ಆತ ಬ್ರೆಕ್ಟ್

ಯು. ಆರ್. ಅನಂತಮೂರ್ತಿ

brecht cover copy2

ಬ್ರೆಕ್ಟ್ ನನ್ನು ನಾನು ಅನುವಾದ ಮಾಡಲು ತೊಡಗಿದ್ದು ನನ್ನ ಮೈಯಲ್ಲಿ ಆರೋಗ್ಯ ಕೆಟ್ಟಾಗ. ಈ ಕಾಲದ ಅನೇಕ ದೌರ್ಜನ್ಯಗಳಿಗೆ ಪ್ರತಿರೋಧಿಸುವ ಶಕ್ತಿ ನನ್ನ ಮಾತಿಗೆ ಇಲ್ಲ ಎನಿಸಿದಾಗ.

ಡಾ.ವಿನಾಯಕ ಸೇನ್ ಎಂಬ ಮಕ್ಕಳ ವೈದ್ಯ ಮತ್ತು ದೀನರ ಬಂಧುವನ್ನು ಸರ್ಕಾರ ನಕ್ಸಲೈಟ್ ಎಂಬ ಗುಮಾನಿಯಿಂದ ಎರಡು ವರ್ಷ ಕಾಲ ಜೈಲಲ್ಲಿಟ್ಟಿತ್ತು. ಬರ್ಮಾದಲ್ಲಿ ಚುನಾವಣೆಯಲ್ಲಿ ಗೆದ್ದ ಅಂಗ್ಸಾನ್ ಸೂಕಿಯನ್ನು ಗೃಹಬಂಧನದಲ್ಲಿ ಇರಿಸಿ ಇನ್ನಷ್ಟು ಆಪಾದನೆಗಳನ್ನು ಹೊರೆಸಿ ಅವಳು ಮತ್ತೆ ಚುನಾವಣೆಯಲ್ಲಿ ನಿಲ್ಲದಂತೆ ಮಾಡಲು ಪ್ರಯತ್ನಿಸಲಾಗಿದೆ.

ದುಷ್ಟ ವ್ಯವಸ್ಥೆಯಲ್ಲಿ ಇದು ನಿರೀಕ್ಷಿಸುವಂಥದ್ದೆ, ಆದರೆ ವಿಪರ್ಯಾಸ ಎಂದರೆ ಮಹಾತ್ಮ ಗಾಂಧಿಯನ್ನು ರಾಷ್ಟ್ರಪಿತನೆಂದು ತಿಳಿಯುವ ನಮ್ಮ ಸರಕಾರ ಬರ್ಮಾದ ಬಗ್ಗೆ ಏನನ್ನೂ ಮಾಡಿಲ್ಲ. ಆರ್ಥಿಕವಾಗಿ ನಮಗೆ ಬರ್ಮಾದ ಸಹಾಯ ಬೇಕು. ಆದರೆ ಮಾನವ ಹಕ್ಕುಗಳಿಗಾಗಿ ಏನನ್ನು ಮಾಡಿಲ್ಲ. ಚೀನಾ ಅಂತೂ ಮಾವೋ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಸಂಪೂರ್ಣವಾಗಿ ಬರ್ಮಾದ ಬೆಂಬಲಕ್ಕೆ ನಿಂತಿದೆ. ಅಮೆರಿಕಾವು ಬರ್ಮಾದ ಮಿಲಿಟರಿ ಆಡಳಿತವನ್ನು ಬೆಂಬಲಿಸುತ್ತಿದೆ. ಪಾಕಿಸ್ತಾನದಲ್ಲಿ ಇಸ್ಲಾಂ ಧರ್ಮವನ್ನು ರಾಜಕೀಯ ಕಾರಣಗಳಿಗಾಗಿ ತಿರುಚಿಕೊಂಡು ನರಹತ್ಯೆಗೆ ಹೇಸದ ಆತ್ಮಹತ್ಯೆಗೂ ತಯಾರಾದ ಒಂದು ಪಡೆಯೇ ಸಿದ್ದವಾಗಿದೆ.

ಇದಕ್ಕೆ ವಿರುದ್ದವಾಗಿ ನಮ್ಮಲ್ಲಿ ಇಂದಿರಾಗಾಂಧಿಯವರ ಮೊಮ್ಮಗ, ಸಂಜಯಗಾಂಧಿಯ ಮಗ ವಿವೇಕಾನಂದರಂತೆ ತಲೆಗೆ ಪೇಟಾವನ್ನು ಕಟ್ಟಿ, ಶಾಲನ್ನು ಹೊದ್ದು, ಅವನ ಗುಂಡುಮುಖದಿಂದಾಗಿ ಹಾಗೆಯೇ ಕಾಣುತ್ತಾ, ಕಡಿ-ಕೊಚ್ಚು-ಕೊಲ್ಲು ಮಾತಾಡುತ್ತಾ ಚುನಾವಣೆಯಲ್ಲಿ ಗೆಲ್ಲುತ್ತಾನೆ. ಕರ್ನಾಟಕದಲ್ಲಂತೂ ಫ್ಯಾಸಿಸ್ಟ್ ಧೋರಣೆಯನ್ನು ಬೆಂಬಲಿಸುವ ಕಾಲಂ ಒಂದನ್ನು ಪ್ರತಿವಾರ ಪ್ರಕಟಿಸುವ ಅತ್ಯಧಿಕ ಪ್ರಸಾರದ ಒಂದು ವೃತ್ತಪತ್ರಿಕೆಯೇ ಇದೆ. ತಿರುಪತಿ ತಿಮ್ಮಪ್ಪನ ತಲೆಯ ಮೇಲೆ ಗಣಿ ಸುಲಿಗೆಯ ಹಣದಿಂದ ಮಾಡಿಸಿದ ವಜ್ರದ ಕಿರೀಟವಿದೆ. ಭಾರತದ ಕಮ್ಯುನಿಸ್ಟರು ಕೇರಳದಲ್ಲಿ ವ್ಯಾಪಾರೋದ್ಯಮದ ಅಧಿಪತಿಗಳಾಗಿದ್ದಾರೆ; ಬಂಗಾಳದಲ್ಲಿ ರೈತರ ನೆಲ ಕಸಿದು ನ್ಯಾನೋ ಕಾರು ಮಾಡಲು ಅದನ್ನು ಕೊಟ್ಟು ಪೇಚಿಗೆ ಸಿಲುಕಿದ್ದಾರೆ; ಹಲವು ಲೋಹಿಯಾ ಸೋಶಿಯಲಿಸ್ಟರು ಭಾಜಪದ ಆದರದ ಆಧಾರವಾಗಿದ್ದಾರೆ. ನಕ್ಸಲೈಟರು ಈಗಿರುವ ವ್ಯವಸ್ಥೆಗಿಂತ ಕ್ರೂರವಾದ ಪೊಲೀಸ್ ರಾಜ್ಯ ಕಟ್ಟಲು ಕುತಂತ್ರಿಗಳಾಗಿ ಅಮಾಯಕರನ್ನು ಬಲಿ ತೆಗೆದುಕೊಳ್ಳುತ್ತ ಇದ್ದಾರೆ. ಧ್ಯಾನವನ್ನು ಕಸುಬು ಮಾಡಿಕೊಂಡ ಕೆಲವು ಇಂಗಿಜಷ ಮಾತಾಡಬಲ್ಲ ಗುರುಗಳು ರೈತರ ಭೂಮಿಯನ್ನು ಎನ್ಆರ್ಐ ಭಕ್ತರಿಂದ ಹಣ ಪಡೆಯಲು ಅಗತ್ಯವಾದ ವಿಶ್ರಾಂತಿಧಾಮ ಮಾಡುತ್ತಾ ಇದ್ದಾರೆ. ಇವರಲ್ಲಿ ಒಬ್ಬರು ಶಾಂತಿಗಾಗಿ ಕೊಡುವ ನೊಬೆಲ್ ಬಹುಮಾನದ ಆಕಾಂಕ್ಷಿಗಳಂತೆ. ನಮ್ಮ ಬುದ್ಧಿವಂತರು ‘ಇದೆಲ್ಲ ಯಾವತ್ತೂ ಇದ್ದಿದ್ದೇ ಹೀಗೆ; ಇರೋದೆ ಹೀಗೆ’ ಎಂದುಕೊಂಡು ಆರಾಮಾಗಿ ಸಹಿಸುತ್ತಾರೆ.

ಹೀಗೆಯೇ ಯುರೋಪಿನಲ್ಲಿ ತಮ್ಮ ಮಾತೆಲ್ಲ ಸೋತಿದೆ ಅನ್ನಿಸಿದಾಗ, ಹಾಗೆ ಅನ್ನಿಸಿ, ಸೋತು, ಗೆದ್ದು, ಇಂತಹ ಕೆಟ್ಟ ಕಾಲದಲ್ಲೂ ಗೆದ್ದೆನೆಂದು ತನ್ನ ಜಾಣತನಕ್ಕೇ ಹೇಸಿ ಕೊನೆಗೂ ಜೀವನ ಪ್ರೀತಿಯನ್ನೂ, ಭರವಸೆಯನ್ನೂ ಕಳೆದುಕೊಳ್ಳದ ಬ್ರೆಕ್ಟ್ ನಂತವನು ನನಗೆ ಬಹಳ ಮುಖ್ಯ ಎನಿಸಿತು. ಹಿಟ್ಲರನ ಜರ್ಮನಿಯಲ್ಲಿ ಬದುಕಲಾರದೆ, ಅವನು ಓಡಿಹೋದ ಎಲ್ಲ ದೇಶಗಳು ಫ್ಯಾಸಿಸ್ಟ್ ಆಗಲು ತೊಡಗಿದಾಗ ಕೊನೆಯಲ್ಲಿ ಅಮೆರಿಕಾದಲ್ಲಿ ಆಶ್ರಯ ಪಡೆದು ಆಮೇಲಿನ ಮೆಕಾರ್ತರ ಕಾಲದಲ್ಲಿ ಅಮೆರಿಕಾ ವಿರೋಧಿ ಎಂಬ ಸಂಶಯದಿಂದ ಪೂರ್ಣ ವಿಚಾರಣೆಗೆ ಒಳಗಾಗಿ ಮತ್ತೆ ಪೂರ್ವ ಜರ್ಮನಿಯ ಬರ್ಲಿನ್ ಗೆ ಮರಳಿ ಬಂದವನು ಬ್ರೆಕ್ಟ್.

ಸೋವಿಯತ್ ಕ್ರಾಂತಿಯ ನಂತರ ಏನೋ ಒಂದು ಹೊಸ ಯುಗ ಬರುತ್ತದೆ ಎಂದು ತಿಳಿದಿದ್ದ ನಮ್ಮ ರವೀಂದ್ರನಾಥ ಠಾಗೂರರಂತೆ, ಮಾರ್ಕ್ಸಿಸ್ಟ್ ಆದ ಬ್ರೆಕ್ಟ್ ಕೂಡಾ ಭಾವಿಸಿದ್ದ. ಆದರೆ ಸ್ಟಾಲಿನ್ ನ ಕಾಲದಲ್ಲಿ ತನಗಾಗದವರನ್ನು, ತನ್ನ ಕ್ರೂರ ವಿಚಾರಗಳಿಗೆ ವಿರೋಧವಿಲ್ಲದಂತೆ ಮಾಡಲು ಸ್ಟಾಲಿನ್ ಬಹಳ ಜನ ಅಮಾಯಕರನ್ನು ಕೊಂದ. ಇದರ ವಿರುದ್ಧ ಯಾರೂ ಮಾತಾಡುವಂತಿರಲಿಲ್ಲ. ಪೂರ್ವ ಯುರೋಪಿನ ಯಾವ ರಾಷ್ಟ್ರಗಳೂ ಸ್ಟಾಲಿನ್ನ ಕ್ರೂರತೆಗೆ ವಿರೋಧ ವ್ಯಕ್ತಪಡಿಸಲಿಲ್ಲ. ಬ್ರೆಕ್ಟ್ ಈ ಎಲ್ಲ ವಿದ್ಯಮಾನಗಳನ್ನು ಕಣ್ಣಾರೆ ಕಂಡು ಗ್ರಹಿಸಿದ್ದ. ತಾನು ಬರೆದ ‘ಗೆಲಿಲಿಯೋ’ ನಾಟಕದಲ್ಲಿ ಗೆಲಿಲಿಯೋ ಹೇಗೆ ಒಂದು ಸುಳ್ಳನ್ನು ಹೇಳಿ ತನ್ನನ್ನು ಹೇಗೋ ಉಳಿಸಿಕೊಂಡು ಪಾರಾಗಿ ಸತ್ಯ ಶೋಧನೆಯಲ್ಲಿ ತೊಡಗಿದ ಎನ್ನುವಂತೆಯೇ ಬ್ರೆಕ್ಟ್ ಕೂಡಾ ತನಗೆ ಬೇಕಾದ್ದನ್ನು ಪಡೆದುಕೊಂಡು ಗುಪ್ತವಾಗಿ ಕೆಲವು ಪದ್ಯಗಳನ್ನು ಬರೆದು ಅದನ್ನು ಪ್ರಕಟಿಸದೆ ತನ್ನ ಅಂತರಂಗದ ಸತ್ಯವನ್ನು ಕಾಯ್ದುಕೊಂಡ. ತನ್ನ ಬಗ್ಗೆಯೇ ನಾಚಿಕೆ ಪಟ್ಟ.

More

%d bloggers like this: