ಬ್ರೇಕಿಂಗ್ ನ್ಯೂಸ್: ವೈದೇಹಿಯವರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ

ವೈದೇಹಿ ಅವರ ‘ಕ್ರೌಂಚ ಪಕ್ಷಿಗಳು’ ಕಥಾ ಸಂಕಲನಕ್ಕೆ ಈ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಿಸಲಾಗಿದೆ. ವೈದೇಹಿ ಅವರಿಗೆ ‘ಅವಧಿ’ಯ ಅಭಿನಂದನೆಗಳು.

ಚಿತ್ರ: ತ್ರಿವೇಣಿ ಶ್ರೀನಿವಾಸರಾವ್

ವೈದೇಹಿ ಕಥಾಲೋಕದಲ್ಲಿ..

-ವಿಜಯರಾಜ ಕನ್ನಂತ

ವಿಜಯರಾಜ ಕನ್ನಂತ ಅವರು ಈ ಹಿಂದೆ ತಮ್ಮ ಬ್ಲಾಗ್ ‘ಮನಸಿನ ಮರ್ಮರ‘ ದಲ್ಲಿ ಬರೆದ ವೈದೇಹಿ ಅವರ ಕಥಾ ಲೋಕ ಕುರಿತ ಲೇಖನವನ್ನು ಪ್ರಶಸ್ತಿ ಬಂದ ಈ ಸಂದರ್ಭದಲ್ಲಿ ಮತ್ತೆ ಮೆಲುಕು ಹಾಕಲು ನೀಡುತ್ತಿದ್ದೇವೆ.

ಬಹುಷಃ ವೈದೇಹಿಯವರ ಕಥಾಲೋಕವೆಂಬ ಮಾಯಾ ಜಗತ್ತಿಗೆ ನಾನು ಮೊಟ್ಟಮೊದಲು ಕಾಲಿರಿಸಿದ್ದು ೨೦೦೩ರಲ್ಲಿ ಇರಬೇಕು. ಸಪ್ನಾ ಬುಕ್ ಹೌಸ್‌ನಲ್ಲಿ ಕಣ್ಣಿಗೆ ಬಿದ್ದ ‘ಅಮ್ಮಚ್ಚಿಯೆಂಬ ನೆನಪು’ ಮೊದಲ ನೋಟಕ್ಕೇ ಕಣ್ಸೆಳೆಯಿತು. ಕುತೂಹಲದಿಂದ ಕೊಂಡೊಯ್ದು ಮೊದಲ ಕಥೆ ಓದಿದಾಕ್ಷಣವೇ ನಾ ವೈದೇಹಿಯವರ ಕಥೆಗಳ ಅಭಿಮಾನಿಯಾಗಿಬಿಟ್ಟೆ. ಆ ಇಡೀ ಪುಸ್ತಕವನ್ನು ಒಂದೇ ಗುಕ್ಕಿಗೆ ಆಪೋಷನ ತೆಗೆದುಕೊಂಡು, ಅದರಿಂದ ನನಗಾದ ಖುಷಿಯನ್ನು ಅಲ್ಲಿಗೆ ಮುಗಿಯಲು ಬಿಡಬಾರದೆಂದುಕೊಂಡು ಅವರ ಬೇರೆ ಯಾವ ಪುಸ್ತಕ ಸಿಗುತ್ತದೆಂದು ಹುಡುಕುತ್ತಾ ಪುಸ್ತಕದಂಗಡಿ ಸುತ್ತಿದ್ದು ಇನ್ನೂ ಮರೆತಿಲ್ಲ. ಅವರ ಮಲ್ಲೀನಾಥನ ಧ್ಯಾನ, ಕ್ರೌಂಚ ಪಕ್ಷಿಗಳು ಎಲ್ಲ ಓದಿ ಮುಗಿಸುವಷ್ಟರಲ್ಲಿ ಬಂದೇ ಬಿಟ್ಟಿತ್ತು ಅವರ ಇಲ್ಲಿಯವರೆಗಿನ ಸಮಗ್ರ ಕಥಾಸಂಕಲನ. ಆದರೆ ವೈದೇಹಿ ಕಥೆಗಳ ಸೆಳೆತ ಎಷ್ಟು ಅಂದ್ರೆ.. ಈಗಲೂ ಯಾವುದಾದರು ವಿಶೇಷಾಂಕ ಬಂದ್ರೆ ಮೊದಲು ಕಣ್ಣುಗಳು ಅರಸೋದು ವೈದೇಹಿ ಕಥೆಯೇನಾದ್ರೂ ಬಂದಿದೆಯ ಅಂತ.

ವೈದೇಹಿಯವರ ಬರಹಗಳಲ್ಲಿ ನನಗೆ ಮೊದಲು ಇಷ್ಟವಾಗಿದ್ದು ಅವರ ಬರಹಗಳ ಸರಳತೆ. ನಮ್ಮ ಸುತ್ತ ಮುತ್ತಲಿನ ಜಗತ್ತಿನ ಜೀವಿಗಳ ಕುರಿತು, ವಿದ್ಯಮಾನಗಳ ಕುರಿತು ಸುಲಲಿತ ಪ್ರಬಂಧವೊಂದರ ಶೈಲಿಯಲ್ಲಿ ಆಪ್ತವಾಗಿ ಹೇಳುವ ಪರಿ, ಶಬ್ದಾಡಂಬರದ ಹಂಗಿಲ್ಲದೆ ಸಹಜ ಮಾತುಗಳಲ್ಲಿ ಮಾತಾಡುವ ಅವರ ಕಥೆಗಳ ಪಾತ್ರ…ನಿಜಕ್ಕೂ ಆಪ್ತವೆನಿಸುತ್ತವೆ. ಕುಂದಗನ್ನಡದ ಸೊಗಡಿನ ಹಿನ್ನೆಲೆಯಲ್ಲಿ ಅವರು ಬಿಚ್ಚಿಡುತ್ತಾ ಹೋಗುವ ಸ್ತ್ರೀ ಸಂವೇದನೆಯ ಸೂಕ್ಷ್ಮಲೋಕ ಬೆರಗು ಮೂಡಿಸುತ್ತದೆ. ಅವರ ಪಾತ್ರಗಳ ಮುಗ್ಧತೆ, ಬೋಳೇತನ, ನೋವು, ಅಸಮಾಧಾನ, ಸಂಕಟ, ಹಂಗಿಸೋದು, ನಗು, ಅಳುನುಂಗಿ ನಕ್ಕ ನಗು, ಶೋಷಣೆ-ದೂಷಣೆ, ದೊಡ್ಡವರ ಮಕ್ಕಳಾಟಿಕೆ, ಮಕ್ಕಳ ದೊಡ್ಡಸ್ತಿಕೆ….ಹೀಗೆ ದಿನನಿತ್ಯದ ಘಟನೆಗಳೇ ಅವರ ಸೂಕ್ಷ್ಮನೋಟದ ಮೂಲಕ ಹಾದು ಕಥೆಗಳಾಗಿ ನಮ್ಮನ್ನು ತಲುಪಿವೆ. ಅಕ್ಕು, ವಾಣಿಮಾಯಿ, ಮಂಜಿ, ಚಿಕ್ಕನ ಹೋರಾಟ, ಪಾರ್ಸಿನ ರತ್ನ, ಗುಲಾಬಿ, ಅಮ್ಮಚ್ಚಿ ಹೀಗೆ ಒಮ್ಮೆ ಒಳಹೊಕ್ಕರೆ ಹೊರಬರಲು ಮನಸೇ ಬರದಂತಹ ರಮ್ಯಲೋಕ ಕಟ್ಟಿಕೊಡುವ ವೈದೇಹಿಯವರ ಕಥೆಗಳ ಚಂದ ಓದಿಯೇ ತಿಳಿಯಬೇಕು. ಸ್ತ್ರೀವಾದಿಯೆಂಬ ಹಣೆಪಟ್ಟಿಯ ಹಂಗಿಲ್ಲದೆ ಕಥೆಗಳ ಮೂಲಕವೆ ಹೇಳಬೇಕೆನಿಸಿದ್ದನ್ನು ಬಿಚ್ಚಿಡುವ ವೈದೇಹಿಯವರ ಬರಹಗಳಂದ್ರೆ ನಂಗಂತೂ ಪಂಚಪ್ರಾಣ.

ವೈದೇಹಿಯವರ ಬರಹದ ಕುರಿತು ಆಸಕ್ತಿಯಿರುವ ಎಲ್ಲರೂ ಓದಲೇಬೇಕಾದ ಇನ್ನೊಂದು ಪುಸ್ತಕವಿದೆ. ಅದು ಮೇಜು ಮತ್ತು ಬಡಗಿ. ತಮ್ಮ ಪಾತ್ರಗಳು ಹುಟ್ಟಿ ಬಂದ ಬಗೆ, ಹಿನ್ನೆಲೆ, ಸ್ಫೂರ್ತಿಗಳನ್ನು ಬಿಡಿಸಿಟ್ಟಿದ್ದಾರೆ. ಮೇಜು ಕುರ್ಚಿಗಳ ಮೂಲಕ ನಡೆಯೋ ತಾರತಮ್ಯ, ಬಳೆಗಾರ್ತಿಯ ಲೋಕ ಹೀಗೆ ಎಲ್ಲವನ್ನೂ ಆತ್ಮೀಯತೆಯ ಎಳೆಯೊಂದಿಗೆ ನವಿರಾಗಿ ಹೊಸೆಯುವ ವೈದೇಹಿ ನಿಮಗೆ ಇಷ್ಟ ಆಗದಿದ್ದರೆ ಹೇಳಿ ಮತ್ತೆ. ಕುಂದಗನ್ನಡ ಇವರ ಬರವಣಿಗೆಯ ಆಳದಲ್ಲಿ ಸೆಲೆಯಾಗಿ ಹರಿಯುವ ಗುಪ್ತಗಾಮಿನಿ. ಕುಂದಾಪ್ರ ಕನ್ನಡದಲ್ಲಿ ಬರೆದ್ರೆ ನಾಡಿನಾದ್ಯಂತ ತಲುಪುವುದು ಕಷ್ಟ ಅಂತ ಒಮ್ಮೆ ವೈದೇಹಿ ಅವರಿಗೆ ಶಿವರಾಮ ಕಾರಂತರು ಕಿವಿಮಾತು ಹೇಳಿದ್ರಂತೆ. ಅದನ್ನು ಸುಳ್ಳಾಗಿಸಿ ತೋರಿಸುವ ಹಟಕಟ್ಟಿ ಬರೆದು ಬೆಳೆದು ತೋರಿಸಿದ್ದು ಇಂದು ಎಲ್ಲರೆದುರಿಗಿರುವ ದೃಷ್ಟಾಂತ.

ವೈದೇಹಿಯವರ ‘ಅಕ್ಕು’ ಕಥೆಯನ್ನಾಧರಿಸಿ ದೂರದರ್ಶನದಲ್ಲಿ ಕಿರುಚಿತ್ರವಾಗಿ ಬಂದ ‘ಅಕ್ಕು’ವನ್ನು ಕನಿಷ್ಟ ೪-೫ ಬಾರಿ ನೋಡಿ ಪ್ರತೀ ಬಾರಿಯೂ ಧನ್ಯತೆ ಅನುಭವಿಸಿದ್ದೇನೆ. ಕುಂದಾಪ್ರ ಕನ್ನಡದಲ್ಲೇ ಹೇಳುವುದಾದರೆ ಒಂತರಾ ‘ಅರೆಪಿರ್ಕಿ’ ಹೆಣ್ಣೊಬ್ಬಳ ಕಥೆ. ಅದು ಟೆಲಿಚಿತ್ರವಾಗಿ ಅದ್ಭುತವಾಗಿ ಮೂಡಿಬಂದಿತ್ತು. ಈಗ ಇವರ ಗುಲಾಬಿ ಟಾಕೀಸು ಕಥೆಯನ್ನಾಧರಿಸಿದ ಸಿನೆಮಾ ಗಿರೀಶ್ ಕಾಸರವಳ್ಳಿಯವರ ಸಮರ್ಥ ನಿರ್ದೇಶನದಲ್ಲಿ ಮೂಡಿ ಬರ್ತಾ ಇದೆ. ಅದು ಮುಂದಿನ ಮೇ ತಿಂಗಳು ತೆರೆ ಕಾಣುವ ನಿರೀಕ್ಷೆ ಇದೆ. ಅಲ್ಲಿವರೆಗೆ ಏನು ಮಾಡಲಿ ಅಂತಿರಾ…ಇದೆಯಲ್ಲ ವೈದೇಹಿ ಕಥೆಗಳ ಮಾಯಾಲೋಕ. ಅವರ ಕಥೆಗಳ ತಂಪಿನಲಿ ನಿಮ್ಮ ಈ ಬೇಸಿಗೆ ತಣ್ಣಗಾಗಲಿ ಎಂಬ ಹಾರೈಕೆಗಳೊಂದಿಗೆ

ಸಂಗೀತವೆ ನೀ ನುಡಿಯುವ ಮಾತೆಲ್ಲಾ…

ರಂಗಾ ಕಂಡ ಗಾಂಧೀ

ನಾನೇಕೆ ‘ಟೈಮ್ಸ್ ಆಫ್ ಇಂಡಿಯಾ’ವನ್ನು ಹೊಗಳಲಾರಂಭಿಸಿದ್ದೇನೆ?

ನಮ್ಮ ನಿಯತಕಾಲಿಕಗಳ ಬಗ್ಗೆ ನಾವೆಷ್ಟು ಹೆಮ್ಮೆಪಡುತ್ತೇವೆ ಎಂಬ ಬಗ್ಗೆ ಓದುಗರಿಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ನನ್ನ ಸಂಪಾದಕೀಯದ ಓದುಗರಂತೂ ಇವರಿಗೆ ಅತಿಯಾದ ಆತ್ಮವಿಶ್ವಾಸ ಮತ್ತು ದಾರ್ಷ್ಟ್ಯ ಎಂದುಕೊಳ್ಳುವ ಸಾಧ್ಯತೆಯೇ ಹೆಚ್ಚು. ಈ ದೇಶಕ್ಕೆ ಯಾವುದು ಅಗತ್ಯವೋ ಅದನ್ನು ಬೌದ್ಧಿಕ ಪ್ರಬುದ್ಧತೆ ಮತ್ತು ಚಿಂತನೆಗೆ ಹಚ್ಚುವ ವಿಶ್ಲೇಷಣೆಯೊಂದಿಗೆ ನೀಡುವ ಸಾಮರ್ಥ್ಯವಿರುವ ಮತ್ತೊಂದು ಮಾಧ್ಯಮ ಸಂಸ್ಥೆ ವಿರಳ ಎಂಬುದನ್ನು ನಾನು ವಿನಯದಿಂದಲೇ ನಿಮ್ಮ ಗಮನಕ್ಕೆ ತರಬಯಸುತ್ತೇನೆ. ಆದರೆ, ತಮ್ಮ ಜಾಣ್ಮೆಯ ವಿಶ್ಲೇಷಣೆಗಳ ಮೂಲಕ ನಮ್ಮನ್ನು ಪದೇ- ಪದೇ ಮಣಿಸಿದ ಅಂತಹ ಮತ್ತೊಂದು ಸಂಸ್ಥೆ ಇದ್ದರೆ ಅದು ‘ಟೈಮ್ಸ್ ಆಫ್ ಇಂಡಿಯಾ’ ಸಮೂಹ!

ಎಷ್ಟೋ ಬಾರಿ ನಾವು ಈ ಬಾರಿ ಈ ವಿಷಯವನ್ನು ಮುಖಪುಟ ಸುದ್ದಿಯಾಗಿ ಮಾಡಬಹುದು, ಉತ್ತಮ ವಿಷಯವಿದು ಎಂದುಕೊಂಡು ಚರ್ಚಿಸಿದ ಮಾರನೇ ದಿನ ‘ಟಿಒಐ’ನಲ್ಲಿ ಅದೇ ವಿಷಯ ಮುಖಪುಟ ತುಂಬಿರುತಿತ್ತು. ಅಂತಹದ್ದಕ್ಕೆ ಒಂದು ನಿದರ್ಶನವೆಂದರೆ ಇತ್ತೀಚಿನ ಆಜಂಗಢದ ಸುದ್ದಿ. ಆ ಸುದ್ದಿಯನ್ನು ಪ್ರಕಟಿಸಿದ್ದೇ ವಿಶೇಷವಲ್ಲ, ಬದಲಾಗಿ ಅದಕ್ಕೆ ಸಂಬಂಧಪಟ್ಟಂತೆ ಅವರು ಕಲೆ ಹಾಕಿದ ಅಂಕಿ- ಅಂಶ, ಮಾಹಿತಿಗಳು ನಿಜಕ್ಕೂ ಅದು ಪತ್ರಿಕೋದ್ಯಮದ ಕಾರಣಕ್ಕಾಗಿ ಪತ್ರಿಕೋದ್ಯಮ ಎಂಬ ಧೋರಣೆಯ ಕಾರ್ಯವಲ್ಲ, ಬದಲಾಗಿ ಬದ್ಧತೆಯ ನೆಲೆಯ ಬೌದ್ಧಿಕ ಪತ್ರಿಕೋದ್ಯಮ ಎಂಬುದನ್ನು ಹೇಳುತ್ತಿದ್ದವು. ಯಾವುದೇ ಮುಂಚೂಣಿಯಲ್ಲಿರುವ ವ್ಯಕ್ತಿಯನ್ನು ಆತನ ಪ್ರತಿ ವಿಷಯದಲ್ಲೂ ಟೀಕಿಸುವುದು ಸುಲಭ. ಆದರೆ, ಯಾರೂ ಕೂಡ ಏನನ್ನೂ ಮಾಡದೆ ಏಕಾಏಕಿ ನಂಬರ್ ಒನ್ ಆಗಲು ಸಾಧ್ಯವಿಲ್ಲ. ಒಟ್ಟಾರೆ ತನ್ನದೇ ವೈಶಿಷ್ಟ್ಯ, ಕ್ರಿಯಾಶೀಲತೆಯೊಂದಿಗೆ ಓದುಗರ ಮನಗೆಲ್ಲುವುದರೊಂದಿಗೆ ಪ್ರಬುದ್ಧ ಪತ್ರಿಕೋದ್ಯಮಕ್ಕೆ ಟಿಒಐ ಸಾಕ್ಷಿಯಾಗಿದೆ.

ಪೂರ್ಣ ಓದಿಗೆ : ಮೀಡಿಯಾ ಮೈಂಡ್

ಲಂಕೇಶರು ಮೊದಲು ಸಂಪಾದಕರಾಗಿದ್ದು `ಲಂಕೇಶ್ ಪತ್ರಿಕೆ’ಗಲ್ಲ; `ಪಾಂಚಾಲಿ’ ಗೆ

ಬಸವರಾಜು ಲಂಕೇಶರ ಉಸಿರಿನಂತೆ ಒಡನಾಡಿದವರು. ‘ಲಂಕೇಶ್ ಪತ್ರಿಕೆ’ಯ ಹಿಂದೆ ಕಾಣದಂತೆ ಕೆಲಸ ಮಾಡಿದವರು. ಲಂಕೇಶ್ ಪತ್ರಿಕೆ ರೂಪುಗೊಳ್ಳುವುದಕ್ಕೆ ಮುನ್ನವೇ ಲಂಕೇಶ್ ‘ಪಾಂಚಾಲಿ’ ರೂಪಿಸಿದ್ದರು. ಕನ್ನಡದ ವಿಶೇಷಾಂಕಗಳು ನಾಚಿಕೆ ಪಟ್ಟುಕೊಳ್ಳುವಂತೆ ಪಾಂಚಾಲಿ ರೂಪುಗೊಂಡಿತ್ತು.

ನೆಲಮನೆ ದೇವೇಗೌಡರ ಅಗಾಧ ಉತ್ಸಾಹ, ಲಂಕೇಶರ ಹುರುಪು ಎರಡೂ ಕನ್ನಡಕ್ಕೆ ‘ನ ಭೂತೋ, ನ ಭವಿಷ್ಯತಿ..’ ಎನ್ನುವ ವಿಶೇಷಾಂಕ ಕೊಟ್ಟಿತು. ಆ ಪಾಂಚಾಲಿ ಕಥೆಯನ್ನು ಬಸವರಾಜು ಇಲ್ಲಿ ಮೆಲುಕು ಹಾಕಿದ್ದಾರೆ.

ಈ ಲೇಖನ ಒದಗಿಸಿದ್ದಕ್ಕಾಗಿ ಬಸವರಾಜು ಅವರಿಗೆ ಥ್ಯಾಂಕ್ಸ್

-ಬಸವರಾಜು

`ಮೇಸ್ಟ್ರನ್ನ ಹಿಂದಕ್ಕೂರಿಸ್ಕಂಡ್ ಒಸಿ ಸುತ್ತಿದೀನ ಬಸುರಾಜು… ಹೋಗ್ದೆ ಇರ ಜಾಗ್ವೇ ಇಲ್ಲ, ನಂದೋ ಲಡಾಸ್ ಸ್ಕೂಟ್ರು, ನಾನಾಗ ಅಂತಾ ದಪ್ಕಿರಲಿಲ್ಲ, ಮೇಸ್ಟ್ರು ಜೋರಾಗಿದ್ರು, ಒಳ್ಳೆ ಎದ್ದಾಳು, ಇಬ್ರು ಸೇರದ್ರೆ ಏನಾಗನ ಅದು, ಎಳೀವಳ್ದು ನಾವ್ ಬುಡ್ತಿಲ್ಲ… ಪೆಟ್ರೋಲ್ಗೂ ಕಾಸಿಲ್ಲ, ನಮ್ ಪೆಟ್ರೋಲ್ಗುವೆ… ಅಂತಾದ್ರಲ್ಲಿ ಮೇಸ್ಟ್ರು ಹುಚ್ಚತ್ತಿಸ್ಕಂಡವ್ರೆ, ಲೇ ಗೌಡ, ನಂಗೊತ್ತಿಲ್ಲ ಸ್ಪೆಷಲ್ ಇಷ್ಯೂ ತರ್ಬೇಕು ಕಣಲೇ ಅಂತರೆ…’

`ಪಾಂಚಾಲಿ ಹೆಂಗ್ಬಂತು ಗೌಡ್ರೆ…’ ಎಂದು ನೆಲಮನೆ ಪ್ರಕಾಶನದ ದೇವೇಗೌಡ್ರನ್ನ- ಅವರು ಸಾಯುವುದಕ್ಕೆ ಮುಂಚಿನ ಆರೇಳು ತಿಂಗಳಿನಲ್ಲಿ, ಹೀಗೆ ಸಂಜೆಯ `ಕೂತು ಮಾತಾಡುವ’ ತಂಪು ಹೊತ್ತಿನಲ್ಲಿ ಕೇಳಿದಾಗ, ಪಾಂಚಾಲಿ ಹುಟ್ಟಿದ್ದು, ಮೇಸ್ಟ್ರು ತಲೆಕೆಡಿಸಿಕೊಂಡಿದ್ದು, ಕಾಸಿಗಾಗಿ ಪರದಾಡಿದ್ದು, ಹೊಸ ತಲೆಮಾರಿನ ಲೇಖಕ/ಲೇಖಕಿಯರನ್ನು ಪಟ್ಟಿ ಮಾಡಿದ್ದು, ಮಾಡುವಾಗ ಎದುರಾದ ಸಮಸ್ಯೆಗಳು, ಅನಗತ್ಯ ವಾದ-ವಿವಾದಗಳು, ಮನಸ್ತಾಪಗಳು, ಜಗಳಗಳು… ಹೀಗೆ ಎಲ್ಲವನ್ನೂ ಸ್ವಾರಸ್ಯಕರವಾಗಿ ಬಿಚ್ಚಿಡತೊಡಗಿದರು.

ಲಂಕೇಶರು ಮೊದಲು ಸಂಪಾದಕರಾಗಿದ್ದು `ಲಂಕೇಶ್ ಪತ್ರಿಕೆ’ಗಲ್ಲ; `ಪಾಂಚಾಲಿ’ ಎಂಬ ವಿಶೇಷ ಸಂಚಿಕೆಗೆ. 1974ರಲ್ಲಿ ಹೊರಬಂದ ಇದು `ಪ್ರಜಾವಾಣಿ’ ದೀಪಾವಳಿ ವಿಶೇಷಾಂಕವನ್ನು ಹೋಲುವ ಆಕಾರ ಮತ್ತು ಸೈಜ್ನಲ್ಲಿತ್ತು. ಇದು ಕೂಡ `ದೀಪಾವಳಿ-ರಾಜ್ಯೋತ್ಸವ ವಿಶೇಷ ಸಂಚಿಕೆ’ ಎಂಬ ಹಣೆಪಟ್ಟಿ ಹಚ್ಚಿಕೊಂಡಿತ್ತು. ಆ ಕಾಲಕ್ಕೇ ನವ್ಯ, ವೈಚಾರಿಕ, ಪ್ರಗತಿಪರ ಆಲೋಚನೆಗಳ ಸಿಡಿಗುಂಡುಗಳಂತಹ ಲೇಖಕರಿದ್ದ, ಚಿಂತನೆಗಚ್ಚುವ ಬರಹಗಳಿಂದ ಕೂಡಿದ, ಈ ಕಾಲಕ್ಕೂ ವಿಶಿಷ್ಟವಾದ ಅಪರೂಪದ ಅದ್ಭುತ ಸಂಚಿಕೆ.

ಲಂಕೇಶರ ಒಡನಾಟಕ್ಕೆ ಬಿದ್ದಾಗಿನಿಂದಲೂ, ಅವರಿಗೆ ಸಂಬಂಧಪಟ್ಟ ಹತ್ತಾರು ವಿಷಯಗಳನ್ನು ಅರಿಯುವ, ಅರಗಿಸಿಕೊಳ್ಳುವ, ಅದರಲ್ಲೇ ಏನೋ ಒಂದು ಖುಷಿ ಕಾಣುವ ನನಗೆ, ಅವರಿಗೆ ಹತ್ತಿರವಾದಂತೆಲ್ಲ ಅರ್ಥವಾಗದವರಂತೆಯೇ ಕಾಣುತ್ತಿದ್ದರು. ಆ ವ್ಯಕ್ತಿತ್ವವೇ ಅಂಥಾದ್ದು- ವಿಸ್ಮಯ, ವಿಚಿತ್ರ. ಎಪ್ಪತ್ತರ ದಶಕದಲ್ಲಿ ಲಂಕೇಶರು ಸಂಪಾದಿಸಿದ್ದ `ಪಾಂಚಾಲಿ’ಯ ಬಗೆಗಿನ ಬೆರಗು ಕೂಡ ಅಂಥಾದ್ದೇ ಒಂದಾಗಿ ಬುದ್ಧಿಗೆಡಿಸಿತ್ತು. ಏನಾದರೂ ಮಾಡಿ ಅದನ್ನೊಂದು ಸಲ ನೋಡಬೇಕು, ಓದಬೇಕು ಎಂದು ನೇರವಾಗಿ ಹೋಗಿ ಲಂಕೇಶರನ್ನೇ ಕೇಳಿದ್ದೆ. ಅದಕ್ಕವರು ಎಂದಿನ ತಮ್ಮ ಉಡಾಫೆಯಿಂದ, `ಅದ್ನೆಲ್ಲ ಯಾರಿಡ್ತರಲೇ…’ ಎಂದು ಒಂದೇ ಸಾಲಿನ ಉತ್ತರದಲ್ಲೇ ಎಲ್ಲವನ್ನೂ ಹೇಳಿ ಸುಮ್ಮನಾಗಿಸಿದ್ದರು.

ಅವರಿದ್ದದ್ದೇ ಹಾಗೆ- ನಿರ್ಲಕ್ಷಿಸುವ ಮೂಲಕ ಕುತೂಹಲ ಕೆರಳಿಸುವುದು. ನಿರಾಕರಿಸುವ ಮೂಲಕ ನಿರೀಕ್ಷೆಯ ಬೀಜ ಬಿತ್ತುವುದು. ಹಳೆಯದನ್ನು ಕಂಡರೆ ಕಣ್ಣರಳಿಸುವುದು, ಅಷ್ಟೇ ಬೇಗ ಖಿನ್ನರಾಗುವುದು. ಇದನ್ನು ಅವರ ನಡವಳಿಕೆಗಳಿಂದ ಖುದ್ದಾಗಿ ಕಂಡಿದ್ದೆ. ಪತ್ರಿಕೆಯಲ್ಲಿ, ಅವರೊಂದಿಗೆ ಕೆಲಸ ಮಾಡುತ್ತಿದ್ದಾಗ ಅವರ ಕೆಲ ಅಭಿಮಾನಿಗಳು ಅವರಿಗೆ ಸಂಬಂಧಿಸಿದ ಅಪರೂಪದ ಹಳೆಯ ವಸ್ತುಗಳನ್ನು ತಂದು ಕೊಡುತ್ತಿದ್ದರು. ಅವರ ಕೆಲವೇ ಕೆಲವು ಸ್ನೇಹಿತರು ಆಗಾಗ ಬಂದು ಮರೆತುಹೋದ ವಿಷಯಗಳನ್ನು ಜ್ಞಾಪಿಸುತ್ತಿದ್ದರು. ಅದನ್ನೆಲ್ಲ ಬಹಳ ಸಂಭ್ರಮದಿಂದಲೇ ಸವಿಯುತ್ತಿದ್ದರು.

ಒಂದು ಸಲ ಹೀಗೆಯೇ, ಯಾರೋ ಅವರ ಅಭಿಮಾನಿಯೊಬ್ಬರು, ಅವರ ಒಂದು ಹಳೆಯ ಫೋಟೋವನ್ನು- ಸುಮಾರು ವರ್ಷಗಳಿಂದ ಜೋಪಾನವಾಗಿ ಕಾಪಾಡಿಕೊಂಡು ಬಂದ್ದದ್ದನ್ನು- ಪೋಸ್ಟ್ ಮುಖಾಂತರ ಕಳುಹಿಸಿಕೊಟ್ಟಿದ್ದರು. ಅದು ಸುಮಾರು ಎಪ್ಪತ್ತರ ದಶಕದ್ದು, ಬ್ಲ್ಯಾಕ್ ಅಂಡ್ ವೈಟ್ ಕಾಲದ್ದು. ತುಂಬಾ ಚೆನ್ನಾಗಿತ್ತು. ಮೇಸ್ಟ್ರು ಹ್ಯಾಂಡ್ಸಮ್ಮಾಗಿದ್ದರು. ಆ ಫೋಟೋ ನಮ್ಮ ಪಾಲಿಗೆ ನಿಧಿ. ಮೇಸ್ಟ್ರಿಗೆ ತೆಗೆದುಕೊಂಡು ಹೋಗಿ ಕೊಟ್ಟೆ, ನೋಡಿದರು, ಮಾತಿಲ್ಲ, ಮುಖದಲ್ಲಿ ಯಾವ ಭಾವನೇನೂ ಇಲ್ಲ. ತಕ್ಷಣ ಹರಿದು ಕಸದಬುಟ್ಟಿಗೆ ಹಾಕಿದರು. `ಜೀವವಿರುವ ನಾನೇ ಇರುವಾಗ, ಜೀವವಿಲ್ಲದ ಫೋಟೋ ಯಾಕೆ’ ಎಂಬ ಭಾವ. ಸೇಡ್, ಬೋದಿಲೇರ್, ಕಾಮು, ಕಾಫ್ಕಾ ಎಲ್ಲ ಲಂಕೇಶರಲ್ಲಿಯೇ. ಒಂದೇ ಗಳಿಗೆಯಲ್ಲಿಯೇ. ಅಲ್ಲಿ ನಿಲ್ಲಲಿಕ್ಕೇ ಹೆದರಿಕೆಯಾಯಿತು.

More

%d bloggers like this: