ಬೆಳಗ್ಗೆ ಶಂಕರಪುರಂನ ರಾಧಾಕೃಷ್ಣ ಅಡಿಗರ ಹೊಟೆಲಿನಲ್ಲಿ ಒಂದು ಇಡ್ಲಿ, ಬೆಣ್ಣೆ. ಭಾನುವಾರ ಆ ಹೊಟೆಲ್ಲಿಗೆ ರಜಾ ಆದ್ದರಿಂದ ವಿವಿಪುರಂನ ಜನತಾದಲ್ಲೋ, ಗಾಂಧೀಬಜಾರಿನ ವಿದ್ಯಾರ್ಥಿ ಭವನದಲ್ಲೋ ಅರ್ಧ ಮಸಾಲೆದೋಸೆ. ಮಿನಿ ಎಂಟಿಆರ್ ಅಂತಲೇ ಪ್ರಸಿದ್ಧವಾಗಿರೋ ಮಹಾಲಕ್ಷ್ಮಿ ಟಿಫಿನ್ರೂಮಿನಲ್ಲಿ ಕಾಫಿ, ಮಧ್ಯಾಹ್ನಕ್ಕೆ ಮೂರು ಬಾದಾಮಿ, ಎರಡು ಗೋಡಂಬಿ ಮತ್ತು ಒಂದಿಷ್ಟು ಒಣದ್ರಾಕ್ಷಿ, ಒಂದು ಗ್ಲಾಸು ಸಕ್ಕರೆ ಹಾಕದ ಕಾಂಪ್ಲಾನು, ಸಂಜೆ ಏಳಕ್ಕೆ ಸರಿಯಾಗಿ ಮೂರು ಪೆಗ್ಗು ಸ್ಕಾಚ್ ವಿಸ್ಕಿ, ನೆಂಚಿಕೊಳ್ಳಲು ಮನೆಯಲ್ಲಿದ್ದರೆ ಚೀಸು ಮತ್ತು ಬ್ರಾಹ್ಮಿನ್ಸ್ ಬೇಕರಿಯ ಕಾಂಗ್ರೆಸ್ ಕಡ್ಲೆ ಬೀಜ,ಹೊರಗಿದ್ದರೆ ತರಕಾರಿ, ಕಡ್ಲೆಬೀಜ, ಗುಂಡು ಹಾಕುವಾಗ ಎರಡೋ ಮೂರೋ ಸಿಗರೇಟು. ಸಿಟ್ಟಿಗೆದ್ದರೆ ಏಳೋ ಎಂಟೋ ಸಿಗರೇಟು ಮತ್ತು ಮತ್ತೊಂದು ಪೆಗ್ ವಿಸ್ಕಿ. ರಾತ್ರಿ ಹತ್ತುಗಂಟೆಗೆ ಮನೆಯಲ್ಲಿ ಭೂರಿಬೋಜನ. ಊಟ ಮುಗಿಸಿದ ನಂತರ ಗಾಢನಿದ್ದೆ.
ಇದನ್ನು ಹೇಳುತ್ತಿದ್ದಂತೆ ಉದಯ ಮರಕಿಣಿ ತಮಗೆ ಗೊತ್ತಿರುವ ಮಲಯಾಳಿಯೊಬ್ಬನ ಉದಾಹರಣೆ ಕೊಟ್ಟರು: ಆ ಮನುಷ್ಯ ಏನೂ ತಿನ್ನೋಲ್ಲ. ಬರೀ ಮೀನು ಮತ್ತು ರಮ್ಮು. ದಿನಕ್ಕೆ ಅರ್ಧ ಬಾಟಲ್ ರಮ್ ಕುಡೀತಾನೆ ಮತ್ತು ಹುರಿದ ಮೀನು ತಿನ್ನುತ್ತಾನೆ.
ಮತ್ತೊಂದು ದಿನ ಮಾತಿಗೆ ಕುಳಿತಾಗ ಸೂರಿ ಹೇಳಿದ್ದರು: ಚಿಕನ್ ಡಯಟ್ ಅಂತ ಒಂದಿದೆ. ಅದರಲ್ಲಿ ಬರೀ ಚಿಕನ್ ತಿನ್ನಬೇಕು. ಅನ್ನ, ಚಪಾತಿ ಮುಟ್ಟೋ ಹಾಗೇ ಇಲ್ಲ. ಮೂರು ಹೊತ್ತೂ ಚಿಕನ್. ಅದರಲ್ಲಿ ಪ್ರೊಟೀಸ್ ಜಾಸ್ತಿ ಇರುತ್ತೆ. ಮಸಲ್ ಬೆಳೆಯುತ್ತೆ.
ನಾನು ದಿನಕ್ಕೆ ಎರಡು ಸಾರಿ ಮಜ್ಜಿಗೆ ಕುಡೀತೀನಿ. ಬೆಳಗ್ಗೆ ಎದ್ದು ಒಂದು ಗ್ಲಾಸ್ ಹಾಲು ಕುಡಿದು ವಾಕಿಂಗ್ ಹೊರಡುತ್ತೇನೆ. ಬಂದ ನಂತರ ಆರು ಗ್ಲಾಸು ನೀರು. ನಂತರ ಮೂರು ಇಡ್ಲಿ, ಮಧ್ಯಾಹ್ನ ತರಕಾರಿ. ಆಮೇಲೆ ಮಜ್ಜಿಗೆ, ರಾತ್ರಿ ಬರೀ ಮಜ್ಜಿಗೆ ಎಂದು ನನಗೆ ಗೊತ್ತಿರುವ ದಢೂತಿ ಸೇಟ್ಜಿ ಹೇಳಿದ್ದ. ಅವನ ಆಕಾರ ನೋಡಿದರೆ, ಅದು ಕರಗುವುದಕ್ಕೆ ಏನಿಲ್ಲವೆಂದರೂ ೧೩೦೦ ವರ್ಷಗಳಾದರೂ ಬೇಕು ಅನ್ನಿಸುವಂತಿತ್ತು.
ಥು..ಥು..ಥೂ.. ನೀವೆಲ್ಲ ಹಂದಿ ಥರ ಬೆಳ್ಕೊಂಡಿರೋದಕ್ಕೆ ಕಾರಣ ತಿನ್ನೋದು ಮಾತ್ರ ಅಲ್ಲ. ಒತ್ತಡ ಕಣ್ರೀ, ನಾನು ನೋಡಿ ಪಟ್ಟಾಗಿ ಹೊಡಿತೀನಿ, ಕರಗಿಸ್ತೀನಿ. ಆರೋಗ್ಯ ಅಂದ್ರೆ ತಿನ್ನದೇ ಇರೋದಲ್ಲ. ತಿಂದು ಜೀರ್ಣಿಸಿಕೊಳ್ಳೋದು. ನಿಮ್ಮಂಥ ಪೇಟೆಯೋರ ಕೈಲಿ ಆಗೋಲ್ಲ ಅದೆಲ್ಲ’ ಎಂದು ತೇಜಸ್ವಿ ರೇಗಿದ್ದರು. ಅವರ ಸಿಟ್ಟಿಗೆ ಕಾರಣ ಮಟನ್ ಕೊಬ್ಬು ಅಂತ ನಾನು ಹೇಳಿಕೆ ಕೊಟ್ಟದ್ದು. ಅತ್ಯುತ್ತಮ ಆಹಾರ ಯಾವುದು ಗೊತ್ತಾ? ನೀವೇ ಮಾಡ್ಕೊಳ್ಳೋ ಅಡುಗೆ. ಯಾವಾಗ ಈ ಅಡುಗೆಭಟ್ಟರು ಅಂತ ಶುರುವಾದ್ರೋ ಆವತ್ತು ಬಂತು ಪೀಡೆ. ಮನೇಲಿ ಅಡಿಗೆಯವರನ್ನಿಟ್ಕೋತಾರೆ. ಅವರ ಕೆಲಸ ಏನು ಹೇಳಿ, ಇಡೀ ದಿನ ಅಡುಗೆ ಮಾಡೋದು. ಆದ್ದರಿಂದ ರುಚಿರುಚಿಯಾಗಿ ಬೇಯಿಸಿ ಇಡ್ತಾರೆ. ಖರ್ಚೂ ಅವರದಲ್ಲ,ಟೈಮೂ ಅವರದ್ದಲ್ಲ. ಅದನ್ನು ತಿಂದ್ರೆ ದಪ್ಪ ಆಗದೇ ಇನ್ನೇನಾಗ್ತಾರೆ. ನೀವೇ ಬೇಯಿಸ್ಕೊಂಡು ತಿನ್ನಿ ನೋಡೋಣ’ ಎಂದು ಸವಾಲು ಹಾಕಿದ್ದರು.
ಕಾರಂತರು ಏನು ತಿನ್ನುತ್ತಿದ್ದರು ಅಂತ ಹುಡುಕಾಡಿದರೆ ಅಂಥ ವಿಶೇಷವೇನೂ ಅಲ್ಲಿರಲಿಲ್ಲ. ಹಸಿವಾದಾಗ ಏನೋ ತಿನ್ನುತ್ತಿದ್ದರೇ ಹೊರತು, ತಿನ್ನುವುದನ್ನು ಒಂದು ಆಚರಣೆ ಮಾಡಿಕೊಂಡಿರಲಿಲ್ಲ ಅವರು. ಮಲೆನಾಡಿನಲ್ಲಿ ಆತಿಥ್ಯ ಜೋರಾದರೂ, ತಿನ್ನುವ ವಿಚಾರಕ್ಕೆ ಅವರು ಅಷ್ಟೊಂದು ಪ್ರಾಧಾನ್ಯ ಕೊಟ್ಟಂತೆ ಕಾಣುವುದಿಲ್ಲ.
ಇತ್ತೀಚಿನ ಟಿಪ್ಪಣಿಗಳು