ದೇವರುಗಳು ಮುಂದೆಂದೋ ಜಗಳವಾಡದಿರಲಿ…

ಮೈನಸ್ ೨೫-ಒಂದು ಪ್ರಾರ್ಥನೆ

103_0355ಗುರುಪ್ರಸಾದ್ ಕಾಗಿನೆಲೆ ಉದಯವಾಣಿಗೆ ಬರೆಯುತ್ತಿರುವ ಅಂಕಣದ ಒಂದು ಲೇಖನ

ಹೊರಗಿನ ತಾಪಮಾನ ಮೈನಸ್ ೨೫ ಫಾರನ್ ಹೈಟ್. ಅಂದರೆ ಮೈನಸ್ ೩೨ ಡಿಗ್ರಿ ಸೆಂಟಿಗ್ರೇಡ್. ಉಸಿರಾಡುವಾಗ ಮೂಗಿನ ಹೊಳ್ಳೆಗಳಲ್ಲಿ ಗಟ್ಟಿಗಟ್ಟುವ ಬರ್ಫದ ಗಡ್ಡೆ. ಸುಳಿರ್ಗಾಳಿ ಹೊಡೆದು ಇನ್ನೂ ನಲವತ್ತು ಡಿಗ್ರಿ ಕಮ್ಮಿಯಾದಾಗ ಕಣ್ಣಿಂದ ಹೊರಬರುವ ನೀರೂ ಹೆಪ್ಪುಗಟ್ಟಿರುತ್ತದೆ. ನಾಲ್ಕು ಕೈಗವಸುಗಳ ಮೂಲಕವೂ ಒಳನುಗ್ಗಿ ಕೈ,ಕಾಲ್ಬೆರಳುಗಳ ತುದಿಗಳು ನೀಲಿಗಟ್ಟಿವೆ. ನಿಜವಾಗಿಯೂ ಇಲ್ಲಿನ ಚಳಿಗಳು unforgiving.

ಹೊರಗೆ ಬಿಳೀ ಮೌನ. ಮೌನಕ್ಕೆ ಬಣ್ಣವಿರುತ್ತದೆಯೇ ಎಂದು ಕೇಳುವವರು ಒಮ್ಮೆ ಸಮಶೀತೋಷ್ಣವಲಯಕ್ಕಿಂತ ಮೇಲೆ ಹೋದಾಗ ಗೊತ್ತಾಗುತ್ತದೆ. ನೀರವ ಮೌನ, ಸ್ಮಶಾನ ಮೌನಗಳು ಮೌನವನ್ನು ಗೊತ್ತಿಲ್ಲದ ವಿಭಕ್ತಿಯಲ್ಲಿ ವಿಶೇಷಣವನ್ನಿರಿಸಿ ಭಯತರಿಸಿದರೆ, ಈ ಬಿಳೀ ಮೌನ ತನ್ನ ಬಣ್ಣದಿಂದಲೇ ತನ್ನತ್ತ ಸೆಳೆಯುತ್ತದೆ. ವಿಂಟರ್ ವಂಡರ್‍ಲ್ಯಾಂಡಿನ ಈ ದಿನಗಳಲ್ಲಿ ಹೊರಗೆ ಬರಲು ಹಿಮಕರಡಿಗಳಿಗೂ ಪೆಂಗ್ವಿನ್‌ಗಳಿಗೂ ಎದೆ ಗಟ್ಟಿಯಿರಬೇಕು. ಅಕಸ್ಮಾತ್ ಹೋದರೆ ಹೆಪ್ಪುಗಟ್ಟುತ್ತಾವೋ ಏನೋ?

s

ತುಂಬಿದ ನಯಾಗರವನ್ನು ಅಮ್ಮನಿಗೆ ತೋರಿಸಲೆಂದು ಕರಕೊಂಡು ಹೋದಾಗ ಅದೇನನ್ನಿಸಿತೋ ಸೀದಾ ನಡೆದು ಪಕ್ಕದಲ್ಲಿದ್ದ ಬ್ಯಾಕ್‌ವಾಟರಿನ ತಟಕ್ಕೆ ನಡೆದು, ಚಪ್ಪಲಿ ತೆಗೆದು ಕಾಲುತೊಳೆದು, ಎರಡು ಹನಿಯನ್ನು ತಲೆಯಮೇಲೆ ಪ್ರೋಕ್ಷಣೆ ಮಾದಿಕೊಂಡುಬಿಟ್ಟಿದ್ದಳು. ಎಲ್ಲರೂ ಏ, ಹೇ ಎಂದು ಕೂಗಿದಾಗ ಸೆಕ್ಯುರಿಟಿ ಸ್ಕ್ವಾಡಿನವರು ಬಂದು ಪಕ್ಕಕ್ಕೆ ಕರಕೊಂಡು ಹೋಗಿ, ಕೆಳಗೆ ಬಿದ್ದರಾಗಬಹುದಾದ ಅಪಾಯವನ್ನು ನಯವಾಗಿ ವಿವರಿಸಿದಾಗ ಅಮ್ಮ ಸಂಕೋಚದಿಂದ ‘ನೀರೆಂದರೆ ಒಂತರಾ ಸೆಳೆತ ಕಣೋ. ಕೆಲವರಿಗೆ ತುಂಬಿದ ನೀರನ್ನು ನೋಡಿದರೆ ಮುಟ್ಟಬೇಕು, ಕಾಲು ತೊಳೆದುಕೊಳ್ಳಬೇಕು ಅನ್ನಿಸುತ್ತದ್ದೆ. ಇಂಥಾ ಚೆನ್ನಾಗಿರುವ ನೀರನ್ನು ಮುಟ್ಟಿನೋಡದಿದ್ದರೆ ಹೇಗೆ?’ ಎಂದು ಕೇಳಿದ್ದಳು.

ಈ ಕೊರೆಯುವ ಛಳಿಯೂ ಹಿಮಗಡ್ಡೆಯೂ ಸೆಳೆತವೇ ಮನುಷ್ಯನಿಗೆ. ಹೊರಗೆ ನೋಡಿದರೆ, ಬರೇ ದಿಗಂತದವರೆಗೂ ಬರೇ ಶ್ವೇತವರ್ಣ. ಅಲ್ಲಿ ಕಾಣಿಸುತ್ತಿದ್ದಾನೆ, ಒಬ್ಬನೇ ಒಬ್ಬ. ಮೊಳೆಗಳಿರುವ ಶೂಗಳನ್ನು ಕಾಲಿಗೆ ಹಾಕಿ, ಕಾಲಿನ ಕೆಳಗಿನ ಮಂಜುಗೆಡ್ಡೆಯನ್ನು ತರೆಯುತ್ತಾ, ಒಡೆಯುತ್ತಾ ಕಣ್ಣೆರಡು ಮಾತ್ರ ಕಾಣಿಸುವಂತೆ ಇಡೀ ಮೈಯನ್ನು ಅಂಡರ್ವೇರಿನ ಹೊರಗೆ ಐದೈದು ಪದರಗಳಿಂದ ಮುಚ್ಚಿಕೊಂದು ಒಬ್ಬನೇ ಓಡುತ್ತಿದ್ದಾನೆ. ಕಾಣಿಸುವ ಅನತಿದೂರದ ತನಕ ಇನ್ನೊಂದು ಕಾಗೆಯೂ ಇಲ್ಲ. ಪಕ್ಕದ ಬೀದಿಯಲ್ಲಿ ಕಂಬೋಡಿಯಾದ ‘ನಿಲೆ’ ತನ್ನ ಮಗಳ ಜತೆ ಸೇರಿ ದೊಡ್ಡ ಮಗಚುವ ಕೈಯಿಂದ ಹಿಮವನ್ನು ಬಳಿದು ಪಕ್ಕಕ್ಕೆ ಹಾಕುತ್ತಿದ್ದಾನೆ. ಸುಲಭಕ್ಕೆ ಮಣಿಯದ ಬರ್ಫ ನೆಲಗಟ್ಟಿದೆ. ಕರಕರನೆ ಕೆರೆದು ಉಪ್ಪು ಮರಳನ್ನು ಹಾಕಿದರೂ ಹೊರಗೆ ಬರದು.

ಮಕ್ಕಳಿಗೆ ಸ್ಕೂಲಿಗೆ ರಜ. ಇದೊಂತರಾ ಆರ್ಕ್ಟಿಕ್ ತುರ್ತಂತೆ. ಮನೆಯಲ್ಲಿ ಟೀವಿಯ ಮುಂದೆ ಅಗಿಷ್ಟಿಕೆಯನ್ನು ಹಚ್ಚಿಕೊಂಡು ಕೂತಿಯಾವೆ.

ಪಕ್ಕದ ಬೀದಿಗೆ ಬಂದ ಮೈಸೂರು ಅಂಕಲ್ ತಮ್ಮ ಪತ್ನಿಯೊಂದಿಗೆ ವಾಕಿಂಗ್ ಹೋಗಲು ಪ್ರಯತ್ನವನ್ನೇನೋ ನಡೆಸಿದ್ದಾರೆ. ಮಕ್ಕಳು ಮನೆಯಲ್ಲಿಲ್ಲವೇನೋ. ಲಕ್ಷಣವಾಗಿ ಸೀರೆಯುಟ್ಟು, ತಲೆಗೊಂದು ಮಂಕಿಕ್ಯಾಪ್ ಮತ್ತು ಮಫ್ಲರ್, ಕಾಲಿಗೆ ಹಾಕಿದ ಪೂಮ ಶೂಗಳು,ಹಾಕಿದ್ದ ಉಣ್ಣೆಯ ಮುಖಕವಚದಿಂದ ಸಣ್ಣಗೆ ಕಾಣುತ್ತಿರುವ ಗಟ್ಟಿ ಸ್ಟಿಕ್ಕರಂತಾಗಿರುವ ಕೇವಲ ಕೆಲ ಸಮಯದ ಹಿಂದೆ ಬೇಸ್‌ಮೆಂಟಿನ ದೇವರಮನೆಯಲ್ಲಿ ಕುಂಕುಮಾರ್ಚನೆ ಮಾಡಿ ನೊಸಲಿಗೆ ಹಚ್ಚಿದ ಹುಡಿಗುಂಕುಮ. ಒಂದು ಹೆಜ್ಜೆ ಮುಂದಿಟ್ಟರೆ ಎರಡು ಹೆಜ್ಜೆ ಹಿಂದಿಡುವ ಹಾಗೂ ಬಿದ್ದು ಕಾಲು ಮುರಿದುಕೊಂಡರೆ ವಿಮಾ ಕಂಪೆನಿಗಳು ಕವರ್ ಮಾಡದ ಕಾಯಿಲೆಗಳು ನೆನಪು.

ಇನ್ನೆರಡು ನಿಮಿಷದ ನಂತರ ನೋಡಿದಾಗ ಇಬ್ಬರೂ ವಾಪಸ್ಸು ತಮ್ಮ ಮನೆಗೆ ಸ್ವಸ್ಥ ತೆರಳುತ್ತಿರುವುದನ್ನು ನೋಡಿ ಏನೋ ಸಮಾಧಾನ. ಮೈಸೂರಿನ ಚಳಿಯಲ್ಲಿಯೇ ವಾಕಿಂಗ್ ಹೋಗದ ಈ ದಂಪತಿಗಳನ್ನು ಮನೆಯೊಳಗೆ ಇರಿಸಿಕೊಳ್ಳದಾರದಷ್ಟು ಮೌನವೇ ಮನೆಯೊಳಗೆ. ಆದರೆ, ಆ ಮೌನಕ್ಕೆ ಈ ಮೌನ ಉತ್ತರವಲ್ಲ ಎನ್ನುವುದರ ಪ್ರಮಾಣೀಕರಣ. ಸಾಕ್ಷಿಸಮೇತ.
More

%d bloggers like this: