ಈಗ ಕವಿತೆಯನ್ನು ಓದುವವರು ಸವಿತಾ ನಾಗಭೂಷಣ…
30 ಏಪ್ರಿಲ್ 2009 1 ಟಿಪ್ಪಣಿ
in ಬಾ ಕವಿತಾ
ರವಿ ಕೃಷ್ಣಾ ರೆಡ್ಡಿ ಅಡಿಗರ ಕವಿತೆಯ ಸಾಲುಗಳಂತೆ ‘ಏನಾದರೂ ಮಾಡುತ್ತಿರುವ’ ಪೈಕಿಯವರು. ಅವರಿಗೆ ಸರಿ ಅನಿಸಿದ್ದನ್ನು ಮಾಡಿಯೇ ಮಾಡುವವರು. ‘ವಿಕ್ರಾಂತ ಕರ್ನಾಟಕ’ ಪತ್ರಿಕೆ ಮಾಡಿ ಪತ್ರಿಕೋದ್ಯಮದ ನೇರ ಪರಿಚಯ ಪಡೆದವರು. ಚುನಾವಣೆಯಲ್ಲಿ ಸ್ಪರ್ಧಿಸಿ ಹಣಬಲ, ತೋಳ್ಬಲ ರಾಜಕೀಯದ ಸ್ಪರ್ಶ ಪಡೆದವರು.
ಕ್ಯಾಲಿಫೋರ್ನಿಯಾದಲ್ಲಿರುವ ರವಿಕೃಷ್ಣಾರೆಡ್ಡಿ ಇತ್ತೀಚಿಗೆ ಬೆಂಗಳೂರಿಗೆ ಬಂದಿದ್ದರು. ರಾಜ್ಯದ ಹತ್ತು ಹಲವು ಕಡೆ ಸುತ್ತಿ ಅದರ ನೋವು ಅರಿಯುವ ಪ್ರಯತ್ನ ಮಾಡಿದರು. ಅವರು ಕಂಡ ಚಿತ್ರಗಳು ಅವರ ಬ್ಲಾಗ್ ‘ಅಮೆರಿಕಾದಿಂದ ರವಿ’ ಯಲ್ಲಿದೆ.
ಈ ಸಂದರ್ಭದಲ್ಲಿಯೇ ಅವರು ಚಂದ್ರನನ್ನು ಕರೆಯಿರಿ ಭೂಮಿಗೆ ಎಂದ ಸವಿತಾ ನಾಗಭೂಷಣ ಅವರ ಕವಿತೆಗಳ ವಿಡಿಯೋ ಸಿದ್ಧಪಡಿಸಿ ‘ಯು ಟ್ಯೂಬ್’ ಗೆ ಏರಿಸಿದ್ದಾರೆ. ಅದು ಇಲ್ಲಿದೆ.
ಲೋಹಿಯಾ ಪ್ರಕಾಶನ ಸವಿತಾ ಅವರ ಹೊಸ ಸಂಕಲನ ‘ದರುಶನ’ವನ್ನು ಪ್ರಕಟಿಸಿದೆ. ಅದರ ಕವಿತೆಗಳನ್ನೂ ಇಲ್ಲಿ ಕೇಳಬಹುದು. ಥ್ಯಾಂಕ್ಸ್ ರವಿ..
ಕಾಮಿ ಕವಿತೆಗಳು
28 ಏಪ್ರಿಲ್ 2009 10 ಟಿಪ್ಪಣಿಗಳು
in ಬಾ ಕವಿತಾ
ರವಿ ಅಜ್ಜೀಪುರ ಕಲಾವಿದ, ಪತ್ರಕರ್ತ. ಓ ಮನಸೇ!, ಹಾಯ್ ಬೆಂಗಳೂರು ಪತ್ರಿಕೆಗಳ ನಡುವೆ ಸುಳಿವಾತ್ಮ. ಎದೆಯೊಳಗೆ ಒಂದು ನವಿರು ಭಾವ ಹುಟ್ಟಿಸುವ ಬರವಣಿಗೆಗೆ ಹೆಸರುವಾಸಿ. ಅವರ ‘ನದಿಪ್ರೀತಿ’ ಬ್ಲಾಗ್ ನಿಂದ ಕಡ ತಂದ ಅವರ ಕಾಮ ಇಲ್ಲಿದೆ-
ಪ್ರಿಯರೇ ಹೀಗ್ಯಾಕೆ ಬರೆಯಬೇಕೆನಿಸಿತೋ ನನಗೆ ಗೊತ್ತಿಲ್ಲ. ಸುಮ್ಮನೆ ಕುಳಿತಿದ್ದವನ ಕೈ ಹಿಡಿದು ಬರೆಸಿಕೊಂಡ ಪುಟ್ಟ ಪುಟ್ಟ ಸಾಲುಗಳಿವು. ಯಾಕೆ, ಏನು ಅಂತ ಕೇಳಬೇಡಿ. ಸುಮ್ಮನೆ ಓದಿಕೊಳ್ಳಿ. ಹಾಗೇ ಇಷ್ಟ ಆಗಿರಲಿ, ಆಗದೇ ಇರಲಿ ಪ್ರತಿಕ್ರಿಯಿಸಿ.
–ರವಿ ಅಜ್ಜೀಪುರ
1
ಮುಟ್ಟು ಅಂದರೂ ಮುಟ್ಟಲ್ಲ
ಸುಮ್ಮನೆ ಆಸೆಪಡುತ್ತೀಯಲ್ಲ
ಒಮ್ಮೆ ಕೈ ತಾಕಿಸು ಗೆಳೆಯ
ಎದೆಯ ಪುಟಗಳಿಗೆ
ಸುಗ್ಗಿ ಬರಲಿ
1
ನೀನು ಮಲಗಿದೆ
ನಾನೂ ಮಲಗಿದೆ
ಎಚ್ಚರಾದಾಗಲೇ ಗೊತ್ತಾಗಿದ್ದ
ನಮ್ಮ ನಡುವೆ ಮತ್ತೊಬ್ಬನಿದ್ದ
ಕಾಮಿ
3
ನೀನು ಏನನ್ನೂ ಬಿಚ್ಚಬೇಡ
ಸುಮ್ಮನೆ ಬಚ್ಚಿಟ್ಟಿಕೋ
ಬಟಾ ಬಯಲಾಗುವುದೂ ಕೂಡ
ಕೆಲವೊಮ್ಮೆ ಬೋರ್ ಹೊಡೆಸುತ್ತದೆ.
4
ಇವತ್ಯಾಕೋ
ನೀನು ಬೇಕೆನಿಸುತ್ತಿದೆ
ಬಂದು ಹೋಗೋ
ಮೈಗೆ ಸೋಲುವುದು ಗೊತ್ತಿದ್ದಂತೆ
ಸುಖಕ್ಕೆ ತೇಲುವುದು ಗೊತ್ತಿದೆ
ಅವೆರಡನ್ನೂ ಕಲಿಸುತ್ತೇನೆ
5
ನನ್ನ ಪಾದದ ಕಿರುಬೆರಳಿಗೂ
ನಿನ್ನ ನೆನಪಿದೆ ಕಣೋ
ಕಚ್ಚಿದ
ಗುರುತು ಮಾಸಿ ಹೋಗಿಲ್ಲ
ಇವತ್ತಾದರೂ ಬಂದು
ಮುಲಾಮು ಹಚ್ಚಬಾರದಾ?
6
ನೀನು ಏನೋ ಹುಡುಕಿದೆ?
ನಾನು ಏನೋ ತಡಕಿದೆ?
ಗೊತ್ತಿಲ್ಲ, ಆದರೆ
ಇಬ್ಬರಲ್ಲೂ ಏನೋ ಸಿಕ್ಕ ಖುಷಿ ಇದೆ
7
ಏನೂ ಬೇಡ
ಸುಮ್ಮನೆ ತಬ್ಬಿಕೋ!
ಮತ ಬಲವೂ ಆಗಬಹುದು…
28 ಏಪ್ರಿಲ್ 2009 ನಿಮ್ಮ ಟಿಪ್ಪಣಿ ಬರೆಯಿರಿ
in ದಣಪೆಯಾಚೆ...
ದಣಪೆಯಾಚೆ
ಕೆ ಅಕ್ಷತಾ
ನಾನು ಚಿಕ್ಕವಳಿರುವಾಗ ವೋಟ್ ಹೇಗೆ ಹಾಕೋದು ಎನ್ನುವುದು ನನ್ನನ್ನು ಚುನಾವಣೆ ಬಂದಾಗೆಲ್ಲ ಕಾಡುತಿದ್ದ ಪ್ರಶ್ನೆಯಾಗಿತ್ತು. ಅಮ್ಮ, ಅಪ್ಪ ಅಜ್ಜಿ ಎಲ್ಲರನ್ನು ಇದರ ಬಗ್ಗೆ ಕೇಳಿ ಕೇಳಿ ತಲೆ ತಿನ್ನುತಿದ್ದೆ. ವೋಟ್ ಹಾಕಲು ಅಮ್ಮ, ಅಜ್ಜಿ ಹೋಗುವಾಗ ನಾನು ಹೋಗಿ ಅವರ ಜೊತೆ ಸರತಿ ಸಾಲಿನಲ್ಲಿ ನಿಲ್ಲುತಿದ್ದೆ. ಆದರೆ ನನಗೆ ಒಳಗೆ ಮಾತ್ರ ಹೋಗಗೊಡುತಿರಲಿಲ್ಲ. ಒಳಗೆ ಹೋದ ಅಮ್ಮ ಹೊರಗೆ ಬರುವಾಗ ಆಕೆಯ ಬೆರಳಿಗೆ ಇಂಕು ತಾಗಿರುವುದನ್ನು ನೋಡಿ ಆ ಇಂಕನ್ನು ನಮಗೆ ಬೇಕಾದ ಗುರುತಿನ ಮುಂದೆ ಒತ್ತಿದರೆ ವೋಟ್ ಹಾಕಿದಂತೆ ಎಂದು ತಿಳಿದಿದ್ದೆ. ನಮ್ಮೂರಲ್ಲಿ ಬಹಳಷ್ಟು ಜನ ಹೆಬ್ಬೆಟ್ಟು ರುಜು ಮಾಡ್ತಾ ಇದ್ದವರನ್ನು ನಾ ನೋಡಿದ್ದರಿಂದ ವೋಟು ಹಾಕೋದು ಅದೇ ರೀತಿ ಎಂದು ತಿಳಿದಿದ್ದೆ. ನನಗೆ ವೋಟು ಹಾಕುವುದರ ಬಗ್ಗೆ ಸ್ಪಷ್ಟ ಕಲ್ಪನೆ ಬಂದಿದ್ದು ನಾನು ಮೊದಲ ಬಾರಿಗೆ ಮತ ಚಲಾಯಿಸಿದಾಗಲೇ.
ಚುನಾವಣೆ ಎಂದರೆ ಹಣದ ಹಂಚುವಿಕೆ, ಹೆಂಡದ ಮತ್ತು, ಜಗಳ ಗಲಾಟೆ ಅಬ್ಬರ ಪರಸ್ಪರ ಕೆಸರೆರಚುವಿಕೆ ಏನೇ ಇರಲಿ ಅವೆಲ್ಲವನ್ನು ಬಿಟ್ಟು ಒಂದಿಷ್ಟು ಕುತೂಹಲದ, ಆಪ್ತವಾದ, ಪತ್ರಿಕೆಗಳಲ್ಲಿ ಸ್ಥಾನ ಪಡೆಯದ ಹಲವು ಘಟನೆಗಳು ಚುನಾವಣೆ-ಮತದಾನಕ್ಕೆ ಸಂಬಂಧಪಟ್ಟಂತೆ ನಡೆಯುತ್ತಲೇ ಇರುತ್ತದೆ. ಪ್ರತಿ ಮನೆ, ಬೀದಿ, ಊರು ಎಲ್ಲೆಲ್ಲೂ…
ನಾನು ಹೈಸ್ಕೂಲಿನ ಕೊನೆಯ ವರ್ಷದಲ್ಲಿ ಓದುವಾಗ ಆ ವರ್ಷ ವಿಧಾನಸಭೆಗೆ ಚುನಾವಣೆ ನಡೆಯುವುದಿತ್ತು. ನನ್ನ ಗೆಳತಿಯೊಬ್ಬಳ ಹೆಸರು ಅದೇ ತಾನೇ ಮತದಾನ ಪಟ್ಟಿ ಸೇರಿ ಆಕೆ ಪ್ರಥಮ ಬಾರಿಗೆ ಮತದಾನ ಮಾಡುವ ಉಮೇದಿನಲ್ಲಿದ್ದಳು. ನಮ್ಮ ಹೆಸರು ಇನ್ನು ಮತ ಪಟ್ಟಿಗೆ ಸೇರಿಲ್ಲದೆ ಇದ್ದಿದ್ದರಿಂದ ನಮಗಾರಿಗೂ ಅವಕಾಶ ಇರಲಿಲ್ಲ. ಈ ಅಂಶವೂ ಅವಳ ಹೆಮ್ಮೆಯನ್ನು ಹೆಚ್ಚಿಸಿತ್ತು. ಅವಳು ನಮ್ಮಗಳೆಲ್ಲರ ಹತ್ತಿರವೂ ತಿಂಗಳ ಹಿಂದಿನಿಂದಲೂ ಯಾರಿಗೆ ವೋಟು ಹಾಕಲಿ ಅಂತ ಕೇಳೋದು ನಾವು ದಿನಕ್ಕೊಬ್ಬರ ಪರ ನಿಂತು ಅವರಿಗೆ ಹಾಕು ಅಂತ ಒಂದಿನ, ಮರುದಿನವೇ ನಿರ್ಧಾರ ಬದಲಿಸಿ ಇವರಿಗೆ ಹಾಕು ಅಂತ ಹೇಳೋದು. ಮೂರನೇ ದಿನ ಅವರ್ಯಾರು ಬೇಡ ಅಂತೇಳಿ ಮಗದೊಬ್ಬರ ಪರ ನಿಲ್ಲುವುದು ಹೀಗೆ ನಡೆಯುತಿತ್ತು. ಜೊತೆಗೆ ನಮ್ಮ ಅಪ್ಪಂದಿರ ಹತ್ತಿರವೂ ಯಾರು ಗೆಲ್ಲಬಹುದು, ಯಾರು ಒಳ್ಳೆಯ ಅಭ್ಯರ್ಥಿ ಅಂತೆಲ್ಲ ಕೇಳಿ ವಿಷಯ ತಿಳಿದುಕೊಂಡು ಬರುತಿದ್ದೆವು ಅವಳಿಗಾಗಿ. ಆದರೆ ನಮ್ಮ ಅಪ್ಪಂದಿರು ಅವರು ಯಾವ ಪಕ್ಷದಲ್ಲಿದ್ದಾರೋ ಆ ಪಕ್ಷದ ಅಭ್ಯರ್ಥಿಯೇ ಸರ್ವಶ್ರೇಷ್ಠ ಅಂತ ಹೇಳಿ ನಂಬಿಸುತಿದ್ದುದರಿಂದ ಈ ವಿಷಯದಲ್ಲಿ ನಮ್ಮನಮ್ಮಲ್ಲೆ ವಾಗ್ವಾದಗಳು ಜಗಳಗಳು ಆಗತೊಡಗಿದವು. ಅದು ಆ ವಯಸ್ಸಿನಲ್ಲಂತೂ ಎಲ್ಲ ಹೆಣ್ಣುಮಕ್ಕಳಿಗೂ ಅವರವರ ಅಪ್ಪ ಹೇಳಿದ್ದೇ ಸರಿ. ಅದರ ಬಗ್ಗೆ ಚಕಾರ ಎತ್ತುವ ಹಾಗೆ ಇಲ್ವಲ್ಲ.
ವೋಟು ಹಾಕಲು ಅರ್ಹತೆ ಇರುವ ಗೆಳತಿಯೇನೂ ಕಡಿಮೆಯವಳಲ್ಲ ನನ್ನ ಹತ್ತಿರ ನಾನು ಹೇಳಿದವರಿಗೆ ವೋಟ್ ಹಾಕ್ತೀನಿ ಅಂತ ಮಾತು ಕೊಡೋದು. ಇನ್ನೊಬ್ಬಳ ಹತ್ತಿರವೂ ಇದೇ ಮಾತು ಹೇಳುವುದು. ಮೂರನೆಯವಳು ಏನಾದ್ರೂ ಹೇಳಿದರೆ ಅವಳು ಹೇಳಿದ ಹಾಗೆ ಕೇಳೋದು ಹೀಗೆ ಮಾಡೋಳು. ಆದರೆ ಚುನಾವಣೆಗೆ ಮೂರ್ನಾಲ್ಕು ದಿನ ಇರುವಾಗ ಇಷ್ಟು ದಿನದ ಉಮೇದನ್ನೆಲ್ಲ ಕಳೆದುಕೊಂಡವಳಂತೆ ಅಳು ಮುಖ ಮಾಡಿಕೊಂಡು ಶಾಲೆಗೆ ಬಂದಳು. ಅವಳ ಊರಿನ ಒಂದಷ್ಟು ದೊಡ್ಡವರು `ಎಷ್ಟು ಹೇಳಿದರೂ ಊರಿಗೊಂದು ರಸ್ತೆ ಮಾಡಿಸಿಕೊಟ್ಟಿಲ್ಲ, ಕೆರೆಯಲ್ಲಿ ಹೂಳು ಎತ್ತಿಸಿಕೊಟ್ಟಿಲ್ಲ ಅದಕ್ಕೆ ಈ ಬಾರಿ ಊರಿನ ಯಾರೂ ಓಟು ಹಾಕಬೇಡಿ. ಯಾಕೆ ವೋಟ್ ಹಾಕಿಲ್ಲ ಅಂತ ಕೇಳಕ್ಕೆ ರಾಜಕಾರಣಿಗಳು ನಮ್ಮೂರಿಗೆ ಬರ್ತಾರೆ ಈ ರಸ್ತೆ ಇಲ್ಲದಲ್ಲಿ ಬರೋ ಕಷ್ಟ ಅವರಿಗೆ ಗೊತ್ತಾಗಲಿ. ಒಂದು ವೇಳೆ ಮಾತು ಮೀರಿ ವೋಟು ಹಾಕಿದರೆ ಅಂಥವರಿಗೆ ಊರಿಂದ ಬಹಿಷ್ಕಾರ ಹಾಕೋದು ಎಂದು ಫರ್ಮಾನು ಹೊರಡಿಸಿದ್ದಾರಂತೆ’ ಈ ರೀತಿ ತನ್ನ ವೋಟ್ ಹಾಕುವ ಹಕ್ಕಿಗೆ ಚ್ಯುತಿ ಬಂದದಕ್ಕಾಗಿ ಅವಳು ದುಃಖಿತಳಾಗಿದ್ದಳು.
ಊರು ಮನೆಯಿಂದ ಹೊರಗೆ ಹಾಕಿಸ್ಕಳದಕ್ಕಿಂತ ವೋಟು ಹಾಕದೆ ಇರೋದೆ ಒಳ್ಳೆದು ಎಂದು ನಾವೆಲ್ಲರೂ ಭಾವಿಸಿದೆವು. ಆಕೆಯು ಹಾಗೆಂದುಕೊಂಡೆ ಸಮಾಧಾನ ಮಾಡಿಕೊಂಡಳು. ಮುಂದೆ ನಮ್ಮಲ್ಲಿ ಚುನಾವಣೆ ಬಗ್ಗೆ ಅಂಥ ಕುತೂಹಲ ಇರಲಿಲ್ಲ. ಆದರೆ ಮತದಾನದ ಮರುದಿನ ಆಕೆ ಏಯ್ ವೋಟ್ ಹಾಕಿಬಂದೆ ನೋಡ್ರೆ ಅಂತ ಇಂಕಿನ ಕಲೆ ಹಾಗೆ ಉಳಿದಿದ್ದ ಬೆರಳು ಮುಂದೆ ಮಾಡಿದಾಗಲೇ ಮತ್ತೆ ನಮ್ಮ ಕುತೂಹಲ ಕೆರಳಿದ್ದು. ಮತ್ತೆ ಯಾರೂ ವೋಟ್ ಮಾಡೋ ಹಾಗಿಲ್ಲ ಅಂತ ಹೇಳಿದಾರೆ ಅಂತಿದ್ದೆ ಎಂದು ನಾವೆಲ್ಲ ರಾಗ ಎಳೆದರೆ. ಆಕೆ ಅಯ್ಯೋ ಅದೇನಾಯ್ತು ಗೊತ್ತೇನ್ರೆ ನಮ್ಮೂರಿನ ಮರಗೆಲಸದ ವೆಂಕಟ ಮತ್ತು ಅವನ ಜೊತೆ ಇರೋ ಮೂರು ಜನ ಕೆಲಸಗಾರರು ಬೇರೆ ಊರಿಗೆ ಕೆಲಸಕ್ಕೆ ಅಂತ ಹದಿನೈದು ದಿನದ ಹಿಂದೆ ಹೋದವರು ನಿನ್ನ ಬೆಳೆಗ್ಗೆ ಊರಿಗೆ ಬಂದಿದಾರೆ. ಅವರಿಗೆ ವಿಷಯ ಗೊತ್ತಿಲ್ಲ. ಪೇಟೆಯಲ್ಲಿ ಬಸ್ ಇಳಿದು ಊರಿಗೆ ನಡ್ಕೊಬರಬೇಕು.
ವೋಟ್ ಹಾಕಕ್ಕಿರದು ಪೇಟೆಯಲ್ಲೆ ಆದರಿಂದ ವೋಟ್ ಹಾಕೇ ಊರಿಗೆ ಹೋಗಿಬಿಡೋಣ. ಮನೆಗೆ ಹೋಗಿ ಮತ್ತೆ ಯಾರು ಇಲ್ಲಿಗೆ ನಡ್ಕೊಬರ್ತಾರೆ ಅಂತ್ಹೇಳಿ ವೋಟ್ ಹಾಕೆ ಬಂದ್ಬಿಟ್ಟಿದ್ದಾರೆ. ಇವರನ್ನು ನೋಡಿ ಊರವರೆಲ್ಲ ಊರಿನವರು ಒಬ್ರು ವೋಟು ಹಾಕಿಲ್ಲ ಅಂದ್ರೆ ಅದು ಬೇರೆ ಪ್ರಶ್ನೆ ಈಗ ನಾಲ್ಕು ಜನ ವೋಟ್ ಹಾಕಿ ಆಗಿದೆ. ಸ್ಟ್ರೈಕ್ ಮಾಡೋದ್ರಲ್ಲಿ ಅರ್ಥ ಇಲ್ಲ ಈಗ ಎಲ್ಲರೂ ಓಟು ಹಾಕಣ ಮುಂದಿನ ಚುನಾವಣೆಯಲ್ಲಿ ಎಲ್ಲರು ಮೊದಲೇ ಮಾತಾಡಕಂಡು ಒಬ್ಬರೂ ವೋಟ್ ಹಾಕದು ಬೇಡ ಎಂದು ನಿರ್ಧರಿಸಿದರಂತೆ. ಅಂತೂ ಗೆಳತಿಯ ವೋಟ್ ಹಾಕೋ ಕನಸು ನನಸಾಗಿತ್ತು.
ನಮ್ಮೂರಿನಲ್ಲಿ ಒಬ್ಬರು ಮುಖಂಡರಿದ್ದರು. ಅವರು ಲಾಗಾಯ್ತಿನಿಂದ ಕಾಂಗ್ರೆಸ್ ಪಕ್ಷದ ಮುಂದಾಳು. ವೋಟು ಅಂದ ಕೂಡಲೇ ಕೈ ಮುಂದೆ ಒತ್ತದು ಅಂತ ಅವರ ಮನಸ್ಸಿನಲ್ಲಿ ಕುಳಿತು ಬಿಟ್ಟಿತ್ತು. ಆದರೆ ಅವರ 60 ನೇ ವಯಸ್ಸಿನಲ್ಲಿ ಕಾಂಗ್ರೆಸ್ ಅವರ ಗೆಳೆಯನಿಗೆ ಕೈ ಕೊಟ್ಟು ಅವರ ವಿರೋಧಿಗೆ ವಿಧಾನಸಭೆ ಚುನಾವಣೆಗೆ ಟಿಕೇಟ್ ಕೊಟ್ಟು ಬಿಟ್ಟಿತು. ಅವರ ಗೆಳೆಯ ಒಮ್ಮೆ ಕಾಂಗ್ರೆಸ್ನಿಂದ ಗೆದ್ದು ಶಾಸಕನಾಗಿದ್ದವರು. ಆದರೆ ಈ ಬಾರಿ ಟಿಕೇಟ್ ಸಿಕ್ಕಿರಲಿಲ್ಲವಾದರಿಂದ ಅವರನ್ನು ಜನತಾ ಪಕ್ಷದವರು ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ಟಿಕೇಟ್ ಕೊಟ್ಟರು. ನಮ್ಮೂರಿನ ಮುಖಂಡರು ಕೂಡಲೇ ಜನತಾಪಕ್ಷ ಸೇರಿ ಅವರ ಸಭೆಯಲ್ಲಿ ಹಾರ ಹಾಕಿಸಿಕೊಂಡು ಆ ಪಕ್ಷದ ಮುಖಂಡರೊಂದಿಗೆ ಫೋಟೋಕ್ಕೆ ಫೋಸ್ ಕೊಟ್ಟು ಮಿಂಚಿದರು. ಕಾಂಗ್ರೆಸ್ಗೆ ಪ್ರಚಾರ ಮಾಡ್ತಿದ್ದವರು ಈ ಬಾರಿ ಜನತಾ ಪಕ್ಷದ ಪರ ಪ್ರಚಾರಕ್ಕೆ ನಿಂತರು. ಪ್ರತಿ ಮನೆಯ ಮೆಟ್ಟಿಲು ತುಳಿದು. ಗೃಹಿಣಿಯರು, ಮುದುಕಿಯರು ಎಲ್ಲರನ್ನು ಕರೆದು ನೋಡಿ ಕೈಗೆ ವೋಟ್ ಹಾಕಿ ಅಂತಿದ್ದೆ ಈ ಸರ್ತಿ ನೇಗಿಲು ಹೊತ್ತ ರೈತನಿಗೆ ವೋಟ್ ಹಾಕಬೇಕು ಅಂತ ಹೇಳ್ತಾ ಇದೀನಿ ನೀವು ನಾ ಹೇಳಿದ ಹಾಗೆ ಮಾಡಬೇಕು. ಯಾವ ಗುರುತು ಹೇಳಿ ನೇಗಿಲು ಹೊತ್ತ ರೈತ ಗೊತ್ತಾಯ್ತಲ್ಲ ಎಂದು ಅವರ ಬಾಯಿಂದ ಮೂರು ಮೂರು ಸರ್ತಿ ಹೇಳಿಸಿ ಖಾತ್ರಿ ಮಾಡಿಕೊಂಡು ಹೋದರು. ಚುನಾವಣೆ ದಿನವೂ ತಮ್ಮ ಹಿಂಬಾಲಕರ ಜೊತೆ ತಾವು ಸೇರಿದ ಹೊಸ ಪಕ್ಷಕ್ಕೆ ಜಯಘೋಷ ಕೂಗುತ್ತಲೆ ಮತದಾನ ಕೇಂದ್ರ ಪ್ರವೇಶಿಸಿದರು. ಏನಾದರೇನು ಕಲ್ತಿದ್ದು ಬಿಡಕ್ಕಾಗ್ತದೆಯಾ? ಹೋದ್ರು ಹೋಗಿದ್ದೆ ಲಾಗಾಯ್ತಿನಂತೆ ಕೈಗೆ ಮತ ಹಾಕೆ ಬಿಟ್ಟರು.
ಅಲ್ಲಿಂದ ಹೊರಗೆ ಬಂದ ಮೇಲಾದರೂ ನೆನಪಾಗಬಹುದಿತ್ತು ತಾವು ಮಾಡಿದ ಘನ ಕಾರ್ಯ! ಆದರೆ ಅಲ್ಲೇ ಕೆಳಗಿದ್ದ ನೇಗಿಲ ಹೊತ್ತ ರೈತನ ಚಿಹ್ನೆ ಹಾಗೆ ಆಗಗೊಡಲಿಲ್ಲ. ಮತದಾನದ ಕೇಂದ್ರದ ಅಧಿಕಾರಿಗಳಿಗೆ ಹೀಗಾಗಿದೆ ಇನ್ನೊಂದು ಬ್ಯಾಲಟ್ ಪೇಪರ್ ಕೊಡಿ(ಆಗಿನ್ನೂ ಎಲೆಕ್ಟ್ರಾನಿಕ್ ಮತ ಯಂತ್ರ ಬಂದಿರಲಿಲ್ಲ) ಎಂದು ಕೇಳಿದರು. ಆಗಲ್ಲ ಒಬ್ಬರಿಗೆ ಒಂದೇ ಮತ ಎಂದು ಅವರು ಹೇಳಿದರು. ಏಯ್ ನಾನು ಈ ಊರಿನ ಮುಖಂಡ ಇದೀನಿ ನಂಗೆ ಆಗೋದಿಲ್ಲ ಎಂದ್ರೆ ಏನು ಜಗಳಕ್ಕೆ ನಿಂತರು. ಊರಿನ ಮುಖಂಡರಿರಲಿ ದೇಶದ ಪ್ರಧಾನಿಗೂ ಒಂದೇ ವೋಟು ಅದರಲ್ಲಿ ಬೇರೆ ಮಾತೇ ಇಲ್ಲ ಎಂಬ ಉತ್ತರ ಬಂತು. ಅಷ್ಟೊತ್ತಿಗೆ ಮತದಾನ ಕೇಂದ್ರದ ಒಳಗೆ ಗುರುತು ಪತ್ತೆಗಾಗಿ ಕೂತಿದ್ದ ಐದಾರು ಹುಡುಗರು ಇವರೆಡೆಗೆ ನೋಡಿಕೊಂಡು ತಮ್ಮತಮ್ಮಲ್ಲೇ ನಗ ತೊಡಗಿದರು. ಮುಖಂಡ್ರು ಸೀಲ್ ಇಸ್ಕಂಡವರೇ ಎಲ್ಲ ಗುರುತುಗಳ ಮೇಲೂ ಒತ್ತಿ ಯಾರಿಗೂ ತಮ್ಮ ವೋಟು ಸಿಗದ ಹಾಗೆ ವ್ಯವಸ್ಥೆ ಮಾಡಿ ಹೊರಗೆ ಬಂದರು. ಈ ಘಟನೆ ನಮ್ಮೂರ ಕಡೆಯ ಹೆಂಗಸರಿಗೆ ಬಾವಿಕಟ್ಟೆಯ ಬಳಿ, ಗದ್ದೆ ಬಯಲ ಬಳಿ ಸೇರಿದಾಗ ಆಡಿಕೊಂಡು ನಗಲು ಬಹಳ ದಿನದವರೆಗೆ ವಸ್ತುವಾಗಿತ್ತು.
ನಮ್ಮ ಪಕ್ಕದ ಮನೆಯಲ್ಲಿ ಮಂಡ್ಯ ಕಡೆಯ ಕುಟುಂಬವಿತ್ತು. ಪ್ರತಿ ಚುನಾವಣೆಗೂ ವಿಧಾನಸಭೆ, ಲೋಕಸಭೆ ಇರಲಿ ಗ್ರಾಮಪಂಚಾಯ್ತಿ ಚುನಾವಣೆಯಿಂದ ಹಿಡಿದು ಎಲ್ಲ ಚುನಾವಣಾ ಸಂದರ್ಭದಲ್ಲೂ ಆ ಕುಟುಂಬ ಮಂಡ್ಯಕ್ಕೆ ಹೋಗಿ ಮತ ಚಲಾಯಿಸಿ ಬರಬೇಕಿತ್ತು. ಗಂಡ ಹೆಂಡತಿ ಇಬ್ಬರೂ ಕೆಲಸದಲ್ಲಿದ್ದರು. ಇಬ್ಬರು ಪುಟ್ಟ ಮಕ್ಕಳು ಬೇರೆ. ಚುನಾವಣಾ ದಿನಾಂಕ ಬೇರೆ ಆಗಿದ್ದರೆ ಅಲ್ಲಿ ಚುನಾವಣೆ ನಡೆಯೋ ದಿನ ಇಲ್ಲಿ ರಜೆ ಸಿಕ್ಕುತಿರಲಿಲ್ಲ. ಒಟ್ಟಾರೆ ಎಲ್ಲ ರೀತಿಯಲ್ಲೂ ಗೋಳು. ಏನ್ರಿ ಇದು ಇಲ್ಲೇ ಮತಪಟ್ಟಿಯಲ್ಲಿ ಹೆಸರು ಸೇರಿಸಬಾರದೆ ಎಂದರೆ ಅಯ್ಯೋ ನಿಮಗೆ ಗೊತ್ತಿಲ್ಲ ರೀ ನಮ್ಮ ಮಾವಂದು ಪಾಳೆಗಾರಿಕೆ ಬುದ್ದಿ ಕಣ್ರಿ ಅವರು ಹೇಳಿದ್ದೇ ನಡಿಬೇಕು. ನಮ್ಮನೆಯವರು ಸೇರಿ ಆರು ಜನ ಗಂಡು ಮಕ್ಕಳು. ನಾಲ್ಕು ಜನ ಬೇರೆ ಬೇರೆ ಕಡೆ ಇದೀವಿ ಆದರೆ ವೋಟ್ ಹಾಕಕ್ಕೆ ಮಾತ್ರ ಊರಿಗೆ ಹೋಗಬೇಕು. ಮಕ್ಕಳು ಸೊಸೆಯರ್ದು ಇರಲಿ ಮೊಮ್ಮಕ್ಕಳ ಹೆಸರು ಸಹ ಅಲ್ಲೇ ಸೇರಿಸಿದಾರೆ ಅಂತೀನಿ.
ಚುನಾವಣೆ ದಿನ ನೋಡಬೇಕು ನಮ್ಮಾವ ಒಳ್ಳೆ ರೇಷ್ಮೆ ಪಂಚೆ ಉಟ್ಕಂಡು ಶಲ್ಯ ಹೆಗಲಮೇಲೆ ಹಾಕಿ ಬೆಳ್ಳಂಬೆಳಗೆ ಹೊರಟ್ರೆ ಅವರ ಹಿಂದೆ ಅತ್ತೆ, ಗಂಡುಮಕ್ಕಳು ಸೊಸೆಯರು, ಮೊಮ್ಮಕ್ಕಳು ಹೀಗೆ. ಒಂದಿಡಿ ರಸ್ತೆ ಸಾಕಾಗಲ್ಲ ಕಣ್ರಿ ನಮ್ಮಿಡೀ ಕುಟುಂಬ ನಡೆಯೋಕೆ. ಊರವರೆಲ್ಲ ಮನೆಯಿಂದ ಹೊರಗೆ ಬಂದು ಬಂದು ನೋಡ್ಕಂಡು ಹೋಗ್ತಾವ್ರೆ ಏನಪ್ಪ ಇದು ಮೆರವಣಿಗೆ ಹೊರಟಿದೆ ಅಂತ. ಮತ್ತೆ ಅವರ ಪಕ್ಷ ಇದೆಯಲ್ಲ ಆ ಪಕ್ಷಕ್ಕೆ ನಮ್ಮನೆಯಿಂದಲೇ ಇಪ್ಪತ್ತು ವೋಟು ಅಂತ ಬೀದಿಲೆಲ್ಲ ಸಾರ್ಕಂಡು ಹೋಗೋದು ಬೇರೆ. ಆದರೆ
ನಿಜ ಹೇಳ್ತೀನ್ರಿ ಎಲ್ಲ ಚುನಾವಣೆಗೂ ಅಲ್ಲೆ ಹೋಗಿ ವೋಟ್ ಹಾಕಬೇಕು ಅದಕ್ಕೇನೂ ಮಾಡೋ ಹಾಗಿಲ್ಲ ನಮ್ಮ ಕರ್ಮ. ಆದರೆ ಒಂದೆ ಒಂದು ಸರ್ತಿನೂ ಅವರು ಹೇಳಿದ ಪಕ್ಷಕ್ಕೆ ವೋಟ್ ಹಾಕಿಲ್ಲಾ ಕಣ್ರಿ ನಾನು. ಅವರು ಯಾವ ಪಕ್ಷದವನಿಗೆ ಬಯ್ತಾ ಇರ್ತಾರೋ ಅವರಿಗೆ ವೋಟ್ ಹಾಕಿದ್ದೀನಿ ಹಿಂಗಾದರೂ ನನ್ನ ಸಿಟ್ಟು ಕಡಿಮೆಯಾಗಲಿ ಅಂತ. ನನಗೆ ಮತ್ತೂ ಒಂದು ಅನುಮಾನ ಇದೆ. ಅನುಮಾನ ಏನು ಸತ್ಯಾನೇ ಅಂದ್ರು ಸರಿ ನನ್ನ ವಾರಗಿತ್ತಿಯರು ನನ್ನ ಹಾಗೆ ಮಾಡಿ ಅವರ ಸಿಟ್ಟನ್ನು ತೀರಿಸ್ಕಂತಾರೆ ಅಂತ… ವಿರೋಧ ವ್ಯಕ್ತಪಡಿಸಲು ಮಾತಿನ ಬಲವೇ ಬೇಕಂತ ಹೇಳಿದವರು ಯಾರು? ಮತ ಬಲವೂ ಆಗಬಹುದು.
ಮಣಿಕಾಂತ್ ಬಯಲು ಮಾಡಿದ ಸುಳ್ಳುಗಳು
27 ಏಪ್ರಿಲ್ 2009 7 ಟಿಪ್ಪಣಿಗಳು
in ಝೂಮ್, ಫ್ರೆಂಡ್ಸ್ ಕಾಲೊನಿ, ಬುಕ್ ಬಝಾರ್
ಎ ಆರ್ ಮಣಿಕಾಂತ್ ಬಗೆಗಿನ ಪ್ರೀತಿಗೆ ಕಲಾಕ್ಷೇತ್ರ ಸಾಕ್ಷಿಯಾಗಿ ಹೋಗಿತ್ತು. ಪುಸ್ತಕ ಓದುವವರು ಇಲ್ಲವಾಗುತ್ತಿದ್ದಾರೆ, ಪುಸ್ತಕದ ಕಾರ್ಯಕ್ರಮಕ್ಕೆ ಬರುವವರು ಇಲ್ಲವಾಗುತ್ತಿದ್ದಾರೆ ಎಂದು ಬೆಂಗಳೂರು ಸದಾ ಹೇಳುತ್ತಿದ್ದ ಎರಡು ಸುಳ್ಳುಗಳನ್ನು ಮಣಿಕಾಂತ್ ಬಟಾಬಯಲು ಮಾಡಿದರು.
ನೀಲಿಮಾ ಪ್ರಕಾಶನ’ದ ಪುಸ್ತಕಗಳು ನೀರಿನಂತೆ ಖರ್ಚಾಯಿತು. ರವೀಂದ್ರ ಕಲಾಕ್ಷೇತ್ರಕ್ಕೆ ಬಂದವರಿಗೆ ಹಾಡು ಹಬ್ಬದ ಜೊತೆಗೆ ಪ್ರಕಾಶ್ ರೈ, ವಿಶ್ವೇಶ್ವರ ಭಟ್, ರವಿ ಬೆಳಗೆರೆ, ಕೃಷ್ಣೇಗೌಡ ಅವರ ಮಾತು ಕೇಳುವ ಅವಕಾಶ. ಎಲ್ಲಕ್ಕಿಂತ ಹೆಚ್ಚಾಗಿ ಅಮ್ಮನನ್ನು ನೆನಪಿಸಿಕೊಳ್ಳಲು ಒಂದು ನೆಪ ಸಿಕ್ಕಿತು.
ಅಲ್ಲಿನ ಒಂದು ನೋಟ ಇಲ್ಲಿದೆ. ಚಿತ್ರಗಳೆಲ್ಲವೂ ನಮ್ಮ ಮಲ್ಲಿ ಆರ್ಥಾತ್ ಡಿ ಜಿ ಮಲ್ಲಿಕಾರ್ಜುನ್ ಅವರದ್ದು.
ಇತ್ತೀಚಿನ ಟಿಪ್ಪಣಿಗಳು