ಆತ ಬ್ರೆಕ್ಟ್

ಯು. ಆರ್. ಅನಂತಮೂರ್ತಿ

brecht cover copy2

ಬ್ರೆಕ್ಟ್ ನನ್ನು ನಾನು ಅನುವಾದ ಮಾಡಲು ತೊಡಗಿದ್ದು ನನ್ನ ಮೈಯಲ್ಲಿ ಆರೋಗ್ಯ ಕೆಟ್ಟಾಗ. ಈ ಕಾಲದ ಅನೇಕ ದೌರ್ಜನ್ಯಗಳಿಗೆ ಪ್ರತಿರೋಧಿಸುವ ಶಕ್ತಿ ನನ್ನ ಮಾತಿಗೆ ಇಲ್ಲ ಎನಿಸಿದಾಗ.

ಡಾ.ವಿನಾಯಕ ಸೇನ್ ಎಂಬ ಮಕ್ಕಳ ವೈದ್ಯ ಮತ್ತು ದೀನರ ಬಂಧುವನ್ನು ಸರ್ಕಾರ ನಕ್ಸಲೈಟ್ ಎಂಬ ಗುಮಾನಿಯಿಂದ ಎರಡು ವರ್ಷ ಕಾಲ ಜೈಲಲ್ಲಿಟ್ಟಿತ್ತು. ಬರ್ಮಾದಲ್ಲಿ ಚುನಾವಣೆಯಲ್ಲಿ ಗೆದ್ದ ಅಂಗ್ಸಾನ್ ಸೂಕಿಯನ್ನು ಗೃಹಬಂಧನದಲ್ಲಿ ಇರಿಸಿ ಇನ್ನಷ್ಟು ಆಪಾದನೆಗಳನ್ನು ಹೊರೆಸಿ ಅವಳು ಮತ್ತೆ ಚುನಾವಣೆಯಲ್ಲಿ ನಿಲ್ಲದಂತೆ ಮಾಡಲು ಪ್ರಯತ್ನಿಸಲಾಗಿದೆ.

ದುಷ್ಟ ವ್ಯವಸ್ಥೆಯಲ್ಲಿ ಇದು ನಿರೀಕ್ಷಿಸುವಂಥದ್ದೆ, ಆದರೆ ವಿಪರ್ಯಾಸ ಎಂದರೆ ಮಹಾತ್ಮ ಗಾಂಧಿಯನ್ನು ರಾಷ್ಟ್ರಪಿತನೆಂದು ತಿಳಿಯುವ ನಮ್ಮ ಸರಕಾರ ಬರ್ಮಾದ ಬಗ್ಗೆ ಏನನ್ನೂ ಮಾಡಿಲ್ಲ. ಆರ್ಥಿಕವಾಗಿ ನಮಗೆ ಬರ್ಮಾದ ಸಹಾಯ ಬೇಕು. ಆದರೆ ಮಾನವ ಹಕ್ಕುಗಳಿಗಾಗಿ ಏನನ್ನು ಮಾಡಿಲ್ಲ. ಚೀನಾ ಅಂತೂ ಮಾವೋ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಸಂಪೂರ್ಣವಾಗಿ ಬರ್ಮಾದ ಬೆಂಬಲಕ್ಕೆ ನಿಂತಿದೆ. ಅಮೆರಿಕಾವು ಬರ್ಮಾದ ಮಿಲಿಟರಿ ಆಡಳಿತವನ್ನು ಬೆಂಬಲಿಸುತ್ತಿದೆ. ಪಾಕಿಸ್ತಾನದಲ್ಲಿ ಇಸ್ಲಾಂ ಧರ್ಮವನ್ನು ರಾಜಕೀಯ ಕಾರಣಗಳಿಗಾಗಿ ತಿರುಚಿಕೊಂಡು ನರಹತ್ಯೆಗೆ ಹೇಸದ ಆತ್ಮಹತ್ಯೆಗೂ ತಯಾರಾದ ಒಂದು ಪಡೆಯೇ ಸಿದ್ದವಾಗಿದೆ.

ಇದಕ್ಕೆ ವಿರುದ್ದವಾಗಿ ನಮ್ಮಲ್ಲಿ ಇಂದಿರಾಗಾಂಧಿಯವರ ಮೊಮ್ಮಗ, ಸಂಜಯಗಾಂಧಿಯ ಮಗ ವಿವೇಕಾನಂದರಂತೆ ತಲೆಗೆ ಪೇಟಾವನ್ನು ಕಟ್ಟಿ, ಶಾಲನ್ನು ಹೊದ್ದು, ಅವನ ಗುಂಡುಮುಖದಿಂದಾಗಿ ಹಾಗೆಯೇ ಕಾಣುತ್ತಾ, ಕಡಿ-ಕೊಚ್ಚು-ಕೊಲ್ಲು ಮಾತಾಡುತ್ತಾ ಚುನಾವಣೆಯಲ್ಲಿ ಗೆಲ್ಲುತ್ತಾನೆ. ಕರ್ನಾಟಕದಲ್ಲಂತೂ ಫ್ಯಾಸಿಸ್ಟ್ ಧೋರಣೆಯನ್ನು ಬೆಂಬಲಿಸುವ ಕಾಲಂ ಒಂದನ್ನು ಪ್ರತಿವಾರ ಪ್ರಕಟಿಸುವ ಅತ್ಯಧಿಕ ಪ್ರಸಾರದ ಒಂದು ವೃತ್ತಪತ್ರಿಕೆಯೇ ಇದೆ. ತಿರುಪತಿ ತಿಮ್ಮಪ್ಪನ ತಲೆಯ ಮೇಲೆ ಗಣಿ ಸುಲಿಗೆಯ ಹಣದಿಂದ ಮಾಡಿಸಿದ ವಜ್ರದ ಕಿರೀಟವಿದೆ. ಭಾರತದ ಕಮ್ಯುನಿಸ್ಟರು ಕೇರಳದಲ್ಲಿ ವ್ಯಾಪಾರೋದ್ಯಮದ ಅಧಿಪತಿಗಳಾಗಿದ್ದಾರೆ; ಬಂಗಾಳದಲ್ಲಿ ರೈತರ ನೆಲ ಕಸಿದು ನ್ಯಾನೋ ಕಾರು ಮಾಡಲು ಅದನ್ನು ಕೊಟ್ಟು ಪೇಚಿಗೆ ಸಿಲುಕಿದ್ದಾರೆ; ಹಲವು ಲೋಹಿಯಾ ಸೋಶಿಯಲಿಸ್ಟರು ಭಾಜಪದ ಆದರದ ಆಧಾರವಾಗಿದ್ದಾರೆ. ನಕ್ಸಲೈಟರು ಈಗಿರುವ ವ್ಯವಸ್ಥೆಗಿಂತ ಕ್ರೂರವಾದ ಪೊಲೀಸ್ ರಾಜ್ಯ ಕಟ್ಟಲು ಕುತಂತ್ರಿಗಳಾಗಿ ಅಮಾಯಕರನ್ನು ಬಲಿ ತೆಗೆದುಕೊಳ್ಳುತ್ತ ಇದ್ದಾರೆ. ಧ್ಯಾನವನ್ನು ಕಸುಬು ಮಾಡಿಕೊಂಡ ಕೆಲವು ಇಂಗಿಜಷ ಮಾತಾಡಬಲ್ಲ ಗುರುಗಳು ರೈತರ ಭೂಮಿಯನ್ನು ಎನ್ಆರ್ಐ ಭಕ್ತರಿಂದ ಹಣ ಪಡೆಯಲು ಅಗತ್ಯವಾದ ವಿಶ್ರಾಂತಿಧಾಮ ಮಾಡುತ್ತಾ ಇದ್ದಾರೆ. ಇವರಲ್ಲಿ ಒಬ್ಬರು ಶಾಂತಿಗಾಗಿ ಕೊಡುವ ನೊಬೆಲ್ ಬಹುಮಾನದ ಆಕಾಂಕ್ಷಿಗಳಂತೆ. ನಮ್ಮ ಬುದ್ಧಿವಂತರು ‘ಇದೆಲ್ಲ ಯಾವತ್ತೂ ಇದ್ದಿದ್ದೇ ಹೀಗೆ; ಇರೋದೆ ಹೀಗೆ’ ಎಂದುಕೊಂಡು ಆರಾಮಾಗಿ ಸಹಿಸುತ್ತಾರೆ.

ಹೀಗೆಯೇ ಯುರೋಪಿನಲ್ಲಿ ತಮ್ಮ ಮಾತೆಲ್ಲ ಸೋತಿದೆ ಅನ್ನಿಸಿದಾಗ, ಹಾಗೆ ಅನ್ನಿಸಿ, ಸೋತು, ಗೆದ್ದು, ಇಂತಹ ಕೆಟ್ಟ ಕಾಲದಲ್ಲೂ ಗೆದ್ದೆನೆಂದು ತನ್ನ ಜಾಣತನಕ್ಕೇ ಹೇಸಿ ಕೊನೆಗೂ ಜೀವನ ಪ್ರೀತಿಯನ್ನೂ, ಭರವಸೆಯನ್ನೂ ಕಳೆದುಕೊಳ್ಳದ ಬ್ರೆಕ್ಟ್ ನಂತವನು ನನಗೆ ಬಹಳ ಮುಖ್ಯ ಎನಿಸಿತು. ಹಿಟ್ಲರನ ಜರ್ಮನಿಯಲ್ಲಿ ಬದುಕಲಾರದೆ, ಅವನು ಓಡಿಹೋದ ಎಲ್ಲ ದೇಶಗಳು ಫ್ಯಾಸಿಸ್ಟ್ ಆಗಲು ತೊಡಗಿದಾಗ ಕೊನೆಯಲ್ಲಿ ಅಮೆರಿಕಾದಲ್ಲಿ ಆಶ್ರಯ ಪಡೆದು ಆಮೇಲಿನ ಮೆಕಾರ್ತರ ಕಾಲದಲ್ಲಿ ಅಮೆರಿಕಾ ವಿರೋಧಿ ಎಂಬ ಸಂಶಯದಿಂದ ಪೂರ್ಣ ವಿಚಾರಣೆಗೆ ಒಳಗಾಗಿ ಮತ್ತೆ ಪೂರ್ವ ಜರ್ಮನಿಯ ಬರ್ಲಿನ್ ಗೆ ಮರಳಿ ಬಂದವನು ಬ್ರೆಕ್ಟ್.

ಸೋವಿಯತ್ ಕ್ರಾಂತಿಯ ನಂತರ ಏನೋ ಒಂದು ಹೊಸ ಯುಗ ಬರುತ್ತದೆ ಎಂದು ತಿಳಿದಿದ್ದ ನಮ್ಮ ರವೀಂದ್ರನಾಥ ಠಾಗೂರರಂತೆ, ಮಾರ್ಕ್ಸಿಸ್ಟ್ ಆದ ಬ್ರೆಕ್ಟ್ ಕೂಡಾ ಭಾವಿಸಿದ್ದ. ಆದರೆ ಸ್ಟಾಲಿನ್ ನ ಕಾಲದಲ್ಲಿ ತನಗಾಗದವರನ್ನು, ತನ್ನ ಕ್ರೂರ ವಿಚಾರಗಳಿಗೆ ವಿರೋಧವಿಲ್ಲದಂತೆ ಮಾಡಲು ಸ್ಟಾಲಿನ್ ಬಹಳ ಜನ ಅಮಾಯಕರನ್ನು ಕೊಂದ. ಇದರ ವಿರುದ್ಧ ಯಾರೂ ಮಾತಾಡುವಂತಿರಲಿಲ್ಲ. ಪೂರ್ವ ಯುರೋಪಿನ ಯಾವ ರಾಷ್ಟ್ರಗಳೂ ಸ್ಟಾಲಿನ್ನ ಕ್ರೂರತೆಗೆ ವಿರೋಧ ವ್ಯಕ್ತಪಡಿಸಲಿಲ್ಲ. ಬ್ರೆಕ್ಟ್ ಈ ಎಲ್ಲ ವಿದ್ಯಮಾನಗಳನ್ನು ಕಣ್ಣಾರೆ ಕಂಡು ಗ್ರಹಿಸಿದ್ದ. ತಾನು ಬರೆದ ‘ಗೆಲಿಲಿಯೋ’ ನಾಟಕದಲ್ಲಿ ಗೆಲಿಲಿಯೋ ಹೇಗೆ ಒಂದು ಸುಳ್ಳನ್ನು ಹೇಳಿ ತನ್ನನ್ನು ಹೇಗೋ ಉಳಿಸಿಕೊಂಡು ಪಾರಾಗಿ ಸತ್ಯ ಶೋಧನೆಯಲ್ಲಿ ತೊಡಗಿದ ಎನ್ನುವಂತೆಯೇ ಬ್ರೆಕ್ಟ್ ಕೂಡಾ ತನಗೆ ಬೇಕಾದ್ದನ್ನು ಪಡೆದುಕೊಂಡು ಗುಪ್ತವಾಗಿ ಕೆಲವು ಪದ್ಯಗಳನ್ನು ಬರೆದು ಅದನ್ನು ಪ್ರಕಟಿಸದೆ ತನ್ನ ಅಂತರಂಗದ ಸತ್ಯವನ್ನು ಕಾಯ್ದುಕೊಂಡ. ತನ್ನ ಬಗ್ಗೆಯೇ ನಾಚಿಕೆ ಪಟ್ಟ.

‘ನಾನು ಚೆನ್ನಾಗಿ ಬಲ್ಲೆ: ಅನೇಕ ಸ್ನೇಹಿತರು ಸತ್ತೂ ನಾನು ಬದುಕಿ ಉಳಿದಿದ್ದು

ಬರಿಯ ಅದೃಷ್ಟ ಅಷ್ಟೆ. ಆದರೆ ರಾತ್ರಿ ಕನಸಿನಲ್ಲಿ

ಆ ಸ್ನೇಹಿತರು ನನ್ನನ್ನು ಕುರಿತಾಡಿದರು: ‘ಗಟ್ಟಿಗರಷ್ಟೇ ಬದುಕಿ ಉಳಿಯುತ್ತಾರೆ’

ಕೇಳಿ ನನ್ನ ಬಗ್ಗೆ ನನಗೇ ದ್ವೇಷ ಹುಟ್ಟಿತು

-ಬ್ರೆಕ್ಟ್, 1944, ಶಾ. ಬಾಲೂರಾವ್ ಅನುವಾದ

(ಬರ್ತೊಲ್ತ್ ಬ್ರೆಷ್ತ್ ಎಂಬತ್ತು ಕವಿತೆಗಳು, 1994, ಅಕ್ಷರ ಪ್ರಕಾಶನ)

ಪಾರಮಾರ್ಥಿಕವಾದ ಶಾಶ್ವತ ಅನ್ನುತ್ತೇವಲ್ಲ ಅದರಲ್ಲಿ ಬ್ರೆಕ್ಟ್ ನಂಬಿಕೆ ಉಳ್ಳವನಾಗಿದ್ದರೆ, ಅಷ್ಟು ಸಂಕಟವನ್ನು ಪಡಲೇ ಬೇಕಾಗಿರಲಿಲ್ಲ. ಅದೆಲ್ಲವನ್ನು ಈ ಕಾಲದ ಮಾಯೆ ಎಂದು ಸುಮ್ಮನಿದ್ದು ಬಿಡಬಹುದಿತ್ತು. ಆದರೆ ಬ್ರೆಕ್ಟ್ ಮಾರ್ಕ್ಸಿಸ್ಟ್ ಆದ್ದರಿಂದ ‘ಎಲ್ಲವು ಸಂಭವಿಸುವುದು ಇಲ್ಲಿ, ಈ ಕಾಲದಲ್ಲಿ, ನಮ್ಮ ಕಾಲದಲ್ಲಿ’. ‘ಇಲ್ಲಿ ಸಲ್ಲುವವರು ಅಲ್ಲಿಯು ಸಲ್ಲುವರಯ್ಯ’ ಎಂಬಂತೆ ಇಲ್ಲಿ ಮೊದಲು ಸಲ್ಲಬೇಕು ಅನ್ನುವ ರೀತಿಯವನು. ತಾನು ಕಾವ್ಯವನ್ನು ರಸಾತ್ಮಕ ಕಾರಣಗಳಿಗಾಗಿ ಬರೆಯುತಿದ್ದೇನೆ ಎಂಬುದನ್ನು ತಿರಸ್ಕರಿಸಿದ ಬ್ರೆಕ್ಟ್, ಅರಿಸ್ಟಾಟಲ್ ನ ಕಥಾರ್ಸಿಸ್ (catharsis) ಸಿದ್ಧಾಂತವನ್ನು ಒಪ್ಪಿರಲಿಲ್ಲ. ಕಥಾರ್ಸಿಸ್ ಸಿದ್ಧಾಂತದ ಮೇಲೆ ರಚಿತವಾದ ಕೃತಿಗಳು ನಮ್ಮನ್ನು ದುಃಖವಶರನ್ನಾಗಿ ಮಾಡಿ, ಆ ಕ್ಷಣದಲ್ಲಿ ನಾವು ಲೋಕದ ಸತ್ಯ ಮರೆಯುವಂತೆ ಮಾಡಿ, ನಾವು ಸಂಕಟ ಪಟ್ಟೆವು ಎಂಬ ನೆಮ್ಮದಿಯಲ್ಲಿ ಮರುಕ್ಷಣವೇ ನಾವು ಅದೇ ಮೊದಲಿನ ಮನುಷ್ಯರಾಗಿಯೇ ಉಳಿದು ಇರುವಂತೆ ಮಾಡುತ್ತದೆ. ಸಿನಿಮಾದಲ್ಲಿ ಹರಿಜನ ಪಡುವ ಯಾತನೆಯನ್ನು ನೋಡಿ ತುಂಬಾ ದುಃಖ ಪಡುವವನು ಮನೆಗೆ ಬಂದ ನಂತರ ಅಸ್ಪೃಶ್ಯತೆ ಬಗ್ಗೆ ತನ್ನ ವರ್ತನೆಯನ್ನು ಪ್ರಾಯಶಃ ಬದಲಾಯಿಸಿಕೊಳ್ಳುವುದು ಬಲು ಅಪರೂಪ. ಅಸ್ಪೃಶ್ಯತೆ ಬಗ್ಗೆ ಯಾವ ನಿಲುವು ಹೊಂದಿರುತ್ತಾನೋ ಅದನ್ನೆ

ಮುಂದುವರೆಸುತ್ತಾನೆ. ಈ ರೀತಿಯ ತಾದ್ಯಾತ್ಮಗೊಳ್ಳುವ ದುಃಖವನ್ನು, ಒಂದು ಬಗೆಯಲ್ಲಿ ಮುದ ಕೊಡುವ ದುಃಖದ ಆಭಾಸವನ್ನು ತರುವ ಕಾವ್ಯದಲ್ಲಿ ಅನೈತಿಕವಾದುದೇನೊ ಇದೆ ಎಂದು ಬ್ರೆಕ್ಟ್ ನಿಗೆ ಅನಿಸುತ್ತದೆ. ನಾವು ನೋಡುತ್ತ ಇರುವುದು, ಅನ್ಯವೆಂದೇ ನೋಡಿ ನಂತರದಲ್ಲಿ ಅದು ನಿಜವೇ ಸುಳ್ಳೆ ಎಂದು ಯೋಚನೆ ಮಾಡುವಂತೆ ಬರೆಯುತ್ತಿದ್ದ. ಇದನ್ನು ಅವನ ಕಾವ್ಯ ಮತ್ತು ನಾಟಕ ಎರಡರಲ್ಲೂ ನೋಡಬಹುದು. ಅವನ critical attitude ಪದ್ಯದಲ್ಲಿ ಅದು ಸ್ಪಷ್ಟವಾಗಿ ಬಂದಿದೆ.

ಕಾವ್ಯದ ಅನುವಾದದ ಬಗ್ಗೆ ಬ್ರೆಕ್ಟ್ ತನ್ನದೇ ಆದ ನಿಲುವನ್ನು ಹೊಂದಿದ್ದ. ಅವನ ಪ್ರಕಾರ ‘ಭಾಷಾಂತರಕಾರರು ತದ್ವತ್ ಭಾಷಾಂತರ ಮಾಡಲು ಹೊರಟರೆ ಅನೇಕ ಬಾರಿ ಮೂಲದ ಪದ್ಯ ಕಳೆದು ಹೋಗಿಬಿಡುತ್ತದೆ. ಆದ್ದರಿಂದ ಪದ್ಯದ ನಿಜವಾದ ವಿಚಾರ ಏನು ಎನ್ನುವುದನ್ನು ಗ್ರಹಿಸಿ ನಿಮ್ಮದೆ ಆದ ರೀತಿಯಲ್ಲಿ ವ್ಯಕ್ತ ಪಡಿಸಿ’ ಎನ್ನುವುದು ಆತನ ನಿಲುವು. ಅದರ ಜೊತೆಗೆ ಬ್ರೆಕ್ಟ್ ಮತ್ತೊಂದು ಮಾತನ್ನು ಹೇಳುತ್ತಾನೆ ಭಾಷಾಂತರಕಾರರು (ತೀರಾ ಸ್ವತಂತ್ರ ತೆಗೆದುಕೊಂಡಾರು ಎನ್ನುವ ಕಾರಣದಿಂದಲೋ ಏನೋ) ‘ಮೂಲ ಪದ್ಯದ ಲಯದಲ್ಲಿ ಕೂಡ ಅರ್ಥ ಸಾಕ್ಷಾತ್ಕಾರಗೊಳ್ಳುವ ಕೆಲವು ಗುಣಗಳಿವೆ ಎಂದು ಕಂಡರೆ, ಆ ಬಗೆಯ (ಅರ್ಥ ಬಗೆಯುವ) ಲಯವನ್ನು ನೀವು ನಿಮ್ಮ ಭಾಷೆಯಲ್ಲಿ ತರಲು ನೋಡಬೇಕು’ ಎನ್ನುತ್ತಾನೆ. ಜರ್ಮನ್ ಲಯವನ್ನು ನಾನು ಕನ್ನಡದಲ್ಲಿ ತರಲು ಸಾಧ್ಯವಿಲ್ಲ. ಏಕೆಂದರೆ ಬ್ರೆಕ್ಟ್ ಪದ್ಯವನ್ನು ನಾನು ಜರ್ಮನ್ ಭಾಷೆಯಲ್ಲಿ ಓದಿಲ್ಲ. ಇಂಗ್ಲಿಷ್ ನಲ್ಲಿ ಓದಿರುವುದು. ಇಂಗ್ಲಿಷ್ ನಲ್ಲಿ ಬಹಳ ಚೆನ್ನಾಗಿ ಬ್ರೆಕ್ಟ್ ನನ್ನು ಚೆನ್ನಾಗಿ ಭಾಷಾಂತರ ಮಾಡಿರುವವರು ಕೂಡಾ ಬ್ರೆಕ್ಟ್ ನ ಈ ಆಶಯವನ್ನು ಉಳಿಸಿಕೊಂಡಿದ್ದಾರೆಯೇ ಎಂಬುದು ನನಗೆ ಗೊತ್ತಿಲ್ಲ. ಅವನ ಹೆಚ್ಚಿನ ಆಶಯಗಳು ವೈಚಾರಿಕವಾಗಿದ್ದು ಅದು ಭಾಷಾಂತರದಲ್ಲೂ ನಮಗೆ ಸಿಗುತ್ತದೆ.

ಒಂದು ಪದ್ಯವನ್ನು ಸಾರಾಂಶದಲ್ಲಿ ಹೇಳಲು ಸಾಧ್ಯವಿಲ್ಲ ಎಂದು ನಾವು ತಿಳಿಯುತ್ತೇವೆ. ಆದರೆ ಇಂಗ್ಲಿಷ್ ನಲ್ಲಿ ಒಂದು ಸಾಹಿತ್ಯ ತತ್ವ ಇದೆ. ‘ಸಾರಾಂಶ ಪದ್ಯವಲ್ಲ ನಿಜ. ಆದರೆ

ಸಾರಾಂಶದಲ್ಲಿ ಹೇಳಲು ಅಸಾಧ್ಯವಾದ ಪದ್ಯ ಒಳ್ಳೆ ಪದ್ಯವಲ್ಲ’ ಎಂದು. ಇದನ್ನು ಬ್ರೆಕ್ಟ್ ಸಹ ನಂಬಿದ್ದಿರಬಹುದು. ಅವನು ಕೂಡಾ ಸಾರಾಂಶದಲ್ಲಿ ಹೇಳಲಾರದನ್ನು ಪದ್ಯ ಎಂದು

ಭಾವಿಸಿ ಬರೆದಿಲ್ಲ. ಬೇಂದ್ರೆಗೆ ಅನ್ಯವಾದ ನಿಲುವು ಇದು. ಕವಿತೆಯನ್ನು ಆಲಿಸಿದವನಿಗೆ ಕವಿತೆ ದೊರೆಯಬೇಕು ಎನ್ನುವುದರಲ್ಲೂ ಬ್ರೆಕ್ಟ್ ನಿಗೆ ನಂಬಿಕೆಯಿತ್ತು. ‘ಅರ್ಥವಿಲ್ಲ ಸ್ವಾರ್ಥವಿಲ್ಲ

ಬರಿಯ ಭಾವಗೀತ’ ಎನ್ನುವ ಸಾಲನ್ನು ಬ್ರೆಕ್ಟ್ ಬರೆಯಲಾರ. ಆ ಕಾಲವೂ ಹಾಗೇ ಇತ್ತು. ಅವನು ಈ ‘ಲಯಸ್ಪಂದನ’ ವಿವರಿಸಲು ‘ಜೆಸ್ಟಿಕ್’ ಎಂಬ ಶಬ್ದ ಉಪಯೋಗಿಸಿದ್ದ, ಆ

ಶಬ್ದದ ಅರ್ಥವೇನು ಎಂದರೆ- ಸಾಮಾನ್ಯವಾಗಿ ಒಂದು ಸಾಲನ್ನು ಓದಿದಾಗ ಯಾವ ಭಾವಕ್ಕೆ ಮಹತ್ವ ದೊರೆಯಬೇಕೊ ಆ ಮಹತ್ವ ದೊರೆಯುವಂತೆ ಕೆಲವು ಶಬ್ದಗಳು

ಅಥವಾ ಶಬ್ದ ಸಮುಚ್ಚಯಗಳು ಆ ವಾಕ್ಯ ರಚನೆಯ ಸರಿಯಾದ ಜಾಗದಲ್ಲಿರಬೇಕು. ನಮ್ಮ ಉಚ್ಚಾರಣೆಯಲ್ಲಿ ಆ ಶಬ್ದವನ್ನು ಒತ್ತಿ ಹೇಳಿದಾಗ ಸ್ವಲ್ಪ ಹೆಚ್ಚು ಕಾಲವನ್ನು ಲೆಕ್ಕಕ್ಕಿಟ್ಟಿರುತ್ತೇವೆ.

ವಿವರಣಾತ್ಮಕವಾದದ್ದನ್ನು ಸ್ವಲ್ಪ ಅವಸರದಲ್ಲಿ ಹೇಳುತ್ತೇವೆ. ವಿವರಣಾತ್ಮಕವಾದುದನ್ನು ಶೀಘ್ರವಾಗಿ ಹೇಳಿ ಮನಸಿನಲ್ಲಿ ಹೇಳಬೇಕಾದ್ದನ್ನು ಒತ್ತಿ ಹೇಳಿದಾಗ ನಮ್ಮಲ್ಲಿ ಲಯದ

ಕಲ್ಪನೆಯೇ ಬದಲಾಗುತ್ತದೆ. ನನ್ನಲ್ಲಿ ಎಲ್ಲೋ ಒಂದು ಕಡೆ ಅಂಥ ಬದಲಾವಣೆ ಆಗುವ ಲಯದ ಕಲ್ಪನೆಯನ್ನು ನನ್ನಲ್ಲಿ ಗುರುತಿಸಿಕೊಳ್ಳುವುದಕ್ಕಾಗಿ ಕೆಲವು ಬದಲಾವಣೆಗಳನ್ನು

ಭಾಷಾಂತರದಲ್ಲಿ ಮಾಡಿದ್ದೇನೆ.

ಒಂದು ಸಾಲನ್ನು ಓದುವಾಗ ಅದರ ಅರ್ಥವೇನೆಂದು ಗ್ರಹಿಸಿ ಯಾವ ಶಬ್ದಕ್ಕೆ ಹೆಚ್ಚು ಒತ್ತು ಕೊಡಬೇಕು, ಯಾವ ಶಬ್ದವನ್ನು ಬೇಗ ಓದಿಕೊಳ್ಳಬಹುದು ಅನ್ನುವುದು ಗೊತ್ತಿದ್ದಾಗ; ಅದು ಯಾವ ಹದದಲ್ಲಿ ಎಷ್ಟು ದಾಟಬೇಕು? ಹೇಗೆ ಎಷ್ಟು ಓರೆಯಾಗಿ ಅಥವಾ ನೇರವಾಗಿ ಓದುಗನ ಮನಸ್ಸಿನಲ್ಲಿ ನಾಟುವಂತೆ ದಾಟಬೇಕು ಅನ್ನುವುದೂ ಗೊತ್ತಿದ್ದಾಗ ಪದ್ಯದ ಇಡೀ ಸ್ವರೂಪ ಕೇಳುಗರ ಮನಸ್ಸಿನಲ್ಲಿ ಉಳಿಯುತ್ತದೆ. ನಾನು ಈ ರೀತಿಯ ಕಾವ್ಯವಾಚನದ ಪ್ರಯೋಗಗಳನ್ನು ನೋಡಿದ್ದು ನೀನಾಸಂ ಶಿಬಿರದಲ್ಲಿ. ಶಿಬಿರದ ಉದ್ಘಾಟನೆಗೆ ಅದನ್ನು ಬಳಸಿಕೊಳ್ಳುತ್ತಾರೆ. ಕಾವ್ಯವಾಚನದಲ್ಲಿ ಅದೊಂದು ಅದ್ಭುತವಾದ ನಾಟಕೀಯ ಅನುಭವ. ಕಾವ್ಯ ಹೇಗೆ ವಾಚನಕ್ಕೆ ದೊರೆಯುತ್ತದೆ ಎಂದು ತಿಳಿಯಲು ಉಸಿರಾಟದ ಒಂದಂಶವಾದ ವಾಚಿಕಾ ಎನ್ನುವುದು ಬಹಳ ಮುಖ್ಯ ಎಂದು ನಾವು ಗ್ರಹಿಸಿರಬೇಕು. ಬಾಯಿ ಬಿಚ್ಚಿ ಓದುವಹಾಗೆ ಕಾವ್ಯ ಇರಬೇಕು. The sentence must entirely follow the gest of the person speaking.

ನಾನು ಬ್ರೆಕ್ಟ್ ನನ್ನು ಭಾಷಾಂತರ ಮಾಡುವಾಗ ನನ್ನ ಗೆಳೆಯರಾದ ಶಾ. ಬಾಲುರಾವ್ ಬ್ರೆಕ್ಟ್ ನ ಕವಿತೆಗಳನ್ನು ಅನುವಾದಿಸಿದ್ದಾರೆ ಎಂಬ ವಿಷಯವನ್ನು ನಾನು ಮರೆತೇಬಿಟ್ಟಿದ್ದೆ. ನನ್ನ ಗೆಳತಿ ನನಗೆ ಅದನ್ನು ನೆನಪು ಮಾಡಿದಾಗ ನಾನು ಆ ಪುಸ್ತಕ ತರಿಸಿಕೊಂಡು ನೋಡಿದೆ. ಬಾಲುರಾವ್ ಏನನ್ನು ಅನುವಾದಿಸಬೇಕೆಂದರೂ ಮೂಲಕ್ಕೆ ಹೋಗಿ ಭಾಷೆಯನ್ನು ಕಲಿತು ಬಹಳ ಶ್ರಮ ಪಡುತ್ತಿದ್ದರು. ರಾಮಾನುಜನ್ ಇಂಗ್ಲಿಷ ಗೆ ಭಾಷಾಂತರಿಸಲು ಎಷ್ಟು ಶ್ರಮ ಪಡುತಿದ್ದರೋ ಬಾಲುರಾವ್ ಕನ್ನಡಕ್ಕೆ ಭಾಷಾಂತರಿಸಲು ಅಷ್ಟೇ ಶ್ರಮ ಪಡುತ್ತಿದ್ದುದನ್ನು ನಾನು ಕಂಡಿದ್ದೆ. ನನಗೆ ಅವರು ಬಹಳ ಆತ್ಮೀಯರು ಮತ್ತು ಕವಿತೆಯ ಬಗ್ಗೆ ಮೋಹ ಇದ್ದವರು. ನಮ್ಮೆಲ್ಲರಿಗೂ ಶೇಕ್ಸ್ಪಿಯರ್ ಕನ್ನಡಕ್ಕೆ ಆತ್ಮೀಯನಾಗಿ ಗೊತ್ತಿಲ್ಲದ ಕಾಲದಲ್ಲಿ ಬಾಲುರಾವ್ ಅವರ ‘ಶೇಕ್ಸ್ಪಿಯರ್ನಿಗೆ ನಮಸ್ಕಾರ’ ಎಂಬ ಪುಸ್ತಕ ನಮಗೆ ಶೇಕ್ಸ್ಪಿಯರನ್ನು ಪರಿಚಯ ಮಾಡಿಸಿತು. ದೆಹಲಿಗೆ ಹೋದಾಗ ನಮ್ಮ ಕನ್ನಡದ ಬಹುತೇಕ ಲೇಖಕರು ಅದರಲ್ಲೂ ಬೇಂದ್ರೆ ಮತ್ತು ಅಡಿಗರು ಉಳಿದುಕೊಳ್ಳುತಿದ್ದುದ್ದು ಬಾಲುರಾವ್ ಅವರ ಮನೆಯಲ್ಲಿ. ನನ್ನ ಮಗಳು ವೈದ್ಯೆ ಆಗಿ ಕೆಲಸ ಮಾಡಲು ದೆಹಲಿಗೆ ಹೋದಾಗ ಬಾಲುರಾವ್ ಮನೆಯಲ್ಲೆಅವರ ಮಗಳಂತೆ ಉಳಿದುಕೊಂಡಿದ್ದಳು. ಇಷ್ಟು ಹತ್ತಿರದವರಾದ ಬಾಲುರಾವ್ ಅವರನ್ನು

ಬಹಳ ದಿನಗಳಿಂದ ನಾನು ನೆನಪಿಸಿಕೊಂಡೇ ಇರಲಿಲ್ಲವಲ್ಲ ಎಂದೆನಿಸಿತು. ಬ್ರೆಕ್ಟ್ ನನ್ನು ಅನುವಾದ ಮಾಡುತ್ತಿದ್ದಾಗ, ಅವರು ಈ ಮೊದಲು ಮಾಡಿದ್ದಾರೆ ಎಂದು ತಿಳಿದಾಗ, ಅದನ್ನು ಓದಿದಾಗ ಮತ್ತೆ ಬಾಲುರಾಯರಿಗೆ ನನ್ನ ಋಣವನ್ನು ತೀರಿಸುತ್ತಿದ್ದೇನೆ ಎಂದೇ ಅನ್ನಿಸಿತು.

ಬಾಲುರಾವ್ ಅವರು ಮಾಡಿದ ಕೆಲವು ಪದ್ಯಗಳನ್ನು ಮತ್ತು ಮಾಡದ ಹಲವನ್ನೂ ನಾನು ಅನುವಾದ ಮಾಡಿದ್ದೇನೆ.

ಇದು ನನ್ನಿಂದ ಸಾಧ್ಯವಾದದ್ದು ಅಕ್ಷತಾಳ ಉಮೇದಿನಿಂದ. ಅಷ್ಟೇ ಅಲ್ಲ, ಸ್ವತಃ ಕವಿಯಾದ ಈಕೆ ಅಲ್ಲಿ ಇಲ್ಲಿ ನನ್ನ ಅನುವಾದಗಳನ್ನು ತಿದ್ದುವ ಉತ್ತಮ ಸೂಚನೆಗಳನ್ನು ಕೊಟ್ಟು ನನ್ನನ್ನು ಹೆಚ್ಚಿಸಿದ್ದಾಳೆ. ಮತ್ತು ಈ ಪುಸ್ತಕದ ಪ್ರಕಟಣೆಗೂ ಮುಂದಾಗಿದ್ದಾಳೆ ಕೂಡ. ಈ ಬಗೆಯ ಹೊಸ ಸ್ನೇಹಗಳು ನನಗೆ ಸಾಧ್ಯವೆಂದು ಖುಷಿಯಾಗಿದೆ.

3 ಟಿಪ್ಪಣಿಗಳು (+add yours?)

 1. Trackback: U.R. Ananthamurthy On Brecht « rego’s media page
 2. guru
  ಜೂನ್ 30, 2009 @ 15:06:28

  ಅಬ್ಬಾ! ಬೆತ್ತಲೆ ಜಗತ್ತು!

  ಉತ್ತರ

 3. kaviswara shikaripura
  ಜೂನ್ 29, 2009 @ 17:21:35

  hrudaya-dinda barediddiri… muthsaddithana mygoodide.. bari murthi-poojeyalla… nija anisike…

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: