ಚೆಲುವೆಂಬ ಬಾಗಿಲ ಹಿಂದೆ..
-ಶಾಂತಲಾ ಭಂಡಿ
ಬಾಗಿಲು ಬಡಿದ ಸದ್ದಿಗೆ ತೆರೆದ ಬಾಗಿಲನ್ನು ಹಿಂದೆತಳ್ಳಿ ಬಾಗಿಲ ಮುಂದೆ ನಿಂತಿದ್ದೇನೆ.
ಸಂಕೋಚ ಹೊತ್ತು ನಿಂತವಳು ಕೇಳುತ್ತಾಳೆ ‘ನಿನ್ನ ಮಗ ಯಾವ ಶಾಲೆಗೆ ಹೋಗ್ತಾನೆ?’ ಅವಳ ಪ್ರಶ್ನೆಗೆ ಒಂದು ಪದದ ಉತ್ತರವಿತ್ತು ಕಣ್ಣನ್ನೇ ಪ್ರಶ್ನೆಯಾಗಿಸಿಕೊಂಡು ನಿಂತಿದ್ದೇನೆ. ಒಳಕ್ಕೆ ಬಾ ಎನ್ನುವುದಕ್ಕೆ ನನಗವಳ ಪರಿಚಯವಿಲ್ಲ. ಪರಿಚಯವಿರದೆಯೇ ಮನೆಯೆದುರು ಬಂದ ಅತಿಥಿಗಳ ಕರೆದು ಒಳಕೂರಿಸಿ ಆದರಿಸಿ ಆಮೇಲೆ ಪರಿಚಯಿಸಿಕೊಳ್ಳಲು ಇದು ಕದಂಬರಾಳಿದ ಊರಲ್ಲ.
ನಿಂತಿದ್ದೇನೆ ಕಣ್ಣಾಳದಲ್ಲಿ ‘ನೀನ್ಯಾರು?’ ಎಂಬ ಪ್ರಶ್ನೆಯ ಹೊತ್ತು. ‘ನಾನು ಜಾಹ್ನವಿಯ ಅಮ್ಮ’ ಎನ್ನುತ್ತಾಳೆ ತಾನೇ.
ಜಾಹ್ನವಿ! ಜಾಹ್ನವಿ! ಇದು ನನಗೆ ಚಿರಪರಿಚಿತ ಹೆಸರು. ನನ್ನ ಬದುಕಿಗೊಂದು ಅರ್ಥಕೊಟ್ಟವನ ಅಮ್ಮನ ಹೆಸರು. ಆ ಅಮ್ಮ ಅಲ್ಲಿಯೇ ಸೋಫಾದಲ್ಲಿ ‘ಮಿಥುನ’ ಪುಸ್ತಕದಲ್ಲಿನ ಬುಚ್ಚಿಲಕ್ಷ್ಮಿ ಮತ್ತು ಅಪ್ಪಾದಾಸುವಿನ ಕತೆ ಓದುತ್ತಿದ್ದವಳೀಗ ಎದ್ದು ಬಾಗಿಲಿಗೆ ಬಂದಿದ್ದಾಳೆ, ತನ್ನ ಹೆಸರಿನ ಹುಡುಗಿಯ ಅಮ್ಮನನ್ನು ನೋಡಲು.
ಯಾಕೋ ಇದೀಗ ಅಪರಿಚಿತಳು ಆತ್ಮೀಯಳಂತೆ ಕಾಣುತ್ತಿದ್ದಾಳೆ, ನನ್ನತ್ತೆಯ ಹೆಸರನ್ನೇ ಮಗಳಿಗಿಟ್ಟವಳಾಗಿದ್ದಕ್ಕಿರಬೇಕು. ಬಾ ಒಳಗೆ ಕುಳಿತುಕೋ ಎಂದರೆ ಬಾಗಿಲಾಚೆ ನಿಂತೇ ಇದ್ದಾಳೆ. ಮತ್ತೆ ಕೇಳುತ್ತಾಳೆ ‘ಕೆಲದಿನಗಳ ಹಿಂದೆ ಭಾರತದಿಂದ ಬಂದೆವು, ನಿನ್ನ ಮಗ ಹೋಗುವ ಶಾಲೆಗೇ ನನ್ನ ಮಗಳನ್ನೂ ಸೇರಿಸಿದ್ದೇವೆ. ನನಗೆ ಡ್ರೈವಿಂಗ್ ಗೊತ್ತಿಲ್ಲ. ಬೆಳಿಗ್ಗೆ ನನ್ನ ಗಂಡ ನಮ್ಮ ಮಗಳನ್ನು ಶಾಲೆಗೆ ಬಿಟ್ಟುಬರುತ್ತಾನೆ. ದೂರದ ಆಫೀಸು ಅವನಿಗೆ. ಮಧ್ಯಾಹ್ನ ಮಗಳನ್ನು ಶಾಲೆಯಿಂದ ಕರೆತರುವುದು ಕಷ್ಟವಾಗ್ತಿದೆ. ನೀನು ಹೇಗಿದ್ದರೂ ನಿನ್ನ ಮಗನ ಕರೆತರುವುದಕ್ಕೆ ಹೋಗ್ತೀಯಲ್ಲ, ದಿನಾ ಮಧ್ಯಾಹ್ನ ಶಾಲೆಬಿಟ್ಟ ತಕ್ಷಣ ನನ್ನ ಮಗಳನ್ನೂ ಮನೆಗೆ ಕರಕೊಂಡು ಬರ್ತೀಯ ಪ್ಲೀಸ್?’ ಎನ್ನುತ್ತಿದ್ದಾಳೆ.
ನನ್ನ ಒಂದುಪದದ ಮಾತನ್ನೀಗ ಉದ್ದವಾಗಿಸಲೇಬೇಕಿದೆ, ಎರಡು ಪದಗಳ ಪ್ರಶ್ನೆ ಕೇಳಲೇಬೇಕಾದ ಅನಿವಾರ್ಯತೆ ಕೂಡ. ‘ಎಲ್ಲಿದೆ ನಿಮ್ಮನೆ?’
‘ಇಲ್ಲಿಯೇ, ಪಕ್ಕದ್ದು, ನಿಮ್ಮನೆಯಿಂದ ಮೂರನೆಯ ಮನೆ.’ ನನ್ನಿಂದಾಗದು ಅಂತ ಹೇಳುವುದಾದರೂ ಹೇಗೆ? ‘ಸರಿ’ ಎಂದಿದ್ದೇನೆ. ಅವಳು ಥ್ಯಾಂಕ್ಸ್ ಹೇಳುತ್ತ ಮನೆಯೆದುರಿಂದ ಮರೆಯಾಗುತ್ತಿದ್ದಾಳೆ.
ಅಗೋ.. ಅಲ್ಲೇ ತಿರುವಿನಲ್ಲಿನ್ನು ಅವಳು ಮರೆಯಾಗುತ್ತಾಳೆ. ಏನೋ ಜ್ಞಾಪಕ ಬಂದಂತಾಗಿ ‘ಜಾಹ್ನವಿಯ ಕ್ಲಾಸ್ ರೂಮ್ ನಂಬರ್!’ ಎನ್ನುತ್ತೇನೆ . ‘ರೂ ನಂಬರ್ 66’ ಎಂದವಳೀಗ ನಿಜವಾಗಿಯೂ ಮರೆಯಾಗುತ್ತಾಳೆ. ಬಾಗಿಲನ್ನು ಮುಂದಕ್ಕೆ ತಳ್ಳಿ ನಾನೀಗ ಬಾಗಿಲಿಗೆ ಬೆನ್ನು ಹಾಕುತ್ತೇನೆ.
ನಾನು ಒಳಕ್ಕೆ ಬರುವುದನ್ನೇ ಕಾಯುತ್ತಿದ್ದವರಂತೆ ಕುಳಿತ ಅತ್ತೆ ಹೇಳುತ್ತಾರೆ ‘ಇಲ್ಲೂ ಒಬ್ಬಳು ನನ್ನ ಹೆಸರವಳೇ ಇದ್ದಾಳೆಂದರೆ ಖುಷಿಯಾಯಿತು’ ಎನ್ನುತ್ತಾರೆ. ‘ನನಗೂ’ ಎಂಬಂತೆ ಅವರ ಮುಖ ನೋಡುತ್ತೇನೆ. ಕಣ್ಣಿನ ಭಾಷೆ, ಮುಖದ ಭಾವದೊಳಗೇ ಉತ್ತರ ಕಂಡುಕೊಳ್ಳುವುದೀಗ ಅತ್ತೆಗೂ ಅಭ್ಯಾಸವಾಗಿದೆ. ಮುಗುಳ್ನಕ್ಕು ಪುಸ್ತಕದೊಳಗೆ ಕಣ್ಣಿಡುತ್ತಾರೆ.
********
ಮಗನನ್ನು ಕ್ಲಾಸ್ ಬಿಟ್ಟ ತಕ್ಷಣ ಕರೆದುಕೊಂಡು ಇದೀಗ ಕ್ಲಾಸ್ ರೂಮ್ ನಂಬರ್ 66 ಎದುರು ನಿಂತಿದ್ದೇನೆ. ಮಗ ಹೇಳುತ್ತಿದ್ದಾನೆ ‘ಅವಳೇಮ್ಮಾ ಜಾಹ್ನವಿ, ಪಿಂಕ್ ಶರ್ಟ್ ಹಾಕಿದ್ದಾಳಲ್ಲ, ಅವಳೇ’ ಅಂತ. ಪುಟ್ಟ ಹುಡುಗಿಯರು ತೊಡುವ ಬಣ್ಣಗಳಲ್ಲಿ ಪಿಂಕೇ ಹೆಚ್ಚು ಈ ದೇಶದಲ್ಲಿ. ನೀಲಿ ನೀಲಿಯವರೆಲ್ಲ ಪುಟ್ಟ ಹುಡುಗರು. ಅಲ್ಲಿರುವ ಎಂಟು ಹುಡುಗಿಯರಲ್ಲಿ ಪಿಂಕ್ ಶರ್ಟ್ ತೊಟ್ಟವಳನ್ನು ಹುಡುಕಬೇಕೀಗ. ಹೆಚ್ಚಿನವರೆಲ್ಲ ಪಿಂಕ್ ಶರ್ಟಿನವರೇ.
ಇತ್ತೀಚಿನ ಟಿಪ್ಪಣಿಗಳು