ಜೋಗಿ ಬರೆದ ಕತೆ: ಎಂದೋ ಕೇಳಿದ ಒಂದು ಕತೆಯನು

ಗಮನಿಸಿ: ಜೋಗಿ ಕಥೆಯ ಹೆಸರು ‘ಎಂದೋ ಕೇಳಿದ ಕಥೆಯನು’ ಎಂದಿತ್ತು. ಅದು ಬದಲಾಗಿ ‘ಚೂರಿ’ ಆದ ಕಾರಣ ಗೊಂದಲ ಉಂಟಾಗಿದೆ. ಕಥೆಯ ತಲೆಬರಹವನ್ನು ಬದಲಾಯಿಸಲಾಗಿದೆ.

ಚೂರಿ

Knives

I will kill her.

ಅಷ್ಟು ಹೇಳಿ ಆಂಟನಿ ಮತ್ತೊಂದು ಪೆಗ್ಗು ಗಂಟಲಿಗೆ ಹೊಯ್ದುಕೊಂಡ. ಅವನು ಕುಡಿಯುವುದು ರಮ್. ಅದಕ್ಕೆ ನೀರು ಕೂಡ ಬೆರೆಸದೇ ಕುಡಿಯುತ್ತಾನೆ. ಪ್ರತಿ ಪೆಗ್ಗು ಹೀರಿದ ನಂತರವೂ ಒಂದು ಮೂಸಂಬಿ ತೊಳೆ ತಿನ್ನುತ್ತಾನೆ. ಹೀಗೆ ನಾಲ್ಕು ಪೆಗ್ ಕುಡಿದು ಎಡ ಮುಂಗೈಯಿಂದ ತುಟಿಯೊರೆಸಿಕೊಂಡು ಹೋಗುತ್ತಾನೆ. ಅವನು ಯಾರ ಜೊತೆಗೂ ಮಾತಾಡಿದ್ದನ್ನು ನಾನು ಕಂಡಿಲ್ಲ. ಯಾವತ್ತೂ ನಾಲ್ಕು ಪೆಗ್‌ಗಿಂತ ಜಾಸ್ತಿ ಕುಡಿದವನಲ್ಲ. ಯಾವತ್ತೂ ಸಾಲ ಮಾಡಿದವನೂ ಅಲ್ಲ. ಕುಡಿದ ಮೇಲೂ ಅಷ್ಟೊಂದು ಸಜ್ಜನಿಕೆಯಿಂದ ವರ್ತಿಸುವ ಮತ್ತೊಬ್ಬನನ್ನು ನಾನು ಕಾವೇರಿ ಬಾರ್‌ನಲ್ಲಿ ನೋಡಿರಲೇ ಇಲ್ಲ.

ಆಂಟನಿ ನನಗೆ ಆರು ವರುಷಗಳಿಂದ ಪರಿಚಯ. ಆರು ವರುಷಗಳಿಂದ ನಾನು ಅದೇ ಬಾರಿಗೆ ಹೋಗುತ್ತಿದ್ದೆ. ಆಂಟನಿಯೂ ಅಲ್ಲಿಗೇ ಬರುತ್ತಿದ್ದ. ಒಮ್ಮೊಮ್ಮೆ ಒಬ್ಬನೇ ಬರುತ್ತಿದ್ದ. ಅಪರೂಪಕ್ಕೆ, ಶನಿವಾರಗಳಲ್ಲಿ, ಅವನ ಜೊತೆಗೆ ಕುಮುದಾಳೂ ಬರುತ್ತಿದ್ದಳು. ಅವಳು ಬಂದಾಗೆಲ್ಲ ಕಾವೇರಿ ಬಾರ್‌ನ ಗಿರಾಕಿಗಳು ಜಾಸ್ತಿ ಗಲಾಟೆ ಮಾಡದೇ ಮೌನವಾಗಿ ಕುಡಿಯುತ್ತಿದ್ದರು. ಒಬ್ಬನೇ ಬಂದಾಗ ಕೌಂಟರಿನ ಪಕ್ಕದಲ್ಲಿರುವ ಟೇಬಲ್ ಆರಿಸಿಕೊಳ್ಳುತ್ತಿದ್ದ ಆಂಟನಿ, ಕುಮುದಾ ಬಂದಾವತ್ತು ಕಿಟಕಿ ಪಕ್ಕದಲ್ಲಿರುವ ಟೇಬಲ್ಲಿಗೆ ಹೋಗುತ್ತಿದ್ದ. ಆಗಲೂ ಆಂಟನಿ ಮಾತಾಡುತ್ತಿರಲಿಲ್ಲ. ಕುಮುದಾ ಮಾತ್ರ ಮಾತಾಡುತ್ತಿದ್ದಳು.

ಆಂಟನಿ ಮತ್ತು ಕುಮುದಾ ಕಲ್ಕತ್ತಾದಿಂದ ಬಂದವರು. ಇಬ್ಬರಿಗೂ ಬೆಂಗಾಲಿ ಬರುತ್ತಿತ್ತು. ಆಂಟನಿ ಸೊಗಸಾಗಿ ಇಂಗ್ಲಿಷ್ ಮಾತಾಡುತ್ತಿದ್ದುದನ್ನು ನಾನು ಅನೇಕ ಸರ್ಕಸ್ಸುಗಳಲ್ಲಿ ಕೇಳಿದ್ದೆ. ಅವನು ಚಾಕು ಎಸೆತದಲ್ಲಿ ಪ್ರವೀಣ. ಅವನೂ ಅವನ ಹೆಂಡತಿ ಕುಮುದಳೂ ಅನೇಕ ಸರ್ಕಸ್ಸುಗಳಲ್ಲಿ ಚಾಕು ಎಸೆಯುವ ವಿದ್ಯೆ ಪ್ರದರ್ಶಿಸುತ್ತಿದ್ದರು.

ಅನೇಕ ಸರ್ಕಸ್ಸುಗಳಲ್ಲಿ ಚಾಕು ಎಸೆಯುವ ಕಲೆಯನ್ನು ನಾನೂ ನೋಡಿದ್ದೆ. ಒಬ್ಬ ವ್ಯಕ್ತಿಯನ್ನು ಮರದ ಹಲಗೆಯ ಎದುರು ನಿಲ್ಲಿಸಿ, ಅವರಿಂದ ಎಂಟೋ ಹತ್ತೋ ಅಡಿ ದೂರದಲ್ಲಿ ನಿಂತು ಗುರಿಯಿಟ್ಟು ಎಸೆದ ಚಾಕು ಆ ವ್ಯಕ್ತಿಯ ಅಕ್ಕಪಕ್ಕದಲ್ಲಿ ನಾಟಿಕೊಳ್ಳುತ್ತಿತ್ತು. ಪ್ರೇಕ್ಷಕರು ಇನ್ನೇನು ಆ ಚಾಕು ಆ ವ್ಯಕ್ತಿಗೆ ಚುಚ್ಚಿಕೊಳ್ಳುತ್ತೆ ಎಂಬ ಗಾಬರಿಯಲ್ಲಿ ಅದನ್ನು ನೋಡುತ್ತಿದ್ದರು. ಕ್ರಮೇಣ ಅದು ಸಹಜ ಆಟವಾಗಿ ಪರಿಗಣಿತವಾಗಿ, ಅದರ ಬಗ್ಗೆ ಆರಂಭದಲ್ಲಿದ್ದ ಕುತೂಹಲ ಕಡಿಮೆ ಆಗುತ್ತಾ ಬಂದಿತ್ತು.

ಆಗ ಬಂದವನು ಆಂಟನಿ. ಅವನು ಅದನ್ನು ಇಂಪೇಲ್‌ಮೆಂಟ್ ಆರ್ಟ್ ಎಂದು ಕರೆಯುತ್ತಿದ್ದ. ಪ್ರತಿ ಪ್ರದರ್ಶನಕ್ಕೂ ಮುಂಚೆ ಅದರ ಬಗ್ಗೆ ವಿವರಿಸುತ್ತಿದ್ದ. ಭಾರವಾದ ಹಿಡಿಯ ಚಾಕುಗಳನ್ನು ಬಳಸಿ, ತೆಳುವಾದ ಕತ್ತಿಯನ್ನು ಎಸೆಯುವುದರಿಂದ ಏನಾಗುತ್ತದೆ ಎಂದು ವಿವರಿಸುತ್ತಿದ್ದ. ಸುಲಭವಾಗಿ ಕತ್ತಿ ಚುಚ್ಚಿಕೊಳ್ಳುವಂಥ ಗಟ್ಟಿಯಿಲ್ಲದ ಮರದ ಹಲಗೆಗಳನ್ನು ಬಳಸುವವರ ಬಗ್ಗೆ ಅವನಿಗೆ ಗೌರವ ಇರಲಿಲ್ಲ.

ಆಂಟನಿ ಪ್ರೇಕ್ಷಕರಲ್ಲಿ ಒಬ್ಬರನ್ನು ಕರೆದು ಅವನು ಬಳಸುವ ಚಾಕುವನ್ನು ಪರೀಕ್ಷೆ ಮಾಡಲು ಹೇಳುತ್ತಿದ್ದ. ಯಾರಾದರೊಬ್ಬರಿಗೆ ಒಂದು ಚಾಕುವನ್ನು ಎಸೆದು, ಅದು ಮರದ ಹಲಗೆಗೆ ನಾಟಿಕೊಳ್ಳುವಂತೆ ಮಾಡಿ ಎನ್ನುತ್ತಿದ್ದ. ಆ ಹಲಗೆ ಎಷ್ಟು ಗಟ್ಟಿಯಾಗಿರುತ್ತಿತ್ತು ಎಂದರೆ ಸಾಧಾರಣ ವೇಗದಲ್ಲಿ ಎಸೆದ ಚಾಕು ಅದಕ್ಕೆ ತಾಗಿ ಬಿದ್ದು ಹೋಗುತ್ತಿತ್ತು. ಆದರೆ ಅದೇ ಹಲಗೆಗೆ ಸುಮಾರು ಒಂದಿಂಚಿನಷ್ಟು ಒಳಗೆ ಹೋಗಿ ಚುಚ್ಚಿಕೊಳ್ಳುವಷ್ಟು ಬಿರುಸಿನಿಂದ ಆಂಟನಿ ಚಾಕು ಎಸೆಯುತ್ತಿದ್ದ.

ಆಂಟನಿ ಮತ್ತೊಂದು ಅಪಾಯಕಾರಿ ಪ್ರಯೋಗದಲ್ಲೂ ಪಾರಂಗತನಾಗಿದ್ದ. ಅವನು ಕುಮುದಾಳನ್ನು ಮರದ ಹಲಗೆಯ ಮುಂದೆ ನಿಲ್ಲಿಸಿ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಒಂದರ ಹಿಂದೊಂದರಂತೆ ಒಂದು ನಿಮಿಷದೊಳಗೆ ಅರುವತ್ತನಾಲ್ಕು ಚಾಕುಗಳನ್ನು ಶರವೇಗದಲ್ಲಿ ಎಸೆಯುತ್ತಿದ್ದ. ಅವುಗಳು ಕುಮುದಾಳ ಸುತ್ತಲೂ ಚಾಕುವಿನ ಪಂಜರವನ್ನೇ ನಿರ್ಮಿಸುತ್ತಿದ್ದವು. ಜನ ಕಣ್ಣೆವೆ ಮಿಟುಕಿಸದೇ ಅದನ್ನು ನೋಡಿ ಬೆರಗಾಗುತ್ತಿದ್ದರು.

ಅದರಲ್ಲೇನೋ ಮೋಸವಿದೆ ಎಂದು ಪ್ರತಿಯೊಬ್ಬರೂ ಮಾತಾಡಿಕೊಳ್ಳುತ್ತಿದ್ದರು. ಸುಮಾರು ಅರ್ಧ ಕಿಲೋ ಭಾರದ ಚಾಕುಗಳನ್ನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕುಮುದಳ ಸುತ್ತಲೂ ಅವಳಿಗೆ ಒಂದಿಂಚು ಅಂತರದಲ್ಲಿ ಚುಚ್ಚಿಕೊಳ್ಳುವಂತೆ ಎಸೆಯುವುದು ಸಾಧ್ಯವಿಲ್ಲ. ಅದರಲ್ಲೇನೋ ಕಣ್ಣುಕಟ್ಟು ಇದೆ ಎಂದು ಎಲ್ಲರೂ ಹೇಳುತ್ತಿದ್ದರು. ಆದರೆ ಅದರ ರಹಸ್ಯವನ್ನು ಪತ್ತೆ ಹಚ್ಚಲು ಯಾರಿಗೂ ಸಾಧ್ಯವಾಗಿರಲಿಲ್ಲ. ಒಂದು ರೀತಿಯ ಅನುಮಾನ ಮತ್ತು ಪ್ರಶಂಸೆಯಲ್ಲೇ ಆ ಆಟ ಸಾಗುತ್ತಿತ್ತು.

ಒಂದು ಆಟಕ್ಕೆ ಆಂಟನಿ ಇಪ್ಪತ್ತು ಸಾವಿರ ಸಂಭಾವನೆ ಕೇಳುತ್ತಿದ್ದ. ಅದಕ್ಕಿಂತ ಕಡಿಮೆಗೆ ಅವನು ಅದನ್ನು ಪ್ರದರ್ಶಿಸುತ್ತಿರಲಿಲ್ಲ. ಆದರೆ ಊರಿಗೆ ಬಂದ ಸರ್ಕಸ್ಸು ಕಂಪೆನಿಗಳೆಲ್ಲ ಅವನ ಆಟವನ್ನು ಸತತವಾಗಿ ಪ್ರದರ್ಶಿಸುತ್ತಿದ್ದವು. ಆ ಊರು ಬಿಟ್ಟು ಬೇರೆಲ್ಲೂ ಆತ ಹೋಗುತ್ತಿರಲಿಲ್ಲ. ಅಲ್ಲಿಗೆ ಬರುವ ಸರ್ಕಸ್ಸು ಕಂಪೆನಿಗಳಿಗಷ್ಟೇ ಅವನು ಪ್ರದರ್ಶನ ನೀಡುತ್ತಿದ್ದ.

ಅವನಿಗೆ ಅಂಥ ದುರಾಸೆಯೂ ಇರಲಿಲ್ಲ. ಒಂದು ಸಾರಿ ಟೀವಿ ಚಾನಲ್ ಒಂದು ಅವನಿಗೆ ಟೀವಿಯಲ್ಲಿ ಪ್ರದರ್ಶನ ನೀಡುವಂತೆ ಆಹ್ವಾನಿಸಿತ್ತು. ಅದನ್ನು ಆಂಟನಿ ಖಡಾಖಂಡಿತ ನಿರಾಕರಿಸಿದ್ದ. ಅವರು ಒಡ್ಡಿದ ಆಮಿಷಗಳನ್ನೆಲ್ಲ ಅವನು ತಳ್ಳಿಹಾಕಿದ್ದ. ಸಂಜೆಗಳಲ್ಲಿ ಬಿಡುವಾಗಿದ್ದ ನಾನು ಅವನ ಅನೇಕ ಪ್ರದರ್ಶನಗಳನ್ನು ನೋಡಿದ್ದೆ. ಅವನ ಮನೆಯ ಬೀದಿಯಲ್ಲೇ ನಮ್ಮ ಮನೆಯೂ ಇದ್ದದ್ದರಿಂದ ಅವನು ಆಗಾಗ ನನಗೆ ಎದುರಾಗುತ್ತಿದ್ದ. ನಾನು ಕೂಡ ಕಾವೇರಿ ಬಾರ್‌ನ ಖಾಯಂ ಗಿರಾಕಿ ಆದ್ದರಿಂದ ಅವನು ಅಲ್ಲೂ ಸಿಗುತ್ತಿದ್ದ. ಆದರೆ ನಾವು ಯಾವತ್ತೂ ಮಾತಾಡಿರಲಿಲ್ಲ.

*****

ಆವತ್ತು ರಾತ್ರಿ ಅವನು ನಾನವಳನ್ನು ಕೊಲ್ಲುತ್ತೇನೆ ಎಂದು ಬುಸುಗುಟ್ಟಿದಾಗ ನನಗೆ ಆಶ್ಚರ್ಯವಾಗಿತ್ತು. ಅವನು ಎಂದಿನಂತಿಲ್ಲ ಅನ್ನಿಸಿ ಅವನನ್ನೇ ನೋಡುತ್ತಾ ಕುಳಿತ. ನಾಲ್ಕನೇ ಪೆಗ್ಗಿಗೆ ಎದ್ದು ಹೋಗುತ್ತಿದ್ದ ಆಂಟನಿ ಆವತ್ತು ಆರು ಪೆಗ್ಗು ಕುಡಿದು ಏಳನೇ ಪೆಗ್ ಆರ್ಡರ್ ಮಾಡಿದ್ದು ನೋಡಿ ನನಗೆ ಮತ್ತಷ್ಟು ಆಶ್ಚರ್ಯವಾಯಿತು. ನಾನು ಹೋಗಿ ಅವನ ಎದುರು ಕುಳಿತುಕೊಂಡೆ. ಅವನು ನನ್ನನ್ನು ಒಮ್ಮೆ ಕಣ್ಣೆತ್ತಿನೋಡಿದ. ಸ್ವಲ್ಪ ಹೊತ್ತಿನ ನಂತರ ಚಿಯರ್ಸ್ ಅಂದ. ನಾನೂ ಚಿಯರ್ಸ್ ಅಂದೆ. ಮಾತು ಶುರುವಾಯಿತು.

ನನ್ನೆದುರೇ ಆಂಟನಿ ಒಂಬತ್ತು ಪೆಗ್ ಕುಡಿದ. ಆದರೂ ಅವನು ತೊದಲುತ್ತಿರಲಿಲ್ಲ. ಅವನ ತೋಳುಗಳನ್ನು ನಾನು ಸಮೀಪದಿಂದ ನೋಡಿದೆ. ಅವು ಕಬ್ಬಿಣದಂತಿದ್ದವು. ಅವನ ಕಣ್ಣುಗಳು ಎಷ್ಟು ಚುರುಕಾಗಿದ್ದವೆಂದರೆ ಅವನು ದಿಟ್ಟಿಸಿ ನೋಡಿದರೆ ಚಾಕುವಿನಂತೆ ಇರಿಯುತ್ತಿದ್ದಾನೆ ಅನ್ನಿಸುತ್ತಿತ್ತು.

ಸ್ವಲ್ಪ ಹೊತ್ತು ಅರ್ಥವಿಲ್ಲದ ಮಾತಾಡಿದ ಆಂಟನಿ, ನಂತರ ಮತ್ತೊಮ್ಮೆ ಐ ವಿಲ್ ಕಿಲ್ ಹರ್ ಅಂತ ಬುಸುಗುಟ್ಟಿದ. ಮೋಸಗಾತಿ, ವಂಚಕಿ, ನಾಯಿ ಎಂದು ತನ್ನಷ್ಟಕ್ಕೇ ಬೈದುಕೊಂಡ. ನನಗೇನೂ ಗೊತ್ತಾಗೋಲ್ಲ ಅಂದ್ಕೊಂಡಿದ್ದಾಳೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡರೂ ಗುರಿತಪ್ಪದವನು ನಾನು. ನನ್ನ ಬೆನ್ನ ಹಿಂದೆ ಏನಿದೆ ಅಂತಲೂ ನನಗೆ ಗೊತ್ತಾಗುತ್ತೆ. ನನಗೆ ಮೋಸ ಮಾಡ್ತಾಳೆ ಎಂದು ಕೆಟ್ಟ ಮಾತುಗಳಲ್ಲಿ ಆಂಟನಿ ಮತ್ತೊಂದಷ್ಟು ಬೈದ.

ಹತ್ತು ಪೆಗ್ಗು ಮುಗಿಸಿ ಇಬ್ಬರೂ ಮನೆಗೆ ಹೊರಟೆವು. ದಾರಿಯಲ್ಲಿ ಹೋಗುತ್ತಾ ಅವನು ಕುಮುದಳನ್ನು ಮತ್ತಷ್ಟು ಬೈದ. ಅವನ ಮಾತಿನಿಂದ ನನಗೆ ಗೊತ್ತಾದದ್ದು ಇಷ್ಟು:

ಕುಮುದ ಅವನಿಗೆ ಮೋಸ ಮಾಡಿದ್ದಳು. ಟೀವಿ ಚಾನಲ್ಲಿನ ಹುಡುಗನೊಬ್ಬನ ಜೊತೆ ಸಂಬಂಧ ಇಟ್ಟುಕೊಂಡಿದ್ದಳು. ಅದರ ಬಗ್ಗೆ ಆಂಟನಿಗೆ ಅನುಮಾನ ಇತ್ತು. ಆವತ್ತು ಅವರಿಬ್ಬರೂ ಜೊತೆಗಿರುವುದನ್ನು ಆಂಟನಿ ನೋಡಿಬಿಟ್ಟಿದ್ದ. ಅದೇ ಆಘಾತದಲ್ಲಿ ಬಾರಿಗೆ ಬಂದಿದ್ದ.

ಅವಳನ್ನು ನನ್ನ ಜೀವಕ್ಕಿಂತ ಹೆಚ್ಚಾಗಿ ನೋಡಿಕೊಂಡೆ. ಪ್ರೀತಿಸಿದೆ. ನಮಗೆ ಮಕ್ಕಳಾಗಲಿಲ್ಲ ಅನ್ನೋದು ಬಿಟ್ಟರೆ ಬೇರೆ ದುಃಖ ಇರಲಿಲ್ಲ. ಕಲ್ಕತ್ತಾದಲ್ಲಿ ಅನಾಥಾಶ್ರಮದಲ್ಲಿ ಬಿದ್ದಿದ್ದಳು. ಕರೆದುಕೊಂಡು ಬಂದು ಮದುವೆ ಆದೆ. ಈಗ ನನಗೇ ಕೈ ಕೊಡುತ್ತಾಳೆ. ಅವಳನ್ನು ಬಿಡೋಲ್ಲ ನಾನು. ನಾಳೆಯ ಪ್ರದರ್ಶನದಲ್ಲಿ ಅವಳನ್ನು ಕೊಂದು ಹಾಕ್ತೇನೆ. ಅದೇನೂ ಕಷ್ಟದ ಕೆಲಸ ಅಲ್ಲ. ಒಂದಿಂಚು ಪಕ್ಕಕ್ಕೆ ಚಾಕು ಎಸೆದರೆ ಸಾಕು ಅವಳು ಸದ್ದೂ ಮಾಡದೇ ಸತ್ತು ಹೋಗುತ್ತಾಳೆ. ನನಗೆ ಶಿಕ್ಷೆಯೂ ಆಗುವುದಿಲ್ಲ. ಅದು ಆಟದಲ್ಲಿರುವ ರಿಸ್ಕ್ ಅಷ್ಟೇ ಎಂದ. ನಾನು ಅವನನ್ನು ಸಮಾಧಾನ ಮಾಡಲು ಹೋದೆ. ಅದರಿಂದ ಯಾವ ಉಪಯೋಗವೂ ಆಗಲಿಲ್ಲ.

ಮಾರನೆಯ ಬೆಳಗ್ಗೆ ಅವನಿಗೆ ಸಮಾಧಾನ ಹೇಳೋಣ ಅಂದುಕೊಂಡೆ. ಬೆಳಗ್ಗೆ ಅವನ ಮನೆಯ ಹತ್ತಿರ ಹೋದರೆ ಮನೆಗೆ ಬೀಗ ಹಾಕಿತ್ತು. ಆಂಟನಿ ಬೆಳಗ್ಗೆಯೇ ಎಲ್ಲಿಗೋ ಹೊರಟು ಹೋದ, ಕುಮುದಾ ಈಗಷ್ಟೇ ಹೋದಳು ಎಂದು ಪಕ್ಕದ ಮನೆಯವಳು ಹೇಳಿದಳು.

*****

ಅವರಿಬ್ಬರ ಬಗ್ಗೆಯೇ ಇಡೀ ದಿನ ಯೋಚಿಸಿದೆ. ಸಂಜೆಯಾಗುತ್ತಿದ್ದಂತೆ ನನಗೆ ಕುತೂಹಲ ತಡೆಯಲಾಗಲಿಲ್ಲ. ಆವತ್ತು ಚಂದ್ರನ್ ಸರ್ಕಸ್ಸಿನಲ್ಲಿ ಅವನ ಪ್ರದರ್ಶನ ಇತ್ತು. ಅವನು ಅಲ್ಲಿಗೆ ಬರುತ್ತಾನೋ ಇಲ್ಲವೋ ಎಂಬ ಅನುಮಾನವೂ ನನಗಿತ್ತು. ಬಂದರೆ ಅವಳನ್ನು ಖಂಡಿತಾ ಸಾಯಿಸುತ್ತಾನೆ ಎಂದು ಗುಮಾನಿಯಿತ್ತು.

ಸರ್ಕಸ್ಸು ಎಂದಿನಂತೆ ತುಂಬಿಕೊಂಡಿತ್ತು. ನಾನು ಮುಂದಿನ ಸಾಲಿನ ಟಿಕೆಟ್ಟು ತೆಗೆದುಕೊಂಡು ಹೋಗಿ ಕುಳಿತುಕೊಂಡೆ. ಸಣ್ಣಪುಟ್ಟ ಆಟಗಳು ಮುಗಿದವು. ಈಗ ಚಾಕು ಎಸೆಯುವ ಪ್ರದರ್ಶನ ಎಂದು ಮ್ಯಾನೇಜರ್ ಘೋಷಿಸಿ ಹೋದ. ಎಂದಿನಂತೆ ೬೪ ಚಾಕು ಇರುವ ಟ್ರೇ ತಳ್ಳಿಕೊಂಡು ಆಂಟನಿಯ ಸಹಾಯಕ ಬಂದ. ಅವನ ಹಿಂದೆ ಆಂಟನಿ ಬಂದ. ಮರದ ಹಲಗೆ ಸಿದ್ಧವಾಯಿತು. ಆಂಟನಿ ಎಂದಿನಂತೆ ಪುಟ್ಟ ಭಾಷಣ ಮಾಡಿದ.

ಇದು ಅಪಾಯಕಾರಿ ಕಲೆ. ಒಂದು ಚೂರು ಗುರಿ ತಪ್ಪಿದರೂ ಎದುರಿಗಿರುವ ವ್ಯಕ್ತಿ ಸಾಯಬಹುದು. ಅಂಥ ರಿಸ್ಕ್ ಇದರಲ್ಲಿ ಇದ್ದದ್ದೇ ಎಂದು ಆ ಆಟದ ಬಗ್ಗೆ ವಿವರಿಸಿದ. ಎಂದಿನಂತೆ ಪ್ರೇಕ್ಷಕರಲ್ಲಿ ಒಬ್ಬನನ್ನು ಕರೆದು ಚಾಕು ಪರೀಕ್ಷೆ ಮಾಡಿಸಿದ. ಮರದ ಹಲಗೆಗೆ ಎಸೆಯಲು ಹೇಳಿದ. ಅದು ಹಲಗಗೆ ಬಡಿದು ಕೆಳಗೆ ಬಿತ್ತು.

ಆಂಟನಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡ. ಕುಮುದಾ ಹಲಗೆಗೆ ಒರಗಿ ಎರಡೂ ಕೈಯನ್ನು ಚಾಚಿಕೊಂಡು ನಿಂತಳು. ಆಂಟನಿಯ ಕಣ್ಣುಗಳು ಕಣ್ಣೀರಿನಿಂದ ಒದ್ದೆಯಾಗಿರಬಹುದು ಎಂದು ನಾನು ಊಹಿಸಿದೆ. ಅವಳನ್ನು ಅವನು ಸಾಯಿಸುತ್ತಾನೋ ಇಲ್ಲವೋ ಎಂಬ ಕುತೂಹಲದಲ್ಲಿ ನಾನಿದ್ದೆ. ಎಲ್ಲರೂ ಅವನ ಚಾಣಾಕ್ಷತನವನ್ನು ಎದುರುನೋಡುತ್ತಿದ್ದರೆ, ನಾನು ಅದಕ್ಕಿಂತ ಹೆಚ್ಚಿನದ್ದೇನನ್ನೋ ಹುಡುಕುತ್ತಿದ್ದೆ.

‘ಠಪ್’

ರೊಯ್ಯನೆ ಅವನ ಕೈಯಿಂದ ಚಿಮ್ಮಿದ ಚಾಕು ಅವಳ ಸೊಂಟದ ಪಕ್ಕದಲ್ಲಿ ನೆಲೆಯಾಯಿತು. ನಾನು ಗಡಿಯಾಗ ನೋಡಿಕೊಂಡೆ. ಇನ್ನು ಐವತ್ತೊಂಬತ್ತು ಸೆಕೆಂಡ್ ಅಷ್ಟೇ. ನಾನು ಯೋಚಿಸುತ್ತಿದ್ದಂತೆ ಒಂದೊಂದೇ ಚಾಕು ಅವಳ ಸುತ್ತಲೂ ಚುಚ್ಚಿಕೊಳ್ಳತೊಡಗಿತು. ಸೊಂಟದಿಂದ ಕಾಲಿಗೆ ಸರಿದು ಪಾದಗಳನ್ನು ಸುತ್ತುವರಿದು ಮತ್ತೆ ಮೊಣಕಾಲು ತೊಡೆ ಸೊಂಟ, ಎದೆ, ಚಾಚಿದ ಕೈ, ಭುಜ ಕತ್ತಿನ ಬದಿ, ಕಿವಿ, ತಲೆ , ಹಣೆ, ಬಲಗಿವಿ, ಭುಜ, ಚಾಚಿದ ಬಲಗೈಯನ್ನು ಸರಿಸಿಕೊಂಡು ಹೊರಟಲ್ಲಿಗೆ ಬಂದು ನಿಂತಿತು. ಅರುವತ್ತನಾಲ್ಕು ಚಾಕುಗಳು ಮುಗಿದಿದ್ದವು. ಎಲ್ಲರೂ ಚಪ್ಪಾಳೆ ತಟ್ಟಿದರು.

ಅಷ್ಟರಲ್ಲಿ ಆಂಟನಿ ಮತ್ತೊಂದು ಚಾಕು ತೆಗೆದ. ಪ್ರೇಕ್ಷಕರು ಮತ್ತೆ ಸ್ತಬ್ಧರಾದರು. ಅದು ಅರುವತ್ತೈದನೆಯ ಚಾಕು. ಅವನು ಅರುವತ್ತೈದು ಚಾಕು ಎಸೆಯುವುದನ್ನು ಯಾರೂ ನೋಡಿರಲಿಲ್ಲ. ಅದನ್ನು ನೋಡಿದ ಕುಮುದಾಳ ಕಣ್ಣಲ್ಲೂ ಸಾವಿನ ಭಯ ಅಲುಗಾಡಿದಂತಾಯ್ತು..

ಆಂಟನಿ ಆ ಚಾಕು ಎಸೆಯಲು ಕೈಯೆತ್ತಿದ. ನಾನು ಕಣ್ಮುಚ್ಚಿಕೊಂಡೆ.

ಇದ್ದಕ್ಕಿದ್ದಂತೆ ಹೋ ಎಂಬ ಉದ್ಗಾರ ಕೇಳಿಸಿತು. ನಾನು ಕಣ್ತೆರೆದು ನೋಡಿದೆ. ಅದರ ಬೆನ್ನಿಗೇ ಚಪ್ಪಾಳೆಯ ಸದ್ದು ಕೇಳಿಸಿತು

ಅರುವತ್ತನಾಲ್ಕನೆಯ ಚಾಕು ಕರಾರುವಕ್ಕಾಗಿ ಅವಳ ಬೆರಳುಗಳ ನಡುವೆ ಇದ್ದ ಒಂದಿಂಚಿಗೂ ಕಡಿಮೆ ಜಾಗದಲ್ಲಿ ನೆಲೆಗೊಂಡಿತ್ತು. ನಾನು ನೋಡುತ್ತಿದ್ದಂತೆ ಆಂಟನಿ ಮತ್ತೊಂದು ಮಾತನ್ನೂ ಆಡದೇ ಅಲ್ಲಿಂದ ಹೊರಟು ಹೋದ.

*****

ಅವಳನ್ನು ಕೊಲ್ಲಬೇಕು ಅಂದುಕೊಂಡಿದ್ದೆ. ಕೊಲ್ಲಲೆಂದೇ ಹೊರಟಿದ್ದೆ. ಅದಕ್ಕೆಂದೇ ಆ ಅರುವತ್ತೈದನೆಯ ಚಾಕು ತಂದಿಟ್ಟುಕೊಂಡಿದ್ದೆ. ಆದರೆ ಸಾಧ್ಯವಾಗಲಿಲ್ಲ. ಅವಳ ಮೇಲೆ ಪ್ರೀತಿಯೇನೂ ಉಕ್ಕಲಿಲ್ಲ. ಆದರೆ ಆ ಕ್ಷಣ ನನಗೊಂದು ಸತ್ಯ ಅರ್ಥವಾಯಿತು’ ಆಂಟನಿ ನಿಧಾನವಾಗಿ ಹೇಳಿದ.

ಪ್ರತಿಯೊಬ್ಬ ಗಂಡಸೂ ತನ್ನ ಹೆಂಡತಿಗಿಂತ ತನ್ನ ವೃತ್ತಿಯನ್ನು ಹೆಚ್ಚು ಪ್ರೀತಿಸುತ್ತಾನೆ. ತನ್ನ ಕೌಶಲವನ್ನು ಜಾಸ್ತಿ ಪ್ರೀತಿಸುತ್ತಾನೆ. ನಾನೂ ಅಷ್ಟೇ. ಅವಳ ಮೇಲಿನ ದ್ವೇಷಕ್ಕಿಂತ ನನ್ನ ವೃತ್ತಿ ಕೌಶಲದ ಮೇಲಿನ ಪ್ರೀತಿ ದೊಡ್ಡದು. ನಾನು ಅವಳನ್ನು ಕೊಂದಿದ್ದರೆ ನನ್ನ ಕೌಶಲದ ಬಗ್ಗೆ ಎಲ್ಲರೂ ಅನುಮಾನ ಪಡುತ್ತಿದ್ದರು. ಅವಳನ್ನು ಕೊಂದದ್ದಕ್ಕಿಂತ ಆಂಟನಿ ಗುರಿತಪ್ಪಿದ ಅನ್ನುವುದೇ ಸುದ್ದಿಯಾಗುತ್ತಿತ್ತು’ ಎಂದು ಆಂಟನಿ ನಾಲ್ಕನೆಯ ಪೆಗ್ ಎತ್ತಿಕೊಂಡು ಗಂಟಲಿಗೆ ಸುರಿದುಕೊಂಡ.

ಮುಂಗೈಯಿಂದ ತುಟಿ ಒರೆಸಿಕೊಂಡು ಎದ್ದು ಭಾರವಾದ ಹೆಜ್ಜೆಗಳನ್ನಿಡುತ್ತಾ ನಡೆದುಹೋದ.

12 ಟಿಪ್ಪಣಿಗಳು (+add yours?)

 1. kaviswara shikaripura
  ಜೂನ್ 20, 2009 @ 15:16:27

  ‘kathe’-galigondu formula-da choukattu haakodu yeshtu sari jogi sir? Jogi-kathegalu sangrahadallu intha formula adagiruva vaasane royyane raachutthide….

  ಉತ್ತರ

 2. Santhosh K Sihimoge
  ಜೂನ್ 19, 2009 @ 16:50:47

  ee kathe “Just lather thats all” emba katheya
  tadbava…. Yake Jogi? nirase golisadhiri?

  ಉತ್ತರ

 3. anamikaa
  ಜೂನ್ 18, 2009 @ 13:33:28

  ee iDiya idondu ati keTTa prahasana.
  HANI avara baggeyU samshaya. CHURI ge samajaayishi sikitu sari, RAYABHAAGADA RAHASYA RATRIYA kadda katheyaddEnu kathe!?
  iwella ontharaa blogging bagge jigupse bartideyashTe.

  ಉತ್ತರ

 4. shama
  ಜೂನ್ 17, 2009 @ 13:20:56

  ಪ್ರತಿಯೊಬ್ಬ ಗಂಡಸೂ ತನ್ನ ಹೆಂಡತಿಗಿಂತ ತನ್ನ ವೃತ್ತಿಯನ್ನು ಹೆಚ್ಚು ಪ್ರೀತಿಸುತ್ತಾನೆ. ತನ್ನ ಕೌಶಲವನ್ನು ಜಾಸ್ತಿ ಪ್ರೀತಿಸುತ್ತಾನೆ. ನಾನೂ ಅಷ್ಟೇ. ಅವಳ ಮೇಲಿನ ದ್ವೇಷಕ್ಕಿಂತ ನನ್ನ ವೃತ್ತಿ ಕೌಶಲದ ಮೇಲಿನ ಪ್ರೀತಿ ದೊಡ್ಡದು.

  gandasu hengasennade ellaroo vruthi preethi belesikondare jagattu eshto sundaravaadeethu. nan prakaara karyakhdakshate preethiginta doddadu

  ಉತ್ತರ

 5. Hani
  ಜೂನ್ 15, 2009 @ 15:21:50

  sorry everybody.
  my doubts cleared by Jogidairy blog.
  -Hani

  ಉತ್ತರ

 6. pavithra
  ಜೂನ್ 15, 2009 @ 13:05:57

  very nice story

  ಉತ್ತರ

 7. varsa.sagar
  ಜೂನ್ 15, 2009 @ 11:20:37

  hai jogi,
  you could have attributed for Mopasa? why not?

  ಉತ್ತರ

 8. jogi
  ಜೂನ್ 15, 2009 @ 01:46:48

  ಇಲ್ಲಿ ಓದಿರಿ-
  http://jogidiary.blogspot.com/

  ಉತ್ತರ

 9. ಹನಿ
  ಜೂನ್ 14, 2009 @ 19:34:31

  ಜೋಗಿ, ಈ ಕತೆ ಮೋಪಾಸಾನದು ಅಲ್ಲವೇ ?
  – ಹನಿ

  ಉತ್ತರ

 10. prashu
  ಜೂನ್ 14, 2009 @ 18:38:07

  jogi,e thara romanchaka kathe bareetha master agbitri adralli.adre nima talent adkintha doddadu anisthide..chitte hejje jaadu kooda ade thara…chennagide adre ade hale daarili naditha idiraa antha doubt….u know writing…barahagaara gottiro daarille hogtha idre chandava? adhika prasanga ansidre kshmisi…u have ability to reach new heights…

  ಉತ್ತರ

 11. PRAKASH HEGDE
  ಜೂನ್ 14, 2009 @ 18:27:21

  ಜೋಗಿ…….

  ಇಷ್ಟವಾಯಿತು……..

  ಚಕ್ಷುವಿಲ್ಲದೆ…
  ಚಾಕು ಎಸೆಯುವ ..
  ಚಾಕಚಕ್ಯತೆ ಹಿಂದೆ…ಹ್ರದಯವಲ್ಲದೇ…
  ಚಾಣಾಕ್ಷತನವೂ ಇರುತ್ತದೆ….

  ತುಂಬಾ… ತುಂಬಾ ಇಷ್ಟವಾಯಿತು……

  ಒಳ್ಳೆಯ ಕತೆಗಾಗಿ..
  ವಂದನೆಗಳು…

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: