ಕಾಸು ಕುಡಿಕೆ: ಹರ್ಷದ್ ಮೆಹ್ತಾ ಕೃಪಾಪೋಷಿತ ನಾಟಕ ಮಂಡಳಿ

ಕಾಸು ಕುಡಿಕೆ- ೧೦

ಜಯದೇವ ಪ್ರಸಾದ ಮೊಳೆಯಾರ

ಟೋಪಿವಿದ್ಯೆಯ ಮೂರು ಮುಖಗಳು-

Rather fail with honour than succeed by fraud. . . .  . . .  . Sophocles.

ಮೋಸದಿಂದ ಜಯಿಸುವುದಕ್ಕಿಂತ ಘನತೆಯೊಂದಿಗೆ ಸೋಲುವುದೇ ಲೇಸು. . . . . . ಸೋಫೊಕ್ಲಿಸ್

ಟೋಪಿ ಕಲೆಯ ಮೊದಲನೆಯ ಮುಖ ‘ಒಳಕೈ ವ್ಯವಹಾರ’ವಾದರೆ, ಎರಡನೇ ಮುಖ ಶೇರು ಬೆಲೆಯ ‘ರಿಗ್ಗಿಂಗ್ (Rigging). ಇದಕ್ಕೂ ನಮ್ಮ ದೇಶದಲ್ಲಿ ಒಂದು ಭವ್ಯ ಪರಂಪರೆಯೇ ಇದೆ. ರಿಗ್ಗಿಂಗ್ ಎಂದರೆ ‘ಒಂದು ಶೇರಿನ ಬೆಲೆಯನ್ನು ದುರುದ್ಧೇಶಪೂರ್ವಕವಾಗಿ ಏರಿಸುತ್ತಲೇ ಹೋಗುವುದು ಮತ್ತು ಸಾಕಷ್ಟು ಮೇಲೇರಿದ ಬಳಿಕ ತಮ್ಮಲ್ಲಿದ್ದ ಶೇರುಗಳನ್ನು ಮಾರಿ ದುಡ್ಡು ಮಾಡುವುದು’. ಇದನ್ನು ಯಾವುದೇ ಒಬ್ಬ ವ್ಯಕ್ತಿಯೂ ಮಾಡಬಹುದು, ಒಂದು ಗುಂಪು ಕೂಡಾ ಮಾಡಬಹುದು. ರಿಗ್ ಆಗುತ್ತಿರುವ ಕಂಪೆನಿಯ ಪ್ರೊಮೋಟರ್ಸ್ ಜೊತೆಗೂಡಿಯೂ ಮಾಡಬಹುದು, ಅಥವ ಅವರ ಅರಿವಿಲ್ಲದೆಯೂ ಮಾಡಬಹುದು. ಬ್ಲೂಚಿಪ್‌ಗಳಲ್ಲೂ ಮಾಡಬಹುದು, ಜುಜುಬಿ ನಾಲ್ಕಾಣೆ ಶೇರುಗಳಲ್ಲೂ ಮಾಡಬಹುದು.

ಹೇಗೆ ಮಾಡ್ತಾರೆ ಈ ಶೇರು ರಿಗ್ಗಿಂಗ್? ನಾನು ಮೊದಲೊಮ್ಮೆ ಒಂದು ಕತೆ ಹೇಳಿದ್ದೆ, ಮಂಗಗಳ ಕತೆ. ಕೆಲವರು ಓದಿರಬಹುದು.

ಆ ಕತೆಯಲ್ಲಿ ಒಬ್ಬ ವರ್ತಕ ಒಂದು ಹಳ್ಳಿಗೆ ತನ್ನ ಒಬ್ಬ ಸಹಾಯಕನ ಜೊತೆ ಬರ್ತಾನೆ. ತನಗೆ ಮಂಗಗಳು ಬೇಕು, ಹತ್ತು ರೂ. ಗೆ ಒಂದರಂತೆ ಎಷ್ಟು ಬೇಕಾದರೂ ಖರೀದಿಸಬಲ್ಲೆ ಅಂತ ಹಳ್ಳಿಗರಿಗೆ ಆಫರ್ ನೀಡುತ್ತಾನೆ. ನೆನಪಿದೆಯಾ?

ಹಳ್ಳಿ ಜನರಿಗೆ ಖುಶಿಯೋ ಖುಶಿ. ಪಕ್ಕದ ಗುಡ್ಡಗಾಡಿನಲ್ಲಿರುವ ಮಂಗಗಳನ್ನೆಲ್ಲ ಹಿಡಿದೂ ಹಿಡಿದೂ ಹತ್ತು ರೂಪಾಯಿಗೆ ಒಂದರಂತೆ ವರ್ತಕನಿಗೆ ಮಾರಿದರು. ವರ್ತಕ ಅವನ್ನೆಲ್ಲ ಖರೀದಿಸಿ ದೊಡ್ಡ ದೊಡ್ಡ ಬೋನುಗಳಲ್ಲಿ ಕೂಡಿಹಾಕಿದನು. ಕೆಲವು ದಿನಗಳ ಬಳಿಕ ಮಂಗಗಳ ಸಂಖ್ಯೆ ಕಡಿಮೆಯಾದಂತೆ ವರ್ತಕ ಮಂಗವೊಂದಕ್ಕೆ ೨೫ ರೂ ಬೆಲೆಯನ್ನು ಘೋಷಿಸಿದ. ಹಳ್ಳಿಗರು ತುಸು ದೂರದ ಕಾಡಿನಲ್ಲಿ ಅಲೆದು ಮಂಗಗಳನ್ನು ಹಿಡಿದು ತಂದು ಮಾರಿ ದುಡ್ಡು ಕಿಸೆಗೇರಿಸಿದರು.

ಸ್ವಲ್ಪ ದಿನಗಳ ಬಳಿಕ ವರ್ತಕ ಮಂಗವೊಂದಕ್ಕೆ ೫೦ ರೂ ಎನೌನ್ಸ್ ಮಾಡೇ ಬಿಟ್ಟ. ಅಲ್ಲದೆ ತಾನು ಒಂದು ವಾರದ ಮಟ್ಟಿಗೆ ಪಟ್ಟಣಕ್ಕೆ ಹೋಗಿ ಬರುವುದಾಗಿ ತಿಳಿಸಿ ಸಹಾಯಕನನ್ನು ಇನ್ಚಾರ್ಜ್ ಮಾಡಿ ಹೊರಟುಹೋದನು.

ಆತ ಹೋದ ಬಳಿಕ ಆ ಸಹಾಯಕ ಹಳ್ಳಿಗರಿಗೆ ತನ್ನದೇ ಪ್ರೈವೇಟ್ ಆಫರ್ ನೀಡಿದ. “ಹಳ್ಳಿಗರೇ, ಬೋನಿನಲ್ಲಿರುವ ಮಂಗಗಳನ್ನು ನನ್ನಿಂದ ೩೫ ರೂ ಗಳಂತೆ ನೀವು ತಗೊಳ್ಳಿ. ಧನಿ ಬಂದ ನಂತರ ೫೦ ರೂ ಗಳಂತೆ ಆತನಿಗೆ ಮಾರುವಿರಂತೆ. ನಾನಂತೂ ಎಲ್ಲಾ ಮಂಗಗಳು ತಪ್ಪಿಸಿಕೊಂಡು ಹೋದವೆಂದು ಸೋಗು ಹಾಕುತ್ತೇನೆ. ನಿಮಗೂ ಲಾಭ, ನನಗೂ ಲಾಭ. ಏನಂತೀರಾ..??”

ಈವರೆಗೆ ಸುಲಭದಲ್ಲಿ ದುಡ್ಡು ಮಾಡಿದ್ದ ಹಳ್ಳಿಗರಿಗೆ ದುಡ್ಡಿನ ನಶೆ ಹತ್ತಿತ್ತು. ೩೫ ರಂತೆ ತಗೊಂಡು ೫೦ ರಂತೆ ಮಾರಾಟ! ೧೫ ರೂಪಾಯಿಗಳ ಸುಲಭದ ಗಳಿಕೆ. ಇದೊಂದು ವಂಡರ್‌ಫುಲ್ ಅವಕಾಶ ಅಂತ ಅನಿಸಿತು. ಇದ್ದ ಹಣವನ್ನೆಲ್ಲ ಒಟ್ಟುಗೂಡಿ, ಸಾಲ ಸೋಲ ಮಾಡಿ ಬೋನಿನಲ್ಲಿದ್ದ ಮಂಗಗಳನ್ನೆಲ್ಲ ಆ ಸಹಾಯಕನಿಂದ ೩೫ ರೂ ನಂತೆ ಖರೀದಿಸಿದರು. ಕೆಲವರಂತೂ ಆತನಿಗೆ ಚಾ-ಕಾಫಿಗೆ ಅಂತ ಒಂದಿಷ್ಟು ‘ಸಮ್‌ಥಿಂಗ್’ ಜಾಸ್ತಿ ದುಡ್ಡು ಕೊಟ್ಟು ಮಂಗಗಳನ್ನು ತಮ್ಮದಾಗಿಸಿದರು.

ಮರುದಿನ ಬೆಳಗ್ಗೆ ಆ ಊರಿನಿಂದ ಸಿಕ್ಕ ದುಡ್ಡು ಗಂಟುಕಟ್ಟಿಕೊಂಡು ಸಹಾಯಕ ಕೂಡಾ ಪರಾರಿಯಾಗುತ್ತಾನೆ. (ಧನಿಯಂತೂ ಮೊದಲೇ ಪರಾರಿ!)

ಈಗ ಊರಿಡೀ ಬರೇ ಮಂಗಗಳೇ ಮಂಗಗಳು. ಕೆಲವು ಬಾಲವಿರುವ. . . , ಕೆಲವು ಬಾಲವಿಲ್ಲದ !!!

ಈ ಶೇರು ರಿಗ್ಗಿಂಗ್ ಕೂಡಾ ಇದೇ ರೀತಿ ನಡೆಯುತ್ತದೆ.

ಭಾರತದಲ್ಲಿ ಶೇರು ರಿಗ್ಗಿಂಗಿನ ಪಿತಾಮಹ ಹರ್ಷದ್ ಮೆಹ್ತಾ. ಯಾರಿಗೆ ಗೊತ್ತಿಲ್ಲ ‘ಬಿಗ್ ಬುಲ್’ ಹರ್ಷದ್ ಮೆಹ್ತಾ? ಆತ ರಚಿಸಿ, ದಿಗ್ದರ್ಶಿಸಿ, ನಟಿಸಿ, ಜಯಭೇರಿ ಬಾರಿಸಿದ ನಾಟಕದ ಕಥಾವಸ್ತು ಸ್ವಲ್ಪ ಈ ರೀತಿ ಇದೆ:

ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕಾನೂನು ರೀತ್ಯಾ ರಿಸರ್ವ್ ಆಗಿ ಇಡಬೇಕಾದ ಮೊತ್ತಕ್ಕಾಗಿ ಬ್ಯಾಂಕು-ಬ್ಯಾಂಕುಗಳ ನಡುವೆ ಸಾಕಷ್ಟು ಕೊಡು-ಕೊಳ್ಳುವ ವ್ಯವಹಾರ ನಡೆದೇ ಇರುತ್ತದೆ. ಈ ವ್ಯವಹಾರವು ಹೆಚ್ಚಾಗಿ ಬ್ರೋಕರ್ ಅಥವ ಮಧ್ಯವರ್ತಿಗಳ ಮೂಲಕ ಕುದುರುತ್ತದೆ. ಹರ್ಷದ್ ಮೆಹ್ತಾ ಒಬ್ಬ ಶೇರು ಬ್ರೋಕರ್ ಹಾಗೂ ಅಂತಹ ಒಬ್ಬ ಮಧ್ಯವರ್ತಿ- ಈ ನಾಟಕದ ಹೀರೋ! ಒಂದು ಬ್ಯಾಂಕಿನಿಂದ ಪಡಕೊಂಡ ಆ ರೀತಿಯ ಸಾಲದ ದುಡ್ಡನ್ನು ಇನ್ನೊಂದು ಬ್ಯಾಂಕಿಗೆ ಹಸ್ತಾಂತರಿಸದೆ, ಸೀದಾ ಕೊಂಡು ಹೋಗಿ ಶೇರು ಬಜಾರಿನಲ್ಲಿ ತನ್ನ ನೆಚ್ಚಿನ ಶೇರುಗಳ ಬೆಲೆಗಳನ್ನು ಮೇಲಕ್ಕೇರಿಸಲು ಬಳಸಿಕೊಳ್ಳುತ್ತಿದ್ದ. ಬ್ಯಾಂಕುಗಳಿಗೆ ನಕಲಿ ಬ್ಯಾಂಕ್ ರಶೀದಿ (ಬ್ಯಾಂಕರ್ಸ್ ರಿಸೀಟ್) ಗಳನ್ನು ಸೃಷ್ಟಿಸಿ ಕೊಟ್ಟು ಸಂಬಂಧಿತ ಅಧಿಕಾರಿಗಳ ಕಿಸೆಗೂ ಒಂದಿಷ್ಟು ಕಾಸು ತುರುಕಿ ಅವರನ್ನೂ ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಈ ರೀತಿ ಮಾರುಕಟ್ಟೆಗೆ ಬ್ಯಾಂಕು ವ್ಯವಸ್ಥೆಯಿಂದ ಸಾವಿರಾರು ಕೋಟಿ ರೂಪಾಯಿಗಳ ಬತ್ತದ ಒರತೆಯನ್ನು ರಚಿಸಿ ಬಿ.ಪಿ.ಎಲ್, ಸ್ಟೆರ್ಲೈಟ್, ವೀಡಿಯೋಕೋನ್ ಮುಂತಾದ ಶೇರುಗಳ ಬೆಲೆಯನ್ನು ಗಗನಕ್ಕೇರಿಸುತ್ತಿದ್ದ. ಕೊಳ್ಳುತ್ತಾ ಮಾರುತ್ತಾ ಸಾವಿರಾರು ಕೋಟಿಗಳ ಸಂಪತ್ತಿನಲ್ಲಿ ಓಲಾಡತೊಡಗಿದ. ಗೋಲ್ಫ್ ಕೋರ್ಸ್, ಈಜುಕೊಳಗಳಿರುವ ಭವ್ಯ ಮನೆ, ತಿರುಗಾಡಲು ಹತ್ತಾರು ಇಂಪೋರ್ಟೆಡ್ ಕಾರು, ಒಡನಾಟಕ್ಕೆ ಭಾರತದ ಗಣ್ಯಾತಿಗಣ್ಯರು. . . . . . ಅಲ್ಲದೆ, ಗಳಿಸುತ್ತಿದ್ದ ಹಣದೊಂದಿಗೆ ಅನಾಯಾಸವಾಗಿ ಸಾಕಷ್ಟು ವೈರಿಗಳನ್ನೂ ಕಟ್ಟಿಕೊಂಡ. ೧೯೯೨ ರ ಒಂದು  ದಿನ ಸಿ.ಬಿ.ಐ ಜಾಲದಲ್ಲಿ ಸಿಕ್ಕಿಬಿದ್ದು ಕೋರ್ಟ್ ಕೇಸುಗಳ ಜಾಲದಲ್ಲಿ ಸಿಕ್ಕಿಹಾಕಿಕೊಂಡು ೨೦೦೨ ರಲ್ಲಿ ಕೊನೆಗೊಂದು ದಿನ ಜುಡಿಶಿಯಲ್ ಕಸ್ಟಡಿಯಲ್ಲೇ ಹೃದಯಾಘಾತಕ್ಕೆ ಈಡಾಗಿ ಕೊನೆಯ ಉಸಿರೆಳೆದ.

ಹರ್ಷದ್ ಸಿದ್ಧಪಡಿಸಿದ ರಂಗಕೃತಿಯ ಹಲವಾರು ಯಶಸ್ವೀ ಪ್ರಯೋಗಗಳು ಹೊರಬಂದಿದ್ದು ಮುಖ್ಯ ಭೂಮಿಕೆಯಲ್ಲಿ ಹಲವಾರು ಪಾತ್ರಧಾರಿಗಳು ಬಣ್ಣ ಹಚ್ಚಿ ರಂಗಭೂಮಿಯನ್ನೇರಿದ್ದಾರೆ. ಅವರಲ್ಲಿ ಮುಖ್ಯ, ಕೇತನ್ ಪಾರೆಕ್ ಅಥವ ಕೆ.ಪಿ ಎಂಬ ಇನ್ನೊಬ್ಬ ಸುಪರ್ ಸ್ಟಾರ್. ಸುಮಾರು ೨೦೦೦ ಇಸವಿಯ ಸಮೀಪ ಕೆ.ಪಿ ಎಂಬ ಹೆಸರು ಮಂತ್ರದಂತೆ ಕೆಲಸ ಮಾಡತೊಡಗಿತ್ತು. ಆತ ಹರ್ಷದ್ ಮೆಹ್ತಾನನ್ನೂ ಮೀರಿಸಿ ಮಾರ್ಕೆಟ್‌ನಲ್ಲಿ ಬೆಳೆಯತೊಡಗಿದ. ತನ್ನದೇ ಆದ ಗೂಳಿಗಳ ಗುಂಪನ್ನು ರಚಿಸಿ ತನ್ನದೇ ಇಷ್ಟದ, ಬಳಿಕ ಕೆ-೧೦ ಎಂದೇ ಕುಖ್ಯಾತವಾದ ಟಿ.ಎಮ್.ಟಿ (ಟೆಲಿಕಾಂ, ಮೀಡಿಯ, ಟೆಕ್ನಾಲೊಜಿ) ಕ್ಷೇತ್ರದ ಹತ್ತು ಕಂಪೆನಿಗಳ ಹಿಂದೆ ಹರ್ಷದ್ ಮಾದರಿಯಲ್ಲಿಯೇ ಬ್ಯಾಂಕುಗಳ ದುಡ್ಡನ್ನು ತಂದು ಸುರಿಯತೊಡಗಿದ. ನಾಗಾಲೋಟದಲ್ಲಿ ರಿಗ್ ಮಾಡಿ ಮೇಲೇರಿಸುತ್ತಿದ್ದ ಹಿಮಾಚಲ್ ಫ಼್ಯೂಚರಿಸ್ಟಿಕ್, ಜ಼ೀ ಟೆಲಿ, ಗ್ಲೋಬಲ್ ಟ್ರಸ್ಟ್ ಬ್ಯಾಂಕ್, ಆಫ್ಟೆಕ್, ಇತ್ಯಾದಿ ಕೆ-೧೦ ಕಂಪೆನಿಗಳ ಶೇರುಗಳಲ್ಲಿ ಸಾವಿರಾರು ಕೋಟಿ ಸಾರ್ವಜನಿಕರ ದುಡ್ಡನ್ನು ದೋಚತೊಡಗಿದ.

ದುಡ್ಡಿನ ನಶೆ ತಲೆಗೆ ಏರಿದಂತೆ ಮನುಷ್ಯ ತನ್ನ ಮೂಲಭೂತ ತತ್ವಗಳನ್ನೇ ಮರೆಯುತ್ತಾನೆ. ಹರ್ಷದ್ ಮೆಹ್ತಾ ತಂತ್ರವನ್ನು ಕಾಪಿ ಹೊಡೆದು ದುಡ್ಡು ಮಾಡಹೊರಟ ಕೇತನ್, ಹರ್ಷದ್ ಮಾಡಿದ ತಪ್ಪನ್ನೂ ಕೂಡಾ ಹಾಗೆಯೇ ನಕಲು ಹೊಡೆದು ಬಿಟ್ಟ. ಮೊದಮೊದಲು ಅತ್ಯಂತ ಸರಳ ಮತ್ತು ಸದ್ದಿಲ್ಲದ ಜೀವನ ನಡೆಸುತ್ತಿದ್ದ ಕೆ.ಪಿ ಕ್ರಮೇಣ ಸಿನೆಮಾದ ಮಾಯಾ ಪ್ರಪಂಚದ ಮೋಡಿಗೆ ಸಿಲುಕಿದ. ಅಮಿತಾಭ್‌ನಂತಹ ಮಹಾನ್ ತಾರೆಯರ ಒಡನಾಟವನ್ನು ಮೆರೆಯತೊಡಗಿದ. ತನ್ನ ಸಾಮ್ರಾಜ್ಯವನ್ನು ಸಿಕ್ಕಲ್ಲೆಲ್ಲಾ ವಿಸ್ತರಿಸುತ್ತಾ ಅದಕ್ಕೆ ಬೇಕಾದಷ್ಟು ಪಬ್ಲಿಸಿಟಿ ಕೂಡಾ ಕೊಡಿಸುತ್ತಿದ್ದ. ತಾನು ಕಾನೂನು ಬಾಹಿರವಾಗಿ ರಾಶಿಹಾಕಿದ ದುಡ್ಡಿನ ಅನಗತ್ಯ ಪ್ರದರ್ಶನ ಮಾಡಿ ಸಾಕಷ್ಟು ವೈರಿಗಳನ್ನು ಮೈಗೆಳೆದುಕೊಂಡ.

ಒಂದೆಡೆಯಲ್ಲಿ ಈ ನಾಟಕ ನಡೆಯುತ್ತಿರಬೇಕಾದರೆ, ಇನ್ನೊಂದೆಡೆ ಶಂಕರ್ ಶರ್ಮ ಎಂಬ ಇನ್ನೊಬ್ಬ ಮಹತ್ವಾಕಾಂಕ್ಷಿ ಶೇರು-ಕಲಾಕಾರ, ಆನಂದ ರಥಿ, ನಿರ್ಮಲ್ ಬಾಂಗ್ ರಂತಹ ಸಮಾನಮನಸ್ಕ ಬ್ರೋಕರ್‌ಗಳನ್ನು ಒಟ್ಟುಹಾಕಿ ಒಂದು ‘ಕರಡಿ ಗ್ರೂಪ್’ (Bear cartel) ಹುಟ್ಟುಹಾಕಿ ಕೆ.ಪಿ ಯನ್ನು ಹೇಗೆ ಮಟ್ಟಹಾಕುವುದು ಎಂದು ಸ್ಕೆಚ್ ಹಾಕತೊಡಗಿದ. ಕೆ.ಪಿ ಯ ತಂತ್ರಕ್ಕೆ ಪ್ರತಿತಂತ್ರವಾಗಿ ಆತನ ಕೆ-೧೦  ಶೇರುಗಳನ್ನು ನೆಲಗಚ್ಚಿಸುವ ಹವಣಿಕೆಯಲ್ಲಿ ರಣತಂತ್ರ ರೂಪಿಸತೊಡಗಿದ. ಒಂದುಕಡೆ, ಸಿ.ಬಿ.ಐ ಬಲೆಯಲ್ಲಿ ಕೆ.ಪಿ ಸಿಕ್ಕಿಬೀಳುತ್ತಲೇ ಆತನ ಕೆ-೧೦ ಶೇರುಗಳು ಕುಸಿಯತೊಡಗಿದವು. ಇದೇ ಸರಿಯಾದ ಸಮಯವೆಂದರಿತ ಕರಡಿ ಕಾರ್ಟೆಲ್ ತಮ್ಮ ಸಾಮರ್ಥ್ಯ ಮೀರಿ ಕೆ.ಪಿ ಯ ಶೇರುಗಳನ್ನು ‘ಶಾರ್ಟ್ ಸೆಲ್’ ಮಾಡತೊಡಗಿದರು. ಶಂಕರ್ ಶರ್ಮ ಮತ್ತು ಆತನ ಪತ್ನಿಯಂತೂ ಎರಡು ಬೇರೆ ಬೇರೆ ಕಂಪೆನಿಯ ಹೆಸರಿನಲ್ಲಿ ಒಂದೇ ಬೆಲೆಗೆ, ಒಂದೇ ಪ್ರಮಾಣದ ಮಾರುವ-ಕೊಳ್ಳುವ ಆರ್ಡರ್‌ಗಳನ್ನು ಕಂಪ್ಯೂಟರ್‌ನಲ್ಲಿ ಏಕಕಾಲದಲ್ಲಿ ತುರುಕಿ (Synchronised trading) ಅವುಗಳ ಬೆಲೆಯಿಳಿಸಿ ಕೇತನ್ ಕೈಯಲ್ಲಿರುವ ಶೇರುಗಳನ್ನು ಮಣ್ಣು ಮುಕ್ಕಿಸಿದರು. ತಮ್ಮ ಶಿಖರದಿಂದ ಬಿದ್ದ ಆ ಶೇರುಗಳು ರೂಪಾಯಿಗೆ ಎರಡು ಕಾಸಿನ ಬೆಲೆಯೂ ಇಲ್ಲದ ಕಾಗದಗಳಾಗಿ ರಪರಪನೆ ಬೀಳತೊಡಗಿದವು. ಲಕ್ಷಾಂತರ ಜನರು ದುಡ್ಡು ಕಳೆದುಕೊಂಡರು, ಸಾವಿರಾರು ಜನ ಮನೆಮಠ ಕಳೆದುಕೊಂಡರು, ನೂರಾರು ಜನ ಆತ್ಮಹತ್ಯೆ ಮಾಡಿಕೊಂಡರು. ಇವೆರಡು ಪಾರ್ಟಿಗಳ ಮಧ್ಯೆ ನಡೆದ ಗಾಂಗ್ ವಾರ್‌ನಲ್ಲಿ ಅಮಾಯಕ ಜನರು ಏಳೇಳು ಜನ್ಮದಲ್ಲೂ ಮೇಲೇರದಂತಹ ಕೂಪದಲ್ಲಿ ಮುಳುಗಿ ನಿರ್ನಾಮವಾದರು.

ಕೇತನ್ ಮೇಲಿನ ಕೇಸುಗಳೂ, ಶಂಕರ್ ಮತ್ತು ಅತನ ಪತ್ನಿಯ ಮೇಲಿನ ಕೇಸುಗಳೂ ಇಂದಿಗೂ ನಡೆಯುತ್ತಲೇ ಇವೆ. ಆದರೂ, ಸಂಬಂಧಿತ ಎಲ್ಲಾ ಆರೋಪಿಗಳೂ ಇಂದಿಗೂ ಮಾರುಕಟ್ಟೆಯಲ್ಲಿ ತಮ್ಮ ಕೈಚಳಕ ತೋರಿಸುತ್ತಲೇ ಇದ್ದಾರೆ. ಹರ್ಷದ್ ಕೃಪಾಪೋಷಿತ ಶೇರು ರಿಗ್ಗಿಂಗ್ ಪ್ರಹಸನವು ಪ್ರತಿದಿನ-ಪ್ರತಿಕ್ಷಣ ಭಾರತೀಯ ಮಾರುಕಟ್ಟೆಯಲ್ಲಿ ಎಗ್ಗಿಲ್ಲದೆ ಅವ್ಯಾಹತವಾಗಿ ನಡೆಯುತ್ತಿರುರುವ ಒಂದು ಭಯಾನಕ ಪೀಡೆ. ಈ ವ್ಯವಹಾರದಲ್ಲಿ ತೊಡಗಿರುವ ನೂರಾರು ಜನರ ಒಂದು ಪಡೆಯೇ ಇದೆ. ಹುಲಿಸವಾರಿ ಮಾಡುವ ಹುಚ್ಚು ಹಚ್ಚಿಕೊಂಡಿರುವ ಎಂಟೆದೆಯ ಬಂಟರು ಇದರ ಅರಿವಿದ್ದೇ ಮಾರುಕಟ್ಟೆಗೆ ಕೈಹಾಕುತ್ತಾರೆ. ಗುರುಗುಂಟಿರಾಯರಂತಹ ಸೇಫ್ಟಿಪ್ರಿಯರು ಈ ನಾಟಕದಿಂದ ದೂರವೇ ಉಳಿಯುತ್ತಾರೆ. ಇದೆಲ್ಲದರ ಅರಿವಿರದೆ ಥಳುಕಿನ ಬಳುಕಿನ ಶೇರು ಮೋಹಿನಿಯನ್ನು ಮೋಹಿಸಹೋದ ಅಮಾಯಕರು ಮಾತ್ರ ಭಸ್ಮವಾಗುತ್ತಾರೆ.

ಈ ಒಟ್ಟು ಕಥಾನಕದಲ್ಲಿ ವಿಪರ್ಯಾಸವಾಗಿ ಎದ್ದುತೋರುವುದೆಂದರೆ ನ್ಯಾಯ ಒದಗಿಸಲು ಸಂಪೂರ್ಣವಾಗಿ ವಿಫಲವಾಗಿರುವ ಸರಕಾರೀ ವ್ಯವಸ್ಥೆ ಮತ್ತು ಹಲವು ಬಾರಿ ತಪ್ಪುಮಾಡಿ ತಲೆ ಸಾವಿರ ಹೋಳಾದರೂ ಛಲ ಬಿಡದ ತ್ರಿವಿಕ್ರಮನಂತೆ ಮಗದೊಂದು ಬಾರಿ ರಿಗ್ಗಿಂಗ್-ಪೀಡಿತ ಶೇರಿನ ಬಾಲ ಹಿಡಿಯುವ ಭಾರತದ ಮುಗ್ದ ಜನತೆ!!

ಇತಿ ಶ್ರೀ ಶೇರು ರಿಗ್ಗಾಯಣ ಚರಿತಂ !

(ಮುಂದಿನ ವಾರ: ಟೋಪಿ ವಿದ್ಯೆಯ ಮೂರನೇ ಮುಖ)

3 ಟಿಪ್ಪಣಿಗಳು (+add yours?)

 1. Muralidhar bhat
  ಮೇ 29, 2010 @ 19:24:10

  nice article sir

  ಉತ್ತರ

 2. Rajesh
  ಮೇ 18, 2010 @ 19:17:43

  Very interesting.. could you please also write about forex trading.

  Thanks in advance, Rajesh

  ಉತ್ತರ

  • jayadev
   ಮೇ 22, 2010 @ 08:32:48

   Thanks. Right now I am concentrating more on issues relating to personal Investments. There is so much to write about. Will surely take up Forex trading sometime lateron

   Thanks for commenting

   Jayadev

   ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: