ಆ ತಾಯಿಯ ನೆನಪಲ್ಲಿ….

scan00032.jpgಇವರು ಮಿಡ್ ಡೇ ಸಂಪಾದಕರಾದ ಎಸ್ ಆರ್ ರಾಮಕೃಷ್ಣ ಅವರ ತಾಯಿ ಇಂದಿರಾ ಸ್ವಾಮಿ ಎಂದು ಪರಿಚಯಿಸಿಕೊಟ್ಟರೆ ತಪ್ಪಾದೀತು. ಎಲ್ಲ ತಾಯಂದಿರನ್ನೂ ನೆನಪಿಸುವ ತಾಯಿ ಇವರು.

ಇದೆ ಗುಂಗಿನಲ್ಲೇ ನಾಗತಿಹಳ್ಳಿ ರಮೇಶ್  ತಮ್ಮ ತಾಯಿಯನ್ನೂ ನೆನೆಯುತ್ತಾ ಎಸ್ ಆರ್ ರಾಮಕೃಷ್ಣರ ಜೊತೆ ಕೈಗೂಡಿಸಿ ‘ಅವ್ವ’ ದ್ವನಿಮುದ್ರಿಕೆ ರೂಪಿಸಿದ್ದು. ಇಲ್ಲವಾದ ಆ ತಾಯಿಯ ನೆನಪಲ್ಲಿ ಇಂದು ಸಂಗೀತ ಘೋಷ್ಟಿಯಿದೆ. ಗೆಳೆಯ ನಟರಾಜ್ ಹುಳಿಯಾರ್ ಬರೆದ ಒಂದು ಆತ್ಮೀಯ ಬರಹವಿದೆ.

ಇಂದು ಸಂಜೆ 5-45 ಕ್ಕೆ ಸುಚಿತ್ರ ಫಿಲಂ ಸೊಸೈಟಿ ಯಲ್ಲಿ

ಸುಮತಿ ಮೂರ್ತಿ ಅವರಿಂದ ಹಿಂದುಸ್ತಾನಿ ಗಾಯನ

ತಬಲಾ: ರಾಜಗೋಪಾಲ್ ಕಲ್ಲೂರ್ಕರ್, ಹಾರ್ಮೋನಿಯಂ ಎಸ್ ಆರ್ ರಾಮಕೃಷ್ಣ

+++

ತಾಯಿಯೊಬ್ಬರು ಇಲ್ಲವಾದರು

-ನಟರಾಜ್ ಹುಳಿಯಾರ್

ಸಾಮಾನ್ಯವಾಗಿ ಒಂಚೂರೂ ಉಬ್ಬು ತೋರದೆ ಸರಳವಾಗಿದ್ದ ಅವರು ಕಾಲೇಜೊಂದರಲ್ಲಿ ಇಂಗ್ಲಿಷ್ ಪ್ರೊಫೆಸರ್ ಆಗಿದ್ದರೆಂಬ ಚಿತ್ರವನ್ನು ನಮ್ಮಂಥವರು ಊಹಿಸಿಕೊಳ್ಳುವುದು ಕೂಡ ಕಷ್ಟವಿತ್ತು. ಮನೆಯ ತುಂಬ ವೃದ್ಧರು, ಖಾಯಿಲೆಯವರು, ಮಕ್ಕಳು, ಮಕ್ಕಳ ಸ್ನೇಹಿತರು, ಬರುವವರು, ಹೋಗುವವರು… ಎಲ್ಲರಿಗೂ ಅವರು ಊಟ ಹಾಕುತ್ತಾ, ಕಾಫಿ ಕೊಡುತ್ತಾ, ಸಾಧ್ಯವಾದರೆ ನಗುತ್ತಾ, ಎದುರಾದ ಕಹಿ, ಕಷ್ಟವನ್ನೆಲ್ಲಾ ನುಂಗುತ್ತಾ ಅಸಾಧ್ಯ ನಿರ್ಲಿಪ್ತತೆಯನ್ನು ಸಾಧಿಸಿದವರಂತೆ ಕಾಣುತ್ತಿದ್ದರು. ಅವರ ನಿರ್ಲಿಪ್ತತೆಯನ್ನು ನಾವು ಮೆಚ್ಚಿದರೆ “ಹಾಗೆ ನೋಡಿದರೆ ಪ್ರತಿದಿನವೂ ಜಗಳವಾಡಲು ಇಲ್ಲಿ ಕಾರಣವಿತ್ತು” ಎಂದು ನಕ್ಕು ಸುಮ್ಮನಾಗುತ್ತಿದ್ದರು. ಅವರ ಅಡುಗೆ ಮನೆಯ ಒಳಗೆ ಎಲ್ಲ ಜಾತಿಗಳವರೂ ಆರಾಮಾಗಿ ನುಗ್ಗುತ್ತಿದ್ದರು. ಹನ್ನೆರಡು ಗಂಟೆ ರಾತ್ರಿಯಲ್ಲಿ ಕೂಡ ನಮ್ಮಂಥವರಿಗೆ ಲೆಕ್ಕವಿಲ್ಲದಷ್ಟು ದಿನ ಅವರ ಅಡುಗೆಮನೆಯಲ್ಲಿ ಊಟವಿರುತ್ತಿತ್ತು. ನಾಲ್ಕು ವರ್ಷಗಳ ಕೆಳಗೆ ಅವರನ್ನು ಕ್ಯಾನ್ಸರ್ ಆವರಿಸಿತ್ತು. ಕೆಲಕಾಲ ಚಿಕಿತ್ಸೆ ಪಡೆದ ನಂತರ, ಅದನ್ನು ಗೆದ್ದು ಬಂದ ಛಾಯೆಯೂ ಇಲ್ಲದೆ, ಖಾಯಿಲೆಯೇ ಆಗದಿದ್ದವರಂತೆ ಬಾಗಿಲ ಬಳಿ ನಗುತ್ತಾ ನಿಂತಿದ್ದರು. ಒಂದು ವರ್ಷ ಹಾಗೇ ಇದ್ದು, ಕಳೆದ ಮೂರು ತಿಂಗಳಂತೂ ಒಳಗೊಳಗೇ ಭಯಂಕರವಾಗಿ ಅಸಾಧ್ಯ ನೋವನ್ನು ಹಲ್ಲು ಕಚ್ಚಿ ಸಹಿಸಿ ಕಣ್ಮುಚ್ಚಿದರು.

ಪ್ರೊ.ಇಂದಿರಾಸ್ವಾಮಿಯವರು ಕೇವಲ ನನ್ನ ಮಿತ್ರ, ಸಂಗೀತಗಾರ ರಾಮಕೃಷ್ಣನ ತಾಯಿಯಾಗಿರಲಿಲ್ಲ. ಅವನ ಜೊತೆಗೇ ನನ್ನಂಥ ಅನೇಕರಿಗೆ ಅವರು ತಾಯಿಯಂತಿದ್ದರು. ಜನರಿಂದ ತಪ್ಪಿಸಿಕೊಂಡು ಅಡ್ಡಾಡುವ ನಮ್ಮಂಥವರಿಗೆ ಬಗೆಬಗೆಯ ಜನರನ್ನು ಅವರು ಹೇಗೆ ಸಹಿಸುತ್ತಿದ್ದರು ಹಾಗೂ ಸುಧಾರಿಸುತ್ತಿದ್ದರು ಎಂಬುದು ಸದಾ ವಿಸ್ಮಯವನ್ನುಂಟು ಮಾಡುತ್ತದೆ. ಅವರ ವಿಚಿತ್ರ ನಿರ್ಲಿಪ್ತತೆ ಹಾಗೂ ಬಗೆಬಗೆಯ ಆಕಸ್ಮಿಕಗಳನ್ನು ಎದುರಿಸಿದ ಒಳ ಕಸುವು ಅವರಿಗೆ ಎಲ್ಲಿಂದ ಬಂತೋ ಎಂದು ಹುಡುಕುವಂತಾಗುತ್ತದೆ. ದೈವಭಕ್ತಿಯಿಂದಲೋ, ಅವರು ಓದಿದ ಸಾಹಿತ್ಯದ ಪುಸ್ತಕಗಳಿಂದಲೋ ಅದು ಬಂದಂತಿರಲಿಲ್ಲ. ಅದು ದಿನನಿತ್ಯದ ಬದುಕನ್ನು ನೋಡಿ ನೋಡಿ ಹಾಗೂ ಕುಟುಂಬ ಸದಸ್ಯರ ವಿವಿಧ ಮನಸ್ಥಿತಿಗಳ ಜೊತೆ ನಿರಂತರವಾಗಿ ಏಗಿದ್ದರಿಂದ ಹುಟ್ಟಿದ ನಿರ್ಲಿಪ್ತ ನಗು ಇರಬೇಕು ಎನಿಸುತ್ತಿತ್ತು. ಇನ್ನು ಬದಲಾಯಿಸಲು ಅಸಾಧ್ಯ ಎಂದು ಖಾತ್ರಿಯಾದದ್ದನ್ನು ಸಹಿಸುತ್ತಲೇ ತಮ್ಮ ಬದುಕನ್ನೂ ಬದುಕುವುದು ಹೇಗೆಂಬುದನ್ನು ಇಂದಿರಾಸ್ವಾಮಿ ಅದು ಹೇಗೋ ಕಲಿತಂತಿತ್ತು.

ತಮ್ಮ ತಾಯಿ ತೀರಿಕೊಂಡಾಗ ಮಕ್ಕಳು ಕಳಿಸಿದ ಇ-ಮೇಲ್ ನಲ್ಲಿ ಈ ಮಾತಿದೆ: “ಇಂದಿರಾಸ್ವಾಮಿಯವರ ವಿದ್ಯಾರ್ಥಿ ವಿದ್ಯಾರ್ಥಿನಿಯರಂತೆಯೇ ಅವರನ್ನು ಬಲ್ಲ ಎಲ್ಲರೂ ಕೂಡ ಅವರ ಸೌಮ್ಯ ವ್ಯಕ್ತಿತ್ವವನ್ನು ಸದಾ ನೆನಪಿಸಿಕೊಳ್ಳುತ್ತಾರೆ. ಇಂದಿರಾಸ್ವಾಮಿ ಬೃಹತ್ ಕುಟುಂಬವೊಂದನ್ನು ಹಲವು ವರ್ಷಗಳ ಕಾಲ ನಿಭಾಯಿಸಿದರು.”

ಇಲ್ಲಿ ಬೃಹತ್ ಕುಟುಂಬ ಎಂಬ ಮಾತಿನ ಅರ್ಥ ಅವರ ಮನೆಯನ್ನು ಹತ್ತಿರದಿಂದ ನೋಡಿದವರಿಗೆಲ್ಲ ಗೊತ್ತಿರುತ್ತದೆ. ಅದು ಪ್ರೊ.ಇಂದಿರಾ, ಪತಿ ಪ್ರೊ.ರಾಮಸ್ವಾಮಿ ಹಾಗೂ ಮೂರು ಮಕ್ಕಳಿಗೆ ಸಂಬಂಧಿಸಿದ ವರ್ಣನೆಯಲ್ಲ; ಬದಲಿಗೆ ಅವರ ಮನೆಯಲ್ಲಿ ಬೀಡುಬಿಟ್ಟಿದ್ದ, ಹೊರೆಯಾಗಿದ್ದ ಹಲವರು ಹಾಗೂ ಸಂಗೀತ, ಸಾಹಿತ್ಯ, ಕಾನೂನು ಇತ್ಯಾದಿಯಾಗಿ ಎಲ್ಲ ಕ್ಷೇತ್ರಗಳ ಜನರ ಮನೆಯಾಗಿದ್ದನ್ನೂ ಈ ಮಾತು ಸೂಚಿಸುತ್ತದೆ. ಮಗ, ಮಗಳ ಸಂಗೀತದ ವಲಯ ಅಲ್ಲಿ ಬೀಡುಬಿಟ್ಟಿರುತ್ತಿತ್ತು. ಮಗನ ಸಂಗೀತದ ವಿಶಿಷ್ಟ ಪ್ರತಿಭೆಯನ್ನು ಆಸ್ವಾದಿಸುತ್ತಿದ್ದ ಅವರು ಎಂದೂ ಅದನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದು ನೆನಪಿಲ್ಲ. ಮಗನ ಸಂಗೀತದ ಜಗತ್ತು ಒಂದೆಡೆ: ಪತಿಯ ಬಳಿಗೆ ನೆರವಿಗೆ ಸಲಹೆಗೆ ಬರುವ ಜನ ಇನ್ನೊಂದು ರೂಮಿನಲ್ಲಿ… ಉಳಿದಂತೆ ಈ ಕುಟುಂಬದ ಮೇಲೆ ಅವಲಂಬಿತರಾಗಿದ್ದ ವೃದ್ಧರು… ಇದು ಮೂರು ನಾಲ್ಕು ದಶಕಗಳ ಕಾಲ ಇಂದಿರಾಸ್ವಾಮಿಯವರ ಲೋಕವಾಗಿತ್ತು.

ಇಂದಿರಾಸ್ವಾಮಿಯವರು ಕಾಲೇಜಿನಲ್ಲಿ ಪಾಠ ಮಾಡುತ್ತಲೇ ಇವರನ್ನೆಲ್ಲಾ ನೋಡಿಕೊಳ್ಳುತ್ತಾ, ನಾವು ಅವರನ್ನು ಕಂಡಾಗಲೆಲ್ಲ ಅದು ಹೇಗೆ ನಗುತ್ತಿದ್ದರೋ! ತಂತಮ್ಮ ಮಕ್ಕಳಿಗೆ ಅಕ್ಕರೆಯ ತಾಯಿಯಾಗಿರುವವರು ಎಲ್ಲೆಡೆ ಸಿಗುತ್ತಾರೆ. ಆದರೆ ಇಂದಿರಾಸ್ವಾಮಿ ಅನೇಕರ ಪಾಲಿಗೆ ತಾಯಿಯಂತೆ ಕಾಣುತ್ತಿದ್ದರು. ಆ ರೀತಿಯ ಸಹಜ ತಾಯ್ತನದ ಅವರು ನಿರ್ಗಮಿಸಿದಾಗ ಮಿತ್ರನ ತಾಯಿ ಮಾತ್ರ ತೀರಿಕೊಂಡಂತೆ ಅನಿಸದೆ, ಇದು ನಮ್ಮ ಮನೆಯ ಸಾವು ಅನ್ನಿಸತೊಡಗುತ್ತದೆ.

ಒಬ್ಬರ ಸಾವು ಇನ್ನೊಬ್ಬರ ಸಾವನ್ನು ಮನಸ್ಸಿಗೆ ತರಲಾರಂಭಿಸುತ್ತದೆ. ಮೊನ್ನೆ ತೀರಿಕೊಂಡ ಪ್ರೊ.ಚಿ.ಶ್ರೀನಿವಾಸರಾಜು ಅವರು ಕರ್ನಾಟಕದ ನೂರಾರು ಲೇಖಕ, ಲೇಖಕಿಯರನ್ನು, ಸಾವಿರಾರು ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಪೊರೆದದ್ದು ನೆನಪಾಗುತ್ತಿದೆ. ಅನ್ಯರಿಗೆ ತಮ್ಮ ವೇಳೆ ಕೊಡುವ, ಪೋಷಿಸುವ ಇಂಥ ನಿಸ್ವಾರ್ಥಿಗಳ ದೊಡ್ಡತನ ನಮ್ಮ ಈ ಸ್ವಕೇಂದ್ರಿತ ಕಾಲದಲ್ಲಿ ಎಷ್ಟೊಂದು ತುಟ್ಟಿಯಾಗಿದೆ ಎನಿಸತೊಡಗುತ್ತದೆ; ಗೌರವ ಕೃತಜ್ಞತೆಗಳು ತಂತಾನೇ ಉಕ್ಕತೊಡಗುತ್ತವೆ.

ತೀರಿಕೊಂಡವರ ಕೊನೆಯ ದರ್ಶನಕ್ಕೆ ಹೋಗದಿದ್ದರೆ ಅವರು ನನ್ನ ಪಾಲಿಗೆ ತೀರಿಕೊಂಡಿಲ್ಲ ಎಂಬುದು ನನ್ನ ಹಳೆಯ ಭ್ರಮೆ. ಎದುರಿಗೆ ಸಿಕ್ಕಾಗಲೆಲ್ಲ “ನಿಮ್ಮ ಮದುವೆ ಊಟ ಬಾಕಿ ಇದೆ” ಎಂದು ನಗುತ್ತಿದ್ದ ಶ್ರೀನಿವಾಸರಾಜು ಹಾಗೂ ನನ್ನ ಜಾತಿ ಮೀರಿದ ಮದುವೆಯನ್ನು ಆರಾಮಾಗಿ ಸ್ವೀಕರಿಸಿದ್ದ ಇಂದಿರಾಸ್ವಾಮಿ ಈ ಇಬ್ಬರೂ ಹೀಗೇ ಎಲ್ಲೋ ಇದ್ದಾರೆ ಎಂದು ನಂಬಿಕೊಳ್ಳಲೆತ್ನಿಸುವೆ…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: