ವೈದೇಹಿ ಹೇಳುತ್ತಾರೆ: ನಮ್ಮೆಲ್ಲರಲ್ಲೂ ‘ಕಥೆ’ ಇದೆ

ಮೊನ್ನೆ ಮೊನ್ನೆ ತಾನೇ ವೈದೇಹಿ ತಮ್ಮ ಕಥೆಗಳ ಲೋಕದಲ್ಲಿ ಅಡ್ಡಾಡಿದ ಈ ಬರಹವನ್ನು ಪ್ರಕಟಿಸಿದ್ದೆವು. ಈಗ ಪ್ರಶಸ್ತಿ ಬಂದ ಸಂದರ್ಭದಲ್ಲಿ ಇನ್ನೊಮ್ಮೆ ಓದಲು ನಿಮಗಾಗಿ ನೀಡುತ್ತಿದ್ದೇವೆ

ಕಥಾ ಸಮಯ – ವೈದೇಹಿ

ಬದುಕು ಒಂದೇ ಆದರೂ, ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನ. ಆ ಭಿನ್ನತೆಯನ್ನು ಅದರ ನಡುವಿನ ಸಂಘರ್ಷವನ್ನು ಹೊರಪ್ರಪಂಚ, ಅದರೊಳಗಿನ ನಮ್ಮ ಪ್ರಪಂಚ, ಅದರ ಅನುರಾಗ, ಪ್ರೀತಿ-ಒಳ ಜಗಳವನ್ನು ಹೇಗೆ ಒರೆಗೆ ಹಚ್ಚಬೇಕು? ತಿಕ್ಕಿ, ನೋಡಿ, ಅದರ ಮಹತ್ವವನ್ನು ಸತ್ವವನ್ನು ಹೇಗೆ ಅರಿಯಬೇಕು? ಬಹುಶಃ ಕತೆ ಈ ಕಾರಣಕ್ಕೆ ಹುಟ್ಟಿಕೊಂಡಿರಬೇಕು. ನಮ್ಮ ಅನುಭವವನ್ನು ನಾವು ಒರೆಗೆ ಹಚ್ಚಲು ಪ್ರಯತ್ನಿಸಿದಾಗ ಕತೆ ಹುಟ್ಟಿಕೊಳ್ಳುತ್ತೆ. ಹಾಗೆ ನೋಡಿದರೆ ಕತೆ, ಕವಿತೆಗಳು ಎಲ್ಲೆಲ್ಲೂ ಚೆಲ್ಲಾಡಿವೆ. ಆಯ್ದುಕೊಳ್ಳುವ  ಮನಸ್ಸು ಇರಬೇಕು ಅಷ್ಟೇ ಮುತ್ತು, ರತ್ನ, ಕಲ್ಲು ಎಲ್ಲಾ ಬಿದ್ದಿವೆ, ನೀವು ಯಾವುದನ್ನು ಆಯ್ದುಕೊಳ್ತೀರಿ? ಕತೆಗಾರ, ಸಾಹಿತಿಯ ಮುಖ್ಯ ಕಾಳಜಿಯೆಂದರೆ ಇವುಗಳನ್ನು ಹೆಕ್ಕಿಕೊಳ್ಳುವುದು ಹೇಗೆ ಎಂಬುದೇ ಆಗಿದೆ. ಕತೆಯನ್ನು ಕಥಾ ತಂತಿಯನ್ನು ಮಿಡಿದಾಗ ಮಾತ್ರ ಕತೆ ಹುಟ್ಟಿಕೊಳ್ಳುತ್ತೇ ವಿನಃ ಬರಿಯ ಕತೆ ಅಲ್ಲ.

ನಮ್ಮೆಲ್ಲರಲ್ಲೂ ‘ಕಥೆ’ ಇದೆ. ಇಲ್ಲಿರುವ ಎಲ್ಲರನ್ನು ಅಲ್ಲಾಡಿಸಿದರೂ ರಾಶಿ ರಾಶಿ ಕಥೆ ಬೀಳುತ್ತೆ. ನಮ್ಮಜ್ಜನ ಕಾಲದಿಂದಲೂ ‘ಕಥೆ’ ಪ್ರಾಮುಖ್ಯ ಪಡೆದಿದೆ. ಉದಾಹರಣೆಗೆ ನೋಡಿ “ಅವನ ಕತೆ ಮುಗಿಯಿತು”. “ಅವಳ ಕಥೆ ಹಾಗೆ” “ನಿನ್ನ ಕಥೆ ಎಂಥ ಮಾರಾಯ” ನಾವು ಕತೆ ಅಂತಾನೆ ಅಂತೇವೆ.  story ಎನ್ನುವುದಿಲ್ಲ.

ಸ್ಥಿತಿ ಸನ್ನಿವೇಶದ ಬಗ್ಗೆ ನಾವು ವರ್ಣಿಸಲು ಆರಂಭಿಸುವುದೇ ‘ಕಥೆ’ ಎಂಬ ಮೂಲಕವೇ. ಈ ಮೂಲಕವೇ ಕಥೆಯೊಳಗಿನ ‘ಕಥೆ’ಯನ್ನು ಹಿಡಿದ ಸವಾಲು ಕಥಾಗಾರನದ್ದು. ಈಗ ನಮ್ಮ ದೇಶದ ಕಥೆ ನೋಡಿ. ಇದು ಹೇಳಿ, ವರ್ಣಿಸಿ ಮುಗಿವ ಕತೆಯಾ? ನಮ್ಮ ದೇಶದ ಕತೆಯನ್ನು ನಾವು ಮರುಕಟ್ಟಬೇಕಾಗಿದೆ. ಆದರೆ ಹೇಗೆ ಅನ್ನುವುದೇ ಸವಾಲು.

ಹೇಗೆ ನಾವೆಲ್ಲ ಬೇರೆ ಬೇರೆ ಯಾಗಿದ್ದೀವಿ, ಮನಸ್ಸು, ಭಾವನೆ ಮುಖ್ಯ ಕಾಳಜಿ ಬೇರೆ ಬೇರೆ. ಪರಸ್ಪರ ಕೊಲ್ಲುವ, ತಿನ್ನುವ ಕಾಲ ಬಂದಿದೆ. ಇಂತಹ, ದಿನ ದಿನ ಕಾಣುವ ಕತೆಗಳಲ್ಲಿ ನಾವು ಯಾವುದನ್ನು ಹೆಕ್ಕಬೇಕು? ಕತೆ ಮೂಲಕ ನಮ್ಮ ನಮ್ಮೊಳಗೆ ಹೇಗೆ ಸಂವಾದ ಏರ್ಪಡಿಸಬೇಕು ಎಂಬುದೇ ಇಂದಿನ ನಮ್ಮಂತಹ ಕತೆಗಾರರಿಗಿರುವ ಸವಾಲು. ಈ ಸವಾಲುಗಳ ಕೇಂದ್ರದಲ್ಲಿರುವುದು ಹಿಂಸೆ, ಆತಂಕ, ಭಯ. ಇವುಗಳೇ ಇಂದು ನಮ್ಮನ್ನು ಕಾಡುತ್ತಿರುವುದು. ನಮ್ಮ ಮನೆಗಳಲ್ಲಿ ಗಂಡಸರು ಇರದ ಹೊತ್ತಲ್ಲಿ ನಾವು ಹೆಂಗಸರು ಎಲ್ಲಾ ಬಾಗಿಲು ತೆರೆದು ಧೈರ್ಯವಾಗಿ ಕೂರಲಾಗುವುದಿಲ್ಲ. (ಗಂಡಸರ ಸ್ಥಿತಿಯೂ ಅಷ್ಟೇ ಆಗಿದೆ) ಕಾರಣ ಭಯ, ಕೋಮುವಾದದ ಭಯ, ಅಂತರಾಷ್ಟ್ರೀಯ ಭಯ ಈ ಎಲ್ಲವನ್ನೂ ನೋಡುವಾಗ ಕತೆಗಾರನಿಗೆ ಅವೆಲ್ಲವೂ ಕತೆಯಾಗಿಯೇ ಕಾಣುತ್ತದೆ.

ನನ್ನ ಇವತ್ತಿನ ಕತೆ ‘ಅಮ್ಮಚ್ಚಿಯೆಂಬ ನೆನಪು’ ಕೂಡಾ ಇಂತಹುದೇ ಹಿಂಸೆಯ ಕಥೆ. ನನ್ನ ‘ವಾಣಿಮಾಯಿ’ ಎಂಬ ಕತೆ ಕೂಡಾ ಹಿಂಸೆಯ ಕತೆ. ನಾನು ಇಂತಹ ಕತೆಗಳನ್ನು ಮತ್ತೆ ಮತ್ತೆ ಬರೆದು ಆ ಮೂಲಕ ನನ್ನನ್ನು ನಾನೇ ಅರಿಯುವ  ಪ್ರಯತ್ನದಲ್ಲಿದ್ದೇನೆ. ಆ ಮೂಲಕ ಸಮುದಾಯವನ್ನು ಅರಿಯುವ, ಸಂಶೋಧಿಸುವ, ಶೋಧಿಸುವ ಮಾರ್ಗವಾಗಿ ನನಗೆ ‘ಕತೆ’ ಸಹಾಯಕ್ಕೆ ಬರುತ್ತದೆ. ಈ ಕಾರಣಕ್ಕಾಗಿ ನಾನು ಮತ್ತೆ ಮತ್ತೆ ಹೊಸ ಹೊಸ ಕಥೆ ಬರೆದು ಹೊಸ ಹೊಸ ಸತ್ಯಗಳನ್ನು ಕಾಣಬೇಕೆಂಬ ನನ್ನ ಆಸೆಗೆ ನಾನು ಅವಕಾಶ ಮಾಡಿಕೊಡುತ್ತೇನೆ.

ಈ ಕತೆ ಕೇವಲ ಸ್ತ್ರೀ ಕೇಂದ್ರಿತ ಕತೆಯಲ್ಲ. ನನ್ನ ಕತೆಗಳು ಹಾಗೆ ಕಾಣುತ್ತವೆ. ಇದು ಕೂಡಾ ಸ್ತ್ರೀ ಕೇಂದ್ರಿತ ಎನ್ನಿಸುವುದಕ್ಕೆ ಕಾರಣ ಇಲ್ಲಿ ಬರುವ ಅಮ್ಮಚ್ಚಿ ಎಂಬುವಳ ಕಾರಣಕ್ಕೆ. ಈ ಕತೆಯಲ್ಲಿ ನಾನು ಅಮ್ಮಚ್ಚಿಯ ಗೆಳತಿಯಾಗಿ ನಿರೂಪಣೆ ಮಾಡುವ ಪಾತ್ರದಲ್ಲಿದ್ದೇನೆ.

ಇಲ್ಲಿ ಕೂಡಾ ಹಿಂಸೆಯೇ ಪ್ರಧಾನ. ಆದರೆ ಇದರಲ್ಲಿ ಪುರುಷ ಸಮಾಜದ ಹಿಂಸೆಯಲ್ಲ. ಬದಲಿಗೆ ವ್ಯಕ್ತಿಯಿಂದ ವ್ಯಕ್ತಿಗಾಗುತ್ತಿರುವ ಹಿಂಸೆ. ಈ ಹಿಂಸೆಯ ಬಗೆಗೆ ಸೀದಾ ಬರೆದಾಗ ನನ್ನೊಳಗಿನ ಕತೆಗಾರ್ತಿಯ ಆಶಯ ಪೂರ್ತಿಯಾಗುವುದಿಲ್ಲ ಅನ್ನುವ ಕಾರಣಕ್ಕೆ ಕಥೆ ಮಾರ್ಗವನ್ನು ಹಿಡಿದುಕೊಂಡೆ. ಈ ಹಿಂದಿನ ‘ವಾಣಿಮಾಯಿ’ ಕತೆಯಲ್ಲಿ ಇನ್ನೂ ಬರೆಯಬೇಕೆಂಬ ಆಸೆ ಈ ಕತೆಯಲ್ಲಿ ಮುಂದುವರೀತದೆ.

ಬಿ.ವಿ. ಕಾರಂತರ ನಾಟಕದ ರಾಶಿಯೇ ನಮ್ಮ ಮುಂದೆ ಇದೆ. ಆದರೆ ಅದನ್ನು ಹೇಗೆ ಮಾಡುವುದು ಎಂಬುದೇ ಸಮಸ್ಯೆ ಅನ್ನುತ್ತಿದ್ದರು. ನನ್ನದೂ ಹಾಗೇ ಕತೆಗಳು ರಾಶಿ ಇದೆ. ಅದರಲ್ಲಿ ಯಾವುದನ್ನು ಬರೆಯೋದು? ಇದು ಎಲ್ಲಾ ಕಲಾಕಾರರಿಗೂ, ಸಾಹಿತಿಗಳಿಗೂ, ಪ್ರಜ್ಞಾವಂತರಿಗೂ ಕಾಡುವ ಪ್ರಶ್ನೆ. ಇದನ್ನು ಹೇಗೆ ಬರೆಯೋದು, ಓದುಗನನ್ನು ಹೇಗೆ ತಲುಪೋದು ನನ್ನೊಳಗಿನ ತಂತಿಯನ್ನು ಹೇಗೆ ಮೀಟೊದು ಎಂಬುದೇ ನನ್ನ ಪ್ರಶ್ನೆ.

ಅಮ್ಮಚ್ಚಿ ಎಂಬ ಕತೆಯ ಸಣ್ಣ ಭಾಗವನ್ನು ಓದ್ತೇನೆ. ಅಮ್ಮಚ್ಚಿ ಎಂಬ ಹುಡುಗಿ ತಂದೆ ತಾಯಿಯೊಂದಿಗಿದ್ದಾಳೆ. ಮನೇಲಿ ಯಾವ ಗಂಡು ದಿಕ್ಕಿಲ್ಲವೆಂಬ ಕಾರಣಕ್ಕೆ ತಾಯಿ, ವೆಂಕಪ್ಪಯ್ಯನೆಂಬುವನನ್ನು ಸಾಕಿಕೊಂಡಿದ್ದಾಳೆ. ಕ್ರಮೇಣ ಈತ ಮನೆಗೂ ಮತ್ತು ಅಮ್ಮಚ್ಚಿಗೂ ತಾನೇ ಯಜಮಾನ ಎಂಬಂತೆ ವರ್ತಿಸುತ್ತಾನೆ. ಅವಳನ್ನು ತನ್ನ ಹೆಂಡತಿಯೆಂದೇ ಭಾವಿಸಿರುತ್ತಾನೆ. ಆದರೆ ಈಕೆಯ ಮನಸ್ಸು ಬೇರೆ. ಆತನ ದಬ್ಬಾಳಿಕೆ, ಶೋಷಣೆಗೆ  ಆಕೆ ಅವಳದ್ದೇ ಆದ ರೀತಿಯಲ್ಲಿ ಪ್ರತಿಭಟನೆ ಮಾಡ್ತಾಳೆ. ತುಂಬ ಸ್ವತಂತ್ರ ಪ್ರವೃತ್ತಿಯ ಹುಡುಗಿಗೆ ಮನೆತುಂಬ ಬಂಧನ. ಇದು ಅವಳಿಗೆ ಆಗ ಕರೆ ಕರೆಯಾಗ್ತದೆ.

ಈ ಕತೆಯ ಭಾಷೆ ಬಂಟ್ವಾಳ, ಪಾಣೆ ಮಂಗಳೂರು ಪರಿಸರದ ಕೋಟ ಬ್ರಾಹ್ಮಣರು ರೂಢಿಸಿಕೊಂಡ ತುಳು-ಮಲೆಯಾಳಂ ಪ್ರಭಾವಕ್ಕೊಳಗಾದ ಕನ್ನಡ.

ಅಮ್ಮಚ್ಚಿಯ ಕತೆಯನ್ನು ನೇರವಾಗಿ ಓದ್ತೇನೆ.

“ಅವತ್ತೊಂದು ದಿನ ಪೇಟೆಗೆ ಹೋಪಯಾ” ಎಂದಳು.

ಅಮ್ಮಚ್ಚಿ ಹೂಂ-ನಾನು, “ಅಲ್ಲಿಂದ ದೇವಸ್ಥಾನಕ್ಕೆ ಹೋಪ..” ಹೂಂ…. ಅಲ್ಲಿಂದ…

“ಅಮ್ಮಾ ಮನೆಗೆ ಏನಾರೂ ಸಾಮಾನು-ಗೀಮಾನು ಬೇಕ?”

“ಬೇಕಾರೆ ನೀಯಂತಕೆ ಗೊಂಡಾಡ್ಸುದು, ನಿನಗೆ ಅದೇ ನೆಪ್ಪಲೆ ಪೇಟೆ ಮೆರವಣಿಗೆ ಮಾಡುದಾ? ವೆಂಕಪ್ಪಯ್ಯ ತರ್ತಾ.”

ಯಾಕೆ ಅವನಿಗೆ ಹೇಳ್ತುದು? ಒಂದು ಕಾಲೆಲೆ ಅಂವ ಬೇಕಾಯ್ತು, ಹೇಳಿಂಡಾಯ್ತು, ತರ್ಸಿಂಡಾಯ್ತು ಇನ್ನೂ ಯಾಕೆ ಅಂವ ನಮ್ಗೆ? ನಂಗೆ ತಿಳಿತಿಲ್ಲಯಾ? ನಂಗೆ ಹೇಳುಗಾಗ್ದ?

“ಹಂಗಾದ್ರೆ ಸೈ ಮಾರಾಯ್ತಿ. ಹೋಗು ನೀನೆ”

ಬೇಕಾದ ಸಾಮಾನುಗಳನ್ನು ಹೇಳಿದರು, ದುಡ್ಡುಕೊಟ್ಟರು ಸೀತತ್ತೆ. ಏನು ಪುಣ್ಯವೋ ಅಷ್ಟು ಬೇಗ ಒಪ್ಪಿದ್ದು. ಅಮ್ಮಚ್ಚಿ ಮುಖ ಆಗಿದ್ದು ಅಂದ್ರೆ….!

” ಬಾ ಹೊರಡುವ. ಇನ್ನು ಆ ಸನಿ ಮುಖದವ ಬಂದ್ರೆ ಜಂಭರ ಎಲ್ಲ ಅಡಿಮೇಲು”

ಅವಸರದಿಂದ ಒಳಗೆ ಓಡಿದಳು. ಜಡೆ ಬಿಚ್ಚಿಕೊಂಡು, ತಲೆ ಬಾಚಿಕೊಂಡು ಹೆಣೆ ಕಟ್ಟಿಕೊಂಡಳು. ಅದು ರುಮು ರುಮು ಹಾರುವಾಗ “ಹೆಂಗೆ ಕಾಣ್ತ್ಯ ನಂಗೆ ಒಂಬುದಾ?”

ಎಂದು ಉತ್ಸಾಹ ತಾಳಿದಳು.

ಖಾಲಿಯಾಗುತ್ತಾ ಬಂದ ಉದ್ದ ಕರಿಡಿಗೆಯ ಬುಡವನ್ನು ಬಡಿದು ಬಡಿದು ತನ್ನ ಪುಟ್ಟ ಡಬ್ಬಿಗೆ ಉದುರಿಸಿಕೊಂಡಳು. ಒಂದೇ ಡಬ್ಬಿ ತಕ್ಕೊಂಡರೆ ವರ್ಷವಿಡೀ ಸಾಕಂತೆ ಅವಳಿಗೆ.

“ಅಮ್ಮ ಹೆಂಗೂ ಪೌಡರ್ ಹಚ್ಯಂತಿಲ್ಲೆ. ಅವಳಿಗೆ ಹಚ್ಯಂಡರೆ ಆತ್ ಎಂತದೊ ಇಲ್ಲೆ, ಕೊಂಚ ಪರಿಮಳ ಬಕ್ಕು. ಆಚೀಚೆ ಹೊಪ್ಯಂಚಿಗೆ. ಅವಳಿಗೆ ಬ್ಯಾಡ ಅಂಬ್ರು. ಯಾರಾರೂ ಏನಾರು ಹೇಳ್ತು. ಆ ಹೇಳೋರು ಉಂಟಲ್ಲ ನೂರಿ ಬಂದ್ರಾರೂ ಸಹಿಸ್ಸಂತೋ ಪರಿಮಳನ ಸಹಿಸ್ಸಂತಿಲ್ಲ.” ಎನ್ನುತ್ತ ಮುಖಕ್ಕೆ ಬಡ ಬಡ ಪೌಡರ್ ಹೊಡೆದುಕೊಂಡಳು. ನನ್ನ ಮುಖಕ್ಕೂ ಪೌಡರ್ ಹೊಡೆದು ಲಾಲಗಂಧ ಇಟ್ಟಳು.

ಅಮ್ಮಚ್ಚಿ ಹೊರಡುವಾಗ ಹೀಗೆಯೇ ಸಂಭ್ರಮವೇ ಹೊರಡ್ತದೆ. ಆಗಲೇ ಹೇಳಿದಂತೆ ಹೊರಡುದಾದ್ರೂ ಎಲ್ಲಗೆ ಅಂತ ಬೇಕಲ್ಲ?

“ಅಪ್ಪ ಸತ್ತ ಮೇಲೆ ನಮ್ಮನ್ನ ಮೂಸಿದವರು ಉಂಟಾ? ಆಚೆ ಅಪ್ಪನ ಕಡೆಯಿಂದಲೂ ಇಲ್ಲೆ, ಈಚೆ ಅಮ್ಮನ ಕಡೆಂದಲೂ ಇಲ್ಲೆ. ಹೋತುದು, ಬಪ್ಪನಾಡು ಜಾತ್ರೆಗೆ, ಅದೂ ಇಲ್ಲದಿದ್ರೆ ಏನು ಮಾಡಗಿತ್ತು? ಯಾರೂ ಇಲ್ಲದ್ದಕ್ಕೆ ಈ ಎಂಕಪ್ಪಯ್ಯ ಸವಾರಿ ಮಾಡ್ತ ಸಾವು ಬತ್ತಿಲ್ಲೆ” ಎನ್ನುತ್ತ ಸೀರೆ ಉಟ್ಟಳು…. ಸೆರಗು ಪಟ್ಟಿ ಮಾಡಿಕೊಂಡಳು. ಎರಡೂ ಅಂಚುಗಳನ್ನು ಸರಿಯಾಗಿ ಕಾಣುವ ಹಾಗೆ ಪಟ್ಟಿ ಮಾಡಿಕೊಂಡಳು.

“ನಿಂಗೆ ಪಿನ್ನು ಕುತ್ತುಗೆ ಗೊತ್ತುಂಟಾ?…. ತೆಳಿತಾ? ಅದು ಒಂಚೂರು ಹಿಂದೆ ಕುತ್ತುಗು ಕಾಂಬ ಕುತ್ತು” ಎಂದಳು.

ಇವಳು ಹೇಳಿದಂತೆ ರವಕೆಗೂ, ಸೆರಗಿಗೂ ಹೊಂದಿಸಿ ಪಿನ್ನು ಕುತ್ತಿದೆ.

“ಹ್ಹಾಂ.. ನೀನೊಬ್ಬಳು ನಂಗೆ ಸಾತರ್ಿ. ನೀನೂ ಇಲ್ಲದಿದ್ರೆ ಏನು ಮಾಡಂಗಿತ್ತು?” ಎಂದಳು.

ನಕ್ಕರೆ ಅವಳ ಗೆರಸಿಯ ಮುಖ ಅರಳಿದ ಕಮಲದ ಹಾಗೆ ಅನ್ನುತ್ತಾರಲ್ಲ, ಅದೇ ಗೆಲುವು ನಮಗೂ ಹರಡುತ್ತದೆ. ಅವಳು ಒಂದು ನಕ್ಕರೆ ಎದುರಿದ್ದವರು ನಾಕು ನಗಬೇಕು, ಹಿತವಿದ್ದರೆ.

ಸಣ್ಣ ಉರುಟು ಕನ್ನಡಿಯಲ್ಲಿ ಆಚೆ ಬಗ್ಗಿ, ಈಚೆ ಬಗ್ಗಿ, ಹಿಂದೆ ಹೋಗಿ ಚೂರು ಚೂರೇ ನೋಡಿಕೊಳ್ಳುತ್ತಾ “ಶಂಭಟ್ರ ಮನೇಲಿ ಗೊತ್ತುಂಟಾ, ಎಷ್ಟುದ್ದ ಕನ್ನಡಿ! ಮೇಲಿಂದ ಹಿಡಿದು ಕೆಳಗಿನವರೆಗೆ ಕಾಣ್ತು” ಎಲ್ಲಂತೆ?

ಮಾಯಿಯ ಕೊಣೇಲೆ, ಥೂ ನಿಂಗೆ ಗೊತ್ತಾತಿಲ್ಲೆ. ನೀ ಉಂಚ ದೊಡ್ಡೊಳಾಗ್ಗು. ಅಲ್ಲಾ ಅಷ್ಟು ದೊಡ್ಡ ಕನ್ನಡಿ ಮಾಯಿಗೆ ಬೇಕಾ? ಮೇಲಿಂದ ಕೆಳಗಿನವರೆಗೆ ಕಂಡಿರ್ತ್ರ ಹಂಗಾರೆ? “ಕಂಡಿಂಬಗೆ ಅವರಿಗೆ ಎಂಥ ಉಳಿದಿತು ಅಂತ ಬ್ಯಾಡ್ದ?”

“ಕನ್ನಡಿ ನಂಗಾದ್ರೂ ಇದ್ದಿಪ್ರೆ” ಎಂದಳು. ಅಂತೂ ಶೋಕು ಮುಗೀತು. ಇನ್ನೇನು ಹೊರಡಬೇಕು ಬಂದೇ ಬಿಟ್ಟ ವೆಂಕಪ್ಪಯ್ಯ. ಬಂತಯ್ಯಾ ವೆಂಕಪ್ಪಯ್ಯನ ಕೋಲ.

ಅಮ್ಮಚ್ಚಿಯ ಮುಖ ಕುಂದಿದಂತೆ ಕಾಣಿಸಿ ನಾನೆಂದೆ. “ವೆಂಕಪ್ಪಯ್ಯ ಅಲ್ಲವಾ ಕುಂಕ್ಕಪ್ಪಯ್ಯ” ಸೈ ಅಮ್ಮಚ್ಚಿ ಒಂದು ನಕ್ಕಿದ್ದಂದ್ರೆ ಬಿದ್ದು ಬಿದ್ದು ನಕ್ಕಳು.

“ನೀನೊಬ್ಬಳೆ ಪ್ರಪಂಚದಲ್ಲಿ ಸಮ, ಇನ್ನಾರೂ ಸಮಯಿಲ್ಲೆ. ಕಾಣು, ಯಾರೊಬ್ರಿಗಾದ್ರೂ ಅಂವ ಕುಂಕಪ್ಪಯ್ಯನ ಹಾಗೆ ಕಾಣ್ತನ?”

ಹಾಗಾದ್ರೆ ನಾನು ಸುಮ್ಮನೆ ಹೇಳಿದ ಕುಂಕಪ್ಪಯ್ಯ ಎಂಬುದಕ್ಕೆ ಏನೋ ಅರ್ಥವಿರಬೇಕು ಎಂದು ಎಷ್ಟು ದಿನ ಗಟ್ಟಿಯಾಗಿ ನಂಬಿದ್ದೆ.

ಹೂಂ. ಎಂಕಪ್ಪಯ್ಯ ಬಂದ. “ಹೂ….ಏನು? ಏನು?ಏನು? ಕೋಲಕಟ್ಟಂಡು ಹೊರಟ್ತುದು ಎಲ್ಲಿಗೆ?” ಎಂದ.

“ಟೋಕರ ಗುಡ್ಡೆಗೆ.”

“ಎಂತಕ್ಕೆ ಹೊರಟ್ತುದು ಈಗ”

“ಸಂಕ ಪಾಸಾಣ ತಕೂಂಬುಕೆ ದಾರಿ ಬಿಡಿ ಈಗ.”

ಆತ ದಾರಿ ಬಿಡದೆ “ಏನು ಏಸ ತಗೊಂಡು ಹೋತ ಪ್ಯಾಟಿಯವ್ರ ಹಾಂಗೆ, ಛಕ್ಕೂ….ಎದೆಯೆರಡು ಕಾಣ್ತಂಗೆ ಪಟ್ಟಿ ಸೆರಗು ಮಾಡ್ಕಂಡು ಹೊರಟ್ಯಲ್ಲಾ. ಯಾರ ಮರ್ಯಾದೆ ತೆಗೆಗೆ?”

ಅಮ್ಮಚ್ಚಿಗೆ ಬಯ್ದರೂ ಜೊತೆಗಿದ್ದ ನನಗೆ ಹೇಗೆ ಬಯ್ಗುಳದ ಬಿಸಿ ತಾಕಿಸುತ್ತಿದ್ದ. ಅಮ್ಮಚ್ಚಿ ದುರುಗುಟ್ಟಿ ಅವನನ್ನು ನೋಡುತ್ತ “ಹಾಗೆ ನೀ ಹೋವುಯಾ ಕೋಮುಣ ಬಿಟ್ಕಂಡು ಎಲ್ಲಿಗೆ ಬೇಕಾರು, ನಾಕೆಣ್ತನಾ? ನಂಗೆ ಬೇಕಾದ ಹೊರಟ್ರೆ. ನಿಂಗೆ ಯಾಕೆ ಕಿಚ್ಚು?”

“ನಡಿ ಒಳಗೆ ” ಎಂದ.

“ನೀಯಾರು ನಂಗೆ ಹೇಳುಗೆ” ಅಂದ್ಲು.

“ಕಾಲು ಮುರೀತೆ”

“ನಾನೇನು ಬಾಯಿಗೆ ಕಡ್ಲೆ ಕಾಳು ಬಿಸಾಕುತ್ತಾ ಕುಂತ್ಕತ್ನಾ?”

ವೆಂಕಪ್ಪಯ್ಯ ಸೀತತ್ತೆನ ಕರ್ದು “ಹೀಂಗೆಲ್ಲಾ ಮಾಡಿ ಪ್ಯಾಟಿಗೆ ಹೊರಡ್ತುದೂ, ಬಾಸಾಯಿ ತಿಂತುದು. ಯಾಕಾಯಿ ಬೇಕಾ ಈಗ? ಪೇಟೆ ಸಾಮಾನು ಬೇಕಾರೆ ನಾನು ಕೊಣಂದು ಕೊಡ್ತಿಲ್ಲೆಯಾ?” ಎಂದು ಹೇಳುತ್ತಾ ಕಡೆಯ ಬಾಣವಾಗಿ.

“ಹೇಳ್ತೆ, ಇವಳು ಪೇಟೆಗಿಂತ ಹೋತುದು ಆ ಶಂಭಟ್ಟರ ಮನೆಗಲ್ದಾ? ಅವರ ಮನೆ ಜಗುಲಿ ಕಾಸ್ತುದು, ಬಾಯಿ ಕಳ್ದು ನೆಗಾಡ್ತುದು, ಅವು ಇವಳ ಬಾಯಿ ಹಲ್ಲೆಲ್ಲ ಲೆಕ್ಕ ಮಾಡಿಯಂತೋ”

“ಸುಳ್ಳು ಸೀತತ್ತೆ”  ನಾನು ಕಷ್ಟ ಪಟ್ಟು ಸುಳ್ಳು ಎಂದು ಕೂಗಿದ್ದು ಸೀತತ್ತೆಗೆ ಕೇಳಿಸುವುದೇ ಇಲ್ಲ.

ಸುರು ಮಾಡಿಯ್ತು ಅವ್ರು.

“ಹೌದಾ ಹೆಣ್ಣೆ ಹಿಂಗಾ ವಿಚಾರ?”

“ಅವರ ಮನೆಗೆ ಹೋಪಾರೆ ನಿಂಗೆ ಹೇಳಿಯೇ ಹೋಪೆ ಸುಳ್ಳು ಹೇಳುವ ಗಜರ್ು ಇವತ್ತಿಗೂ ನಂಗಿಲ್ಲೆ. ಈ ಬಿರ್ಕನಕಟ್ಟೆ ಭೂತದ ಮಾತು ಕೇಳ್ತುದು ನಂಗೆ ಯಾಕೆ ಬಯ್ತೆ ಸೀತತ್ತೆ ಸ್ಫೋಟವಾದಳು, “ಅಯ್ಯೋ ಹೆಚ್ಚು ವಾದ ಮಾಡದೆ ಮಾರಾಯ್ತಿ, ವಾದ ಮಾಡಳೆ. ವೆಂಕಪ್ಪಯ್ಯನೂ ಇಲ್ಲದೆ ಹೋದ್ರೆ ಗೊತ್ತುಕ್ಕು ನಿಂಗೆ ನಮ್ಮ ಅವಸ್ಥೆ ಏನು ಎಂದು” ಅವನ ಎದುರಿಗೇ ಹೇಳುತ್ತಲೇ ಹೊರಟು ನಿಂತ ಅಮ್ಮಚ್ಚಿಯನ್ನು ಅಕ್ಷರಶಃ ಒಳಗೆ ನೂಕಿದರು. ವೆಂಕಪ್ಪಯ್ಯ ನನ್ನನ್ನು ನುಂಗುವಂತೆ ನೋಡಿದ್ರು. ಅಮ್ಮಚ್ಚಿಯನ್ನು ಬಿಗಿಯಾಗಿ ಅಪ್ಪಿ ಹಿಡಿದುಕೊಂಡೆ. ಕೈ ಬಿಡಿಸಿಕೊಂಡು ತಲೆ ನೇವರಿಸಿದಳು ಅಮ್ಮಚ್ಚಿ.

“ಹೆದರಳೆ ಅದು ಪೋಂಕು, ಪೊಂಕುಗಳಿಗೆ  ಹೆದರುಗೆ ಆಗ, ಬಾ” ಎಂಬಾಗ ಅವಳ ಸ್ವರ ಕಂಪಿಸುತ್ತಿತ್ತು. ಕಣ್ಣಲ್ಲಿ ಒಂದು ಹನಿ ನೀರು ಇರಲಿಲ್ಲ.

ಮಡಲು ನೆನೆಸಿದ ಕಟ್ಟಿಗೆ ನಡೆದಳು ಅಮ್ಮಚ್ಚಿ. ತಣ್ಣಗೆ ಮಂಜುಗಡ್ಡೆಯಂತೆ. ನೆನೆದ ಒಂದು ದೊಡ್ಡ ಮಡಲು ಹಾಕಿಕೊಂಡಳು. ನನಗೂ ಒಂದು ಚಿಕ್ಕಮಡಲು ಕೊಟ್ಟಳು.

“ಬಾ ನಿಂಗೆ ಹೇಳಿಕೊಡ್ತೆ ಕಲಿ. ಎಲ್ಲ ಇದ್ಯೆ ಬರಗು ಗೊತ್ತಿಲ್ಲ ಅಂತೇಳಿ ಇಪ್ಪಲಾಗ.”

ಒತ್ತಿಟ್ಟ ಹಾಗಿದ್ದ ಸ್ವರವನ್ನ ಸಹಜ ಮಾಡಿಕೊಂಡು ಸೋಲದಂತೆ ತನ್ನ ಸದ್ದನ್ನ ನಿಭಾಯಿಸಲು ಹೊರಟಿದ್ದಳಂತೆ ಮಾತು ಮುಂದುವರೆಸಿದಳು ಅಮ್ಮಚ್ಚಿ.

“ಇಗಾ, ಈ ಗರಿ ಹಿಂಗೆ ಮುರಿ. ಉಂಚ ಬಿಗಿ ಎಳ್ಕಾ….ಹ್ಹಾಂ…ಇಲ್ದಿದ್ರೆ ಚಡಿ ಬಿಡುತ್ತು. ಕ್ರಮವೇ ಹಿಂಗೆ. ನಂಗೆ ಮಡಲು ನೆಯ್ತು ಎಂದರೆ ಸಾಕು. ಹಿಂಗೇ…ಹಿಂಗೇ…”

ಎಂದು ಹೆಣೆಯುತ್ತ ಬಂದ ಹಾಗೆ ರಾಗ ಎಳೆದಳು.

“ಇನ್ನು ಮೇಲೆ ದಿನಾ ಮೂರು, ನಾಕು ಮಡಲು ಹೆಣೆ ಏನಾ?”

ಕಾಂಬ ಯಾರು ಹೆಚ್ಚು ಹೆಣೆತ್ರು ಎಂದು, ಹೊತ್ತು ಹೋದ್ದೆ ತಿಳಿಯುವುದಿಲ್ಲ. ಹಾ…

ಈಗ ಬದಿಯ ಗರಿಯನ್ನೆಲ್ಲಾ ಒಟ್ಟು ಸೇರಿಸ್ತ ಅಂಚು ತಿಪ್ತಾ ಬಾ.. ಹಾ.. ಹ್ಯಾಂಗೆ.

“ಅವನ ಕಣ್ಣೆಲಿ ನೀರ ಬರೆಸದಿದ್ರೆ ನಾನು ನನ್ನ ಹೆಸರಲ್ಲ. ನಂಗೊಬ್ಬ ಗಂಡ ಬರೊಡು, ಮತ್ತೆ ಉಂಟು ಇವನಿಗೆ ಕಂಬಳ”

ಅವಡುಗಚ್ಚಿ ಮಡಲಿನ ಅಂಚನ್ನು ತಿಪ್ಪುತ್ತಿದ್ದಳು. “ನನ್ನ ಮದುವೆಗೂ ನಾವು ಹೆಣೆದ ಮಡಲನ್ನೇ ಹಾಕಲಕ್ಕು ಕಾಣೆ ಎಷ್ಟಗಲ, ಅಂಕಣ ಚಾಪೆಗಿಂತ ಅಗಲ” ಎಂದು ನಕ್ಕಳು.

ಕಣ್ಣಂಚು ಹೊಳೆಯುತ್ತಿತ್ತು. ನಗೆಗೂ, ಸಿಟ್ಟಿಗೂ, ಅಳುವಿಗೂ ಹೊಳೆದುಕೊಂಡೇ ಇರುವ ಕಣ್ಣಂಚಿನ ಅಮ್ಮಚ್ಚಿ

(ಆಳ್ವಾಸ್ ನುಡಿಸಿರಿಯಲ್ಲಿ ಕಥಾಸಮಯದ ಮಾತು)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: