ಕಳೆದುಕೊಳ್ಳುವ ಬಗೆಗೊಂದು ಸ್ವಗತ…

-ಶ್ರೀ

ನೂರು ಕನಸು

ಎರಡು ವರ್ಷದ ಹಿಂದಿನ ಕಥೆ. ಅವತ್ತೊಂದು ದಿನ ಬನ್ನೇರುಘಟ್ಟದಲ್ಲಿರುವ ಅತ್ತಿಗೆಯ ಮನೆಯಿಂದ ವಾಪಸ್ ಹೊರಟವಳು ಗೆಳತಿಯ ಮನೆಗೆ ಹೋಗುವ ಬಸ್ಸಿನಲ್ಲಿ ಕೂತಿದ್ದೆ. ಅರ್ಧ ದಾರಿಯಲ್ಲಿ ನನ್ನ ಪಕ್ಕದಲ್ಲಿ ನಿಂತಿದ್ದ ಹೆಂಗಳೆಯೊಬ್ಬಳು ತನ್ನ ಮಗುವನ್ನು ನನ್ನ ಮಡಿಲಲ್ಲೇರಿಸಿದಳು. ಮಗುವನ್ನು ನೀಟಾಗಿ ನನ್ನ ಮಡಿಲಲ್ಲಿ ಅವಳು ಕೂರಿಸುವಾಗ ನಾನು ಪಿಳಿಪಿಳಿ ಕಣ್ಣುಬಿಡುತ್ತಿದ್ದ ಮಗುವಿನ ಮುಖ ನೋಡ್ತಾ ಇದ್ದೆ. ಅವಳು ಕೂರಿಸಿಯಾದ ಮೇಲೆ ಮಗುವನ್ನು ನಾನು ಹಿಡಿದುಕೊಂಡು ಕೂತೆ.

ಸ್ವಲ್ಪ ದೂರ ಹೋದನಂತರ ಆಕೆ ಮಗುವನ್ನು ನನ್ನ ಮಡಿಲಿನಿಂದ ತೆಗೆದುಕೊಂಡು ಬಸ್ ಇಳಿದಳು. ಅದ್ಯಾಕೋ ಅವಳು ಸ್ವಲ್ಪ ಜಾಸ್ತಿಯೇ ನನ್ನ ಮಡಿಲು ತಡಕಿದಳೇನೋ ಅಂತನಿಸಿದರೂ ಅದೇಕೋ ಆಕಡೆ ಗಮನ ಕೊಡಲಿಲ್ಲ.

ನಂತರ ಜಯನಗರದಲ್ಲಿ ಬಸ್ಸಿಂದ ಇಳಿಯುವಾಗ ಪರ್ಸ್ ಝಿಪ್ ತೆರೆದಿದ್ದು ಗಮನಕ್ಕೆ ಬಂತು. ಆಗಲೂ ನನಗೇನೂ ಅನಿಸಲಿಲ್ಲ. ಝಿಪ್ ಹಾಕಿಕೊಂಡು ಆಟೋ ಹಿಡಿದು, ವಿದ್ಯಾಪೀಠ ಸರ್ಕಲ್ಲಿಗೆ ಹೋದೆ. ಅಲ್ಲಿ ಫ್ರೆಂಡ್ ಮನೆಯ ಹತ್ತಿರ ಇಳಿದು ದುಡ್ಡಿಗೆಂದು ಪರ್ಸ್ ತಡಕಾಡಿದರೆ- ಬ್ಯಾಂಕಿಗೆ ಹಾಕಬೇಕೆಂದು ಬ್ಯಾಗಲ್ಲಿಟ್ಟುಕೊಂಡಿದ್ದ ಉಳಿತಾಯದ 9,500 ರೂಪಾಯಿ ಇದ್ದ ಕಟ್ಟು ಕಾಣೆ… ಕಳ್ಳಿ ಮೊಬೈಲ್ ಉಳಿಸಿಹೋಗಿದ್ದಳು. ಗೆಳತಿಯ ಮನೆ ಅಲ್ಲೇ ಇದ್ದ ಕಾರಣ ಆಟೋ ಚಾರ್ಜ್ ಕೊಟ್ಟು ಬಚಾವಾದೆ. (ಪೊಲೀಸ್ ಹತ್ತಿರ ದೂರು ಕೊಡಲಿಕ್ಕೆ ಹೋಗಿದ್ದೆ, ಆಕಥೆ ಇನ್ನೊಮ್ಮೆ ಹೇಳ್ತೀನಿ)

——————————–

ವರ್ಷದ ಹಿಂದಿನ ಕಥೆ. ಒಂದು ಮಧ್ಯಾಹ್ನ. ಐಸಿಐಸಿಐ ಕ್ರೆಡಿಟ್ ಕಾರ್ಡ್ ವಿಭಾಗದಿಂದ ಕರೆ ಬಂತು. ಏನೆಂದು ಕೇಳಿದರೆ, “ನೀವು ನಿನ್ನೆ ಮಾಡಿದ ಖರೀದಿಯನ್ನು ಇಎಂಐ ಮೂಲಕ ಕಟ್ಟಬಹುದು, ತಿಳಿಸಲಿಕ್ಕೆ ಕರೆ ಮಾಡಿರುವೆವು” ಎಂದರು. ಆ ‘ನಿನ್ನೆ’ ನಾನೆಲ್ಲೂ ಕ್ರೆಡಿಟ್ ಕಾರ್ಡ್ ಉಜ್ಜಿರಲಿಲ್ಲವಾದ್ದರಿಂದ ಇವರು ಯಾವುದರ ಬಗ್ಗೆ ಹೇಳುತ್ತಿದ್ದಾರೆಂದು ತಿಳಿಯಲಿಲ್ಲ. ಕೇಳಿದರೆ ಹೇಳಿದರು, ನಾನು 37,000+ ಮೌಲ್ಯದ ವಿಮಾನದ ಟಿಕೆಟ್-ಗಳು ಕ್ರೆಡಿಟ್ ಕಾರ್ಡ್ ಮೂಲಕ ಹಿಂದಿನ ದಿನ ಖರೀದಿಸಿದ್ದೆನಂತೆ.

ಕೂಡಲೇ ಎಚ್ಚತ್ತ ನಾನು, ನಾನು ಖರೀದಿಸಿಯೇ ಇಲ್ಲವೆಂದು ಹೇಳಿದೆ. ಸ್ವಲ್ಪ ವಿಚಾರಣೆ ನಡೆಸಿ ನಾನು ಆಸಮಯದಲ್ಲಿ ಬೇರೇನೋ ಮಾಡುತ್ತಿದ್ದೆ, ಮತ್ತು ಕ್ರೆಡಿಟ್ ಕಾರ್ಡ್ ನನ್ನ ಹತ್ತಿರವೇ ಇತ್ತು, ಬೇರೆಲ್ಲೂ ಹೋಗಿರಲಿಲ್ಲ ಎಂಬ ಉತ್ತರ ಪಡೆದ ನಂತರ, ಆಕೆ ನನಗೆ ಕೂಡಲೇ ಐಸಿಐಸಿಐ ಕ್ರೆಡಿಟ್ ಕಾರ್ಡ್ ಡಿವಿಜನ್ನಿಗೆ ಟ್ರಾನ್ಸಾಕ್ಷನ್ ಡಿಸ್ಪ್ಯೂಟ್ ಹಾಕಲು ಹೇಳಿದಳು. ಕೊನೆಗೆ ಅದೇನೇನು ಮಾಡಬೇಕೋ ಎಲ್ಲಾ ಮಾಡಿ, ಬ್ಯಾಂಕಿಗೆ ನಾನು ಮಾಡಿದ ಖರೀದಿಯಲ್ಲವೆಂಬುದನ್ನು ತಿಳಿಯಪಡಿಸಿದೆ. ಅವರು ಒಪ್ಪಿಕೊಂಡು ನನ್ನ ಬಿಲ್-ನಿಂದ ತಾತ್ಕಾಲಿಕವಾಗಿ ಅದನ್ನು ತೆಗೆಯುತ್ತೇವೆಂದರು. ಒಂದು ವೇಳೆ ತಮ್ಮ ತನಿಖೆಯಲ್ಲಿ ನಾನೇ ಖರೀದಿಸಿದ್ದೆಂದು ಪ್ರೂವ್ ಆದರೆ ಮಾತ್ರ ಅದನ್ನು ನಾನೇ ಕಟ್ಟಬೇಕಾಗುತ್ತದೆಂದು ಎಚ್ಚರಿಸಿದರು. ನಾನು ಖರೀದಿಯೇ ಮಾಡಿಲ್ಲವಾದ ಕಾರಣ ಅವರು ಸಾಧಿಸುವ ಪ್ರಶ್ನೆಯೇ ಬರುವುದಿಲ್ಲವೆಂದು ನಾನು ಭರವಸೆ ನೀಡಿದೆ.

ಕೆಲ ದಿನ ಬಿಟ್ಟು ಕ್ರೆಡಿಟ್ ಕಾರ್ಡ್ ಬಿಲ್ ಬಂತು. ಅದರಲ್ಲಿ ನಾನು ಕಟ್ಟಬೇಕಿರುವ ದುಡ್ಡು ಸೊನ್ನೆ ರೂಪಾಯಿಯಿತ್ತು, ನನಗೆ ದುಡ್ಡು ಬರಬೇಕಿತ್ತು. ಏನೆಂದು ಚೆಕ್ ಮಾಡಿದರೆ, ವಿಮಾನ ಟಿಕೆಟ್ ಖರೀದಿಸಿದಾಗ ಅದರಲ್ಲಿ 5% cash-back offer ಇದ್ದುದರಿಂದ 1800 ರೂಪಾಯಿಯಷ್ಟು ನನ್ನ ಅಕೌಂಟಿಗೆ ವಾಪಸ್ ಬಂದು, ನಾ ಕಟ್ಟಬೇಕಿರುವ 1700+ರಷ್ಟು ದುಡ್ಡು ಮಾಫಿಯಾಗಿತ್ತು..!

——————————–

ಇವತ್ತು ಶಿವಾಜಿನಗರದಲ್ಲಿ ಬಸ್ಸಿಗೆ ಕಾದುನಿಂತಿದ್ದೆ. ಬಸ್ ಬಂತು, ಸಹಜವಾಗಿಯೇ ರಶ್ ಇತ್ತು. ನೂಕುನುಗ್ಗಲಿನಲ್ಲಿ ಬಸ್ಸಿಗೆ ಹತ್ತುವಾಗ ನನ್ನ ಹಿಂದಿದ್ದವಳ ಕೈ ನನ್ನ ಹ್ಯಾಂಡ್ ಬ್ಯಾಗಿನ ಬದಿಯಲ್ಲಿ ಝಿಪ್ ತೆರೆಯಲು ಯತ್ನಿಸುತ್ತಿದ್ದುದು ಅನುಭವಕ್ಕೆ ಬಂತು. ಮೆಲ್ಲಗೆ ನೋಡಿ ವಿಷಯ ಹೌದೆಂದು ಕನ್-ಫರ್ಮ್ ಮಾಡಿಕೊಂಡೆ. ಬ್ಯಾಗ್ ಹಾಕಿಕೊಂಡಿದ್ದ ಕೈಯಿಂದ ಆಕೆಯ ಕೈಹಿಡಿದೆ. ಬಿಡಿಸಿಕೊಳ್ಳಲು ಯತ್ನಿಸಿದಳು. ನಾ ಬಿಡಲಿಲ್ಲ. ಹಾಗೇ ಹಿಂತಿರುಗಿ ನೋಡಿ “ಏನ್ರೀ ಮಾಡ್ತಿದೀರಾ, ಮರ್ಯಾದಸ್ತರ ಥರ ಕಾಣ್ತೀರಾ, ಮಾಡೋದು ಇಂಥಾ ಕಚಡಾ ಕೆಲಸಾನಾ” ಅಂತ ರೋಪ್ ಹಾಕಿದೆ.

ಆಕೆ ತಕ್ಷಣ ಕೈಬಿಡಿಸಿಕೊಂಡಳು, “ನಾನೇನು ಮಾಡಿದೀನಿ, ನನ್ನ ಪಾಡಿಗೆ ಬಸ್ಸಿಗೆ ಹತ್ತುತಾ ಇದ್ದೀನಿ” ಅಂದಳು. ಬಸ್ಸಿಗೆ ಹತ್ತೋರು ನನ್ “ಬ್ಯಾಗಿಗೆ ಯಾಕ್ ಕೈಹಾಕ್ತಿದೀರಾ” ಅಂದೆ. “ಹಿಡ್ಕೊಳ್ಳೋಕೆ ಏನೂ ಸಿಕ್ಕಿಲ್ಲ, ಹಾಗಾಗಿ ಬ್ಯಾಗ್ ಹಿಡಿದೆ” ಎಂದಳು. ಉಳಿದವರು ನಮ್ಮ ಜಗಳ ನೋಡುತ್ತಿದ್ದರು. ಆದರೆ ಆಕೆ ಕದಿಯಲು ಹೊರಟವಳೆಂದು ಸಾಧಿಸಲು ನನ್ನಲ್ಲೇನೂ ಇರಲಿಲ್ಲವಾದ ಕಾರಣ ಕೊನೆಗೆ ನಾನೇ ಸುಮ್ಮನಾದೆ. ಆಕೆ ತನ್ನನ್ನು ಕಳ್ಳಿಯೆಂದ ನನಗೆ ಹಿಡಿಶಾಪ ಹಾಕುತ್ತಿದ್ದಳು.

———————————

ಕಳ್ಳರು ಬೇರೆ ಬೇರೆ ರೀತಿಯಲ್ಲಿರುತ್ತಾರೆ. ಕೆಲವರಿಗೆ ದೋಚುವುದು ಬದುಕಲಿಕ್ಕಿರುವ ಅನಿವಾರ್ಯತೆ. ಇನ್ನು ಕೆಲವರಿಗೆ ಕದಿಯುವುದು ಚಟ. ಕೆಲವರು ದೋಚಿದ್ದು ಗೊತ್ತೇ ಆಗುವುದಿಲ್ಲ – ತುಂಬಾ ಸೊಫಿಸ್ಟಿಕೇಟೆಡ್ ಆಗಿ ಕೃತ್ಯವನ್ನು ಗೈದಿರುತ್ತಾರೆ, ಮತ್ತು ಅದಕ್ಕೇನಾದರೂ ಹೆಸರು ಕೂಡ ಇಟ್ಟಿರುತ್ತಾರೆ. ಕದ್ದಿದ್ದನ್ನು ಅಥವಾ ದೋಚಿದ್ದನ್ನು ಒಪ್ಪಿಕೊಳ್ಳುವ ಕಳ್ಳರು ತುಂಬಾ ಕಡಿಮೆ. ಕದಿಸಿಕೊಳ್ಳುವುದು, ಕಳೆದುಕೊಳ್ಳುವುದು ನನಗೆ ಅಭ್ಯಾಸವಾಗಿಹೋಗಿದೆ.

ಹಾಗೆಂದು ಬದುಕಲ್ಲಿ ಕಳೆದುಕೊಳ್ಳಲು ಬೇಜಾರಿರಲಿಲ್ಲ ನನಗೆ… ಬದುಕೆಂದರೆ ಕಳೆಯುವ-ಕೂಡುವ ಲೆಕ್ಕಾಚಾರ ಎಂಬ ಮಾತು ಒಪ್ಪಿಕೊಳ್ಳಲು ಹಿಂದೆ-ಮುಂದೆ ನೋಡಿದವಳು ನಾನು.

ಆದರೆ, ಇತ್ತೀಚೆಗೆ ಮಾತ್ರ, ನಿಜ, ಬದುಕೆಂದರೆ ಕೂಡುವುದು – ಕಳೆಯುವುದು ಬಿಟ್ರೆ ಇನ್ನೇನೂ ಇಲ್ಲ ಅಂತ ಅನಿಸ್ತಿದೆ. ಬರೀ ಕಳೆದುಕೊಳ್ಳುವುದರಿಂದ ಏನು ಸಾಧಿಸ್ತೀನಿ, ಬದುಕಿಡೀ ಇದೇ ಆದರೆ, ಪಡೆದುಕೊಳ್ಳುವುದು ಯಾವಾಗ ಅಂತ ಅನಿಸ್ತಿದೆ. ಏನು ಪಡೆದೆವೋ ಅದು ಮಾತ್ರ ಕೊನೆಗೆ ಬದುಕ ಬುತ್ತಿಯಲ್ಲುಳಿಯುತ್ತದೆ, ನಮ್ಮನ್ನು ಅಳೆಯುವವರೂ ಅದರ ಮೂಲಕವೇ ಅಳೆಯುತ್ತಾರೆ… ಕಳೆದುಕೊಂಡಿದ್ದಕ್ಕೆ ಕಣ್ಣೀರಿಡುವುದು ಉಪಯೋಗವಿಲ್ಲ, ಪಡೆಯಲಿಕ್ಕೆ ಪ್ಲಾನ್ ಮಾಡಬೇಕು ಅಂತನಿಸುತ್ತಿದೆ.

ಇದೆಲ್ಲದಕ್ಕಿಂತ ಹೆಚ್ಚಾಗಿ, ಮನುಷ್ಯ ಮೂಲತಹ ತುಂಬಾ ಸ್ವಾರ್ಥಿ, ಸ್ವಾರ್ಥ ಬಿಟ್ಟು ಬದುಕುವುದು ಅಪರೂಪದ ಕೆಲಸ, ಅದು ಮಾಡಿ ನಾನ್ಯಾಕೆ ಬುದ್ಧನ ಶ್ರೇಣಿಗೇರಬೇಕು, ಅದರಿಂದೇನಾಗುತ್ತದೆ – ಅಂತಲೂ ಅನಿಸ್ತಿದೆ. ನಮ್ಮ ಆತ್ಮದ ಒಳಗಿರುವ ಅಹಂ ಯಾವಾಗಲೂ ಲೆಕ್ಕಾಚಾರ ಹಾಕುತ್ತಿರುತ್ತದೆ – ಅದಕ್ಕೆ ಸ್ವಾರ್ಥದಿಂದಲೇ ತೃಪ್ತಿ – ಅಲ್ವಾ…?

1 ಟಿಪ್ಪಣಿ (+add yours?)

  1. ಮುರಳೀಧರ ಸಜ್ಜನ.
    ಮೇ 17, 2010 @ 17:07:39

    Very nice and beautiful story. It’s real ? . Ha ha hA HA…. best story, hi HI Hi hI…….

    ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: