ಆದರೂ ಅವಳ್ಯಾಕೋ ಉತ್ತರಿಸುತ್ತಲೇ ಇಲ್ಲ..

ಚೆಲುವೆಂಬ ಬಾಗಿಲ ಹಿಂದೆ..

-ಶಾಂತಲಾ ಭಂಡಿ

ನೆನಪು ಕನಸುಗಳ ನಡುವೆ

ಚಿತ್ರ: ಸೃಜನ್

ಬಾಗಿಲು ಬಡಿದ ಸದ್ದಿಗೆ ತೆರೆದ ಬಾಗಿಲನ್ನು ಹಿಂದೆತಳ್ಳಿ ಬಾಗಿಲ ಮುಂದೆ ನಿಂತಿದ್ದೇನೆ.

ಸಂಕೋಚ ಹೊತ್ತು ನಿಂತವಳು ಕೇಳುತ್ತಾಳೆ ‘ನಿನ್ನ ಮಗ ಯಾವ ಶಾಲೆಗೆ ಹೋಗ್ತಾನೆ?’ ಅವಳ ಪ್ರಶ್ನೆಗೆ ಒಂದು ಪದದ ಉತ್ತರವಿತ್ತು ಕಣ್ಣನ್ನೇ ಪ್ರಶ್ನೆಯಾಗಿಸಿಕೊಂಡು ನಿಂತಿದ್ದೇನೆ. ಒಳಕ್ಕೆ ಬಾ ಎನ್ನುವುದಕ್ಕೆ ನನಗವಳ ಪರಿಚಯವಿಲ್ಲ. ಪರಿಚಯವಿರದೆಯೇ ಮನೆಯೆದುರು ಬಂದ ಅತಿಥಿಗಳ ಕರೆದು ಒಳಕೂರಿಸಿ ಆದರಿಸಿ ಆಮೇಲೆ ಪರಿಚಯಿಸಿಕೊಳ್ಳಲು ಇದು ಕದಂಬರಾಳಿದ ಊರಲ್ಲ.

ನಿಂತಿದ್ದೇನೆ ಕಣ್ಣಾಳದಲ್ಲಿ ‘ನೀನ್ಯಾರು?’ ಎಂಬ ಪ್ರಶ್ನೆಯ ಹೊತ್ತು. ‘ನಾನು ಜಾಹ್ನವಿಯ ಅಮ್ಮ’ ಎನ್ನುತ್ತಾಳೆ ತಾನೇ.

ಜಾಹ್ನವಿ! ಜಾಹ್ನವಿ! ಇದು ನನಗೆ ಚಿರಪರಿಚಿತ ಹೆಸರು. ನನ್ನ ಬದುಕಿಗೊಂದು ಅರ್ಥಕೊಟ್ಟವನ ಅಮ್ಮನ ಹೆಸರು. ಆ ಅಮ್ಮ ಅಲ್ಲಿಯೇ ಸೋಫಾದಲ್ಲಿ ‘ಮಿಥುನ’ ಪುಸ್ತಕದಲ್ಲಿನ ಬುಚ್ಚಿಲಕ್ಷ್ಮಿ ಮತ್ತು ಅಪ್ಪಾದಾಸುವಿನ ಕತೆ ಓದುತ್ತಿದ್ದವಳೀಗ ಎದ್ದು ಬಾಗಿಲಿಗೆ ಬಂದಿದ್ದಾಳೆ, ತನ್ನ ಹೆಸರಿನ ಹುಡುಗಿಯ ಅಮ್ಮನನ್ನು ನೋಡಲು.

ಯಾಕೋ ಇದೀಗ ಅಪರಿಚಿತಳು ಆತ್ಮೀಯಳಂತೆ ಕಾಣುತ್ತಿದ್ದಾಳೆ, ನನ್ನತ್ತೆಯ ಹೆಸರನ್ನೇ ಮಗಳಿಗಿಟ್ಟವಳಾಗಿದ್ದಕ್ಕಿರಬೇಕು. ಬಾ ಒಳಗೆ ಕುಳಿತುಕೋ ಎಂದರೆ ಬಾಗಿಲಾಚೆ ನಿಂತೇ ಇದ್ದಾಳೆ. ಮತ್ತೆ ಕೇಳುತ್ತಾಳೆ ‘ಕೆಲದಿನಗಳ ಹಿಂದೆ ಭಾರತದಿಂದ ಬಂದೆವು, ನಿನ್ನ ಮಗ ಹೋಗುವ ಶಾಲೆಗೇ ನನ್ನ ಮಗಳನ್ನೂ ಸೇರಿಸಿದ್ದೇವೆ. ನನಗೆ ಡ್ರೈವಿಂಗ್ ಗೊತ್ತಿಲ್ಲ. ಬೆಳಿಗ್ಗೆ ನನ್ನ ಗಂಡ ನಮ್ಮ ಮಗಳನ್ನು ಶಾಲೆಗೆ ಬಿಟ್ಟುಬರುತ್ತಾನೆ. ದೂರದ ಆಫೀಸು ಅವನಿಗೆ. ಮಧ್ಯಾಹ್ನ ಮಗಳನ್ನು ಶಾಲೆಯಿಂದ ಕರೆತರುವುದು ಕಷ್ಟವಾಗ್ತಿದೆ. ನೀನು ಹೇಗಿದ್ದರೂ ನಿನ್ನ ಮಗನ ಕರೆತರುವುದಕ್ಕೆ ಹೋಗ್ತೀಯಲ್ಲ, ದಿನಾ ಮಧ್ಯಾಹ್ನ ಶಾಲೆಬಿಟ್ಟ ತಕ್ಷಣ ನನ್ನ ಮಗಳನ್ನೂ ಮನೆಗೆ ಕರಕೊಂಡು ಬರ್ತೀಯ ಪ್ಲೀಸ್?’ ಎನ್ನುತ್ತಿದ್ದಾಳೆ.

ನನ್ನ ಒಂದುಪದದ ಮಾತನ್ನೀಗ ಉದ್ದವಾಗಿಸಲೇಬೇಕಿದೆ, ಎರಡು ಪದಗಳ ಪ್ರಶ್ನೆ ಕೇಳಲೇಬೇಕಾದ ಅನಿವಾರ್ಯತೆ ಕೂಡ. ‘ಎಲ್ಲಿದೆ ನಿಮ್ಮನೆ?’

‘ಇಲ್ಲಿಯೇ, ಪಕ್ಕದ್ದು, ನಿಮ್ಮನೆಯಿಂದ ಮೂರನೆಯ ಮನೆ.’ ನನ್ನಿಂದಾಗದು ಅಂತ ಹೇಳುವುದಾದರೂ ಹೇಗೆ? ‘ಸರಿ’ ಎಂದಿದ್ದೇನೆ. ಅವಳು ಥ್ಯಾಂಕ್ಸ್ ಹೇಳುತ್ತ ಮನೆಯೆದುರಿಂದ ಮರೆಯಾಗುತ್ತಿದ್ದಾಳೆ.

ಅಗೋ.. ಅಲ್ಲೇ ತಿರುವಿನಲ್ಲಿನ್ನು ಅವಳು ಮರೆಯಾಗುತ್ತಾಳೆ. ಏನೋ ಜ್ಞಾಪಕ ಬಂದಂತಾಗಿ ‘ಜಾಹ್ನವಿಯ ಕ್ಲಾಸ್ ರೂಮ್ ನಂಬರ್!’ ಎನ್ನುತ್ತೇನೆ . ‘ರೂ ನಂಬರ್ 66’ ಎಂದವಳೀಗ ನಿಜವಾಗಿಯೂ ಮರೆಯಾಗುತ್ತಾಳೆ. ಬಾಗಿಲನ್ನು ಮುಂದಕ್ಕೆ ತಳ್ಳಿ ನಾನೀಗ ಬಾಗಿಲಿಗೆ ಬೆನ್ನು ಹಾಕುತ್ತೇನೆ.

ನಾನು ಒಳಕ್ಕೆ ಬರುವುದನ್ನೇ ಕಾಯುತ್ತಿದ್ದವರಂತೆ ಕುಳಿತ ಅತ್ತೆ ಹೇಳುತ್ತಾರೆ ‘ಇಲ್ಲೂ ಒಬ್ಬಳು ನನ್ನ ಹೆಸರವಳೇ ಇದ್ದಾಳೆಂದರೆ ಖುಷಿಯಾಯಿತು’ ಎನ್ನುತ್ತಾರೆ. ‘ನನಗೂ’ ಎಂಬಂತೆ ಅವರ ಮುಖ ನೋಡುತ್ತೇನೆ. ಕಣ್ಣಿನ ಭಾಷೆ, ಮುಖದ ಭಾವದೊಳಗೇ ಉತ್ತರ ಕಂಡುಕೊಳ್ಳುವುದೀಗ ಅತ್ತೆಗೂ ಅಭ್ಯಾಸವಾಗಿದೆ. ಮುಗುಳ್ನಕ್ಕು ಪುಸ್ತಕದೊಳಗೆ ಕಣ್ಣಿಡುತ್ತಾರೆ.

********

ಮಗನನ್ನು ಕ್ಲಾಸ್ ಬಿಟ್ಟ ತಕ್ಷಣ ಕರೆದುಕೊಂಡು ಇದೀಗ ಕ್ಲಾಸ್ ರೂಮ್ ನಂಬರ್ 66 ಎದುರು ನಿಂತಿದ್ದೇನೆ. ಮಗ ಹೇಳುತ್ತಿದ್ದಾನೆ ‘ಅವಳೇಮ್ಮಾ ಜಾಹ್ನವಿ, ಪಿಂಕ್ ಶರ್ಟ್ ಹಾಕಿದ್ದಾಳಲ್ಲ, ಅವಳೇ’ ಅಂತ. ಪುಟ್ಟ ಹುಡುಗಿಯರು ತೊಡುವ ಬಣ್ಣಗಳಲ್ಲಿ ಪಿಂಕೇ ಹೆಚ್ಚು ಈ ದೇಶದಲ್ಲಿ. ನೀಲಿ ನೀಲಿಯವರೆಲ್ಲ ಪುಟ್ಟ ಹುಡುಗರು. ಅಲ್ಲಿರುವ ಎಂಟು ಹುಡುಗಿಯರಲ್ಲಿ ಪಿಂಕ್ ಶರ್ಟ್ ತೊಟ್ಟವಳನ್ನು ಹುಡುಕಬೇಕೀಗ. ಹೆಚ್ಚಿನವರೆಲ್ಲ ಪಿಂಕ್ ಶರ್ಟಿನವರೇ.

ಅಮ್ಮ ಕನ್ನಡಕ ಹಾಕಿದ್ದಾಳಲ್ಲ ಅವಳು ಜಾಹ್ನವಿ ಎನ್ನುತ್ತಾನೆ ಮಗ.

‘ಹಾಯ್ ಜಾಹ್ನವಿ…’ ಎನ್ನುತ್ತೇನೆ. ‘ಹಾಯ್’ ಎನ್ನುತ್ತಾಳೆ ಚುಟುಕಾಗಿ. ನನಗೊಬ್ಬಳು ಒಳ್ಳೆಯ ಜೊತೆಗಾತಿ ಎನ್ನಿಸುತ್ತದೆ. ಕೇಳಿದ್ದಕ್ಕಷ್ಟೇ ಸ್ಪಷ್ಟ ಚುಟುಕು ಉತ್ತರ ಕೊಡುವ ಮಿತಭಾಷೆಯ ಅವಳು ಇಷ್ಟವಾಗುತ್ತಾಳೆ. ಮಕ್ಕಳಿಬ್ಬರನ್ನೂ ಹಿಂದಿನ ಸೀಟಿಗೆ ಕೂರಿಸಿ ಮುಂದಕ್ಕೆ ಬಂದು ಕುಳಿತು ಸೀಟ್ ಬೆಲ್ಟ್ ಹಾಕಿ ಕಾರ್ ಸ್ಟಾರ್ಟ್ ಮಾಡುತ್ತೇನೆ. ಮೊದಲ ದಿನ ಅವಳು ನನ್ನನ್ನು ನೋಡುತ್ತಿದ್ದಾಳೆ, ಇನ್ನೊಂದೆರಡು ಮಾತನಾಡಿದರೆ ನಾಳೆಯಿಂದ ನನ್ನಷ್ಟಕ್ಕೆ ಡ್ರೈವ್ ಮಾಡಿಕೊಂಡಿದ್ದರೂ ಆದೀತು, ಇವತ್ತು ಅವಳನ್ನು ಇನ್ನೊಂದೆರಡು ವಾಕ್ಯ ಮಾತನಾಡಿಸುವ ಅನಿವಾರ್ಯತೆಯಿದೆ ಅನ್ನಿಸುತ್ತದೆ.

ಡ್ರೈವ್ ಮಾಡುತ್ತ ಹಿಂದಿರುಗಲಾರದೇ ಮುಂದೆ ನೋಡುತ್ತಲೆ ಹಿಂದಿನ ಸೀಟಲ್ಲಿದ್ದವಳನ್ನು ಮಾತನಾಡಿಸುತ್ತೇನೆ. ‘ಹಾಯ್ ಜಾಹ್ನವಿ….ನಿನ್ನ ಕ್ಲಾಸ್ ಟೀಚರ್ ಯಾರು?’ ಎನ್ನುತ್ತೇನೆ. ಸರಿಯಾಗಿ ನನ್ನ ಹಿಂದೆ ಕುಳಿತ ಆ ಪುಟ್ಟ ಹುಡುಗಿ ಮಾತನಾಡುವುದಿಲ್ಲ. ಮತ್ತೆ ಕೇಳುತ್ತೇನೆ.

‘ಹಾಯ್ ಜಾಹ್ನವಿ….ನಿನ್ನ ಕ್ಲಾಸ್ ಟೀಚರ್ ಯಾರು?’

ಅವಳು ಉತ್ತರಿಸುತ್ತಿಲ್ಲ.

ಮತ್ತೆ ಕೇಳುತ್ತೇನೆ ನಿಧಾನಕ್ಕೆ ‘ಹಾಯ್ ಜಾಹ್ನವಿ….ನಿನ್ನ ಕ್ಲಾಸ್ ಟೀಚರ್ ಯಾರು?’

ಸುಮಾರು ನಾಲ್ಕೈದು ಬಾರಿ ಕೇಳುತ್ತೇನೆ. ಆದರೂ ಅವಳ್ಯಾಕೋ ಉತ್ತರಿಸುತ್ತಲೇ ಇಲ್ಲ.

ಸ್ವಲ್ಪವೇ ಕತ್ತನ್ನು ಹಿಂದಕ್ಕೆ ತಿರುಗಿಸಿ ನೋಡಿದರೆ ಮಗನ ಮುಖ ಕಾಣಿಸುತ್ತದೆ. ಸರಿಯಾಗಿ ನನ್ನ ಹಿಂದಕ್ಕೆ ಕುಳಿತವಳ ಮುಖ ನನಗೆ ಕಾಣಿಸುತ್ತಿಲ್ಲ. ಮಗನನ್ನು ಕೇಳುತ್ತೇನೆ ‘ಪುಟ್ಟಾ..ಜಾಹ್ನವಿ ಏನು ಮಾಡ್ತಿದ್ದಾಳೆ?’ ಅಂತ. ‘ಅಮ್ಮ ಅವಳು ನನ್ನ ಮುಖ ನೋಡುತ್ತ ನಗುತ್ತ ಸುಮ್ಮನೆ ಇದ್ದಾಳೆ. ಅವಳಿಗೆ ನೀನು ಹೇಳಿದ್ದು ಕೇಳಿಸುತ್ತಿಲ್ಲಾಮ್ಮ, ಅವಳಿಗೆ ಕಿವಿ ಕೇಳಿಸುವುದಿಲ್ಲ. ಅವಳೊಡನೆ ಮಾತಾಡುವಾಗ ಅವಳೆದುರು ನಿಂತು ಮಾತನಾಡುತ್ತೀಯ ಪ್ಲೀಸ್, ಆಗ ಅವಳಿಗೆ ನೀನು ಹೇಳಿದ್ದು ಅರ್ಥವಾಗುತ್ತದೆ ಅಂತ ಅವರಮ್ಮ ನಿನ್ನೆ ನನಗೆ ಹೇಳಿದ್ದಾರೆ, ನಾನು ಹಾಗೆಯೇ ಮಾಡುತ್ತಿದ್ದೇನೆ, ನೀನೂ ಹಾಗೆಯೇ ಮಾಡ್ತೀಯಾಮ್ಮಾ?’ ಅಂತ ಮಗ ಹೇಳಿದಾಗ ಒಮ್ಮೆಲೇ ಕಣ್ಣೊಳಗೆ ಒರತೆಯೆದ್ದು ಬಂದಂತೆ ಗಂಟಲಾಳದಿಂದ. ಎದುರಿಗೆ ಗ್ರೀನ್ ಸಿಗ್ನಲ್ , ಕಣ್ಣೊಳಗೆ ಮುನ್ನಡೆಸಲಾಗದಷ್ಟು ತೇವಮುಸುಕು.

ಮನೆ ತಲುಪಿದಾಗ ಅವರಮ್ಮ ಅಲ್ಲೇ ಬಾಗಿಲಲ್ಲಿ ನಿಂತಿದ್ದಾರೆ. ಈ ತಾಯಿಯ ಎದುರು ಯಾವತ್ತೂ ಯಾರ ಕಿವಿಯ ಬಗ್ಗೆಯೂ ಮಾತನಾಡಲೇಬಾರದೂಂತ ನಾನು ನಿಶ್ಚಯಿಸಿದ ಹಾಗಿದೆ. ‘ನಿನ್ನ ಮಗಳಿನ ಕಣ್ಣು ತುಂಬ ಸುಂದರವಾಗಿದೆ, ಆ ರೆಪ್ಪೆಗಳನ್ನು ನೋಡು, ಊದ್ದಕ್ಕೆ’ ಅಂತ ಮಾತು ಮುಗಿಸಿದೆ. ‘ತುಂಬ ದೂರ ನಿಂತಿದ್ದೀಯ, ಇನ್ನೂ ಹತ್ತಿರಕ್ಕೆ ಬಂದು ಹೇಳು, ನೀನು ಮಾತನಾಡುವಾಗ ನಿನ್ನ ತುಟಿಗಳ ಚಲನೆ ನನ್ನ ಮಗಳಿಗೂ ಕಾಣಿಸಿದರೆ ಅವಳೇ ನಿನಗೆ ಥ್ಯಾಂಕ್ಸ್ ಹೇಳುತ್ತಾಳೆ’ ಎನ್ನುತ್ತಾಳೆ ಜಾಹ್ನವಿಯ ಅಮ್ಮ.

ಹಾಗಾದರೆ ಇನ್ನು ಮುಂದೆ ನಾನು ಕಣ್ಣುಗಳ ಬಗ್ಗೆಯೂ ಮಾತನಾಡುವ ಹಾಗಿಲ್ಲ ಆ ತಾಯಿಯ ಮುಂದೆ. ನಿರ್ಧರಿಸಿಬಿಟ್ಟಿದ್ದೇನೆ

4 ಟಿಪ್ಪಣಿಗಳು (+add yours?)

 1. usharani
  ಮೇ 17, 2010 @ 11:12:46

  kathe tumba cannagide. nimma kalpanege hatsup.

  ಉತ್ತರ

 2. ಮುರಳೀಧರ ಸಜ್ಜನ.
  ಮೇ 16, 2010 @ 05:46:36

  ಕಥೆsssssss………….. superb……… ಆಗಿದೆ.

  ಉತ್ತರ

 3. ಶಾಂತಲಾ
  ಮೇ 16, 2010 @ 01:25:34

  ಥ್ಯಾಂಕ್ಸ್ ಅವಧಿ.

  ಉತ್ತರ

 4. my pen from shrishaila
  ಮೇ 15, 2010 @ 23:06:16

  ಶಾಂತಲಾ ಭಂಡಿಯವರೆ,
  ನಿಮ್ಮ ಈ ಕಥೆ ತುಂಬಾ ಚೆನ್ನಾಗಿತ್ತು. ನೀವು ಇದರಲ್ಲಿ ಯಾವ ಊರನ್ನು ಚಿತ್ರಿಸಿದ್ದು?
  ಶೈಲಜ

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: