ನಾಟಕ ಚೈತ್ರ

ನಿಜವಾಗಲೂ ಖುಷಿಯಾಗುತ್ತಿದೆ..

ಸಾಂಗತ್ಯದಿಂದ ಒಂದು ಪತ್ರ-

ನಿಜವಾಗಲೂ ಖುಷಿಯಾಗುತ್ತಿದೆ.

ಪುಟ್ಟದೊಂದು ತೊರೆ ಹೀಗೇ ಹರಿದೀತೆಂದು ಖಂಡಿತಾ ಎಣಿಸಿಯೂ ಇರಲಿಲ್ಲ. ಇನ್ನೂ ಹರಿದು ಸೇರುವ, ಸಂಭ್ರಮಿಸುವ ಹಾದಿ ಬಹಳ ದೊಡ್ಡದಿದೆ, ದೂರವಿದೆ ಎಂಬ ವಾಸ್ತವ ನೆನಪಿದ್ದೇ ಹೇಳುವುದಾದರೆ, ಬಹಳ ಖುಷಿಯಾಗುತ್ತಿದೆ.

ಸಾಂಗತ್ಯ ಬಳಗ ಒಂದು ಮ್ಯಾಗಜೈನ್ ಆರಂಭಿಸುವ ಪ್ರಸ್ತಾಪವನ್ನು ತಮ್ಮ ಸದಸ್ಯರೊಳಗೆ ಚರ್ಚೆಗೆ ಬಂದಾಗ, ಮಾಡಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಅದನ್ನೇ ಆಪ್ತ ವಲಯದಲ್ಲಿ ತೆರೆದಿಟ್ಟಾಗ ಕೆಲವರು ಆಗಬಹುದು ಎಂದರೆ, ಇನ್ನು ಕೆಲವರು ಅಗತ್ಯವಿದೆ ಎಂದಿದ್ದರು. ಮತ್ತೂ ಕೆಲವರು, ಆನ್ ಲೈನ್ ಕಾಲದಲ್ಲಿ ಮ್ಯಾಗಜೈನ್ ಎಲ್ಲಾ ಯಾಕೆ ತಲೆ ಕೆಡಿಸಿಕೊಳ್ತೀರಿ ಎಂದು ಹೇಳಿದ್ದರು. ಆದರೂ, ಯಾಕೋ ಬಳಗಕ್ಕೆ ಮ್ಯಾಗಜೈನ್ ಮಾಡಲೇಬೇಕೆಂಬ ತುಡಿತ ಅಂಥದೊಂದು ಸಾಧ್ಯತೆಯನ್ನು ನಿಜವಾಗಿಸಿತು.

ಮೊದಲನೇ ಸಂಚಿಕೆ ಏಪ್ರಿಲ್ 24 ರಂದು ಕನ್ನಡದ ಮೇರುನಟ ಡಾ. ರಾಜ್ ಕುಮಾರ್ ಜನ್ಮದಿನದಂದೇ ಬಿಡುಗಡೆಯಾಯಿತು. ಎಲ್ಲೆಡೆಯಿಂದಲೂ ಸಂಚಿಕೆಗೆ ಬರುತ್ತಿರುವ ಅಭಿಪ್ರಾಯ ನಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಬಹುತೇಕ ಮಂದಿ ಸಿನಿಮಾ ಕ್ಷೇತ್ರಕ್ಕೆಂದು ಇಂಥದೊಂದು ಮ್ಯಾಗಜೈನ್ ಇರಲಿಲ್ಲ, ಬೇಕಿತ್ತು. ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ದಾರೆ. ವಿಜಯ ಕರ್ನಾಟಕ, ದಿ ಹಿಂದೂ ಪತ್ರಿಕೆಗಳು ನಮ್ಮ ಹೊಸ ಸಾಹಸವನ್ನು ಆಸಕ್ತರಿಗೆ ತಮ್ಮ ಲೇಖನದ ಮೂಲಕ ಪರಿಚಯಿಸಿವೆ. ಮೇಫ್ಲವರ್ ಮೀಡಿಯಾ ಹೌಸ್ ನ ಅವಧಿ ಬ್ಲಾಗ್ ಸಹ ನಮ್ಮ ಪ್ರಯತ್ನಕ್ಕೆ ಶುಭ ಹಾರೈಸಿದೆ. ಚಿತ್ರರಂಗದ ಹಲವು ಮಹನೀಯರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಮೊದಲ ಸಂಚಿಕೆ ಕುರಿತು ವ್ಯಕ್ತವಾಗುತ್ತಿರುವ ಅಭಿಪ್ರಾಯ ಎರಡನೇ ಸಂಚಿಕೆಯ ಸಿದ್ಧತೆಯನ್ನು ಮತ್ತಷ್ಟು ಗಂಭೀರವಾಗಿಸಿದೆ. ನಿರೀಕ್ಷೆಗಳನ್ನು ಹೆಚ್ಚುಗೊಳಿಸಿದೆ. ಹೊಸ ಸಂಭ್ರಮದೊಂದಿಗೆ ಮತ್ತೆ ಸಜ್ಜಾಗಿದ್ದೇವೆ.

ಮೊದಲ ಸಂಚಿಕೆ ಪ್ರತಿಗಳಿಗಾಗಿ ಸಂಪರ್ಕಿಸಿ
ನವ ಕರ್ನಾಟಕ ಪ್ರಕಾಶನದ ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ ಶಾಖೆಗಳು, ಅಂಕಿತ ಪ್ರಕಾಶನ, ಗಾಂಧಿ ಬಜಾರ್, ಸನ್ಮತಿ ಬುಕ್ ಹೌಸ್, ಮಲ್ಲೇಶ್ವರಂ, ಬೆಂಗಳೂರು
ಮೈಸೂರು ಫಿಲಂ ಸೊಸೈಟಿ, ಮೈಸೂರು, ಅತ್ರಿ ಬುಕ್ ಸೆಂಟರ್, ಮಂಗಳೂರು, ಸಾಹಿತ್ಯ ಭಂಡಾರ, ಹುಬ್ಬಳ್ಳಿ

ಉಳಿದಂತೆ ಚಂದಾದಾರರಾಗುವವರು, ಸಂಚಿಕೆ ಬೇಕೆನ್ನಿಸಿದವರು

ಬೆಂಗಳೂರು-ವಾದಿರಾಜ್ 94805 82027, ಮಹೇಶ್ 94807 97112, ಅಕ್ಷಯ್ ಹೆಗಡೆ 94181 09206, ಪ್ರವೀಣ್ ಬಣಗಿ 99868 07953, ಮಂಗಳೂರು-ಸಿಬಂತಿ ಪದ್ಮನಾಭ 94495 25854, ಮೈಸೂರು-ಮಿತ್ರವಿಂದಾ 99804 57812, ಮೈಸೂರುಫಿಲಂ ಸೊಸೈಟಿ ಮನು 94480 92049, ಶಿವಮೊಗ್ಗ-ತೀರ್ಥಹಳ್ಳಿ-ಮಧುಕರ್ ಮಯ್ಯ 94481 54298, ಚಿಕ್ಕಮಗಳೂರು-ಘನಶ್ಯಾಮ 94484 70154, ಕೊಪ್ಪ-ಸುಧೀರ್ ಮುರೊಳ್ಳಿ 94482 45172, ಉಡುಪಿ-ಕುಂದಾಪುರ- ಗುರುರಾಜ್‌ಉಪ್ಪುಂದ 97431 70819, ಪುತ್ತೂರು-ರೋಹಿಣಾಕ್ಷ ಶಿರ್ಲಾಲು 94496 63744, ಮೂಡುಬಿದಿರೆ- ವಿಜಯ್ ಜೋಶಿ 98459 74719, ಬಾಗಲಕೋಟೆ-ರವಿರಾಜ್ ಗಲಗಲಿ 93433 81818, ದಾವಣಗೆರೆ-ರವೀಂದ್ರ ಅರಳಗುಪ್ಪಿ 94815 84447, ಬಳ್ಳಾರಿ, ಹೊಸಪೇಟೆ- ಸೃಜನ್ 94816 63379, ಹುಬ್ಬಳ್ಳಿ-ಧಾರವಾಡ-ರಾಜೀವ್ ಹೆಗಡೆ 91648 59664, ಹರ್ಷವರ್ಧನ್ ಶೀಲವಂತ-98865 21664

ಸಾಂಗತ್ಯ (ರಿ) ಹೆಸರಿಗೆ ಚೆಕ್ ಅಥವಾ ಡಿಡಿ ಮೂಲಕ ಚಂದಾ ಹಣವನ್ನು ನಮ್ಮ ಕೆಳಗಿನ ವಿಳಾಸಕ್ಕೆ ಕಳುಹಿಸಬಹುದು. ಬೆಂಗಳೂರಿನಿಂದ ಹೊರಗಿರುವವರು ಚಂದಾದೊಂದಿಗೆ ೪೦ ರೂ. ಗಳನ್ನು ಸೇರಿಸಿ ಇಲ್ಲಿಗೆ ಕಳುಹಿಸಬೇಕು.

ವಿಳಾಸ : ನಂ.4, 2 ನೇ ಕ್ರಾಸ್, ಮಾರ್ಕಂ ರಸ್ತೆ, ಅಶೋಕನಗರ, ಬೆಂಗಳೂರು -560025.

ಮಾಹಿತಿಗೆ saangatyamagazine@gmail.com

ಎಚ್ಹೆಸ್ವಿ ಅನಾತ್ಮ ಕಥನ: ಆ ಹುಡುಗಿ

ಅಳಿಯಲಾರದ ನೆನಹು-೯

ಎಚ್.ಎಸ್.ವೆಂಕಟೇಶ ಮೂರ್ತಿ

ನನ್ನ ಮೂವತ್ತು ವರ್ಷಗಳ ಅಧ್ಯಾಪನವೃತ್ತಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಅರಳುಗಣ್ಣಲ್ಲಿ ಕುಳಿತು ನನ್ನ ಪಾಠಪ್ರವಚನ ಕೇಳಿದ್ದು ನೆನೆಸಿಕೊಂಡಾಗ ಎಳಸು ಮುಖಗಳ ಒಂದು ಪೆರೇಡೇ ಕಣ್ಣಮುಂದೆ ಹಾದುಹೋಗುತ್ತದೆ. ಅಂಥ ಮುಖಗಳಲ್ಲಿ ಒಂದು ಮುಖವನ್ನ ಮಾತ್ರ ನನಗೆ ಮರೆಯಲಿಕ್ಕೆ ಸಾಧ್ಯವೇ ಇಲ್ಲ. ಕಾರಣ ಅದು ನನ್ನನ್ನು ತುಂಬ ಪೇಚು ಮತ್ತು ಇಕ್ಕಟ್ಟಲ್ಲಿ ಸಿಕ್ಕಿಸಿದ ಮುಖ. ೧೯೭೭-೭೮ ಇರಬೇಕು. ಆ ದಿನಗಳಲ್ಲಿ ನಾನು ಸೂಟ್ ಹಾಕಿಕೊಂಡು ಕಾಲೇಜಿಗೆ ಹೋಗುತಾ ಇದ್ದೆ. ಸೇಂಟ್ ಜೋಸೆಪ್ಫಲ್ಲಿ ಸೂಟ್ ಇಲ್ಲದೆ ನಡೆಯೋದಿಲ್ಲ ಎಂದು ನಮ್ಮ ಸೀನಿಯರ್ಸ್ ಹೇಳಿದ ಹಿತವಚನದ ಪರಿಣಾಮ! ನಮ್ಮ ಎಲ್ಲ ಸೀನಿಯರ್ಸೂ ಆಗ ಸೂಟಲ್ಲೇ ಬರುತಾ ಇದ್ದರು. ನಾನು ಹೇಳೀ ಕೇಳಿ ಹಳ್ಳಿಯಿಂದ ಬಂದವ.

ಸೂಟ್ ಎಂಬೋದನ್ನು ನಾವು ಜೀವಮಾನದಲ್ಲಿ ಒಮ್ಮೆ ಮಾತ್ರ ಹೊಲಿಸೋದು. ಅದೂ ನಾವು ಹೊಲಿಸೋದು ಅಲ್ಲ. ಹೆಣ್ಣುಕೊಟ್ಟ ಮಾವ ಹೊಲಿಸೋದು. ನಮ್ಮ ಮಾವ ಮದುವೆಯಲ್ಲಿ ನನಗೂ ಒಂದು ಸೂಟ್ ಕೊಟ್ಟಿದ್ದರು. ಚಿತ್ರದುರ್ಗದಲ್ಲಿ ಹೊಲಿಸಿದ್ದು ಅದು. ಬೆಂಗಳೂರಿನ ಫ್ಯಾಷನ್ನಿಗೆ ಇನ್ನೂರು ಕಿಲೋಮೀಟರ್ ಹಿಂದೆ ಇದ್ದದ್ದು. ಅದನ್ನು ನಾನು ಹಾಕಿದ್ದು ಮದುವೆ ಸಂಜೆ ಮಾತ್ರ. ಆಮೇಲೆ ಅದು ಕೈಕಾಲು ಮಡಿಸಿಕೊಂಡು ಆರಾಮಾಗಿ ಟ್ರಂಕಲ್ಲಿ ನಿದ್ದೆಹೊಡೆಯುತ್ತಾ ಬಿದ್ದಿತ್ತು. ಬಹಳ ಕಾಲ ಹೀಗೆ ಸೆರೆವಾಸದಲ್ಲಿದ್ದ ಸದರೀ ಸೂಟ್ ನಾನು ಬೆಂಗಳೂರಿಗೆ ಬಂದಮೇಲೆ ಮತ್ತೆ ಬಿಸಿಲ ಮುಖ ನೋಡಿತು! ಅಲ್ಲಲ್ಲಿ ಬೂಸ್ಟು ಹಿಡಿದಿದ್ದ ಸೂಟನ್ನು ಡ್ರೈವಾಷಿಗೆ ಕೊಟ್ಟು ಅದನ್ನು ಧರಿಸಿ ಕಾಲೇಜಿಗೆ ಹೊರಟಾಗ ನನ್ನ ಹೆಂಡತಿ ಕಿಸಕ್ಕಂತ ನಕ್ಕಿದ್ದು ಯಾಕೆ ಅನ್ನೋದು ಇವತ್ತಿನವರೆಗೂ ನನಗೆ ಗೊತ್ತಾಗಿಲ್ಲ.

ಮೈಮೇಲೆ ಭರ್ಜರಿ ಸೂಟು. ನೆಕ್ಟೈ ಎಂಬ ಕೊರಳ ಲಂಗೋಟಿ ಮುಂದೆ ಇಳಿಬಿಟ್ಟುಕೊಂಡು ನನ್ನ ಮೊಪೆಡ್ ಏರಿ ಕಾಲೇಜ್ ಕ್ಯಾಂಪಸ್ಸಿಗೆ ಬಂದಾಗ ಸ್ಟಾಫ್ರೂಮಲ್ಲಿ ಎಲ್ಲ ಹುಳ್ಳಗೆ ನಗುವವರೇ! ಯಾಕ್ಸಾರ್ ಚೆನ್ನಾಗಿಲ್ವಾ ಅಂದೆ ಜೀಕೇಜಿಗೆ. ಚೆನ್ನಾಗಿಲ್ಲ ಅನ್ನೋಕಾಗತ್ತಾ? ನಿಮ್ಮ ಮುಖಕ್ಕೆ ಸೂಟ್ ಚೆನ್ನಾಗೇ ಒಪ್ಪತ್ತೆ ಅಂದರು ಜೀಕೇಜಿ. ಅದುಬಿಟ್ಟರೆ ಬೇರೆ ಸೂಟ್ ನನ್ನ ಬಳಿ ಇರಲಿಲ್ಲ. ಹೊಲಿಸುವ ಆರ್ಥಿಕ ಅನುಕೂಲವೂ ಇರಲಿಲ್ಲ. ಹೀಗಾಗಿ ವಾರದ ಏಳು ದಿನವೂ ಒಂದೇ ಸೂಟ್ ನನ್ನದು! ಒಕ ಮಾಟ ಒಕ ಬಾಣ ಎಂದು ತ್ಯಾಗರಾಜರು ರಾಮನನ್ನು ವರ್ಣಿಸುತ್ತಾರೆ.  ಒಕ ಸ್ಕೂಟಿ; ಒಕ ಸೂಟು ಎಂದು ಯಾರಾದರೂ ಪುಣ್ಯಾತ್ಮರು ನನ್ನನ್ನು ವರ್ಣಿಸಬಹುದಾಗಿತ್ತು.

ಹುಡುಗರು ನನ್ನನ್ನು ತುಂಬ ಹಚ್ಚಿಕೊಂಡದ್ದಕ್ಕೆ ಕಾರಣ ನನ್ನ ಸೂಟಂತೂ ಖಂಡಿತ ಕಾರಣವಲ್ಲ. ಹುಡುಗರೊಂದಿಗೆ ನಗುನಗುತ್ತಾ ಮಾತಾಡುವುದು ನಮ್ಮಲ್ಲಿ ಒಂದು ಗುನ್ಹೆ ಆಗಿದ್ದ ದಿನಗಳು ಅವು. ಪ್ರೊಫೆಸ್ಸರೆಂದರೆ ಘನಗಂಭೀರಕಠೋರಾತ್ಮರಾಗಿರಬೇಕೆಂಬುದು ಒಂದು ಬಗೆಯ ಅಲಿಖಿತ ವಿಧಿಯಾಗಿದ್ದ ಕಾಲದಲ್ಲಿ ನಾನು ಮತ್ತು ನನಗಿಂತ ಸ್ವಲ್ಪ ವಯಸ್ಸಲ್ಲಿ ಹಿರಿಯರಾಗಿದ್ದ ಜಿಕೆಜಿ ಹುಡುಗರೊಂದಿಗೆ ಸಲೀಸಾಗಿ ಬೆರೆಯುವ ಮೇಷ್ಟ್ರಾಗಿದ್ದೆವು. ನಮ್ಮ ಇನ್ನೊಬ್ಬ ಮಿತ್ರರು ಹಿಂದಿ ಕಲಿಸುವ ಅಮಾನುಲ್ಲಾ ಸಾಹೇಬರು. ಅವರಂತೂ ಹುಡುಗರನ್ನು ಮಕ್ಕಳು ಅಂತಲೇ ಕರೆಯುವ ಪರಿಪಾಠ ಇಟ್ಟುಕೊಂಡಿದ್ದರು. ನಾನು ಮತ್ತು ನನ್ನ ಇನ್ನಿಬ್ಬರು ಗೆಳೆಯರು ಹುಡುಗರಿಗೆ ಹೆಚ್ಚು ಪ್ರಿಯರಾಗಲು ನಾವು ವಿದ್ಯಾರ್ಥಿಗಳಿಗೆ ಕೊಟ್ಟ ಸಲುಗೆಯೂ ಒಂದು ಕಾರಣವಿರಬಹುದು. ಜೊತೆಗೆ ಸಾಹಿತ್ಯ ಕಲಿಸುವ ಮೇಷ್ಟ್ರು ತರಗತಿಯಲ್ಲಿ ಬೇರೆ ಬೇರೆ ವಿಷಯಗಳನ್ನು ಪ್ರಸ್ತಾಪಿಸಿ ಮಾತಾಡುವ ಅವಕಾಶವಿರುತ್ತದೆ. ಅದನ್ನು ನಾವು ಚೆನ್ನಾಗಿ ಬಳಸಿಕೊಳ್ಳುತ್ತಿದ್ದೆವು. ಸಾಹಿತ್ಯ, ರಾಜಕೀಯ, ಸಿನಿಮಾ, ನಾಟಕ-ಯಾವ ವಿಷಯವೂ ನಮ್ಮ ಪ್ರಸ್ತಾಪದ ಕಕ್ಷೆಯ ಹೊರಗಿರಲಿಲ್ಲ. ಇದು ವಿದ್ಯಾರ್ಥಿಗಳನ್ನು ನಮ್ಮ ತರಗತಿಗಳಿಗೆ ವಿಶೇಷವಾಗಿ ಸೆಳೆಯುತ್ತಾ ಇತ್ತು.

More

ಚಂಪಾ ಶೆಟ್ಟಿ ಕಂಡ ಗಾಂಧಿ

ನನ್ನ ಹೆಸರೇ ‘ರೈಸ್ ಮೆಷೀನ್’..

ಇವರು ನೀಲಗಿರಿ. ನಿಜ ಹೆಸರು ನೀವೇ ಹುಡುಕಿ. ಅವರ ಪ್ರಕಾರ ಅವರ ಪರಿಚಯ ಹೀಗೆ-  ನನ್ನ ನ್ಯೂಜಿಲೆಂಡ್ ಅನುಭವಗಳು. ಊರಿಗೂ ಇಲ್ಲಿಗೂ ಹೋಲಿಸಿಕೊಂಡು, ಕಡೆಗೆ ನಮ್ಮೂರೇ ಚೆಂದ ಎಂಬ ಭಾವನೆ ತಳೆದಿರುವವಳು.ಇಲ್ಲಿದೆ ಅವರ ತಿನ್ನಿರಿ, ತಿಂತಾ ಇರಿ, ಥಿನ್ನಾಗಿರಿ ಅನುಭವ. ಜೋಗಿ ಲೇಖನದ ಬೆನ್ನಲ್ಲೇ ನೀಲಗಿರಿ ಅವರ ಸೆಳೆಯುವ ಒಂದು ಬರಹ..

ಮೊನ್ನೆ ಹಬ್ಬಕ್ಕೆ, ನಮ್ಮಮ್ಮ ಊರಿನಿಂದ ಕಳಿಸಿದ್ದ ಡ್ರೆಸ್ಸು ಯಾಕೋ ಟೈಟಾಗಿದೆ ಎನ್ನಿಸಿತ್ತು. ಟೈಲರಿಗೆ ಇಲ್ಲಿದ್ದ ನಿನ್ನ ಹಳೇ ಡ್ರೆಸ್ಸಿನ ಅಳತೆಯನ್ನೇ ಕೊಟ್ಟು ಹೊಲಿಸಿದ್ದೇನೆಂದು ಹೇಳಿದ್ದರು. ಅಂದರೂ ಇಷ್ಟು ಬಿಗಿಯೇಕಾಯಿತು? ನನ್ನ ಪ್ರಕಾರ ನಾನೇನೂ ಭಾರೀ ತೂಕದವಳಲ್ಲ! ಊರಿನಿಂದ ಇಲ್ಲಿಗೆ ತಂದಿದ್ದ, ಕೇವಲ ಒಂದೇ ವರ್ಷದ ಹಿಂದಿನ ಬಟ್ಟೆಗಳೂ ” ನಾ ತಾಳಲಾರೆ” ಎಂಬಂತೆ ಬಿಗಿಯಾಗುತ್ತಿದೂ, ನೆನಪಿಗೆ ಬಂದು, ’ ಓಹೋ ನಾನು ದಪ್ಪವಾಗುತ್ತಿದ್ದೇನೆ! ಹೇಗಾದರೂ ಮೈ ಭಾರ ಕಡಿಮೆ ಮಾಡಲೇ ಬೇಕು ‘ಇಲ್ಲದಿದ್ದರೆ ನನಗೂ ಡ್ರಮ್,ಮಿನಿ ಡ್ರಮ್ ಎಂದು ಹೆಸರಿಡುತ್ತಾರೆಷ್ಟೇ ’ ಎನಿಸಿತು. ದಪ್ಪವಾಗಿದ್ದೇನೆ ಎಂದು ಮೊದಲಿಗೆ ಗೊತ್ತಿದ್ದರೂ ಅಷ್ಟೇನೂ ತಲೆಕೆಡಿಸಿಕೊಂಡಿರಲಿಲ್ಲ. ಮನಸ್ಸಿಗೆ ದಪ್ಪ ಅನ್ನಿಸಿದ ದಿನ ಒಂದೊತ್ತು ಊಟ ಬಿಟ್ಟು ಶೋಕ ಆಚರಿಸಿಕೊಂಡು ಮುಂದಿನ ಹೊತ್ತಿಗೆ ಸರಿಯಾಗಿ ಬಾರಿಸುತ್ತಿದ್ದರಿಂದ ನನ್ನ ಸೋರಿ ಹೋದ ತೂಕ ಅಷ್ಟೇ ವೇಗದಲ್ಲಿ ತುಂಬಿಕೊಳ್ಳುತ್ತಿತ್ತು.

ನನ್ನ ದುಃಖವನ್ನು ಸ್ನೇಹಿತರ ಬಳಿ ತೋಡಿಕೊಂಡರೆ ಅವರೋ ” ನೀವು ಅನ್ನ ತಿನ್ನುವುದು ಕಡಿಮೆ ಮಾಡಿ..” ಎಂದು ನನ್ನ ಅತೀ ಪ್ರಿಯವಾದ ಅನ್ನದ ಮೇಲೆ ಕಲ್ಲು ಹಾಕುವ ಸಲಹೆ ಕೊಟ್ಟಿದ್ದು ನನಗೇನೋ ಇಷ್ಟವಾಗಲಿಲ್ಲ. ದಿನಕ್ಕೊಂದು ಪಲಾವ್, ಭಾತ್ , ಚಿತ್ರಾನ್ನ, ಪುಳಿಯೋಗರೆ ಮಾಡಿಕೊಂಡು ತಿನ್ನುತ್ತಿದ್ದ ನನಗೆ, ಅನ್ನ ತಿನ್ನಬೇಡಿ ಎಂದರೆ ಮತ್ತೇನು ತಿನ್ನುವುದು? ನಮ್ಮ ಮನೆಯಲ್ಲಂತೂ ನನ್ನನ್ನು ” ರೈಸ್ ಮೆಷೀನ್ ” ಎಂದೇ ಕರೆಯುತ್ತಿದುದು:) ರಾತ್ರಿ ಊಟಕ್ಕೆ ಮುದ್ದೆ ಅಥವಾ ಚಪಾತಿ ಮಾಡಿದರೂ ನನಗೆ ಒಂದು ಬಟ್ಟಲು ಅನ್ನವಂತೂ ಬೇಕೇ ಬೇಕು. ಅಂತಹುದರಲ್ಲಿ ” ಅನ್ನವನ್ನು ಬಿಟ್ಟು ಬಿಡಿ” ಎಂದರೆ ಅವರಿಗಿನ್ನೆಂತ ಶಾಪ ಹಾಕಲಿ?

ಮೈಸೂರಿನಲ್ಲಿದ್ದಾಗ ಬೆಳಗಿನ ತಿಂಡಿಗೆ, ಚಿತ್ರಾನ್ನ, ಟೊಮೋಟೋ ಭಾತ್ , ವೆಜಿಟೇಬಲ್ ಭಾತ್ , ಹುಳಿಯನ್ನ…ಹೀಗೆ ಬರೀ ಅನ್ನಗಳದ್ದೇ ಸಾಲು ಸಾಲು. ಬೆಳಿಗ್ಗೆ ತಿಂಡಿಗೂ ಅನ್ನ, ಮಧ್ಯಾಹ್ನ ಅನ್ನ-ಸಾರು, ರಾತ್ರಿಗೆ ಮುದ್ದೆ/ಚಪಾತಿ- ಪಲ್ಯ, ಅನ್ನ-ಸಾರು ಹೀಗೆಯೇ ಆರಾಮವಾಗಿ ಅಮ್ಮ ಮಾಡಿಹಾಕುತ್ತಿದ್ದನ್ನು ತಿಂದುಕೊಂಡಿದ್ದೆ. ಆದರೂ ಇಂತಾ ಪರಿ ದಪ್ಪಗಾಗಿರಲಿಲ್ಲ. ಸಣ್ಣಗೆ ಒಣಕಲ ಕಡ್ಡಿಯಂತಿದ್ದೆ. ” ಸೀರೆ ಉಟ್ಟುಕೊಂಡರೆ, ಮಡಿಕೋಲಿಗೆ ಸುತ್ತಿದಂತಿರುತ್ತದೆ, ಸ್ವಲ್ಪ ದಪ್ಪವಾಗೆ” ಎಂದು ಅಕ್ಕಂದಿರು ನನಗೆ ಸೀರೆ ಉಡಿಸುವುದನ್ನು ಕಲಿಸುವಾಗಲೂ ಬೈಯುತ್ತಿದ್ದರು. ಸಣ್ಣಗಿದ್ದರೇನು, ದಪ್ಪವಿದ್ದರೇನು ಒಟ್ಟಿನಲ್ಲಿ ಆರೋಗ್ಯದಿಂದರಷ್ಟೇ ಸಾಕು ಎಂಬ ಪಾಲಿಸಿ ನಂದಾಗಿದ್ದರಿಂದ, ಬಹುಷಃ ನಾನು ಇನ್ನು ಜನ್ಮದಲ್ಲಿ ದಪ್ಪವಾಗುವುದಿಲ್ಲವೇನೋ ಅನ್ನಿಸಿತ್ತು.

ಮದುವೆಯಾದ ಮೇಲೆಯೇ ನನಗೆ ನಿಜಕ್ಕೂ ಸಂಕಟಕಾಲ ಶುರುವಾಗಿದ್ದು. ಮದುವೆಯಾಗಿದ್ದು ಗುಲ್ಬರ್ಗದ ಗಂಡಿಗೆ! ಅಲ್ಲಿ ಬೆಳಗಿನ ತಿಂಡಿಗೆ ಅನ್ನದ ಸುದ್ದಿಯೇ ಇಲ್ಲ! ಬೆಳಿಗ್ಗೆ ಅವಲಕ್ಕಿ ಇಲ್ಲವೇ ಉಪ್ಪಿಟ್ಟು, ಮಧ್ಯಾಹ್ನಕ್ಕೆ ಜೋಳದ ರೊಟ್ಟಿ ಇಲ್ಲವೇ ಚಪಾತಿ- ಬದನೇಕಾಯಿ, ಅಥವಾ ಪುಂಡೀ ಪಲ್ಯ, ರಾತ್ರಿಗೂ ಡಿಟ್ಟೋ! ನಮ್ಮಲ್ಲಿ ಬೆಳಗಿನ ತಿಂಡಿಗೆ ಚಪಾತಿ ತಿಂದಷ್ಟೇ ಅಭ್ಯಾಸ. ಇಲ್ಲಿ ಅವಲಕ್ಕಿ ಬಿಟ್ಟರೆ ಉಪ್ಪಿಟ್ಟು ಅದೂ ಬಿಟ್ಟರೆ,ಸೂಸಲ! ಅವಲಕ್ಕಿ, ಉಪ್ಪಿಟ್ಟಿಗೆ ತರಾವರೀ ಹೆಸರುಗಳನ್ನಿಟ್ಟು ಅವುಗಳನ್ನು ವಾರಕ್ಕೊಮ್ಮೆಯಷ್ಟೇ ಮಾಡಬೇಕು ಎಂದು ಅಮ್ಮನಿಗೆ ಜೋರು ಮಾಡುತ್ತಿದ್ದುದೆಲ್ಲಾ ನೆನಪಿಸಿಕೊಂಡು ” ದೇವರೇ ಇದೆಲ್ಲಿಗೆ ನನ್ನನ್ನು ತಂದು ಬಿಟ್ಟೆ” ಎಂದು ಹಲುಬುತ್ತಿದ್ದೆ. ಊಟಕ್ಕೆ ಕೂತಾಗ, ಎಲ್ಲರೂ ರೊಟ್ಟಿ, ಚಪಾತಿಗಳನ್ನು ತಿಂದು ಕಡೆಗೆ ಅನ್ನ ಬರುತ್ತಿದ್ದರೂ ಎಲ್ಲರೂ ತಿನ್ನುವ ಅನ್ನದ ಪ್ರಮಾಣ ಕಡಿಮೆಯಿರುತ್ತಿದ್ದರಿಂದ , ಅನಿವಾರ್ಯವಾಗಿ ನಾನೂ ತಟ್ಟೆ ಬಿಟ್ಟು ಏಳಲೇ ಬೇಕಾಗುತ್ತಿತ್ತು. ಒಮ್ಮೊಮ್ಮೆ ಯಜಮಾನರಿಗೆ ನಾನು ” ಅನ್ನದ ಪ್ರಿಯೆ” ಎಂದು ನೆನಪಿಗೆ ಬಂದು, ನನಗೆ ಅನ್ನವನ್ನೇ ಬಡಿಸಲು ಹೇಳಿದುದೂ ಉಂಟು! ಮೈಸೂರಿನಲ್ಲಿ ಬಗೆಬಗೆಯ ಅನ್ನಗಳಿಗೆ ಒಗ್ಗಿಹೋಗಿದ್ದ ನನ್ನ ನಾಲಿಗೆಗೆ ಅನ್ನ-ಬೇಳೆ ಸಾರು ಯಾವುದಕ್ಕೂ ಸಾಲುತ್ತಿರಲಿಲ್ಲ. ಹಾಗೆಂದು ನನಗಿಷ್ಟವಾದ ಅಡಿಗೆಗಳನ್ನು ಮಾಡಿಸಿಕೊಳ್ಳಲೂ ಭಯ. ಹೇಳಿ ಕೇಳಿ ಒಟ್ಟು ಸಂಸಾರ. ನನಗೊಬ್ಬಳಿಗೆ ಮಾಡಿಹಾಕುವುದಂತೂ ಸಾಧ್ಯವಿಲ್ಲ, ನಾನೇ ಮಾಡಿಕೊಳ್ಳೋಣವೆಂದರೆ ನನಗೆ ಅಡಿಗೆಯೇ ಬರುತ್ತಿರಲಿಲ್ಲ!

More

ಓ! ಬಜಾಜ್ ಚೇತಕ್..

ನನ್ನ ಹೆಸರು ಅಹರ್ನಿಶಿ ಶ್ರೀಧರ್ ಸದ್ಯಕ್ಕೆ ನಾನೀಗ ಮೊವಂಜ, ತಾಂಜನಿಯ,ಪೂರ್ವ ಆಫ್ರಿಕ ದಲ್ಲಿ ಇದೀನಿ. ನಾನೊಬ್ಬ ಫಿಷೆರಿಸ್ ಪದವೀಧರ.. ನಮ್ಮ ಊರು ಕದಿರೇಹಳ್ಳಿ, ಬರಗೂರ್ ಅಂಚೆ, ಸಿರಾ ತಾಲ್ಲೂಕ್, ತುಮಕೂರ್ ಜಿಲ್ಲೆ. ಶ್ರೀಮನೆ ನನ್ನ ಬ್ಲಾಗು. ಬನ್ನಿ ಅಲ್ಲಿಗೂ..

ಬೆಳಿಗ್ಗೆ ಪ್ರಜಾವಾಣಿ ಯಲ್ಲಿ ಬಜಾಜ್ ಕ೦ಪನಿ ತನ್ನ “ಬಜಾಜ್ ಚೇತಕ್” ಸ್ಕೂಟರ್ ನ ಉತ್ಪಾದನೆಯನ್ನು ನಿಲ್ಲಿಸಲಿದೆ ಎ೦ದು ಓದಿ ಯಾಕೋ ಮನಸ್ಸಿಗೆ ಹಿತವೆನಿಸಲಿಲ್ಲ.ಮಧ್ಯಮ ವರ್ಗದವರ ಪ್ರತಿಷ್ಟೆಯ ಸ೦ಕೇತವಾದ್ದ ಈ ಸ್ಕೂಟರ್ ಒ೦ದು ಕಾಲದಲ್ಲಿ ಅಡ್ವಾನ್ಸ್ ಬುಕಿ೦ಗ್ ಮಾಡಿ ಐದಾರು ವರ್ಷ ಕಾದರೂ ದೊರಕದೇ ಇದ್ದ೦ತಹ ಈ ದ್ವಿ ಚಕ್ರ ವಾಹನ ಇ೦ದು ತನ್ನ ಉತ್ಪಾದನೆಯನ್ನೇ ನಿಲ್ಲಿಸಿಕೊಳ್ಳುವ ಸ೦ಧರ್ಭ ಬ೦ದಿದೆ ಎ೦ದಾಗ ….ಅಬ್ಬಾ ಎಷ್ಟೊ೦ದು ಬದಲಾಗುತ್ತಿದೆ ನಮ್ಮ ಜೀವನ ಎನಿಸಿತು.

ನನಗೂ ಹಾಗೂ ಬಜಾಜ್ ಚೇತಕ್ ಸ್ಕೂಟರಿಗೂ ಅವಿನಾಭಾವ ನ೦ಟು.ಇಪ್ಪತ್ತು ವರ್ಷದ ಹಿ೦ದೆ ನಾನಾಗ ಪಿ ಯು ಸಿ ಓದಲು ಬೆ೦ಗಳೂರಿನ ಹಾಸ್ಟಲ್ ನಲ್ಲಿದ್ದೆ….ರಾಜಾಜಿನಗರ RKMT Hostel.ನಮ್ಮ ಮಾವ(ತಾಯಿಯ ಅಣ್ಣ)ನ ಮನೆ ಮಹಾಲಕ್ಶ್ಮಿ ಲೇ ಔಟ್ ನಲ್ಲಿತ್ತು.ಶನಿವಾರ ಭಾನುವಾರ ಅಲ್ಲಿಗೆ ಹೋಗಿ ಬರುತ್ತಿದ್ದೆ.ಸಣ್ಣ ಪುಟ್ಟ ಮನೆ ಕೆಲಸಗಳಿಗೆ ಸಹಾಯವಾಗುತ್ತಿದ್ದೆ.ನಮ್ಮ ಮಾವ ಕಾರ್ಪೊರೇಷನ್ ನಲ್ಲಿ ರೆವಿನ್ಯು ಆಫೀಸರ್ ಆಗಿದ್ದರು.ಬಹಳ ಶಿಸ್ತಿನ ಮನುಷ್ಯ.ಅವರ ಹತ್ತಿರ ಒ೦ದು ಬಜಾಜ್ ಚೇತಕ್ ಸ್ಕೂಟರ್ ಇತ್ತು.ಮಾವ ಸ್ಕೂಟರ್ ತೊಳೆಯಲೆ೦ದು ಕೀ ನನಗೆ ಕೊಡುತ್ತಿದ್ದರು.ಮನೆಯ ಹೊರಗೆ ನಿಲ್ಲಿಸಿಕೊ೦ಡು ತೊಳೆದು ಒಳಗೆ ನಿಲ್ಲಿಸುವುದು ನನ್ನ ಕೆಲಸವಾಗಿತ್ತು…ಓಡಿಸಲು ಬರೋಲ್ಲ..ಬರೀ ತಳ್ಳಿಕೊ೦ಡೇ ಸ್ವಲ್ಪ ದಿನ ತಳ್ಳಿದೆ.ಸ್ವಲ್ಪ ದಿನದ ನ೦ತರ ಸ್ಟಾರ್ಟ್ ಮಾಡುವುದನ್ನು ಕಲಿತೆ…ಅದಕ್ಕೂ ಮುನ್ನ ಊರಿನಲ್ಲಿ ಸೈಕಲ್ ಓಡಿಸಿದ್ದಷ್ಟೆ ಅನುಭವ.ಬನ್ನಿ ಊರಿಗೆ ಹೋಗೋಣ ಮೊದಲು…

ಊರಿನಲ್ಲಿ…ನಮ್ಮ ಊರು ಕದಿರೇಹಳ್ಳಿ ,ಬರಗೂರಿನ ಪಕ್ಕ…ನಮ್ಮ ಸಾಹಿತಿ ಬರಗೂರು ರಾಮಚ೦ದ್ರಪ್ಪ ನವರ ಊರು….ಅಪ್ಪ ಹೆಚ್ಚು ಓದಿದವರಲ್ಲ..ನಾಲ್ಕನೇ ಕ್ಲಾಸಿಗೇ ಶಾಲೇ ಬಿಟ್ಟು ವ್ಯವಸಾಯದ ಕಡೆ ಮುಖ ಮಾಡಿದವರು….ಅನುಕೂಲವಿರಲಿಲ್ಲ ಅವರಿಗೆ…ತಾತ ನವರು ನೀನು ಓದಿ ಏನು ಉದ್ಧಾರ ಮಾಡೋದು ಅ೦ತ ಸ್ಕೂಲು ಬಿಡಿಸಿ ಕಪ್ಪಲೇ(ಏತ ನೀರಾವರಿ) ಹೊಡಿಯೋಕೆ ಹಾಕಿದ್ದರ೦ತೆ.ನಾವಿನ್ನೂ ಚಿಕ್ಕವರಿರಿವಾಗ ವ್ಯವಸಾಯದಿ೦ದ ಬೇಸತ್ತು…ವ್ಯವಸಾಯಕ್ಕಿ೦ತ ಹೆಚ್ಚಾಗಿ ದಾಯಾದಿಗಳ ಕಲಹಕ್ಕೆ ಬೇಸತ್ತು ಬರಗೂರಿಗೆ ಬ೦ದು ಸಣ್ಣ ಹೋಟಲ್ ಪ್ರಾರ೦ಭಿಸಿದರು…ನನಗಾಗ 8 ವರ್ಷ….ಮೂರನೇ ಕ್ಲಾಸು….

ಆಗ ಹೀಗೇ ಸ್ಕೂಲು ಮುಗಿಸಿ ಬ೦ದು ಹೋಟಲ್ ಗೆ ಬೋರ್ವೆಲ್ ನಿ೦ದ ನೀರು ಹೊತ್ತು ತ೦ದು ಹಾಕುವುದರಿ೦ದ ಶುರುವಾಗಿತ್ತು ನಮ್ಮ ಬಾಲ ಕಾರ್ಮಿಕ ತನ.ಹೋಟಲ್ ಗೆ ಬರುವ ಗಿರಾಕಿಗಳ (ಕಸ್ಟಮರ್ಸ್)ಸೈಕಲ್ ಮೇಲೇನೆ ನನಗೆ ಯಾವಾಗಲೂ ಕಣ್ಣು…ಅವರನ್ನು ಹೇಗೋ ಪುಸಲಾಯಿಸಿ ಸೈಕಲ್ ಪಡೆದುಕೊ೦ಡು ಕಲಿಯಲು ತೆಗೆದುಕೊ೦ಡು ಹೋಗುತ್ತಿದ್ದೆ…ಒಮ್ಮೆ ಅಪ್ಪನಿಗೇ ಬೇಜಾರಾಗಿ ಮನೆಗೆ ಒ೦ದು ಸೈಕಲ್ಲು ಅ೦ತ ತ೦ದರು..ಅದೂ ಸೆಕೆ೦ಡ್ ಹ್ಯಾ೦ಡ್….ಅದರಲ್ಲೇ ನೀರು ಸೇದೋದು(ಬರಿ ಬೀಡಿ ಸಿಗರೇಟ್ ಮಾ ತ್ರ ಸೆದ್ತಾರೆ ಅ೦ತ ಕೇಳಿದ್ದೆ ಇದೇ ನ್ ಇದು ನೀರು ಸೇದೋದು ಅ೦ದ್ಕೊ೦ಡ್ರಾ…ಈಗಿನ೦ತೆ ಆಗ ಮನೆ ಮನೆಗೆ ನಲ್ಲಿ ಗಳಿರಲಿಲ್ಲ…ಬಾವಿಯಿ೦ದ ನೀರು ಕೊಡ ಇಳಿಸಿ ಹಗ್ಗದಿ೦ದ ಮೇಲೆತ್ತಬೇಕಿತ್ತು…ಅದನ್ನೇ ನೀರು ಸೇದೋದು ಅ೦ದಿದ್ದು) ……ಹೀಗೆ ಸೈಕಲ್ ಕಲಿಯುವಾಗ ಬಿದ್ದು ಗಾಯಮಾಡಿಕೊ೦ಡಿದ್ದಕ್ಕೆ ಲೆಕ್ಕವಿಲ್ಲ…ಹೇಗೋ ಎದ್ದೂ ಬಿದ್ದೂ ಅ೦ತೂ ಸೈಕಲ್ ಓಡಿಸಲು ಕಲಿತಾಗಿತ್ತು….ಮು೦ದೆ ಬಹಳ ವರ್ಷ ಅದೇ ಸೈಕಲ್ ಮನೆಯಲ್ಲಿ ಇತ್ತು…ಅಪ್ಪ ಇರುವವರೆಗೂ ಇತ್ತು.

ಬ೦ದೆ ..ಇರಿ ವಾಪಸ್ ಬಜಾಜ್ ಚೇತಕ್ ವಿಷಯಕ್ಕೆ…ಹೀಗೆ ಒ೦ದು ದಿನ ಭಯ೦ಕರ ಧೈರ್ಯ ಮಾಡಿ ಚೇತಕ್ ಸ್ಟಾರ್ಟ್ ಮಾಡಿ ಯಾರಿಗೂ ತಿಳಿಯದ೦ತೆ ಹತ್ತಿ ಕುಳಿತೆ….ಹೇಗೋ ಎಡರಿ ತೊಡರಿ ಮನೆಯ ಮು೦ದಿನ ರಸ್ತೆಯ ಮೂಲೆಯವರೆಗೆ ಹೋಗಿ ಬ೦ದೆ…..ಸ್ವಲ್ಪ ಮನಸ್ಸು ಧೈರ್ಯ ಹೇಳುತ್ತಿತ್ತು..ಪರವಾಗಿಲ್ಲ ನಾನೂ ಸ್ಕೂಟರ್ ಓಡಿಸಬಲ್ಲೆ ಎ೦ಬ ಧೈರ್ಯ ಬ೦ತು.ಮತ್ತೊ೦ದು ದಿನ ಹೀಗೆ ಸ್ಕೂಟರ್ ತೊಳೆದು ಒಳಗೆ ಬಿಡುವ ಮುನ್ನ ಮತ್ತೆ ಸ್ಟಾರ್ಟ್ ಮಾಡಿ ಹತ್ತಿ ಹೊರಟೆ…ಹರೆಯದ ಹುಮ್ಮಸ್ಸು…ಮಹಾಲಕ್ಷ್ಮಿ ಲೇ ಔಟ್ ಸ್ವಿಮ್ಮಿ೦ಗ್ ಪೂಲ್ ಕಡೆ ಹೋದೆ….ಅದರ ಮು೦ದಿನ ರಸ್ತೆಯಲ್ಲಿ ಯಶವ೦ತ್ ಪುರ ದ ರಸ್ತೆ ಹಿಡಿದೆ…ಇನ್ನೂ ಮು೦ದೆ ಹೋಗುತ್ತಿದ್ದಾಗೆ ಸ್ಕೂಟರ್ ಒಮ್ಮೆಲೆ ನಿ೦ತಿತು…ಏನಾಯ್ತೊ ಎ೦ದು ಗಾಬರಿ..ಸ್ಕೂಟರ್ ಆಫ್ ಆಗಿರಲಿಲ್ಲ….ಯಾರೋ ರಸ್ತೆಯ ಬದಿಯಲ್ಲಿ ಒ೦ದು ಎಮ್ಮೆಯನ್ನು ಮೇಯಲು ಹಗ್ಗ ಕಟ್ಟಿ ಬಿಟ್ಟಿದ್ದರು ಅದು ರಸ್ತೆ ಈಚೆ ಬದಿಗೆ ಬ೦ದು ಮೇಯುತ್ತಿತ್ತು,ರಸ್ತೆಯ ಮೇಲೆ ಅದರ ಹಗ್ಗವನ್ನು ಹನುಮ೦ತನ ಬಾಲದ೦ತೆ ಹಾಸಿದ್ದು ನನಗೆ ಗೊತ್ತೇ ಇರಲಿಲ್ಲ….ನಾನೂ ಆ ಹಗ್ಗವನ್ನು ಮು೦ದಿನ ಚಕ್ರ ಹತ್ತಿಸಬೇಕು..ಆ ಎಮ್ಮೆಯು ಮು೦ದೆ ಸರಿಯಬೇಕು….ಹಗ್ಗ ಮೇಲೆದ್ದು ಸ್ಕೂಟರಿನ ಮಧ್ಯ ದಲ್ಲಿ ಸಿಕ್ಕಿ ಹಾಕಿಕೊ೦ಡುಬಿಡಬೇಕೆ…..ಸದ್ಯ ಸುತ್ತ ಮುತ್ತ ಯಾರೂ ಇರಲಿಲ್ಲ…ವೇಗವಾಗಿ ಸ್ಕೂಟರ್ ನೆಡೆಸಿದ್ದರೆ ನಾನೂ, ಸ್ಕೂಟರೂ ಹಾಗೂ ಆ ಯಮ ಧರ್ಮನ ವಾಹನ ಎಮ್ಮೆ ಮೂವರೂ ಮಣ್ಣು ಮುಕ್ಕಬೇಕಾಗಿತ್ತು.ಎದೆಯಲ್ಲಿ ಅವಲಕ್ಕಿ ಕುಟ್ಟಿದ೦ತಾಗುತ್ತಿತ್ತು..ಮನೆಗೆ ಹೋಗಿ ಏನೂ ಆಗಿಲ್ಲವೆ೦ವತೆ ಸ್ಕೂಟರ್ ಪಾರ್ಕ್ ಮಾಡಿದಾಗ ನಿಟ್ಟುಸಿರು.

More

ಕ್ಲಿಕ್..

%d bloggers like this: