
-ಹೇಮಾ ಪವಾರ್
ಕನ್ನಡ ಬ್ಲಾಗರ್ಸ್
ಆತ್ಮಕತೆಗಳ ಬೆನ್ನು ಬಿದ್ದಿದ್ದೇನೆ. ಕಳೆದ ಎರೆಡು ತಿಂಗಳಿಂದ ಒಂದಾದ ಮೇಲೊಂದು ಓದುತ್ತಲೇ, ಇನ್ನು ಹೆಚ್ಚು ಹೆಚ್ಚು ಆತ್ಮಕತೆಗಳನ್ನೇ ಓದಬೇಕೆನಿಸಿದೆ. ಒಬ್ಬ
ವ್ಯಕ್ತಿಯು ಪ್ರಾಮಾಣಿಕವಾಗಿ ತನ್ನ ಬಗ್ಗೆ ಎಲ್ಲವನ್ನು ಬರೆದುಕೊಳ್ಳಬಲ್ಲನೆ? ನನ್ನನ್ನು ಕಾಡಿದ ಪ್ರಶ್ನೆ ಇದು. ಆತ್ಮಕತೆ ಬರೆಯುತ್ತಿರುವವರಿಗೆ ತಮ್ಮ ಬಗ್ಗೆ
ಎಲ್ಲವನ್ನೂ ಹೇಳಿಕೊಳ್ಳಲೇಬೇಕೆಂಬ ಉಮೇದು ಉಂಟಾಗುತ್ತದೆ ಹಾಗು ಹೇಳದೆ ಹೋದರೆ ಅದೊಂದು ತರಹದ ಚಡಪಡಿಕೆ ಮತ್ತು ಕೃತಿ ಅಪೂರ್ಣವೆಂಬ ಭಾವ ಮತ್ತೆ ಮತ್ತೆ ಕಾಡುತ್ತದೆ ಎಂಬುದು ಆತ್ಮಕತೆಗಳ ಓದಿನಲ್ಲಿ ನಾನು ಕಂಡುಕೊಂಡ ಸತ್ಯ. ಒಬ್ಬ ವ್ಯಕ್ತಿಯ ಜೀವನದ ಘಟನೆಗಳು, ಅದಕ್ಕೆ ಆತನು ಸ್ಪಂದಿಸಿದ ರೀತಿ, ಆ ಕ್ಷಣದಲ್ಲಿ ಆತನಿಗೆ ಕಾಡಿದ ಯೋಚನೆಗಳು ಎಲ್ಲವನ್ನು ಪ್ರಾಮಾಣಿಕವಾಗಿ ಬರಹದಲ್ಲಿ ಮೂಡಿಸುವುದು ಅಷ್ಟು ಸುಲಭವಲ್ಲ ಅದಕ್ಕೂ ಕಲೆಗಾರಿಕೆ ಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಮುಚ್ಚುಮರೆಯಿಲ್ಲದೆ ಎಲ್ಲವನ್ನು
ಬಿಚ್ಚಿಡುವ ಮನಸಿರಬೇಕು. ಸಾರ್ವಜನಿಕವಾಗಿ ಬೆತ್ತಲಾಗುವ ಧೈರ್ಯವಿರಬೇಕು. ಬಹುಶಃ ಇದರಿಂದಾಗಿಯೇ ನನಗೆ ಆತ್ಮಕತೆಗಳು ಹೆಚ್ಚು ಹಿಡಿಸುತ್ತಿವೆ. ಈ ಸರಣಿಯಲ್ಲಿ ನಾನು ಓದಿದ ಆತ್ಮಕತೆಗಳ ಬಗ್ಗೆ ಬರೆಯಬೇಕೆಂದಿದ್ದೇನೆ. ಎಂದಿನಂತೆ ಓದುವ ಕಷ್ಟ ನಿಮ್ಮದು!
ಲಂಕೇಶರ ’ಅಕ್ಕ’ ಓದುವುದಕ್ಕೆ ತುಂಬ ಹಿಂದೆ ದೇವೀರಿ ಸಿನೆಮಾ ನೋಡಿದ್ದೆ. ಅದಾಗ ಅಷ್ಟು ಹಿಡಿಸಿರಲಿಲ್ಲ. ’ಅಕ್ಕ’ ಕಾದಂಬರಿ ಓದುವಾಗ ಅದರಲ್ಲಿನ ಕ್ಯಾತನ ಪಾತ್ರ ತುಂಬಾ
ಸೆಳೆದಿತ್ತು. ಲೇಖಕನು ಅದ್ಯಾವ ಮನಸ್ಥಿತಿಯಲ್ಲಿ ಈ ಪಾತ್ರ ಸೃಷ್ಟಿಸಿರಬಹುದೆಂದು ತಲೆಕೆಡಿಸಿಕೊಂಡು ಸುಮ್ಮನಾಗಿದ್ದೆ. ಲಂಕೇಶರು ನನಗೆ ಯಾವತ್ತು ಅತಿ ದೊಡ್ಡ
ವಿಚಿತ್ರವೆನಿಸಿದ್ದಾರೆ. ಅವರ ಮುಸ್ಸಂಜೆಯ ಕಥಾಪ್ರಸಂಗದ ಪಾತ್ರಗಳು ನನ್ನನ್ನು ಎಡಬಿಡದೇ ಕಾಡಿವೆ. ಏನನ್ನು ಸಮರ್ಥಿಸದ, ತೀರ್ಮಾನಗಳಿಲ್ಲದ, ಪ್ರೀತಿ-ಪ್ರೇಮ ಮುಂತಾದ
ಸಿನಿಕ ಭಾವನೆಗಳಿಗೆ ಒಂದು ಚೌಕಟ್ಟನ್ನು ಹಾಕಿ ಎಲ್ಲವೂ ವಾಸ್ತವಿಕವಾಗಿ ಕಾಮಕ್ಕೆ ಸಂಬಂಧಿಸಿರುವಂತದ್ದಾಗಿರುತ್ತವೆ ಅದನ್ನು ಮೀರಿದ್ದು ಬೇರೇನು ಇಲ್ಲವೆಂಬಂತೆ
ನಿರೂಪಿಸಿರುವ ಕಾದಂಬರಿ ಮುಸ್ಸಂಜೆಯ ಕಥಾಪ್ರಸಂಗ. ಇಂತಹ ಭಾವನೆಯ ಅರ್ಥವಿಷ್ಟೇ, ಇದಕ್ಕೆ ಮೀರಿದ್ದೆಲ್ಲ ನಮ್ಮ ಕಲ್ಪನೆಯಲ್ಲಿ ಕಟ್ಟಿಕೊಳ್ಳುವ ರೆಕ್ಕೆಪುಕ್ಕ,
ಆಂತರ್ಯದಲ್ಲಿ ಅದರ ಉದ್ದೇಶವು ತೋರಿಕೆಗೆ ಕಾಣುವಷ್ಟು ಆಳವಾಗಿರುವುದಿಲ್ಲ ಎಂಬ ಗಂಭೀರ ವಿಷಯಗಳನ್ನು ಅವರ ಪಾತ್ರಗಳ ಮೂಲಕ ಬಿಂಬಿಸಿದ್ದಾರೆ. ಇನ್ನು ನೀಲು ಕವಿತೆಗಳ ಬಗ್ಗೆ ಹೇಳುವ ಹಾಗೇ ಇಲ್ಲ. ಪ್ರತೀ ಕವಿತೆಯೂ ತನ್ನ ಶಾರ್ಪ್ ನೆಸ್ ನಿಂದಲೇ ಮನಸೂರೆಗೊಂಡುಬಿಡುತ್ತವೆ. ಕಾದಂಬರಿ, ಕವಿತೆ ಎರಡರಲ್ಲು ಇಣುಕುವ ಗತ್ತಿನ ಅವರ
ಬರವಣಿಗೆಯ ಶೈಲಿ ಇಷ್ಟವಾಯ್ತು. ಹೀಗೆ ಅವರ ಬರಹಗಳನ್ನು ಓದಿ ಬೆರಗಾಗುತ್ತಿದ್ದಾಗಲೇ ನನ್ನ ಕೈಗೆ ಸಿಕ್ಕಿದ್ದು ’ಹುಳಿಮಾವಿನ ಮರ’. ಇದು ಲಂಕೇಶರ ಆತ್ಮ ಕಥನ. ಹೆಸರೇ
ವಿಶಿಷ್ಟವಾಗಿದೆ. ಅವರ ಚಿಕ್ಕಪ್ಪನ ಗದ್ದೆಯಲ್ಲಿನ ಮಾವಿನ ಮರದ ಬಗ್ಗೆ ಚಿಕ್ಕಂದಿನಿಂದ ಆಕರ್ಷಿತನಾಗಿದ್ದರಿಂದ ಆ ಹೆಸರಿಟ್ಟೆ ಎಂದು ಮುನ್ನುಡಿಯಲ್ಲಿ ಬರೆಯುತ್ತಾರೆ ಮತ್ತು
ಪುಸ್ತಕವನ್ನು ’ವಾಟೆ’, ’ಸಸಿ’ , ’ಗಿಡ’, ’ಮರ’ ಎಂದು ವಿಂಗಡಿಸುತ್ತಾರೆ.
More
Like this:
Like ಲೋಡ್ ಆಗುತ್ತಿದೆ...
ಇತ್ತೀಚಿನ ಟಿಪ್ಪಣಿಗಳು