ಜೋಗಿ ಬರೆದ ಕತೆ: ಎಂದೋ ಕೇಳಿದ ಒಂದು ಕತೆಯನು

ಗಮನಿಸಿ: ಜೋಗಿ ಕಥೆಯ ಹೆಸರು ‘ಎಂದೋ ಕೇಳಿದ ಕಥೆಯನು’ ಎಂದಿತ್ತು. ಅದು ಬದಲಾಗಿ ‘ಚೂರಿ’ ಆದ ಕಾರಣ ಗೊಂದಲ ಉಂಟಾಗಿದೆ. ಕಥೆಯ ತಲೆಬರಹವನ್ನು ಬದಲಾಯಿಸಲಾಗಿದೆ.

ಚೂರಿ

Knives

I will kill her.

ಅಷ್ಟು ಹೇಳಿ ಆಂಟನಿ ಮತ್ತೊಂದು ಪೆಗ್ಗು ಗಂಟಲಿಗೆ ಹೊಯ್ದುಕೊಂಡ. ಅವನು ಕುಡಿಯುವುದು ರಮ್. ಅದಕ್ಕೆ ನೀರು ಕೂಡ ಬೆರೆಸದೇ ಕುಡಿಯುತ್ತಾನೆ. ಪ್ರತಿ ಪೆಗ್ಗು ಹೀರಿದ ನಂತರವೂ ಒಂದು ಮೂಸಂಬಿ ತೊಳೆ ತಿನ್ನುತ್ತಾನೆ. ಹೀಗೆ ನಾಲ್ಕು ಪೆಗ್ ಕುಡಿದು ಎಡ ಮುಂಗೈಯಿಂದ ತುಟಿಯೊರೆಸಿಕೊಂಡು ಹೋಗುತ್ತಾನೆ. ಅವನು ಯಾರ ಜೊತೆಗೂ ಮಾತಾಡಿದ್ದನ್ನು ನಾನು ಕಂಡಿಲ್ಲ. ಯಾವತ್ತೂ ನಾಲ್ಕು ಪೆಗ್‌ಗಿಂತ ಜಾಸ್ತಿ ಕುಡಿದವನಲ್ಲ. ಯಾವತ್ತೂ ಸಾಲ ಮಾಡಿದವನೂ ಅಲ್ಲ. ಕುಡಿದ ಮೇಲೂ ಅಷ್ಟೊಂದು ಸಜ್ಜನಿಕೆಯಿಂದ ವರ್ತಿಸುವ ಮತ್ತೊಬ್ಬನನ್ನು ನಾನು ಕಾವೇರಿ ಬಾರ್‌ನಲ್ಲಿ ನೋಡಿರಲೇ ಇಲ್ಲ.

ಆಂಟನಿ ನನಗೆ ಆರು ವರುಷಗಳಿಂದ ಪರಿಚಯ. ಆರು ವರುಷಗಳಿಂದ ನಾನು ಅದೇ ಬಾರಿಗೆ ಹೋಗುತ್ತಿದ್ದೆ. ಆಂಟನಿಯೂ ಅಲ್ಲಿಗೇ ಬರುತ್ತಿದ್ದ. ಒಮ್ಮೊಮ್ಮೆ ಒಬ್ಬನೇ ಬರುತ್ತಿದ್ದ. ಅಪರೂಪಕ್ಕೆ, ಶನಿವಾರಗಳಲ್ಲಿ, ಅವನ ಜೊತೆಗೆ ಕುಮುದಾಳೂ ಬರುತ್ತಿದ್ದಳು. ಅವಳು ಬಂದಾಗೆಲ್ಲ ಕಾವೇರಿ ಬಾರ್‌ನ ಗಿರಾಕಿಗಳು ಜಾಸ್ತಿ ಗಲಾಟೆ ಮಾಡದೇ ಮೌನವಾಗಿ ಕುಡಿಯುತ್ತಿದ್ದರು. ಒಬ್ಬನೇ ಬಂದಾಗ ಕೌಂಟರಿನ ಪಕ್ಕದಲ್ಲಿರುವ ಟೇಬಲ್ ಆರಿಸಿಕೊಳ್ಳುತ್ತಿದ್ದ ಆಂಟನಿ, ಕುಮುದಾ ಬಂದಾವತ್ತು ಕಿಟಕಿ ಪಕ್ಕದಲ್ಲಿರುವ ಟೇಬಲ್ಲಿಗೆ ಹೋಗುತ್ತಿದ್ದ. ಆಗಲೂ ಆಂಟನಿ ಮಾತಾಡುತ್ತಿರಲಿಲ್ಲ. ಕುಮುದಾ ಮಾತ್ರ ಮಾತಾಡುತ್ತಿದ್ದಳು.

ಆಂಟನಿ ಮತ್ತು ಕುಮುದಾ ಕಲ್ಕತ್ತಾದಿಂದ ಬಂದವರು. ಇಬ್ಬರಿಗೂ ಬೆಂಗಾಲಿ ಬರುತ್ತಿತ್ತು. ಆಂಟನಿ ಸೊಗಸಾಗಿ ಇಂಗ್ಲಿಷ್ ಮಾತಾಡುತ್ತಿದ್ದುದನ್ನು ನಾನು ಅನೇಕ ಸರ್ಕಸ್ಸುಗಳಲ್ಲಿ ಕೇಳಿದ್ದೆ. ಅವನು ಚಾಕು ಎಸೆತದಲ್ಲಿ ಪ್ರವೀಣ. ಅವನೂ ಅವನ ಹೆಂಡತಿ ಕುಮುದಳೂ ಅನೇಕ ಸರ್ಕಸ್ಸುಗಳಲ್ಲಿ ಚಾಕು ಎಸೆಯುವ ವಿದ್ಯೆ ಪ್ರದರ್ಶಿಸುತ್ತಿದ್ದರು.

ಅನೇಕ ಸರ್ಕಸ್ಸುಗಳಲ್ಲಿ ಚಾಕು ಎಸೆಯುವ ಕಲೆಯನ್ನು ನಾನೂ ನೋಡಿದ್ದೆ. ಒಬ್ಬ ವ್ಯಕ್ತಿಯನ್ನು ಮರದ ಹಲಗೆಯ ಎದುರು ನಿಲ್ಲಿಸಿ, ಅವರಿಂದ ಎಂಟೋ ಹತ್ತೋ ಅಡಿ ದೂರದಲ್ಲಿ ನಿಂತು ಗುರಿಯಿಟ್ಟು ಎಸೆದ ಚಾಕು ಆ ವ್ಯಕ್ತಿಯ ಅಕ್ಕಪಕ್ಕದಲ್ಲಿ ನಾಟಿಕೊಳ್ಳುತ್ತಿತ್ತು. ಪ್ರೇಕ್ಷಕರು ಇನ್ನೇನು ಆ ಚಾಕು ಆ ವ್ಯಕ್ತಿಗೆ ಚುಚ್ಚಿಕೊಳ್ಳುತ್ತೆ ಎಂಬ ಗಾಬರಿಯಲ್ಲಿ ಅದನ್ನು ನೋಡುತ್ತಿದ್ದರು. ಕ್ರಮೇಣ ಅದು ಸಹಜ ಆಟವಾಗಿ ಪರಿಗಣಿತವಾಗಿ, ಅದರ ಬಗ್ಗೆ ಆರಂಭದಲ್ಲಿದ್ದ ಕುತೂಹಲ ಕಡಿಮೆ ಆಗುತ್ತಾ ಬಂದಿತ್ತು.

ಆಗ ಬಂದವನು ಆಂಟನಿ. ಅವನು ಅದನ್ನು ಇಂಪೇಲ್‌ಮೆಂಟ್ ಆರ್ಟ್ ಎಂದು ಕರೆಯುತ್ತಿದ್ದ. ಪ್ರತಿ ಪ್ರದರ್ಶನಕ್ಕೂ ಮುಂಚೆ ಅದರ ಬಗ್ಗೆ ವಿವರಿಸುತ್ತಿದ್ದ. ಭಾರವಾದ ಹಿಡಿಯ ಚಾಕುಗಳನ್ನು ಬಳಸಿ, ತೆಳುವಾದ ಕತ್ತಿಯನ್ನು ಎಸೆಯುವುದರಿಂದ ಏನಾಗುತ್ತದೆ ಎಂದು ವಿವರಿಸುತ್ತಿದ್ದ. ಸುಲಭವಾಗಿ ಕತ್ತಿ ಚುಚ್ಚಿಕೊಳ್ಳುವಂಥ ಗಟ್ಟಿಯಿಲ್ಲದ ಮರದ ಹಲಗೆಗಳನ್ನು ಬಳಸುವವರ ಬಗ್ಗೆ ಅವನಿಗೆ ಗೌರವ ಇರಲಿಲ್ಲ.

ಆಂಟನಿ ಪ್ರೇಕ್ಷಕರಲ್ಲಿ ಒಬ್ಬರನ್ನು ಕರೆದು ಅವನು ಬಳಸುವ ಚಾಕುವನ್ನು ಪರೀಕ್ಷೆ ಮಾಡಲು ಹೇಳುತ್ತಿದ್ದ. ಯಾರಾದರೊಬ್ಬರಿಗೆ ಒಂದು ಚಾಕುವನ್ನು ಎಸೆದು, ಅದು ಮರದ ಹಲಗೆಗೆ ನಾಟಿಕೊಳ್ಳುವಂತೆ ಮಾಡಿ ಎನ್ನುತ್ತಿದ್ದ. ಆ ಹಲಗೆ ಎಷ್ಟು ಗಟ್ಟಿಯಾಗಿರುತ್ತಿತ್ತು ಎಂದರೆ ಸಾಧಾರಣ ವೇಗದಲ್ಲಿ ಎಸೆದ ಚಾಕು ಅದಕ್ಕೆ ತಾಗಿ ಬಿದ್ದು ಹೋಗುತ್ತಿತ್ತು. ಆದರೆ ಅದೇ ಹಲಗೆಗೆ ಸುಮಾರು ಒಂದಿಂಚಿನಷ್ಟು ಒಳಗೆ ಹೋಗಿ ಚುಚ್ಚಿಕೊಳ್ಳುವಷ್ಟು ಬಿರುಸಿನಿಂದ ಆಂಟನಿ ಚಾಕು ಎಸೆಯುತ್ತಿದ್ದ.

ಆಂಟನಿ ಮತ್ತೊಂದು ಅಪಾಯಕಾರಿ ಪ್ರಯೋಗದಲ್ಲೂ ಪಾರಂಗತನಾಗಿದ್ದ. ಅವನು ಕುಮುದಾಳನ್ನು ಮರದ ಹಲಗೆಯ ಮುಂದೆ ನಿಲ್ಲಿಸಿ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಒಂದರ ಹಿಂದೊಂದರಂತೆ ಒಂದು ನಿಮಿಷದೊಳಗೆ ಅರುವತ್ತನಾಲ್ಕು ಚಾಕುಗಳನ್ನು ಶರವೇಗದಲ್ಲಿ ಎಸೆಯುತ್ತಿದ್ದ. ಅವುಗಳು ಕುಮುದಾಳ ಸುತ್ತಲೂ ಚಾಕುವಿನ ಪಂಜರವನ್ನೇ ನಿರ್ಮಿಸುತ್ತಿದ್ದವು. ಜನ ಕಣ್ಣೆವೆ ಮಿಟುಕಿಸದೇ ಅದನ್ನು ನೋಡಿ ಬೆರಗಾಗುತ್ತಿದ್ದರು.

ಅದರಲ್ಲೇನೋ ಮೋಸವಿದೆ ಎಂದು ಪ್ರತಿಯೊಬ್ಬರೂ ಮಾತಾಡಿಕೊಳ್ಳುತ್ತಿದ್ದರು. ಸುಮಾರು ಅರ್ಧ ಕಿಲೋ ಭಾರದ ಚಾಕುಗಳನ್ನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕುಮುದಳ ಸುತ್ತಲೂ ಅವಳಿಗೆ ಒಂದಿಂಚು ಅಂತರದಲ್ಲಿ ಚುಚ್ಚಿಕೊಳ್ಳುವಂತೆ ಎಸೆಯುವುದು ಸಾಧ್ಯವಿಲ್ಲ. ಅದರಲ್ಲೇನೋ ಕಣ್ಣುಕಟ್ಟು ಇದೆ ಎಂದು ಎಲ್ಲರೂ ಹೇಳುತ್ತಿದ್ದರು. ಆದರೆ ಅದರ ರಹಸ್ಯವನ್ನು ಪತ್ತೆ ಹಚ್ಚಲು ಯಾರಿಗೂ ಸಾಧ್ಯವಾಗಿರಲಿಲ್ಲ. ಒಂದು ರೀತಿಯ ಅನುಮಾನ ಮತ್ತು ಪ್ರಶಂಸೆಯಲ್ಲೇ ಆ ಆಟ ಸಾಗುತ್ತಿತ್ತು.

ಒಂದು ಆಟಕ್ಕೆ ಆಂಟನಿ ಇಪ್ಪತ್ತು ಸಾವಿರ ಸಂಭಾವನೆ ಕೇಳುತ್ತಿದ್ದ. ಅದಕ್ಕಿಂತ ಕಡಿಮೆಗೆ ಅವನು ಅದನ್ನು ಪ್ರದರ್ಶಿಸುತ್ತಿರಲಿಲ್ಲ. ಆದರೆ ಊರಿಗೆ ಬಂದ ಸರ್ಕಸ್ಸು ಕಂಪೆನಿಗಳೆಲ್ಲ ಅವನ ಆಟವನ್ನು ಸತತವಾಗಿ ಪ್ರದರ್ಶಿಸುತ್ತಿದ್ದವು. ಆ ಊರು ಬಿಟ್ಟು ಬೇರೆಲ್ಲೂ ಆತ ಹೋಗುತ್ತಿರಲಿಲ್ಲ. ಅಲ್ಲಿಗೆ ಬರುವ ಸರ್ಕಸ್ಸು ಕಂಪೆನಿಗಳಿಗಷ್ಟೇ ಅವನು ಪ್ರದರ್ಶನ ನೀಡುತ್ತಿದ್ದ.

ಅವನಿಗೆ ಅಂಥ ದುರಾಸೆಯೂ ಇರಲಿಲ್ಲ. ಒಂದು ಸಾರಿ ಟೀವಿ ಚಾನಲ್ ಒಂದು ಅವನಿಗೆ ಟೀವಿಯಲ್ಲಿ ಪ್ರದರ್ಶನ ನೀಡುವಂತೆ ಆಹ್ವಾನಿಸಿತ್ತು. ಅದನ್ನು ಆಂಟನಿ ಖಡಾಖಂಡಿತ ನಿರಾಕರಿಸಿದ್ದ. ಅವರು ಒಡ್ಡಿದ ಆಮಿಷಗಳನ್ನೆಲ್ಲ ಅವನು ತಳ್ಳಿಹಾಕಿದ್ದ. ಸಂಜೆಗಳಲ್ಲಿ ಬಿಡುವಾಗಿದ್ದ ನಾನು ಅವನ ಅನೇಕ ಪ್ರದರ್ಶನಗಳನ್ನು ನೋಡಿದ್ದೆ. ಅವನ ಮನೆಯ ಬೀದಿಯಲ್ಲೇ ನಮ್ಮ ಮನೆಯೂ ಇದ್ದದ್ದರಿಂದ ಅವನು ಆಗಾಗ ನನಗೆ ಎದುರಾಗುತ್ತಿದ್ದ. ನಾನು ಕೂಡ ಕಾವೇರಿ ಬಾರ್‌ನ ಖಾಯಂ ಗಿರಾಕಿ ಆದ್ದರಿಂದ ಅವನು ಅಲ್ಲೂ ಸಿಗುತ್ತಿದ್ದ. ಆದರೆ ನಾವು ಯಾವತ್ತೂ ಮಾತಾಡಿರಲಿಲ್ಲ.

*****

ಆವತ್ತು ರಾತ್ರಿ ಅವನು ನಾನವಳನ್ನು ಕೊಲ್ಲುತ್ತೇನೆ ಎಂದು ಬುಸುಗುಟ್ಟಿದಾಗ ನನಗೆ ಆಶ್ಚರ್ಯವಾಗಿತ್ತು. ಅವನು ಎಂದಿನಂತಿಲ್ಲ ಅನ್ನಿಸಿ ಅವನನ್ನೇ ನೋಡುತ್ತಾ ಕುಳಿತ. ನಾಲ್ಕನೇ ಪೆಗ್ಗಿಗೆ ಎದ್ದು ಹೋಗುತ್ತಿದ್ದ ಆಂಟನಿ ಆವತ್ತು ಆರು ಪೆಗ್ಗು ಕುಡಿದು ಏಳನೇ ಪೆಗ್ ಆರ್ಡರ್ ಮಾಡಿದ್ದು ನೋಡಿ ನನಗೆ ಮತ್ತಷ್ಟು ಆಶ್ಚರ್ಯವಾಯಿತು. ನಾನು ಹೋಗಿ ಅವನ ಎದುರು ಕುಳಿತುಕೊಂಡೆ. ಅವನು ನನ್ನನ್ನು ಒಮ್ಮೆ ಕಣ್ಣೆತ್ತಿನೋಡಿದ. ಸ್ವಲ್ಪ ಹೊತ್ತಿನ ನಂತರ ಚಿಯರ್ಸ್ ಅಂದ. ನಾನೂ ಚಿಯರ್ಸ್ ಅಂದೆ. ಮಾತು ಶುರುವಾಯಿತು.

More

ನವಕರ್ನಾಟಕ-ವನಿತಾ

navakarnataka0001

%d bloggers like this: