ಮಾಸ್ತಿ ಕಥಾ ಪ್ರಶಸ್ತಿ

images2ಅಮರೇಶ ನುಗಡೋಣಿ ಅವರ ‘ಸವಾರಿ’ ವಸುಧೇಂದ್ರ ಅವರ ‘ಹಂಪಿ ಎಕ್ಸ್ ಪ್ರೆಸ್’ ಈಶ್ವರಚಂದ್ರ ಅವರ ‘ಅದ್ವಿತೀಯ’

ಕಥಾ ಸಂಕಲನಗಳು ಮಾಸ್ತಿ ಕಥಾ ಪ್ರಶಸ್ತಿ ಗೆದ್ದುಕೊಂಡಿದೆ.

ಎಲ್ಲರಿಗೂ ‘ಅವಧಿ’ ಅಭಿನಂದನೆಗಳು 

ಅದನ್ನು ನಿರೀಕ್ಷಿಸುವುದೇ ತಪ್ಪಾಗಬಹುದು

ತನಿಖೆ ಎಂಬ ಥಳಿಸುವಿಕೆ

-ಎನ್ ಎ ಎಂ ಇಸ್ಮಾಯಿಲ್

ಬರೆವ ಬದುಕಿನ ತಲ್ಲಣ

redimage

ಇದು 1985ರ ಬಿಹಾರ ಕೇಡರ್‌ನ ಐಎಎಸ್‌ ಅಧಿಕಾರಿಯೊಬ್ಬರು ಹೇಳಿದ ಕತೆ.

ನಾನು ಸೇವೆಗೆ ಸೇರಿದ ಹೊಸತರಲ್ಲಿ ನನ್ನ ಮನೆಯಿಂದ ಕೆಲ ವಸ್ತುಗಳು ಕಳವಾದವು. ಪೊಲೀಸರಿಗೆ ದೂರು ನೀಡಿದೆ. ತನಿಖೆ ಆರಂಭವಾಯಿತು. ನಾನು ಸಮಯಸಿಕ್ಕಾಗಲೆಲ್ಲಾ ಠಾಣೆಗೆ ಹೋಗಿ ನನ್ನ ದೂರಿನ ಕುರಿತು ವಿಚಾರಿಸುತ್ತಿದ್ದೆ. ಪ್ರತೀ ಬಾರಿ ಹೋದಾಗಲೂ ಪೊಲೀಸರು `ಇನ್ವೆಸ್ಟಿಗೇಷನ್‌ ಮಾಡುತ್ತಿದ್ದೇವೆ ಸಾರ್‌’ ಎಂದು ಯಾರಾದರೊಬ್ಬನಿಗೆ ಥಳಿಸುತ್ತಿರುತ್ತಿದ್ದರು. `ನಾನು ಠಾಣೆಗೆ ಹೋದ ದಿನ ನನ್ನನ್ನು ಮೆಚ್ಚಿಸುವುಕ್ಕೋ ಎಂಬಂತೆ ಅವರ ಥಳಿತದ ತೀವ್ರತೆಯೂ ಹೆಚ್ಚಾಗುತ್ತಿತ್ತು. ಪ್ರತೀ ಬಾರಿ ಠಾಣೆಗೆ ಹೋದಾಗಲೂ ಹೊಸ ಹೊಸ `ಆರೋಪಿ’ಗಳಿಗೆ ಪೊಲೀಸರು ಥಳಿಸುತ್ತಿದ್ದರೇ ಹೊರತು ಕಳವಾದ ವಸ್ತುಗಳ ಕುರಿತು ಯಾವ ಸುಳಿವೂ ಅವರಿಗೆ ಸಿಕ್ಕಿರಲಿಲ್ಲ. ಈ ಥಳಿಸುವಿಕೆಯನ್ನು ನೋಡಲಾಗದೆ ನಾನು ಕಳವಾದ ವಸ್ತುಗಳ ಆಸೆಯನ್ನೇ ಬಿಟ್ಟೆ’

ಇದು ಭಾರತೀಯ ಪೊಲೀಸ್‌ ವ್ಯವಸ್ಥೆಯ ಒಂದು ಸಣ್ಣ ಸ್ಯಾಂಪಲ್‌. ನಮ್ಮ ಪೊಲೀಸರ ಮಟ್ಟಿಗೆ ತನಿಖೆ ನಡೆಸುವುದೆಂದರೆ ಥಳಿಸುವುದು ಎಂದರ್ಥ.

  • **

ಕಳೆದ ತಿಂಗಳ (ಫೆಬ್ರವರಿ 2009) 27ರಂದು ಬೆಂಗಳೂರಿನ ಸಾಫ್ಟ್‌ವೇರ್‌ ಇಂಜಿನಿಯರ್‌ ಒಬ್ಬರ ಸುಮಾರು 34,000 ರೂಪಾಯಿ ಬೆಲೆಬಾಳುವ ಮೊಬೈಲ್‌ ಫೋನ್‌ ಒಂದು ಕಳವಾಯಿತು. ಈಗ ಮೊಬೈಲ್‌ ಫೋನ್‌ ಕಳವಾದರೆ ಅದನ್ನು ಪತ್ತೆ ಹಚ್ಚುವುದು ಸುಲಭ. ಕಳೆದು ಹೋದ ಮೊಬೈಲ್‌ ಫೋನ್‌ನ ಐಎಂಇಐ ಸಂಖ್ಯೆ ಅಥವಾ ಇಂಟರ್‌ ನ್ಯಾಷನಲ್‌ ಮೊಬೈಲ್‌ ಎಕ್ವಿಪ್‌ಮೆಂಟ್‌ ಐಡೆಂಟಿಟಿ ನಂಬರ್‌ ಅನ್ನು ಪೊಲೀಸರಿಗೆ ಕೊಟ್ಟರೆ ಸಾಕು. ಕಳೆದು ಹೋದ ಮೊಬೈಲ್‌ ಎಲ್ಲಿ ಬಳಕೆಯಾಗುತ್ತಿದ್ದರೂ ಅದನ್ನು ಪತ್ತೆ ಹಚ್ಚಬಹುದು. ಫೋನ್‌ ಕಳೆದುಕೊಂಡ ಸಾಫ್ಟ್‌ವೇರ್‌ ಇಂಜಿನಿಯರ್‌ ಜೆ.ಪಿ.ನಗರ ಪೊಲೀಸರಿಗೆ ದೂರು ನೀಡುವಾಗ ತಮ್ಮ ಐಎಂಇಐ ಸಂಖ್ಯೆಯನ್ನೂ ತಿಳಿಸಿದ್ದರು.

ಮಾರ್ಚ್‌ ನಾಲ್ಕನೇ ತಾರೀಕಿನಂದು ಎನ್‌.ಆರ್‌.ಕಾಲೋನಿಯ ನಿವಾಸಿ ಮುತ್ತುರಾಜ್‌ ಎಂಬ ಕಾರು ಚಾಲಕ ತ್ಯಾಗರಾಜ ನಗರದ ಬಿಡಿಎ ವಾಣಿಜ್ಯ ಸಂಕೀರ್ಣದಲ್ಲಿದ್ದ ಮೊಬೈಲ್‌ ಅಂಗಡಿಯೊಂದರಿಂದ 1,500 ರೂಪಾಯಿ ಮೌಲ್ಯದ ಮೊಬೈಲ್‌ ಸೆಟ್‌ ಒಂದನ್ನು ಖರೀದಿಸಿದರು. ಇದನ್ನವರು ಬಳಸಲು ತೊಡಗಿದ ಕ್ಷಣದಿಂದ ಅವರ ಸಮಸ್ಯೆಗಳು ಆರಂಭವಾದವು. ಮಾರ್ಚ್‌ 14ರ ಶನಿವಾರ ತ್ಯಾಗರಾಜ ನಗರ ಪೊಲೀಸರು ಮುತ್ತುರಾಜ್‌ರನ್ನು ಠಾಣೆಗೆ ಕರೆಯಿಸಿಕೊಂಡು `ತನಿಖೆ’ ನಡೆಸಿದರು.

ಪೊಲೀಸರದ್ದು ಒಂದೇ ಪ್ರಶ್ನೆ. `ಬೆಲೆಬಾಳುವ ಮೊಬೈಲ್‌ ಸೆಟ್‌ ಎಲ್ಲಿ?’. ಪ್ರಶ್ನೆ ಅರ್ಥವಾಗದೆ ತೊಳಲಾಡಿದ ಮುತ್ತುರಾಜ್‌ ತಮ್ಮಲ್ಲಿರುವ ಸೆಟ್‌ ತೋರಿಸಿದರೆ ಮತ್ತಷ್ಟು ಪೆಟ್ಟುಗಳು ಬಿದ್ದವು. ಮುತ್ತುರಾಜ್‌ ಅವರ ತಾಯಿ ಹೇಳುವಂತೆ `ನನ್ನ ಮಗನ ಕಣ್ಣಿಗೆ ಮೆಣಸಿನ ಪುಡಿ ಹಾಕಿ ಕಾಲಿಗೆ ಹಾಕಿ ಸ್ಟಿಕ್‌ನಲ್ಲಿ ಹೊಡೆದರು’. ಮುತ್ತುರಾಜ್‌ ಖರೀದಿಸಿದ ಮೊಬೈಲ್‌ ಫೋನ್‌ನ ರಸೀದಿ ಮತ್ತು ಬಾಕ್ಸ್‌ಗಳನ್ನು ನೋಡುವ ತನಕವೂ ಪೊಲೀಸರ `ತನಿಖೆ’ ಮುಂದುವರಿಯಿತು. ರಸೀದಿ ಮತ್ತು ಬಾಕ್ಸ್‌ ನೋಡಿದಾಗ ಸಾಫ್ಟ್‌ವೇರ್‌ ಇಂಜಿನಿಯರ್‌ ಕಳೆದುಕೊಂಡ ಮೊಬೈಲ್‌ ಫೋನ್‌ನ ಐಎಂಇಐ ಸಂಖ್ಯೆ ಮತ್ತು ಮುತ್ತುರಾಜ್‌ ಖರೀದಿಸಿದ ಮೊಬೈಲ್‌ ಫೋನ್‌ನ ಐಎಂಇಐ ಸಂಖ್ಯೆಗಳೆರಡೂ ಒಂದೇ ಆಗಿತ್ತು! ತಪ್ಪು ಮಾಡಿದ್ದು ಮೊಬೈಲ್‌ ತಯಾರಿಸಿದ ಕಂಪೆನಿಯವರು. ಆದರೇನಂತೆ ಪೊಲೀಸರ `ತನಿಖೆ’ಯಿಂದ ಮುತ್ತುರಾಜ್‌ರ ಕಾಲಿಗೆ ಗಂಭೀರ ಗಾಯವೇ ಆಗಿತ್ತು.

ಇಷ್ಟೆಲ್ಲಾ ಆದ ಮೇಲೆ ಜೆ.ಪಿ.ನಗರ ಠಾಣೆಯಲ್ಲಿ ಮುತ್ತುರಾಜ್‌ ಅವರ `ತನಿಖೆ’ ನಡೆಸಿದ ಇನ್ಸ್‌ಪೆಕ್ಟರ್‌ ಎಸ್‌.ಕೆ.ಉಮೇಶ್‌ `ನಾವೇನೂ ಮಾಡಲಿಲ್ಲ. ಆತ ತನಿಖೆಯ ಹಾದಿ ತಪ್ಪಿಸಲು ಪ್ರಯತ್ನಿಸಿದ್ದರಿಂದ ಥಳಿಸಿದ್ದು ಮಾತ್ರ ಹೌದು’ ಎಂಬ ಸ್ಪಷ್ಟನೆ ನೀಡಿದರು. ಇಡೀ ಪ್ರಕರಣವನ್ನು ಒಟ್ಟಾಗಿ ಗಮನಿಸಿದರೆ ದಾರಿ ತಪ್ಪಿದ್ದು ಯಾರು ಎಂಬುದಕ್ಕೆ ಹೆಚ್ಚಿನ ವಿವರಣೆಗಳ ಅಗತ್ಯವಿಲ್ಲ.

More

ದಾನೇದಾನೇಪೇ ಲಿಖಾ ಹೋತಾ ಹೈ…

 

ಶ್ರೀ’ ಎಂದೇ ಎಲ್ಲರಿಗೂ ಪರಿಚಿತವಾಗಿರುವ ಶ್ರೀದೇವಿ ಡಿ ಎನ್ ಪತ್ರಕರ್ತೆ.

ಕಸ್ತೂರಿ ಚಾನಲ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ‘ನೂರು ಕನಸು’ಗಳ ಒಡತಿ

 

thanksದಾನೇ ದಾನೇ ಪೇ ಲಿಖಾ ಹೋತಾ ಹೈ ಖಾನೇವಾಲೇ ಕಾ ನಾಮ್ ಅಂತಾರೆ. ಇದರ ನಿಜವಾದ ಅರ್ಥ ಏನಂತ ನಂಗೊತ್ತಿರಲಿಲ್ಲ. ನಿನ್ನೆಯಷ್ಟೇ ಸ್ವಲ್ಪಮಟ್ಟಿಗೆ ಅದೇನಂತ ಗೊತ್ತಾಯ್ತು… 🙂

ಬಹಳ ದಿನದ ನಂತರ ಕಳೆದ ವಾರ ನಂಗೂ ನನ್ನ ರೂಂಮೇಟ್-ಗೂ ಒಟ್ಟಿಗೆ ಮಾರ್ನಿಂಗ್ ಶಿಫ್ಟ್ ಬಿದ್ದಿತ್ತು. ಮಾಮೂಲಾಗಿ ನಾನು ಆಫೀಸಿಗೆ ಹೋಗುವುದು ಬೆಳಿಗ್ಗೆ 7.30ಕ್ಕೆ. ಆದರೆ ನಿನ್ನೆ ಬೆಳಿಗ್ಗೆ ಆಫೀಸಿಗೆ ಮಾತ್ರ ರಾತ್ರಿ ತನಕ ಆಫೀಸಲ್ಲಿರಬೇಕಾದ ಕಾರಣ ಸ್ವಲ್ಪ ಲೇಟ್ ಆಗಿ ಹೋಗ್ಬೇಕಿತ್ತು. ರೂಂಮೇಟ್ ಬೇಗ ಎದ್ದು ಚಪಾತಿ ಮಾಡಿದಳು. ಹಿಂದಿನ ದಿನ ಮಂಗಳೂರು ಸ್ಟೋರಿನಿಂದ ತಂದ ಬ್ರಾಹ್ಮಿ (ಒಂದೆಲಗ) ಚಟ್ನಿ ಮಾಡಿ ಬಾಕ್ಸಿನಲ್ಲಿ ಹಾಕಿಕೊಂಡು 7.30ಕ್ಕೆ ಹೊರಟು ಹೋದಳು. ನಾನು ನಿಧಾನಕ್ಕೆದ್ದು 9ಕ್ಕೆ ಹೊರಟರೆ ಸಾಕಿತ್ತು.

ಗಂಟೆ 9.10 ಆಗಿತ್ತು. ಇನ್ನೂ ನಾನು ಮನೆಯಿಂದ ಹೊರಟಿರಲಿಲ್ಲ, ಆಗ ನನ್ನ ರೂಂಮೇಟ್ ಫೋನ್ ಮಾಡಿದಳು, ಚಟ್ನಿ ಮರೆತು ಬಂದಿದ್ದೇನೆ, ತರುತ್ತೀರಾ ಅಂತ ಕೇಳಿದಳು. ಆಯಿತು, ಅಂತ ಒಪ್ಪಿ, ಚಿಕ್ಕ ಬಾಕ್ಸಿನಲ್ಲಿ ಚಟ್ನಿ ಹಾಕಿ ತಗೊಂಡು ಆಫೀಸಿಗೆ ಹೊರಟೆ. ಬಸ್ಸಿನಲ್ಲಿ ಹೋಗಲು ಉದಾಸೀನವಾದ ಕಾರಣ ಯಾವುದೋ ಆಟೋ ನಿಲ್ಲಿಸಿ ಹತ್ತಿಕೊಂಡೆ. ಬ್ಯಾಗಿನಲ್ಲಿ ಚಟ್ನಿ ಇಡುವ ಬದಲು ನನ್ನ ಬದಿಯಲ್ಲಿ ಇಟ್ಟುಕೊಂಡು ಕೂತೆ.

ಆಟೋ ಮೀಟರ್ ಯದ್ವಾತದ್ವಾ ಓಡುತ್ತಿದ್ದುದನ್ನೇ ನೋಡುತ್ತ ಕುಳಿತೆ. ಆಟೋದಲ್ಲಿ ಹೋಗುವಾಗ ಇದು ಮಾಮೂಲಾದ ಕಾರಣ ದಾರಿಯಲ್ಲೇ ಮೀಟರ್ ಜಾಸ್ತಿ ಓಡುತ್ತಿದೆ ಅಂತ ಹೇಳಿ ಕೆಟ್ಟವಳಾಗುವ ಅಭ್ಯಾಸ ಬಿಟ್ಟುಬಿಟ್ಟಿದ್ದೇನೆ. ಸರಿಯಾಗಿ ನಲುವತ್ತಮೂರು ರೂಪಾಯಿ ಎಣಿಸಿ ಕೈಲಿ ಹಿಡಿದುಕೊಂಡೆ. ಇಳಿದ ಮೇಲೆ ಅದನ್ನು ಕೊಟ್ಟು ತಿರುಗಿ ನೋಡದೇ ಆಫೀಸಿನೊಳಗೆ ಹೋಗುವುದು ಅಂತ ಪ್ಲಾನ್ ಹಾಕಿದೆ. ಒಂದು ವೇಳೆ ಡ್ರೈವರ ಎದುರು ಮಾತನಾಡಿದರೆ ಆತನಿಗೆ ಹೇಗೆ ದಬಾಯಿಸಬೇಕು ಅಂತಲೂ ಆಭ್ಯಾಸ ಮಾಡಿಕೊಂಡೆ.

ಆಫೀಸು ಬಂತು. ಪ್ಲಾನ್ ಮಾಡಿದ ಹಾಗೆಯೇ ನಲುವತ್ತಮೂರು ರೂಪಾಯಿ ಆತನ ಕೈಲಿಟ್ಟು ಆತ ಎಣಿಸುವುದಕ್ಕೆ ಕಾಯದೆ ಕೆಳಗಿಳಿದೆ, ನನ್ನ ಪಾಡಿಗೆ ನಾನು ಆಫೀಸಿನ ಮೆಟ್ಟಿಲು ಹತ್ತಿದೆ. ಬ್ಯಾಗ್ ಇಟ್ಟು ಡೆಸ್ಕಿಗೆ ಬರುತ್ತಿದ್ದ ಹಾಗೇ ರೂಂಮೇಟ್ ಕಾಣಿಸಿದಳು, ಆಗಷ್ಟೇ ನಂಗೆ ಚಟ್ನಿ ನೆನಪಾಗಿದ್ದು. ಮೀಟರ್ ಜಾಸ್ತಿ ಓಡಿದೆ ಅನ್ನುವ ತಲೆಬಿಸಿಯಲ್ಲಿ ನನ್ನ ಬದಿಯಲ್ಲಿಟ್ಟ ಬಾಕ್ಸ್ ಮರೆತು ಬಿಟ್ಟಿದ್ದೆ, ಹಾಗೇ ಎದ್ದುಕೊಂಡು ಬಂದಿದ್ದೆ. ಅವಳಿಗೆ ಹೇಳಿದೆ, ಚಟ್ನಿ ಆಟೋನಲ್ಲಿ ಹೋಯಿತು ಅಂತ. ಕೊನೆಗೆ ಡ್ರೈವರ್ ತಿನ್ನಲಿ ಬಿಡು ಅಂತ ಇಬ್ಬರೂ ನಕ್ಕು ಸುಮ್ಮನಾದೆವು.

ಒಂದು ಗಂಟೆ ಕಳೆದ ನಂತರ ರಿಸೆಪ್ಷನ್-ನಿಂದ ಕರೆ ಬಂತು, ನಿಮಗೊಂದು ಬಾಕ್ಸ್ ತಂದುಕೊಟ್ಟುಹೋಗಿದ್ದಾರೆ ಯಾರೋ, ಬಂದು ಕಲೆಕ್ಟ್ ಮಾಡಿ ಅಂತ. ಸರಿ, ಏನಪ್ಪಾ ಅಂತ ಹೋಗಿ ನೋಡಿದರೆ, ಅದೇ ಚಟ್ನಿ ಬಾಕ್ಸ್..! 🙂 ಆಟೋ ಡ್ರೈವರ್ ಸೆಕ್ಯೂರಿಟಿಯವರ ಹತ್ತಿರ ಅದನ್ನು ಕೊಟ್ಟುಹೋಗಿದ್ದನಂತೆ. ಚಟ್ನಿ ಸಿಕ್ಕಿತಲ್ಲ, ನನ್ನ ರೂಂಮೇಟ್ ಖುಷಿಯಾದಳು. ಅವಳ ಹಣೆಯಲ್ಲಿ ಆ ಚಟ್ನಿ ತಿನ್ನುವುದು ಅಷ್ಟು ಗಟ್ಟಿಯಾಗಿ ಬರೆದಿತ್ತು ಅನ್ಸುತ್ತೆ… ಇದನ್ನೇ ಹೇಳ್ತಾರೇನೋ, ದಾನೇದಾನೇಪೇ ಲಿಖಾ ಹೋತಾ ಹೈ.. ಅಂತ…! 🙂
—————–

ಕೆಲ ತಿಂಗಳ ಹಿಂದೆ ಇದೇ ರೀತಿ ಕ್ಯಾಮರಾ ಯಾವುದೋ ಆಟೋನಲ್ಲಿ ಮರೆತು ಎದ್ದುಬಂದಿದ್ದೆ. ಆ ಆಟೋದ ಡ್ರೈವರ್ ಕೂಡ ಇಷ್ಟೇ ಒಳ್ಳೆಯವನಾಗಿದ್ರೆ ಎಷ್ಟು ಚೆನ್ನಾಗಿರ್ತಿತ್ತು ಅಂತ ಅನಿಸ್ತಿದೆ. ಈಗ ನಂಗೆ ಕ್ಯಾಮರಾ ತಗೊಳ್ಳಲಿಕ್ಕೆಯೇ ಭಯ ಬಿಡ್ತಿಲ್ಲ, ಎಲ್ಲಾದ್ರೂ ಕಳೆದುಹಾಕಿಬಿಡ್ತೀನಿ ಅಂತ.

%d bloggers like this: