-ಜಿ ಎನ್ ಮೋಹನ್
ಬಿ ಎಸ್ ವೆಂಕಟಲಕ್ಷ್ಮಿ ಆರ್ಥಾತ್ ‘ಚರ್ಚೆಗೊಂದು ಚಾವಡಿ’ ಇಲ್ಲ ಎಂಬ ಸುದ್ದಿ ಜಯಂತ್ ಕಾಯ್ಕಿಣಿ ಅವರು ನನ್ನ ಮೊಬೈಲ್ ಬುಟ್ಟಿಗೆ ಹಾಕಿದಾಗ ಯಾಕೋ ಒಂದು ಕ್ಷಣ ಮನಸ್ಸು ಕದಡಿ ಹೋಯಿತು. ಒಂದೇ ಒಂದು ಬಾರಿ ಮುಖಾಮುಖಿಯಾಗಿದ್ದ, ಇನ್ನುಳಿದಂತೆಲ್ಲಾ ಅವರನ್ನು ಚಾವಡಿಯ ಮೂಲಕವೇ ಕಂಡುಕೊಂಡಿದ್ದ ನನಗೆ ಅವರೊಂದು ಕುತೂಹಲವಾಗಿದ್ದರು.
ವಾರ್ತಾ ಇಲಾಖೆಯಲ್ಲಿದ್ದು ಅಲ್ಲಿ ಏನೋ ಕಿರುಕುಳದಿಂದಾಗಿ ಬೇಸತ್ತು ಹೊರಬಂದರು ಎಂದು ನಾನು ಲೇಖಕಿಯರ ಸಂಘದ ‘ಲೇಖ – ಲೋಕ’ ಪುಸ್ತಕದಲ್ಲಿ ಓದಿದ ನೆನಪು. ಆದರೆ ನನಗೆ ಅವರು ತುಂಬಾ ತುಂಬಾ ಎನ್ನುವಂತೆ ಗೊತ್ತಾದದ್ದು ಮಯೂರದಲ್ಲಿ ಅವರು ‘ಪತ್ನಿಯರು ಕಂಡಂತೆ ಪ್ರಸಿದ್ಧರು’ ಅಂಕಣ ಬರೆಯಲು ಆರಂಭಿಸಿದಾಗ. ಪ್ರಸಿದ್ಧರ ಪತ್ನಿಯರ ಮನೆ ಮಾತ್ರ ಅಲ್ಲ ಮನದೊಳಗೆ ಹೋಗುವ ಪ್ರಯತ್ನವಾಗಿತ್ತು ಅದು. ಅವರು ಬರೆದದ್ದು ಮನೆಯೊಳಗೆ ಹೊಕ್ಕಿ ತೆಗೆದದ್ದು ಮಾತ್ರ.ಆದರೆ ನನಗೆ ಯಾಕೋ ಅವರು ಪತ್ನಿಯರ ಮನದೊಳಗೆ ಹೊಕ್ಕು ತಿಳಿದದ್ದನ್ನು ಬರೆಯದೇ ತಮ್ಮೊಳಗೇ ಇಟ್ಟುಕೊಂಡರು ಎನಿಸುತ್ತಿತ್ತು.
ಸು ರಂ ಎಕ್ಕುಂಡಿ ಗುಂಗಿನಲ್ಲಿದ್ದ ದಿನಗಳು ಅವು. ಎಕ್ಕುಂಡಿಯವರ ಕುಟುಂಬ ಎಷ್ಟೇ ಪರಿಚಿತವಾದರೂ ಅವರ ಕುಟುಂಬದ ಏನೂ ಗೊತ್ತಿಲ್ಲದ ದಿನಗಳು. ಆಗಲೇ ವೆಂಕಟಲಕ್ಷ್ಮಿ ಅವರು ಪತ್ನಿ ಇಂದಿರಾ ಅವರನ್ನು ಸಂದರ್ಶಿಸಿದ್ದರು. ನಾನು ಮಂಗಳೂರಿನಲ್ಲಿ ಕೂತು ‘ಎಕ್ಕುಂಡಿ ನಮನ’ ಎಡಿಟ್ ಮಾಡುವ ಸಂದರ್ಭದಲ್ಲಿ ಅವರ ಲೇಖನ ಬಳಸಿಕೊಳ್ಳಲು ಪತ್ರ ಬರೆದೆ. ಆಗಲೇ ನನಗೆ ಅವರ ಆತ್ಮೀಯತೆ ಗೊತ್ತಾದದ್ದು.
ಅವರು ಇದ್ದಕ್ಕಿದ್ದಂತೆ ‘ಚರ್ಚೆಗೊಂದು ಚಾವಡಿ’ ಆರಂಭಿಸಿದರು. ಅದು ಅವರು ತಮ್ಮ ಸಾಮಾಜಿಕ ಒಡನಾಟಕ್ಕೆಂದು ರೂಪಿಸಿಕೊಂಡ ಪುಟ್ಟ ಕಿಟಕಿಯಾಗಿತ್ತು. ಕೇವಲ ನಾಲ್ಕು ಪುಟಗಳಿಂದ ಆರಂಭವಾಗಿ ಆರೆಂಟು ಪುಟದವರೆಗೆ ಬೆಳೆದ ಈ ಚಾವಡಿ ಬೆರಗಾಗಿಸಿತ್ತು. ಅದು ಯಾವುದೇ ಸಾಹಿತ್ಯ ಪತ್ರಿಕೆಗೂ ಕಡಿಮೆ ಇರಲಿಲ್ಲ. ನಿಯಮಿತವಾಗಿ ಪತ್ರಿಕೆ ತರುತ್ತಿದ್ದ ಅವರು ಆ ಪುಟ್ಟ ಕ್ಯಾನ್ವಾಸ್ ನಲ್ಲಿ ತುಂಬಿಸಿಕೊಟ್ಟ ಸಂಗತಿಗಳು ಎಷ್ಟೆಲ್ಲಾ ಮಂದಿಯನ್ನು ತೀವ್ರವಾಗಿ ಆಕರ್ಷಿಸಿತ್ತು.
ಎಕ್ಕುಂಡಿ ನಮನದ ಬಗ್ಗೆ ಬರೆದರು. ಆಮೇಲೆ ಗುಲ್ಬರ್ಗಾದ ನನ್ನ ಗೆಳೆಯ ಪ್ರಭಾಕರ ಜೋಶಿಯ ಕವಿತಾ ಸಂಕಲನಕ್ಕೆ ಬರೆದ ಮುನ್ನುಡಿಯನ್ನು ಪ್ರಕಟಿಸಿದರು. ಅದುವರೆಗೂ ಎಲ್ಲೂ ಕಂಡಿಲ್ಲದ ಒಂದು ಹಿರಿಜೀವ ಹೀಗೆ ಪರೋಕ್ಷವಾಗಿ ನನಗೆ ಎಷ್ಟೆಲ್ಲಾ ಕಾನ್ಫಿಡೆನ್ಸ್ ತುಂಬಿತ್ತು.
ಮತ್ತೆ ಹೈದರಾಬಾದ್ ಗೆ ಹೋದೆ. ಮತ್ತೆ ಸಂಪರ್ಕ ಬಂತು. ನನ್ನ ಕೇಳು ಪುಸ್ಸ್ತಕ ಪ್ರಯೋಗ ಆಗತಾನೆ ಮುಗಿದಿತ್ತು. ಅವರಿಗೆ ಕಳಿಸಿಕೊಟ್ಟೆ. ಸಾಕಷ್ಟು ತಕರಾರು ತೆಗೆದು ಪತ್ರ ಬರೆದರು. ನಾನು ಒಂದು ಪ್ರಯೋಗ ನಡೆಸುವಾಗ ಆಗುವ ಸಮಸ್ಯೆಗಳನ್ನು ವಿವರಿಸಿ ಬರೆದೆ. ಅವರೂ ಒಪ್ಪಿಕೊಂಡರು.
ಹೀಗೆಲ್ಲಾ ಆಗಿ ಈಗ ಬೆಂಗಳೂರಿಗೆ ಬಂದು ‘ಚಾವಡಿ’ ಗೆ ಹುಡುಕಾಡುತ್ತಿರುವಾಗಲೇ ಕಾಯ್ಕಿಣಿ ಈ ಸುದ್ದಿ ಕೊಟ್ಟಿದ್ದಾರೆ. ನಾನೊಬ್ಬನೇ ಅಲ್ಲ ಎಷ್ಟೊಂದು ಮಂದಿ ತಮ್ಮ ‘ಚಾವಡಿ’ ಕಳೆದುಕೊಂಡಿದ್ದಾರೆ.
ಇತ್ತೀಚಿನ ಟಿಪ್ಪಣಿಗಳು