ಈತ ರಾಜೇಶ್..

-ಅಭಯ ಸಿಂಹ

ಅಭಯ ಟಾಕೀಸ್

ಮುಂದಿನ ಚಿತ್ರ, ‘ಶಿಕಾರಿ’ ನಿರ್ಮಣಕ್ಕೆ ತಯಾರಿಗಳು ಭರದಿಂದ ಸಾಗಿದೆ. ಒಂದು ಸಂಜೆ ಗೆಳೆಯ ರಾಜೇಶನ ದೂರವಾಣಿ ಕರೆ ಬಂತು. ಅವನು ಐ.ಎ.ಎಸ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದ! ಎಂಥಾ ಸಂತೋಷದ, ಸಂಭ್ರಮದ ಸಮಯ ಅದು! ಕಳೆದ ಸುಮಾರು ಹತ್ತು ವರುಷಗಳ ಸ್ನೇಹ ನಮ್ಮದು. ಅದರ ಉದ್ದಕ್ಕೂ ಐ.ಎ.ಎಸ್ ತಯಾರಿಯಲ್ಲಿ ರಾಜೇಶ ಕಳೆದ ದಿನಗಳು, ರಾತ್ರಿಗಳು ನನಗೆ ಗೊತ್ತು. ದೆಹಲಿಯಲ್ಲಿನ ಚಳಿಯಲ್ಲಿ, ಸುಡು ಬಿಸಿಲಿನಲ್ಲಿ, ಮಂಗಳೂರಿನ ಕೊಂಪೆಯಂಥಾ ಹಾಸ್ಟೆಲ್ಲಿನಲ್ಲಿ, ಬೆಂಗಳೂರಿನ ಬಿಡುವಿಲ್ಲದ ಟ್ರಾಫಿಕ್ಕಿನಲ್ಲಿ, ಕಾಫೀ-ಹೌಸ್ ಕಾಫಿಯೊಂದಿಗೆ ಅದೆಷ್ಟೋ ಬಾರಿ ಭೇಟಿ ಮಾಡಿದ್ದೆವು, ಮನೆಯಲ್ಲಿ ರಾತ್ರಿ ಊಟ ಮಾಡಿ ಕೈ ಒಣಗುವವರೆಗೆ ಮಾತನಾಡಿ ಸಿಸ್ಟಂ ಸರಿ ಇಲ್ಲ ಎಂದು ಗೊಣಗಾಡಿದ್ದೆವು. ಅದಕ್ಕೆಲ್ಲ ಒಂದು ಸುಂದರ ಅಂತ್ಯವಾಗಿ ಈ ಸುದ್ದಿ ಕೊಟ್ಟ ರಾಜೇಶ, ಅನೇಕ ನಿಮಿಷಗಳವರೆಗೆ ನನ್ನನ್ನು ಮೂಕನನ್ನಾಗಿಸಿದ್ದ. ಆದರೆ ಇದು ಅಂತ್ಯವೇ? ಅಥವಾ ಹಳೇ ಸಿನೆಮಾಗಳಲ್ಲಿ ಹೇಳುವಂತೆ, “ಇದು ಅಂತ್ಯವಲ್ಲ, ಕೇವಲ ಆರಂಭ ಮಾತ್ರವೇ?!”

ಪದವಿ ಮಾಡುತ್ತಿರುವಾಗಲೇ ನನಗೆ ಮುಂದಿನ ವೃತ್ತಿ ಜೀವನದ ಕುರಿತಾಗಿ ನಿರ್ದಿಷ್ಟ ಗುರಿ ಸಿಕ್ಕಿದ್ದದ್ದು. ಆದರೆ ರಾಜೇಶನಿಗೋ ಅದು ಪಿ.ಯೂ.ಸಿ ಓದುತ್ತಿರುವಾಗಲೇ ಸ್ಪಷ್ಟವಾಗಿತ್ತು. ತಾನು ಐ.ಎ.ಎಸ್ ಆಗಲೇ ಬೇಕು ಎಂದು ಹಠವನ್ನು ಅವನು ಆಗಲೇ ತೊಟ್ಟಿದ್ದ. ಮಂಗಳೂರಿನ ಅಲೋಷಿಯಸ್ ಕಾಲೇಜಿಗೆ ಆರ್ಟ್ಸ್ ಓದಲು ಅವನು ಬಂದದ್ದೇ ಆ ಕಾರಣದಿಂದ. ನಾನು ಸಿನೆಮಾ ಆಯ್ಕೆ ಮಾಡಿದೆ, ಅವನು ಸಿವಿಲ್ ಸರ್ವೀಸ್. ಬ್ಯೂರೋಕ್ರಸಿ ಬಗ್ಗೆ ಒಳಗೊಳಗೆ ಇಬ್ಬರಿಗೂ ಅಷ್ಟಕ್ಕಷ್ಟೇ ಗೌರವ ಇದ್ದದ್ದಕ್ಕೆ ನಮ್ಮ ವ್ಯವಸ್ಥೆ ಕಾರಣ ಎನ್ನಲೇ? ಅಥವಾ, ನಾವು ವ್ಯವಸ್ಥೆಯನ್ನು ನೋಡುವ ನೋಟವನ್ನು ನೀಡಿದವರು ಕಾರಣವೇ ನಾನು ಅರಿಯೆ. ಆದರೆ ದಿನದಿಂದ ದಿನಕ್ಕೆ ವೃತ್ತಿಯ ಮೂಲಕ ನಮ್ಮಿಬ್ಬರ ಜಗತ್ತುಗಳು ಸಾಕಷ್ಟು ದೂರವಾದವು. ಆದರೆ ಅಭಿರುಚಿಗಳಿಂದಾಗಿ ಒಟ್ಟಿಗೇ ಇದ್ದೆವು, ಮತ್ತೆ ಮತ್ತೆ ಭೇಟಿಯಾಗುತ್ತಿದ್ದೆವು. ಭೇಟಿಯಾದಾಗಲೆಲ್ಲ, ಚಿತ್ರಜಗತ್ತಿನ, ಸೃಜನೇತರ ವಿಷಯಗಳ ಕುರಿತು ನಾನು ಮಾತನಾಡಿ ಬೇಸರಪಟ್ಟರೆ, ಅವನು ಅಧಿಕಾರವರ್ಗದ ಒಳತೋಟಿಗಳಿಗೆ ಧ್ವನಿಯಾಗುತ್ತಿದ್ದ. ಇಂಥವನು ಹೇಗೆ ಐ.ಎ.ಎಸ್ ಆಗಲು ಸಾಧ್ಯ ಎಂದು ಮನದೊಳಗೇ ನನಗೆ ಮೊದಲು ಪ್ರಶ್ನೆಗಳು ಇದ್ದವು.

ಬಿಹಾರದಂಥಾ ಹಿಂದುಳಿದ ರಾಜ್ಯದಲ್ಲಿ ಬಡತನದ ಬೇಗೆಯಲ್ಲಿ ಬಳಲುತ್ತಿರುವ ಅಸಂಖ್ಯ ಜನರು, ಕನಿಷ್ಟ ಅಧಿಕಾರದಿಂದ ನಮ್ಮ ಬಡತನ ನೀಗಲಿ ಎಂದು ಐ.ಎ.ಎಸ್ ಆಗುವ ಪ್ರಯತ್ನ ಮಾಡುವುದು, ಹೀಗೆ ಬಯಸಿ ಅಕಸ್ಮತ್ತಾಗಿ ಅಧಿಕಾರ ಸಿಕ್ಕಾಗ ಅದರ ದುರುಪಯೋಗ ಮಾಡಿ ಸ್ವಾರ್ಥ ಸಾಧಿಸುವವರು ಅನೇಕರು. ಇದು ಕೇವಲ ಬಿಹಾರಕ್ಕೆ ಸೀಮಿತವಲ್ಲ. ಇಂಥಾ ಅಧಿಕಾರದ ಹಸಿವಿನ ಜನರು, ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಬಯಸುವವರು ಅಸಂಖ್ಯರು. ಇಂಥವರ ಸಾಗರದಲ್ಲಿ ಈಜಿ ತಾನು ನಂಬಿದ ಮೌಲ್ಯಗಳಿಗೆ ಬದ್ಧವಾಗಲು ಹೊರಟಿದ್ದಾನೆ ನನ್ನ ಗೆಳೆಯ ಎಂದು ಅನೇಕ ಬಾರಿ ಹೆಮ್ಮೆಯೆನಿಸಿದರೂ, ಸಾಗರದ ಅಗಾಧತೆಯಲ್ಲಿ ನನ್ನ ಗೆಳೆಯ ಕೆಳೆದು ಹೋದಾನೇ ಎಂಬ ಆತಂಕವೂ ನನ್ನನ್ನು ಅನೇಕ ಬಾರಿ ಕಾಡಿದೆ. ಆದರೆ ಅದನ್ನೆಂದೂ ಆತನಿಗೆ ನಾನು ಹೇಳಿಲ್ಲ!

More

ತಂತ್ರಾಂಶಗಳನ್ನು ತಿಂದು ಬದುಕುವಂತಿದ್ದರೆ ಎಷ್ಟು ಚೆನ್ನ!

ಹಿರಿಯ ವಿಮರ್ಶಕ ವಿ ಎನ್ ಲಕ್ಷ್ಮಿ ನಾರಾಯಣ ಅವರು ವಿವೇಕ ರೈ ಅವರು ಬರೆದ

ಮೇ ದಿನ ಲೇಖನಕ್ಕೆ ನೀಡಿದ ಪ್ರತಿಕ್ರಿಯೆ ಇದು

ಕಳೆದದ್ದನ್ನು ಎಲ್ಲಿ ಕಳೆದುಕೊಂಡೆವೋ ಅಲ್ಲೇ ಹುಡುಕಬೇಕೆಂಬ ಗಾದೆ ಮಾತಿದೆ. ಬೇಳಕಿನಲ್ಲಿ ಹುಡುಕಬೇಕೆಂಬ ತಿಳುವಳಿಕೆಯ ಮಾತೂ ಇದೆ. ಮಾನವೀಯ ರೀತಿಯ ಶ್ರಮದ ಏರ್ಪಾಡಿನಲ್ಲಿ 8ಗಂಟೆಯ ದುಡಿಮೆ ಕಾರ್ಮಿಕರಿಗೆ ಮಾತ್ರವಲ್ಲ ಎಲ್ಲರಿಗೂ ಕಣ್ತುಂಬ ನಿದ್ದೆ ಮಾಡುವ, ವಿಶ್ರಾಂತಿ, ಸೃಜನಶೀಲತೆ, ಮನೋರಂಜನೆಗಳಿಗೆ ಪಾಪಪ್ರಜ್ಞೆಗೆ ಎಡೆಕೊಡದಂತೆ ಕಾಲಾವಕಾಶ ಕೊಡುವ ಆರೋಗ್ಯಕರವಾದ ಸಾಮಾಜಿಕತೆಯಿದೆ.

ಬಂಡವಾಳಿಗರು ಸಮಾಜವಾದದಿಂದ ಪಡೆದು ಕಸಿಮಾಡಿಕೊಂಡ ಕಲ್ಯಾಣರಾಜ್ಯದ ತೇಪೆ ಸಮಾಜದಲ್ಲಿಯೂ ಶ್ರಮಶಕ್ತಿಯನ್ನು ಮಾರಿ ಬದುಕುವ ಜನರಿಗೆ ಉದ್ಯೋಗಭದ್ರತೆಯಿದೆ. ಬೇಡುವ, ಆಗ್ರಹಿಸುವ,ಚರ್ಚಿಸುವ, ಸಂಧಾನ ನಡೆಸುವ, ಇವೆಲ್ಲಾ ವಿಫಲವಾದಾಗ ಮುಷ್ಕರ ನಡೆಸುವ ಹಕ್ಕುಗಳಿವೆ. ಹಳೆಯ ತೇಪೆ ರಾಜ್ಯದಲ್ಲಿ ಸಂಘಶಕ್ತಿಯನ್ನು ಬೆಳೆಸಿಕೊಳ್ಳುವುದೂ ಸಹ ಶ್ರಮಿಕರ ಮತ್ತೊಂದು ಪ್ರಮುಖ ಹಕ್ಕು. ಆದರೆ, ಪ್ರಜಾತಂತ್ರ, ಸ್ವಾತಂತ್ರ್ಯ,ಮಾನವಹಕ್ಕುಗಳ ದೊಗಲಂಗಿತೊಟ್ಟ ಫ್ಯಾಸಿಸಂ ಅಮೆರಿಕಾದಲ್ಲಿ ಅಧಿಕಾರ ಹಿಡಿದಿದೆ. ಶ್ರಮಶಕ್ತಿಯನ್ನು ಹೇಗೇ ಮಾರಿದರೂ 12ಗಂಟೆಗೆ ಕಡಿಮೆಇಲ್ಲದಂತೆ ಮಾರಬೇಕೆಂಬ ಒಳಶರತ್ತಿನ ಮುಕ್ತ ಮಾರುಕಟ್ಟೆ ಕಾರ್ಮಿಕರ ಎಲ್ಲಾ ಹಕ್ಕುಗಳನ್ನೂ TQM,ಗುತ್ತಿಗೆ,ಹೊರಗುತ್ತಿಗೆ ವಿಧಾನಗಳ ಮೂಲಕ ಮಣ್ಣುಪಾಲಾಗಿಸಿದೆ. ಅಮೆರಿಕೆಗೆ ಹೋಲಿಸಿದರೆ ಅಖಂಡ ನವಜರ್ಮನಿಯ ನವಫ್ಯಾಸಿಸ್ಟರು ಬಹಳ ಹಿಂದಿದ್ದಾರೆ.

ಇದೆಲ್ಲಾ ಹಳೆಯ ಯೋಚನೆ, ನಿಜ. ಏನುಮಾಡುವುದು, ನಾವಿನ್ನೂ ಈ ಜ್ವರಬಂದ ಹಳೆಯ ಭೂಮಿಯ ಮೇಲೇ ಇದ್ದೇವೆ.ಹೊಗೆ ಮುಚ್ಚಿದ್ದರೂ ಅದೇ ಹಳೇ ಆಕಾಶವೇ ವಿಮಾನಗಳಿಗೆ ಹಾರಲು ಬೇಕು.ಹಳೇಬೇಸರವಾದಾಗ, ಹಳೇಹಸಿವಾದಾಗ ಹಳೆ ವೈನ್ ಕುಡಿದು, ಹಳೆಕಾಲದ ಪದ್ಧತಿಯಲ್ಲಿ ಬೇಳೆದ ಸಾವಯವ ಬ್ರೆಡ್ ತಿಂದು ಹಳೆಯ ಸಂಬಂಧಗಳನ್ನು ಕಾಯ್ದುಕೊಳ್ಳಲು, ಸಾಹಿತ್ಯದಲ್ಲಿ ಹಳೆಯಸಾವಯವಶಿಲ್ಪ ವನ್ನು ಸಾಧಿಸಲು ಅದೇ ಹಳೆಯ ರೈತ-ಕಾರ್ಮಿಕರೇ ಬೇಕು. ಎಲ್ಲರೂ ತಂತ್ರಾಂಶಗಳನ್ನು ತಿಂದು ಬದುಕುವಂತಿದ್ದರೆ ಎಷ್ಟು ಚೆನ್ನ!

‘ಕತ್ಳು ಸತ್ಯ’ ಅವರ ಪುಸ್ತಕಗಳನ್ನು ಕೊಳ್ಳುತ್ತೀರಾ..?

-ಮಂಜುನಾಥ ಕೊಳ್ಳೇಗಾಲ

ನನ್ನ ಬರಹಗಳು

ಮೊನ್ನೆ ಸತ್ಯ ಇದ್ದಕ್ಕಿದ್ದಹಾಗೆ ಫೋನಾಯಿಸಿ “ನನ್ನ ಲೈಬ್ರರಿ sale ಮಾಡಬೇಕು ಅಂತಿದೀನಿ ಮಂಜು” ಅಂದಾಗ ಒಂದು ಕ್ಷಣ ಅವರು ಜೋಕ್ ಮಾಡುತ್ತಿದ್ದಾರೆನ್ನಿಸಿತು. ಕೂಲಾಗಿ “ಸರಿ ಮಾಡಿ, ಎಷ್ಟು ಬೇಕು ಹೇಳಿ ಕೊಡೋಣ” ಎಂದೆ. ನಾವು ಆಗಾಗ ಭೆಟ್ಟಿಯಾದಾಗೆಲ್ಲಾ ಅದೂ ಇದು ಕಾಡುಹರಟೆಯ ನಡುವೆ ಏನಾದರೂ ಹಣಕಾಸಿನ ಕಷ್ಟ-ಸುಖದ ವಿಷಯ ಬಂದರೆ “ನನ್ನ ಲೈಬ್ರರಿ ತಗೊಂಡು ಎರಡು ಸಾವಿರ ಕೊಡಿ ಮಂಜು” ಎನ್ನುವುದು, ನಾನು “ಅದು ತುಂಬಾ ಜಾಸ್ತಿಯಾಯಿತು” ಎಂದು ನಗೆಯಾಡುವುದು ವಾಡಿಕೆ. ಒಂದು ಕ್ಷಣ ಮೌನದ ನಂತರ ಹೇಳಿದರು “ಇಲ್ಲ ಮಂಜು, ನಾನು serious ಆಗಿ ಹೇಳ್ತಾ ಇದೀನಿ”.

ಅರೇ, ಹೌದಲ್ಲ. ಮೊನ್ನೆ ತಾನೆ ಹಠಾತ್ತಾಗಿ ತಮ್ಮನನ್ನು ಕಳೆದುಕೊಂಡ ದುಃಖದಲ್ಲಿದ್ದ ಸತ್ಯ ಜೋಕ್ ಮಾಡುವ ಮನಸ್ಥಿತಿಯಲ್ಲೇನೂ ಇಲ್ಲ ಎಂದು ಹೊಳೆಯಿತು. ಮತ್ತೆ? ನಿಜಕ್ಕೂ ಲೈಬ್ರರಿ ಮಾರಿಬಿಡುತ್ತಿದ್ದಾರೆಯೇ? ಕ್ಷಣ ನಂಬಲಾಗಲಿಲ್ಲ. ಹಾಗೊಂದುವೇಳೆ ಇದು ಜೋಕ್ ಅಲ್ಲವೆಂದಾದರೆ, ಈ ಮಾತು ಸತ್ಯನ ಬಾಯಲ್ಲಿ ಬರಲು ಸಾಧ್ಯವೇ ಇರಲಿಲ್ಲ. ಏಕೆಂದರೆ ನಾನು ಬಾಲ್ಯದಿಂದಲೂ ಬಲ್ಲ ಈತ ತಮ್ಮ ಪುಟ್ಟ ಲೈಬ್ರರಿ ಕಟ್ಟಿ ಬೆಳೆಸಿಕೊಂಡಿದ್ದ ಪರಿಯನ್ನು ಕಣ್ಣಾರೆ ಕಂಡಿದ್ದೆ.

ಚಿಕ್ಕಂದಿನಲ್ಲೇ ಸಿನೆಮಾ-ನಾಟಕ-ಸಾಹಿತ್ಯಗಳ ಗೀಳು ಹತ್ತಿಸಿಕೊಂಡು, ಮುಂದೊಮ್ಮೆ ಅದೇನೋ ಸಾಧಿಸುವ ಕನಸು ಕಣ್ಣಲ್ಲಿಟ್ಟುಕೊಂಡು ಓದು ಬಿಟ್ಟು ಊರು ಬಿಟ್ಟು ಬೆಂಗಳೂರು ಸೇರಿದ ಹುಡುಗ, ಕಲಾವಿದನಾಗಿ ಸಾಕಷ್ಟು ಬೆಳೆಯುತ್ತಾ, ಸಿಜಿಕೆ, ಬಿ.ವಿ.ಕಾರಂತ ಇತ್ಯಾದಿ ಘಟಾನುಘಟಿಗಳೊಂದಿಗೆ ದುಡಿಯುತ್ತಾ ಕಲೆಯ ಬದುಕನ್ನು ರೂಪಿಸಿಕೊಂಡರು. ಹವ್ಯಾಸಿ ರಂಗಭೂಮಿ ವಲಯದಲ್ಲಿ “ಕತ್ಲು ಸತ್ಯ” ಎಂದೇ ಹೆಸರಾಗಿದ್ದ ಸತ್ಯನಾರಾಯಣ, “ಬಾವಿ”, “ಡಾಂಬರು ಬಂದದ್ದು” ಇತ್ಯಾದಿ ಸ್ವತಃ ಕೆಲವು ನಾಟಕಗಳನ್ನೂ ರಚಿಸಿದ್ದಲ್ಲದೇ, ರಂಗಕರ್ಮಿ/ನಿರ್ದೇಶಕರಾಗಿ ಕೂಡ ಸಾಕಷ್ಟು ಹೆಸರು ಮಾಡಿದರು.

ಅರಸನ ಅಂಕೆಯಿಲ್ಲದೆ ದೆವ್ವದ ಕಾಟವಿಲ್ಲದೆ ಮನಸ್ಸಿಗೆ ಸರಿಕಂಡದ್ದನ್ನು ಮಾಡುತ್ತಾ, ತನಗಿಷ್ಟವಾದ ಬದುಕು ಬದುಕುವ, ಸರಳಾತಿಸರಳ ಜೀವನ ಶೈಲಿಯ ಸತ್ಯ ನಮಗೆಲ್ಲಾ ಒಂದುರೀತಿ ಅಸೂಯೆ ಹುಟ್ಟಿಸಿದ್ದ ವ್ಯಕ್ತಿ. ಈ ಸಿನಿಮಾ-ನಾಟಕಗಳ ಗೀಳಿಗೆ ಹತ್ತಿಕೊಂಡಂತೆ ಬಂದಿದ್ದ ಮತ್ತೊಂದು ಗೀಳು ಪುಸ್ತಕಗಳದು. ನಾವೆಲ್ಲಾ ಬೇಜಾರಾದಾಗ TV, ಸಿನೆಮಾ ನೋಡಿದರೆ ಈ ಮನುಷ್ಯ ಸುಳಿಯುತ್ತಿದ್ದುದು ಪುಸ್ತಕದ ಅಂಗಡಿಗಳ ಮುಂದೆ. ಊರಲ್ಲಿ ಎಲ್ಲಿ ಪುಸ್ತಕ ಮೇಳವಾದರೆ ಅಲ್ಲಿ ಸತ್ಯ ಹಾಜರು, ಕೈಗೊಂದು ಐದೋ ಆರೋ ಪುಸ್ತಕ ಖರೀದಿಸಿದ್ದೇ ಸೈ. ಕೊಳ್ಳಲು ಸೆಕೆಂಡ್ ಹ್ಯಾಂಡ್, ಫಸ್ಟ್ ಹ್ಯಾಂಡ್, ಅಗ್ಗ, ದುಬಾರಿಯ ಪ್ರಶ್ನೆ ಬರುತ್ತಲೇ ಇರಲಿಲ್ಲ. ಪುಸ್ತಕ ಅಪರೂಪದ್ದಾದರೆ, ಮೌಲಿಕವಾದದ್ದಾದರೆ ಅದು ಮನೆ ಸೇರಲೇಬೇಕು.

ಪುಸ್ತಕದ ಆಯ್ಕೆಯಲ್ಲಿ, ಆಟದ ಸಾಮಾನು ಆಯ್ದುಕೊಳ್ಳುವ ಹುಡುಗನ ತನ್ಮಯತೆ ಇರುತ್ತಿತ್ತು. ತಂದದ್ದು ಅಲಂಕಾರಕ್ಕಲ್ಲ, ಮುಂದೆರಡು ಮೂರು ದಿನ ಪಟ್ಟು ಹಿಡಿದು ಅದನ್ನು ಓದಿ ಮುಗಿಸಬೇಕು. ಬಹಳಷ್ಟು ಪುಸ್ತಕಗಳನ್ನು ಪುಸ್ತಕಮೇಳಗಳಲ್ಲೇ ಖರೀದಿಸುತ್ತಿದ್ದುದರಿಂದ, ಅದರಲ್ಲಿ ಬಹಳಷ್ಟು “ಭಾರಿ” ಪುಸ್ತಕಗಳೇ ಆದ್ದರಿಂದ ಇದೊಂದು ದುಬಾರಿ ಹವ್ಯಾಸವಾಗಿ ಪರಿಣಮಿಸಿತ್ತು. ಇವತ್ತು ಒಂದು ನೂರು ರುಪಾಯಿ ಉಳಿದರೆ ಒಂದು ಪುಸ್ತಕ್ಕಾದರೂ ಆಗುತ್ತದೆ ಎಂದು ಯೋಚಿಸುತಿದ್ದ ಸತ್ಯ, ಗಳಿಸಿದ, ಉಳಿಸಿದ ಹಣವನ್ನೆಲ್ಲಾ ಪುಸ್ತಕ ಕೊಳ್ಳಲು ಸುರಿಯುತ್ತಿದ್ದರು. ಹೀಗಾಗಿ ಈ ಪುಟ್ಟ ಲೈಬ್ರರಿ ಕೇವಲ ಲೈಬ್ರರಿ ಆಗಿರದೆ ಅವರ ವ್ಯಕ್ತಿತ್ವದ ಒಂದು ಭಾಗವಾಗಿತ್ತು. ಸುಮಾರು ೨೫೦೦ ಪುಸ್ತಕಗಳಿರುವ ಆ ಲೈಬ್ರರಿಯಲ್ಲಿ ಒಂದೊಂದು ಪುಸ್ತಕವೂ ಎಲ್ಲೆಲ್ಲಿ ಇದೆ, ಯಾವಾಗ ಕೊಂಡದ್ದು, ಅದರ ಹೂರಣವೇನು, ಯಾವ ಪುಸ್ತಕದ ಅಟ್ಟೆ ಎಲ್ಲಿ, ಯಾವಾಗ, ಏಕೆ ಹರಿದಿದೆ ಇತ್ಯಾದಿ ವಿವರಗಳನ್ನೆಲ್ಲಾ ಕರಾರುವಾಕ್ಕಾಗಿ ತಿಳಿಸಬಲ್ಲಷ್ಟು ತಾದಾತ್ಮ್ಯ ಸಿದ್ಧಿಸಿತ್ತು ಆ ಪುಸ್ತಕಗಳ ಜೊತೆ.ಬಂದವರೆದುರು ಈ ಸಂಗ್ರಹವನ್ನು ಪ್ರದರ್ಶಿಸುವುದೇ ಹೆಮ್ಮೆ. ಅದು ನಿಜ ಕೂಡ. Afterall, the collection was an owner’s pride.

More

ವೈದೇಹಿ ಪ್ರಶ್ನೆ ಒಂದು ಸಾಲು, ಹೋಟಲ್ ಮಾಲೀಕರ ಉತ್ತರ ಉದ್ದುದ್ದ!

-ಸಂದೀಪ್ ಕಾಮತ್

ಕಡಲ ತೀರ

ಇದು ಟೂ ಇನ್ ಒನ್ ಬರಹ ,ಹಾಗಾಗಿ ಬರಹದ ತಲೆಬರಹದ ತಲೆ ಬುಡ ಅರ್ಥ ಆಗಿಲ್ಲವಾದರೆ ದಯವಿಟ್ಟು ಕ್ಷಮಿಸಿ!

ನಿಮಗೆಲ್ಲ ಗೊತ್ತಿರುವ ಹಾಗೆ ’ದೇಶಕಾಲ’ದ ವಿಶೇಷ ಸಂಚಿಕೆ ಬಿಡುಗಡೆಯಾಗಿದೆ.ಈ ವಿಶೇಷ ಸಂಚಿಕೆಯಲ್ಲಿ ಎಷ್ಟು ಪುಟಗಳಿವೆ ಅಂತ ಎಣಿಸೋದಕ್ಕೇನೇ(ಪುಟಗಳ ಸಂಖ್ಯೆಯನ್ನು ಅದರಲ್ಲೇ ನಮೂದಿಸಿರುತ್ತಾರೆ ಅಂತ ನಂಗೂ ಗೊತ್ತು ಬಿಡಿ!) ಬಹಳಷ್ಟು ಸಮಯ ಬೇಕು.ಹಾಗಾಗಿ ಅವಸರವಸರದಲ್ಲಿ ದರ್ಶಿನಿ ಶೈಲಿಯಲ್ಲಿ ಇದನ್ನು ಓದಲು ಸಾಧ್ಯವೇ ಇಲ್ಲ.

ಹಾಗೆ ಸುಮ್ಮನೆ ಕಣ್ಣಾಡಿಸುವಾಗಲೇ ನನ್ನನ್ನು ಸೆಳೆದ ಒಂದು ಲೇಖನ ವೈದೇಹಿಯವರ ’ಹೋಟೆಲ್ ಪರ್ವ’!

ಇದು ವೈದೇಹಿಯವರು ಹೋಟೆಲ್ ಮಾಲಕರೊಬ್ಬರೊಂದಿಗೆ ನಡೆಸಿದ ಸಂದರ್ಶನ.ಸಂದರ್ಶನ ಕುಂದಾಪುರ ಕನ್ನಡದಲ್ಲಿದೆ.ಹೋಟಲ್ ಮಾಲಕರಿಗೆ ಸಾಕಷ್ಟು ಹಾಸ್ಯಪ್ರಜ್ಞೆ ಇದ್ದದ್ದರಿಂದ ತುಂಬಾ ತಮಾಷೆಯಾಗಿ ಆದರೆ ಅಷ್ಟೇ ಪರಿಣಾಮಕಾರಿಯಾಗಿ ಮೂಡಿ ಬಂದಿದೆ ಈ ಸಂದರ್ಶನ.ಹೋಟೇಲ್ ಮಾಲೀಕರು ಯಾರಾದರೂ(ಸಂದರ್ಶನ ಕೊಟ್ಟವರನ್ನು ಹೊರತು ಪಡಿಸಿ!) ಇದನ್ನು ಓದಿದರೆ ಸಿಟ್ಟು ಬರದೆ ಇರಲಾರದು !

ಹಾಸ್ಯಭರಿತ ಸಂದರ್ಶನ ಓದಿದ್ರೆ ಸಿಟ್ಟು ಯಾಕೆ ಅಂತೀರಾ?ಯಾಕಂದ್ರೆ ಹೋಟಲ್ ಮಾಲಕರ ಹಲವು ಟ್ರಿಕ್ಸ್ ಗಳನ್ನು ಪಾಪ ಅವರು ಈ ಸಂದರ್ಶನದಲ್ಲಿ ಹೇಳಿ ಬಿಟ್ಟಿದ್ದಾರೆ ! ಈ ಸಂದರ್ಶನ ಓದಿದಲ್ಲಿ ಖಂಡಿತ ಹೋಟಲ್ ಉದ್ಯಮದ ಕಷ್ಟ ನಷ್ಟಗಳು(ಲಾಭದ ವಿಚಾರ ಕೂಡಾ!) ತಿಳಿಯುವುದರಲ್ಲಿ ಸಂಶಯವೇ ಇಲ್ಲ.

ಇನ್ನೊಂದು ತಮಾಷೆಯ ಸಂಗತಿ ಅಂದ್ರೆ ವೈದೇಹಿಯವರ ಪ್ರಶ್ನೆಗಳು ಒಂದು ಸಾಲಿನವು,ಆದರೆ ಹೋಟಲ್ ಮಾಲೀಕರ ಉತ್ತರ ಮಾತ್ರ ಉದ್ದುದ್ದ!ಹೋಟಲ್ ಮಾಲಕರು ಮನ ಬಿಚ್ಚಿ ಮಾತಾಡಿದ್ದಕ್ಕೇ ಬಹುಷಃ ಸಂದರ್ಶನ ಅಷ್ಟು ಇಷ್ಟ ಆಗಿದ್ದು ನನಗೆ.

ಇಂಥ ಒಂದು ಸುಂದರ ಸಂದರ್ಶನ ಪ್ರಕಟಿಸಿದ್ದಕ್ಕೆ ’ದೇಶಕಾಲ’ಕ್ಕೆ ಅಭಿನಂದನೆಗಳು.ಈ ಸಂದರ್ಶನ ನಡೆಸಿದ ವೈದೇಹಿಯವರಿಗೆ ಧನ್ಯವಾದಗಳು.ಕೊನೆಯದಾಗಿ ಸಂದರ್ಶನ ನೀಡಿದ ಹೊಳ್ಳ(?!)ರಿಗೂ ಧನ್ಯವಾದಗಳು!

~~~~~~~~~~~~~~~~~~~~~~~~~~~~~~~~~~~~~~~~~~~~~~~

ಬಹಳಷ್ಟು ದಿನಗಳ ನಂತರ ಬೆಂಗಳೂರಿನಲ್ಲಿ ಶುದ್ಧ ಕನ್ನಡ ಕೇಳಲು ಸಿಕ್ಕಿತು!

FM ಚ್ಯಾನೆಲ್ ಗಳ ಕನ್ನಡ ಮಿಶ್ರಿತ ಇಂಗ್ಲೀಶ್, ಟಿ.ವಿ ಚ್ಯಾನಲ್ ರ ಇಂಗ್ಲೀಶ್ ಮಿಶ್ರಿತ ಕನ್ನಡದ ಹಾವಳಿಯ ನಡುವೆ ಅದೆಲ್ಲಿ ಶುದ್ಧ ಕನ್ನಡ ಕೇಳಿದೆ ಅಂತೀರಾ?

ವಿಜಯನಗರದ ಕರ್ನಾಟಕ ಕಲಾ ದರ್ಶಿನಿ(ರಿ)ಯವರು ಪುಟ್ಟ ಪುಟ್ಟ ಮಕ್ಕಳಿಂದ ’ಕೃಷ್ಣಾರ್ಜುನ ಕಾಳಗ’ ಅನ್ನೋ ಯಕ್ಷಗಾನ ಪ್ರಸಂಗ ಏರ್ಪಡಿಸಿದ್ದರು.ಬೆಂಗಳೂರಿನ ಮಕ್ಕಳ ಬಾಯಲ್ಲಿ ಶುದ್ಧ ಕನ್ನಡ ಕೇಳಿ ನನ್ನ ಕಿವಿಯೂ ಶುದ್ಧ ಆಯ್ತು ಅನ್ನಿ.ಹುಡುಗ/ಹುಡುಗಿಯರಲ್ಲಿ ಕೆಲವರು ಬೇಸಿಗೆ ಶಿಬಿರದ ಅಂಗವಾಗಿ ಯಕ್ಷಗಾನ ಕಲಿತರೆ ಇನ್ನು ಕೆಲವರು ಹವ್ಯಾಸವಾಗಿ ಅದನ್ನು ಕಲಿತವರು.ದಾರುಕನ ಪಾತ್ರ ಮಾಡಿದ ಹುಡುಗನಂತೂ ಅತ್ಯದ್ಭುತವಾಗಿ ಪಾತ್ರ ನಿರ್ವಹಿಸಿ ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದ.ಇನ್ನು ಅಭಿಮನ್ಯು ಪಾತ್ರದ ಹುಡುಗ ಧರ ಧರನೆ ತಿರುಗಿ ಕಡೆಗೆ ಚಂಗನೆ ನೆಗೆದು ತಾಯಿಯ ಸೊಂಟದಲ್ಲಿ ಕುಳಿತ ದೃಶ್ಯ ಮಜವಾಗಿತ್ತು.ನೆಗೆದು ಸೊಂಟದಲ್ಲಿ ಕೂತ್ಕೋ ಬೇಕಾದ್ರೆ ಎಷ್ಟು ಚಿಕ್ಕ ಹುಡುಗ ನೀವೇ ಲೆಕ್ಕ ಹಾಕಿ!

ಮಕ್ಕಳೆಲ್ಲ ಬೇಸಿಗೆ ಶಿಬಿರದ ಹೆಸರಲ್ಲಿ ಯಕ್ಷಗಾನ ಕಲಿತದ್ದು ನಿಜಕ್ಕೂ ಶ್ಲಾಘನೀಯ.ಕಲಿಯಲು ಅನುವು ಮಾಡಿಕೊಟ್ಟ ಶ್ರೀನಿವಾಸ ಸಾಸ್ತಾನ ಮತ್ತು ಆದಿಚುಂಚನಗಿರಿ ಮಠಕ್ಕೆ ಅಭಿನಂದನೆಗಳು.

%d bloggers like this: