ನನ್ನೊಳಗೇ ಇದ್ದುದನ್ನು ಗಣಿಗಾರಿಕೆ ಮಾಡಿ ತೆಗೆದದ್ದು…

jeevayaana

ಪ್ರಿಯ ಓದುಗ,

ನಿನ್ನ ಮುಂದೆ ಇವತ್ತು ಏನೆಲ್ಲವನ್ನೂ ಹೇಳಿಕೊಂಡು ಬಿಡಬೇಕು ಎನ್ನಿಸಿದೆ. ಕವಿತೆಯೆಂದರೆ ತನ್ನ ಎದೆಯನ್ನೇ ಕಿತ್ತು ಇಟ್ಟಂತಿರಬೇಕು ಎಂದು ಹೇಳುವವರಿದ್ದಾರೆ. ಈ ಹಿಂದೆ ನಾನು ಅದನ್ನು ಅಷ್ಟಾಗಿ ಒಪ್ಪಿರಲೂ ಇಲ್ಲ ಬಿಟ್ಟಿರಲೂ ಇಲ್ಲ. ಯಾಕೆಂದರೆ ಅದು ಸುಲಭವೆಂದೆನಿಸಿರಲಿಲ್ಲ. ನಮ್ಮ ಬಗ್ಗೆ ಹೇಳಿಕೊಳ್ಳುವುದು ಸುಲಭವೇ ಆದರೂ ಅದನ್ನು ಕವಿತೆಯಾಗಿ ಕಾಣಿಸುವುದು ಸುಲಭವಿರಲಿ, ನನಗೆ ಆಗ ಸಾಧ್ಯವೆಂದೂ ಅನಿಸಿರಲಿಲ್ಲ. ಅಂದರೆ ಹಸಿಹಸಿಯಾಗಿ ಅದನ್ನು ಮಾಡುವುದು ನನ್ನ-ಕವಿತೆಯ ಸ್ವಭಾವಕ್ಕೆ ತಕ್ಕುದಾಗಿರಲಿಲ್ಲ. ಯಾಕೆಂದರೆ-‘ಆಗಾಗುವ ಮುನ್ನವೆ ತಾನಾದೆನೆಂಬುವರ ಬಳಿಗೆ ಅಡಿಯಿಡುವವನಲ್ಲ ನಮ್ಮ ಗುಹೇಶ್ವರಾ’ ಎಂಬ ಮಾತು ಯಾವಾಗಿಂದಲೂ ನನ್ನ ಮೀಮಾಂಸೆಯ ವೇದವಾಕ್ಯವೇ ಆಗಿಬಿಟ್ಟಿದೆ. ಈಗ ಯಾವುದೋ ಅದೃಷ್ಟದಿಂದ ಅದು ಒಂದಷ್ಟು ಸಾಧ್ಯವಾದಂತಿದೆ. ಒಮ್ಮೊಮ್ಮೆ ಅನಿಸಿದೆ-ಇದು ಈಗ ನನ್ನ ನಿಜವಾದ ಅಭಿವ್ಯಕ್ತಿ ಎಂದು. ಯಾಕೆಂದರೆ ಇದನ್ನು ನಾನು ಈವರೆಗಿನಂತೆ ಕಣ್ಣಿದಿರು ನಿಜವೊಂದು ಅನಾವರಣವಾಗಿ ರಚಿಸಿದ್ದಲ್ಲ. ನನ್ನೊಳಗೇ ಇದ್ದುದನ್ನು ಗಣಿಗಾರಿಕೆ ಮಾಡಿ ತೆಗೆದದ್ದು. ಹಾಗಾಗಿ ಇಲ್ಲಿ ‘ಕವಿತೆ’ಯೂ ಕಸುರಾದಂತಿದೆ. ಕವಿತೆಯೇ ಅಲಂಕಾರವೆನಿಸಿ ಇವು ಬರೀ ‘ಕರುಳಿನ ವಚನ’ದಂತಿವೆ.

ನಿಜಕ್ಕೂ ಆದ ಸಂಗತಿಗಳ ಕುರಿತೇ ಈ ಕವಿತೆಗಳಿವೆ. ಅಂದರೆ ಆ ಮಟ್ಟಿಗೆ ‘ಜೀವಯಾನ’ ಆತ್ಮಚರಿತ್ರಾತ್ಮಕ. ಆದರೆ ಅದೇನು ಅಷ್ಟು ಮುಖ್ಯವಲ್ಲ. ಎಲ್ಲರಿಗೂ ಆಗಬೇಕಾದ್ದು ಏನನ್ನಾದರೂ ನಾನು ಇಲ್ಲಿ ಕಂಡುಕೊಂಡಿದ್ದೇನೋ ಎಂಬುದು ಮುಖ್ಯ. ಎಲ್ಲರ ಬದುಕಿನಂತೆಯೇ, ನನ್ನ ಬದುಕಲ್ಲೂ ಆಗಿರುವುದೆಲ್ಲ ಎಷ್ಟು ವಿಚಿತ್ರ ಹಾಗೆ ಆದದ್ದು ನನ್ನ ಮನಸ್ಸನ್ನು ನಿಮರ್ಿಸಿತೆಂಬುದು ‘ಜೀವಯಾನ’ದ ವಸ್ತು ಎಂದು ಹೇಳಬಹುದು. ಅದನ್ನು ಸ್ಪಶರ್ಿಸುವುದು ನನಗೆ ಅತ್ಯಂತ ಲಾಭಕಾರಿಯಾದಂತೆಯೇ ನಿನಗೂ ಆದೀತು ಎಂಬುದು ನನ್ನ ನಿರೀಕ್ಷೆ, ಅಪೇಕ್ಷೆ.

‘ಜೀವಯಾನ’ದಲ್ಲಿರುವ ಹಸಿವು, ಕಷ್ಟ, ಸಂಕಟಗಳು ಅಸಾಧಾರಣವಾದವು ಎನಿಸಿದರೆ, ಅಲ್ಲ, ನಮ್ಮ ಸಮಾಜದ ದಲಿತರಿಗೆ ಅವು ತೀರ ಸಹಜವೇ ಆಗಿವೆ. ಇಲ್ಲಿರುವ ಮೇಲುಜಾತಿಯ ಬಡವರ ಮನೆಯಿದುರೇ ದಲಿತರ ಹಟ್ಟಿಯಿದೆ. ಅವರು ಅಸ್ಪೃಶ್ಯರೂ ಕೂಲಿಗಳೂ ಆಗಿದ್ದಾರೆ. ಹಾಗಿದ್ದೂ ಅವರು ಜೀವನ ಸಂತೋಷದಿಂದ ಸಂಪೂರ್ಣ ವಂಚಿತರೂ ಆಗಿರುವುದಿಲ್ಲ. ಹಾಗೆ ಈ ಕವಿತೆಗಳ ಅನುಭವವೇ ಮಹತ್ತಾದುದು ಎಂದು ನಾನು ಭ್ರಮಿಸುವುದಿಲ್ಲ. ಆದರೆ ಮಹತ್ತಾದುದು ಇನ್ನೇನೋ ಇದೆ. ಅದೆಂದರೆ ಇವುಗಳ ಮೇಲೆ ಬೀಳುವ ಬೆಳಕು. ವಾರೆಯಾಗಿ ವಿಶಿಷ್ಟ ಕೋನದಿಂದ ಮನೆಯ ಸೂರಿನ ಕಿಂಡಿಯಿಂದ ಬೀಳುವ ಬೆಳಕಿನಂಥದು. ಆ ಕೋನದಲ್ಲಿ ಕಾಣುವ ಅನುಭವದ ಅರ್ಥವೇ ಬೇರೆ. ಒಂದು ಅನುಭವ ಘಟಿಸುತ್ತಿರುವ ಹೊತ್ತಲ್ಲಿ ಅದು ಇಂದ್ರಿಯಗಳನ್ನು ಘಾತಿಸುವ ವೇದನೆಯಾಗಿರುತ್ತದೆ. ಆ ಸಾಧ್ಯತೆಯಿಲ್ಲದೆ ಕಾಲದ ಮತ್ತೊಂದು ದೂರದಿಂದ ಅದು ಕಾಣಿಸುವ ರೀತಿಯೇ ಬೇರೆ. ಆ ಎರಡೂ ರೀತಿಗಳು ಒಟ್ಟಿಗೇ ಸಂಭವಿಸಿದರೆ ಅನುಭವ ಹೇಗೆ ವಿಶೇಷವಾಗಿ ಹೊಳೆಯಬಹುದೆನ್ನುವುದು ಕುತೂಹಲಕಾರಿ. ಸ್ನೇಹಿತರೊಬ್ಬರು ಸೂಚಿಸಿದಂತೆ-‘ಸೂರ್ಯ ಚಂದ್ರರಿಬ್ಬರ ಬೆಳಕನ್ನೂ ಒಟ್ಟಿಗೇ ಹಾಯಿಸಿ ಕಂಡಂತೆ’ ಅದು. ‘ಜೀವಯಾನ’ದ ಬಹುಪಾಲು ನಿರಾಲಂಕೃತ ಅನುಭವ ರೂಪಕವಾಗಿರಬಹುದಾದ್ದು ಹೀಗೆ.

ಸಾಮಾಜಿಕವಾಗಿ ದಲಿತರದವರ ಮಾತು ಬಂತು. ಶ್ರೀ ದೇವನೂರು ಮಹಾದೇವ ಅವರ ಕೃತಿ ‘ಒಡಲಾಳ’ವನ್ನು ಮೊದಲ ಬಾರಿಗೆ ಓದಿದಾಗ ನಾನು ಚಿಕ್ಕವನು-20ವರ್ಷ ವಯಸ್ಸು. ಆಗಲೂ ನನಗೆ ಅದು ಅನುಭವದಿಂದ ಬೆಚ್ಚಿಸಲಿಲ್ಲ. ನನಗೂ ಅಂಥದೊಂದು ಬರೆಯಲಿಕ್ಕಿದೆ ಎಂಬಂತೆ ಆಪ್ತವಾಯಿತು. ಆದರೆ ಆಗಲೇ ನಾನು ನನ್ನ ಮನಸ್ಸಿನೊಳಗಿನದನ್ನು ಬರೆದುಬಿಡಬಹುದಾದಷ್ಟು ಕಲಾವಂತಿಕೆಯನ್ನು ಪಡೆದವನಾಗಿರಲಿಲ್ಲವೆಂದು ಮೊದಲೇ ತಿಳಿಸಿದ್ದೇನೆ. ಅಂದರೆ ಈಗ ಕವಿತೆಯಲ್ಲಿ ಅಂಥ ಕೃತಿಯನ್ನು ಬರೆದುಬಿಟ್ಟಿದ್ದೇನೆ ಎಂದೇನು ನಾನು ಸೂಚಿಸುವುದಿಲ್ಲ. ಆದರೆ ಈ ಕವಿತೆಯನ್ನು ಆಲಿಸಿದ ಕೆಲ ಮಿತ್ರರು ‘ಒಡಲಾಳ’ವನ್ನು ನೆನಪಿಸಿಕೊಂಡುದು ನನಗೆ ಅರ್ಥಪೂರ್ಣವೆನಿಸಿದೆ. ನಾನು ಬರೆದದ್ದು ಕನ್ನಡದ ಒಳಗೆ ಹಾಗೆ ಸೇರಿಸಿಕೊಳ್ಳಬೇಕೆಂಬುದು ನನ್ನ ಹೆಬ್ಬಯಕೆಯಾಗಿದೆ.

ಕನ್ನಡವನ್ನು ಸಾಧ್ಯವಾದಷ್ಟೂ ಒಳಗೆ ಬಿಟ್ಟುಕೊಳ್ಳಲು ಜೀವಯಾನ ಯತ್ನಿಸಿದೆ. ಜೀವಯಾನ ಬರೆಯುತ್ತ ನಾನು ಆಶ್ಚರ್ಯಪಟ್ಟಿದ್ದೇನೆ, ವ್ಯಕ್ತಗೊಳ್ಳಲು ಭಾಷೆ ಎಷ್ಟೊಂದು ಹವಣಿಸುತ್ತದೆ ಎಂಬುದು ಗೊತ್ತಾಗಿ. ಕವಿತೆ ಭಾಷೆಯದೇ ಹೊರತು ಒಬ್ಬ ವ್ಯಕ್ತಿ ಬರೆಯುವುದಲ್ಲ. ಕವಿ ರಿಲ್ಕೆಯ ಮಾತು ನೆನಪಾಗುತ್ತದೆ; ದೇವರು ಎಲ್ಲೆಲ್ಲೂ ಪ್ರಕಟಗೊಳ್ಳಲು ಹಾತೊರೆಯುತ್ತಿದ್ದಾನೆ, ಅವನು ನಿನ್ನ ಒಪ್ಪಿಗೆ ಕೇಳುತ್ತಿದ್ದಾನೆ-ಎಂದು. ಭಾಷೆ ಬರೆದುಕೊಳ್ಳುವಾಗ ಕವಿ ಸರಿದು ನಿಲ್ಲಬೇಕಷ್ಟೇ. ಇದು ಜೀವಯಾನದಲ್ಲಿ ನನಗಾಗಿರುವ ಮುಖ್ಯ ಅನುಭವ.

ಕೊಳ್ಳೇಗಾಲದಲ್ಲಿ ಉದ್ಯೋಗದಲ್ಲಿರುತ್ತ ಆ ಕಿರಿಯ ವಯಸ್ಸಲ್ಲಿ ನಾನೊಮ್ಮೆ ಮೈಸೂರಿನ ಚಿತ್ರಮಂದಿರದಲ್ಲಿ ಕೂತಿದ್ದೆ. ಇನ್ನೂ ಚಿತ್ರ ಶುರುವಾಗುವ ಮೊದಲು ಎಲ್ಲರಂತೆ ನಾನು ಬಿಳೀ ಖಾಲಿ ಪರದೆ ನೋಡುತ್ತಿದ್ದೆ. ಆ ಒಂದು ಕ್ಷಣ ನಾನು ಈಗಲೇ ಹೊರಟು ದಲಿತರೊಂದಿಗೆ ಗುರುತಿಸಿಕೊಳ್ಳದಿದ್ದರೆ ಗತಿಯಿಲ್ಲ ಎನ್ನಿಸಿತು. ಯಾಕೆ ಆ ಕ್ಷಣವೇ ಹಾಗನ್ನಿಸಿತೋ ತಿಳಿಯದು. ಆಮೇಲೆ ಹುಣಸೂರಿನಲ್ಲಿ ನಾನು ದಲಿತ ಸಂಘಟನೆಯಲ್ಲಿ ತುಸು ಭಾಗಿಯಾದೆ. ಹಾಗೆ ಕೆಲವು ಸ್ನೇಹಿತರನ್ನೂ ಪಡೆದೆ. ನಮ್ಮ ಸಮಾಜದಲ್ಲಿ ದಲಿತನ ಹಸಿವು ಮತ್ತು ಅವಮಾನವನ್ನು ನಾನು ಈ ಕವಿತೆಯ ವಸ್ತುವಾಗಿರುವ ಅನುಭವದ ಮೂಲಕ ಅರಿತವನಾಗಿದ್ದೆ. ತಿಳಿಯದವರಿಗಾಗಿ ನಾನು ಈ ಮಾತು ಬರೆಯುತ್ತಿದ್ದೇನೆ: ಒಬ್ಬ ಮುನುಷ್ಯ ಹಸಿದಾಗ ತಾನು ಜಗತ್ತಿಗೇ ಅನ್ಯನಾಗಿಬಿಟ್ಟೆ ಅನಿಸುತ್ತದೆ. ಆ ರೀತಿ ಅವನು ಅಸ್ಪೃಶ್ಯತೆಯ ಭಾವವನ್ನು ಅನುಭವಿಸುತ್ತಾನೆ ಮತ್ತು ಕ್ರಿಮಿಕೀಟ ಪ್ರಾಣಿಗಳಿಗೂ ಈ ಸೃಷ್ಟಿಯಲ್ಲಿ ಅನ್ನಿವಿರುವಾಗ ಮನುಷ್ಯ ತಾನು ಹಸಿವಿನಿಂದ ನರಳುವಂತಾಗಿರುವುದು ಅತೀವ ಅಪಮಾನವಾಗಿ ಬಾಧಿಸುತ್ತದೆ.

ಹಸಿವು ಅಪಮಾನಗಳು ಮನುಷ್ಯನಿಗೇ ಬಹಳ ಮುಖ್ಯವಾದ ಅನುಭವಗಳು ಎಂದೂ ನಾನು ಹೇಳಹೊರಟಿಲ್ಲ. ಜೀವಿಯಾಗಿರುವುದೇ ಅನುಭವ ಮತ್ತು ಎಲ್ಲ ಅನುಭವಗಳು ಎಲ್ಲರಿಗೂ ಆಗುತ್ತವೆ ಎನ್ನುವುದೇ ನನ್ನ ನಂಬಿಕೆ. ನಾವೆಲ್ಲರೂ ಒಂದು ಜೀವನಾನುಭವದ ಪ್ರವಾಹದಲ್ಲಿ ಈಸುತ್ತಿದ್ದೇವೆ. ಎಂಬುದೇ ನಿಜವಲ್ಲವೇ? ಅದರ ಅರಿವನ್ನೇ ನಾವು ಸಂವೆದನೆಯೆಂದು ಕರೆಯುವುದಿಲ್ಲವೇ? ‘ಜೀವಯಾನ’ಅಂಥ ಸಂವೇದನೆಯ ಹರಿವಾಗಿದೆಯೇ ಎಂಬುದೇ ನೋಡಬೇಕಾದ್ದು.

ಉಳಿದದ್ದು ಪುಸ್ತಕದಲ್ಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: