ಶೀರ್ಷಿಕೆ ನೋಡಿ ‘ಇದೇನಪ್ಪ ತೇಜಸ್ವಿಗೂ 20:20 ಕ್ರಿಕೆಟ್ಟಿಗೂ ಏನು ಸಂಬಂಧ’ ಎಂದು ತಲೆಕೆರೆದುಕೊಳ್ಳಬೇಡಿ. ಇಂದು ನಮ್ಮ ತೇಜಸ್ವಿಯವರ 72ನೇ ಹುಟ್ಟಿದ ಹಬ್ಬ. ನನ್ನ ಬ್ಲಾಗಿನಲ್ಲಿ ಅವರ ಬಗ್ಗೆ ಏನಾದರೂ ಬರೆಯಬೇಕೆಂಬ ಆಸೆ ನನಗೆ. ಆದರೆ ಏನು ಬರೆಯುವುದು? ತೇಜಸ್ವಿ ಮತ್ತು ಅವರ ಸಾಹಿತ್ಯದ ನಿತ್ಯವಿದ್ಯಾರ್ಥಿಯಾದ ನನಗೆ ಅವರ ಬಗ್ಗೆ ಬರೆಯುವುದೆಂದರೆ ಭಾರೀ ಸಂಭ್ರಮ ಜೊತೆಗೇ ಭಯವೂ ಕೂಡಾ! ಬರೆಯುವುದಕ್ಕಿಂತ ಅವರ ಸಾಹಿತ್ಯವನ್ನು ಓದುತ್ತಾ ಮನಸ್ಸಿನಲ್ಲಿಯೇ ಅನುಸಂಧಾನ ಮಾಡಿ ಆನಂದಿಸುವುದೇ ನನಗೆ ಹೆಚ್ಚು ಇಷ್ಟ.
ಅವರ ಪುಸ್ತಕಗಳನ್ನು ಓದುವಾಗ ನನಗೆ ‘ಪಂಚಿಂಗ್ ಲೈನ್’ ಎಂದು ಕಂಡು ಬಂದ ವಾಕ್ಯಗಳನ್ನು ಅಡಿಗೆರೆ ಎಳೆಯುವುದು, ಬರೆದಿಟ್ಟುಕೊಳ್ಳುವುದು ಮಾಡಬೇಕೆಂದುಕೊಳ್ಳುತ್ತಿದ್ದೆ. ಆದರೆ ಓದುವಾಗ ಆ ವಿಷಯವೇ ಮರೆತು ಅವರ ಕೃತಿಗಳೊಳಗೆ ನಾನು ಇಳಿದುಬಿಡುತ್ತಿದ್ದೆ. ಇಲ್ಲ ಬಲವಂತವಾಗಿ ಅಡಿಗೆರೆ ಎಳೆಯಲು ಹೊರಟರೆ, ಓದುವುದೇ ನಿಂತುಹೋಗುತ್ತಿತ್ತು; ಜೊತೆಗೆ ಎಲ್ಲವೂ ಪಂಚಿಂಗ್ ಲೈನ್‌ಗಳಂತೆಯೇ ಕಾಣುತ್ತಿದ್ದವು! ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಮರುಓದಿಗೆ ಒಳಪಡಿಸುವಾಗ ಈ ರೀತಿಯ ಚಡಪಡಿಕೆ ಕಡಿಮೆಯಾಗುತ್ತಿರುವುದನ್ನು ನಾನು ಗಮನಿಸಿದ್ದೇನೆ. ಆದ್ದರಿಂದ ಇತ್ತೀಚಿಗೆ ನಾನು ಮತ್ತೆ ಓದಿದ ‘ಸಹಜಕೃಷಿ’ ಪುಸ್ತಕದಲ್ಲಿ ಈ ಅಡಿಗೆರೆ ಎಳೆಯುವ ಕಾರ್ಯದಲ್ಲಿ ಸ್ವಲ್ಪಮಟ್ಟಿನ ಯಶಸ್ಸು ನನ್ನದಾಗಿದೆ. ಹಾಗೆ ಅಡಿಗೆರೆ ಎಳೆದ ಸಾಲುಗಳಲ್ಲಿ ಇಪ್ಪತ್ತನ್ನು ಆಯ್ದು ಇಂದು ನಿಮ್ಮೆದುರಿಗೆ ಇಡುತ್ತಿದ್ದೇನೆ. ಅದಕ್ಕೇ ಈ T20=ತೇಜಸ್ವಿ ಟ್ವೆಂಟಿ!
ಚಿತ್ರ: ಡಿ ಜಿ ಮಲ್ಲಿಕಾರ್ಜುನ್
ಸಹಜಕೃಷಿಯನ್ನು ಓದದವರಿಗೆ ಈ ಸಾಲುಗಳನ್ನು ಓದಿ ಮೂಲಕೃತಿಯನ್ನು ಓದಬೇಕು ಎನ್ನಿಸಿದರೆ ನಾನು ಧನ್ಯ. ಈಗಾಗಲೇ ಸಹಜಕೃಷಿಯನ್ನು ಓದಿದವರೂ ಮತ್ತೊಮ್ಮೆ ಸಹಜಕೃಷಿಯನ್ನು ಓದುವಂತಾದರೆ ಡಬಲ್ ಖುಷಿ ನನ್ನದು.
ಓದುಗರಲ್ಲಿ ನನ್ನದೊಂದು ವಿನಂತಿ. ಇಲ್ಲಿನ ವಾಕ್ಯಗಳನ್ನು ಮೂಲಕೃತಿಯಿಂದ ಬೇರ್ಪಡಿಸಿ ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಬಾರದು. ಕೆಲವೊಂದು ವಾಕ್ಯಗಳನ್ನು ಪ್ರತ್ಯೇಕವಾಗಿ ಅರ್ಥೈಸಿಕೊಂಡಾಗ ‘ಇದೇನು ಹೀಗೆ?’ ಎಂಬ ಪ್ರಶ್ನೆಗಳು ಎದುರಾಗುತ್ತವೆ. ಆಗ ನಮಗೆ ತೋಚಿದ ಸಮಾಧಾನವನ್ನು ನಾವು ಆರೋಪಿಸಿಕೊಂಡು ಇನ್ನಷ್ಟು ಅನರ್ಥ ಮಾಡಿಕೊಳ್ಳುತ್ತೇವೆ. ಆದ್ದರಿಂದ, ಅಂತಹ ಸಂದಿಗ್ಧತೆ ತಲೆದೋರಿದಲ್ಲಿ, ಮೂಲಕೃತಿಯನ್ನು ಓದಿ ಅದರ ಹಿನ್ನೆಲೆಯಲ್ಲಿಯೇ ಅರ್ಥೈಸಿಕೊಳ್ಳಬೇಕು.
ಭಾರತದ ಆಧುನೀಕರಣದ ಕತೆಯೆಂದರೆ ಒಬ್ಬರ ಅನ್ನ ಇನ್ನೊಬ್ಬರು ಕಿತ್ತುಕೊಂಡ ಕತೆ.
ದಿನವೂ ನೂರಾರು ವಸ್ತುಗಳನ್ನು ಉತ್ಪಾದಿಸಿ ಜಾಹಿರಾತುಗಳ ಮುಖಾಂತರ ಪ್ರಚೋದಿಸುವ ಆಧುನಿಕ ಕೈಗಾರಿಕೆಗಳಿಗೆ ಸರಳ ಜೀವನ ಸೋಂಕು ರೋಗದಂತೆ ಭಯಾನಕವಾಗಿ ಕಾಣುತ್ತದೆ.
ಪೃಥ್ವಿಯ ಮೇಲೆ ಮಾನವ ಉದಿಸುವುದಕ್ಕೂ ಮೊದಲೇ ರೂಪುಗೊಂಡ ಈ ಗಿಡಮರಗಳಿಗೆ ಮಾನವನ ಕೃತಕ ಕೃಷಿಯ ಅಗತ್ಯವಿಲ್ಲ.
ಭೂಮಿ ಮಿಲಿಯಗಟ್ಟಲೆ ವರ್ಷಗಳಿಂದ ಜೀವಸೃಷ್ಟಿ ಮಾಡುತ್ತಾ ಬಂದ ಅದಮ್ಯ ಚೈತನ್ಯದ ಅಕ್ಷಯ ಪಾತ್ರೆ.
ಹಾಲು ಅಗತ್ಯವಾದರೆ ಹಾಲಿಗಾಗಿಯೇ ಇರುವ ತಳಿಗಳನ್ನು ಸಾಕಿ ಅವುಗಳಿಗೆ ಅಗತ್ಯವಾದ ಮೇವನ್ನು ರೈತನೇ ಬೆಳೆದು ನೋಡಿಕೊಳ್ಳುವುದು ವಿಹಿತವೇ ಹೊರತು ಒಣ ಹುಲ್ಲು ತಿಂದು ಮುರುಟಿಕೊಂಡ ಈ ಕ್ಷುದ್ರ ದನಗಳ ಮಂದೆಗಳಿಂದ ರೈತರು ಮುಕ್ತರಾಗುವುದೇ ಒಳ್ಳೆಯದು.
ಬುದ್ಧ, ಶಂಕರರಿಂದ ಹಿಡಿದು ಇಂದಿನವರೆಗೆ ಅನೇಕಾನೇಕ ಮಾಹಾನುಭಾವರು, ಪೂಜ್ಯರು ಭಾರತದಲ್ಲಿ ಈಗಾಗಲೇ ಯಥೇಚ್ಛವಾಗಿ ಇರುವುದರಿಂದ ಈ ಪೂಜ್ಯರ ಸಮುದಾಯಕ್ಕೆ ಫುಕೋಕಾ ಒಬ್ಬರನ್ನು ಸೇರಿಸಿಸುವುದು ನಮ್ಮ ರೈತ ಕೋಟಿಗೂ, ಫುಕೋಕಾರವರಿಗೂ ನಾನು ಅನ್ಯಾಯ ಮಾಡಿದಂತೆ.
ಭಾರತದ ರೈತರಲ್ಲಿ ಕೆಲವರು ಎಂಥ ದುರಾಸೆಯವರೂ ಲೋಭಿಗಳೂ ಆಗಿದ್ದಾರೆಂದರೆ ಸಬ್ಸಿಡಿ ಸಾಲ ಎಂದರೆ ಸಾಕು ಅದು ಒಳ್ಳೆಯದೋ ಕೆಟ್ಟದ್ದೋ ಎಂದೂ ಯೋಚಿಸದೆ ನುಂಗಿ ನೀರು ಕುಡಿಯುತ್ತಾರೆ.
ಒಂದು ವಿಷ ಒಂದು ಜೀವ ಸಮುದಾಯವನ್ನು ಮಾತ್ರ ಕೊಂದು ಇನ್ನೊಂದನ್ನು ಬಿಡುತ್ತದೆ ಎಂದು ಹೇಳುವ ಸಿದ್ಧಾಂತವೇ ತಪ್ಪು.
ಕೃಷಿಕ ಭಾರತದಲ್ಲಿ ಮನಸ್ಸು, ಆತ್ಮ, ವ್ಯಕ್ತಿತ್ವಗಳಿಲ್ಲದ ಕೇವಲ ಉತ್ಪಾದಕನಾಗಿ ಮಾತ್ರ ಅಸ್ತಿತ್ವ ಪಡೆದಿದ್ದಾನೆ.
ನಮ್ಮ ಸರ್ಕಾರಗಳು ರೈತರ ಉತ್ಪನ್ನಗಳಿಗೆ ನ್ಯಾಯಯುತ ಲಾಭಕರ ಬೆಲೆ ನೀಡುವುದೊಂದನ್ನುಳಿದು ಮಿಕ್ಕಿದ್ದನ್ನೆಲ್ಲಾ ಮಾಡುತ್ತದೆ. ಕೃಷಿ ಉತ್ಪಾದನೆ ಹೆಚ್ಚಿಸಲು ಅತಿ ಸೂಕ್ತ ಮಾರ್ಗವೆಂದರೆ ರೈತನಿಗೆ ಲಾಭಕರ ಬೆಲೆಯೇ ಹೊರತು ಮಿಕ್ಕುದೆಲ್ಲ ನೀರಿನಲ್ಲಿ ಹೋಮ ಮಾಡಿದಂತೆ.
ಟ್ರ್ಯಾಕ್ಟರ್ ಸಾಲ, ಟಿಲ್ಲರ್ ಸಾಲ, ಗೋಬರ್ ಗ್ಯಾಸ್ ಸಾಲ, ಪಂಪ್ ಸೆಟ್ ಸಾಲ, ಸ್ಪ್ರೆಯರ್ ಸಾಲ ಹೀಗೇ ನೂರಾರು. ರೈತ ಒಂದು ತೀರಿಸಲು ಇನ್ನೊಂದು ಸಾಲಕ್ಕೆ ನೆಗೆಯುತ್ತಾ ಬಾಣಲೆಯಿಂದ ಬಾಣಲೆಗೆ ಹಾರುತ್ತಿದ್ದಾನೆ. ಬಾಣಲೆಗಳ ಸರಣಿ ಮುಗಿದು ಬೆಂಕಿಗೆ ಯಾವಾಗ ಹಾರುತ್ತಾನೋ ನೋಡಬೇಕಾಗಿದೆ.
ದಿಲ್ಲಿಯಲ್ಲಿ ಕುಳಿತು ಹಳ್ಳಿಗರ ಉದ್ಧಾರಕ್ಕೆ ಶಿಫಾರಸ್ ಮಾಡುವ ಕ್ರಮದಿಂದಲೇ ಯೋಜನೆಗಳು ಹಾಳಾದವು. ಹಳ್ಳಿಯವರ ಪೂರ್ವಾರ್ಜಿತ ವಿವೇಕ ಹಾಗೂ ಉದ್ಯಮಗಳೂ ನಾಶವಾದವು.
ಒಂದು ರಾಷ್ಟ್ರದ, ಸರ್ಕಾರದ ಸಂಕ್ಷಿಪ್ತ ರೂಪವೇ ಪ್ರಜೆ.
ಹುಲ್ಲು ಬೆಳೆದ ಭೂಮಿ ಮಾತ್ರ ದನ ಎಷ್ಟು ಮೆಯ್ದರೂ ಸಾರಹೀನವಾಗುವುದಿಲ್ಲ. ಧಾನ್ಯ ತರಕಾರಿ ಬೆಳೆದ ಭೂಮಿ ಮಾತ್ರ ಬಂಜರು ಬೀಳುತ್ತದೆಯೇ?
ನಿರ್ದಿಷ್ಟ ಹಾಗೂ ಖಚಿತ ಅರ್ಥ ಉದ್ಧೇಶಗಳಿಲ್ಲದ ಈ ಶಾಸ್ತ್ರ ಆಚಾರಗಳಿಂದ ಇವತ್ತಿನ ಅತಿ ಸಂಕೀರ್ಣ ಆಧುನಿಕ ಜಗತ್ತಿನ ಸವಾಲುಗಳನ್ನು ಎದುರಿಸಬಹುದೆಂದು ನಾನು ತಿಳಿದಿಲ್ಲ.
ಒಂದು ಸಾರಿ ನಾವು ವೈಜ್ಞಾನಿಕ ವಿವೇಚನೆಯನ್ನು ತ್ಯಜಿಸಿ ಶಾಸ್ತ್ರಚಾರಗಳ ಅನುಸರಣೆಗಿಳಿದೆವೆಂದರೆ ಅಲ್ಲಿಗೆ ಅಂಧಶ್ರದ್ಧೆಯ ಅಂಕುರಾರ್ಪಣೆಯಾಯ್ತೆಂದೇ ತಿಳಿಯಿರಿ.
ಕೈಗಾರಿಕೀಕರಣದ ಮುಂಚೂಣಿಯಲ್ಲಿರುವ ಮುಂದುವರೆದ ದೇಶಗಳಲ್ಲಿ ವೈಜ್ಞಾನಿಕ ಆಧಾರದ ಮೇಲೆಯೇ ರಾಸಾಯನಿಕ ಕೃಷಿಯ ಅನಿಷ್ಟಗಳ ವಿರುದ್ಧ ಆಂದೋಳನ ಸಂಭವಿಸುತ್ತಿರುವಾಗ ನಾವೇಕೆ ಗೊಡ್ಡು ಸಂಪ್ರದಾಯಗಳ ಬೆಂಬಲ ತೆಗೆದುಕೊಳ್ಳಬೇಕು?
ಒಂದು ಸಿಗರೇಟನ್ನಾಗಲಿ, ನಶ್ಯವನ್ನಾಗಲಿ ಬಿಡುವುದಕ್ಕೆ ಸಾಧ್ಯವಾಗದ ನಮ್ಮಂಥ ಕ್ಷುದ್ರಜೀವಿಗಳಿಗೆ ಪರಂಪರಾಗತವಾಗಿ ಬೆಳೆದು ಬಂದಿರುವ ರೈತನ ಅಭ್ಯಾಸಗಳನ್ನು ಬಿಡುವಂತೆ ಹೇಳುವ ನೈತಿಕ ಸ್ಥೈರ್ಯ ಸಹ ಕಡಿಮೆಯಾಗಿದೆ.
ಸಹಜ ಕೃಷಿ ಪದ್ಧತಿಯಿಂದ ಬೆಳೆದು ತೋರಿಸುವ ಒಂದೇ ಒಂದು ಎಕರೆ ಹೊಲ ಅಥವಾ ಗದ್ದೆ ಸಹಜ ಕೃಷಿ ಆಂದೋಳನದ ಕಾಳ್ಗಿಚ್ಚಿಗೆ ಕಿಡಿಯಾಗುತ್ತದೆ. ಈ ಕ್ರಾಂತಿಯನ್ನು ಸಾದ್ಯಮಾಡಿ ತೋರಿಸುವ ಮಹಾನುಭಾವ ಯಾರಿರಬಹುದೆಂದು ನಾನು ಕುತೂಹಲದಿಂದ ಯೋಚಿಸುತ್ತೇನೆ!
ಫುಕೋಕಾ ತಮ್ಮ ಗುರಿಸಾಧನೆಯಲ್ಲಿ ಗಾಂಧಿ, ಲೋಹಿಯಾ ಜೇಪಿ ಮುಂತಾದವರಿಗಿಂತ ಹೆಚ್ಚು ಸಫಲರಾಗಿದ್ದಾರೆ. ಬಹುಶಃ ಇದಕ್ಕೆ ಕಾರಣ ಫುಕೋಕಾ ಕಾರ್ಯಸಾಧನೆಯೆಲ್ಲ ಮರ ಗಿಡಗಳ ಬಳಿಯೇ ಆದ್ದರಿಂದ, ಸುಳ್ಳು ಹೇಳುವ, ದ್ರೋಹ ಬಗೆಯುವ ಮಾನವರಿಂದ ಕೂಡಿದ ಸಾಮಾಜಿಕ ಪರಿಸರದಲ್ಲಿ ಗಾಂಧಿ, ಲೋಹಿಯಾ, ಜೇಪಿ ಮುಂತಾದವರು ಅನುಭವಿಸಿದ ತೊಂದರೆಗಳನ್ನು ಅನುಭವಿಸಿರಲಾರರು.
ಪುಸ್ತಕದ ಹೆಸರು : ಸಹಜಕೃಷಿ
ಲೇಖಕರು : ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ಪ್ರಕಾಶಕರು : ಪುಸ್ತಕ ಪ್ರಕಾಶನ, ಮೈಸೂರು.
೧೯೯೧ರಲ್ಲಿ ಮೊದಲ ಮುದ್ರಣವಾಗಿದ್ದ ಈ ಕೃತಿ ೨೦೦೪ರ ಹೊತ್ತಿಗೆ ಹತ್ತನೇ ಮುದ್ರಣ ಕಂಡಿತ್ತು.
ಕೃತಿಯ ಬೆನ್ನುಡಿಯಿದು:
ಫುಕೋಕಾ ತಮ್ಮ ಸಹಜ ಕೃಷಿ ಹಿನ್ನೆಲೆಯಲ್ಲಿ ಮಂಡಿಸುವ ತತ್ವ ಮತ್ತು ಸಿದ್ಧಾಂತಗಳು ಕೇವಲ ರೈತರ ಕೃಷಿ ಕ್ಷೇತ್ರಕ್ಕೆ ಮಾತ್ರವೇ ಸೀಮಿತವಾಗಿರದೆ ಕಲೆ, ಸಾಹಿತ್ಯ, ಸಂಗೀತ ಮತ್ತು ತತ್ವಮೀಮಾಂಸೆಯ ಮೇಲೆ ದೂರಗಾಮಿಯಾದ ಪರಿಣಾಮಗಳನ್ನು ಬೀರುವುದರಲ್ಲಿ ಸಂಶಯವಿಲ್ಲ. ಸಹಜ ಕೃಷಿ ರಾಸಾಯನಿಕ ಕೃಷಿಯಂತೆ ಆಹಾರ ಬೆಳೆಯುವ ಸಿದ್ಧಸಮೀಕರಣವನ್ನು ನೀಡುವುದಿಲ್ಲ. ಅದು ಒಂದು ಜೀವನ ಕ್ರಮ, ಆಲೋಚನಾ ವಿಧಾನ, ಆಧ್ಯಾತ್ಮಿಕ ದೃಷ್ಟಿಯನ್ನೂ ಬೋಧಿಸುತ್ತದೆ. ಆದರೆ ರಾಸಾಯನಿಕ ಕೃಷಿಯಿಂದ ತೊಂದರೆಗೊಳಗಾಗಿರುವ ಭಾರತದ ಕೃಷಿ ಕ್ಷೇತ್ರಕ್ಕೆ ಮುಖ್ಯವಾಗಿ ಬೇಕಾಗಿರುವುದು ಅವರ ಕೃಷಿ ಪದ್ಧತಿ. ಅದನ್ನು ಪ್ರಮುಖವಾಗಿಟ್ಟುಕೊಂಡು ಇಲ್ಲಿ ಸಹಜ ಕೃಷಿಯನ್ನು ವಿವೇಚಿಸಲಾಗಿದೆ.
ಏಪ್ರಿಲ್ 05, 2010 @ 09:24:19
ತೇಜಸ್ವಿಯವರ ಕೃತಿಗಳು ಇಂಥ ಮುತ್ತುಗಳ – ಕೃತಕ ಮುತ್ತುಗಳಲ್ಲ, ನಿಜಮುತ್ತುಗಳ – ಆಗರ. ಒಂದಿಪ್ಪತ್ತು ಮುತ್ತು ಎತ್ತಿಕೊಟ್ಟ ಸತ್ಯನಾರಾಯಣರಿಗೆ ಧನ್ಯವಾದ.
ಏಪ್ರಿಲ್ 05, 2010 @ 08:05:08
ತೇಜಸ್ವಿಯವರ ಬದುಕು-ಬರಹ, ಛಾಯಾ-ಚಿತ್ರ
ಪ್ರತಿಯೊಂದು.. ಅವರು ಹೇಳುವುದಿಲ್ಲ..
ಜೊತೆಯಲ್ಲಿಯೇ ಕರೆದೊಯ್ಯುವ ಸಿದ್ಧಯಾತ್ರೆ.
ಪ್ರತಿ-ಪದ ದೊಂದಿಗೆ ಅದ್ಭುತ,ವಿಸ್ಮಯ,ಅಪರೂಪಗಳನ್ನು
ಬಿಚ್ಚಿಡುವ ಬುತ್ತಿಗಳು..
ಸೆಪ್ಟೆಂ 10, 2009 @ 19:03:16
kannada sadyadalli kandanta prakriyaavaadi endare tejaswi maatra.Satyanaarayana avarige dhanyavadagaLU.
ಸೆಪ್ಟೆಂ 08, 2009 @ 12:11:56
Well Done Satyanaarayan sir,
Nanu sahaja Krushi odideeni.
Tajaswi huttu habbakke olle lekhana.
Sunil.