-ಸಂದೀಪ್ ಕಾಮತ್
ಈಗ ಯಾವ ಚ್ಯಾನಲ್ ನೋಡಿದ್ರೂ ರಿಯಾಲಿಟಿ ಷೋಗಳು.ರಿಯಾಲಿಟಿ ಶೋ ಅಂದ ಮಾತ್ರಕ್ಕೆ ಇಲ್ಲಿ ತೋರಿಸೋದೆಲ್ಲಾ ರಿಯಲ್ ಅಂದುಕೊಂಡ್ರೆ ನಮ್ಮಂಥ ಮೂರ್ಖರು ಬೇರೊಬ್ಬರಿಲ್ಲ!
ಬಹಳಷ್ಟು ಜನರಿಗೆ ಇಂಥ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಬೇಕು ಅಂತ ಆಸೆ ,ಆದ್ರೆ ಹೇಗೆ ಅನ್ನೋದು ಗೊತ್ತಿಲ್ಲ.
ನನ್ನ ಬಳಿ ಕೆಲವು ಟಿಪ್ಸ್ ಗಳಿವೆ ! ನೋಡಿ ಉಪಯೋಗಕ್ಕೆ ಬಂದ್ರೂ ಬರಬಹುದು .ಯೋಚನೆ ಮಾಡ್ಬೇಡಿ ಕಾಸೇನೂ ಕೇಳಲ್ಲ ಇದಕ್ಕೆಲ್ಲ.
ರಿಯಾಲಿಟಿ ಶೋಗಳಲ್ಲಿ ಭಾಗವಸೋದಕ್ಕೆ ಮಿನಿಮಮ್ ಯೋಗ್ಯತೆ ಅಂದ್ರೆ ನಿಮಗೊಂದಿಷ್ಟು ಟ್ಯಾಲೆಂಟ್ ಇರ್ಬೇಕು.ಟ್ಯಾಲೆಂಟ್ ಇರದಿದ್ದೂ ನಡೆಯುತ್ತೆ ಅಂದುಕೊಂಡಿದ್ರೆ ತಪ್ಪು ಕಣ್ರಿ.ಆ ಮಟ್ಟಿಗೇನೂ ಇಳಿದಿಲ್ಲ ರಿಯಾಲಿಟಿ ಶೋಗಳ ಕ್ವಾಲಿಟಿ!
ನಿಮಗೆ ಹಾಡೋದು ಅಥವಾ ಕುಣಿಯೋದು ಗೊತ್ತಿದ್ರೆ ಒಳ್ಳೇದು.ಎರಡೂ ಗೊತ್ತು ಅಂದ್ರೆ ಇನ್ನೂ ಒಳ್ಳೇದು. ಎರಡೂ ಗೊತ್ತಿಲ್ಲ ಅಂದ್ರೆ ನಿಮಗೆ ಏನು ಗೊತ್ತಿದೆ ಹೇಳಿ ಆಮೇಲೆ ನಿರ್ಧಾರ ಮಾಡೋಣ ಯಾವುದರಲ್ಲಿ ಭಾಗವಹಿಸೋದು ಅಂತ.
ನಿಮಗೆ ಚೆನ್ನಾಗಿ ಹಾಡೋದಕ್ಕೆ ಗೊತ್ತಿದ್ದು ಚೆನ್ನಾಗಿರೋ ಮನೆಯಲ್ಲಿ ನೀವೇನಾದ್ರೂ ವಾಸವಾಗಿದ್ರೆ ನಿಮ್ಮ ಬ್ಯಾಡ್ ಲಕ್ ಕಣ್ರಿ.ಯಾಕಂದ್ರೆ ಟಿ.ವಿ ನವ್ರು ಕಾರ್ಯಕ್ರಮದ ಮಧ್ಯೆ ತೋರ್ಸೋದಕ್ಕೆ ಒಂದು ಹಳೆ ಮನೆ ,ಅದರಲ್ಲಿ ಒಲೆ ಹಚ್ಚುತ್ತಿರೋ ನಿಮ್ಮ ತಾಯಿ ,ನೀವು ಪಕ್ಕದ ಹಳ್ಳಿಯಿಂದ ಕೊಡದಲ್ಲಿ ನೀರು ತುಂಬಿಸಿ ತರೋ ದೃಶ್ಯ ಇವೆಲ್ಲಾ ಬೇಕು.ಹೀಗೆ ನಿಮ್ಮ ಬಡತನವನ್ನು ತೋರಿಸ್ತಾ ಇದ್ದಾಗ ಹಿನ್ನೆಲೆಯಲ್ಲಿ ಒಂದು ಪಿಟೀಲಿನ ಕುಂಯ್ ಕುಂಯ್ ಅನ್ನೋ ಟ್ಯೂನ್ ಹಾಕಿದ್ರಂತೂ SMS ಗಳ ಮಹಾಪೂರ ಗ್ಯಾರಂಟಿ.
ಬದಲಾಗಿ ಮಲ್ಲೇಶ್ವರಂ ನ ಚೆನ್ನಾಗಿರೋ ಅಪಾರ್ಟ್ಮೆಂಟ್ ನಲ್ಲಿ ನೀವು ಸಂಗೀತ ಅಭ್ಯಾಸ ಮಾಡ್ತಾ ಇರೋದು ,ನಿಮ್ಮ ತಾಯಿ ನಿಮಗೆ ಹಾರ್ಲಿಕ್ಸ್ ತಂದು ಕೊಡೋದು ಇದೆಲ್ಲಾ ತೋರ್ಸಿದ್ರೆ ನಿಮಗ್ಯಾರ್ರಿ SMS ಕಳಿಸ್ತಾರೆ?
ಇನ್ನು ನೀವು ಚೆನ್ನಾಗಿ ಡ್ಯಾನ್ಸ್ ಮಾಡೋರಾದ್ರೆ ಒಳ್ಳೇ ವಿಚಾರ.ಆದ್ರೆ ನೀವು ಮಾಮೂಲಿ ಸ್ಟೆಪ್ಸ್ ಜೊತೆ ಒಂದು ಎಕ್ಸ್ಟ್ರಾ ಸ್ಟೆಪ್ ಕಲೀಬೇಕಾಗುತ್ತೆ.ಅದೇನಂದ್ರೆ ಮೇಲಿಂದ ಹಾರಿ ಲ್ಯಾಂಡ್ ಆಗ್ಬೇಕಾದ್ರೆ ಎಡವಟ್ಟಾಗಿ ಬಿದ್ದು ಕಾಲು ತಿರುಚಿಕೊಳ್ಳೋದು!
ನೋಡಿ ಸರಿಯಾಗಿ ಅಭ್ಯಾಸ ಮಾಡ್ಬೇಕು ಈ ಸ್ಟೆಪ್ ನ.ಅಪ್ಪಿ ತಪ್ಪಿ ನಿಜವಾಗ್ಲೂ ಕಾಲು ತಿರುಚಿಕೊಂಡ್ರೆ ನನ್ನನ್ನ ಬಯ್ಬೇಡಿ ಮತ್ತೆ.ನೀವು ಕಾಲು ತಿರುಚಿ ಬಿದ್ದಾಗ ಬೇಜಾರಲ್ಲಿ ಸುಮ್ನೆ ಬಿದ್ದುಕೊಳ್ಳಿ.ಆ ದೃಶ್ಯವನ್ನು ಕಪ್ಪು ಬಿಳುಪಿನಲ್ಲಿ ಒಂದು ಸಲ ,ಸಿಡಿಲು ಬಡಿದ ಹಾಗೆ ಲೈಟ್ ಎಫೆಕ್ಟ್ ಹಾಕಿ ಒಂದು ಸಲ ತೋರ್ಸೋ ಕೆಲಸ ಟಿ.ವಿ ಯವರಿಗೆ ಬಿಟ್ಟು ಬಿಡಿ.ನೀವೇನೂ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ ಈ ಬಗ್ಗೆ.
ಸತ್ಯವಂತರಿಗಿದು ಕಾಲವಲ್ಲ ಅಂತ ದಾಸರು ತಪ್ಪಿ ಹೇಳಿರೋದು.ಅವರು ’ಸಚ್ ಕಾ ಸಾಮ್ನಾ’ ನೋಡಿಲ್ವಲ್ಲ ಪಾಪ.ಸತ್ಯವಂತರಿಗಿದು ದುಡ್ಡು ಮಾಡೋ ಕಾಲ.ಆದ್ರೆ ಈ ಶೋ ಗೆ ಎಂಟ್ರಿ ಸಿಗೋದು ಸ್ವಲ್ಪ ಕಷ್ಟ.ನಿಮಗೆ ಒಂದೆರಡು ಅನೈತಿಕ ಸಂಬಂಧಗಳಿದ್ರೆ ಆರಾಮಾಗಿ ಭಾಗವಹಿಸಬಹುದು.ಎರಡಕ್ಕಿಂತ ಜಾಸ್ತಿ ಇದ್ರೆ ನಿಮ್ಮನ್ನು ಮನೆಗೆ ಬಂದು ಕರ್ಕೊಂಡು ಹೋಗ್ತಾರೆ ಬಿಡಿ ಚ್ಯಾನೆಲ್ ನವರು!ಯಾವುದಕ್ಕೂ ನೀವು ಯಾರ್ಯಾರ ಜೊತೆ ಮಲಗಿದ್ರಿ ,ಎಷ್ಟು ಜನ ವೇಶ್ಯೆಯವರ ಜೊತೆ ಮಜಾ ಉಡಾಯಿಸಿದ್ರಿ ಇದೆಲ್ಲ ಒಂದು ಪುಟ್ಟ ಡೈರಿಯಲ್ಲಿ ಬರೆದಿಟ್ಟು ಆಗಾಗ ನೆನಪು ಮಾಡಿಕೊಳ್ತಾ ಇದ್ರೆ ಜಾಸ್ತಿ ಹಣ ಬಹುಮಾನವಾಗಿ ಗೆಲ್ಲಲು ಸಹಕಾರಿಯಾಗುತ್ತೆ .
ನಿಮ್ಮದು ತೀರಾ ಸಪ್ಪೆ ಜೀವನವಾದ್ರೆ ಏನೂ ಮಾಡೋದಕ್ಕಾಗಲ್ಲ ಸಾರಿ.ನಿಮಗೆ ಅಲ್ಲಿ ಪ್ರವೇಶವಿಲ್ಲ 😦
ನಿಮಗೆ ಇಂಗ್ಲೀಶ್ ಅಥವ ಹಿಂದಿ ಬೈಗುಳ ಚೆನ್ನಾಗಿ ಗೊತ್ತಿದ್ರೆ ನೀವು ಎಂ.ಟಿ.ವಿ ರೋಡೀಸ್ ಥರದ ಶೋಗಳಿಗೆ ಪ್ರಯತ್ನಿಸಬಹುದು ನೋಡಿ.ಬರೀ ಕನ್ನಡ ಬೈಗುಳ ಗೊತ್ತಿದ್ರೆ once again sorry! ಕನ್ನಡದಲ್ಲಿ ’ಇನ್ನೂ’ ಆ ಥರದ ಶೋ ಶುರು ಆಗಿಲ್ಲ!
ಇನ್ನು ಜಾಸ್ತಿ ಜಾಸ್ತಿ SMS ಗಳನ್ನು ಬಾಚಿಕೊಳ್ಳೋದು ಅನ್ನೋದರ ರಹಸ್ಯ ಗೊತ್ತಾಗ್ಬೇಕಾ ನಿಮಗೆ ? !
ತುಂಬಾ ಸಿಂಪಲ್ ! ನೀವು ಕರ್ನಾಟಕದಲ್ಲೇ ಹುಟ್ಟಿ ಬೆಳೆದರೂ , ’ನಾನು ಹುಟ್ಟಿದ್ದು ದೆಹಲಿಯಲ್ಲಿ,ನಮ್ಮ ಅಪ್ಪ ಕರ್ನಾಟಕದವರು,ಅಮ್ಮ ತಮಿಳುನಾಡಿನವರು ಆದ್ರೆ ಈಗ ನಾವು ರಾಜಸ್ತಾನದಲ್ಲಿ ಮನೆ ಮಾಡಿಕೊಂದಿದ್ದೀವಿ ’ ಅನ್ನಿ !
ಕರ್ನಾಟಕ ,ದೆಹಲಿ,ತಮಿಳುನಾಡು,ರಾಜಸ್ತಾನದವರೆಲ್ಲರೂ ’ಇಂವ ನಮ್ಮವ ಇಂವ ನಮ್ಮವ ’ ಅಂದುಕೊಂಡು SMS ಮಾಡೇ ಮಾಡ್ತಾರೆ!
ಸೆಪ್ಟೆಂ 10, 2009 @ 18:49:34
ha..ha..ha…
ಸೆಪ್ಟೆಂ 10, 2009 @ 15:23:10
🙂
ಸೆಪ್ಟೆಂ 10, 2009 @ 14:26:16
excellent sandeep
ಸೆಪ್ಟೆಂ 09, 2009 @ 14:38:25
nimma idea chennagide
ಸೆಪ್ಟೆಂ 09, 2009 @ 11:03:02
What a writeup sandeep 🙂
cool..excellent 🙂
Thanks a lot for the same 🙂
Sunil.