ಯುಗಾದಿ

 3265463209_e3a84fca82-ಅಕ್ಷತಾ.ಕೆ

ಚಿತ್ರ: ಬಾಲು ಮಂದರ್ತಿ

——————————————–

ಬೆಳಿಗ್ಗೆ ನಾವೇಳುವುದಕ್ಕೆ ಮುಂಚೆಯೇ
 ಚಿತ್ತಾರದ ಪರದೆ ಎದುರು
 ಕಂಪ್ಯೂಟರ್ ಕೀಲಿ ಒತ್ತುತ್ತ ಜ್ಯೋತಿಷಿ
 ವರ್ಷ ಭವಿಷ್ಯದ ಶುಭಾಶುಭದಲ್ಲಿ ಮುಳುಗಿದ್ದರು
 ಎದುರಿಗೆ ನಳನಳಿಸುತಿದ್ದ
 ರಂಗೋಲಿಯ ಎಳೆ ಮಾವಿನ ತೋರಣ
 ಯುಗಾದಿಗೆ ಕಳೆ ತಂದಿತ್ತು 

 ನಡುವೆ ಮಿಂಚಿನಂತೆ ತೂರಿಬಂದ
 ಟೂತ್ ಪೇಸ್ಟ್ ಜಾಹಿರಾತು ನಮಗೆ 
 ಬಚ್ಚಲು ಮನೆಯ ದಾರಿ ತೋರಿಸಿತ್ತು
  
 ಅಭ್ಯಂಜನದ ಆಸೆಯಾಗುವ ಮೊದಲೇ
 ದೇವಸ್ಥಾನದ ಎದುರು
 ನೀರುಜಡೆಯ ಸುಂದರಿ 
 ವಿಶೇಷ ಪೂಜೆಯ ವರದಿ ನೀಡುತಿದ್ದಳು 
 ಮುಂದೆ ಹೋಗಿ ಎಂದು ದೂಡುವವರು 
 ಇಲ್ಲದ್ದರಿಂದ
 ಅಜ್ಜಿ ಸೋಫಾದ ಮೇಲೆ ಕಾಲು ಚಾಚಿ 
 ಗಂಟೆ ಗಟ್ಟಲೆ ವೆಂಕಟರಮಣನನ್ನು 
 ಕಣ್ತುಂಬಿಕೊಳ್ಳುತಿದ್ದಳು

 ಅಲ್ಲಿ ದೇವರನ್ನೆ ಮರೆತ ಭಕ್ತಗಣ 
 ಮೈಕ್ ಹಿಡಿದ ಸುಂದರಿಯ ಸುತ್ತ ನೆರೆದಿತ್ತು

ಹಬ್ಬಕ್ಕಾಗಿ ಮಾಡಿದ ಪಕ್ವಾನ್ನಗಳ
ರೆಸಿಪಿ ನೋಟ್ ಮಾಡಿಕೊಳ್ಳುವ ಭರದಲ್ಲಿ
ಅಡುಗೆ ಮಾಡಲು ಪುರಸೊತ್ತಾಗದೆ  
ಫ್ರಿಜ್ನಲ್ಲಿದ್ದ ಸಾರು ಬಳಕೆಗೆ ಬಂತು

ಇನ್ನೇನು ಕಣ್ಣೆಳೆಯುತಿದೆ ಅಂತನ್ನಿಸುವಷ್ಟರಲ್ಲಿ
ಜರತಾರಿ ಸೀರೆಯುಟ್ಟ ಹೆಣ್ಣು 
ಬಂಗಾರದ ಬೇಟೆ ಪ್ರಾರಂಭಿಸಿ 
ನಮ್ಮಗಳ ಕಣ್ಣರಳಿಸಿದಳು

ಮಕ್ಕಳಿಗೆ ಬೇವು ಬೆಲ್ಲ ಹಂಚಿ ಬನ್ನಿರೋ
ಎಂದು ಬೇಡಿದರೆ  ಹಬ್ಬಕ್ಕಾಗಿಯೇ 
ಹಿಟ್ ಸಿನಿಮಾ ಹಾಕಿದಾರೆ  
ನೋಡಿ ಎಂಜಾಯ್ ಮಾಡಿ
ಎಂದು ಒಟ್ಟಿಗೆ ಬೊಬ್ಬಿಟ್ಟವು
 
ಚಂದಿರನ ನೋಡಲು 
ಹೊರಹೋಗಬೇಕು ಎಂದುಕೊಳ್ಳುವಷ್ಟರಲ್ಲಿ 
ಚೆಂದದ ಚಂದ್ರಮ
ಮಧುರ ಗೀತೆಯೊಂದಿಗೆ ಮೂಡಿಬಂದು
ಕುಳಿತಲ್ಲೆ ದರ್ಶನ ಭಾಗ್ಯ ಒದಗಿಸಿ ಧನ್ಯರಾಗಿಸಿದ

ಬಾಳೆ ಕಂಬ, ಮಾವಿನ ಚಿಗುರು
ಹೊಸ ಪತ್ತಲ, ಕೋಗಿಲೆ ಗಾನ,
ಬೇವಿನ ಕಹಿ, ಬೆಲ್ಲದ ಸವಿ
ಕೊನೆಗೆ ಪಂಚಾಂಗ ಶ್ರವಣ
ಚಂದ್ರದರ್ಶನದವರೆಗೆ ಎಲ್ಲ
ಲಭಿಸಿ ಯುಗಾದಿ ಸಮಾಪ್ತಿ

 ಪ್ರತಿಬಿಂಬದೊಳಗೇ ಬಿಂಬ ಪಡೆದ ನಮಗೆ
 ಯುಗಾದಿ ಯುಗದ ಆದಿಯೇ?
 ಅಂತ್ಯವೇ? 
 ಮಧ್ಯಂತರ ವಿರಾಮವೇ?

ಕಡಲ ತಡಿಯ ತಲ್ಲಣ

kadala-thadiya

ಸಹಿ-ಸಿಹಿ

ಡಿ ಜಿ ಮಲ್ಲಿಕಾರ್ಜುನ್ ಸಂಗ್ರಹದಲ್ಲಿರುವ ಇನ್ನಷ್ಟು ಸಹಿಗೆ ಭೇಟಿ ಕೊಡಿ- ಮಲ್ಲಿ

a1a12a2a4a8a11

 


ಶೈಲೇಶ್ ಚಂದ್ರ ಗುಪ್ತ ಅಭಿನಂದನೆ

tesar0003 tesar-medium

%d bloggers like this: