-ವಲ್ಲೀಶ ಶಾಸ್ತ್ರಿ
‘ದಟ್ಸ್ ಕನ್ನಡ’ ದಿಂದ
ಚಿತ್ರಗಳು: ಕೃಷ್ಣಮೂರ್ತಿ (ಡಲ್ಲಾಸ್)


ಅಮೆರಿಕ ಪ್ರವಾಸದ ವಿವರಗಳು ಇಂತಿವೆ
ನಾಟಕ: ನೀ ನಾನಾದ್ರೆ ನಾ ನೀನೇನಾ. ತಂಡ: ಸಂಕೇತ್.
ಪ್ರವಾಸದಲ್ಲಿ: ಸೂರಿ, ಸಿಹಿಕಹಿ ಚಂದ್ರು, ಜಹಾಂಗೀರ್, ಶ್ರೀನಾಥ್ ವಸಿಷ್ಠ, ಕಲ್ಪನಾ, ಸಾರಿಕ.
ಸುಮಾರು ೧೨ ಊರುಗಳಲ್ಲಿ ಪ್ರದರ್ಶನಗಳಾದವು.
ಇದಕ್ಕೆ ನನ್ನ ಕನಸೆನ್ನಬೇಕೋ, ಪರಭಾಷೆಗಳ ನಾಟಕಗಳನ್ನು ನೋಡಿ ಅಸೂಯೆಯೋ ಒಟ್ಟಿನಲ್ಲಿ ಬೆಂಗಳೂರಿನಿಂದ ಒಂದು ತಂಡವನ್ನು ಕರೆಸಿ ಕನ್ನಡ ನಾಟಕವನ್ನು ಅಮೆರಿಕೆಯ ಬೇರೆ ಬೇರೆ ಸ್ಥಳಗಳಲ್ಲಿ ಆಡಿಸಲೇಬೇಕೆಂಬ ಹುಚ್ಚು ನಾಲ್ಕು ವರ್ಷಗಳ ಹಿಂದೆಯೇ ಹುಟ್ಟಿತು. ಬಾಲ್ಟಿಮೋರ್ ಅಕ್ಕ ಸಮ್ಮೇಳನದಲ್ಲಿ ಮೊದಲ ಪ್ರಯತ್ನ. ಬೆನಕ ತಂಡವನ್ನು ಕರೆಸಿ ನಾಟಕ ಆಡಿಸಬೇಕೆಂದು ಕಷ್ಟಪಟ್ಟರೂ ಇನ್ನೇನು ನನ್ನ ಕಾರ್ಯ ಫಲಿಸಿತು ಎನ್ನುವುದರಲ್ಲಿ ವಿಸಾ ತೊಂದರೆಯಿಂದ ನಿಂತು ಹೋಯಿತು. ಬಹಳಷ್ಟು ನಿರೀಕ್ಷೆಯಿಟ್ಟಿದ್ದ ಅಮೆರಿಕನ್ನಡ ನಾಟಕ ಪ್ರಿಯರಿಗಂತೂ ಬಹಳ ಬೇಸರವಾಯಿತು. ನಂತರ ಮುಂದಿನ ಚಿಕಾಗೋ ಅಕ್ಕ ಸಮ್ಮೇಳನದಲ್ಲಿ ಪೂರ್ಣ ತಂಡವನ್ನು ತರಿಸುವ ಬದಲು ಬೆನಕ ತಂಡದ ನಾಲ್ಕು ಕಲಾವಿದರ ತಂಡವನ್ನು ತರಿಸಿ ಇನ್ನು ಮಿಕ್ಕವರನ್ನು ಅಮೆರಿಕೆಯಲ್ಲೇ ಹುಡುಕಿ ಜೋಕುಮಾರಸ್ವಾಮಿ ನಾಟಕವನ್ನು ಪ್ರದರ್ಶಿಸಿ, ನಾಗಾಭರಣ ನೇತೃತ್ವದ ನಾಲ್ಕು ಜನರ ತಂಡ ಅಮೆರಿಕೆಯ ನಾನಾ ಭಾಗಗಳಲ್ಲಿ ನಾಗಾಭರಣ ಏಕವ್ಯಕ್ತಿ ಪ್ರಯೋಗವಾದ ಆಹತ ಹಾಗೂ ಹಾಸ್ಯ ಪ್ರಹಸನ ಹೆಲ್ಲೊ ಪ್ರದರ್ಶಿತಗೊಂಡವು.
ಇಷ್ಟಾದರೂ ನನ್ನ ಕನಸು ಪೂರ್ಣ ನನಸಾದಂತಾಗಲಿಲ್ಲ. ಒಂದು ಪೂರ್ಣ ತಂಡವನ್ನು ಕರೆಸಲೇಬೇಕೆಂದು ತಲೆಯಲ್ಲಿ ಕೊರೆಯುತ್ತಿತ್ತು. ನನ್ನ ರಂಗ ಸ್ನೇಹಿತರುಗಳಾದ ಸಂಜಯ್ ರಾವ್, ರವಿ ಹರಪನಹಳ್ಳಿ, ಪ್ರಸನ್ನ, ಜಯಂತ್ ಹೀಗೆ ಹಲವಾರು ಸ್ನೇಹಿತರುಗಳೊಡನೆ ನನ್ನ ಆಸೆಯನ್ನು ಹಂಚಿಕೊಳ್ಳುತ್ತಿದ್ದೆ. ಅವರೆಲ್ಲರದ್ದೂ ಅದೇ ಕನ್ನಡದಲ್ಲಿ ಒಂದು ನಾಟಕ ತಂಡವನ್ನು ಕರೆಸಬೇಕು ಅಂತ. ಅಂತೂ ಕಡೆಗೆ ಈ ಕನಸು ನನಸಾಗಲು ಚಾಲನೆ ಸಿಕ್ಕಿದ್ದು 2007ರಲ್ಲಿ ಬೇಸಿಗೆ ರಜಕ್ಕೆ ಬೆಂಗಳೂರಿಗೆ ಹೋಗಿದ್ದಾಗ. ಒಂದು ದಿವಸ ಕಲ್ಪನಾ ನಾಗಾನಾಥ್ (ಕಲ್ಪನ ಮತ್ತು ನಾನೂ ಬೆನಕ ತಂಡದಲ್ಲಿ ಒಟ್ಟಿಗೇ ನಾಟಕಮಾಡುತ್ತಿದ್ದೆವು) ಒಂದು ನಾಟಕಕ್ಕೆ ಕರೆದಳು. ತುಂಬಾ ಚೆನ್ನಾಗಿದೆ. ನಾನೂ ನಾಟಕದಲ್ಲಿ ಮಾಡ್ತಾ ಇದ್ದೀನಿ. ಬನ್ನಿ ಎಂದಳು. ಹೆಸರೂ ಗೊತ್ತಿರಲಿಲ್ಲ. ಸುಮ್ಮನೆ ಹೋದೆ. ಅವತ್ತು ನನ್ನ ಹೆಂಡ್ತಿ ಮಗಳು ವಾಪಸ್ ಅಮೆರಿಕೆಗೆ ಹೋಗ್ತಾ ಇದ್ರು. ನಾನು ಏರ್ಪೋರ್ಟ್ಗೆ ಹೋಗಬೇಕಿತ್ತು. ಅದನ್ನೂ ತಪ್ಪಿಸ್ಕೊಂಡು ನಾಟಕ ನೋಡ್ಬೇಕು ಅಂತ ಹೇಳಿ ಮನೆಯಿಂದಲೇ ಬೈಬೈ ಹೇಳಿ, ಏನು ನಾಟಕದ ಹುಚ್ಚೋ ನಿಮಗೆ.. ಅಂತೆಲ್ಲಾ ಬೈಸ್ಕೊಂಡು ಅಂತೂ ನಾಟಕಕ್ಕೆ ಹೋದೆ.
ರಂಗಶಂಕರ ರಂಗಮಂದಿರದ ಬಗ್ಗೆ ಗೊತ್ತೇ ಇದೆಯಲ್ಲ. ರಂಗ ಶಿಸ್ತು ಅಂದರೆ ಅದು. 7 ಗಂಟೆಗೆ ನಾಟಕ ಪ್ರಾರಂಭ ಅಂದ್ರೆ, ದ್ವಾರವೂ ಬಂದ್. ಒಳಗಡೆ ಹೋದರೆ ಇನ್ನೊಂದು ಲೋಕಕ್ಕೇ ಕರ್ಕೊಂಡು ಹೋಗುತ್ತೆ. ಇದಕ್ಕಿಂತ ಮುಂಚೆ ಅಲ್ಲಿ ನಾಟಕಗಳನ್ನು ನೋಡಿದ್ದೆ. ಆದರೂ ಈ ನಾಟಕ ಬಹಳ ಹೆಸರು ಮಾಡಿತ್ತು ಆಗಲೇ. ಅದಕ್ಕೇ ಕುತೂಹಲ. ನಾಟಕ ನೀನಾದರೆ ನಾನೇನೇನಾ. ಹೆಸರೇ ಅಷ್ಟು ಕಲಸು ಮೇಲೋಗ್ರ ಇದ್ದ ಹಾಗೆ ಇದೆಯಲ್ಲ. ಇನ್ನು ನಾಟಕ ಎಷ್ಟು ಗೋಜಲು ಇರಬಹುದು ಅಂದುಕೊಂಡೆ ನಾಟಕ ನೋಡಲು ಕುಳಿತೆ. ಯಾರೋ ಒಬ್ಬ ಕಲಾವಿದೆ ಬರಲು ತಡ ಅಂತ ನಾಟಕ ಸ್ವಲ್ಪ ತಡವಾಗೇ ಶುರುವಾಯಿತು. ನಾಟಕದುದ್ದಕ್ಕೂ ಎಷ್ಟು ನಕ್ಕಿದ್ದೀನಿ ಅಂದ್ರೆ ಹೇಳ್ತೀರದು. ಪಾಪ ನನ್ನ ಹೆಂಡ್ತಿ, ಮಗಳು ಮಿಸ್ ಮಾಡ್ಕೊಂಡ್ರಲ್ಲ ಅಂತ ಅಂದ್ಕೊಡೆ. ನಾಟಕ ಮುಗಿದ ಮೇಲೆ ಹೊರಗೆ ಕಾಯ್ಕೊಂಡು ಕಲ್ಪನ, ಶ್ರೀನಿವಾಸ ಪ್ರಭು ಮತ್ತು ಸೂರಿ (ನಾಟಕದ ನಿರ್ದೇಶಕರು) ಅವರನ್ನು ಭೇಟಿ ಮಾಡಿ ಶಭಾಶ್ಗಿರಿ ಹೇಳಿ ಮನೆಗೆ ಹೊರಡುವ ಮುನ್ನ, ಸೂಕ್ಷ್ಮವಾಗಿ ಸೂರಿ ಬಳಿ ಈ ನಾಟಕವನ್ನು ಅಮೆರಿಕೆಗೆ ತರುವ ಯೋಚನೆಯನ್ನೇಕೆ ಮಾಡಬಾರದು ಎಂದೆ? ಅಲ್ಲಿಂದ ಪ್ರಾರಂಭವಾದ ಈ ರಂಗಯಾತ್ರೆಯ ಯೋಜನೆ ಕಾರ್ಯರೂಪಕ್ಕೆ ತರಲು ಒಂದು ವರ್ಷಕ್ಕೂ ಹೆಚ್ಚು ಕಾಲ ಹಿಡಿಯಿತು.
More
Like this:
Like ಲೋಡ್ ಆಗುತ್ತಿದೆ...
ಇತ್ತೀಚಿನ ಟಿಪ್ಪಣಿಗಳು