.ಅನಂತಮೂರ್ತಿ, ಗಿರೀಶ್ ಕಾರ್ನಾಡ್..  ಹೀಗೆ ಬಹಳಷ್ಟು ಜನರನ್ನು ಒಳಗೊಂಡ ದೊಡ್ಡ ಸಾಹಿತಿಗಳ ಗುಂಪು ನಮ್ಮೊಡನಿತ್ತು. ಅವರು ತಮ್ಮ ಅಭಿಪ್ರಾಯಗಳನ್ನು ತಿಳಿಸಿ, ಅದರ ಬಗ್ಗೆ ಆರೋಗ್ಯಕರವಾದ ಸುದೀರ್ಘ ಚರ್ಚೆ ನಡೆಸಿದ್ದೆಲ್ಲ ಈಗ ನೆನಪು.

ಅಲ್ಲದೆ ಅದೇ ನಾಟಕವನ್ನು ಬೆಂಗಳೂರಿಗೆ ತಂದಾಗ ನ್ಯಾಷನಲ್ ಕಾಲೇಜು ಕ್ಯಾಂಪಸಿನಲ್ಲಿ ಅಭಿನಯಿಸಿದ್ದೆವು. ಕಾಲೇಜಿನೊಳಗೆ ಅದೇ ಮಾದರಿಯ ಗುಂಡನೆಯ ಸ್ಟೇಜ್ ಕಟ್ಟಲು ಒಪ್ಪಿಗೆ ನೀಡಿದ್ ಹೆಚ್.ನರಸಿಂಹಯ್ಯನವರು ಅಷ್ಟೂ ದಿನ ನಮ್ಮೊಡನಿದ್ದು ಸಡಗರಿಸಿದ ನೆನಪು ……ಭೂಮಿಗೀತದ ನೆನಪು.

ಬ್ರೇಕಿಂಗ್ ನ್ಯೂಸ್: ರಂಗಾಯಣ ನಿರ್ದೇಶಕರಾಗಿ ಲಿಂಗದೇವರು ಹಳೆಮನೆ

ಹಿರಿಯ ಅಂಕಣಕಾರ, ಪ್ರಗತಿಪರ ಚಿಂತನೆಯ, ನೇರ ನುಡಿಯ ಲಿಂಗದೇವರು ಹಳೆಮನೆ ಪ್ರತಿಷ್ಠಿತ ರಂಗಾಯಣದ ನಿರ್ದೇಶಕರಾಗಿ ಇಂದು ನೇಮಕಗೊಂಡಿದ್ದಾರೆ. ಅವರ ಮೇಲೆ ಹತ್ತು ಹಲವು ವಿವಾದ ಹೊರಿಸುವ ಮೂಲಕ ನೇಮಕ ಕಗ್ಗಂಟು ಮಾಡಲಾಗಿತ್ತು.

ಲಿಂಗದೇವರು ಹಳೆಮನೆ ಸಮುದಾಯ ರಂಗ ತಂಡದಲ್ಲಿ ತೊಡಗಿಸಿಕೊಂಡವರು. ರಂಗಾಯಣ ಅಲ್ಲದಿದ್ದರೆ ಅವರಿಗೆ ಬೇರೆ ಸಂಘಟನೆಗಳ ಮೂಲಕವೂ ಕ್ರಿಯಾಶೀಲವಾಗಿರುವುದು ಗೊತ್ತಿತ್ತು. ಹಳೆಮನೆ ಅವರನ್ನು ನೇಮಕ ಮಾಡುವ ಮೂಲಕ ಸರ್ಕಾರ ತನ್ನನ್ನು ತಾನು ಗೌರವಿಸಿಕೊಂಡಿದೆ.

ಶಿವು, ಪ್ರಕಾಶ್ ಹೆಗಡೆ ಬ್ಲಾಗ್ ಸಮ್ಮೇಳನಕ್ಕೆ ಸಜ್ಜಾಗಿದ್ದಾರೆ…

ಕೆ ಶಿವು ಪತ್ರ

ಇಪ್ಪತ್ತು ದಿನಗಳ ಹಿಂದೆ ನನ್ನ ಮೊಬೈಲಿಗೆ ಪೋನೊಂದು ಬಂತು. “ಹಲೋ ಸರ್ ಹೇಗಿದ್ದೀರಿ, ನೀವು ಶಿವು ಅಲ್ವಾ, ನಾನು ಉದಯ್ ಇಟಗಿ, ಬೆಂಗಳೂರಿಗೆ ಬಂದಿದ್ದೇನೆ. ನನಗೊಂದು ಆಸೆಯಿದೆ. ನಮ್ಮ ಆತ್ಮೀಯ ಬ್ಲಾಗ್ ಗೆಳೆಯರನ್ನೆಲ್ಲಾ ಒಮ್ಮೆ ಬೇಟಿಯಾಗಬೆಕೆನಿಸುತ್ತದೆ, ನಿಮ್ಮ ಬಳಿ ನಮ್ಮ ಬ್ಲಾಗ್ ಗೆಳೆಯರ ಫೋನ್ ನಂಬರುಗಳಿದ್ದರೇ ಕೊಡಿ” ಎಂದರು. ಅವರು ಕೇಳಿದಾಗ ನನಗಂತೂ ಆಶ್ಚರ್ಯವೇ ಆಯಿತು. ನಮ್ಮ ರಾಜ್ಯದ ಇಟಗಿಯಲ್ಲಿ ಹುಟ್ಟಿ ಬೆಳೆದು ಉದ್ಯೋಗಕ್ಕಾಗಿ ದೂರದ ಲಿಬಿಯಾ ದೇಶದಲ್ಲಿ ಲೆಕ್ಚರರ್ ಆಗಿರುವ ಉದಯ ಸರ್ ಫೋನನ್ನು ನಾನು ನಿರೀಕ್ಷಿಸಿರಲಿಲ್ಲವಾದ್ದರಿಂದ ಒಂದು ರೀತಿಯ ಅಚ್ಚರಿ, ಖುಷಿ ಒಟ್ಟೊಟ್ಟಿಗೆ ಆಗಿತ್ತು. ತಕ್ಷಣವೇ ನನ್ನ ಬಳಿಯಿರುವ ಅನೇಕ ಬ್ಲಾಗ್ ಗೆಳೆಯರ ಫೋನ್ ನಂಬರುಗಳನ್ನು ಮೆಸೇಜ್ ಮಾಡಿದ್ದೆ.

ಮತ್ತೆ ನಾನು ಕೆಲವು ದಿನಗಳು ಕೆಲಸದಲ್ಲಿ ಬ್ಯುಸಿಯಾಗಿಬಿಟ್ಟೆ. ಅವರು ಇಲ್ಲಿ ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರೂ ಆಗಾಗ ಫೋನ್ ಮಾಡುತ್ತಿದ್ದರು.

ನಾಲ್ಕು ದಿನಗಳ ನಂತರ ಮತ್ತೆ ಫೋನ್ ಮಾಡಿ “ಕನಕಪುರ ರಸ್ತೆಯಲ್ಲಿರುವ ಹೋಟಲ್ ಅತಿಥಿ ಗ್ರ್ಯಾಂಡ್‍ನಲ್ಲಿ ಮಂಗಳವಾರ ಸಂಜೆ ಸೇರೋಣ ಎಲ್ಲರೂ ಬರುತ್ತಿದ್ದಾರೆ ನೀವು ಕುಟುಂಬ ಸಮೇತರಾಗಿ ಬನ್ನಿ.” ಎಂದು ಆಹ್ವಾನವಿತ್ತರು. ಅನೇಕ ಬ್ಲಾಗ್ ಗೆಳೆಯರನ್ನು ಈ ಮೂಲಕ ಬೇಟಿಯಾಗುವ ಅವಕಾಶ ಸಿಕ್ಕಿರುವಾಗ ಬಿಡುವುದುಂಟೆ! ಒಪ್ಪಿಕೊಂಡೆ.

ಪ್ರಕಾಶ್ ಹೆಗಡೆ, ಮಲ್ಲಿಕಾರ್ಜುನ್ ಮತ್ತು ನಾನು ಕೊನೆಯಲ್ಲಿ ತಡವಾಗಿ ಹೋಗಿದ್ದರಿಂದ ಬೇರೆ ಬ್ಲಾಗಿಗರೆಲ್ಲಾ ಆಗಲೇ ಸೇರಿದ್ದರು. ಸಂಪದದ ಹರಿಪ್ರಸಾದ್ ನಾಡಿಗ್, ಚಾಮರಾಜ ಸಾವಡಿಯವರ ಕುಟುಂಬ, ಶಿವಪ್ರಕಾಶ್, ಓಂ ಪ್ರಕಾಶ್, ಡಾ.ಸತ್ಯನಾರಾಯಣ್ ಕುಟುಂಬ, ಪರಂಜಪೆ ಜೊತೆಗೆ ನಾವು ಮೂವರು ಅತಿಥಿಗಳಾಗಿದ್ದರೇ, ಉದಯ ಇಟಗಿ ಅವರ ಶ್ರೀಮತಿಯವರು ಮತ್ತು ಅವರ ಮಗಳು ಭೂಮಿಕ ಅತಿಥೇಯರಾಗಿದ್ದರು. ಪರಸ್ಪರ ಪರಿಚಯ ಉಭಯ ಕುಶಲೋಪರಿಯಿಂದ ಶುರುವಾಗಿ ಅಲ್ಲಿ ಅನೇಕ ಆರೋಗ್ಯಕರ ಚರ್ಚೆಗಳು ಇತ್ತು. ವಿಕಿಪೀಡಿಯ ಬಳಸುವ ವಿಧಾನ ಇತ್ಯಾದಿಗಳ ಬಗ್ಗೆ ಹರಿಪ್ರಸಾದ್ ನಾಡಿಗ್ ವಿವರಿಸಿ ಅದರ ಬಗ್ಗೆ ಇಡೀ ರಾಜ್ಯಾ ಎಲ್ಲಾ ಜಿಲ್ಲೆಯ ವಿಶ್ವವಿದ್ಯಾಲಯಗಳಲ್ಲೂ ಕಾರ್ಯಕ್ರಮ ಆಗುತ್ತಿದ್ದು ಅದರ ಪಲಿತಾಂಶ ಅದ್ಬುತವಾಗಿದೆ ಎನ್ನುವುದನ್ನು ಅಂಕಿಅಂಶ ಸಹಿತ ವಿವರಿಸಿದರು. ಎಪ್ಪತ್ತು ವರ್ಷದ ವೃದ್ಧರು ವಿಕೀಪೀಡಿಯಾ ಬಳಕೆಯಿಂದ ಈಗ ಇಂಟರ್ ನೆಟ್ ಬಳಸಲು ಅಸಕ್ತಿ ತೋರಿರುವುದನ್ನು ವಿವರಿಸಿದರು. ಚಾಮರಾಜಸಾವಡಿಯವರು ಇತ್ತೀಚಿನ ಪತ್ರಿಕೋದ್ಯಮ ಬೆಳವಣಿಗೆ ಬಗ್ಗೆ ಕಳವಳ ವ್ಯಕ್ತಪಡಿಸಿ ಸ್ವಲ್ಪ ಗಂಭೀರ ವಿಚಾರದ ಬಗ್ಗೆ ಮಾತಾಡಿದರೆ, ಡಾ.ಸತ್ಯನಾರಯಣ್ ಸರ್ ತಮ್ಮ ಬ್ಲಾಗಿನ ಇತ್ತೀಚಿನ ಬರಹದ ಬಗ್ಗೆ ಮಾತಾಡಿದರು. ಅದರಲ್ಲಿ ಬೀಡಿ ಸೇದುವ ಪ್ರಕರಣವಂತೂ ಅಲ್ಲಿದ್ದ ಅನೇಕ ಬ್ಲಾಗಿಗರಿಗೆ ತಮ್ಮ ಬಾಲ್ಯದ ಅನುಭವಗಳನ್ನು ಅದರಲ್ಲೂ ಮೊದಲು ಬೀಡಿ ಸಿಗರೇಟು ಸೇದಿದ ಬಗ್ಗೆ ಬರೆಯಲು ಮುಂದಾದರು. ನಡುನಡುವೆ ಪ್ರಕಾಶ್ ಹೆಗಡೆಯವರು ತಮ್ಮ ಮೂಲನಿವಾಸಿಗಳ ಬಗ್ಗೆ ನಾಗು ಬಗ್ಗೆ, ಮತ್ತೆ ಪುಸ್ತಕದ ಬಗ್ಗೆ ಅಲ್ಲಲ್ಲಿ ತಮ್ಮ ಎಂದಿನ ನಗೆ ಚಟಾಕಿಗಳನ್ನು ಹಾರಿಸುತ್ತ ಎಲ್ಲರನ್ನು ರಂಜಿಸುತ್ತಿದ್ದರು. ಬ್ಲಾಗ್ ಎನ್ನುವ ವಿಚಾರ ಮೊದಲು ತಲೆಗೆ ಹೇಗೆ ಬಂತು ಮೊದಲು ಕಬ್ಬಿಣ ಕಡಲೆಯೆನಿಸಿದ್ದ ಅದು ಹೇಗೆ ನಂತರ ಸುಲಭವಾಯಿತು, ಅದಕ್ಕೆ ಸ್ಪೂರ್ತಿಯಾರು…..ಹೀಗೆ ಶುರುವಾಗಿ ಎಲ್ಲರ ಬ್ಲಾಗಿಂಗುಗಳ ತರಲೇ ಆಟಗಳು, ಬರಹಗಳಿಗೆ ಯಾರ್ಯಾರು ಪ್ರೋತ್ಸಾಹ ನೀಡಿದ್ದರು ಎನ್ನುವ ವಿಚಾರಗಳೆಲ್ಲಾ ಚರ್ಚೆಗೆ ಬಂತು. ಪ್ರೋತ್ಸಾಹದ ವಿಚಾರದಲ್ಲಿ ನಾಗೇಶ್ ಹೆಗಡೆಯವರು ಎಲ್ಲಿರುವ ಎಲ್ಲರಿಗೂ ಒಂದಲ್ಲ ಒಂದು ರೀತಿ ಪ್ರೋತ್ಸಾಹ ನೀಡಿರುವುದನ್ನು ತಿಳಿದಾಗ ನಮಗಂತೂ ಅವರ ಬಗ್ಗೆ ಗೌರವ ಇಮ್ಮಡಿಯಾಗಿತ್ತು. ಊಟದ ನಡುವೆ ಕ್ಯಾಷ್ಟ್ ಅವೆ, ಲೈಪ್ ಇಸ್ ಬ್ಯುಟಿಪುಲ್, ಮಾಜಿದ್ ಮಜ್ದಿಯ ಚಿಲ್ಡ್ರನ್ ಆಪ್ ಹೆವನ್, ಬಾರನ್, ಸಾಂಗ್ ಅಪ್ ಸ್ಪ್ಯಾರೋ, ಶ್ಯಾಮ್ ಬೆನಗಲ್ ರವರ ಜರ್ನಿ ಟು ಸಜ್ಜನ್ ಪುರ್….ಕೊನೆಗೆ ಇತ್ತೀಚಿನ ಮೊಗ್ಗಿನ ಮನಸ್ಸು, ನಟ ಪ್ರಕಾಶ್ ರೈ ಇತ್ಯಾದಿ ನಟರ ಬಗ್ಗೆ ಆರೋಗ್ಯಕರವಾದ ಚರ್ಚೆಯೂ ಆಯಿತು. ಎಲ್ಲರು ತಮ್ಮ ತಮ್ಮ ಅನುಭವವನ್ನು ಹಂಚಿಕೊಂಡರು.

ನಾನು ಮತ್ತು ಮಲ್ಲಿಕಾರ್ಜುನ್ ಸುಮ್ಮನಿರಲಿಲ್ಲ ಎಲ್ಲರ ಮಾತುಗಳನ್ನು ಕೇಳುತ್ತಾ ಆಗಾಗ ಅವರ ಸಹಜ ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದೆವು. ಉದಯ್ ಇಟಗಿಯವರು ಲಿಬಿಯ ದೇಶ, ಅಲ್ಲಿನ ಅಗ್ಗದ ಪೆಟ್ರೋಲ್, ಜನರ ವಿದ್ಯಾಬ್ಯಾಸದ ಪರಿಸ್ಥಿತಿ, ವಾತಾವರಣದ ಬಿಸಿ, ರಾಜಧಾನಿ ಟ್ರಿಪೋಲಿಯ ಹಸಿರುವಾತವರಣ ಉಳಿದೆಡೆಯಲ್ಲಾ ಮರಳುಗಾಡು, ಅಲ್ಲಿನ ಆರ್ಥಿಕ ಪರಿಸ್ಥಿತಿ, ಎಲ್ಲಾ ವಿಚಾರವನ್ನು ನಮ್ಮೊಂದಿಗೆ ಅಲ್ಲಲ್ಲಿ ಹಾಸ್ಯ ಮಾತುಗಳಲ್ಲಿ ಹಂಚಿಕೊಂಡರು.

ನಡುವೆಯೇ ಚಾಮರಾಜ್ ಸಾವಡಿಯವರ ಇಬ್ಬರು ಮಕ್ಕಳು, ಉದಯ್ ಇಟಗಿಯವರ ಮಗಳು ಭೂಮಿಕ, ಸತ್ಯನಾರಾಯಣ್ ಮಗಳು ಇಂಚಿತ, ಆಟವಾಡಿಕೊಳ್ಳುತ್ತಾ ಇಡೀ ರೂಮಿನ ತುಂಬಾ ಓಡಾಡಿಕೊಂಡು ತಮ್ಮದೇ ಲೋಕದಲ್ಲಿ ಮುಳುಗಿದ್ದರು.

” ಸರ್, ನೀವೆಲ್ಲಾ ಬಂದಿದ್ದು ನನಗಂತೂ ತುಂಬಾ ಖುಷಿಯಾಯ್ತು….ಈ ಸಂಜೆ ತುಂಬಾ ಚೆನ್ನಾಗಿತ್ತು.” ಖುಷಿಯಿಂದ ಹೇಳಿದರು ಉದಯ್ ಇಟಗಿ.

“ನಮಗೂ ತುಂಬಾ ಖುಷಿಯಾಗಿದೆ ಸರ್, ನಿಮ್ಮ ಕರೆಯ ನೆಪದಲ್ಲಿ ನಾವು ಚೆನ್ನಾಗಿ ತಿಂದು ಮನಸಾರೆ ಮಾತಾಡಿದ್ದೇವೆ,” ನಾನಂದೆ.

” ಹೌದು ಸರ್, ಎಲ್ಲಾ ತುಂಬಾ ಚೆನ್ನಾಗಿತ್ತು. ಮತ್ತೆ ಮುಟ್ಟಾದ ಮೇಲೆ ಸಿಗೋಣ” ಪ್ರಕಾಶ ಹೆಗಡೆಯವರ ಬಾಯಿಂದ ಪಟ್ಟನೆ ಬಂತು ಮಾತು.

“ಏನ್ ಸರ್ ನನಗೆ ಗೊತ್ತಾಗಲಿಲ್ಲ ಮತ್ತೆ ಹೇಳಿ” ಎಂದರು. ಇಟಗಿ.

“ಅದೇ ಸರ್, ಮುಟ್ಟಾದ ಮೇಲೆ ಸಿಗೋಣ” ಮತ್ತೊಮ್ಮೆ ಅವರ ಮಾತಿನ ಒಳ ಅರ್ಥವನ್ನು ಗಮನಿಸಿ ಎಷ್ಟು ನಕ್ಕಿದ್ದೆವೆಂದರೆ, ಅಲ್ಲಿದ್ದ ಹೋಟಲ್ಲಿನ ಬೇರೆ ಜನಗಳೆಲ್ಲಾ ನಮ್ಮತ್ತ ತಿರುಗಿ ನೋಡುವಂತಾಗಿತ್ತು. ಅನೇಕ ಗಹನವಾದ ವಿಚಾರಗಳ ಹಿತಕರವಾದ ಮಾತಿನ ನಾಡುವೆ ಪ್ರಕಾಶ್ ಹೆಗಡೆಯವರ ಇಂಥಹ ಮಾತುಗಳು ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸುತ್ತಿದ್ದವು.

ಎಲ್ಲರ ಮಾತುಗಳ ನಡುವೆ ಆಂದ್ರ ಶೈಲಿಯ ಸೊಗಸಾದ ಊಟ, ಐಸ್‍ಕ್ರೀಮ್, ಮೊಗಲಾಯ್ ಬೀಡ, ಕೊನೆಗೆ ಗ್ರೂಪ್ ಫೋಟೊ ಇಟಗಿ ಕುಟುಂಬದ ಫೋಟೋ ಇತ್ಯಾದಿಗಳೆಲ್ಲಾ ಸಾಂಗವಾಗಿ ಜರುಗಿ ಒಂದು ಉತ್ತಮ ಸಂಜೆಯನ್ನು ನಮ್ಮ ಆತ್ಮೀಯ ಬ್ಲಾಗ್ ಗೆಳೆಯರ ಜೊತೆ ಕಳೆದಿದ್ದು ನನ್ನ ತುಂಬಾ ಚೆನ್ನಾಗಿತ್ತು.

ಬಿಸಿಲಹನಿ ಬ್ಲಾಗಿನ ಉದಯ ಇಟಗಿಯವರ ಒಂದು ಸೊಗಸಾದ ಇಚ್ಛಾಶಕ್ತಿಯಿಂದ ಒಂದಷ್ಟು ಬ್ಲಾಗ್ ಗೆಳೆಯರು ತಮ್ಮ ನಿತ್ಯದ ದುಗುಡ ದುಮ್ಮಾನಗಳನ್ನು ಮರೆತು ಮನೆಸಾರೆ ನಕ್ಕು ಒಂದು ಒಳ್ಳೆಯ ಊಟವನ್ನು ಮಾಡಿ ಎಲ್ಲರೂ ಬೀಳ್ಕೊಡುವಾಗ ಬ್ಲಾಗ್ ಎನ್ನುವ ಲೋಕದಲ್ಲಿ ಎಷ್ಟು ಸೊಗಸಾದ ಸಂತೃಪ್ತಿಯಿದೆ ಅನ್ನಿಸಿತ್ತು. ಅದಕ್ಕಾಗಿ ಉದಯ ಇಟಗಿಯವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು.

ಈಗ ಮುಖ್ಯ ವಿಚಾರಕ್ಕೆ ಬರೋಣ.

ಕಳೆದ ವರ್ಷ ಹತ್ತಾರು ಜನರು ಆತ್ಮೀಯವಾಗಿ ಸೇರಿದ ನಾವೆಲ್ಲಾ ನೂರಾರು ಜನರಾಗಿ ಏಕೆ ಸೇರಬಾರದು ಅನ್ನುವ ಪ್ರಶ್ನೆಯೊಂದು ಅವತ್ತೇ ನನಗೆ ಮೂಡಿತ್ತು. ಆತ್ಮೀಯ ಹೃದಯಗಳೆಲ್ಲಾ ಸೌಹಾರ್ದಯುತವಾಗಿ ಒಂದು ದಿನ ಸೇರಿ ಬೆಳಗಿನಿಂದ ಸಂಜೆಯವರೆಗೆ ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ, ಒಂದಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡರೇ ಹೇಗೆ ಅನಿಸಿದ್ದು ನಿಜ. ಈಗ ನೀವೇ ಹೇಳಿ ನಾವೆಲ್ಲಾ [ಬ್ಲಾಗಿಗರು ಮತ್ತು ಬ್ಲಾಗ್ ಓದುಗರೆಲ್ಲಾ] ಸೇರಿದರೆ ಚೆನ್ನಾಗಿರುತ್ತದೆ ಅಲ್ಲವೇ……ನನ್ನ ಮನಸ್ಸಿನ ಅನಿಸಿಕೆಯೇ ನಮ್ಮ ಅನೇಕ ಬ್ಲಾಗ್ ಗೆಳೆಯರಲ್ಲಿ ಮೂಡಿತ್ತು. ಎಲ್ಲರ ಮನಸ್ಸಿನಲ್ಲಿದ್ದ ಈ ವಿಚಾರ ಡಾ.ಆಜಾದ್ [ಜಲನಯನ ಬ್ಲಾಗ್] ಮೂಲಕ ಒಂದು ಕಾರ್ಯಕ್ರಮದ ಚೌಕಟ್ಟು ಪಡೆದು ಸದ್ಯ ದಿನಾಂಕ ನಿಗದಿಯಾಗಿದೆ. ಅವರು ನಮ್ಮ ಅನೇಕ ಬ್ಲಾಗ್ ಗೆಳೆಯರಿಗೆ ಕಾರ್ಯಕ್ರಮದ ವಿಚಾರವಾಗಿ ಮೇಲ್ ಮಾಡಿದ್ದಾರೆ. ವಿಚಾರ ತಿಳಿದವರು ತಮ್ಮ ತಮ್ಮ ಬ್ಲಾಗ್ ಗೆಳೆಯರಿಗೂ, ಬ್ಲಾಗ್ ಓದುಗರಿಗೂ ತಲುಪಿಸಿದರೆ ಒಳ್ಳೆಯದೆಂದು ನನ್ನ ಭಾವನೆ. ಸದ್ಯ ನಮ್ಮ ಬ್ಲಾಗಿಗರ ಕೂಟ ಆಗಸ್ಟ್ 22-2010 ಎಂದು ನಿಗದಿಯಾಗಿದೆ. ಅವತ್ತು ನಾವೆಲ್ಲಾ ಸೇರಿ ಆ ದಿನವನ್ನು ನಮ್ಮ ದಿನವನ್ನಾಗಿ ಮಾಡಿಕೊಳ್ಳೋಣ. ಅದಕ್ಕೆ ನೀವೆಲ್ಲರೂ ಬರಲೇ ಬೇಕು. ಮತ್ತೆ ಇಲ್ಲಿ ನಾನು ಕರೆಯಬೇಕು ಎಂದು ಎನಿಸುತ್ತಿಲ್ಲ. ಏಕೆಂದರೆ ಅದು ನಿಮ್ಮದೇ ಕಾರ್ಯಕ್ರಮ ನೀವೇ ರೂಪಿಸಿ, ಯಶಸ್ವಿಗೊಳಿಸಬೇಕಾದ ಕಾರ್ಯಕ್ರಮ. ಈ ಕಾರ್ಯಕ್ರಮವು ರೂಪುರೇಶೆ, ಚೌಕಟ್ಟು, ಇತ್ಯಾದಿ ವಿಚಾರಗಳನ್ನು ಚರ್ಚಿಸಲು, ವಹಿಸಿಕೊಳ್ಳಲು ಮುಂದೆ ಬರುವ ಬ್ಲಾಗಿಗರನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಅದಕ್ಕಾಗಿ ನೀವು ಪ್ರಕಾಶ್ ಹೆಗಡೆ, ಅಜಾದ್, ದಿನಕರ್, ನನಗೆ ಮೇಲ್ ಮಾಡಬಹುದು ಅಥವ ಫೋನ್ ಮಾಡಬಹುದು.[ಸದ್ಯ ನಮ್ಮ ಬ್ಲಾಗಿಗರ ಕೂಟವನ್ನು ಬೆಂಗಳೂರಿನಲ್ಲಿ ಮಾಡಬಹುದೆಂದು ಪ್ರಕಾಶ್ ಹೆಗಡೆಯವರ ಬ್ಲಾಗಿನಲ್ಲಿ ಅನೇಕ ಬ್ಲಾಗಿಗರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ] ಇದಕ್ಕೆ ನಿಮ್ಮ ಅಭಿಪ್ರಾಯವನ್ನು ನಿರೀಕ್ಷಿಸುತ್ತಿದ್ದೇನೆ. ಇನ್ನೇಕೆ ತಡ, ಇನ್ನೂ ಕೆಲವೇ ದಿನಗಳಿವೆ…ತಡಮಾಡದೇ ಬನ್ನಿ ಸಕ್ರೀಯವಾಗಿ ಎಲ್ಲಾ ವಿಧದಲ್ಲೂ ಭಾಗವಹಿಸಿ ಬ್ಲಾಗಿಗರ ದಿನವನ್ನು ನಮ್ಮ ದಿನವನ್ನಾಗಿಸೋಣ

ನನ್ನ ಕನಸು..ಸಂವಾದ

%d bloggers like this: