ಇರುವುದೊಂದೇ ಭೂಮಿ

globejpg

ಅಮೆರಿಕಾದ ಬ್ಯಾಕ್‌ಗ್ರೌಂಡಿನಲ್ಲಿರುವ ಒಂದು ಫೋಟೋ ಕಳಿಸಿ..

ಗುರುಪ್ರಸಾದ್ ಕಾಗಿನೆಲೆ ಕನ್ನಡದ ಕಥೆಗಾರರಲ್ಲಿ ಪ್ರಮುಖರು. ಶಿವಮೊಗ್ಗದಿಂದ ನಾಗಮಂಗಲ, ಮೈಸೂರು, ಬಳ್ಳಾರಿ ಮೂಲಕ ಅಮೆರಿಕಾದ ಮಿನೆಸೋಟಾ ತಲುಪಿದ್ದಾರೆ. ಅಲ್ಲಿನ ರಾಚೆಸ್ಟರ್ ನ ಆಸ್ಪತ್ರೆಯಲ್ಲಿ ವೈದ್ಯ.

ಶಕುಂತಲಾ, ನಿರ್ಗುಣ, ವೈದ್ಯ, ಮತ್ತೊಬ್ಬ, ಬಿಳಿಯ ಚಾದರ ಇವರ ಕೃತಿಗಳು. ಉದಯವಾಣಿಯಲ್ಲಿ ತೀರಾ ಭಿನ್ನವಾದ ಅಂಕಣ ಬರೆಯುತ್ತಿದ್ದಾರೆ. ಇವರ ಬರಹದ ಖುಷಿ ಹಂಚಿಕೊಳ್ಳಲು ಒಂದು ಅಂಕಣ ಬರಹ ಇಲ್ಲಿದೆ.

ಅವರ ಎಲ್ಲಾ ಅಂಕಣಗಳನ್ನು ಓದಲು ಭೇಟಿ ಕೊಡಿ: ಸಮಶೀತೋಷ್ಣ

larry_pesce

ಸಾಹಿತಿಗಳ ಚಿತ್ರ

-ಗುರುಪ್ರಸಾದ್ ಕಾಗಿನೆಲೆ

ಮನೆಯ ಹಿಂದಿನ ಡೆಕ್ಕಿನ ಮೇಲೆ ನಿಲ್ಲುತ್ತೇನೆ. ಈ ಶರಟು ಸರಿಯಿಲ್ಲ, ಬದಲಿಸಿಕೊಂಡು ಬಾ ಎನ್ನುತ್ತಾಳೆ, ಮಗಳು. ಪುಸ್ತಕದ ಹಿಂಬದಿಯ ಹೊದಿಕೆಯ ಮೇಲೆ ಇರುವ ಚಿತ್ರವಾದರೆ ಅದು ಚೆನ್ನಾಗಿರಬೇಕು. ಯಾವುದೋ ಸಾಪ್ತಾಹಿಕಕ್ಕಲ್ಲವಾ, ಒಂದು ದಿನ ಇರೋದು ತಾನೇ. ಅದಕ್ಕೆ ಇಷ್ಟೊಂದು ಕಷ್ಟಯಾಕೆ?, ಬೇಗ ಮುಗಿಸಿ ಎಂದು ಹೆಂಡತಿ ಅವಸರ ಮಾಡುತ್ತಾಳೆ. ಬಕ್ಕತಲೆಯವರಿಗೆ ಪ್ರೊಫೈಲೇ ಚಂದ ಎಂದು ಮಗಳು ನಿಧಾನವಾಗಿ ಈಕಡೆ ತಿರುಗಿಸಿ ನಿಲ್ಲಿಸುತ್ತಾಳೆ. ಹೊರಗೆ ಬಿಸಿಲು ಚೆನ್ನಾಗಿದೆ. ಒಂದು ನಾಲ್ಕು ಐದು ಬೇರೆಬೇರೆ ಪೋಸಿನಲ್ಲಿ ತೆಗೆದುಬಿಡೋಣ ಎಂದು ಹೇಳಿ, ನಾಲ್ಕು ಫೋಟೋಗಳನ್ನು ತೆಗೆಯುತ್ತಾಳೆ. ಎಸ್ಸೆಲ್ಲಾರ್ ಇದ್ದಿದ್ದರೆ ಅದರ ಮಜಾನೇ ಬೇರೆ, ಏಯ್ಮ್ ಅಂಡ್ ಶೂಟ್‌ನ ಹಣೆಬರಹವೇ ಇಷ್ಟು ಎಂದು ತನಗೆ ಒಳ್ಳೆಯ ಕ್ಯಾಮೆರಾ ಕೊಡೆಸದಿದ್ದಕ್ಕೆ ನನ್ನನ್ನೇ ಮೂದಲಿಸುತ್ತಾಳೆ. ಬಿಸಿಲು ನನ್ನ ಹಣೆಯ ಮೇಲೆ ಬೆವರಹನಿಗಳನ್ನು ಪೋಣಿಸುತ್ತದೆ. ತೆಗೆದ ಫೋಟೋಗಳನ್ನು ತಾನೇ ನೋಡಿ ಸಮಾಧಾನವಾಗದೇ ಒಳಗೆ ಹೋಗಿ ಎರಡು ಜತೆ ಶರಟನ್ನು ತರುತ್ತಾಳೆ. ಬದಲಿಸಿ, ಬದಲಿಸಿ ಮತ್ತೆ ತೆಗೆಯುತ್ತಾಳೆ. ಫೋಟೋ ಸುಮಾರಾಗಿ ಬಂದಿದೆ, ಎಂದನಿಸುತ್ತದೆ, ನನಗೆ. ಮಗಳೇ ‘ಇದು ಸರಿಯಾಗಿದೆ.’ ಎಂದು ನಿರ್ಧರಿಸಿ ಅಪ್‌ಲೋಡ್ ಮಾಡುತ್ತಾಳೆ. ಅದನ್ನು ಕಳಿಸುತ್ತೇನೆ.

ಮಾರನೆಯ ದಿನ ಮ್ಯಾಗಜೀನಿನಿಂದ ಒಂದು ಇಮೈಲ್ ಬರುತ್ತದೆ. ಬಹಳ ವಿನಮ್ರವಾದ ಪತ್ರ ‘ಸರ್, ನೀವು ಅಮೆರಿಕಾದಲ್ಲಿರುವುದೇ ಈ ಫೋಟೋದಿಂದ ಗೊತ್ತಾಗುವುದಿಲ್ಲವಲ್ಲ ಸರ್. ಸ್ವಲ್ಪ ಅಮೆರಿಕಾದ ಬ್ಯಾಕ್‌ಗ್ರೌಂಡಿನಲ್ಲಿರುವ ಒಂದು ಫೋಟೋ ಕಳಿಸಿ’ ಎಂದಿದೆ. ಅಮೆರಿಕಾದ ಬ್ಯಾಕ್‌ಡ್ರಾಪೆಂದರೆ ಏನು ಎಂದು ಯಾವುದೋ ಕನ್ನಡದ ಇಂಟರ್ನೆಟ್ ಪೋರ್ಟಲನ್ನು ತೆಗೆದು ನೋಡುತ್ತೇನೆ. ಎಲ್ಲತರದ ಚಿತ್ರಗಳೂ ಕಾಣಿಸುತ್ತವೆ. ಒಬ್ಬಾತ ಸನ್‌ಗ್ಲಾಸಸ್ ಹಾಕಿಕೊಂಡಿದ್ದಾನೆ. ಇನ್ನೊಬ್ಬಾಕೆ ನಯಾಗಾರ ಜಲಪಾತದ ಮೈಡ್ ಆಫ್ ದ ಮಿಸ್ಟ್ ನಲ್ಲಿ ಒದ್ದೆಯಾಗದಂತೆ ರೈನ್‌ಕೋಟು ಗೌನುಗಳನ್ನು ಹಾಕಿಕೊಂಡು ಕೂತಿದ್ದಾಳೆ. ಅಪ್ಪ, ಅಮ್ಮ ಮಕ್ಕಳು ಮತ್ತು ನಾಯಿಮರಿಯ ಜತೆ ಯುನಿವರ್ಸಲ್ ಸ್ಟುಡಿಯೋದ ಮುಂದಿರುವ ಒಂದು ಫೋಟೋವನ್ನು ಇನ್ನೊಬ್ಬಾಕೆ ಕಳಿಸಿದ್ದಾಳೆ. ಸಿಯರ್ಸ್ ಟವರ್, ಎಂಪೈರ್ ಸ್ಟೇಟ್ ಬಿಲ್ದಿಂಗ್, ಗ್ರಾಂಡ್ ಕೆನ್ಯನ್, ಲಾಸ್ ವೆಗಾಸ್, ಇನ್ನೂ ಇತರೇ ಅಮೆರಿಕಾದ ಸ್ಮಾರಕಗಳು ಇಡೀ ಪೋರ್ಟಲ್ಲಿನಲ್ಲಿ ಕಾಣಿಸಿಕೊಂಡಿವೆ. ಜತೆಗೇ ಅವರು ಬರೆದ ಕವನಗಳು, ಪ್ರವಾಸದ ಅನುಭವಗಳು, ಕತೆ, ಅಂಕಣ ॒ಇತ್ಯಾದಿ.

ಇನ್ನೊಂದಿಷ್ಟು ಕಡೆ ಅಡ್ದಾಡಿದಾಗ ಕುಂವೀಯವರು ನ್ಯೂಯಾರ್ಕಿನ ಬೀದಿಯಲ್ಲಿ ನಿಂತಿರುವ ಫೋಟೋ ಕೂಡ ಕಾಣುತ್ತದೆ. ಜಯಂತ ಅಮೆರಿಕಾಕ್ಕೆ ಬಂದಾಗ ಒಂದು ಜ್ಯಾಕೆಟ್ಟನ್ನು ಹಾಕಿಕೊಂಡು ಅಥಿತಿಯೊಬ್ಬರ ಮನೆಯ ಲಾನಿನ ಮೇಲೆ ಕೂತಿರುವ ಫೋಟೊ ಕಾಣಿಸುತ್ತದೆ. ತಮ್ಮ ಬುಲ್ಗಾನಿನ್ ಗಡ್ಡದಿಂದ ಮಿಂಚುತ್ತಿರುವ ಜೋಗಿ, ಮೊಬೈಲನ್ನು ಕಿವಿಗೆ ಹಿಡಿದು ಯಾರದೋ ಜತೆ ಮಾತಾಡುತ್ತಿರುವ ವಸುಧೇಂದ್ರ, ಅಪರ್ಣಾರೊಂದಿಗೆ ಕುತ್ತಿಗೆಗೆ ಸ್ಕಾರ್ಫ್ ಹಾಕಿಕೊಂಡು ಯಾವುದೋ ಕೆತ್ತನೆಯ ಕಂಭದ ಮುಂದೆ ನಿಂತಿರುವ ವಸ್ತಾರೆ, ಮಂಕಿಕ್ಯಾಪಿನಲ್ಲಿ ಚೆಗುವಾರನ ತರ ಕಾಣುವ ದೇವನೂರು ಮಹದೇವ, ಉದ್ದಕೂದಲಿನ ಶ್ರೀರಾಮ್ ಎಲ್ಲರೂ ಕಾಣುತ್ತಾರೆ. ನನ್ನದೂ ಹೆಸರನ್ನು ಹಾಕಿ ಗೂಗಲ್ ಇಮೇಜಸ್‌ನಲ್ಲಿ ಹುಡುಕುತ್ತೇನೆ. ಒಂದೆರಡು ಫೋಟೋಗಳು ಕಾಣುತ್ತವೆ.

More

%d bloggers like this: