ಕೆರೆಬಿಯನ್ ದೊರೆಗಳ ಕನಸಿನ ನಾಡು
-ಟಿ.ಅವಿನಾಶ್
ಟೆಸ್ಟ್ ಕ್ರಿಕೆಟ್ ನ ಭವಿಷ್ಯದ ಬಗ್ಗೆ ನಾನಾ ರೀತಿಯ ಶಂಕೆಗಳು ಪ್ರಾರಂಭವಾಗುತ್ತಿರುವ ಈ ಕಾರ್ಪೋರೆಟ್ ದಿನಗಳಲ್ಲಿ ವೆಸ್ಟ್ ಇಂಡಿಸ್ ತಂಡ ತನ್ನ ಅಂತರಿಕ ಬಿಕ್ಕಟ್ಟಿನಿಂದಾಗಿ ಪಾತಾಳ ತಲುಪಿರುವುದು ದುಃಖದ ವಿಚಾರ. ಮೊದಲೇ ಪ್ರತಿಭಾವಂತ ಆಟಗಾರರ ಅಭಾವ ಎದುರಿಸುತ್ತಿರುವ ವಿಂಡೀಸ್, ಅಟಗಾರರ ಹಾಗೂ ಅಡಳಿತ ಮಂಡಳಿಯು ನಡುವಿನ ಭಿನ್ನಾಭಿಪ್ರಾಯದಿಂದ ಇನ್ನೂ ಸೊರಗಿದೆ. ಇದು ಕ್ರಿಕೆಟ್ ಭವಿಷ್ಯದ ದೃಷ್ಠಿಯಿಂದ ಬಹಳ ಕರಾಳವಾದುದೇ ಸರಿ. ಆದ್ದರಿಂದಲೇ, ಆಸ್ಟ್ರೇಲಿಯಾ ಮಂಡಳಿ ಬರುವ ಬೇಸಿಗೆಯಲ್ಲಿನ ವಿಂಡೀಸ್ ವಿರುದ್ಧದ ಸರಣಿಯಲ್ಲಿ ಪ್ರಮುಖ ಆಟಗಾರರಿಲ್ಲದಿದ್ದರೆ ತನ್ನ ತಂಡ ಆಡಲು ಸಿದ್ಧವಿಲ್ಲ ಎಂದು ತಿಳಿಸಿದೆ. ಇದು ಗುಣಮಟ್ಟ ಕಾಯ್ದುಕೊಳ್ಳುವ ದೃಷ್ಠಿಯಿಂದ ಸರಿಯಾದ ನಿಲುವೆ. ಕ್ರಿಸ್ ಗೇಲ್, ಶರವಣ ಹಾಗೂ ಚಂದ್ರ ಪಾಲ್ ರಂತ ಪ್ರಮುಖ ಅಟಗಾರರಿದ್ದರೂ ಈಗಿನ ವೆಸ್ಟ್ ಇಂಡೀಸ್ ಕೇವಲ ಕ್ಲಬ್ ಮಟ್ಟದ ತಂಡ ಮಾತ್ರ.
1970ಹಾಗೂ 1980ರ ದಶಕಗಳ ಆ ದಿನಗಳನ್ನು ನೆನಸಿಕೊಂಡರೆ, ವೆಸ್ಟ್ ಇಂಡೀಸ್ ಎಂಬ ದೈತ್ಯ ಪ್ರತಿಭೆಗಳ ನಾಡನ್ನು ಮರೆಯಲು ಸಾಧ್ಯವೇ ಇಲ್ಲ. ವೇಗದ ಬೌಲರ್ ಗಳಿಂದ ಹಿಡಿದು ಸ್ಪೋಟಕ ಬ್ಯಾಟ್ಸ್ಮನ್ ಗಳು ವಿಂಡೀಸ್ ನ ವೇಗದ ಪಿಚ್ ಗಳಲ್ಲಿ ಅತ್ಯುನ್ನತ ಪ್ರದರ್ಶನ ನೀಡಲು ಕಾತರಿಸುತ್ತಿದ್ದ ದಿನಗಳು ಈಗ ಕನಸಿನಂತೆ ಕಾಣುತ್ತಿದೆ. ಪ್ರಾಯಶಃ ಕ್ರೀಡೆ- ನಮ್ಮ ಬದುಕಿನಂತೆಯೇ- ಬಹಳ ಕ್ರೂರವಾದದು. ಅಲ್ಲಿ ತಪ್ಪುಗಳಿಗೆ ಅವಕಾಶವೇ ಇಲ್ಲ. ಕೆಳಗೆ ಬಿದ್ದವನನ್ನು ಪೂರ್ತಿಯಾಗಿ ನೆಲಕಚ್ಚುವಂತೆ ಮಾಡದಿದ್ದರೆ ಗೇಮ್ ಗೆಲ್ಲಲಾಗುವುದಿಲ್ಲ. ಆದ್ದರಿಂದಲೇ ಕ್ರಿಕೆಟ್ ಜಗತ್ತಿನಲ್ಲಿ ಅಭೇದ್ಯ ಸಾಮ್ರಾಜ್ಯ ನಿರ್ಮಿಸಿದ್ದ ವಿಂಡೀಸ್, ಇವತ್ತು ಸಂಪೂರ್ಣ ಪತನಗೊಂಡ, ಹಳೆಯದರ ನೆನಪಿನಲ್ಲಿ ಎಡರುಗಾಲಿಡುತ್ತಿರುವ ಒಂದು ಅಮಚ್ಯೂರ್ ತಂಡವಾಗಿದೆ.
ವರ್ತಮಾನ ಕಾಲದಲ್ಲಿ ವಿಭಿನ್ನ ಕಾರಣಗಳಿಂದ ಸೊರಗಿರುವ ವಿಂಡೀಸ್ ಭೂತಕಾಲದಲ್ಲಿ ಒಂದು ಸದೃಢ ತಂಡವಾಗಿ ಬೆಳದಿದ್ದಕ್ಕೆ ದೊಡ್ಡ ಇತಿಹಾಸವೇ ಇದೆ. ಭಾರತದಂತೆಯೇ ಕೆರೆಬಿಯನ್ ದ್ವೀಪಗಳು 19ನೇ ಶತಮಾನದಿಂದಲೂ ವಸಾಹತುಶಾಹಿ ಆಳ್ವಿಕೆಗೆ ಒಳಪಟ್ಟಿದ್ದವು. ಅಲ್ಲಿನ ಮೂಲನಿವಾಸಿಗಳ ಭಾಷೆ ಹಾಗೂ ನೆಲಸಂಸ್ಕೃತಿ ಈ ವಸಾಹತುಶಾಹಿ ಆಕ್ರಮಣದಿಂದ ಸಂಪೂರ್ಣ ಅವಸಾನಕ್ಕೆ ಒಳಗಾಗಿತ್ತು. ದೇಶ, ಭಾಷೆಗಳು ನಶಿಸಿಹೋಗಿ ಇಡೀ ಸಮುದಾಯವೇ ಒಂದು ಸಾಂಸ್ಕೃತಿಕ ವಿಸ್ಮೃತಿಗೆ ಒಳಗಾಗಿದ್ದ ಕಾಲ ಅದು. ಈಗಿರುವ ಕೆರೆಬಿಯನ್ ಇಂಗ್ಲೀಷ್ ಅಲ್ಲಿನ ಬೇರೆ ಬೇರೆ ದ್ವೀಪಗಳನ್ನು ಒಂದುಗೂಡಿಸುವ ಒಂದು ಸಂಪರ್ಕ ಭಾಷೆ ಮಾತ್ರ. ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಬಿಳಿ ಜನಾಂಗದ ಅವಮಾನದಿಂದ ತಪ್ಪಿಸಿಕೊಳ್ಳಲೋ ಎಂಬಂತೆ ಆ ದ್ವೀಪಗಳ ಜನರು ಕ್ರಿಕೆಟ್ನ್ನು ಉಪಯೋಗಿಸಿಕೊಳ್ಳತೊಡಗಿದ್ದು ಸಾಂಸ್ಕೃತಿಕವಾಗಿ ಬಹಳ ಮುಖ್ಯ. ವಿಂಡೀಸ್ ಕ್ರಿಕೆಟ್ ತನ್ನ ಹುಟ್ಟಿನಿಂದಲೂ ಜನಾಂಗೀಯ ಅಭಿವ್ಯಕ್ತಿಯೊಡನೆ ತಳುಕು ಹಾಕಿಕೊಂಡಿದೆ. ನೈಸರ್ಗಿಕ ಸಂಪತ್ತಿದ್ದರೂ, ವಿಚಿತ್ರ ರಾಜಕೀಯ ಪರಿಸ್ಥಿತಿಯಿಂದಾಗಿ ಬಡ ರಾಷ್ಟ್ರವಾಗಿ ಹೊರಹೊಮ್ಮಿದ ಈ ನಾಡಿನಲ್ಲಿ ಒಬ್ಬ ಕಪ್ಪು ಆಟಗಾರ ಮೈದಾನಕ್ಕಿಳಿದರೆ ಆತ ಒಂದು ಸ್ಟೇಟ್ಮೆಂಟ್ ಮಾಡಿದಂತೆ. ಹೀಗೆ ತನ್ನ ಅನನ್ಯತೆಯನ್ನು ತಾನು ಕಂಡುಕೊಳ್ಳುವ ಹಾಗೂ ಆಕ್ರಮಣಕಾರಿ ಬಿಳಿ ಜಗತ್ತನ್ನು ಎದುರಿಸುವ ಎರಡು ವಿಭಿನ್ನ ನೆಲೆಗಳಲ್ಲಿ ಅಲ್ಲಿನ ಕ್ರಿಕೆಟ್ ಬೆಳೆದು ಬಂದಿದೆ. 70-80 ವರ್ಷಗಳಿಗೂ ಅಧಿಕ ಇತಿಹಾಸವಿರುವ ಈ ತಾತ್ವಿಕ ನೆಲೆಗಟ್ಟು ಪೂತರ್ಿಯಾಗಿ ಸಾಕಾರಗೊಂಡ ಕಾಲವೇ ಕ್ಲೈವ್ಲಾಯ್ಡ್ನ ನಾಯಕತ್ವದ 1970-80ರ ಎರಡು ದಶಕಗಳು.
1975ರಲ್ಲಿ ಕ್ಲೈವ್ ಲಾಯ್ಡ್ ಮೊಟ್ಟಮೊದಲಬಾರಿ ನಾಯಕತ್ವ ವಹಿಸಿಕೊಂಡಾಗ ತಂಡದಲ್ಲಿ ಆಶಿಸ್ತು, ಭಿನ್ನಾಭಿಪ್ರಾಯ ದೊಡ್ಡ ಮಟ್ಟದಲ್ಲಿ ತಲೆಹಾಕಿತ್ತು. ಇಂತಹ ಪರಿಸ್ಥಿತಿಯಲ್ಲೂ ಆಟಗಾರರಲ್ಲಿ ಆತ್ಮವಿಶ್ವಾಸ ಕುದುರುವಂತೆ ಮಾಡಿದ್ದು ಕ್ಲೈವ್ಲಾಯ್ಡ್. ತನ್ನ ಮಿಂಚಿನ ವೇಗಿಗಳ ಮೂಲಕ ಬಲಿಷ್ಠ ಇಂಗ್ಲೆಂಡ್, ಆಸ್ಟ್ರೇಲಿಯಾದಂತಹ ಆಟಗಾರರನ್ನು ಬಗ್ಗು ಬಡಿದು ಕಪ್ಪು ಜನರ ಪಾರುಪತ್ಯವನ್ನು ನಿರ್ಣಾಯಕವಾಗಿ ಸಾರಿದ್ದು ಇದೇ ಲಾಯ್ಡ್. ಹಿಂದೆಂದೂ ಇಲ್ಲದಷ್ಟು ಜಯವನ್ನು ತನ್ನ ತೆಕ್ಕೆಗೆ ಹಾಕಿಕೊಂಡದ್ದು ಕೂಡಾ ಲಾಯ್ಡ್ ನ ಸಾಧನೆ.
ಹಾಗೆಯೇ ಇಡೀ ಕ್ರಿಕೆಟ್ ಜಗತ್ತನ್ನು ತನ್ನ ನೈಜ ಆಟದ ಮೂಲಕ ಪುನಃ ಪರಿಷ್ಕರಣೆಗೆ ಒಳಪಡಿಸಿದ್ದೂ ಇದೇ ಲಾಯ್ಡ್ ನ ವಿಂಡೀಸ್ ತಂಡ. ಪ್ರಪಂಚದ ಯಾವುದೇ ಮೂಲೆಯಲ್ಲಿ ಆಡಿದರೂ ಪ್ರೇಕ್ಷಕರು ಮೈದಾನಕ್ಕೆ ಬರುವಂತೆ ಮಾಡಿದ್ದೂ ಇವರೇ. ಇದೆಲ್ಲ ಸಾಧ್ಯವಾಗಿದ್ದು ವಿವಿಯನ್ ರಿಚಡ್ರ್ಸ, ರಾಯ್ಫ್ರೆಡರಿಕ್ಸ್, ಗ್ರೀನಿಡ್ಜ್-ಹೇಯ್ನ್ಸ್ ಲ್ಯಾರಿ ಗೋಮ್ಸ್, ಲಾಯ್ಡ್ ನಂತಹ ಅತಿರಥರ ಬ್ಯಾಟಿಂಗ್ ಹಾಗೂ ರಾಬರ್ಟ್ಸ್, ಹೋಲ್ಡಿಂಗ್, ಗಾರ್ನರ್, ಕ್ರಾಫ್ಟ್, ಮಾರ್ಷಲ್ ಅಂತವರ ಬೆಂಕಿಯುಗುಳುವ ಬೌಲಿಂಗ್ ನಿಂದ.. ಕಡುಬಡತನದಲ್ಲೂ ದಾಖಲೆಗಳ ಹಂಗಿಲ್ಲದೆ ನೈಜ ಆಟವಾಡಿ ದಿಗ್ವಿಜಯ ಸಾಧಿಸಿದ ಪುಣ್ಯಾತ್ಮರು ಇವರು!. ಪ್ರಾಯಶಃ ಸ್ಟೀವ್ ವಾಃ ನ 1990ರ ದಶಕದ ಆಸ್ಟ್ರೇಲಿಯಕಿಂತಲೂ ಒಂದು ಗುಲಿಗಂಜಿಯಷ್ಟಾದರೂ ಇವರೇ ಶ್ರೇಷ್ಠರು ಎನ್ನಿಸುತ್ತದೆ.
ಒಟ್ಟಾರೆಯಾಗಿ, total ಕ್ರಿಕೆಟ್ನ ಕಲ್ಪನೆಯನ್ನು ವಿಶ್ವಕ್ಕೆ ಪರಿಚಯಿಸಿದ್ದು ಕ್ಲೈವ್ ಲಾಯ್ಡ್ ನ ಮರೆಯಲಾರದ ಸಾಧನೆ. ಈಗ ಇತಿಹಾಸದ ತೊಟ್ಟಿಗೆ ಸೇರಿರುವ ಇವರು ಕ್ರಿಕೆಟ್ ಕ್ಷೇತ್ರಕ್ಕೆ ಹಲವಾರು ಮರೆಯಲಾರದ ಕ್ಷಣಗಳನ್ನು ನೀಡಿದ್ದಾರೆ. 1976ರಲ್ಲಿ ಲಿಲ್ಲಿ – ಥಾಮ್ಸನ್ನರ ಬಿರುಗಾಳಿಯ ಬೌಲಿಂಗ್ ಎದಿರಸಲಾಗದೆ 1-5ರಿಂದ ಸೋತ ವಿಂಡೀಸ್ ಅದೇ ವರ್ಷ ಇಂಗ್ಲೆಂಡಿನ ಪ್ರವಾಸ ಕೈಗೊಂಡಿತ್ತು. ಆಗಿನ ಬಾಯಿ ಬಡುಕ ಇಂಗ್ಲೀಷ್ ನಾಯಕ ಟೋನಿಗ್ರೇಗ್ ಸರಣಿಯ ಮೊದಲೇ ನಾವು ಈ ಕರಿಯರನ್ನು ಬಗ್ಗು ಬಡಿಯುತ್ತೇವೆ’ (We will make them grovel) ಎಂಬರ್ಥದ ಪತ್ರಿಕಾ ಹೇಳಿಕೆ ನೀಡಿದ್ದ. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಕುದಿಯುತ್ತಿದ್ದ ವಿಂಡೀಸ್ ಆಗಿನ ಬಲಿಷ್ಠ ಇಂಗ್ಲೆಂಡನ್ನು 3-0ಯಿಂದ ಸದೆ ಬಡಿಯಿತು. ಬ್ಯಾಟ್ಸ್ಮನ್ಗಳಿಗೆ ನೆರವಾಗುವ ಓವಲ್ ಮೈದಾನದಲ್ಲಿ ಮೈಕೆಲ್ ಹೋಲ್ಡಿಂಗ್ ಒಟ್ಟಾರೆಯಾಗಿ ಹದಿನಾಲ್ಕು ವಿಕೆಟ್ ಕಿತ್ತು ಇಂಗ್ಲಿಷರನ್ನು ನಡುಗಿಸಿದ್ದ. ಹಾಗಿದ್ದೂ ಈತನಿಗೆ ಪಂದ್ಯದ ಪುರುಷೋತ್ತಮ ಪ್ರಶಸ್ತಿ ದೊರಕಲಿಲ್ಲ. ಏಕೆಂದರೆ ಅದು 292 ಅಮೋಘ ರನ್ ಬಾರಿಸಿದ ರಿಚರ್ಡ್ಸ್ ಪಾಲಾಗಿತ್ತು! ಯಾವಾಗಲೂ ಜನಾಂಗೀಯ ಅವಮಾನ ಸಹಿಸಿಕೊಳ್ಳದ ಕೆರೆಬಿಯನ್ ದೊರೆಗಳು ರಾಬರ್ಟ್ಸ್ ಹೋಲ್ಡಿಂಗ್ ನೇತೃತ್ವದ ಅತಿ ವೇಗದ ಬೌಲಿಂಗ್ನಿಂದ ಟೋನಿಗ್ರೆಗ್ ಆಡಲು ಬಂದಾಗಲೆಲ್ಲಾ ಆಕ್ರಾಮಕ ದಾಳಿ ನಡೆಸಿ ಟೋನಿಗ್ರೆಗ್ನನ್ನು ಹಣ್ಣುಗಾಯಿ ನೀರುಗಾಯಿ ಮಾಡಿದ್ದರು. ಟೋನಿಗ್ರೆಗ್ ಸರಣಿಯ ನಂತರ ಬಹಿರಂಗ ಕ್ಷಮಾಪಣೆ ಕೇಳಬೇಕಾಗಿ ಬಂದಿತ್ತು. ಅಲ್ಲಿಂದ ಪ್ರಾರಂಭವಾದ ವಿಂಡೀಸ್ನ ಯಶೋಗಾಥೆ ಕೊನೆಗೊಂಡಿದ್ದು 1990ರ ದಶಕದಲ್ಲಿ ಮಾತ್ರ.
ಭಾರತದ ಮಟ್ಟಿಗೆ ಹೇಳುವುದಾದರೆ ವಿಂಡೀಸ್ ವೇಗಿಗಳನ್ನು ಸಮರ್ಥವಾಗಿ ಎದುರಿಸಿದ್ದು ಸುನೀಲ್ ಗವಾಸ್ಕರ್, ಜಿಮ್ಮಿ ಅಮರ್ ನಾಥ್ ಹಾಗೂ ಜಿ.ಆರ್.ವಿಶ್ವನಾಥ್. ಹಾಗೆಯೇ 1983ರ ಫ್ರುಡೆನ್ಷಿಯಲ್ ವಿಶ್ವಕಪ್ನಲ್ಲಿ ಲಾಯ್ಡ್ನ ತಂಡ ತೀರಾ ಅನಿರೀಕ್ಷಿತವಾಗಿ ಸೋಲನ್ನಪ್ಪಿದ್ದು ಆತನ ಜೀವನದಲ್ಲಿ ಮರೆಯಲಾರದ ಕೊರಗಾಗಿದೆ. ಆದರೆ ಆ ಸೋಲಿಗೆ ಉತ್ತರವಾಗಿ ಅದೇ ವರ್ಷ ಭಾರತಕ್ಕೆ ಆಗಮಿಸಿದ್ದ ಲಾಯ್ಡನ ತಂಡ ಕಪಿಲ್ ದೇವ್ ನ ಬಳಗವನ್ನು ಇನ್ನಿಲ್ಲದಂತೆ ನೂಚ್ಚುನೂರು ಮಾಡಿತ್ತು. ಮಾಲ್ಕಂಮಾರ್ಷಲ್ ತನ್ನ ಕಲ್ಪನೆಗೂ ನಿಲುಕದ ವೇಗ ಹಾಗೂ ಚೆಂಡಿನ ಮೇಲಿನ ನಿಯಂತ್ರಣದಿಂದ ಭಾರತೀಯರನ್ನು ತಬ್ಬಿಬ್ಬು ಮಾಡಿದ್ದ. ಇದರ ಫಲ -ಕಪಿಲ್ ದೇವ್ ನಾಯಕತ್ವದಿಂದ ಕೆಳಗಿಳಿಯಬೇಕಾಯಿತು.
ಹಾಗೆಯೇ 1984ರಲ್ಲಿ ಇಂಗ್ಲೀಷ್ ತಂಡ 0-5ರಿಂದ ಸೋಲನ್ನೊಪ್ಪಿ, ನಾಯಕ ಡೇವಿಡ್ ಗೋವರ್ ತೀವ್ರ ಅಪಮಾನದಿಂದ ನಾಯಕತ್ವ ತ್ಯಜಿಸಬೇಕಾಯಿತು. 1987ರಲ್ಲಿ ಗ್ಯಾಟಿಂಗ್ ಪಡೆ 0-5ರಲ್ಲಿ ಪುನಃ ಸೋಲನ್ನೊಪ್ಪಿಕೊಂಡು ದಾಖಲೆ ನಿರ್ಮಿಸಿತು ಆ ಸರಣಿಯಲ್ಲಿ ಮಾರ್ಷಲ್ ಬೌಲಿಂಗ್ ನಲ್ಲಿ ಮುಖಕ್ಕೆ ಹೊಡೆತ ತಿಂದ ಗ್ಯಾಟಿಂಗ್ ಹದಿನಾಲ್ಕು ಹೊಲಿಗೆ ಹಾಕಿಸಿಕೊಳ್ಳಬೇಕಾಯಿತು!!. ಅದೇ ಸರಣಿಯಲ್ಲಿ ವಿವಿಯನ್ ರಿಚರ್ಡ್ಸ್ ಕೇವಲ 56 ಚೆಂಡುಗಳಲ್ಲಿ ಶತಕ ದಾಖಲಿಸಿ ತಂಡಕ್ಕೆ ಜಯ ತಂದ. 1985ರಲ್ಲಿ ಆಸ್ಟ್ರೇಲಿಯಾದ ಪ್ರತಿಭಾನ್ವಿತ ಆಟಗಾರ ಕಿಮ್ ಹ್ಯೂಸ್ ಸರಣಿಯ ಮಧ್ಯೆಯೇ ಕಣ್ಣೀರಿಡುತ್ತಾ ನಾಯಕತ್ವ ತ್ಯಜಿಸಿದ್ದ. ಒಟ್ಟಾರೆಯಾಗಿ ಆಗಿನ ಕೆರೆಬಿಯನ್ನರ ಪ್ರವಾಸ ಎದಿರಾಳಿ ನಾಯಕರುಗಳಿಗೆ ಕುತ್ತು ತಂದಿತ್ತು ಎನ್ನುವುದು ಸತ್ಯ!.
ಈ ಹಿನ್ನೆಲೆಯ ವೆಸ್ಟ್ ಇಂಡೀಸ್ ತಂಡ ಈಗ ಸೊರಗಿರುವುದಕ್ಕೆ ನೂರಾರು ಕಾರಣಗಳಿವೆ. ಪಕ್ಕದ ಅಮೇರಿಕಾ ಹಾಗೂ ಕೆನಡಾ ತನ್ನ ಸರಕು ಸಂಸ್ಕೃತಿಯ ಭಾಗವಾದ ಕೇಬಲ್ ಜಾಲದ ಮೂಲಕ ಯುವ ಜನಾಂಗವನ್ನು ಬೇಸ್ಬಾಲ್ ಹಾಗೂ ಬ್ಯಾಸ್ಕೆಟ್ಬಾಲ್ ಅಟಗಳತ್ತ ಸೆಳೆಯುತ್ತಿದೆ. ಇವೆರಡೂ ಕ್ರೀಡೆಗಳಿಗೆ ಸಾಕಷ್ಟು ಹಣದ ಥೈಲಿಯ ಆಕರ್ಷಣೆ ಇದೆ. ದ್ವೀಪಗಳ ನಡುವಿನ ಆಂತರಿಕ ಪಂದ್ಯಗಳ ಗುಣಮಟ್ಟ ನೆಲಕಚ್ಚಿದೆ. ಆರ್ಥಿಕ ಮುಗ್ಗಟ್ಟು, ಉತ್ತಮ ಆಡಳಿತಗಾರರ ಕೊರತೆ, ದ್ವೀಪಗಳ ನಡುವಿನ ಭಿನ್ನಾಭಿಪ್ರಾಯ ಈ ಬಿಕ್ಕಟ್ಟನ್ನು ಇನ್ನೂ ತೀವ್ರಗೊಳಿಸಿದೆ. ಏನಿದ್ದರೂ ವೆಸ್ಟ್ ಇಂಡೀಸ್ ಸಬಲವಾದರೆ ಒಟ್ಟಾರೆ ವಿಶ್ವ ಕ್ರಿಕೆಟ್ ದೃಷ್ಠಿಯಿಂದ ಒಳ್ಳೆಯದು.
ಸೆಪ್ಟೆಂ 30, 2009 @ 09:06:43
ವೆಸ್ಟಇಂಡೀಸ್ ತನ್ನ ಬಿ ಟೀಮು ಕಳಿಸಿದೆ ಆದರೂ ಎರಡೂ ಪಂದ್ಯಗಳಲ್ಲಿ ಕೆಚ್ಚೆದೆಯ ಆಟ ಪ್ರದರ್ಶಿಸಿದ್ದಾರೆ. ನಿಮ್ಮ ಲೇಖನ
ಬರೀ ಇತಿಹಾಸ ಹೇಳಿತು ಈಗಿನ ಅವನತಿಗೆ ಆಟಗಾರರ ದುರಾಸೆ ಹಾಗೂ ಮಂಡಳಿಯ ಹಟ ಎರಡೂ ಕಾರಣ. ನಿಮ್ಮ ಲೇಖನದಲ್ಲಿ ಆ ಬಗ್ಗೆ ಪ್ರಸ್ತಾಪವೇ ಇಲ್ಲ…..!
ಸೆಪ್ಟೆಂ 29, 2009 @ 19:12:11
It goes back to those glorious days of West Indies Cricket. This gives a holistic picture of cricket under the consequences of colonial-post colonial; globalization, and the past history of West Indies cricket. But i think, it doesn’t give much information on serious, genuine reasons of the failure of West Indian Cricketers.