ಇದನ್ನು ಹವ್ಯಾಸಿಗಳು ಓದಿ ಕೃದ್ಧರಾಗಬಹುದು

ಇದು ಎಪ್ಪತ್ತರ ದಶಕವಲ್ಲ

-ನಟರಾಜಹೊನ್ನವಳ್ಳಿ

ಹೆಗ್ಗೋಡಿನ ನೀನಾಸಮ್ ಹಾಗೂ ಮೈಸೂರಿನ ರಂಗಾಯಣ, ನಮ್ಮ ಕಾಲದಲ್ಲೇ ಹುಟ್ಟಿ ಬೆಳೆದ ಸಾಂಸ್ಕೃತಿಕ ಅಚ್ಚರಿಗಳು. ಅವು ಹೊಸ ರಂಗವ್ಯಾಕರಣವನ್ನು ತನ್ನೊಳಗೆ ಸೃಷ್ಠಿಸಿಕೊಂಡಿರುವುದಷ್ಟೇ ಅಲ್ಲ, ರಂಗಭೂಮಿಯ ಹೊಸಹೊಸ ವೇಷಗಳಿಗೆ, ಪುಟ್ಟಪುಟ್ಟ ರೆಪರ್ಟರಿಗಳ ಹುಟ್ಟಿಗೆ ಕಾರಣವಾಗಿದೆ. ಸಾಹಿತ್ಯದ ಮೂಲಕ ನೋಡುತ್ತಿದ್ದ ಕ್ರಮಗಳ ಜೊತೆಗೇ ರಂಗಭೂಮಿಯ ಮೂಲಕ- ಅದರಲ್ಲೂ ನಟರ ಮೂಲಕ- ನೋಡುವ ಕ್ರಮವನ್ನು ಉದ್ಘಾಟಿಸಿ ಕೊಟ್ಟಿರುವುದೂ ಕೂಡ ನಮ್ಮ ಕಾಲದಲ್ಲೇ. ಇದು ನಮ್ಮ ಕಾಲದ ಸಂಕ್ಷಿಪ್ತ ರಂಗ ಇತಿಹಾಸ. ಆದರೆ ಇಂತಹ ಇತಿಹಾಸವಿರುವ ರಂಗಾಯಣಮಾತ್ರ ಹಲವಾರು ಬಾರಿ ಮಹಾಸಂಕಟಗಳಿಗೆ ಸಿಕ್ಕಿ, ಹಲವಾರು ಬಾಯಿಗಳಿಂದ ಅಗಿಸಿಕೊಂಡು ನರಳುತ್ತಲೇ ಇರುತ್ತದೆ. ಅಗಿಯುವ ಬಾಯಿಗಳಿಗೆ ಎಲ್ಲವನ್ನೂ ಅಗಿಯುವ ಚಟ. ಅದೊಂದು ರೋಗ. ಆ ಬಾಯಿಗಳಿಗೆ ವಿಘ್ನಸಂತೋಷದ ಮೋಜು, ಏನನ್ನೂ ಅಗಿದುಬಿಡಬಲ್ಲೆವು ಅನ್ನುವ ಹವ್ಯಾಸಿ ಧಿಮಾಕು.

banner

ಎಪ್ಪತ್ತರ ದಶಕದ ಹವ್ಯಾಸಿರಂಗಭೂಮಿ ತನ್ನ ಉತ್ತಮಾಂಶಗಳನ್ನೆಲ್ಲಾ ತೋರಿಸಿಕೊಟ್ಟಿದೆ. ಸಮುದಾಯದಂಥ ರಂಗಚಳುವಳಿ, ಬಿ. ವಿ. ಕಾರಂತರು, ಪ್ರಸನ್ನ, ಸೀಜೀಕೆಯಂಥ ನಿರ್ದೇಶಕರು, ಸಿ. ಆರ್. ಸಿಂಹ, ಲೋಕನಾಥ್ ಥರದ ಹಲವಾರು ಅತ್ಯುತ್ತಮ ನಟರು, ಹೀಗೆ ಅದರ ಫಲಗಳನ್ನೆಲ್ಲಾ ಪಟ್ಟಿ ಮಾಡುತ್ತಾಹೋಗಬಹುದು. ಜೊತೆಗೆ ಕೆ. ವಿ ಸುಬ್ಬಣ್ಣನವರು ಹೆಗ್ಗೋಡಿನಂಥ ಹಳ್ಳಿಯಲ್ಲಿದ್ದುಕೊಂಡು ಕಟ್ಟಿದ ರಂಗಸಂಸ್ಕೃತಿ ಇವೆಲ್ಲವೂ ಹೊಸ ಆಲೋಚನೆಗಳತ್ತ ಹೆಜ್ಜೆಹಾಕಲು ಧೈರ್ಯಬಂದಿದೆ. ಪ್ರಸ್ತುತ ಈ ಲೇಖನ ಎಪ್ಪತ್ತರದಶಕದ ಶಕ್ತಿಯನ್ನು ಧಾರಣೆಮಾಡಿಕೊಂಡೇ ವರ್ತಮಾನದ ರಂಗಭೂಮಿ ಕುರಿತು ಬರೆಯುವ ಧೈರ್ಯಮಾಡಿದ್ದೇನೆ.

ರಂಗಾಯಣದ ಪರಿಸ್ಥಿತಿ ಪದೇಪದೇ ಮುಂಚೂಣಿಗೆ ಬಂದು ರಂಗಭೂಮಿಯಲ್ಲಿ ಉಂಟಾಗುವ ಕಸಿವಿಸಿಯನ್ನು ಪದೇಪದೇ ಕೇಳಿ, ಅದನ್ನು ಹಿನ್ನಲೆಯಾಗಿಟ್ಟುಕೊಂಡು ಬರೆಯಲಾಗಿದೆ. ಇಲ್ಲಿ ರಂಗಾಯಣ ನೆಪ ಅಷ್ಟೆ.

ನಟರ ಕಥನ:

CartoonLargeಪ್ರಸ್ತುತ ವಿಷಯಕ್ಕೆ ಪ್ರವೇಶಿಸುವುದಾದರೆ, ಮತ್ತೊಮ್ಮೆ ಹೊಸ ನಿರ್ದೇಶಕರ ಆಗಮನದೊಂದಿಗೇ ಮತ್ತೆ ಅಗಿಯುವ ಬಾಯಿಗಳಿಗೆ ಆಹಾರವಾಗಿದೆ ಈ ರಂಗಾಯಣ. ಕಾರಂತರ ಕನಸಿನ ರಂಗಾಯಣ ಎಂದು ಡಂಗೂರ ಹೊಡೆಯುವ ಎಲ್ಲರೂ, ಕಾರಂತರ ಜೊತೆಯೇ ‘ಆಸೆಗಳ ವಯಸ್ಸಿನ’, ‘ಇಡೀ ಜಗತ್ತನ್ನೇ ಮುಷ್ಠಿಯಲ್ಲಿಟ್ಟು ಗೆಲ್ಲಬಲ್ಲೆನೆಂಬ ಹಿಗ್ಗುವ ವಯಸ್ಸಿನ’ ನಟ-ನಟಿಯರ ಗುಂಪೇ ಆ ಮಹಾ ಕಾರಂತ ಕನಸಿನ ಮುಂದೆ ನಿಂತು ಮೈಮಣಿಸಿ, ಕಣ್ಕುಣಿಸಿ, ಎದೆಯ ಕನಸ ಮೈಗೆಬರಿಸಿ ಟೊಂಕಕಟ್ಟಿ ನಿಂತದ್ದು, ಕನಸಿಗೆ ಆಕಾರ ಬರೆದದ್ದು ಕಮ್ಮಿ ಕೆಲಸವೇ? ಸಾರ್ವಜನಿಕ ಪ್ರದರ್ಶನ ಕೊಡುವುದಕ್ಕೆ ಮುಂಚೆ, ಒಂಭತ್ತು ವರ್ಷಗಳಷ್ಟು ದೀರ್ಘಕಾಲ ಅಭ್ಯಾಸ ಮಾಡಿರುವ ಪರಂಪರೆ ಇರುವ ಇವರನ್ನ, ಅವರು ಪಡಕೊಂಡಿರುವ ಜ್ಞಾನವನ್ನ, ನಟರಾಗಿ, ವಿನ್ಯಾಸಕಾರರಾಗಿ, ತಂತಜ್ಞರಾಗಿ ಮತ್ತು ನಾಟಕಕಾರರಾಗಿ ರೂಪುಗೊಂಡ ಪರಿಯನ್ನು ಚಿಲ್ಲರೆಯನ್ನಾಗಿಸುವುದು ಯಾವ ಮಹಾ ಘನಂದಾರಿ ಕೆಲಸಕ್ಕೆ ಎಂದು ಕೇಳುವ ಕಾಲ ನಮ್ಮ ಸಮಸ್ತ ನಟ-ನಟಿಯರ ಮುಂದಿದೆ. ರಂಗಾಯಣದಲ್ಲಿರುವ ಪ್ರತಿಯೊಬ್ಬರಿಗೂ ಕನಸಿದೆ ಎಂಬುದನ್ನ ವ್ಯವಧಾನದಿಂದ ಅರಿಯುವುದನ್ನೇ ಮರೆತಂತಿದೆ. ಅಲ್ಲಿರುವ ಒಬ್ಬಬ್ಬರೂ ಒಂದೊಂದು ವಿಷಯದಲ್ಲಿ ಪರಿಣತರು ಎಂಬುದನ್ನು ತಿಳಿಯಲಾರದ ಮನಸ್ಸುಗಳು ಖಳರ ವೇಷತೊಟ್ಟು ಕಾಡಲಾರಂಭಿಸಿದ್ದಾವೆ. ಅವರು ಎಷ್ಟು ಪರಿಣತರು ಎಂಬುದನ್ನ ರಂಗದಮೇಲೆ ಹಾಡಿಹೊಗಳಿದ ಬಾಯಿಗಳು ಅವರನ್ನು ಎಚ್ಚರದಲ್ಲಿರಿಸುವುದನ್ನು ಬಿಟ್ಟು ಅಪಶೃತಿಯಲ್ಲಿ ಹಾಡತೊಡಗುತ್ತವೆ. ಅವರು ಮಾಡುವ ಪಾತ್ರಗಳ ಮೂಲಕ ಇಡೀ ಮೈಸೂರಿನ ಸಾಮಾಜಿಕರಿಗೆ – ಅಷ್ಟೇ ಏಕೆ ಕರ್ನಾಟಕದ ಸಮಸ್ತ ಸಾಮಾಜಿಕರನ್ನು ನಗಿಸಿದ್ದಾರೆ, ಅಳಿಸಿದ್ದಾರೆ, ಧಿಗ್ಭ್ರಮೆಯಲ್ಲಿ ಪೂರ್ವಗ್ರಹಗಳನ್ನೊಡೆದಿದ್ದಾರೆ, ಟೆಂಪೆಸ್ಟ್ ನಾಟಕದ ‘ಮಿರಾಂಡ’ಳಂತೆ ಮುಗ್ಧ ಪ್ರಪಂಚಕ್ಕೆ ಒಯ್ದಿದ್ದಾರೆ. ಅವರು ಅಭಿನಯಿಸುವ ಪರಿ, ಪಾತ್ರವನ್ನು ಪ್ರವೇಶಮಾಡುವ ರೀತಿ, ರಂಗದಮೇಲೆ ನಿರ್ವಹಿಸುವ ಕ್ರಮ ಎಲ್ಲವೂ ಎಳೆಯ ನಟರಿಗೆ ಪಾಠವಾಗಿದೆ. ಕೆಲವು ನಟರು ಇವರನ್ನು ನೋಡಿ ಬೆಳೆದಿದ್ದಾರೆ, ತನ್ನೊಳಗಿರುವ ‘ನಟ’ನನ್ನು ಸಾಕಿಕೊಂಡಿದ್ದಾರೆ. ಪಶ್ಚಿಮದಲ್ಲಿ ಇಷ್ಟಾಗಿದ್ದರೆ ನಟರ ಕಥನ ದ ಪಠ್ಯವಾಗಿ ರೂಪುಗೊಳ್ಳುತಿತ್ತು, ನಟನೆಯ ಅಭಾಸಕ್ಕೆ ಮಾದರಿಯಾಗುತ್ತಿತ್ತು.

ಈ ನಟರ ಗೋಳೇನು ಕಮ್ಮಿಯಿಲ್ಲ. ಕಾಲಕಾಲಕ್ಕೆ ತಮ್ಮನ್ನು ನಿರ್ವಚಿಸಿಕೊಳ್ಳಲಾರರು, ತಮ್ಮಲ್ಲಿರುವ ನಟನೆಯ ಹಳೆಯ ಸ್ಟಾಕ್ನ್ನು ತೆಗೆದಹಾಕಿ ಹೊಸದಾಗಿ ನವೀಕರಿಸಿಕೊಳ್ಳಲಾಗದ ಸೋಮಾರಿತನ ಹಾಗು ಹೊಸಹೊಸ ಓದಿಗೆ ತೆರೆದುಕೊಳ್ಳಲಾಗದ ಜಡತೆ ಇವರನ್ನು ಆವರಿಸಿ ಬಿಟ್ಟಿದೆ. ದೈನಂದಿನ ಜೀವನದಲ್ಲಿ ಮುಳುಗಿ ಕಳೆದುಹೋಗಿದ್ದಾರೆ. ದೈನಂದಿನ ಜೀವನದಲ್ಲಿದ್ದೂ ಕಾಪಿಟ್ಟುಕೊಳ್ಳಬಹುದಾದ ‘ನಟನ ಧ್ಯಾನ’ ದಿವ್ಯ ಮರೆವಿಗೆ ಸರಿದು ಬಿಟ್ಟಿದೆ. ಕಲಾವಿದನಿಗೆ ಇರಲೇಬೇಕಾದ ಸೈಲೆನ್ಸ, ಎಕ್ಸೈಲ್ ಮತ್ತು ಕನ್ನಿಂಗ್ ನ ದಿವ್ಯಮಂತ್ರ ( ಜೇಮ್ಸ ಜಾಯ್ಸ ನ ಪ್ರಕಾರ) ಕೈಕೊಟ್ಟುಬಿಟ್ಟಿದೆ. ‘ದೇವರು ಪ್ರತ್ಯಕ್ಷನಾದಾಗ ವರ ಕೇಳಬೇಕು ಆದರೆ ಬೆನ್ನು ತುರಿಸುತ್ತಿರುತ್ತದೆ. ಇಂಥ ಅನಿವಾರ್ಯತೆಯಲ್ಲಿ ನಟನಿರುತ್ತಾನೆ. ಆಗ ತುರಿಸಿಕೊಳ್ಳಲೂಬೇಕು, ವರ ಕೇಳುವುದನ್ನು ಬಿಡಬಾರದು’. ಈ ಇಬ್ಬಗೆಯ ಕಠಿಣ ಹಾದಿಯನ್ನು ಅವರು ದಾಟಲೇ ಬೇಕು. ಅದು ಅನಿವಾರ್ಯ ಸಂಕಟ ಮತ್ತು ವಿಧಿ.

ನಿರ್ದೇಶಕರ ಕಥನ:

ರಂಗಾಯಣಕ್ಕೆ ಇದುವರೆವಿಗೂ ನಿರ್ದೇಶಕರಾಗಿ ಬಂದಂಥ ನಿರ್ದೇಶಕರೆಲ್ಲರೂ ರಂಗಭೂಮಿಯಲ್ಲಿ ಅಪಾರ ಅನುಭವ ಉಳ್ಳವರು ಎನ್ನುವುದರಲ್ಲಿ ದುಸರಾ ಮಾತಿಲ್ಲ. ಅವರೆಲ್ಲರೂ ರಂಗಭೂಮಿಯ ಗಡಿಗೆರೆಗಳನ್ನು ವಿಸ್ತರಿಸಿದವರೇ ಎಂದು ನಮ್ರವಾಗಿ ನೆನೆಯುತ್ತಾ, ಅನಿವಾರ್ಯವಾಗಿ ಹೇಳಲೇಬೇಕಾದನ್ನು ಸಂಕಟದಿಂದಲೇ ಹೇಳುತ್ತಿದ್ದೇನೆ. ಸರ್ಕಾರ ಇವರನ್ನು ನೇಮಿಸಿದ ಕೂಡಲೇ ‘ಇದು ನನ್ನ ಕನಸು’ ಎಂದು ಬೊಗಳೆ ಬಿಡಲಾರಂಭಿಸುತ್ತಾರೆ. ಕನಸುಗಳಿಗೆ ಕೈಕಾಲು ಮೂಡಿ ಬಡಬಡಿಸತೊಡಗುತ್ತಾರೆ. ಇವರ ಕನಸು ಆಗಷ್ಟೇ ಹುಟ್ಟಿರುತ್ತದೆ ಅದೂ ಸರ್ಕಾರಿ ಗೂಟದ ಕಾರಿನ ಜೊತೆಗೇ. ಇವರೇನು ಚಿತ್ರಕಾರರೇ, ಶಿಲ್ಪಿಗಳೇ, ಕವಿಗಳೇ – ಒಬ್ಬರೇ ಕನಸಿಗೆ ರೆಕ್ಕೆ ಬರಿಸಿಕೊಳ್ಳಲಿಕ್ಕೆ. ರಂಗಭೂಮಿಯಲ್ಲಿ ಕನಸು ಎಂದರೆ ಅದು ನಟರ, ತಂತ್ರಜ್ಞರ, ವಿನ್ಯಾಸಕಾರರ- ಒಟ್ಟೂ ಆ ಸಮುದಾಯ ಸೃಷ್ಠಿಸಿಕೊಳ್ಳುವ ಮಹಾ ಕನಸು ಎಂದು ವ್ಯವಧಾನದಿಂದ ತಿಳಿಯುವ ವಿವೇಕ ಕಾಣೆಯಾಗಿದೆ., ನಟರನ್ನ- ರಂಗಭೂಮಿಯನ್ನ ಜತನದಿಂದ ಕ್ಲೀಷೆಗಳಿಂದ ಪಾರುಮಾಡುವ ಒಂದು ನಿರ್ಧಿಷ್ಠ ಹೊಳಹುಗಳಿರುವುದೇ ಇಲ್ಲ. ನಟರಿಗೇ ಬೇಕಾದ ಲೈಬ್ರರಿ, ಅವರು ಕೆಲಸ ಮಾಡಲು ಅಗತ್ಯವಾದ ಒಳ್ಳೆಯ ಪ್ಲೋರ್ ಗಳು, ಬರಹಗಾರರು ಹಾಗೂ ಅನ್ಯಕಲೆಯ ಜೊತೆಗಿನ ಅವರ ಅನುಸಂಧಾನ, ಪ್ರಪಂಚದಲ್ಲಿ ರಂಗಭೂಮಿ ವಿವಿಧ ಕೆಲಸಗಳನ್ನು ಕುರಿತ ಮಾಹಿತಿಗಳು, ಆ ನಟ-ನಟಿಯರು ಮಾಡಿಕೊಳ್ಳುವ ಸಿಧ್ದತೆಗಳು, ಎಲ್ಲವನ್ನು ಈ ನಿರ್ದೇಶಕನೆಂಬ ‘ಮ್ಯಾಗ್ನಿಫೈಯರ್’ ಮಾಡಬೇಕಾಗುತ್ತದೆ. ಯಾವ ಸಿಧ್ಧತೆಯೂ ಇಲ್ಲದೆ ಕನಸ ನೆನಸು ಮಾಡಲು ಸಾಧ್ಯವೆ. ನೋಡಿ, ನಾವೊಂದು ತುಂಡು ಜಮೀನಿನಲ್ಲಿ ನಮಗೆ ಬೇಕಾದ ಬೆಳೆಯನ್ನು ತೆಗೆಯಲಾಗುವುದಿಲ್ಲ. ಅಲ್ಲಿನ ಹವಾಮಾನ, ಮಣ್ಣಿನ ಗುಣ, ಅಲ್ಲಿನ ಹಕ್ಕಿಪಕ್ಷಿ ಪ್ರಾಣಿ ಕ್ರಿಮಿಕೀಟಗಳು, ನೀರಿನ ಒರತೆ ಎಲ್ಲದರ ಜೊತೆ ಇದ್ದೂ, ಗಮನಿಸಿ ಬೆಳೆಯಬೇಕೇ ಹೊರತು ನಮ್ಮ ತಲೆಯಲ್ಲಿರುವ ಒಣ ಠೇಂಕಾರದ ಬೆಳೆಯನ್ನಲ್ಲ.

ಇನ್ನು ರಂಗಸಮಾಜ ಎನ್ನುವ ಗವರ್ನಿಂಗ್ ಬಾಡಿಯ ಕಥೆ :

ಇದೊಂದು ಸರ್ಕಾರಿ ಕೃಪಾಪೋಷಿತ ಗುಂಪು, ಡೋಂಗಿ ಪಡೆ. ಇದರಲ್ಲಿ ಅರೆಬೆಂದ ನಾಟಕಕಾರರು, ನಟರು, ಬುದ್ಧಿಜೀವಿಗಳು, ಇವರೇ ತುಂಬಿರುವ ಪಿಂಜರಾಪೋಲುಗಳ ಕೂಟ- ಇದರಲ್ಲಿ ಒಬ್ಬಿಬ್ಬರು ಸಜ್ಜನರು ಇರತ್ತಾರೆನ್ನಿ. ಇವರೆಲ್ಲ ರಂಗಭೂಮಿಯನ್ನು ಅಲ್ಲಲ್ಲಿ ನೆಕ್ಕಿ, ಸಿಕ್ಕಿದ ಕಡೆ ಕೈಯಾಡಿಸಿ ಮುಂದಿನ ನಿರ್ದೇಶಕರ ಪಟ್ಟಿಗೆ ಜಿಗಿಯಲು ಸಿಧ್ಧರಾಗಿರುವ ರಂಗಪುಡಾರಿಗಳು. ಅವರವರ ವೃತ್ತಿಗಳಲ್ಲಿ ಅವರೇನೂ ಅತ್ಯುತ್ತಮ ಕೆಲಸಗಳನ್ನು ಮಾಡಿದವರೇನೂ ಅಲ್ಲ. ವಶೀಲಿ ಹಚ್ಚಿ, ದೇಶಾವರಿ ನಕ್ಕು, ಥರಾವರಿ ಮಿಂಚುವ ಬಟ್ಟೆಗಳ ರಂಗಭೂಮಿ ಪ್ಯಾರಾಸೈಟ್ ಗಳು. ಕೆಲವು ದಿವಸ ರಂಗಭೂಮಿ. ಇನ್ನು ಕೆಲವು ದಿವಸ ಸರ್ಕಾರಿ ಉತ್ಸವಗಳು, ಅಕಾಡೆಮಿಯ ಹುದ್ದೆಗಳು, ಧಾರಾವಾಹಿ, ಸಿನೇಮಾ ಹೀಗೆ ಹಲವುಹತ್ತು ಜಾಗಗಳಲ್ಲಿ ಹಣಕಿ ಹಾಕುವ ಬಹು ವೇಷಧಾರಿ ಜೀವಿಗಳು. ಇವರಿಂದ ಯಾವ ಕಲಾಪ್ರಕಾರಗಳೂ ಜೀವಂತಿಕೆ ಪಡಕೊಳ್ಳಲಿಲ್ಲ. ಇವರನ್ನ ಒಂಚೂರು ಕೇಳಿ ನೋಡಿ ಎಪ್ಪತ್ತರ ದಶಕದ ಹಳವಂಡಗಳನ್ನು ಪುಂಖಾನುಪುಂಖವಾಗಿ ತಮಟೆ ಹೊಡೆಯ ತೊಡಗುತ್ತಾರೆ.

ಇವರಿಗೆ ರಂಗಭೂಮಿ ಎನ್ನುವ ಭವ್ಯ ವಿಸ್ಮಯ ತಿಳಿದಿರುವುದೇ ಇಲ್ಲ. ರಂಗಭೂಮಿಯಲ್ಲಿ ವರ್ತಮಾನ ಕಾಲ ಎಂದರೆ, ಪ್ರೇಕ್ಷಕರ ಕಣ್ಣೆದುರಿನಲ್ಲೇ ಸೃಷ್ಠಿಯಾಗುವ, ಅನಾವರಣಗೊಳ್ಳುವ ಬದುಕು. ಭೂತಕಾಲ ಎಂದರೆ ನಟರ ಕಥನಗಳು, ಭವಿಷತ್ ಕಾಲ ಎಂದರೆ ನಟರ ಕನಸು, ರಂಗಪಠ್ಯಗಳು.- ಈ ಮೇಲಿನ ಮಾತುಗಳಿಗೆ ರಂಭೂಮಿಯ ಪೂರ್ವಸೂರಿಗಳಲ್ಲಿ ಒಬ್ಬನಾದ ರಶ್ಯಾದ ನಿರ್ದೇಶಕ ಮೇಯರ್ ಹಾಲ್ಡ್ ಒದಗಿಬಂದಿದ್ದಾನೆ.

ಸದ್ಯದ ರಂಗಾಯಣದ ಸ್ಥಿತಿಗೆ ಚಿಕಿತ್ಸೆ ಇದೆಯೇ?

+ ಅಪಾರ ಅನುಭವವಿರುವ ನಟರ ಗುಂಪಿನಲ್ಲೇ ಸಮರ್ಥರನ್ನು ಸರದಿಯ ಮೇಲೆ ನೇಮಿಸುವುದು.-ತಾಂತ್ರಿಕವಾಗಿ ಕಷ್ಟ ಎಂಬ ಅರಿವಿದ್ದು ಇದನ್ನು ಹೇಳಿಬಿಟ್ಟಿದ್ದೇನೆ.

+ ರಂಗಸಮಾಜಕ್ಕೆ ಸೂಕ್ಷ್ಮಜ್ಞರನ್ನು ನೇಮಿಸಿಕೊಳ್ಳುವುದು.

+ ಬರಹಗಾರರರು, ಅನ್ಯಕಲೆಯ ಸಂಪನ್ಮೂಲ ವ್ಯಕ್ತಿಗಳ ಜೊತೆ ದೀರ್ಘವಾಗಿ ಚರ್ಚಿಸುವುದು.

+ ಸರ್ಕಾರ ಹಗಲೆಲ್ಲಾ ಮೂಗು ತೂರಿಸದ ಹಾಗೆ ನೋಡಿಕೊಳ್ಳುವುದು.

+ ಕರ್ನಾಟಕದಲ್ಲಿ ಕೆಲಸ ಮಾಡುತ್ತಿರುವ ಹಲವು ಜನ ಸಮರ್ಥ ನಟ-ನಟಿಯರ ಜೊತೆ ಸಂವಾದ ನಡೆಸುವುದು.

+ ಹವ್ಯಾಸಿ ರಂಗಭೂಮಿಯಲ್ಲಿರುವ ಹಲವಾರು ಸಮರ್ಥರ ಜೊತೆ ಸಂವಾದ ನಡೆಸುವುದು.

+ Art Managementನ ಬಗ್ಗೆ ಕಲಾವಿದರಿಗೆ ತರಬೇತಿ ಕೊಡುವುದು.

ಕಡೆಯ ಸಾಲುಗಳು…...

* ಗಾಂಧೀ ಭಾರತಕ್ಕೆ ಸ್ವಾತಂತ್ರ ಸಿಕ್ಕಿದ ಕೂಡಲೇ ಕಾಂಗ್ರೆಸ್ ನ ವಿಸರ್ಜನೆಗೆ ಒತ್ತಾಯಿಸಿದ್ದರು.

* ಸಮಾಜವಾದೀ ಮನಸ್ಸಿನ, ನಮ್ಮ ಕೆ. ವಿ. ಸುಬ್ಬಣ್ಣನವರು ಮುಂದಿನ ದಿನಗಳಲ್ಲಿ ತಿರುಗಾಟವನ್ನು ನಟರೇ ನಡಸಿಕೊಂಡುಹೋಗುವಂತಾಗ ಬೇಕು ಎಂದು ಕನಸಿದ್ದರು.

* ಬಿ. ವಿ. ಕಾರಂತರಿಗೆ ರಂಗಾಯಣದ ಕಲಾವಿದರಿಂದಲೇ ಕರ್ನಾಟಕದ ಐದಾರು ಸ್ಥಳಗಳಲ್ಲಿ ರೆಪರ್ಟರಿಗಳನ್ನು ಪ್ರಾರಂಭಿಸುವ ಹಾಗೆ ನೋಡಿಕೊಳ್ಳಬೇಕು ಎಂದು ಅವರಿಗೆ ಆಲೋಚನೆ ಇತ್ತು.

ಈಗ ಕನ್ನಡ ರಂಗಭೂಮಿಯಲ್ಲಿ ಸುಮಾರು ಮುವತ್ತಕ್ಕೂ ಹೆಚ್ಚು ಜನ ಸಂಪೂರ್ಣ ರಂಗಭೂಮಿಯಲ್ಲಿ ವಿವೇಕದಿಂದ ಕೆಲಸ ಮಾಡುವ ಯುವಕ-ಯುವತಿಯರಿದ್ದಾರೆ, ಪುಟ್ಟಪುಟ್ಟ ರೆಪರ್ಟರಿಗಳು ಹುಟ್ಟಿಕೊಂಡಿದೆ, ಹಿಂದೆಂದೂ ಇಲ್ಲದಷ್ಟು ಹೊಸಹೊಸ ರಂಗಪಠ್ಯಗಳು ಸೃಷ್ಠಿಯಾಗುತ್ತಿವೆ. ರಂಗವಿನ್ಯಾಸ ನಿರ್ದೇಶನದಷ್ಟೇ ಮುಖ್ಯವಾಗುತ್ತಿದೆ. ಹೊಸಹೊಸದನ್ನು ಸೃಷ್ಠಿಸಿಕೊಳ್ಳವ ಹಂಬಲ ಎಲ್ಲೆಲ್ಲೂ.

ಆಧುನಿಕ ವೃತ್ತಿ ರಂಗಭೂಮಿ ಯ ಪ್ರಕ್ರಿಯೆ ನಮ್ಮ ಕನ್ನಡದಲ್ಲಿ ಅರಳತೊಡಗಿದೆ. ಅದನ್ನು ಚಿವುಟದೆ ಎಲ್ಲ ಸಾಮಾಜಿಕರು ವ್ಯವಧಾನದಿಂದ ಪೋಷಿಸಬೇಕಾಗಿದೆ. ರಂಗಭೂಮಿಯಲ್ಲಿ ಹವ್ಯಾಸಿತನವೆಂಬುದು ತನ್ನ ಜಾಗವನ್ನು ಈ ಹೊಸ ಆಲೋಚನೆಗೆ ಬಿಟ್ಟುಕೊಡಬೇಕಾಗಿದೆ. ‘ ಪಿತೃ ಹತ್ಯೆ ಮಾಡದೇ ಗತ್ಯಂತರವಿಲ್ಲ’. ಇದನ್ನು ಹವ್ಯಾಸಿಗಳು ಓದಿ ಕೃದ್ಧರಾಗಬಹುದು. ಆದರೆ ಅದನ್ನು ಅವರು ಸೈರಿಸಿಕೊಳ್ಳಬೇಕು. ಹವ್ಯಾಸಕ್ಕೆ ಶಿಸ್ತು ಬರೋದು ಸೈರಣೆಯಿಂದಲ್ಲವೇ?

2 ಟಿಪ್ಪಣಿಗಳು (+add yours?)

 1. ಬಿ.ಸುರೇಶ
  ನವೆಂ 04, 2009 @ 14:14:39

  ಹೊನ್ನವಳ್ಳಿ ನಟರಾಜ್ ಅವರ ಮಾತುಗಳು ಸರಿಯಾಗಿದೆ.
  ಅಲ್ಲಲ್ಲಿ ಅವರು ಹೇಳುವ ಕೆಲವು ಸ್ವೀಪಿಂಗ್ ಮಾತುಗಳಿಗೆ ಅನೇಕರ ಭಿನ್ನಾಭಿಪ್ರಾಯ ಏಳಬಹುದು.
  ಆದರೂ ಈ ಮಾತುಗಳ ಒಳಗಿರುವ ಕೆಲವು ಗಂಭೀರ ‘ಔಷಧಿ’ಗಳನ್ನು ಬಳಸದೆ ಇದ್ದರೆ ’ರಂಗಾಯಣ’ ಉಳಿಯುವುದು ಕಷ್ಟ.

  ಉತ್ತರ

 2. ಸುಘೋಷ್ ಎಸ್. ನಿಗಳೆ
  ನವೆಂ 01, 2009 @ 12:37:37

  ನಟರಾಜ್ ಸರ್, ಲೇಖನ ಸಕಾಲಿಕ. ತಾವು ಸೂಚಿಸಿದ ಚಿಕಿತ್ಸೋಪಾಯಗಳು ಅಗತ್ಯ. ಬಹುಮತವಿದ್ದೂ ಮೈಮೇಲೆ ಇರುವೆ ಬಿಟ್ಟುಕೊಂಡಿರುವ ಸರ್ಕಾರಕ್ಕೆ ಇದೆಲ್ಲ ಸಾಧ್ಯವೆ ಎಂಬುದು ಪ್ರಶ್ನೆ…

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: