ಜೂಜಿಗೆ ಕೂತವರ ಜುಜುಬಿ ಆಸೆಗಳು…

-ಡಿ ಎಸ್ ರಾಮಸ್ವಾಮಿ

ಕನ್ನಡ ಬ್ಲಾಗರ್ಸ್
car0344
ಮಗ(೪೦)

ದರಿದ್ರದ ಈ ಶೇರುಮಾರುಕಟ್ಟೆಯ ಬೆನ್ನು ಹತ್ತಿ ಹಾಳಾಗಿ ಹೋದೆ. ಅಪ್ಪ ಅದೆಷ್ಟೋ ವರ್ಷಗಳಿಂದ ಕಟ್ಟಿಕೊಂಡುಬಂದಿದ್ದ ನಮ್ಮ ಈ ವ್ಯವಹಾರದ ಕೋಟೆಗೆ ಶತ್ರು ಲಗ್ಗೆ ಇಟ್ಟ ಹಾಗಾಗಿದೆ. ಬರಬೇಕಾಗಿರುವ ಬಾಕಿಯ ವಸೂಲಿಗೆ ಹೋದರೆ ಅವರೂ ಇದೇ ಕಾರಣ ಕೊಡುತ್ತಾರೆ. ಅಂಗಡಿಯದ್ದು ಇದೇ ಹಣೆಬರಹ. ಅದೇನೋ ಹಿಂಜರಿತವಂತೆ. ಬ್ಯಾಂಕಿನವರು ಓಡಿಯ ಮಿತಿ ಹೆಚ್ಚಿಸುತ್ತಿಲ್ಲ. ತೆರಿಗೆ ಕಟ್ಟಿದ್ದು, ವ್ಯವಹಾರದ ಒಟ್ಟು ವಿವರ ಕೇಳುತ್ತಾರೆ. ಅವರು ಕೇಳಿದರು ಅಂತ ಕೊಟ್ಟರೆ ನಾಳೆ ಅದೇನಾದರೂ ಆ ದರಿದ್ರದ ಟ್ಯಾಕ್ಸ್‌ನವರಿಗೆ ಸಿಕ್ಕರೆ ಮುಗಿದೇ ಹೋಯಿತು. ಮೊನ್ನೆ ಅದೇನೋ ಪ್ರೊಫೆಷನ್ ತೆರಿಗೆ ಕಟ್ಟಿಲ್ಲ ಅಂತ ಆಗಲೇ ನೋಟಿಸು ಕೊಟ್ಟು ಗುಟುರು ಹಾಕಿ ಹೋಗಿದ್ದಾರೆ. ಮಾತುಕತೆಗೆ ಅವಕಾಶವೇ ಕೊಡದ ಹಾಗೆ ಒಂದೇ ಸಮನೆ ಹೀಗೆ ಸರ್ಕಾರ ದಿನಕ್ಕೊಂದು ಕಾನೂನು ಬದಲಿಸುತ್ತಲೇ ಹೋದರೆ ನನ್ನಂಥವರ ಗತಿ ಏನು? ಅಂಗಡಿ ಕೆಲಸಗಾರರ ಕಣ್ಣು ಆಗಲೇ ಕೆಂಪಾಗಿದೆ, ಈ ವರ್ಷ ಇನ್ನೂ ಅವರಿಗೆ ಬೋನಸ್ ಬೇರೆ ಕೊಟ್ಟಿಲ್ಲ. ಸಂಬಳ ಹೆಚ್ಚಿಸು ಅಂತ ಸುಧಾಕರ ಅವರ ಮುಂದೇ ಹೇಳುತ್ತಾನೆ.

ನನಗೂ ಸಾಕು ಸಾಕಾಗಿ ಹೋಗಿದೆ. ಅಪ್ಪ ಕಟ್ಟಿ ಬೆಳಸಿದ ವ್ಯವಹಾರ ಅಂತ ಇಷ್ಟು ದಿನ ಬೆನ್ನಿಗೆ ಕಟ್ಟಿಕೊಂಡು ಓಡಾಡಿದ್ದು ಸಾಕು. ಲಾಭಕ್ಕಿಂತ ಟೆನ್ಶನ್ನೆ ಹೆಚ್ಚು. ಮನೆ, ಮನೆತನ, ಅಂತೆಲ್ಲ ಖುಷಿ ಪಡುವ ಕಾಲ ಇದಲ್ಲ. ಮೊನ್ನೆ ಮೊನ್ನೆ ಇಂಜಿನಿಯರಿಂಗ್ ಮುಗಿಸಿದ ಹುಡುಗರೇ ತಿಂಗಳಿಗೆ ಹತ್ತಿರ ಹತ್ತಿರ ಐವತ್ತು ಸಾವಿರ ಸಂಬಳ ತೆಗೆದುಕೊಳ್ಳುತ್ತಿರುವಾಗ, ಇಡಿ ವ್ಯವಹಾರ ನೋಡಿಕೊಳ್ಳುತ್ತಿರುವ ನನ್ನ ಸ್ವಂತಕ್ಕೆ ಜುಜುಬಿ ಮೂವತ್ತು ಸಾವಿರ ಖರ್ಚು ತೋರಿಸಿದರೆ ಒಡಹುಟ್ಟಿದ ತಮ್ಮನಾಗಿದ್ದರೂ ಈ ಸುಧಾಕರ, ಪಾರ್ಟ್‌ನರ್ ಎಂಬ ಏಕೈಕ ಕಾರಣಕ್ಕೆ ನನ್ನ ಮೇಲೆ ಅದೆಷ್ಟೆಲ್ಲ ಕೂಗಾಡಿದ. ತ್ಯಾಗ, ಬಲಿದಾನ ಏನೇನೋ ಮಾತಾಡುತ್ತಾನೆ. ಅವನೇನೋ ಆ ಸುಡುಗಾಡು ಸಮಾಜವಾದ ಹೇಳಿಕೊಂಡು ತಿರುಗಬಹುದು. ಇರುವುದನ್ನೆಲ್ಲ ಇಲ್ಲದವರಿಗೆ ಕೊಡಿ ಅಂತಾನಲ್ಲ, ಆಮೇಲೇನು ತೌಡು ತಿನ್ನುತ್ತಾನೋ? ಸ್ವಲ್ಪವೂ ಜವಾಬ್ದಾರಿ ಇಲ್ಲದೆ ಕೋಣನ ಹಾಗೆ ಬೆಳೆದುಬಿಟ್ಟ. ಮದುವೆ ಬೇಡವಂತೆ. ಅಪ್ಪನ ಶ್ರಮ ಬೇಡ, ಅವರ ಆದರ್ಶ ಬೇಡ, ಅವರು ಕಟ್ಟಿ ಬೆಳಸಿದ ಬಂಡವಾಳದ ಮೇಲೆ ಹಕ್ಕು ಚಲಾಯಿಸುತ್ತಾನೆ. ನಾನೇನಾದರೂ ಇವನ ಸುಪರ್ದಿಗೆ ವ್ಯವಹಾರ ಬಿಟ್ಟು ಕೊಟ್ಟರೆ ಮಾರನೇ ವರ್ಷವೇ ನಮಗೆಲ್ಲ ಕೂಳಿಲ್ಲದಂತೆ ಮಾಡಿಬಿಡುತ್ತಾನೆ. ಹೋದ ವರ್ಷ ಇವನ ಮಾತು ಕೇಳಿ ಅದೇನೋ ಕಂಪ್ಯೂಟರು ತಂದು ನಮ್ಮ ಅಂಗಡಿಗೆ ಹಾಕಿದ್ದೇ ಬಂತು. ಅಂಗಡಿಯ ರೈಟರಿಗೂ ಗೊತ್ತಾಗದ ಹಾಗೆ ನಾವು ಹಿಂದಿನಿಂದ ಬರೆದುಕೊಂಡು ಬಂದಿದ್ದ ಎರೆಡೆರಡು ಲೆಕ್ಕ ಎಲ್ಲರಿಗೂ ಗೊತ್ತಾಗಿ ಬಿಟ್ಟಿತು. ನನಗೋ ಆ ಕಂಪ್ಯೂಟರು ಯಾಕೋ ದೇವಲೋಕದಿಂದ ಎದ್ದುಬಂದ ಸತ್ಯ ಪ್ರತಿಪಾದಕನ ಹಾಗೆ ಕಾಣುತ್ತೆ. ಒಂದೇ ಒಂದು ಸಣ್ಣ ತಪ್ಪೂ ದೊಡ್ಡದಾಗಿ ಬಿಡುತ್ತೆ. ಲೆಕ್ಕವೇನೋ ಸರಿ, ಆದರೆ ಜೀವನ ಹಾಗಲ್ಲವಲ್ಲ.

ಹೇಗಾದರೂ ಮಾಡಿ ಈ ಸಮಸ್ಯೆಗಳಿಗೆಲ್ಲ ಒಂದು ಪರಿಹಾರ ಕಂಡುಕೊಂಡು ಮತ್ತೆ ನಮ್ಮ ಮನೆತನದ ಕಸುಬಿಗೆ ಹೊಸ ಅಂದ-ಆಕಾರ ಕೊಡಬೇಕೆಂದರೆ ಬಂಡವಾಳ ಹೂಡಬೇಕು. ಅಪ್ಪನ ಹೆಸರಲ್ಲಿರುವ ಊರ ಪಕ್ಕದ ಜಮೀನನ್ನೆಲ್ಲ ಸೈಟು ಮಾಡಿ ಮಾರಿದರೆ ಕೋಟಿಗಟ್ಟಲೆ ಬಾಚಬಹುದು. ಅದಕ್ಕೆ ಅಪ್ಪ ಅವರ ಕಾಲದಲ್ಲೆ ಅಲಿನೇಷನ್, ಖಾತೆ ಇತ್ಯಾದಿ ಮಾಡಿಸಿದ್ದಾರೆ. ಆದರೆ ಮಾರಾಟ ಮಾಡಬೇಕೆಂದರೆ ಅಪ್ಪ ಒಪ್ಪುತ್ತಲೇ ಇಲ್ಲ. ಜೊತೆಗೆ ಈ ಸುಧಾಕರನ ವಿರೋಧ ಬೇರೆ. ಅದನ್ನೆಲ್ಲ ಅಮ್ಮನ ಹೆಸರಲ್ಲಿರುವ ಟ್ರಸ್ಟಿಗೆ ವರ್ಗಾಯಿಸಿ ಬಡವರಿಗೆ ಹಂಚೋಣ ಅಂತಾನೆ. ಅದೇನು ಹುಚ್ಚು ಹಿಡಿದಿದೆಯೋ ಇವನಿಗೆ? ಟ್ರಸ್ಟು ಮಾಡಿದ್ದು ಬರೀ ತೆರಿಗೆ ತಪ್ಪಿಸಿಕೊಳ್ಳಲು ಅಂತ ಬಾಯಿ ಬಿಟ್ಟು ಹೇಳುಕ್ಕಾಗುತ್ತಾ, ಈ ಕತ್ತೆಗೆ? ಇದರ ಮಧ್ಯೆ ಅಪ್ಪನಿಗೆ ಅನಾರೋಗ್ಯ. ಚೆನ್ನಾಗೇ ಇದ್ದವರಿಗೆ ಇದ್ದಕ್ಕಿದ್ದಂತೆ ಎದೆನೋವು ಬಂದು ಕುಸಿದು ಬಿದ್ದು, ಆಸ್ಪತ್ರೆಗೆ ಸೇರಿಸಿ ಈವತ್ತಿಗೆ ಎಂಟು ದಿನ ಆಯ್ತು. ಹರ ಇಲ್ಲ, ಶಿವ ಇಲ್ಲ. ಆಗಲೇ ಎರಡು ಸಾರಿ ಐವತ್ತು ಸಾವಿರದಂತೆ ಆಸ್ಪತ್ರೆಗೆ ಕಟ್ಟಿದ್ದೇನೆ. ಐ.ಸಿ.ಯು ದಲ್ಲಿದ್ದಾರೆ ಅಂತ ಗೊತ್ತೇ ವಿನಾ ಏನಾಗಿದೆ ಅಂತ ಆ ಡಾಕ್ಟರಿಗೇ ಗೊತ್ತಿದೆಯೋ ಇಲ್ಲವೋ? ಕೇಳಿದರೆ ಕೈ ಮೇಲೆತ್ತಿ ಆಕಾಶ ನೋಡುತ್ತಾರೆ. ಅದೇನೇನೋ ಟೆಸ್ಟು, ಬಯಾಪ್ಸಿ ಅಂತ ಗೋಳಾಡಿಸುತ್ತಲೇ ಇದ್ದಾರೆ. ಸದ್ಯ ಲ್ಯಾಬೂ ಇಲ್ಲೇ ಇರುವುದರಿಂದ ಸ್ವಲ್ಪ ಓಡಾಟ ತಪ್ಪಿದೆ. ಆ ಸುಧಾಕರನಾದರೂ ಇಲ್ಲಿ ಬಂದು ಆಸ್ಪತ್ರೆಯಲ್ಲಿದ್ದರೆ ಕೊಂಚ ಬಿಡುವಾಗುತ್ತಿತ್ತು. ಅದೇನೋ ನಕ್ಸಲೈಟು ಸಮಸ್ಯೆ ತನ್ನದೇ ಅನ್ನುವ ಹಾಗೆ ಅವನು ಮೂಡಿಗೆರೆಗೆ ಹೋಗಿ ಹತ್ತು ದಿನ ಆಯ್ತು. ಅವನ ಸುದ್ದಿಯೇ ಇಲ್ಲ. ಸದ್ಯ, ಅಪ್ಪ ಹುಷಾರಾಗಿ ಮನೆಗೆ ಬಂದರೆ ಸಾಕಾಗಿದೆ. ಅವರು ಮನೆಗೆ ಬಂದು ಪಾಲು ಪಾರೀಕತ್ತು ಆಗಿ ನಮ್ಮ ನಮ್ಮ ಹೆಸರಿಗೇ ಆಸ್ತಿ ಜಮೀನು ಹಂಚಿಕೆಯಾಗಿಬಿಟ್ಟರೆ ಸಾಕು. ಇಲ್ಲಾಂದ್ರೆ ಈ ಸುಧಾಕರ ನನ್ನ ವಿರುದ್ಧ ಕೋರ್ಟಿಗೆ ಹೋದರೂ ಹೋದನೇ?

ಒಂದು ವಿಷಯ; ಒಡಹುಟ್ಟಿದ ತಮ್ಮನಿಗೆ, ಕಟ್ಟಿಕೊಂಡ ಹೆಂಡತಿಗೆ, ಹುಟ್ಟಿಸಿದ ಅಪ್ಪನಿಗೂ ಹೇಳದೇ ಒಳಗೇ ಇಟ್ಟುಕೊಂಡಿರುವ ಗುಟ್ಟು ನಿಮಗೆ ಹೇಳುತ್ತಿದ್ದೇನೆ. ಅದೇ ಆಗಲೇ ಹೇಳಿದೆನಲ್ಲ. ಆ ಸುಡುಗಾಡು ಶೇರು ಮಾರುಕಟ್ಟೆಯಲ್ಲಿ ಹಣ ಮಾಡಲು ಹೋಗಿ ಇದ್ದುದನ್ನೆಲ್ಲ ಕಳಕೊಂಡಿದ್ದೇನೆ. ಜೊತೆಗೆ ವ್ಯವಹಾರವೂ ಸ್ವಲ್ಪ ಟೈಟೇ ಆಗಿದೆ. ನಮಗೆ ಬರಬೇಕಾದ ಬಾಕಿ ಕೇಳಿದರೆ ಸಮಯ ಕೇಳುತ್ತಾರೆ. ನಾವು ಕೊಡಬೇಕಾದವರು ಕುತ್ತಿಗೆ ಮೇಲೆ ಕೂತಿದ್ದಾರೆ. ಪಾಲು ಅಂತ ಇನ್ನೂ ಆಗದೇ ಇದ್ದರೂ ಅಪ್ಪ ತಮ್ಮ ಸ್ವಯಾರ್ಜಿತವನ್ನೆಲ್ಲ ಸದ್ಯ ಈಗ ವ್ಯವಹಾರ ನೋಡುಕೊಳ್ಳುತ್ತಿರುವ ನನಗೇ ಕೊಡಬಹುದು. ಜಮೀನು, ತೋಟ ಸುಧಾಕರನಿಗೆ. ಅಪ್ಪ ತಮ್ಮ ಹೆಸರಲ್ಲಿ ಬ್ಯಾಂಕಲ್ಲಿರುವ ಡಿಪಾಸಿಟ್ಟಿಗೆ ನನ್ನ ತಂಗಿ ಸುಧಾಗೆ ನಾಮಿನೇಶನ್ ಮಾಡಿರುವುದರಿಂದ ಅದರ ಆಸೆ ಬಿಟ್ಟಹಾಗೇ! ಅಮ್ಮನ ಒಡವೆ ಸುಧಾಕರ ಮದುವೆ ಆಗದಿದ್ರೆ ಇವಳಿಗೇ ಸೇರುತ್ತೆ.

ಸೊಸೆ (೩೨)

ನನಗಂತೂ ಸಾಕು ಸಾಕಾಗಿ ಹೋಗಿದೆ. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವ ತನಕ ಮಾವನ ಆರೋಗ್ಯ ಕೇಳಿಕೊಂಡು ಬರುವ ಜನ, ಜೊತೆಗೆ ಫೋನುಕಾಲುಗಳು. ಬಂದವರಿಗೆ ಕಾಫಿ, ತಿಂಡಿ. ಊಟ. ಅಡುಗೆ ಕೆಲಕ್ಕೆ ಆಳಿದ್ದರೂ ಮೇಲಿನ ನಿಗಾ ನಾನೇ ನೋಡಬೇಕು. ಹಿರೀ ಸೊಸೆ ಆಗಬಾರದು, ಅದೂ ಈ ಹೆಸರುವಾಸಿ ಮನೆತನಕ್ಕೆ. ಏನೇ ಕೆಟ್ಟರೂ ಬಂದ ಸೊಸೆಯರನ್ನೇ ಬೊಟ್ಟು ಮಾಡಿ ತೋರುತ್ತೆ ಈ ಸಮಾಜ. ಪಾಪ, ಇವರೂ ಒಳ್ಳೆಯವರೇ. ನನ್ನನ್ನಂತೂ ರಾಣಿಯ ಹಾಗೇ ಮೆರಸುತ್ತಾರೆ. ಹಾಕಿದ ಗೆರೆ ದಾಟುವುದಿಲ್ಲ. ಎಷ್ಟೋ ದಿನ ನಾನು ಆಸ್ಪತ್ರೆಗೆ ಹೋಗುವುದಕ್ಕೇ ಆಗುವುದಿಲ್ಲ. ಅಷ್ಟು ಕೆಲಸ, ಕೆಲಸ. ಇರುವ ಒಬ್ಬ ಮಗ ಬೆಂಗಳೂರಿನಲ್ಲಿ ಸೆಕೆಂಡ್ ಸ್ಟಾಂಡರ್ಡ್ ಓದುತ್ತಿದ್ದಾನೆ. ಅದೂ ನನ್ನ ಅಣ್ಣನ ಮನೇಲಿ. ಇಷ್ಟು ಸಣ್ಣ ವಯಸ್ಸಲ್ಲಿ ಅಪ್ಪ ಅಮ್ಮನಿಂದ ದೂರವಾಗಿ ಪಾಪ ಒಂದೇ ಇದೆ. ಈ ದರಿದ್ರದ ಊರಲ್ಲಿ ಇದ್ದರೆ ಇವರ ಹಾಗೇ ಅವನೂ ಅಂಗಡಿ ಲೆಕ್ಕ ಬರೆಯಬೇಕಾದೀತು ಅಂತ ಅಣ್ಣನೇ ಇವರಿಗೆ ತಿಳುವಳಿಕೆ ಹೇಳಿ ಕರೆದುಕೊಂಡು ಹೋಗಿದ್ದಾನೆ. ಅವನು ಕರೆದ ಅಂತ ಕಳಿಸಿ ಸುಮ್ಮನಿರುಕ್ಕಾಗುತ್ಯೇ? ಹಾಸ್ಟೆಲ್ಲಿಗೆ ಬಿಟ್ಟಿದ್ದರೆ ಖರ್ಚು ಬರುತ್ತಿತ್ತು ತಾನೆ ಅಂತ ಮಾವನೇ ತಿಂಗಳು ತಿಂಗಳೂ ದುಡ್ಡು ಕಳಿಸುತ್ತಾರೆ. ಮಗು ಇಲ್ಲೇ ಇದ್ದಿದ್ದರೆ ನನ್ನ ಶ್ರಮ ಇನ್ನೂ ಹೆಚ್ಚುತ್ತಿತ್ತು. ಅರಸನ ಅಂಕೆ ದೆವ್ವದ ಕಾಟವಿಲ್ಲದ ಮನೆ ಅಂತ ಅಮ್ಮ ಏನೋ ಅಭಿಮಾನ ಪಟ್ಟುಕೊಳ್ಳುತ್ತಾಳೆ. ಸತ್ಯ. ಮಾವನೂ ನನ್ನನ್ನು ಮಗಳ ಹಾಗೇ ನೋಡಿಕೊಂಡಿದ್ದಾರೆ. ಉಂಡ ಅನ್ನ ಅಲುಗದ ಹಾಗೆ ಜೋಪಾನ ಮಾಡಿದ್ದಾರೆ. ಆದರೆ ಈ ಮೈದುನ ಅನ್ನಿಸಿಕೊಂಡ ದಡ್ಡ ಮಾತ್ರ ಹೇಗಿರಬೇಕೋ ಹಾಗಿರದೇ ಆದರ್ಶದ ಹುಚ್ಚಲ್ಲಿ ಈಜುತ್ತಿದ್ದಾನೆ. ಹುಟ್ಟುವಾಗ ಚಿನ್ನದ ಚಮಚೆ ಇಟ್ಟುಕೊಂಡು ಹುಟ್ಟಿದ್ದರೂ ಕೈಬೆರಳಲ್ಲೇ ಊಟ ಮಾಡುತ್ತಾನೆ. ಅವನೋ, ಅವನ ದೊಗಲೆ ಜುಬ್ಬಾಗಳೋ ದೇವರೇ ಮೆಚ್ಚಬೇಕು. ಇವರಿಗೂ ಅಂಗಡಿಯ ಲೆಕ್ಕಪತ್ರದ ವಿಷಯದಲ್ಲಿ ಎದಿರಾಡುತ್ತಾನಂತೆ. ಮನೆಯಲ್ಲೂ ಖರ್ಚು ಕಡಿಮೆ ಮಾಡಿ ಅಂತ ಕೂಗುತ್ತಲೇ ಇರುತ್ತಾನೆ. ಕಾರಲ್ಲಿ ತಿರುಗುವುದು ಅವನ ಪ್ರಕಾರ ತಪ್ಪು. ದೇಶಕ್ಕೆ ನಷ್ಟ ಅಂತ ಏನೇನೋ ಹೇಳ್ತಾನೆ. ನಮ್ಮ ಕಾರಿಗೆ, ನಮ್ಮ ದುಡ್ಡಲ್ಲಿ ಪೆಟ್ರೋಲು ಹಾಕಿಸಿಕೊಂಡು ತಿರುಗಿದರೆ ಇವನ ಗಂಟೇನು ಹೋಗತ್ತೆ? ಮದುವೆ ಬೇರೆ ಆಗಲ್ಲ ಅಂತಾನೆ, ಪಾಪ ಅನ್ನಿಸುತ್ತೆ. ಆದರೂ ವಾರಗಿತ್ತಿಯ ಜೊತೆ ಏಗುವ ಕಷ್ಟವಿಲ್ಲವಲ್ಲ ಅಂತ ಸಮಾಧಾನವೂ ಆಗುತ್ತೆ. ಸುಧಾಕರ ಹಾಗೆ ನೋಡಿದರೆ ಒಳ್ಳೆ ಹುಡುಗನೇ! ಅವನು ಒಪ್ಪಿದ್ದರೆ ನಮ್ಮ ಚಿಕ್ಕಪ್ಪನ ಮಗಳು ಶಾಂಭವಿಯನ್ನೇ ತಂದುಕೊಳ್ಳಬಹುದು ಅಂತ ಮಾವನೇ ಹೇಳಿದ್ದರು. ಅಮ್ಮನಿಗೂ ಸಂಬಂಧ ಇಷ್ಟವಾಗಿತ್ತು. ಈ ಕೋತಿ ಮದುವೆಯೇ ಬೇಡವೆನ್ನುತ್ತಾನೆ. ರಾತ್ರಿ ಹಗಲೂ ಓದುತ್ತಲೇ ಇರುತ್ತಾನೆ. ನನ್ನ ಹತ್ತಿರ ಅತಿ ಗೌರವದಿಂದಲೇ ನಡೆದುಕೊಳ್ಳುತ್ತಾನೆ. ಮನೆಯಲ್ಲಿರುವಾಗ ಇವರ ಹತ್ತಿರ ಸದರವಾಗಿ ನಡೆದುಕೊಂಡಿದ್ದು ನಾನು ನೋಡೇ ಇಲ್ಲ. ಅಣ್ಣ ತಮ್ಮರ ನಡುವೆ ಸಾಕಷ್ಟು ಅಭಿಪ್ರಾಯ ಬೇಧ ಇರುವ ಹಾಗೆ ಕಾಣುತ್ತೆ. ಅದೇನೋ ಇವರು ನಾನು ಬಲ, ಅವನು ಎಡ ಅಂತಾರೆ. ಹಾಗಂದ್ರೇನೋ ನಂಗಂತೂ ಗೊತ್ತಾಗುಲ್ಲ. ಇವರೇ ಅವನನ್ನು ಎಂಬಿಎ ಮಾಡಲು ಹೇಳಿದರಂತೆ. ಸುಳ್ಳು ಹೇಳುವುದನ್ನು ಕಲಿಯಲು ಅಷ್ಟೊಂದು ಖರ್ಚು ಮಾಡಬೇಕಾ ಅಂತ ಅಂದನಂತೆ. ನಮ್ಮ ವ್ಯವಹಾರಕ್ಕೆ ಅನುಕೂಲವಾಗುತ್ತೆ ಅಂತ ಇವರು ಹೇಳಿ ಮಾವನಿಂದಲೂ ಹೇಳಿಸಿದರಂತೆ. ಆಸಾಮಿ ಜಪ್ಪಯ್ಯ ಅಂದರೂ ತನ್ನ ಹಟ ಬಿಡದೇ ಎಂಎ ಮಾಡಿಕೊಂಡು ಬಂದು ಊರಿನ ಗದ್ದೆ, ತೋಟ ನೋಡಿಕೊಳ್ಳುತ್ತಿದ್ದಾನೆ. ಬೆಂಗಳೂರು, ಮೈಸೂರುಗಳಿಂದ ಅವನನ್ನು ಹುಡುಕಿಕೊಂಡು ಯಾರ್ಯಾರೋ ಬರುತ್ತಲೇ ಇರುತ್ತಾರೆ. ಸಮಾಜವಾದ, ನಕ್ಸಲ್‌ವಾದ, ಸಮಾನತೆ ಅಂತ ಬಂದವರ ಜೊತೆ ಮಾತಾಡುತ್ತಲೇ ಇರುತ್ತಾನೆ. ಲೆಕ್ಕವಿಲ್ಲದಷ್ಟು ಪತ್ರಿಕೆಗಳು ಪೋಸ್ಟಲ್ಲಿ ಬರುತ್ತಲೇ ಇರುತ್ತವೆ. ನಿಮಗೊಬ್ಬರಿಗೇ ಈ ಊರಲ್ಲಿ ಪೋಸ್ಟ್ ಬರೋದು ಅಂತ ಪೋಸ್ಟ್‌ಮ್ಯಾನ್ ಚುಡಾಯಿಸುತ್ತಲೇ ಇರುತ್ತಾನೆ. ಅದೇನೋ ಮಾನವ ಹಕ್ಕೋ ಮತ್ತೊಂದೂ ಅಂದುಕೊಂಡು ಮೂಡಿಗೆರೆಗೆ ಹೋಗಿ ಆಗಲೇ ಹತ್ತು ದಿನ ಆಯ್ತು. ಅವನ ಸುದ್ದಿಯೇ ಇಲ್ಲ. ಮಾವನಿಗೆ ಹುಷಾರು ತಪ್ಪಿರುವುದೂ ಅವನಿಗೆ ಗೊತ್ತಿಲ್ಲ. ಹೇಳೋಣ ಅಂದ್ರೆ ಮೊಬೈಲು ಕೊಳ್ಳದಿರುವ ಹುಚ್ಚು ಆದರ್ಶ ಅವನದ್ದು!
More

%d bloggers like this: