ಅಮಿ, ಕಮಲಾ, ಮಾಧವಿಕುಟ್ಟಿ, ಕಮಲಾದಾಸ್, ಕಮಲಾಸುರೈಯ್ಯ..

ಕನ್ನಡದ ಮುಖ್ಯ ಕಥೆಗಾರ್ತಿ. ಗೆಳತಿ ಪಾರ್ವತಿ ಜಿ ಐತಾಳರೊಂದಿಗೆ ಕಮಲಾದಾಸ್ ಅವರನ್ನು ನೋಡಲು ಕೊಚ್ಚಿನ್ ಗೆ ಹೋದ ಅನುಭವವನ್ನು ಬಣ್ಣಿಸಿದ್ದಾರೆ. ಸುಮಿತ್ರಾ ತೆಗೆದ ಅಪರೂಪದ ಫೋಟೋಗಳು ಇಲ್ಲಿವೆ.

‘ಅವಧಿ’ಗೆ ಈ ಲೇಖನವನ್ನು ಕಳಿಸಿಕೊಟ್ಟ ಸುಮಿತ್ರಾ ಅವರಿಗೆ ಥ್ಯಾಂಕ್ಸ್

ಜೀವನ ಪ್ರೀತಿಯ ಮುಖಗಳು

– ಎಲ್ ಸಿ ಸುಮಿತ್ರ

ambalattil mane.jpg(2)

ಅಂಬಳತ್ತಿಲ್ ಮನೆ

naagabana.jpg(2)

ನಲಪತ್ ಮನೆಯ ಹಿಂಭಾಗದಲ್ಲಿರುವ ನಾಗಬನ.  ನೀರ್ಮಾದಲ ಮರವಿರುವುದು ಇಲ್ಲೇ .

kamaladas malagikodE matanaadidaru.jpg(2)

ಕಮಲಾದಾಸ್ ಕೈ ಮುರಿದು ಸುಸ್ತಾಗಿದ್ದ ಕಾರಣ ಮಲಗಿಕೊಂಡೇ ಮಾತನಾಡಿದರು

kamaladas.jpg(2)

ಕಮಲಾದಾಸ್ ತಮ್ಮ ನೆನಪಿಗಾಗಿ ಸುಮಿತ್ರಾ ಅವರಿಗೆ ಕೊಟ್ಟ ಫೋಟೋ

ಕಮಲದಾಸ್ ಅವರ ಕಥೆ ಕವಿತೆಗಳು ಗಂಡು ಹೆಣ್ಣಿನ ಸುತ್ತಲೇ ಯಾಕೆ ಸುತ್ತುತ್ತವೆ, ಅವರು ಬರೆಯಲು ಆರಿಸಿಕೊಂಡ ವಸ್ತುವಿಗೂ ಬರವಣಿಗೆಯ ರೀತಿಗೂ ಕಮಲಾದಾಸ್ ಬೆಳೆದ ಪರಿಸರಕ್ಕೂ ಇರುವ ಸಂಬಂಧ ಯಾವಬಗೆಯದು .ಎಂಬ ಪ್ರಶ್ನೆಗಳು ಹಲವು ಸಲ ನನ್ನನ್ನು ಕಾಡಿವೆ. ಅವರ ಬರಹಗಳ ಕುರಿತು ಇಷ್ಟಾನಿಷ್ಟಗಳೇನೇ ಇದ್ದರೂ ಸ್ತ್ರೀಲೈಂಗಿಕತೆಯ ಕುರಿತ ಮೌನವನ್ನು ಮುರಿದ ಮೊದಲ ಲೇಖಕಿಯರಲ್ಲಿ ಅವರು ಪ್ರಮುಖರು. ನನಗೆ ಇದಕ್ಕಿಂತ ಮುಖ್ಯವಾಗಿ ಕಮಲಾ ಅವರ ಕಥೆಗಳು, ಆತ್ಮಚರಿತ್ರೆಯ ಮೂರು ಭಾಗಗಳಲ್ಲಿ ಬರುವ ಕೇರಳದ ಸಾಂಪ್ರದಾಯಿಕ ಜೀವನ ಕ್ರಮ, ಕಮಲ ಸೂಕ್ಶ್ಮವಾಗಿ ಅದನ್ನು ಅಭಿವ್ಯಕ್ತಿಸುವ ರೀತಿ ಬಹಳ ಮುಖ್ಯವೆನಿಸಿತ್ತು. ಅವರ ಬಾಲ್ಯದ ನೆನಪುಗಳ ನ್ನು ಬಿಟ್ಟರೆ, ಅವರ ಬರವಣಿಗೆಯ ಪುಟಗಳಲ್ಲಿ ನೋವು ಮತ್ತು ವಿಷಾದ ತೊಟ್ಟಿಕ್ಕುತ್ತದೆ. ಅವರ ‘ಮೈ ಸ್ಟೋರಿ’ ಎಂಬ ಆತ್ಮಕಥೆಯಲ್ಲೂ ಗಾಯಗೊಂಡ ಹಕ್ಕಿಯ ರೆಕ್ಕೆಯ ಫಡಫಡಿಸುವ ಸದ್ದೇ ಕೇಳುತ್ತದೆ.

ಕಮಲಾದಾಸ್ ಬರವಣಿಗೆಯನ್ನು ಪ್ರತಿಭಟನೆಯ ಅಸ್ತ್ರವಾಗಿಯೂ ಬಳಸಿದರು. ಕೇರಳದಲ್ಲಿ ಮಾತೃಪ್ರಧಾನ ಕುಟುಂಬವ್ಯವಸ್ಥೆ ಕಮಲಾದಾಸ್ ಅವರ ವಿವಾಹದ ಸಮಯದಲ್ಲೇ ನಿಧಾನವಾಗಿ ಬದಲಾಗುತ್ತಿತ್ತು. ಅವರ ‘ಬಾಲ್ಯಕಾಲದ ನೆನಪುಗಳಲ್ಲಿ” ಸ್ತ್ರೀಯರ ವ್ಯಕ್ತಿತ್ವದ ಕುರಿತು ಆಗಿನ ಸಂದರ್ಭದ ಸಾಂಪ್ರದಾಯಿಕ ಸಮಾಜದ ನಿರೀಕ್ಷೆಗಳನ್ನು ವಿವರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಕೃತಿಗಳಲ್ಲಿ ಮತ್ತೆ ಮತ್ತೆ ಪ್ರಸ್ತಾಪಿತವಾಗಿರುವ ಅವರು ಹುಟ್ಟಿ ಬೆಳೆದ ನಾಲಪ್ಪಟ್ ಮನೆಯನ್ನು, ಕಮಲಾದಾಸ್ ಅವರ ಕೃತಿಗಳಲ್ಲಿ ಚಿತ್ರಿತವಾಗಿರುವ ಪುನ್ನಯೂಕರ್ುಳವೆಂಬ ಊರನ್ನು ನೋಡುವ ಆಸೆಯಿತ್ತು. 2006ನೇ ದೆಸೆಂಬರ್ ನ ಕ್ರಿಸ್ಮಸ್ ದಿನ ನಾವು ಕೊಚ್ಚಿನ್ ನ ಅವರ ಮನೆಯಲ್ಲಿಕಮಲಾದಾಸ್ ಅವರನ್ನು ಭೇಟಿಯಾದೆವು.

ಮಲೆಯಾಳಮ್ ನಲ್ಲಿ ಮಾಧವಿಕುಟ್ಟಿ , ಇಂಗ್ಲಿಷ್ ನಲ್ಲಿ ಕಮಲಾದಾಸ್ ಎಂಬ ಹೆಸರುಗಳಿಂದ ಕತೆ, ಕವಿತೆ ರಚಿಸಿ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿರುವ ಲೇಖಕಿಯನ್ನು ನೋಡಬೇಕೆಂಬ ಕುತೂಹಲದಿಂದ ಫೋನ್ ಮೂಲಕ ಭೇಟಿಯನ್ನು ನಿಗದಿಪಡಿಸಿಕೊಂಡು ನಾನು ಮತ್ತು ಗೆಳತಿ ಪಾರ್ವತಿ ಕೊಚಿನ್ ಗೆ ಹೋದಾಗ ಕಮಲಾದಾಸ್ ಪೂನಾದಲ್ಲಿರುವ ತಮ್ಮ ಕಿರಿಯ ಮಗನ ಹತ್ತಿರದಲ್ಲಿ ವಾಸಿಸುವ ನಿರ್ಧಾರ ಮಾಡಿದ್ದರು. ಕೊಚಿನ್ ನ ‘ಕಡವಂತರ’ದಲ್ಲಿ “ರಾಯಲ್ ಮ್ಯಾನ್ಶನ್” ಅಪಾರ್ತ್ರ್ಮೆಂತ್ ನಲ್ಲಿ ಇಬ್ಬರು ಸೇವಕಿಯರ ಜತೆ ವಾಸಿಸುತ್ತಿದ್ದ ಅವರು ಕೇರಳ ಬಿಟ್ಟು ಪೂನಾಕ್ಕೆ ಹೋದುದನ್ನು ಪತ್ರಿಕೆಗಳು ದೊಡ್ಡ ಸುದ್ದಿ ಮಾಡಿದವು. ನಾವು ಅವರನ್ನು ನೋಡಿದಾಗ ಅವರು ಕೈ ಮೂಳೆ ಮುರಿದಿದ್ದರಿಂದ ಎರಡು ತಿಂಗಳಿಂದ ಹಾಸಿಗೆಯಲ್ಲೇ ವಿಶ್ರಾಂತಿಯಲ್ಲಿದ್ದೇನೆಂದು ಹೇಳಿದರು. ಮಲಗಿದಲ್ಲೇ ಒಂದು ಗಂಟೆ ನಿಧಾನವಾಗಿ ಮಾತನಾಡಿದರು. ‘you have come at the right time. next month I may not be here’ ಎಂದರು.

ಹಾಸಿಗೆಯ ಮೇಲೆ ಅಸಹಾಯಕತೆಯಿಂದ ಮಲಗಿದ್ದ ಕಮಲಾ ಅವರನ್ನು ನೋಡಿದಾಗ ರೆಕ್ಕೆ ಮುರಿದ ಹಕ್ಕಿಯಂತೆನಿಸಿತು. ಮನೆಯ ಹೊರಬಾಗಿಲಲ್ಲಿ ಕಮಲಾದಾಸ್ ಎಂಬ ಬೋರ್ಡ್ ಇದ್ದರೆ ಬೆಡ್ ರೂಮ್ ಬಾಗಿಲಲ್ಲಿ ಕಮಲಾ ಸುರೈಯ್ಯಾ ಎಂಬ ಫಲಕವಿತ್ತು.” ಹೌದು ನಾನು ಹಲವು ಹೆಸರುಗಳನ್ನು ಬಳಸುತ್ತೇನೆ ಮನೆಯಲ್ಲಿ ಅಮಿ, ಕಮಲಾ, ಹೊರಗೆ ಮಾಧವಿಕುಟ್ಟಿ, ಕಮಲಾದಾಸ್, ಕಮಲಾಸುರೈಯ್ಯ ಹೀಗೆ…”

‘ಹೌದು ಕಲ್ಪನೆಗಳು ವಾಸ್ತವಿಕ ಅನುಭವಗಳು ಸೇರಿ ನನ್ನ ಕತೆ ಕವಿತೆಗಳು ಜನಿಸಿವೆ”ಎಂದು ಹೇಳುತ್ತಾ ಮೊಮ್ಮಗಳು ನಯನ ತಾರೆ ಯನ್ನು ನೆನೆಸಿಕೊಂಡರು. ಮೊಮ್ಮಕ್ಕಳು ಪ್ರೀತಿಯಿಂದ ಅಪ್ಪಿಕೊಡಾಗ ಈ ನೋವು ಸ್ವಲ್ಪ ಮರೆಯುತ್ತದೆ. ಕೊಚಿನ್ ನಲ್ಲೇ ಇರುವ ತಂಗಿ ಆಗಾಗ ಬಂದು ಭೇಟಿಯಾಗುತ್ತಾಳೆ, ಡಾಕ್ಟರ್ ಆಗಿರುವ ಇನ್ನೊಬ್ಬ ಸಹೋದರ ತಮ್ಮಂತೆಯೇ ಮೂಳೆ ಮುರಿದುಕೊಂಡು ಮಲಗಿರುವುದಾಗಿ ಹೇಳುತ್ತಾ ‘doctors also fall’ ಅಂದರು.

ತಮ್ಮ ಹಿರಿಯ ಮಗ ಎಂ. ಡಿ. ನಾಲಪತ್ ದೆಹಲಿಯಲ್ಲಿದ್ದು ಅವನು ತಿರುವನಂತಪುರದ ರಾಜಮನೆತನದ ಹುಡುಗಿಯನ್ನು ಮದುವೆಯಾಗಿದ್ದಾನೆ, ಕಿರಿಯಮಗ ಜಯಸೂರ್ಯ ಪೂನಾದಲ್ಲಿ, ಎರಡನೆಯ ಮಗ ಬೆಂಗಳೂರಿನಲ್ಲಿ ಇರುವುದಾಗಿ ಹೇಳಿದರು. ತಮ್ಮ ಸೊಂಪಾದ ತಲೆಗೂದಲ ಬಗ್ಗೆ ಅಭಿಮಾನವಿದ್ದ ಕಮಲಾ ದಾಸ್ ಗೆ ದೆಹಲಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ವೇಳೆ ತಲೆಗೂದಲು ಕತ್ತರಿಸಿದ ಕುರಿತು ಬೇಸರ. ನಾವು ಪುನ್ನಯೂರ್ ಕುಳಕ್ಕೆ ಹೋಗುತ್ತೇವೆಂದಾಗ “ಅಲ್ಲಿ ನಾಗಬನ ಮತ್ತು ನೀರ್ಮಾದಳ ಮರ ಬಿಟ್ಟು ಇನ್ನೇನೂ ಉಳಿದಿಲ್ಲ” ಎಂದು ನಿಟ್ಟುಸಿರಿಟ್ಟರು.

ತನ್ನ ಪಾಲಿಗೆ ಬಂದಿದ್ದ “ನಲ್ಲಪಾಟ್ “ಮನೆಯನ್ನೂ ನೋಡಿಕೊಳ್ಳಲಾಗುವುದಿಲ್ಲ ಎಂದು ತಾವು ಮಾರಿದಂತೆ ತಂಗಿ ಸಹಾ ತಂದೆ ಕಟ್ಟಿಸಿದ್ದ ಸರ್ವೋದಯ ಹೆಸರಿನ ಮನೆಯನ್ನು ಮಾರಿದಳು. ಕೊಂಡವರು ಆ ಮನೆಗಳನ್ನು ಕೆಡವಿದ್ದರಿಂದ ಈಗಲ್ಲಿ ಏನೂ ಇಲ್ಲ ಎಂದಾಗ ಅವರ ದನಿಯಲ್ಲಿ ವಿಷಾದವಿತ್ತು

ಮನೆಯ ಮೆಟ್ಟಿಲಿಳಿದು ಬರುವಾಗ 1 ಬಿ. ಕಮಲಾದಾಸ್ ಎಂದು ಬರೆದಿದ್ದ ನೇಮ್ ಪ್ಲೇಟ್ ಕಾಣಿಸಿತು. ಈ ನೇಮ್ ಪ್ಲೇಟ್ ಇನ್ನು ಕೆಲವೇದಿನಗಳ ನಂತರ ಇಲ್ಲಿರುವುದಿಲ್ಲ ಎಂದು ಹೊಳೆದಾಗ ವಿಷಾದವೆನಿಸಿತು.

* * * *

“ಬಾಲ್ಯಕಾಲದ ಸ್ಮೃತಿಗಳು”ಮತ್ತು “ಮೈಸ್ಟೋರಿ” ಎಂಬ ಆತ್ಮ ಕಥೆಗಳಲ್ಲೂ, ಅವರ ಕತೆ, ಕವಿತೆಗಳಲ್ಲೂ ಮತ್ತೆ, ಮತ್ತೆ ಪ್ರಸ್ತಾಪಿತವಾಗಿರುವ ನಾಲಪ್ಪಾಟ್ ಮನೆ ಕಮಲಾದಾಸ್ ಅವರು ಹುಟ್ಟಿ ಬೆಳೆದ ಅವರ ತಾಯಿಯ ಮನೆ. ಕುವೆಂಪುಗೆ ಕುಪ್ಪಳಿ ಸ್ಪೂರ್ತಿಯಾದಂತೆ ಕಮಲಾಗೆ ಪುನ್ನಯೂರುಕುಳದ ನಾಲ್ಪ್ಪಾಟ್ ಮನೆ. ಗುರುವಾಯೂರು ದೇವಾಲಯದಿಂದ ಹತ್ತು ಕಿ ಮೀ, ದೂರದ ಪುನ್ನಯೂರ್ ಕುಳ ಕಮಲಾ ಅವರ ತವರು ಮನೆ ,ಗಂಡನ ಮನೆ ಎರಡೂ ಇದ್ದ ಊರು. ಪ್ರತಿಷ್ಠಿತ ನಾಯರ್ ಕುಟುಂಬದಲ್ಲಿ ಜನಿಸಿದ ಕಮಲಾ ಅವರ ತಾಯಿ ಮಲೆಯಾಳಂ ನ ಮುಖ್ಯಕವಿಗಳಲ್ಲೊಬ್ಬರಾದ ಬಾಲಾಮಣಿಯಮ್ಮೆ, ಚಿಕ್ಕ ತಾತ ಪ್ರಸಿದ್ಧ ಲೇಖಕ ನಲಪಾಟ್ನಾರಾಯಣ ಮೆನೋನ್ ಇದೇ ಊರಿನಲ್ಲಿ ಹುಟ್ಟಿ ಬೆಳೆದವರು. ಕಮಲಾ ತಂದೆ ವಿ. ಎಂ. ನಾಯರ್ “ಮಾತೃಭೂಮಿ” ಪತ್ರಿಕೆಯ ಸಂಪಾದಕರಾಗಿಯೂ ಕೆಲಸ ಮಾಡಿದ್ದರು.

ವಿಶಾಲವಾದ ತೆಂಗಿನ ತೋಟದ ನಡುವೆ ಅಲ್ಲೊಂದು ಇಲ್ಲೊಂದು ಮನೆಗಳು. ಅಂಕು ಡೊಂಕಾಗಿ ಹರಿದ ಕಿರಿದಾದ ಟಾರ್ ರಸ್ತೆ ಎದುರಿನಿಂದ ಆಟೋರಿಕ್ಷಾ ಬಂದರೂ ನಮ್ಮ ಕಾರು ನಿಂತು ಜಾಗ ಕೊಡಬೇಕಾಗಿತ್ತು. ಪುನ್ನಯೂಕರ್ುಳದಿಂದ ಎಡಕ್ಕೆ ತಿರುಗಿ ಕೇರಳದ ಟಿಪಿಕಲ್ ಪರಿಸರದಲ್ಲಿ ಒಂದು ಕಿ.ಮೀ ಚಲಿಸಿ, ನಾಲಪಾಟ್ ತರವಾಡು ಮನೆಯಿದ್ದ ಜಾಗಕ್ಕೆ ಬಂದೆವು.ಅಲ್ಲಿ ತೆಂಗಿನ ಕಾಯಿ ಕೀಳುತ್ತಿದ್ದ ಕೆಲಸಗಾರರು ತೋಟದ ನಡುವೆ ಖಾಲಿಯಿದ್ದ ವಿಶಾಲ ಸ್ಥಳವನ್ನು ‘ವೀಡು” ಇದ್ದ ಸ್ಥಳ ಎಂದು ತೋರಿಸಿದರು. ಸ್ವಲ್ಪ ದೂರದಲ್ಲಿ ಗಾರೆಯ ಕಟ್ಟೆಯಿದ್ದ ಬಾವಿಯಿತ್ತು. ಹಿಂಭಾಗದಲ್ಲಿದ್ದ ನಾಗಬನದಲ್ಲಿ ಗುಂಪಾಗಿ ಬೆಳೆದ ಮರಗಳ ನಡುವೆ ರಂಜೆಯ ಮರವೂ ಇತ್ತು. ಅದರ ಬುಡದಲ್ಲಿ ಸಿಮೆಂಟ್ ಕಟ್ಟೆಯ ಮೇಲೆ ಎರಡು ಕಲ್ಲಿನ ಪ್ರತಿಮೆಗಳು. ಶಿವಲಿಂಗ, ಎದುರಿಗೆ ಕಂಚಿನ ಕಾಲು ದೀಪ.

ಕಮಲಾ ದಾಸ್ ಕೃತಿಗಳಲ್ಲಿ ಬರುವ ನೀರ್ಮಾದಳ ಮರ ಚಳಿಗಾಲವಾದುದರಿಂದ ಎಲೆಉದುರಿಸಿ ಬೋಳಾಗಿ ನಿಂತಿತ್ತು.[ನಾವು ಕ್ರಿಸ್ಮಸ್ ಮರುದಿನ ಅಲ್ಲಿದ್ದೆವು.] ಬೇಸಿಗೆಯಲ್ಲಿ ಮರದತುಂಬ ಕೆನೆಬಣ್ಣದ ಪರಿಮಳ ಭರಿತ ಹೂವರಳಿಸುವ ಈ ನೀರ್ಮಾದಳ ಕಮಲಾ ಅವರ ಕೃತಿಗಳಲ್ಲಿ ರೂಪಕವಾಗಿ ಬಳಕೆಯಾಗಿದೆ. ಬೇಸಿಗೆಯಲ್ಲಿ ಹೂಅರಳಿದಾಗ ಮನೆಯ ತುಂಬಾ ಪರಿಮಳ ತುಂಬಿರುತ್ತಿತ್ತು ಎಂದು ಬರೆಯುತ್ತಾರೆ. ‘ನೀರ್ ಮಾದಳ ಹೂಬಿಟ್ಟ ಕಾಲ” ಎಂಬ ಹೆಸರು ಹೀಗೆ ರೂಪಕವಾಗಿದೆ. ಕೊನೆಗೂ ನೀರ್ಮಾದಳದ ಬಳಿ ನಿಂತು ಸುತ್ತಲಿನ ಪರಿಸರವನ್ನು ನೋಡುತ್ತಿದ್ದಾಗ ಕಮಲಾದಾಸ್ ತಮ್ಮ ಕೃತಿಗಳಲ್ಲಿ ಚಿತ್ರಿಸಿದ್ದ ಪ್ರಸಿದ್ಧ ನಾಲಪಾಟ್ ಮನೆಯ ಕುರುಹು ಇದಿಷ್ಟನ್ನು ಬಿಟ್ಟು ಇನ್ನೇನೂ ಇರಲಿಲ್ಲ. ಬೇಸರವೆನಿಸಿತು. ನಾಗಬನದ ಬಳಿ ನಿಂತು ಆ ಪ್ರತಿಭಾವಂತ ಲೇಖಕಿ ಚಿತ್ರಿಸಿದ ಜೀವನವನ್ನು ಕಲ್ಪಿಸಿಕೊಂಡೆ.

ಕಮಲಾ ದಾಸ್ ತಮ್ಮ” ಬಾಲ್ಯದ ನೆನಪುಗಳು’ ಕೃತಿಯಲ್ಲಿ ಈ ಮನೆಯನ್ನು ಕುರಿತು ವಿವರವಾಗಿ ಬರೆದಿದ್ದಾರೆ. “ಒಳಗಡೆ ಅಂಗಳವಿದ್ದು ದಕ್ಷಿಣ ದಿಕ್ಕಿಗೆ ತೆರೆಯುತ್ತಿದ್ದ ಚಾವಡಿಯಲ್ಲಿ ಚಿಕ್ಕ ದೇವಾಲಯವಿತ್ತು. .ಮುಖಮಂಟಪದ ಕಡಿದಾದ ಮೆಟ್ಟಿಲುಗಳನ್ನು ಹತ್ತಿ ಬಂದರೆ ಚಿಕ್ಕ ತಾತನ ಭವ್ಯವಾಗಿ ಸಜ್ಜುಗೊಂಡಿದ್ದ ಕೊಠಡಿ. ವರ್ಷದಲ್ಲಿ ಎರಡು ಸಲ ಒಟ್ಟಂತುಳ್ಳಲ್ ನಡೆಯುತ್ತಿದ್ದ ಎರಡು ಹಂತಗಳಲ್ಲಿದ್ದ ಪೋರ್ಟಿಕೋ. ಮಹಡಿಯ ಮೇಲೂ ಕೆಳಗೂ ತಲಾ ಮೂರು ಕೊಠಡಿಗಳಿದ್ದ, ಗಂಡಸರಿಗೂ ಹೆಂಗಸರಿಗೂ ಬೇರೆ ಬೇರೆ ಊಟದಮನೆಗಳಿದ್ದ ಸಾಕಷ್ಟು ದೊಡ್ದ ಮನೆ. ಮೇಲೆ ಅಟ್ಟದಲ್ಲಿ ಪೇರಿಸಿಟ್ಟ ಪಾಲಕಿ ಮತ್ತಿತರ ಹಳೆಯ ಪೆಟ್ಟಿಗೆಗಳು. ಹಿಂಬಾಗದ ಕಿರುಜಗಲಿ ದಾಟಿದರೆ ಸ್ನಾನದ ಮನೆಯಿದ್ದ ಕೊಳ. ಕೊಳದ ಆಚೆಗೆ ಹಿರಿಯರ ಶ್ರಾದ್ಧ ಆಚರಿಸಲು ಇದ್ದ ಶ್ರಾದ್ಧಪುರವೆಂಬ ಕೊಠಡಿ. ಇನ್ನೆರಡು ಕೊಳಗಳು. ಆದರೆ ಇವೆಲ್ಲ ಈಗ ಕಮಲಾ ದಾಸ್ ಅವರ ಕೃತಿಗಳಲ್ಲಿ ಮಾತ್ರ ಉಳಿದಿವೆ.

ಪ್ರೀತಿಯ ಅಜ್ಜಿಯಿದ್ದ ನಾಲಪಾಟ್ ಮನೆ ನೂರಾರು ವರ್ಷ ಹಳೆಯದಾದುದರಿಂದ ಸಮೀಪದಲ್ಲೇ ಕಟ್ಟಿಸಿದ ಹೊಸಮನೆಗೆ ವಾಸಿಸಲು ಎಲ್ಲರೂ ಹೋದಾಗ “ಸತ್ತವರ ಕಣ್ಣುಗಳನ್ನು ಮುಚ್ಚುವಂತೆ ಆ ಹಳೆಮನೆಯ ಕಿಟಕಿಗಳನ್ನುಮುಚ್ಚಲಾಯಿತು” ಎಂದು ಕಮಲಾದಾಸ್ ಬರೆಯುತ್ತಾರೆ. ನೀರ್ಮಾದಳ ಮರ ಮತ್ತು ನಾಗಬನವಿದ್ದ ಸ್ಥಳವನ್ನು ಕಮಲಾ ಕೇರಳ ಸಾಹಿತ್ಯ ಅಕಾದೆಮಿಗೆ ನೀಡಿದ್ದಾರೆ. ನಾಲಪಾಟ್ ಮನೆಯಿಂದ ಫರಲಾಂಗ್ ನಷ್ಟು ದೂರದಲ್ಲಿ ಕಮಲಾದಾಸ್ ಪತಿ ಮಾಧವದಾಸ್ ಅವರ ಮನೆ ‘ಅಂಬಲತ್ತಿಲ್” ಇದೆ. ಮನೆ ನೋಡಿಕೊಳ್ಳಲು ಪಕ್ಕದಲ್ಲಿರುವ ಜನ ಬಿಟ್ಟರೆ ಮನೆಯ ಸದಸ್ಯರಾರೂ ಅಲ್ಲಿ ಇಲ್ಲ. ಕೇರಳ ವಾಸ್ತುಶೈಲಿಯ ದೊಡ್ಡ ಮನೆ ಶಿಥಿಲಾವಸ್ಥೆಯಲ್ಲಿದೆ. ಆ ಕೋಮಲ ಮನದ ಕವಿ ನಡೆದಾಡಿದ ಸ್ಥಳ ಕೇಳುವವರಿಲ್ಲದೆ ಅನಾಥವಾಗಿತ್ತು. ಅಲ್ಲಿ ದಾರಿಯಲ್ಲಿ ಹೋಗುತ್ತಿದ್ದ ನರ್ಸ್ ಒಬ್ಬರು ಆ ಮನೆಯವರೆಗೂ ನಮ್ಮ ಜತೆ ಬಂದು ತೋರಿಸಿದರು.

(ಕಮಲಾದಾಸ್ ಸಾಹಿತ್ಯದ ಬಗ್ಗೆ ಮತ್ತೊಮ್ಮೆ)

9 ಟಿಪ್ಪಣಿಗಳು (+add yours?)

 1. Rajendraprasad
  ಜೂನ್ 06, 2009 @ 17:03:14

  ಓದುವ ಹಂಬಲ ಹೆಚ್ಚಾಗಿದೆ …ಅವರ ಬಗ್ಗೆ ಇನ್ನಷ್ಟು ಬರಹಗಳನ್ನು ನಿರೀಕ್ಸಿಸುತ್ತೇನೆ… ಐತಾಳರಿಗೂ, ಸುಮಿತ್ರರವ್ರಿಗೂ ಧನ್ಯವಾದ***

  ಉತ್ತರ

 2. ಶಮ, ನಂದಿಬೆಟ್ಟ
  ಜೂನ್ 05, 2009 @ 17:59:49

  ಕಮಾಲಾದಾಸ್ ಥರವೇ ಸೊಗಸಾದ ಬರಹ..

  ಉತ್ತರ

 3. ಕೆ. ಉಷಾ ಪಿ. ರೈ
  ಜೂನ್ 04, 2009 @ 01:09:21

  ತು೦ಬಾ ಆಪ್ತವಾದ ಬರಹ. ನಾವೂ ನಿಮ್ಮ ಜೊತೆ ಅಲ್ಲೆಲ್ಲಾ ಅಲೆದಾಡಿದ೦ತಾಯಿತು.
  ಮು೦ದಿನ ಕ೦ತನ್ನು ನಿರೀಕ್ಷಿಸುತ್ತಿದ್ದೇನೆ. ಉಷಾ ರೈ

  ಉತ್ತರ

 4. shama.nta
  ಜೂನ್ 03, 2009 @ 18:56:51

  ಲೇಖನದಲ್ಲಿ ಎಲ್ಲೂ ಪಾರ್ವತಿ ಐತಾಳರಿಗೆ ಸರಿಯಾದ ಮನ್ನಣೆ ಸಿಕ್ಕಿಲ್ಲ
  ಶ್ಯಾಮಸುಂದರ್, ಕುಂದಾಪುರ

  ಉತ್ತರ

 5. lekha
  ಜೂನ್ 03, 2009 @ 18:54:10

  ಕಮಲಾದಾಸ್ ಅವರ ಬಗ್ಗೆ ಅದದೇ ರೀತಿಯ ಲೇಖನಗಳನ್ನು ಓದಿ ಸುಸ್ತಾಗಿದ್ದ ನಮಗೆ ಲೇಖಕಿಯ ಭೇಟಿಯ ನಿರೂಪಣೆ ತುಂಬಾ ಇಷ್ಟವಾಯಿತು.

  ಉತ್ತರ

 6. kanneppadi k
  ಜೂನ್ 03, 2009 @ 18:52:35

  ಎಲ ಸಿ ಸುಮಿತ್ರಾ ಅವರು ಮಯೂರದಲ್ಲಿ ಬರೆಯುತ್ತಿದ್ದ ನಕನವನ್ನು ಓದಿದ್ದೆವು. ಆದರೆ ಅವರ ಸಾಹಿತ್ಯ ಬರವಣಿಗೆ ಓದಲು ಕನ್ನೆಪಾದಿಯಲ್ಲಿರುವ ನನಗೆ ಸಿಕ್ಕಿರಲಿಲ್ಲ. ಈಗ ಅವರ ಲೇಖನ ಅವರ ಬರವಣಿಗೆಯ ಶಕ್ತಿಯನ್ನು ತೋರಿಸಿತು.-ಕನ್ನೆಪ್ಪಾಡಿ ಆರ್ ಕೃಷ್ಣ

  ಉತ್ತರ

 7. vidya kotabaagi
  ಜೂನ್ 03, 2009 @ 18:48:27

  ಕಮಲಾದಾಸ್ ಅವರ ಮನೆಯ ಪ್ರಸ್ತಾಪ ಅವರ ಕಾದಂಬರಿಗಳಲ್ಲಿ ಸಾಕಷ್ಟು ಬಂದಿದೆ. ಈಗ ಅವರ ಅಂಗಳದಲ್ಲಿಯೇ ಓಡಾಡಿದಂತಾಯಿತು

  ಉತ್ತರ

 8. kantesh
  ಜೂನ್ 03, 2009 @ 18:45:47

  ಸುಮಿತ್ರಾ ಅವರ ಲೇಖನ ತುಂಬಾ ಆಪ್ತವಾಗಿದೆ

  ಉತ್ತರ

 9. ಆಲಾಪಿನಿ
  ಜೂನ್ 03, 2009 @ 15:43:05

  ಮೇಡಮ್‌, ಅನುಭವ ಹಂಚಿಕೊಂಡದ್ದಕ್ಕೆ ಧನ್ಯವಾದ

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: