ಮೌಲ್ಯಗಳ ಪುಡಾರೀಕರಣ

ಚರ್ಚೆಗೆ ಸ್ವಾಗತ. ಚರ್ಚೆ ಲೇಖನದ ವಿಮರ್ಶೆಯಂತಿರಲಿ. ಪ್ರಕಟಿಸಲಾಗದ ಸ್ಥಿತಿಯಲ್ಲಿದ್ದರೆ ಪ್ರತಿಕ್ರಿಯೆಗಳನ್ನು ತಡೆಹಿಡಿಯಲಾಗುವುದು

ಜಿ ಎನ್ ಅಶೋಕವರ್ಧನ

ನನ್ನ ಪುಸ್ತಕೋದ್ಯಮದ (ಖರೀದಿ, ಮಾರಾಟ ಮತ್ತು ಪ್ರಕಟಣೆ) ಅನುಭವಗಳಲ್ಲಿ ‘ಅಪೂರ್ವ ಸ್ವಾದ’ ಕಂಡದ್ದೂ ಇದೆ, ‘ತುತ್ತಿನ ಕಲ್ಲು’ ಉಗುಳಿದ್ದೂ ಇದೆ. ಆದರೆ ಇವುಗಳಲ್ಲಿ ವೈಯಕ್ತಿಕತೆಯನ್ನು ಮೀರಿ, ಸಾಮಾಜಿಕ ಕುಶಿ ಅಥವಾ ಚಿಂತನೆಯ ಭಾಗಗಳಾಗುವಂತವನ್ನು ಎಚ್ಚರದಿಂದ ಸಾರ್ವಜನಿಕದಲ್ಲಿ ಹಂಚಿಕೊಂಡಿದ್ದೇನೆ. ಹಾಲಾಹಲವಾದರೆ ನೀಲಕಂಠನಾದರೂ ಸರಿ, ಅಮೃತ ಮೂಡಿದರೆ ಮೋಹಿನಿಯಾಗಲೇಬೇಕು (ಅನ್ಯಾರ್ಥಗಳನ್ನು ಮರೆತುಬಿಡಿ). ಈ ಮರೆಯಬಾರದ ಸಂಕೇತಗಳ ಪ್ರೇರಣೆಯಲ್ಲಿ ಫೆಬ್ರುವರಿ ೨೩ಕ್ಕೆ ನಾನು ಕೆಳಗೆ ಕಾಣಿಸಿದ ಲೇಖನ ಬರೆದೆ. ಮಿಂಚಂಚೆಯಲ್ಲಿ ಉದಯವಾಣಿಯ ಗೆಳೆಯ ಸತ್ಯಗಣಪತಿಗೆ ಕಳಿಸಿ “ಬೇಕೇ” ಕೇಳಿದೆ. ನನ್ನ ಕಾತರಕ್ಕೆ ಆತ ಉತ್ತರಿಸಲಿಲ್ಲ; ನಿರೀಕ್ಷೆ ಮೀರಿದ ಚುರುಕಿನಲ್ಲಿ ಮರುದಿನವೇ ಪ್ರಕಟಿಸಿಬಿಟ್ಟರು!

ಇಂದು ಮಾಧ್ಯಮಗಳ ವೈವಿಧ್ಯಕ್ಕೆ ತಕ್ಕಂತೆ ಸಂಪರ್ಕ ಸಾಧ್ಯತೆಗಳೂ ವಿಭಿನ್ನ. ಹಾಗಾಗಿ ಮೇ ಫ್ಲವರ್ ಮೀಡಿಯಾ ಹೌಸಿನ ಗೆಳೆಯ ಜಿ.ಎನ್. ಮೋಹನ್ನರಿಗೂ ಇದೇ ಲೇಖನವನ್ನು ದೂಡಿ (ಫಾರ್ವರ್ಡಿಸಿ), ಸೂಚಿಸಿದೆ, ‘ಇದು ಇಂದಿನ ಉದಯವಾಣಿಯಲ್ಲಿ ಪ್ರಕಟವಾಗಿದೆ. ನಿಮಗೆ ಬೇಕಾದಂತೆ ಬಳಸಿಕೊಳ್ಳಿ. ಅವರೂ ಮರುಕ್ಷಣದಲ್ಲಿ ತಮ್ಮ ‘ಅವಧಿ’ ಕೊಂಡಿಯ ಮೂಲಕ ‘ಓದುಬಜಾರ್’ ನಲ್ಲಿ ಪ್ರಕಟಿಸಿದರು.

ಈ ಕುರಿತು ಪುತ್ತೂರಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗೆ ನಾನು ಮೊದಲೇ ನೇರ ಪತ್ರವನ್ನೇ ಬರೆದಿದ್ದೆ. ಅದಕ್ಕೂ ಈ ಪತ್ರಿಕಾ ಲೇಖನಕ್ಕೂ ಅವರಿಂದ ಇದುವರೆಗೆ ಉತ್ತರ, ಪ್ರತಿಕ್ರಿಯೆ ಬಂದಿಲ್ಲ.

ವೃತ್ತಿಜೀವನ ಕಾಲದಲ್ಲಿ ಓರ್ವ ಪ್ರೌಢಶಾಲಾ ಶಿಕ್ಷಕನಷ್ಟೇ ಆಗಿದ್ದ, ಆದರೆ ಆಗಲೂ ಈಗಲೂ (ನಿವೃತ್ತಿಯ ದಿನಗಳು) ಉನ್ನತಮಟ್ಟದ, ಕ್ರಿಯಾಶೀಲ ಶಿಕ್ಷಣತಜ್ಞನಾಗಿ ದುಡಿಯುತ್ತಿರುವ ಸಿ.ಎಚ್ ಕೃಷ್ಣ ಶಾಸ್ತ್ರಿಗಳು ಉದಯವಾಣಿ ನೋಡಿದ ಕೂಡಲೇ ದೂರವಾಣಿಸಿ, ಸ್ಪಷ್ಟನುಡಿಗಳೊಡನೆ ನನ್ನನ್ನು ಬೆಂಬಲಿಸಿದರು. ಮಂಗಳೂರಿಗೆ ಬರುವ ಮೊದಲ ಅವಕಾಶದಲ್ಲಿ ನನ್ನನ್ನು ಭೇಟಿಯಾಗಿ, ಸರಕಾರೀ ಯೋಜನೆಗಳು ಆರ್ಥಿಕ ವಹಿವಾಟಿನಲ್ಲಿ ಕಾಣಿಸುವ ಯಶಸ್ಸನ್ನು ಕಾರ್ಯರಂಗದಲ್ಲಿ ಕಾಣಿಸುತ್ತಿಲ್ಲವೇಕೆ ಎನ್ನುವುದಕ್ಕೆ ಅವರು ಸ್ವಾನುಭವದ ಉದಾಹರಣೆಯೊಡನೆ ವಿವರವಾಗಿ ಮಾತಾಡಿದರು. (ಅನ್ಯಾತಿಕ್ರಮಣದ ಎಚ್ಚರದಲ್ಲಿ ಅವರು ಕೊಟ್ಟ ಉದಾಹರಣೆಯನ್ನು ನಾನಿಲ್ಲಿ ಉದ್ಧರಿಸಿಲ್ಲ.)

‘ಅವಧಿ’ಯಲ್ಲಿ ‘ಶಿವ’ ಹೆಸರಿನ ಅಪರಿಚಿತರೊಬ್ಬರು ಕೂಡಲೇ ಪ್ರತಿಕ್ರಿಯಿಸಿದರು. “ನಾವೂ ಸಾರ್ವಜನಿಕರೇ. ಇಲ್ಲಿ ನಮಗೇನೂ ಬೆಪ್ಪುತಕ್ಕಡಿ ಆಗಿದ್ದೇವೆ ಅನ್ನಿಸುತ್ತಿಲ್ಲ ಅಂದಮೇಲೆ ಭಾರತ ಭಾರತಿ ಪುಸ್ತಕಗಳು ಹಿಂದೂದೇಶದ’ ಪರಿಕಲ್ಪನೆಗೆ ಪೂರಕವಾಗುವಂತೆ ಇವೆ ಎಂಬುದು ಲೇಖಕರ ಪೂರ್ವಗ್ರಹವಿರಬಹುದು.” ನನ್ನ ಪ್ರತಿ ಟಿಪ್ಪಣಿ, “ಶಿವಣ್ಣಾ ನಾನು ಕನ್ನಡ ಭಾರತ ಭಾರತಿ ಪುಸ್ತಕಗಳ ವಿಮರ್ಶೆ ಬರೆದದ್ದಲ್ಲ. ಸಾರ್ವಜನಿಕ ವ್ಯವಸ್ಥೆಗಳು ಪಕ್ಷ ರಾಜಕೀಯಕ್ಕೆ ಬಲಿಯಾಗುತ್ತಿರುವುದನ್ನು ಹೇಳ್ತಾ ಇದ್ದೇನೆ.” ಜೊತೆಯಲ್ಲೇ ಎರಡು ಗೆಳೆಯರ ಗಮನಾರ್ಹ ಟಿಪ್ಪಣಿಗಳೂ ಪ್ರಕಟವಾಗಿವೆ. ಪಂಡಿತಾರಾಧ್ಯ ಬರೆಯುತ್ತಾರೆ “ನಾವು ತಕ್ಕಡಿಯ ಯಾವ ತಟ್ಟೆಯಲ್ಲಿದ್ದೇವೆ ಎನ್ನುವುದು ನಮ್ಮ ಬಗ್ಗೆ ತಿಳಿಸುತ್ತದೆ. ಮಾನ್ಯ ಶಿವ ಅವರಿಗೆ ಇಡಿ ವ್ಯವಹಾರದಲ್ಲಿ ಯಾವ ಬೆಪ್ಪು ಗೋಚರಿಸದಿರುವುದು ಸ್ವಯಂ ವೇದ್ಯವಾಗಿದೆ.” ಡಿ.ಎಸ್ ನಾಗಭೂಷಣ ಬರೆಯುತ್ತಾರೆ, “ಪುಸ್ತಕ ಮಾರಾಟ ಬರೀ ಮಾರಾಟ ವ್ಯವಹಾರವಲ್ಲ; ಅದೊಂದು ನೈತಿಕ ಜವಾಬ್ದಾರಿಯ ಕೆಲಸ ಎಂಬುದನ್ನು ಪ್ರಿಯ ಅಶೋಕವರ್ಧನ ಅವರು ಈ ಲೇಖನದ ಮೂಲಕ ವಿಷದೀಕರಿಸಿದ್ದಾರೆ. ಹಿಂದೂ ದೇಶದ ಪರಿಕಲ್ಪನೆಯನ್ನು ಒಪ್ಪುವುದು ಬಿಡುವುದು ಬೇರೆ ವಿಷಯ. ಆದರೆ ಸಾರ್ವಜನಿಕರ ಹಣವನ್ನು ತಮಗೆ ಬೇಕಾದ ಒಂದು ಪ್ರಕಾಶನವನ್ನೂ, ಒಂದು ಸಿದ್ಧಾಂತವನ್ನೂ ಬೆಳಸಲು ಬಳಸುವುದು ಅನೈತಿಕ ಮತ್ತು ಖಂಡನಾರ್ಹ.”

ಹಂಪಿಯಲ್ಲಿ ಕೃಷ್ಣದೇವರಾಯನ ನೆಪದಲ್ಲಿ ಸಾರ್ವಜನಿಕ ಹಣದ ಭರ್ಜರಿ ವಿನಿಯೋಗ (ಒಂದು ಪತ್ರಿಕಾ ವರದಿಯ ಪ್ರಕಾರ ಎಪ್ಪತ್ತೈದು ಕೋಟಿ ರೂಪಾಯಿಗಳು) ನಡೆದದ್ದು ನಿಮಗೆಲ್ಲಾ ತಿಳಿದೇ ಇದೆ. ಹಿಂಬಾಲಿಸಿದಂತೆ (ಹಿಂಬಾಗಿಲ ಮೂಲಕ?) ಕನ್ನಡ ವಿಶ್ವವಿದ್ಯಾಲಯದ ಎಂಬತ್ತು ಎಕ್ರೆಗೆ ಪದಾರ್ಪಣೆ, ಅದೇನೋ ಉದಾತ್ತ ಹೆಸರಿನ ಸಂಸ್ಥೆಯ ಅವತರಣ ಎಲ್ಲಾ ನಡೆದುಹೋಗಿದೆ. ಇದರ ಲಕ್ಷಣ, ವ್ಯಾಪ್ತಿ ಪ್ರಜಾಪ್ರಭುಗಳಿಗೆ ತಿಳಿಯುವ ಮುನ್ನವೇ ಅದಕ್ಕೆಷ್ಟೋ ಕೋಟಿಯ ಅನುದಾನವೂ ಸರಕಾರದಿಂದ ಒದಗಿದ್ದೂ ಆಗಿದೆ. ಮತ್ತಿದು ರಾಜ್ಯಕೋಶಕ್ಕೆ ಒಮ್ಮೆ ಬಡಿದ ಸುನಾಮಿಯಾಗಬಾರದು. ನಿರಂತರ ಹಿಂಡುವ ಏಡಿಗಂತಿಯಾಗಬೇಕು ಎಂಬ ಮಹತ್ವಾಕಾಂಕ್ಷೆ ಯೋಜನೆಯಲ್ಲಿ ಸ್ಪಷ್ಟವಾಗುತ್ತಿದೆ.

ವಿವಿಧ ಸಾರ್ವಜನಿಕ ಹುದ್ದೆಗಳಲ್ಲಿ ಮೆರೆದು, ಪ್ರಾಯದೋಷದಿಂದ ಮರೆ (ನಿವೃತ್ತಿ) ಆಗಲೇ ಬೇಕಾದವರು ಸೃಷ್ಟಿಸಿಕೊಂಡ ಹತ್ತು ಹಲವು ಉದಾತ್ತನಾಮದ ಅನುದಾರ ಸಂಸ್ಥೆಗಳನ್ನು ‘ನಾವು’ ಸಹಿಸಿಕೊಳ್ಳುತ್ತಲೇ ಬಂದಿದ್ದೇವೆ. ನಿಜ ಮೌಲ್ಯ ಮಾಪನದಲ್ಲಿ ಈ ಅಕಾಡೆಮಿಗಳು (ಹೀಗೇ ಹೆಸರಿಸುವುದಾದರೆ ಕೊಡವ, ಉರ್ದು, ಬ್ಯಾರಿ, ಶಿಲ್ಪ, ಜನಪದ, ಯಕ್ಷಗಾನ ಇತ್ಯಾದಿ), ಪ್ರಾಧಿಕಾರಗಳು (ಪುಸ್ತಕ, ಅಭಿವೃದ್ಧಿ, ಅನುವಾದ, ನದಿ ತಿರುಗಿಸು, ಪಶ್ಚಿಮ ಘಟ್ಟ ಇತ್ಯಾದಿ) ಹೆಚ್ಚೇಕೆ ಹಲವು ವಿಷ-ವಿದ್ಯಾನಿಲಯಗಳು (ಸಂಗೀತ, ಮಹಿಳಾ, ಆರೋಗ್ಯ, ಸಂಸ್ಕೃತ ಇತ್ಯಾದಿ) ಎಲ್ಲಾ ಒಂದು ಇಲಾಖೆಯ ಸಮರ್ಥ ಗುಮಾಸ್ತ ನಿರ್ವಹಿಸಬಹುದಾದ ಕೆಲಸಕ್ಕಿಂಥ ಘನವಾದ್ದೇನನ್ನೂ ಸಾಧಿಸಿಲ್ಲ. ಅಂಥ ಸಂಸ್ಥೆಗಳನ್ನು ಹುಟ್ಟಿಸಿದವರ ‘ವಿಷಯ ತಜ್ಞ’ತೆಯ ಸೋಗನ್ನು ಈಗ ಜನಪ್ರತಿನಿಧಿಗಳು ಎನ್ನುವವರು ಅನಾಮತ್ತಾಗಿ ನಕಲಿಸಿದ್ದಾರೆ. ಎಲ್ಲಾ ಸರಿಯಿದ್ದರೆ ಐದು ವರ್ಷ ಬಾಳ್ತನವಷ್ಟೇ ಇರಬಹುದಾದ ಈ ಖಾಲೀ ಬಾಜಣಗಳು ಇರುವ ಅಲ್ಪಕಾಲದಲ್ಲಿ ತಮ್ಮಳವಿಗೆ ದಕ್ಕಿದ್ದೆಲ್ಲವನ್ನೂ ಕೆಡಿಸಿ, ಹೊಸ ವ್ಯಾಖ್ಯಾನವನ್ನು ಬರೆಸುತ್ತಿರುವುದಕ್ಕೆ ಇವೆರಡು ಸಣ್ಣ ಉದಾಹರಣೆಗಳು. ಹಂಪಿಯದು ಭಾರೀ ಪ್ರಮಾಣದ ಸಂಸ್ಕೃತಿಯ ಪುಡಾರೀಕರಣವಾದರೆ  ಪುತ್ತೂರಿನದು ಸಣ್ಣ ಪ್ರಮಾಣದ ಶಿಕ್ಷಣ ಪುಡಾರೀಕರಣ!

ನಮ್ಮ ಘೋಷಿತ ಜಾತ್ಯಾತೀತ ರಾಷ್ಠ್ರ ಈಗಾಗಲೇ ಅನುಭವಿಸುತ್ತಿರುವ ಮತೀಯ-ಖಂಡಾಂತರ ಚಲನೆಯ ನಡುಕಗಳನ್ನು ಇಂಥ ಪ್ರಕರಣಗಳು ಇನ್ನಷ್ಟು ಚುರುಕುಗೊಳಿಸುತ್ತವೆ. ನಾಳೆ ಇತರ ಶಾಸಕರೂ ಕನ್ನಡ ಭಾರತಭಾರತಿ ಪ್ರಕರಣವನ್ನು ಪ್ರೇರಣೆ ಮತ್ತು ಪೂರ್ವನಿದರ್ಶನಗಳನ್ನಾಗಿ ಸ್ವೀಕರಿಸಿ ತಮ್ಮ ಜಾತಿಗಳಿಗೆ ‘ನ್ಯಾಯ’ ಕೊಡಿಸಿದರೆ ಪ್ರಶ್ನಿಸಲು ನಾಲಗೆ ಏಳದು. ಮತ್ತವರ ವಿನಿಯೋಗಗಳು ಓದುವ ಪುಸ್ತಕಕ್ಕೇ ಸೀಮಿತಗೊಳ್ಳಬೇಕೆಂದು ಯಾರೂ ಹೇಳುವಂತೆಯೂ ಇಲ್ಲ. ಈಗಾಗಲೇ ಮುಖ್ಯಮಂತ್ರಿಗಳು ದೇವಮಾನವರಿಗೆ, ಮಠ, ದೇವಳಗಳಿಗೂ ನೇರ ನೆಲ, ಅನುದಾನ ಕೊಡುವ ಆದರ್ಶ ಹಾಕಿಕೊಟ್ಟಿದ್ದಾರೆ. (ಕನ್ನಡ ವಿವಿಯ ನೆಲನುಂಗಿದ ಯೋಜನೆಯ ಗುಪ್ತಕಲಾಪ ಪಟ್ಟಿಯೆಂದೇ ಪ್ರಚಾರದಲ್ಲಿರುವ ‘ಅಕ್ಷರಧಾಮದಂತ ದೇವಾಲಯ’ ಬಂದದ್ದೇ ಆದರೆ ಬಹುಶಃ ದೇಶದಲ್ಲಿ ಪ್ರಪ್ರಪ್ರಥಮ ದೇವಾಲಯ ಜನಕ ಸರಕಾರವೆಂಬ ಖ್ಯಾತಿ ರಾಜ್ಯಕ್ಕೆ ದಕ್ಕಲಿದೆ!) ಇನ್ನು ಮುಂದೆ ಸಾರ್ವಜನಿಕರು ಸಾಮಾಜಿಕ ಕಾರ್ಯಗಳಿಗೆ ವಿಧಾನಸೌಧ ಅಥವಾ ಸಂಸತ್ ಭವನದತ್ತ ಮುಖಮಾಡುವ ಬದಲು ಮಠ ಮಂದಿರಗಳ ಕೆಳಜಗುಲಿಯಲ್ಲಿ ಮಡಿಯುಟ್ಟು ನಿಂತರೆ ಸಾಕು!

ನಿಮ್ಮ ವಿಷಾದಕ್ಕೆ ಕನಿಷ್ಠ ಅಕ್ಷರರೂಪದ ಬಿಡುಗಡೆಯನ್ನಾದರೂ ಕೊಟ್ಟು ಪ್ರತಿಕ್ರಿಯಾ ಅಂಕಣದಲ್ಲಿ ತುಂಬಿ ಹಗುರಾಗುವಿರಾಗಿ ನಂಬಿದ್ದೇನೆ

4 ಟಿಪ್ಪಣಿಗಳು (+add yours?)

 1. H. Anandarama Shastry
  ಮಾರ್ಚ್ 08, 2010 @ 22:04:39

  ವಿವೇಕ ರೈ ಅವರ ಮಾತನ್ನು ಒಪ್ಪುತ್ತೇನೆ. ಚರ್ಚೆಯ ಹಾದಿ ತಪ್ಪಿಸಿದವನೇ ನಾನು.
  ಸತ್ಯ ಮತ್ತು ಆತ್ಮಸಾಕ್ಷಿ ಇವುಗಳ ಜೊತೆಯಲ್ಲದೆ ಇನ್ನಾವುದರ ಜೊತೆ ನಮ್ಮನ್ನು ಗುರುತಿಸಿಕೊಂಡರೂ ನಾವು ವಂಚಕರೇ ಆಗುತ್ತೇವೆ.
  ಅಶೋಕವರ್ಧನರು ಹುಟ್ಟುಹಾಕಿರುವ ಈ ಚರ್ಚೆಯಂಥದೇ ಒಂದು ಸಂದರ್ಭದಲ್ಲಿ ಹಿಂದೊಮ್ಮೆ ನಾನು, ’ನಾನು ಎಡಪಂಥೀಯನೂ ಅಲ್ಲ, ಬಲಪಂಥೀಯನೂ ಅಲ್ಲ, ಸತ್ಯಪಥ ನನ್ನದು’, ಎಂದು ಪತ್ರಿಕೆಗಳಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದೆ.
  ಇದು ನನ್ನ ನಿಲುವು.

  ಉತ್ತರ

 2. bavivekrai
  ಮಾರ್ಚ್ 07, 2010 @ 21:16:47

  ತುಂಬಾ ಮುಖ್ಯ ವಿಷಯದ ಬಗ್ಗೆ ಚರ್ಚೆ ನಡೆಯದಿರುವುದು ವಿಷಾದದ ಸಂಗತಿ.ನಾವು ಜಾತಿ,ಧರ್ಮ ,ರಾಜಕೀಯ ಪಕ್ಷ -ಇವುಗಳ ಜೊತೆಗೆ ಗುರುತಿಸಿಕೊಂಡಿದ್ದರೆ ಬಣ್ಣರಹಿತ ಕಣ್ಣಿನಿಂದ ಏನನ್ನೂ ನೋಡಲಾಗುವುದಿಲ್ಲ.ಈ ನಿದರ್ಶನದಲ್ಲಿ ಇವು ಮೂರೂ ಸೇರಿಕೊಂಡಿವೆ.ಇವನ್ನು ವಿಮರ್ಶಿಸಲು ನಮ್ಮ ವಿದ್ಯಾವಂತ ವರ್ಗ ಹಿಂದೇಟು ಹಾಕಿ ,ಯಾವುದೋ ಸಂಗತಿಗಳನ್ನು ಪ್ರತ್ಯೇಕಿಸಿ ವಾದಿಸುವುದು ,ಮೌಲ್ಯಗಳ ಪಾರ್ಶ್ವಿಕ ಪುಡಾರೀಕರಣ ಆಗುತ್ತದೆ.ಅಶೋಕವರ್ಧನ್ ಎಲ್ಲಾ ಕಾಲದಲ್ಲೂ ಯಾವುದೇ ಸರಕಾರ ಇದ್ದಾಗಲೂ ಮೌಲ್ಯಗಳಿಗಾಗಿ ಹೋರಾಡುತ್ತಾ ಬಂದಿದ್ದಾರೆ.

  ಉತ್ತರ

 3. shiva
  ಮಾರ್ಚ್ 07, 2010 @ 13:54:32

  ಲೇಖಕರಿಗೆ,
  ಪ್ರತಿಟಿಪ್ಪಣಿಗೆ ಧನ್ಯವಾದಗಳು.
  ನೀವು ವಿಮರ್ಶೆ ಬರೆದಿಲ್ಲದಿರಬಹುದು, ಆದರೆ ನಿಮ್ಮ ಆ ವಾಕ್ಯವು ಭಾರತ ಭಾರತಿ ಪುಸ್ತಕಗಳ ಬಗ್ಗೆ ನಿಮ್ಮ ಪೂರ್ವಗ್ರಹ ತೋರಿಸುವಂತಿದೆ ಎಂದಷ್ಟೇ ನಾನು ಹೇಳಿದ್ದು. ಏಕೆಂದರೆ ಸಾರ್ವಜನಿಕ ವ್ಯವಸ್ಥೆಗಳು ಮತ್ತು ಪಕ್ಷ ರಾಜಕೀಯದ ಬಗ್ಗೆ ಹೇಳುವಾಗ ಭಾರತ ಭಾರತಿ ಪುಸ್ತಕಗಳು ಹಿಂದೂ ರಾಷ್ಟ್ರದ ಪರಿಕಲ್ಪನೆಗೆ ಪೂರಕವಾದವು ಎಂಬ ಹೇಳಿಕೆಯ ಅಗತ್ಯವು ಯಾವ ಕಡೆಯಿಂದಲೂ ಇರಲಿಲ್ಲ. ಅದನ್ನು ಒಪ್ಪುವುದು ಬಿಡುವುದು ಬೇರೆ ವಿಷಯ ಹೌದು. ಪ್ರಕಾಶನವನ್ನು ಬೆಳೆಸಲು ಬಳಸಿಕೊಂಡಿದ್ದರೆ ಅದನ್ನು ಟೀಕೆ ಮಾಡಬಹುದು ಆದರೆ ವಿಮರ್ಶೆ ಮಾಡದಿದ್ದರೂ ಸಹ ಆ ನಿರ್ದಿಷ್ಟ ಪುಸ್ತಕಗಳನ್ನು ಉಲ್ಲೇಖಿಸಿ ಹಿಂದೂರಾಷ್ಟ್ರವೆಂಬ ಟೀಕೆ ಬೇಕಿರಲಿಲ್ಲ. ಭಾರತ ಭಾರತಿಯಂತಹ ಉತ್ತಮ ಪುಸ್ತಕಗಳು ಒಂದು ಪಕ್ಷಕ್ಕೆ, ಒಂದು ಸಿದ್ಧಾಂತಕ್ಕೆ , ಒಂದು ಪರಿಕಲ್ಪನೆಗೆ ಮಾತ್ರ ಇರುವಂತವು ಅಂತ ಅನ್ನಿಸಿದರೆ ಮತ್ತು ಅದರ ಮೂಲಕ ಜನರನ್ನು ಯಾವುದೋ ಒಂದು ವಿಚಾರದೆಡೆಗೆ ತಳ್ಳಲಾಗುತ್ತಿದೆ, ಬೆಪ್ಪುತಕಡಿ ಮಾಡಲಾಗುತ್ತಿದೆ ಅನ್ನಿಸಿದ್ದರೆ ಆ ಮನಃಸ್ಥಿತಿ ಪೂರ್ವಗ್ರಹ ಅಥವಾ ವಿರೋಧೀ ಧೋರಣೆ ಎಂಬುದು ನನ್ನ ಅಭಿಪ್ರಾಯ. ನಿಮ್ಮ ಕ್ಷೇತ್ರದಲ್ಲಿ ಸಾರ್ವಜನಿಕರ ಪ್ರತಿನಿಧಿಯಾಗಿ ಅನ್ಯಾಯಗಳನ್ನು ಅಥವಾ ಸರ್ಕಾರದ ಅನೈತಿಕ ಕೆಲಸಗಳನ್ನು ಟೀಕಿಸಬಹುದೆ ಹೊರತು ಯಾವುದೇ ಸಿದ್ಧಾಂತ/ಪಕ್ಷದ ವಿರುದ್ಧದ ನಿಮ್ಮ ಸ್ವಂತ ಅಭಿಪ್ರಾಯಗಳನ್ನು ಎಲ್ಲಾ ಸಾರ್ವಜನಿಕರ ಅಭಿಪ್ರಾಯ ಎಂಬಂತೆ ಬಿಂಬಿಸುವುದು ಸರಿಯಲ್ಲ.
  ಬೇರೆ ವಿಷಯಗಳ ಬಗ್ಗೆ ನನ್ನ ಟಿಪ್ಪಣಿ ಏನಿಲ್ಲ. ನಿಮ್ಮ ಅಭಿಪ್ರಾಯಗಳನ್ನು ಒಪ್ಪುತ್ತೇನೆ.
  ಧನ್ಯವಾದಗಳು.

  ಉತ್ತರ

 4. H. Anandarama Shastry
  ಮಾರ್ಚ್ 05, 2010 @ 08:53:19

  (ನಿನ್ನೆತಾನೇ ನಾನು ದಿನಪತ್ರಿಕೆಗಳಿಗೆ ಪ್ರಕಟಣೆಗೆಂದು ಕಳಿಸಿದ ಪತ್ರವನ್ನು ಅಶೋಕವರ್ಧನರ ಈ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಯಥಾವತ್ತಾಗಿ ಈ ಕೆಳಗೆ ನೀಡಿದ್ದೇನೆ.)

  ಹಂಪಿಯ ಕನ್ನಡ ವಿವಿ ಸ್ಥಳದ ಪರಭಾರೆ ವಿಷಯದ ಆಳಕ್ಕೆ ಹೋಗೋಣ.
  ಬಳ್ಳಾರಿ ಗಣಿ ದೊರೆಗಳಿಗೆ ಮಂತ್ರಿಪದವಿ ನೀಡಲಾಯಿತು. ಅವರ ಬಂಧುಮಿತ್ರರನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಲಾಯಿತು. ಗಣಿ ದೊರೆಗಳ ಅಪೇಕ್ಷೆಯಂತೆ ಅಧಿಕಾರಿಗಳ ವರ್ಗಾವಣೆ ನಡೆಯಿತು, ಮಹಿಳಾ ಮಂತ್ರಿಸ್ಥಾನವೂ ಪಲ್ಲಟಗೊಂಡಿತು. ಈ ದೊರೆಗಳ ಗಣಿಗಾರಿಕೆಯ ಅಭಿವೃದ್ಧಿಗಾಗಿ ರಾಜ್ಯದಲ್ಲಿ ಸುಭದ್ರ ನೆಲೆಯನ್ನೂ ಕಲ್ಪಿಸಿಕೊಡಲಾಯಿತು. ಈಚೆಗಷ್ಟೇ ಕೃಷ್ಣದೇವರಾಯನ ಹೆಸರಲ್ಲಿ ಈ ಗಣಿ ದೊರೆಗಳ ಮೆರೆದಾಟವೂ ನಡೆಯಿತು. ಇದೀಗ ಕನ್ನಡ ವಿವಿ ಸ್ಥಳಭಾಗವನ್ನು ಈ ಗಣಿ ದೊರೆಗಳ ಇಚ್ಛಾನುವರ್ತಿಗಳ ವಶಕ್ಕೊಪ್ಪಿಸುವ ಕಾರ್ಯ ನಡೆಯುತ್ತಿದೆ. ಹೀಗೇ ಮುಂದುವರಿದರೆ ಕರ್ನಾಟಕದಲ್ಲಿ ಕೃಷ್ಣದೇವರಾಯನ ವೈಭವ ಮರುಕಳಿಸುವುದಲ್ಲ, ಬಳ್ಳಾರಿ ಗಣಿರೆಡ್ಡಿಗಳ ವೈಭವ ತಾಂಡವವಾಡುತ್ತದೆ. ಕೊನೆಗೆ ಆ ವೈಭವಕ್ಕೆ ಕರ್ನಾಟಕವೇ ಬಲಿಯಾದೀತು. ಇದಕ್ಕೆ ತಡೆಯೊಡ್ಡಬೇಕು.
  ಹಂಪಿಯ ಕನ್ನಡ ವಿಶ್ವವಿದ್ಯಾಲಯವು ಕೃಷ್ಣದೇವರಾಯನ ಕಾಲದ ತಥಾಕಥಿತ ಸಾಂಸ್ಕೃತಿಕ ವೈಭವಕ್ಕೆ ಸರಿಸಾಟಿಯಾಗಿ ಮೆರೆಯುವಂತಾಗಬೇಕೇ ಹೊರತು ಕೃಷ್ಣದೇವರಾಯನ ಹೆಸರಿನಲ್ಲಿ ತನ್ನ ನೆಲ ಕಳೆದುಕೊಂಡು ಕ್ರಮೇಣ ತಾನೂ ನೆಲಕಚ್ಚಿಬಿಡುವ ದುರಂತಕ್ಕೀಡಾಗಬಾರದು. ಕೃಷ್ಣದೇವರಾಯನ ಹೆಸರಿನಲ್ಲಿ ಈ ನಾಡಿನಲ್ಲಿ ಇನ್ನಾರೋ ಮೆರೆಯುವಂತಾಗಬಾರದು.

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: