-ಕೆ ಶಿವು
ವಿಜಯ ಕರ್ನಾಟಕ ಯುಗಾದಿ ವಿಶೇಷಾಂಕದಲ್ಲಿ ವಸುದೇಂದ್ರ, ಟೀನಾ, ಅಪಾರ, ಸುಧನ್ವ ಎಂಟು ಅದ್ಬುತ ಸಿನಿಮಾಗಳ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದಾರೆ. ಅದನ್ನು ಓದಿದ ಮೇಲೆ ನಾನು ಒಂದು ಸಿನಿಮಾ ಬಗ್ಗೆ ಬರೆಯಬೇಕೆನಿಸಿ ಇದನ್ನು ಬರೆದಿದ್ದೇನೆ…
ಒಂದು ಅದ್ಬುತ ಸಿನಿಮಾ ಬಗ್ಗೆ ಬರೆಯಬೇಕೆನಿಸಿದೆ. ಇಂದಿನ ಪ್ರಸ್ತುತ ಬಾಂಬ್ ಬ್ಲಾಸ್ಟ್, ಟೆರರಿಷ್ಟ್ ಆಟ್ಯಾಕ್, ರಾಜಕೀಯದವರ ಮೋಸ, ಸೋಗಲಾಡಿತನದ ಹಿನ್ನೆಲೆಯಲ್ಲಿ, ಎಲ್ಲರೂ ಅದರ ಬಗ್ಗೆ ಮಾತಾಡುವುದು, ಓದುವುದು, ನೋಡುವುದು, ಬರೆಯುವುದು ನಡೆದಿರುವ ಇಂಥ ಸಮಯದಲ್ಲಿ ಒಂದು ಹೃದಯಸ್ಪರ್ಶಿ, ಮನಕಲಕುವ, ನೋಡುತ್ತಾ, ನೋಡುತ್ತಾ ನಾವೇ ಪಾತ್ರವಾಗಿಬಿಡುವ, ನೋಡಿದ ನಂತರವೂ ಬಹುದಿನ ಕಾಡುವಂತ ಒಂದು ಇರಾನಿ ಸಿನಿಮಾ ಬಗ್ಗೆ ಬರೆಯಬೇಕು ಅನ್ನಿಸಿದೆ.
ಆ ಸಿನಿಮಾ ಹೆಸರೇ ” Children of Heaven”
ಆಲಿ ಎನ್ನುವ ೧೨ ವರ್ಷದ ಹುಡುಗ ತನ್ನ ತಂಗಿಯ ಕಿತ್ತುಹೋದ ಶೂವನ್ನು ರಿಪೇರಿ ಮಾಡಿಸಿಕೊಂಡು ಬರುವಾಗ ದಾರಿಯಲ್ಲಿ ಅದನ್ನು ಕಳೆದುಕೊಳ್ಳುತ್ತಾನೆ. ಅವರ ತಂದೆ ತಾಯಿಗಳಿಗಂತೂ ಮಕ್ಕಳಿಗೆ ಒಂದು ಜೊತೆ ಷೂ ಕೊಡಿಸಲಾಗದಷ್ಟು ಬಡತನ. ಆಷ್ಟು ಚಿಕ್ಕ ವಯಸ್ಸಿನಲ್ಲೇ ಅಪ್ಪ ಅಮ್ಮನ ಕಷ್ಟವನ್ನಿರಿತ ಆ ಇಬ್ಬರು ಮಕ್ಕಳು ತಂದೆ ತಾಯಿಯರಿಗೆ ತಿಳಿಯದಂತೆ ಒಂದು ಉಪಾಯ ಮಾಡುತ್ತಾರೆ. ಅದೇನೆಂದರೆ ಜಹೀರಾ ಸ್ಕೂಲು ಬೆಳಗಿನ ಸಮಯವಿರುವುದರಿಂದ ಇರುವ ಒಂದು ಜೊತೆ ಆಣ್ಣನ ಷೂವನ್ನು ಮೊದಲು ಆವಳು ಹಾಕಿಕೊಂಡು ಹೋಗುವುದು. ನಂತರ ಓಡಿಬಂದು ಅದೇ ಷೂವನ್ನು ಅಣ್ಣ ಆಲಿಗೆ ಕೊಟ್ಟರೆ ಆಲಿ ಹಾಕಿಕೊಂಡು ತನ್ನ ಮದ್ಯಾಹ್ನದ ಸ್ಕೂಲಿಗೆ ಹೋಗುವುದು. ಈ ರೀತಿ ನಡೆಯುವಾಗ ಇಬ್ಬರು ಮಕ್ಕಳಲ್ಲಿ ಆಗುವ ದಿಗಿಲು, ಭಯ, ಆತಂಕ, ಕುತೂಹಲ, ಆಸೆ, ಅಣ್ಣನ ಮೇಲಿನ ಜಹೀರಾಳ ಪ್ರೀತಿ, ಆಲಿಗೆ ತಂಗಿಯ ಮೇಲಿನ ಜವಾಬ್ದಾರಿ, ವಾತ್ಸಲ್ಯ, ಎಲ್ಲವೂ ಸ್ಪಟಿಕ ಶುಭ್ರ ತಿಳಿನೀರಿನಂತೆ ನಿಮ್ಮ ಮುಂದೆ ಅಭಿವ್ಯಕ್ತವಾಗುತ್ತಾ ಹೋಗುತ್ತದೆ.
ಇಂಥಹ ಪರಿಸ್ಥಿತಿಯಲ್ಲೇ ಇಬ್ಬರೂ ಚೆನ್ನಾಗಿ ಓದುವುದು ಕ್ಲಾಸಿಗೆ ಮೊದಲ ಬರುವುದು ನಡೆಯುತ್ತದೆ. ಕೊನೆಗೆ ಅಂತರ ಶಾಲಾ ಓಟದ ಸ್ಪರ್ಧೆಯಲ್ಲಿ ಬಹುಮಾನವಾಗಿ ಮೊದಲು ಮತ್ತು ಎರಡನೆ ಬಹುಮಾನವಾಗಿ ಟ್ರೋಫಿ, ಮತ್ತು ಮೂರನೆ ಬಹುಮಾನವಾಗಿ ಒಂದು ಜೊತೆ ಹೊಸ ಷೂಗಳನ್ನು ಇಟ್ಟಿರುತ್ತಾರೆ.
ಆಲಿ ತನ್ನ ತಂಗಿಗಾಗಿ ಷೂ ಗೆಲ್ಲುವ ಒಂದೇ ಒಂದು ಆಸೆಯಿಂದ ಆ ಸ್ಪರ್ಧೆಗೆ ಸೇರುತ್ತಾನೆ. ರೇಸಿನಲ್ಲಿ ತನ್ನ ಪ್ರೀತಿಯ ತಂಗಿಗಾಗಿ ಷೂ ಗೆಲ್ಲುತ್ತಾನ ಎನ್ನುವುದು ಕತೆಯ ಕ್ಲೈಮಾಕ್ಸ್. ಅದನ್ನು ನೀವು ಸಿನಿಮಾ ನೋಡಿಯೇ ತಿಳಿಯಬೇಕು.
ಕತೆ ಇಷ್ಟು ಸರಳವಾಗಿದ್ದರೂ ಇಡೀ ಚಿತ್ರದ ಚೌಕಟ್ಟನ್ನು “ಮಾಜಿದ್ ಮಾಜಿದಿ” ಎನ್ನುವ ಇರಾನಿ ನಿರ್ಧೇಶಕ ಕಲ್ಪಿಸಿಕೊಂಡಿರುವ ರೀತಿಯೇ ಒಂದು ಅದ್ಬುತ. ಒಂದೊಂದು ಫ್ರೇಮು ದೃಶ್ಯಕಾವ್ಯವೆನ್ನುವಂತೆ ಚಿತ್ರಿಸಿದ್ದಾರೆ. ಯಾವುದೇ ಒಂದು ದೃಶ್ಯವೂ ಇಲ್ಲಿ ತೆಗೆದುಹಾಕುವಂತಿಲ್ಲ. ನೀವು ಸಿನಿಮಾ ನೋಡಲು ಶುರುಮಾಡಿದರೆ ಯಾವೊಂದು ಸನ್ನಿವೇಶವನ್ನೂ ಕಳೆದುಕೊಳ್ಳಲು ಇಷ್ಟಪಡದೆ ತನ್ಮಯರಾಗಿ ನೋಡಿಸುವಂತ ಅದ್ಭುತ ಚಿತ್ರಕತೆ ಇದೆ.
ಅಂದಮಾತ್ರಕ್ಕೆ ಇದೊಂದು ಅದ್ಬುತ ತಾಂತ್ರಿಕ ಹಿನ್ನೆಲೆಯುಳ್ಳ ಬಾಲಿವುಡ್, ಹಾಲಿವುಡ್ ರೀತಿಯ ಚಿತ್ರವಲ್ಲ. ಕೇವಲ ೧ ಲಕ್ಷ ೮೦ ಸಾವಿರ ಡಾಲರ್ ಖರ್ಚಿನಲ್ಲಿ ತಯಾರಾದ ಚಿತ್ರ. ಚಿತ್ರಕ್ಕಾಗಿ ಬಳಸಿರುವ ಸಣ್ಣ ಸಣ್ಣ ಕಾಲೋನಿಗಳು, ಓಣಿಗಳು, ಮನೆಗಳು, ಸಹಜವಾದ ಜನರಿರುವ ಪೂರಕ ವಾತಾವರಣ, ಒಂದು ಪಕ್ಕಾ ಸಾಂಪ್ರದಾಯಿಕ ಚೌಕಟ್ಟಿನ ಹಿನ್ನೆಲೆಯಲ್ಲಿ ಒಂದು ಸರಳವಾದ ಹಿತವಾದ, ಹದವಾದ ಸಾಫ್ಟ್ ಲೈಟಿನಲ್ಲಿ ಚಿತ್ರದ ಛಾಯಾಗ್ರಹಣ ಮಾಡಿರುವುದರಿಂದ ಇಡಿ ಚಿತ್ರವು ನಿಮ್ಮನ್ನು ಆವರಿಸಿಕೊಳ್ಳುತ್ತದೆ.
ಇವೆಲ್ಲಕ್ಕೂ ಕಿರೀಟವಿಟ್ಟಂತೆ ಆಲಿ ಪಾತ್ರವಹಿಸಿರುವ ಮೊಹಮದ್ ಅಮೀರ್ ನಾಜಿ ಎನ್ನುವ ಪುಟ್ಟ ಹುಡುಗ ಮತ್ತು ಜಹೀರಾ ಪಾತ್ರ ಮಾಡಿರುವ ಅಮೀರ್ ಫರೋಕ್ ಹಷೀಮಿಯಾ ಎನ್ನುವ ಪುಟ್ಟ ಹುಡುಗಿಯ ಮರೆಯಲಾಗದ ನಟನೆಯಿದೆ. ನೀವು ಸಿನಿಮಾ ನೋಡಿದ ಮೇಲೆ ಬಹುದಿನಗಳ ಕಾಲ ನಿಮಗೆ ತಮ್ಮ ತಂಗಿಯಾಗಿ, ಅಥವಾ ಮಗ ಮತ್ತು ಮಗಳಾಗಿ, ಮಕ್ಕಳಿಗೆ ಗೆಳೆಯರಾಗಿ ಕಾಡದಿದ್ದರೆ ಕೇಳಿ.
ಇತ್ತೀಚಿನ ಟಿಪ್ಪಣಿಗಳು