“ನನ್ನವ್ವ ಫಲವತ್ತಾದ ಕಪ್ಪು ನೆಲ”
08 ಮೇ 2010 1 ಟಿಪ್ಪಣಿ
in ಪದಗಳ ಜಗದಲ್ಲಿ
ಲಂಕೇಶರ “ಅವ್ವ”, ನಾನು ಮತ್ತೆ ಮತ್ತೆ ಓದಿಕೊಳ್ಳುವ ಕವಿತೆ. ಹಾಗೆ ನೋಡಿದರೆ ಲಂಕೇಶರ “ಅವ್ವ” ಎಲ್ಲರ ಅವ್ವನೂ ಆಗಿಬಿಡುವಂಥವಳು. ಒಂದಿಡೀ ತಾಯಂದಿರ ಪರಂಪರೆಯನ್ನೇ ಒಳಗೊಂಡು ನುಡಿವ ಹೆಂಗಸು ಆಕೆ.
“ನನ್ನವ್ವ ಫಲವತ್ತಾದ ಕಪ್ಪು ನೆಲ” ಎಂಬುದೇ ಒಂದು ಬೆಳಕಿನ ಸಾಕ್ಷಾತ್ಕಾರದ ಹಾಗಿದೆ. ಶ್ರಮ ಸಂಸ್ಕೃತಿಯನ್ನೂ ಮಾತೃ ಪರಂಪರೆಯನ್ನೂ ಒಂದೆಡೆಯಲ್ಲಿ ಕಂಡುಕೊಳ್ಳುವ ಪ್ರತಿಮೆ ಅನ್ನಿಸುತ್ತದೆ ಅದು.
ಪಾರ್ವತಿದೇವಿ ಕೊಳೆಯಿಂದ ಕೂಡಿದ ತನ್ನ ಮೈಯ ಬೆವರಿಂದಲೇ ಗೊಂಬೆ ಮಾಡಿ ಅದಕ್ಕೆ ಜೀವ ಕೊಟ್ಟಳು; ಆತನೇ ಗಣಪತಿ ಎಂಬ ಕಥೆಯೊಂದು ಬರುತ್ತದೆ. ಕೃಷಿ ಸಂಸ್ಕೃತಿಯ ಮನಸ್ಸು ತಾಯಿ ಮತ್ತು ಮಗುವಿನ ಸಂಬಂಧವನ್ನು ರೂಪಕಗೊಳಿಸಿರುವ ಬಗೆಗಿನ ಅಸಾಮಾನ್ಯ ನಿದರ್ಶನ ಈ ಕಥೆ. ಕರುಳ ಕುಡಿಯ ಬಗೆಗಿನ ತಾಯ ಗ್ಯಾನ, ಸಂವೇದನೆಯ ಜಗತ್ತಿನಲ್ಲಿ ಬಹುಶಃ ಯಾವಾಗಲೂ ಎತ್ತರದ ಸ್ಥಾನದಲ್ಲೇ ಇರುವಂಥದ್ದು.
“ಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ;
ಸುಟ್ಟಷ್ಟು ಕಸುವು, ನೊಂದಷ್ಟು ಹೂ ಹಣ್ಣು
ಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ”
ಈ ಅವ್ವನ ಕಥೆ, ಮಗುವಿಗೆ ಹಾಲೂಡಿದರೆ ಎದೆ ಬಿಗುವು ಸೋರಿ ಹೋದೀತು ಎಂದು ಆತಂಕಗೊಳ್ಳುವ “ಪೇಜ್ ಥ್ರೀ” ಮಮ್ಮಿಯದಲ್ಲ; ಬದಲಾಗಿ ನಿರಂತರ ಜೀವ ತೇಯುವ, ಎಲ್ಲ ನೋವನ್ನೂ ಒಂದು ನಿಟ್ಟುಸಿರಲ್ಲೇ ನುಂಗಿಕೊಳ್ಳುವ ಶಕ್ತಿವಂತೆಯ ಕಥೆ.
“ಹೊತ್ತ ಬುಟ್ಟಿಯ ಇಟ್ಟು ನರಳಿ ಎವೆ ಮುಚ್ಚಿದಳು ತೆರೆಯದಂತೆ”
ಹೀಗೆ ಯಾನ ಮುಗಿಸುವ ಅವ್ವ, ಅನ್ನ ಕೊಡುವ ಹೊಲದ ಕಸುವಿಗಾಗಿ, ಜೀವನದ ಜೊತೆಗಾರನ ಸಂತೋಷಕ್ಕಾಗಿ ತನ್ನದೆಂಬುವ ಪ್ರತಿ ಕ್ಷಣವನ್ನೂ ಒತ್ತೆಯಿಟ್ಟಿದ್ದವಳು. ಅವಳದೊಂದು ನಿಸ್ವಾರ್ಥ ಪಯಣ.
“ಯೌವನವ ಕಳೆದವಳು ಚಿಂದಿಯ ಸೀರೆ ಉಟ್ಟುಕೊಂಡು.” More
ಇತ್ತೀಚಿನ ಟಿಪ್ಪಣಿಗಳು