ನಮ್ಮೂರಲ್ಲೊಂದು ‘ಟಾಕೀಸಲ್ಲ’, ಬರೇ ‘ಗುಲಾಬಿ’..!

ಚಿತ್ರಾ ಕರ್ಕೇರಾ

ಶರಧಿ

TelevisionRoc

ನಮ್ಮೂರ ಶೇಷಮ್ಮಕ್ಕ ಅಂದ್ರೆ ಅಕ್ಕರೆ, ಪ್ರೀತಿ. ನಮ್ಮನೆಯಿಂದ ಮೂರ್ನಾಲ್ಕು ಮೈಲಿ ನಡೆದರೆ ಶೇಷಮ್ಮಕ್ಕನ ಮನೆ. ೫೫ ದಾಟಿರುವ ಆಕೆ ಅತ್ತ ಅಜ್ಜಿಯೂ ಅಲ್ಲ, ಇತ್ತ ಆಂಟಿಯೂ ಅಲ್ಲ. ಕೂದಲೂ ನರೆತರೂ , ಅರ್ಧಡಜನ್ ಗಿಂತ ಹೆಚ್ಚು ಮಕ್ಕಳಿದ್ದರೂ, ಮೊಮ್ಮಕ್ಕಳದ್ರೂ ಅವಳದು ಇನ್ನೂ ಹರೆಯದ ಉತ್ಸಾಹ. ಶೇಷಮ್ಮಕ್ಕ ಅಂದ್ರೆ ಊರಿಗೆಲ್ಲಾ ಪ್ರೀತಿ. ತಮ್ಮ ಮಕ್ಕಳಂತೆ ಊರವರನ್ನೂ ತುಂಬಾನೇ ಪ್ರೀತಿಸುವ ವಿಶಾಲ ಹೃದಯ ಅವಳದ್ದು. ಅವಳಿಗೆ ಏಳು ಜನ ಮಕ್ಕಳಲ್ಲಿ ನಾಲ್ಕು ಹೆಣ್ಣು ಮತ್ತು ಮೂರು ಗಂಡು. ಮೂವರು ಹೆಣ್ಣುಮಕ್ಕಳನ್ನು ಮದುವೆ ಮಾಡಿ ಕೊಟ್ಟಾಗಿದೆ, ಕೊನೆಯವಳು ಬಾಕಿ..ಗಂಡು ಮಕ್ಕಳೆಲ್ಲಾ ಹೊರಗಡೆ ಒಳ್ಳೇ ಕೆಲ್ಸದಲ್ಲಿದ್ದಾರೆ.

ನಾನು ಊರಿಗೆ ಹೋದರೆ ಶೇಷಮ್ಮಕ್ಕನ ಮನೆಗೆ ಹೋಗೋದನ್ನು ಮರೆಯಲ್ಲ. ನಾನು ಬರ್ತೀನಿ ಅಂದ್ರೆ ಸಾಕು ರೊಟ್ಟಿ ಮತ್ತು ಮೀನು ಸಾರು ಮಾಡಿ ಕಾಯೋಳು ಶೇಷಮ್ಮಕ್ಕ. ಬಟ್ಟಲು ತುಂಬಾ ಪ್ರೀತಿನ ನೀಡೋಳು. ಆಕೆಯ ಅಮ್ಮನ ಮಮತೆಯನ್ನು ಮನತುಂಬಾ ತುಂಬಿಸಿಕೊಳ್ಳೋ ಹಂಬಲ ನನ್ನದು. ಕಳೆದ ಸಲ ಊರಿಗೆ ಹೋದಾಗ ಅವಳ ಮನೆಗೆ ಹೋಗಲು ಮರೆಯಲಿಲ್ಲ. ಒಂದು ಮಟಮಟ ಮಧ್ಯಾಃಹ್ನ ಶೇಷಮ್ಮಕ್ಕನ ಮನೆಗೆ ಹೋದೆ. ನಾನು ಹೋಗಿದ್ದೇ ತಡ..ದೊಡ್ಡ ಚೊಂಬಿನಲ್ಲಿ ನೀರು ತಕೊಂಡು ಬಂದು ನೆಂಟರಿಗೆ ಮನೆ ಒಳಗೆ ಹೋಗುವಾಗ ನೀರು ಕೊಡ್ತಾರಲ್ಲಾ..ಹಾಗೇ ನೀರು ಕೊಟ್ಟು ನನ್ನ ಬರಮಾಡಿಕೊಂಡಳು. ಮನೆ ನೋಡಿದರೆ ಎಂದಿನಂತೆ ಇರಲಿಲ್ಲ. ಎದುರಿನ ಚಾವಡಿಯಲ್ಲಿ ದೊಡ್ಡ ಸೋನಿ ಟಿವಿ ಮಾತಾಡುತ್ತಾ ಕುಳಿತಿತ್ತು. ಪದೇ ಪದೇ ಬೊಬ್ಬಿಡುವ ಫೋನ್ ಕೂಡ ಬಂದಿದೆ. ಚಿಕ್ಕಮಗಳು ಕಾಣಿಸಲಿಲ್ಲ..ಅವಳೂ ಯಾವುದೇ ಕೆಲಸಕ್ಕೆ ಹೊರಗೆ ಹೋಗುತ್ತಿದ್ದಾಳೆ. ನಾನು ಹೋದಾಗ ಶೇಷಮ್ಮಕ್ಕ ಒಬ್ಬಳೇ ಕುಳಿತು ಟಿವಿ ನೋಡುತ್ತಾ, ತನ್ನಷ್ಟಕ್ಕೆ ನಗುತ್ತಾ, ಖುಷಿಪಡುತ್ತಾ, ಆರಾಮವಾಗಿ ಕಾಲುಚಾಚಿ ಈಜಿ ಚಯರ್ ನಲ್ಲಿ ಕುಳಿತಿದ್ದಳು…ಥೇಟ್ ಒಂದೇ ಸಲ ನಂಗೆ ಕಾಸರವಳ್ಳಿಯವರ ‘ಗುಲಾಬಿ ಟಾಕೀಸಿ’ನ ಗುಲಾಬಿಯ ಹಾಗೇ. ..

ಮೀನು ಸಾರು ಮತ್ತು ರೊಟ್ಟಿನೂ ರೆಡಿಯಾಗಿತ್ತು. ಆವಾಗ ಅವಳು ನಾನು ಹೇಗಿದ್ದೇನೆ? ಬೆಂಗಳೂರು ಹೇಗಿದೆ? ಕೆಲಸ ಹೇಗಾಗುತ್ತಿದೆ? ಎನ್ನುವ ಮಾಮೂಲಿ ಪ್ರಶ್ನೆಗಳ ಸುರಿಮಳೆ ಗೈಯಲಿಲ್ಲ. ಬೆಂಗಳೂರಿನಲ್ಲಿ ಅಂಬರೀಷ್ ಕಾಣಕ್ಕೆ ಸಿಗ್ತಾನಾ? ವಿಷ್ಣುವರ್ಧನ್ ಸಿಗ್ತಾನಾ? ಶ್ರುತಿ,ಶಶಿಕುಮಾರ್ ಸಿಗ್ತಾರಾ? ಅಂತ..ಯಪ್ಪಾ..ನಾನು ಟೋಟಲೀ ಕನ್ ಫ್ಯೂಸ್! ನನ್ನ ಉತ್ತರಕ್ಕೂ ಕಾಯದೆ, ಅಂಬರೀಷ್ , ವಿಷ್ಣುವರ್ಧನ್ ಸಿನಿಮಾ ಭಾಳ ಇಷ್ಟ..ಶ್ರುತಿಯ ಅಳುಮುಂಜಿ ಸಿನಿಮಾ ನೋಡಿದಾಗ..ಕರುಳು ಕಿತ್ತು ಬರುತಂತೆ…ಅವಳು ಸೀರೆ, ಲಂಗಧಾವಣಿಯಲ್ಲೇ ಇರ್ತಾಳಂತೆ..ಅರ್ಧಂಬರ್ಧ ಡ್ರೆಸ್ ಹಾಕೋಲ್ಲಂತೆ..ಹಾಗಾಗಿ ಭಾಳ ಇಷ್ಟ ನೋಡೋಕೆ” ಅಂತ ಒಂದೇ ಉಸಿರಿಗೆ ಹೇಳಿಬಿಟ್ಟಾಗ ಮೂಗಿನ ಮೇಲೆ ಬಂದು ನಿಂತಿದ್ದ ನನ್ನ ಬಂಪರ್ ಕೋಪ ಕೂಡ ಕರಗಿ ತಣ್ಣಗಾಗಿ ಹೋಗಿತ್ತು. ಆಕೆಯ ಮುಗ್ಧ, ಪ್ರಾಮಾಣಿಕ ಮಾತು..ಅದನ್ನು ಹೇಳೋ ಸ್ಟೈಲ್ ಹಾಗಿತ್ತು. ಅವಳಿಗೆ ಕುತೂಹಲ ಅಂದ್ರೆ..ಈ ನಟ-ನಟಿಮಣಿಯರೆಲ್ಲಾ ಬೆಂಗಳೂರಲ್ಲೇ ಇರ್ತಾರೆ..ಅಂತ ಮಕ್ಕಳು ಹೇಳಿರ್ತಾರೆ..ಹಾಗೇ ನಾನು ಬೆಂಗಳೂರಿನಲ್ಲಿ ಇರೋದ್ರರಿಂದ ಊರಲ್ಲಿದ್ದ ಹಾಗೇ ಅಕ್ಕ-ಪಕ್ಕನೇ ಇರ್ತಾರೆ..ಅಂಥ ಅವಳ ಮುಗ್ಧ ನಂಬಿಕೆ!.ಆಮೇಲೆ ಅವಳಿಗೆಲ್ಲಾ ವಿವರಿಸಿ ಹೇಳೋವಷ್ಟರಲ್ಲಿ..ಬಟ್ಟಲು ತುಂಬಾ ಹಾಕಿಕೊಟ್ಟ ಮೀನುಸಾರು, ರೊಟ್ಟಿ ಖಾಲಿಯಾಗಿ..ತಲೆನೂ ಖಾಲಿ ಖಾಲಿ ಅನಿಸಿ ಇನ್ನೊಂದು ಬಟ್ಟಲು ರೊಟ್ಟಿ ತಿನ್ನುವ ಮಟ್ಟಕ್ಕೆ ಬಂದು ತಲುಪಿದ್ದೆ ನಾನು. ಪಾಪ! ಶೇಷಮ್ಮಕ್ಕ ಒಬ್ಬಳೇ ಮನೇಲಿರ್ತಾಳಂತ ಮಕ್ಕಳು ಟಿವಿ ತಂದಿದ್ದರು..ಬೋರ್ ನಿವಾರಿಸೋದಕ್ಕೆ..ಇಳಿವಯಸ್ಸಿನತ್ತ ಸಾಗೋ ಒಂಟಿ ಜೀವಕ್ಕೆ ಕಂಪನಿ ಕೊಡಾಕೆ!!!

ಇಷ್ಟಕ್ಕೂ ನಂಗೆ ಈ ಶೇಷಮ್ಮಕ್ಕ ನೆನಪಾಗಿದ್ದು ಮೊನ್ನೆ ಗುರುವಾರ ‘ಬೆಂಗಳೂರು ಅಂತರ್ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಪ್ರದರ್ಶನಗೊಂಡ ಕಾಸರವಳ್ಳಿಯವರ ‘ಗುಲಾಬಿ ಟಾಕೀಸ್’ ಎಂಬ ಒಳ್ಳೆ ಸಿನಿಮಾನ ನೋಡಿದಾಗಲೇ! ನಗರ ಎಷ್ಟೇ ಬದಲಾಗುತ್ತಾ ಹೋದರೂ, ಹಳ್ಳಿಯಲ್ಲಿರುವ ಮುಗ್ಧತೆ, ಪ್ರಾಮಾಣಿಕತೆ ಎಂದಿಗೂ ಬದಲಾಗಿಲ್ಲ..ಅದೇ ಕಾರಣದಿಂದ ಹಳ್ಳೀನ ಇನ್ನೂ ನಾವು ಪ್ರೀತಿಯಿಂದ ಅಪ್ಪಿಕೊಳ್ತಿವಿ ಅನಿಸುತ್ತೆ


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: