ಮಯೂರದಲ್ಲಿ ನಾಗತಿಹಳ್ಳಿ

ಈ ಬಾರಿಯ ಮಯೂರ ಕೊಳ್ಳಿ. ನಾಗತಿಹಳ್ಳಿ ಚಂದ್ರಶೇಖರ್ ಮೊನ್ನೆ ಜೋಗಿ ಪುಸ್ತಕ ಬಿಡುಗಡೆಯಲ್ಲಿ ಮಾತನಾಡಿದ ಪರಿ ಕಂಡು ಅಚ್ಚರಿಗೊಳಗಾದವರಿಗೆ ಈ ಬಾರಿಯ ಮಯೂರದಲ್ಲಿ ಇನ್ನಷ್ಟು ಒಳ್ಳೆಯ ಓದು ಇದೆ.

ನಾಗತಿಹಳ್ಳಿ ಮಯೂರ ಮುಂದಿಟ್ಟ ‘ಸಾಹಿತ್ಯದ ಜರೂರತ್ತು ಎಂತಹದು’ ಎಂಬ ಪ್ರಶ್ನೆಗೆ ಉತ್ತರ ನೀಡಿರುವುದನ್ನು ಖಂಡಿತಾ ಮಿಸ್ ಮಾಡಿಕೊಳ್ಳಬಾರದು. ಕಥೆ, ಕಾದಂಬರಿ, ಕವಿತೆ, ಧಾರಾವಾಹಿ, ಚಲನಚಿತ್ರ ಹೀಗೆ ಹಲವು ರಂಗದಲ್ಲಿ ತೊಡಗಿಸಿಕೊಂಡಿರುವ ನಾಗತಿಹಳ್ಳಿ ತಮ್ಮ ನೋಟ ಏನು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಇದರೊಂದಿಗೆ ನಟರಾಜ್ ಹುಳಿಯಾರ್ ಬರೆದ ಕಾಡುವ ಕಥೆಯೊಂದಿದೆ-ಬಸವಲಿಂಗಪ್ಪನವರು ಹಾಗೂ ಡೆವೀಡ್ ಸಾಹೇಬರು’ ಅನ್ನುವ ಕಥೆ ‘ಸರ್ವಾಧಿಕಾರಿಯ ಚಿತ್ರ ‘ ಸಂಕಲನ ಕೊಟ್ಟ ನಟರಾಜ್ ಹುಳಿಯಾರ್ ಅವರ ಕಥೆಗಾರಿಕೆಗೆ ಕನ್ನಡಿ ಹಿಡಿದಿದೆ.

ಇದಲ್ಲದೆ ಎನ್ ಎಸ್ ಶಂಕರ್ ಸಾದತ್ ಹಸನ್ ಮಾಂಟೋ ಕಥೆಯನ್ನು ಕನ್ನಡಕ್ಕಿಟ್ಟಿದ್ದಾರೆ .

ನಾಗತಿಹಳ್ಳಿ ಬರೆದ ಲೇಖನದ ಆಯ್ದ ಭಾಗ ಇಲ್ಲಿದೆ. ಸಂಪೂರ್ಣ ಓದಿಗೆ ಜೂನ್ ತಿಂಗಳ ಮಯೂರಕ್ಕೆ ಮುಗಿಬೀಳಿ-

Mayur

ಸಾಹಿತ್ಯ ಯಾಕೆ ಬೇಕು?

…..ಮಕ್ಕಳಿಗೆ ಬಾಲ್ಯವಿಲ್ಲ. ತರುಣರಿಗೆ ಸಾಹಿತ್ಯ ಆದ್ಯತೆಯಿಲ್ಲ. ಹೆತ್ತವರಿಗೆ ಮಾತೃಭಾಷೆಯ ಶಿಕ್ಷಣದಲ್ಲಿ ನಂಬಿಕೆಯಿಲ್ಲ. ಶಾಲೆಗಳಲ್ಲಿ ಸಾಹಿತ್ಯ ಎನ್ನುವುದು ಸೆಕೆಂಡರಿ. ಅಚ್ಚಾದ ಪುಸ್ತಕಗಳು ಓದುಗನನ್ನು ತಲುಪುತ್ತಿಲ್ಲ. ಅನೇಕ ಪುಸ್ತಕಗಳಿಗೆ ತತ್ಕ್ಷಣದ ವಿಮರ್ಶೆಯ ಭಾಗ್ಯವಿಲ್ಲ. ಕಾದಂಬರಿಗಳಿರಲಿ, ನೀಳ್ಗತೆ ಬರೆಯಲೂ ಪುರುಸೊತ್ತಿಲ್ಲ. ಯಾರೂ ಓದುವುದಿಲ್ಲ ಎಂಬ ಅಳುಕು ಬರೆಯುವವನದು.

ಬರೆಯುವುದನ್ನು ಸಂಕ್ಷಿಪ್ತವಾಗಿ ಬರೆಯಿರಿ ಎಂಬ ಆಗ್ರಹ ಓದುಗನದು. ಸಾಧ್ಯವಾದರೆ ಕುವೆಂಪು, ಪುತಿನ, ಬೇಂದ್ರೆ ಗೀತೆಗಳನ್ನು ಆಡಿಯೋ-ವಿಡಿಯೋ ಮಾಡಿಸಿ ಅಲ್ಲೇ ಕೇಳುತ್ತೇವೆ-ಅಲ್ಲೇ ನೋಡುತ್ತೇವೆ ಅನ್ನುತ್ತಾರೆ. ಕಾವ್ಯವನ್ನು ಓದಬೇಕೇಕೆ? ಕೇಳಲಾಗದೆ? ನೋಡಿದರಾಗದೆ? ಮಹಾಕಾವ್ಯವನ್ನು ಓದುವುದು ಬೇಡ-ಪ್ರವಚನ ಕೇಳಿದರೆ ಸಾಕು! ಹೀಗೆಂದ ಕೂಡಲೇ ಟೀವಿಯಲ್ಲಿ ಕಾಣಿಸಿಕೊಳ್ಳುವ ಖಯಾಲಿಯುಳ್ಳ ‘ವೃತ್ತಿ ಪ್ರವಚನಕಾರರು’ ಹೆಚ್ಚಾಗುತ್ತಾರೆ. ಈ ವ್ಯಾಖ್ಯಾನಕಾರರು ಸಾಹಿತ್ಯ ವಿಮರ್ಶಕರಂತೆಯೇ ಗೌರವಾನ್ವಿತ ನಿರುಪಯುಕ್ತರು.

ಅವರು ಸಾಹಿತ್ಯವನ್ನೂ ಬೆಳೆಸಲಾರರು; ಓದುಗನನ್ನೂ ಬೆಳೆಸಲಾರರು. ದಲ್ಲಾಳಿಗಳ ಹಸ್ತಕ್ಷೇಪವಿರುವ ಯಾವುದೂ ಊರ್ಜಿತವಾಗಲಾರದು. ಸಾವಿರಾರು ವರ್ಷಗಳ ಪರಂಪರೆ ಇರುವ ಸಾಹಿತ್ಯಕ್ಕೆ ದಲ್ಲಾಳಿ ಬೇಕೆ? ಮಹಾಕಾವ್ಯ ಅಥವಾ ಕಾದಂಬರಿಯೊಂದನ್ನು ನಾಲ್ಕು ಸಾಲುಗಳಲ್ಲಿ ಹೇಳಿ ಅರ್ಥೈಸುವ ವ್ಯಾಖ್ಯಾನಕಾರನೂ, ಅಷ್ಟರಲ್ಲೇ ತೃಪ್ತಿಪಡುವ ಸಹೃದಯನೂ ಈಗ ಹೆಚ್ಚಾಗುತ್ತಿದ್ದಾರೆ. ಎಲ್ಲಾ ಕ್ಷಿಪ್ರ, ವೇಗ ಮತ್ತು ಸಂಕ್ಷಿಪ್ತ! ಇದನ್ನು ಸ್ಪರ್ಧಾತ್ಮಕ ಎಂದು ತಪ್ಪಾಗಿ ಕರೆಯಲಾಗುತ್ತಿದೆ; ನಿರರ್ಥಕ ಎನ್ನುವುದನ್ನು ಬಿಟ್ಟು….


ಕಮಲಾದಾಸ್ ಗೆ ಭಾಗೇಶ್ರೀ ಸಲಾಂ

Kamala_das

ಕಮಲಾ (ದಾಸ್ ಅಲಿಯಾಸ್ ಸುರಯ್ಯ) ಸತ್ತ ಸುದ್ದಿ ಕೇಳಿ ಒಂಥಾರಾ ಮಂಕಾಗಿ ಕೂತಿದ್ದೀನಿ. ಹಾಗಂತ ಈ ಇಂಗ್ಲಿಷ್-ಮಲಯಾಳಿ ಬರಹಗಾರ್ತಿ ನನ್ನ ಫೇವರೇಟ್ ಲೇಖಕಿ ಅಂತ ಹೇಳಲಾರೆ. ಆದರೆ ಈಕೆ ಜೀವನದುದ್ದಕ್ಕೂ ಯಾರಿಗೂ ಕ್ಯಾರೆ ಅನ್ನದೆ, ಅಡಿಗಡಿಗೂ ಮಧ್ಯಮ ವರ್ಗದ ಮಡಿವಂತಿಕೆಗೆ ಚುರಕ್ ಚುರಕ್ ಅಂತ ಶಾಕ್ ಹೊಡೆಸುತ್ತ ತನ್ನದೇ ದಾರಿಯಲ್ಲಿ ನಡೆದ ಪರಿ ಮೆಚ್ಚಬೇಕಾದದ್ದು.

ಮನೆ ಕೆಲಸ ಎಲ್ಲ ಮುಗಿದ ಮೇಲೆ ತರಕಾರಿ ಹೆಚ್ಚುವ ಟೇಬಲ್ಲನ್ನೇ ಬರವಣಿಗೆಯ ಮೇಜು ಮಾಡಿಕೊಂಡು ಬರೆಯಲಿಕ್ಕೆ ಶುರು ಮಾಡಿದ ಕಮಲ ಮೈಚಳಿ ಬಿಟ್ಟು ಬರೆಯುತ್ತಾ ಹೋದದ್ದು, ಜೀವನದುದ್ದಕ್ಕೂ ಒಂದರ ನಂತರ ಒಂದು ಪ್ರಯೋಗಗಳಿಗೆ ಒಡ್ಡಿಕೊಳ್ಳೂತ್ತಾ, ಅವೆಲ್ಲವನ್ನೂ ಜಗಜ್ಜಾಹೀರು ಮಾಡುತ್ತಾ ಹೋದದ್ದು ಒಂತರ ಸಿನಿಮೀಯ, ರೋಚಕ ಕಥೆ. (ಈಕೆಯ ಇಡೀ ಜೀವನ ಚರಿತ್ರೆ ವಿಕಿಪಿಡಿಯಾದಲ್ಲಿ ಇರುವುದರಿಂದ ಮತ್ತು ಈಕೆ ಸತ್ತ ಸುದ್ದಿ ಬಂದ ಕೂಡಲೆ ಎಲ್ಲರೂ ಇದನ್ನೇ ಕಾಪಿ-ಪೇಸ್ಟ್ ಮಾಡಿ ಹಾಕಿರುವುದರಿಂದ ಇದನ್ನು ಮತ್ತೆ ಇಲ್ಲಿ ಹೇಳುವುದು ಬೇಡ ಅಲ್ಲವಾ?)

ಪೂರ್ಣ ಓದಿಗೆ ಭೇಟಿ ಕೊಡಿ: ಭಾಗೇಶ್ರೀ


%d bloggers like this: