ಜೋಗಿ ಬರೆದಿದ್ದಾರೆ: ಹಾಗಂತ ನಾವೆಲ್ಲ ದೂರ ಇಟ್ಟವರು ವೈದೇಹಿ

ಮುಳ್ಳು ಬೆರಳಲಿ ಮಲ್ಲಿಗೆಯ ಮಾಲೆ

ಏನಿದು ಇಷ್ಟೊಂದು ಸರಳವಾಗಿ ಬರೀತಾರಲ್ಲ? ಏನಿದೆ ಇದರಲ್ಲಿ? ಬರೀ ಬೋರು? ನಾವೆಲ್ಲ ಕಂಡಿದ್ದನ್ನೇ ಹೇಳ್ತಿದ್ದಾರಪ್ಪ…

ಹಾಗಂತ ನಾವೆಲ್ಲ ಆರಂಭದಲ್ಲಿ ದೂರ ಇಟ್ಟವರು ವೈದೇಹಿ.  ಅದಕ್ಕೆ ಕಾರಣ ನವ್ಯದ ಹುರುಪು. ಕತೆಗೊಂದು ತಂತ್ರಗಾರಿಕೆ ಬೇಕು, ವಿಶಿಷ್ಟ ಭಾಷಾ ಶೈಲಿ ಬೇಕು. ಏನನ್ನು ಹೇಳಿದರೂ ಅದರಲ್ಲಿ ವೈಚಾರಿಕತೆ ಇರಬೇಕು. ಬದುಕಿನ ಮತ್ತೊಂದು ಮಗ್ಗುಲನ್ನು ಕಡ್ಡಾಯವಾಗಿ ಸ್ಪರ್ಶಿಸಲೇ ಬೇಕು. ಸಂಬಂಧಗಳ ನಡುವೆ ಚಿತ್ರವಿಚಿತ್ರ ಸಂಬಂಧ ಇರಬೇಕು ಎಂದು ನಿರೀಕ್ಷಿಸುತ್ತಿದ್ದ ಕಾಲ. ಆಗ ಎಲ್ಲವನ್ನೂ ಅಗೌರವದಿಂದ ನೋಡುವುದು ಫ್ಯಾಷನ್. ಎಲ್ಲವನ್ನೂ ನಿರಾಕರಿಸುವುದು ಶ್ರೇಷ್ಠತೆ ಎಂದು ನಮ್ಮ ನವ್ಯ ಗುರುಗಳೆಲ್ಲ ಹೇಳುತ್ತಿದ್ದ ಕಾಲ.

ಆರ್ ಕೆ ನಾರಾಯಣ್, ವೈದೇಹಿ, ಮಿತ್ರಾ ವೆಂಕಟ್ರಾಜ್ ಮುಂತಾದ ಕತೆಗಾರರೆಲ್ಲ ಅದೇ ಕಾರಣಕ್ಕೆ ನಮ್ಮನ್ನು ಅಷ್ಟಾಗಿ ಆಕರ್ಷಿಸಲೇ ಇಲ್ಲ. ಆಗೇನಿದ್ದರೂ ಗತಿಸ್ಥಿತಿಯ ಗಿರಿ, ಅನ್ಯ ಅನುವಾದಿಸಿದ ಡಿಎ ಶಂಕರ, ನಮಗೆ  ಒಂದೇಟಿಗೆ ಅರ್ಥವಾಗದಂತೆ ಬರೆಯುತ್ತಿದ್ದ ರಾಮಚಂದ್ರಶರ್ಮ ಮೊದಲಾದವರೆಲ್ಲ ಇಷ್ಟವಾಗಿದ್ದರು. ಅನಂತಮೂರ್ತಿಯವರ ಕ್ಲಿಪ್ ಜಾಯಿಂಟ್’ ಕತೆ ಫೇವರಿಟ್. ಆಕಾಶ ಮತ್ತು ಬೆಕ್ಕು ಅಪೂರ್ವ ರೂಪಕ. ಪ್ರಜ್ಞಾ ಪ್ರವಾಹ ತಂತ್ರವೆಂದರೆ ಪಂಚಪ್ರಾಣ.

ಅಂಥ ಕಾಲಕ್ಕೆ ನಾವೆಲ್ಲ ಬೆಚ್ಚಿಬೀಳುವಂತೆ ಲಂಕೇಶ್ ಪತ್ರಿಕೆಯಲ್ಲಿ ವೈದೇಹಿ ಕಾಣಿಸಿಕೊಂಡರು. ಲಂಕೇಶರು ಮೆಚ್ಚಿಕೊಂಡಿದ್ದಾರೆ ಅಂದ ಮೇಲೆ ಮೆಚ್ಚಲೇಬೇಕು ಎಂದು ತೀರ್ಮಾನಿಸಿದವರಂತೆ ನಾವೊಂದಷ್ಟು ಮಂದಿ ಅವರನ್ನು ಗಂಭೀರವಾಗಿ ಓದಲು ಆರಂಭಿಸಿದೆವು. ಅದೇ ಹೊತ್ತಿಗೆ ಮತ್ತೊಂದಷ್ಟು ಲೇಖಕ-ಲೇಖಕಿಯರೂ ಲಂಕೇಶ್ ಪತ್ರಿಕೆಗೆ ಬರೆಯಲು ಆರಂಭಿಸಿ ಲಂಕೇಶರ ಆಯ್ಕೆಯ ಬಗ್ಗೆಯೇ ಅನುಮಾನಗಳು ಶುರುವಾದವು.

ಅದಾಗಿ ಎಷ್ಟೋ ವರ್ಷಗಳ ನಂತರ ಹೆಗ್ಗೋಡಿನಲ್ಲಿ ವೈದೇಹಿ ಸಿಕ್ಕರು. ಸ್ವಂತ ಅಕ್ಕನ ಹಾಗೆ ಮಾತಾಡಿದರು. ಮಾತಿನಲ್ಲಿ ಯಾವುದೇ ತೋರಿಕೆಯಾಗಲೀ,ನಮಗೆ ಅರ್ಥವಾಗದ ಪರಿಭಾಷೆಯಾಗಲೀ ಇರಲಿಲ್ಲ. ಆರ್ದ್ರತೆ ಇತ್ತು. ಹೇಳುವುದನ್ನು ತುಂಬ ಸ್ಪಷ್ಟವಾಗಿ ಹೇಳುತ್ತಿದ್ದರು. ಅಷ್ಟು ಹೊತ್ತಿಗಾಗಲೇ ನವ್ಯಯುಗ ಅಂತ್ಯವಾಗುತ್ತಾ ಬಂದಿತ್ತು. ಅತ್ಯುತ್ಕೃಷ್ಟ ಎಂದು ಅವರೇ ಕರೆದುಕೊಳ್ಳುವ ಶೈಲಿಯ ಹುಸಿತನಗಳು ಅರ್ಥವಾಗಲು ಆರಂಭಿಸಿದ್ದವು. ತುಂಬಾ ಆಕರ್ಷಕವಾದ ಭಾಷೆ, ಏನನ್ನೂ ನಮ್ಮತ್ತ ದಾಟಿಸುವುದಿಲ್ಲ ಎಂದು ಗೊತ್ತಾಗತೊಡಗಿತ್ತು.

ಅಲ್ಲಿಂದ ಬಂದವರೇ ಒಂದೇ ಉಸಿರಿನಲ್ಲಿ ವೈದೇಹಿವರ ಪುಸ್ತಕಗಳನ್ನು ಓದತೊಡಗಿದ ನಮ್ಮನ್ನು ಆಕರ್ಷಿಸಿದ್ದು ಮರ ಗಿಡ ಬಳ್ಳಿ’ ಸಂಕಲನ. ಆಮೇಲೆ ಅವರ ಪ್ರಬಂಧಗಳು, ಬಿಂದು ಬಿಂದಿಗೆಯ ಕವಿತೆಗಳೂ ಮೆಚ್ಚುಗೆಯಾದವು. ಕೊನೆಕೊನೆಗೆ  ಕತೆಗಳನ್ನು ಎಷ್ಟು ಸರಳವಾಗಿ ಬರೆಯಬಹುದು ಎಂದು ಮಾತಾಡುವುದಕ್ಕೆ ಅವರೇ ಮಾದರಿಯೂ ಆದರು. ಅಂಥ ಸರಳತೆಯನ್ನು ದಕ್ಕಿಸಿಕೊಳ್ಳಲು ನಾವು ಹೆಣಗಾಡತೊಡಗಿದೆವು. ಅಷ್ಟು ಹೊತ್ತಿಗಾಗಲೇ ತೇಜಸ್ವಿಯವರೂ ಸರಳವಾಗಿ ಬರೆಯತೊಡಗಿ, ಸುಮ್ಮನೆ ಓದಿಸಿ, ಆ ಸರಳತೆಯಲ್ಲೂ ಗಾಢವಾದ್ದನ್ನು ಹೇಳಲು ಸಾಧ್ಯ ಎಂದು ತೋರಿಸಿಕೊಟ್ಟಿದ್ದರು.

ತಮ್ಮ ಬರಹದಷ್ಟೇ ವೈದೇಹಿಯವರೂ ಸರಳ. ಸಾಮಾನ್ಯವಾಗಿ ಲೇಖಕರನ್ನು  ಭೇಟಿಯಾದ ನಂತರ ಅವರ ಮೇಲೆ ಅದೇ ಪ್ರೀತಿ, ಗೌರವ ಉಳಿದಿರುವುದಿಲ್ಲ. ಆದರೆ ಹತ್ತಿರದಿಂದ ನೋಡಿದ ಮೇಲೆ ಗೌರವ ಇಮ್ಮಡಿಸುವಂಥ ವ್ಯಕ್ತಿತ್ವ ವೈದೇಹಿಯವರದ್ದು. ತಾನೆಲ್ಲೂ ಕಾಣಿಸಿಕೊಳ್ಳದೇ, ಅವರು ಬಿವಿ ಕಾರಂತರ ಜೀವನ ಚರಿತ್ರೆ ಬರೆದು ಮನಸ್ಸಿಗೆ ಮುದ ನೀಡಿದವರು ಅವರು.

ಅವರ ಕೌಂಚ ಪಕ್ಷಿಗಳು’ ಸಂಕಲನದಲ್ಲೂ ಅಷ್ಟೇ ಸರಳ ಕತೆಗಳಿವೆ.  ಆ ಕತೆಗಳನ್ನು ಒಂದೊಂದಾಗಿ ನಾನಿಲ್ಲಿ ವಿವರಿಸುವುದಿಲ್ಲ. ಆ ಸಂಕಲನಕ್ಕೀಗ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಅದನ್ನು ಮತ್ತೊಮ್ಮೆ ಓದುವುದಕ್ಕೆ ಇಂಥ ಪ್ರಶಸ್ತಿಗಳು ನೆಪವಾಗುತ್ತವೆ.

ವೈದೇಹಿ ಮತ್ತು ಕೆ ವಿ ಸುಬ್ಬಣ್ಣ ಇಬ್ಬರೂ ಕನ್ನಡ ಭಾಷೆಗೆ ಅಂಥದ್ದೊಂದು ಸರಳತೆಯನ್ನು ಕೊಟ್ಟವರು. ಸುಬ್ಬಣ್ಣನವರು ಕೆಲವೊಮ್ಮೆ ಪಾಂಡಿತ್ಯಪೂರ್ಣವಾಗಿ ವಿವರಿಸಲು ಹೋಗಿ ಕಂಗಾಲು ಮಾಡುತ್ತಿದ್ದದ್ದೂ ಉಂಟು. ಆದರೆ, ವೈದೇಹಿ ಮಾತ್ರ ಯಾವತ್ತೂ ನಮ್ಮನ್ನು ಭಾವದ ಮೂಲಕವೇ ಸ್ಪರ್ಶಿಸಿದವರು, ಭಾಷೆ ಅವರಿಗೆ ನೆಪಮಾತ್ರ. ಭಾಷೆ ಕೇವಲ ತಲುಪುವ ಮಾಧ್ಯಮ ಮಾತ್ರ ಆಗಿದ್ದಾಗ, ಲೇಖಕ ಸುಳ್ಳು ಹೇಳುತ್ತಿರುವುದಿಲ್ಲ.

*******

ಲೇಖಕನಿಗೆ ಅಜ್ಞಾತವಾಸ ಅಗತ್ಯ ಎಂದು ಅನ್ನಿಸಿದ್ದು ಕೂಡ ತೇಜಸ್ವಿ ಮತ್ತು ವೈದೇಹಿಯವರನ್ನು ಕಂಡಾಗ. ಸಾಮಾನ್ಯವಾಗಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳದ ವೈದೇಹಿ ಮನೆಯ ಜಗಲಿಯಲ್ಲಿ ಕೂತು ಬರೆಯುತ್ತಿದ್ದ ಚಿತ್ರವೊಂದು ಇವತ್ತಿಗೂ ನನ್ನ ಕಣ್ಣ ಮುಂದಿದೆ. ಅದನ್ನು ನೋಡಿದಾಗಲೆಲ್ಲ ನಾವು ಕಳಕೊಳ್ಳುತ್ತಿರುವ ಖಾಸಗಿತನವನ್ನು ನೆನೆದು ಸಂಕಟವಾಗುತ್ತದೆ.

ಶಿವರಾಮ ಕಾರಂತರು ಎಲ್ಲಿ, ಹೇಗೆ ಏಕಾಂತದಲ್ಲಿ ಬರೆಯುತ್ತಿದ್ದರು. ತೇಜಸ್ವಿ ಎಷ್ಟು ಹೊತ್ತಿಗೆ ಎದ್ದು ಬರೆಯುತ್ತಿದ್ದರು, ಅಡಿಗರು ಯಾವ ಮನಸ್ಥಿತಿಯಲ್ಲಿ ಕವಿತೆ ಬರೆಯುತ್ತಿದ್ದರು ಎಂಬ ಬಗ್ಗೆ ನನಗಿವತ್ತಿಗೂ ಕುತೂಹಲ. ಕೆ ಎಸ್ ನರಸಿಂಹಸ್ವಾಮಿಯವರ ಮುಂದೆ ಪೆನ್ನು ಪುಸ್ತಕ ಹಿಡಿದು ಕೂತರೆ, ನಶ್ಯ ಮೂಗಿಗೇರಿಸಿ ಒಂದಷ್ಟು ಹೊತ್ತು ಧ್ಯಾನಸ್ಥರಲ್ಲಿ ನಂತರ ಕವಿತೆಯ ಸಾಲುಗಳನ್ನು ಹೇಳುತ್ತಾ ಹೋಗುತ್ತಿದ್ದರು. ಕವಿತೆಗಳಿಗೆ ಬಣ್ಣವಿರುತ್ತಿತ್ತು. ಅವರಿಗೆ ಕಣ್ಣು ಕಾಣುತ್ತಿರಲಿಲ್ಲ. ಹಾಗಿದ್ದರೂ ಹಸಿರು ಬಯಲಿಗೆ ಇಳಿದ ಬಿಳಿಬಿಳಿಯ ಹಕ್ಕಿಗಳನ್ನೂ, ಕಾಮನಬಿಲ್ಲಿನ ಅವರ್ಣನೀಯ ಕಾಂತಿಯನ್ನೂ ಅವರು ಕಾಣಬಲ್ಲವರಾಗಿದ್ದರು.

ಚಿತ್ತಾಲರಂತೂ ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು, ಮುಂಜಾವದ ಚುಮುಚುಮು ಬೆಳಕಿನಲ್ಲಿ ಬರೆಯುತ್ತಾ ಕೂರುವುದಾಗಿ ಅನೇಕ ಸಲ ಬರೆದುಕೊಂಡಿದ್ದರು. ನಾವೂ ಅದೇ ಥರ ಎದ್ದು ಬರೆಯಲು ಯತ್ನಿಸಿ, ಆಕಳಿಸಿ, ನಿರಾಶರಾಗಿ ನಮಗೆ ಅದು ಒಗ್ಗುವಂಥದ್ದಲ್ಲ ಎಂದು ನಿರ್ಧರಿಸಿಬಿಟ್ಟಿದ್ದೆವು. ಆದರೆ, ಹಾಗೆ ಮುಂಜಾನೆ ಎದ್ದು ಕುಳಿತು ಬರೆಯಬೇಕು ಎಂಬ ಪ್ರೇರಣೆಗೆ ಕಾರಣವಾದದ್ದಂತೂ ನಿಜ.

ಹಾಯ್ ಬೆಂಗಳೂರ್’ ಸೇರಿದ ನಂತರ ರವಿ ಬೆಳಗೆರೆ ಚಂದಕ್ಕೆ ಬರೆಯುವ ಪೆನ್ನು, ಗೆರೆಗೆರೆ ಪೇಪರು ಇಟ್ಟುಕೊಂಡು ಪದವಿಟ್ಟಳುಪದಂತೆ, ಕಂಠಪತ್ರ ಉಲುಹುಗೆಡದಂತೆ’ ಬರೆಯುತ್ತಾ ಹೋಗುವುದನ್ನು ನೋಡುತ್ತಿದ್ದೆ. ದಶದಿಕ್ಕುಗಳನ್ನೂ ಇಡೀ ಜಗತ್ತನ್ನೂ ಮರೆತವರಂತೆ ಕತೆ ಬರೆಯಲು ಕೂತರೆ, ಎರಡು ಮೂರು ಗಂಟೆಯಲ್ಲಿ ಒಂದು ಚೆಂದದ ಕತೆ ಸಿದ್ಧವಾಗುತ್ತಿತ್ತು. ಅದನ್ನು ಅವರೇ ಓದಿಯೂ ಹೇಳುತ್ತಿದ್ದರು. ಆಗೆಲ್ಲ ಆಕ್ಷರಗಳು ಹಾಗೆ ಮುದ್ದಾಗಿ ಮೂಡಿಸುವ ಸಾಲುಗಳ ಮೇಲೆ, ಆ ಸಾಲುಗಳು ಕೇಳುಗರಲ್ಲಿ ಉಂಟು ಮಾಡುತ್ತಿದ್ದ ಪರಿಣಾಮದ ಬಗ್ಗೆ ಅಚ್ಚರಿಯಾಗುತ್ತಿತ್ತು.

ಬರಹಗಾರ ಬರೆಯುವಷ್ಟು ಹೊತ್ತೂ ಯಾವುದೋ ಜಗತ್ತಿನಲ್ಲಿ ಇರುತ್ತಾನೆ ಅನ್ನುವುದರಲ್ಲಿ ಅನುಮಾನವೇ ಇಲ್ಲ. ಇಹಪರಗಳೆರೆಡರೂ ಮರೆತುಹೋಗಿ, ಅಕ್ಷರದ ಅನೂಹ್ಯ ಜಗತ್ತನ್ನು ಪ್ರವೇಶಿಸುವುದಕ್ಕೆ ಸಾಧ್ಯವಾದರೆ, ಅಲ್ಲಿಂದ ಅಪೂರ್ವ ಸಂಗತಿಯನ್ನು ಆತ ಹೊತ್ತು ತರುವುದಂತೂ ಖಾತ್ರಿ. ಆಳದ ಅನುಭವವನ್ನು ಮಾತು ಕೈ ಹಿಡಿದಾಗ, ಕಾವು ಬೆಳಕಾದಾಗ ಒಂದು ಕವನ. ನಾನಿಲ್ಲಿ ಬಯಲ್ಲಿ ಕಾಯುತ್ತ ನಿಂತಿರುವೆ, ಬರುವುದಿದೆ ಸರಿಯಾದ ವರ್ತಮಾನ’ ಎಂಬ ಕೆ ಎಸ್ ನ ಸಾಲುಗಳು ಇಂದಿಗೂ ನೆನಪಿವೆ.

ಕತೆಗಳನ್ನೋ ಕವಿತೆಗಳನ್ನೂ ಇನ್ನೊಬ್ಬರಿಗೆ ಹೇಳಿ ಬರೆಯಿಸುವುದರಲ್ಲಿ ನನಗಂತೂ ನಂಬಿಕೆಯಿಲ್ಲ. ಇನ್ನೊಬ್ಬ’ರು ಎದುರಿಗಿದ್ದಾರೆ ಅಂದ ತಕ್ಷಣ ಹೇಳಬೇಕಾದ್ದನ್ನು ಹೇಳುವುದಕ್ಕೆ ಸಾಧ್ಯವಾಗುತ್ತದೆ ಎಂಬ ಭರವಸೆ ನನಗಂತೂ ಇಲ್ಲ. ಇನ್ನೊಬ್ಬರು ಎದುರಿಗೆ ಕೂತಿದ್ದರೂ ಸಹಿತ, ಅವರ ಇರವನ್ನು ಮೀರಿ ಲೇಖಕ ತನ್ನೊಳಗೆ ತನ್ಮಯವಾಗಬೇಕಾಗುತ್ತದೆ. ಅಂಥ ತನ್ಮಯತೆ ಕ್ರಮೇಣ ಮರೆಯಾಗುತ್ತಾ ಬರುತ್ತದೆ. ಆಗ ಲೇಖಕ ತನ್ನ ಬರಹದ ಮೇಲಿನ ಹಿಡಿತ ಕಳೆದುಕೊಂಡು, ಅಭ್ಯಾಸ ಬಲದಿಂದ ಬರೆಯತೊಡಗುತ್ತಾನೆ. ಹಾಗೆ ಅಭ್ಯಾಸ ಬಲದಿಂದ ಬರೆದಾಗ, ಅವನ ಶೈಲಿ ನಮಗೆ ಸಿಗುತ್ತದೆಯೇ ಹೊರತು, ಅವನ ಒಳಗುದಿ, ಹೊಳಹುಗಳು ದಕ್ಕುವುದೇ ಇಲ್ಲ.

ವನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್’- ನೂರು ವರ್ಷದ ಏಕಾಂತ ಎಂಬ ಮಾರ್ಕೆಸ್ ಕಾದಂಬರಿಯನ್ನು ಓದುವ ಮೊದಲೇ ಆ ಹೆಸರು, ರೂಪ ಇಷ್ಟವಾಗಿತ್ತು. ನೂರು ವರ್ಷದ ಏಕಾಂತ ಹೇಗಿರಬಹುದು ಎಂದು ನಾನು ಕಲ್ಪಿಸಿಕೊಳ್ಳುತ್ತಿದ್ದೆ. ಎಲ್ಲರ ಜೊತೆಗಿರುವಾಗ ಅತ್ಯಂತ ಸಂತೋಷವಾಗಿರುತ್ತೇವೆ ಎಂದು ನಾವು ಭಾವಿಸುವುದು ಕೂಡ ಭ್ರಮೆಯೇ. ಗುಂಪಿನಲ್ಲಿದ್ದಾಗ ನಾವು ನಾವಾಗಿರುವುದಿಲ್ಲ.

ನಮ್ಮ ಪ್ರೀತಿ, ವಿರಹ, ಕ್ರಿಯಾಶೀಲತೆ, ಸೃಜನಶೀಲತೆ, ಗೆಲುವು, ಮಾತುಕತೆ, ಉನ್ಮಾದ, ಸಂತೋಷಗಳೆಲ್ಲ ನಮ್ಮ ಏಕಾಂತದಲ್ಲಿ ನಿಜವಾಗುತ್ತಾ ಹೋಗುತ್ತವೆ. ನಾವು ಅತ್ಯಂತ ಮೆಚ್ಚುವ, ಪ್ರೀತಿಸುವ ಗೆಳೆಯನನ್ನು ಕೂಡ ನಾವು ಅವನ, ಅವಳ ಗೈರುಹಾಜರಿಯಲ್ಲೇ ನಿಜಕ್ಕೂ ಪ್ರೀತಿಸುತ್ತಿರುತ್ತೇವೆ. ಇಬ್ಬರೂ ಜೊತಗಿದ್ದಾಗ,ಐಹಿಕ ಸಂಗತಿ, ಮಾತು, ಸನಿಹ ಮತ್ತು ಏನನ್ನಾದರೂ ಮಾಡಿ ಪರಸ್ಪರನ್ನು ಮೆಚ್ಚಿಸುವ ಅನಿವಾರ್ಯತೆಯೇ ನಮ್ಮನ್ನು ಆವರಿಸಿಕೊಂಡಿರುತ್ತದೆ.

ಅತ್ಯಂತ ಆಪ್ತರಾದವರು ಮುಂದೆ ಕೂತಿದ್ದಾಗ, ನಮ್ಮ ಮುಂದೆ ಒಂದು ಹೂಗುಚ್ಚ, ಚೆಂದದ ಕಾಫಿ ಕಪ್, ತುಂಬ ಇಷ್ಟದ ಪುಸ್ತಕ ಇರುವಷ್ಟೇ ಸಹಜವಾಗಿ ಅವರನ್ನು ಕೂಡ ನೋಡಲು ಸಾಧ್ಯವಾ? ಅಥವಾ ಅತ್ಯಂತ ಪ್ರೀತಿಸುವವರ ಮುಂದೆ ನಾವು ಆ ಇಡೀ ಪರಿಸರದ ಸಹಜ ಭಾಗವಾಗಿ, ಅವರನ್ನು ಕೊಂಚವೂ ಕಲಕದೆ ಕುಳ್ಳಿರುವುದಕ್ಕೆ ಸಾಧ್ಯವಾಗುತ್ತಾ?

ವೈದೇಹಿಯವರಿಗೆ ಪ್ರಶಸ್ತಿ ಬಂದ ನೆಪದಲ್ಲಿ ಇಷ್ಟೆಲ್ಲ ನೆನಪಾಯಿತು. ವೈದೇಹಿ ಕೂಡ ಎಲ್ಲೋ ಕುಳಿತು ಬರೆಯುತ್ತಿದ್ದಾರೆ. ಅವರ ಬರಹಗಳಷ್ಟೇ ನಮ್ಮನ್ನು ತಲುಪುತ್ತಿವೆ.

ಒಬ್ಬ ಲೇಖಕ ತನ್ನ ಅಹಂಕಾರ, ದರ್ಪ, ಸಣ್ಣತನ, ಕುಟಿಲತೆ, ವಿದ್ವತ್ತು ಮತ್ತು ಖ್ಯಾತಿಯನ್ನು ಒತ್ತಟ್ಟಿಗಿಟ್ಟು ನಮ್ಮನ್ನು ತಲುಪುವುದು ಈ ಕಾಲದಲ್ಲೂ ಸಾಧ್ಯವಾ ಎಂದು ಯೋಚಿಸುತ್ತಿದ್ದೇನೆ. ಮಾತು ಕೃತಿಗಿಂತ ಸದ್ದು ಮಾಡುತ್ತಿದೆ ಎಂದು ಎಷ್ಟೋ ಸಲ ಅನ್ನಿಸುತ್ತದೆ.

ಮುಳ್ಳು ಬೆರಳಲಿ ಹಿಡಿದ ಮಲ್ಲಿಗೆಯ ಮಾಲೆ ಕಾಣಿಸುತ್ತಿದೆಯಾ?

ಮುಳ್ಳು ಬೆರಳಲಿ ಹಿಡಿದ ಮಲ್ಲಿಗೆಯ ಮಾಲೆ ಕಾಣಿಸುತ್ತಿದೆಯಾ?

6 ಟಿಪ್ಪಣಿಗಳು (+add yours?)

 1. chandamaamaa
  ಜನ 02, 2010 @ 17:25:51

  mullu berali hidida malligeya maale,..!
  adentha parikalpane…!
  manasu sookshma samvediyaagide.
  nimma lekhana sahaja sundara abhivyakti..

  ಉತ್ತರ

 2. cautiousmind
  ಡಿಸೆ 31, 2009 @ 18:33:09

  ಜೋಗಿ ಸರ್, ನಿಮ್ಮಲ್ಲಿ ಜ್ಞಾನ ಹಾಗೂ ವಿನಯ ಎರಡೂ ತುಂಬಿದೆ ಎಂಬುದಕ್ಕೆ ಈ ಲೇಖನವೇ ಸಾಕ್ಷಿ.

  ಉತ್ತರ

 3. anu.pavanje
  ಡಿಸೆ 31, 2009 @ 17:01:36

  malligeya parimala namma nimma suttella pasarisutta ideyalla….manassige muda kodutta…
  .hridayadinda hridayakke nammade lokavaagi nammannu muttuvante hariva ‘ Vaidehi’ yavara baraha nirantaravaagirali…..

  ಉತ್ತರ

 4. ವೆಂಕಟಕೃಷ್ಣ.ಕೆ.ಕೆ. ಶಾರದಾ ಬುಕ್ ಹೌಸ್ ಪುತ್ತೂರು (ದ .ಕ )
  ಡಿಸೆ 31, 2009 @ 15:58:35

  ಇಷ್ಟು ಪ್ರಾಮಾಣಿಕವಾಗಿ ಬರೆಯಲುಕೂಡಾ ಸಾಧ್ಯಾನಾ?…
  ಕೆಲವರಾದರೂ ಈ ಪ್ರಯತ್ನ ಮಡಬೇಕು…
  ನೇರ ಮಾತು,ಕೇಳಲು ಮಾತ್ರ ಅಲ್ಲ,ಅನುಭವಿಸಲು ಕೂಡಾ ಖುಷಿ..ಅಲ್ವಾ…?

  ಉತ್ತರ

 5. Muttumani
  ಡಿಸೆ 31, 2009 @ 10:41:30

  ಸರ್,

  ಆಪ್ಯಾಯಮಾನವಾಗಿದೆ ಲೇಖನ

  ಉತ್ತರ

 6. Parameshwar
  ಡಿಸೆ 31, 2009 @ 10:00:31

  Very nice article sir!
  -Parameshwar Gundkal

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: