-ಪುರುಷೋತ್ತಮ ಬಿಳಿಮಲೆ
ಪುತ್ತೂರಿನಿಂದ ಬೆಳ್ಳಾರೆ ಅಥವಾ ಕಾಣಿಯೂರು ಮಾರ್ಗವಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುವ ಮಾರ್ಗದಲ್ಲಿ ಪಂಜ ಹೆಸರಿನ ಪುಟ್ಟ ಪೇಟೆಯೊಂದು ಸಿಗುತ್ತದೆ. ಈ ಪೇಟೆಯಲ್ಲಿ ಇಳಿದು ಕಾಲ್ನಡಿಗೆಯಲ್ಲಿ ಎಂಟು ಕಿ.ಮೀ ನಡೆದರೆ ಬಿಳಿಮಲೆ ಎಂಬ ಹೆಸರಿನ ಹಳ್ಳಿ ದೊರೆಯುತ್ತದೆ. ಪಶ್ಚಿಮಘಟ್ಟದ ಭಾಗವಾದ ಬಂಟಮಲೆಯ ದಟ್ಟ ಹಸಿರಿನ ನಡುವೆ ವಾಸಿಸುವ ಬಿಳಿಮಲೆಯ ನಾಲ್ಕಾರು ಕುಟುಂಬಗಳಿಗೆ ಹೊರಲೋಕದ ಸುದ್ದಿ ಕೊಡುತ್ತಿದ್ದವನೆಂದರೆ ಒಬ್ಬ ಮುಸ್ಲಿಮ್ ವ್ಯಾಪಾರಿ ಅಥವಾ ಬ್ಯಾರಿ. ಆತನ ನಿಜ ಹೆಸರೇನೆಂದು ನನಗೆ ಇಂದಿಗೂ ತಿಳಿಯದು. ಬಹುಶಃ ಮೊಯಿದು ಎಂದೇನೋ ಇರಬೇಕು. ಆದರೆ ತಲೆಯಲ್ಲಿ ಒಂದೂ ಕೂದಲಿಲ್ಲದ ಆತನನ್ನು ನಾವೆಲ್ಲ ಕುಟ್ಟ ಬ್ಯಾರಿ ಎಂದು ಕರೆಯುತ್ತಿದ್ದೆವು. ವಾರಕ್ಕೆ ಮೂರು ಬಾರಿಯಾದರೂ ಆತ ದೂರದ ಪಂಜದಿಂದ ಬಿಳಿಮಲೆಗೆ ಕಾಲ್ನಡಿಗೆಯಲ್ಲಿ ಬರುತ್ತಿದ್ದ. ಹರುಕು ಮುರುಕು ಬ್ಯಾರಿ ಭಾಷೆಯಲ್ಲಿ ತುಳು ಸೇರಿಸಿ ತಂದೆಯವರೊಡನೆ ಮಾತಾಡುತ್ತಾ ಆತ ಮನೆಯೊಳಕ್ಕೆ ಬರುತ್ತಿದ್ದಂತೆ ನನ್ನ ಅಮ್ಮ ಆತನಿಗೆ ಕುಡಿಯಲು ನೀರು ಮತ್ತು ಬಾಯಿಗೆ ಹಾಕಿಕೊಳ್ಳಲು ಒಂದು ತುಂಡು ಬೆಲ್ಲ ಕೊಡುತ್ತಿದ್ದರು. “ಈ ಸುಟ್ಟ ಕುಟ್ಟ ಬ್ಯಾರಿ ಬಂದರೆ ಬೆಲ್ಲ ಖರ್ಚು” ಎಂದು ಅಮ್ಮ ಗೊಣಗುತ್ತಿದ್ದರೂ, ಬೆಲ್ಲ ಕೊಡದೆ ಆತನನ್ನು ಹಿಂದೆ ಕಳಿಸುತ್ತಿರಲಿಲ್ಲ.
ಕುಟ್ಟ ಬ್ಯಾರಿ ನೆಲದಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಅವನ ಹತ್ತಿರವೇ ಕುಳಿತುಕೊಳ್ಳುತ್ತಿದ್ದ ತಂದೆಯವರು ಕುಟ್ಟ ಬ್ಯಾರಿಯ ಕಿವಿಯಿಂದ ಸಾಧು ಬೀಡಿಯೊಂದನ್ನು ತೆಗೆದು ನನ್ನ ಕೈ ನೀಡಿ, ಅದಕ್ಕೆ ಬೆಂಕಿ ತಾಗಿಸಿ ಬರಲು ಆಜ್ಞಾಪಿಸುತ್ತಿದ್ದರು. ದಪ್ಪನೆಯ ಕುಳ್ಳಗಿನ ಬೀಡಿಯೊಂದು ಕೈಗೆ ಬರುತ್ತಿದ್ದಂತೆ ಛಂಗನೆ ಅಡಿಗೆ ಮನೆಗೆ ನೆಗೆಯುತ್ತಿದ್ದ ನಾನು, ಬೀಡಿಗೆ ಬೆಂಕಿಯೇರಿಸಿ, ಫಕ ಫಕನೆ ಒಂದೆರಡು ದಮ್ಮು ಎಳೆದು, ಬೀಡಿ ತುಂಡನ್ನು ತಂದೆಯ ಕೈಯಲ್ಲಿರಿಸಿ ಅವರಿಬ್ಬರ ಸಂಭಾಷಣೆಗೆ ಕಿವಿಗೊಡುತ್ತಿದ್ದೆ. ೭೦ರ ದಶಕದಲ್ಲಿ ನಡೆಯುತ್ತಿದ್ದ ಅವರ ಸಂಭಾಷಣೆಯಲ್ಲಿ ಅಡಿಕೆಧಾರಣೆ, ಪಂಜದಲ್ಲಿ ಹಾದು ಹೋಗುವ ಬಸ್ಸುಗಳು, ಊರಿನ ಜಾತ್ರೆ, ದೇಶದ ಭವಿಷ್ಯವೆಲ್ಲ ಸರಾಗವಾಗಿ ಹಾದು ಹೋಗುತ್ತಿದ್ದುವು. ನಾನು ರೋಮಾಂಚಿತನಾಗಿ ಕತೆ ಕೇಳುತ್ತಿದ್ದೆ. ಆಗಿನ ಕಾಲದಲ್ಲಿ ನಮಗಿದ್ದ ಏಕಮಾತ್ರ ರೇಡಿಯೋ ಎಂದರೆ ಕುಟ್ಟ ಬ್ಯಾರಿ. ಕೆ.ಎಸ್. ನರಸಿಂಹ ಸ್ವಾಮಿಯವರ ‘ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹನು’ ಕೇಳಿದಾಗಲೆಲ್ಲ ನನಗೆ ನೆನಪಾಗುವವನೆಂದರೆ ಕುಟ್ಟ ಬ್ಯಾರಿ.

ಹೀಗೆ ನಾನು ಕಣ್ದೆರೆಯುತ್ತಿದ್ದಾಗ ನನಗೆ ಹೊರಲೋಕದ ಪರಿಚಯ ಮಾಡುತ್ತಿದ್ದವನೆಂದರೆ ಕುಟ್ಟ ಬ್ಯಾರಿ. ಅವನ ಜೊತೆಗೆ ಆಗೀಗ ತೆಳ್ಳಗೆ ಬಳುಕುವ ಮೈಮಾಟದ ‘ಸಂಕಬಳ’ ಎಂಬ ಹೆಸರಿನ ಇನ್ನೊಬ್ಬ ಬ್ಯಾರಿಯೂ ಬರುತ್ತಿದ್ದ. ಆನಂತರದ ಕಾಲದಲ್ಲಿ ಶಾಲೆಗೆ ಸೇರಿದಾಗ ಪಂಜದಲ್ಲಿ ಅಬ್ಬೂಬಕರೆ ಎಂಬ ಇನ್ನೊಬ್ಬ ಸ್ನೇಹಿತ ನನಗೆ ದೊರಕಿದ್ದ. ಚೋಟುದ್ದದ ನನ್ನನ್ನು ರಬಕ್ಕನೆ ಎತ್ತಿ ಎತ್ತಿ ಹೆಗಲ ಮೇಲೇರಿಸಿಕೊಂಡು ಶಾಲೆಗೆ ಮೂರು ಸುತ್ತು ಬರುತ್ತಿದ್ದ ಆತನ ಮಹಾ ಶಕ್ತಿಗೆ ನಾನು ಮಾರುಹೋಗಿದ್ದೆ. ಹೀಗೆ ಎಳವೆಯಲ್ಲಿ ದಕ್ಕಿದ ಮುಸ್ಲಿಂ ಸ್ನೇಹಿತರ ಸಂಪರ್ಕ ಹಾಗೆಯೇ ಮುಂದುವರೆದರೂ ಈ ಪಟ್ಟಿಗೆ ಯಾವ ಮುಸ್ಲಿಂ ಮಹಿಳೆಯರೂ ಸೇರಿರಲಿಲ್ಲ. ನಾನು ಓದಿದ ಶಾಲಾ ಕಾಲೇಜುಗಳಲ್ಲಿ ಮುಸ್ಲಿಂ ಹುಡುಗಿಯರು ಯಾರಾದರೂ ಇದ್ದದ್ದು ನನಗೆ ಗೊತ್ತಿಲ್ಲ.
ಆಗೀಗ ಇದರ ಬಗ್ಗೆ ನಾವು ಕೆಲವು ಗೆಳೆಯರಾದರೂ ಚರ್ಚಿಸುತ್ತಿದ್ದೆವು. ಪುತ್ತೂರಿನ ಐ.ಕೆ. ಬೊಳುವಾರು ಮುಸ್ಲಿಮರ ಕುರಿತಾದ ನಮ್ಮ ಅನೇಕ ಸಮಸ್ಯೆಗಳಿಗೆ ಉತ್ತರ ನೀಡುತ್ತಿದ್ದೆ. ಆತನ ಅಣ್ಣ ಬೊಳುವಾರು ಮಹಮ್ಮದ್ ಕುಂಞ್ಞ ಆಗಲೇ ದೊಡ್ಡ ಕತೆಗಾರನಾಗಿ ಪ್ರಖ್ಯಾತನಾದ್ದರಿಂದ ನಮ್ಮ ಸಣ್ಣ ಚರ್ಚೆಗೆ ಸುಲಭವಾಗಿ ದೊರೆಯುತ್ತಿರಲಿಲ್ಲ. ಅಥವಾ ಭಯದಿಂದ ನಾವೆಲ್ಲ ಅವರನ್ನು ಕರೆಯುತ್ತಿರಲಿಲ್ಲ. ಮಂಗಳೂರಿನಲ್ಲಿದ್ದ ಫಕೀರ್ ಮಹಮ್ಮದ್ ಕಟಪಾಡಿ ನಮಗೆಲ್ಲ ನಂಬುಗೆಯ ಸ್ನೇಹಿತ. ಅವರು ಆಗೀಗ ಸಿಕ್ಕಾಗ ನಮ್ಮ ಕುತೂಹಲ ತಣಿಸುತ್ತಿದ್ದರು. ಸುಮಾರು ಏಳನೇ ಶತಮಾನದಿಂದಲೂ ಅರಬರ ಸಂಪರ್ಕ ತುಳುನಾಡಿಗಿತ್ತು. ಬಾರ್ಕೂರು, ಮಂಗಳೂರು, ಉಳ್ಳಾಲ, ಮಂಜೇಶ್ವರ, ಕುಂಬಳೆ ಮತ್ತು ಕಾಸರಗೋಡುಗಳು ತುಳುನಾಡಿನ ಪ್ರಮುಖ ವ್ಯಾಪಾರೀ ಪಟ್ಟಣಗಳಾಗಿದ್ದು ಅಲ್ಲೆಲ್ಲಾ ಮುಸ್ಲಿಮರ ಪ್ರಭಾವ ಹೇರಳವಾಗಿತ್ತು. ಇವರ ಪ್ರಭಾವ ಎಷ್ಟು ತೀವ್ರವಾಗಿತ್ತೆಂದರೆ, ತುಳುವರು ಆಲಿ, ಬಬ್ಬರ್ಯರಂಥ ದೈವಗಳನ್ನು ಸೃಷ್ಟಿಸಿಕೊಂಡರು. ಬಪ್ಪ ಬ್ಯಾರಿ ಬಪ್ಪನಾಡಿನಲ್ಲಿ ದೇವಸ್ಥಾನ ಕಟ್ಟಿದ, ಹಾಗೆಯೇ ಆತನ ವ್ಯಕ್ತಿತ್ವ ಯಕ್ಷಗಾನಕ್ಕೂ ಪ್ರಿಯವಾಗಿ, ‘ಬಪ್ಪನಾಡು ಕ್ಷೇತ್ರ ಮಹಾತ್ಮೆ’ ಜನಪ್ರಿಯ ಪ್ರಸಂಗವಾಗಿ ಬೆಳೆಯಿತು. ಮುಸಾನೆಬಿ, ಮಾಲಪ್ಪಾಟ್ಟು, ಅಮ್ಮಾಯಿಪಾಟ್ಟು ಮತ್ತಿತರ ಹಾಡುಗಳನ್ನು ನಾವು ತಪ್ಪು ತಪ್ಪಾಗಿಯಾದರೂ ಹಾಡುತ್ತಿದ್ದೆವು, ಕೇಳಿಸಿಕೊಳ್ಳುತ್ತಿದ್ದೆವು.
ಇಂಥ ಅಸ್ಪಷ್ಟ ಪರಿಸರದಲ್ಲಿ ಮುಸ್ಲಿಂ ಮಹಿಳೆಯೊಬ್ಬರ ಸ್ನೇಹ ನಮಗೆ ಅವಶ್ಯವಾಗಿತ್ತು. ತುಳುನಾಡಿನ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದ ಟಿಪ್ಪು ಸುಲ್ತಾನನು ಪ್ರೆಂಚರೊಡನೆ ಸಂಬಂಧ ಹೊಂದಿದ್ದ. ಆಧುನಿಕ ಕಾಲದ ಕೆಲವು ಮೌಲ್ಯಗಳ ಬಗ್ಗೆಯೂ ಆತನಿಗೆ ತಿಳುವಳಿಕೆಯಿತ್ತು. ಆದರೂ ಆತ ಮುಸ್ಲಿಂ ಮಹಿಳೆಯರಿಗಾಗಿ ಶಾಲೆಗಳನ್ನೇಕೆ ತೆರೆಯಲಿಲ್ಲ ಎಂಬ ನಮ್ಮ ಪ್ರಶ್ನೆ ಹಾಗೆಯೇ ಉಳಿದು ಹೋಯಿತು. ಆಗ ಮಂಗಳೂರಿನಲ್ಲಿ ನಮಗೆ ಪರಿಚಯವಾದವರು ಡಾ. ಸಬಿಹಾ ಮತ್ತು ಶ್ರೀಮತಿ ಸಾರಾ ಅಬೂಬಕರ್ ಅವರು. ಸಬಿಹಾ ಅವರ ತಂದೆ ಬಹಳ ದೊಡ್ಡ ಪ್ರಾಧ್ಯಾಪಕರಾದ್ದರಿಂದ ಅವರೊಡನೆ ಸ್ನೇಹ ಸುಲಭವಾಗಿರಲಿಲ್ಲ. ಹಾಗಿದ್ದರೂ ಇವರಿಬ್ಬರೂ ನಮ್ಮ ತಿಳುವಳಿಕೆಯ ಪರಿಧಿಗಳನ್ನು ಅಗಾಧವಾಗಿ ವಿಸ್ತರಿಸುತ್ತಿದ್ದರು.
ಆಗ ತಾನೇ ಲಂಕೇಶ್ ಪತ್ರಿಕೆಯಲ್ಲಿ ಸಾರಾ ಅವರ ‘ಚಂದ್ರಗಿರಿಯ ತೀರದಲ್ಲಿ’ ಧಾರವಾಹಿಯಾಗಿ ಪ್ರಕಟವಾಗುತ್ತಿತ್ತು. ಧಾರವಾಹಿ ಓದುವುದು ನನಗಿಷ್ಟವಾದ ಕೆಲಸವಲ್ಲವಾದ್ದರಿಂದ ಅದು ಪುಸ್ತಕರೂಪದಲ್ಲಿ ಬಂದ ಆನಂತರವೇ ನಾನು ಓದಿದ್ದೆ. ಮುಸ್ಲಿಂ ಮಹಿಳಾಲೋಕದ ಬಗ್ಗೆ ನಮಗೆಲ್ಲ ಮಾಹಿತಿ ನೀಡಿದ ಮೊದಲ ಕೃತಿಯೆಂದರೆ ‘ಚಂದ್ರಗಿರಿಯ ತೀರದಲ್ಲಿ’. ಮುಸ್ಲಿಂ ಸಮುದಾಯದದಲ್ಲಿ ಆಳವಾಗಿ ಬೇರು ಬಿಟ್ಟಿರುವ ಧಾರ್ಮಿಕ ಕಂದಾಚಾರವನ್ನು ಈ ಕಾದಂಬರಿ ಅದ್ಭುತವಾಗಿ ಅನಾವರಣ ಮಾಡಿದಾಗ ನಾವೆಲ್ಲ ಬೆಚ್ಚಿ ಬಿದ್ದಿದ್ದೆವು, ನಿದ್ದೆಗೆಟ್ಟಿದ್ದೆವು. ಸಹನಾ ಮತ್ತು ವಜ್ರಗಳು ಮುಂದೆ ಪ್ರಕಟವಾದಾಗ ನಮಗೆಲ್ಲಾ ಸಾರಾ ಅವರಲ್ಲಿ ಪುಟಿದೇಳುತ್ತಿರುವ ಬಂಡಾಯ ಪ್ರವೃತ್ತಿಯ ಬಗೆಗೆ ಒಂದು ಬಗೆಯ ತಿಳುವಳಿಕೆ ಮೂಡತೊಡಗಿತ್ತು. ಅವರ ಬಗ್ಗೆ ಅಗಾಧವಾದ ನಂಬಿಕೆ ಬರತೊಡಗಿತ್ತು.
ಈ ನಡುವೆ ಉಡುಪಿಯ ಡಾ. ಆರ್ಕೆ ಮಣಿಪಾಲ ಅವರ ನೇತೃತ್ವದಲ್ಲಿ ನಾವೆಲ್ಲ ಬಂಡಾಯ ಸಾಹಿತ್ಯ ಸಂಘಟನೆಗಾಗಿ ದಣಿವಿಲ್ಲದೆ ಕೆಲಸ ಮಾಡುತ್ತಿದ್ದೆವು. ಎಲ್ಲ ಬಗೆಯ ಶೋಷಣೆಗಳ ವಿರುದ್ಧ ಹೋರಾಡುವುದು ನಮ್ಮ ಗುರಿ. ಸ್ವತಃ ಬಂಡಾಯಗಾರ್ತಿಯಾಗಿರುವ ಶ್ರೀಮತಿ ಸಾರಾ ಅಬೂಬಕರ್ ಅವರನ್ನು ನಮ್ಮೊಡನೆ ಸೇರಿಸಿಕೊಳ್ಳಬೇಕೆಂದು ನಾವೆಲ್ಲ ಬಯಸುತ್ತಿದ್ದೆವು. ಆದರೆ ಇದು ಸುಲಭದ ಕೆಲಸವಾಗಿರಲಿಲ್ಲ.
More
Like this:
Like ಲೋಡ್ ಆಗುತ್ತಿದೆ...
ಇತ್ತೀಚಿನ ಟಿಪ್ಪಣಿಗಳು