ಚಾರ್ಲಿ ಚಾಪ್ಲಿನ್ ಕುರಿತ ವಿವಾದ ಒಂದಿಷ್ಟು ಬೂದಿ ಮುಚ್ಚಿಕೊಂಡಿದೆ. ಟಾಟಾ ರವರ ನ್ಯಾನೋ ಕಾರು ರಸ್ತೆಗಿಳಿಯಲು ಸಜ್ಜಾಗುತ್ತಿರುವಾಗಲೇ ‘ಗ್ರೀನ್ ಪೀಸ್’ ಸಂಸ್ಥೆ ಈ ಕಾರಿನ ಚಕ್ರಗಳು ಲಕ್ಷಾಂತರ ಕಡಲ ಆಮೆಗಳ ಜೀವದೊಡನೆ ಚೆಲ್ಲಾಟವಾಡುತ್ತಿದೆ ಎಂಬ ಹೊಸ ಅಂಶದತ್ತ ಗಮನ ಸೆಳೆದಿದೆ. ಇಂದಿನ ಲಾಭಬಡುಕ ಆಸೆಗಳು ಕಡಲ ಕಿನಾರೆಯನ್ನೂ ಸೇರಿದಂತೆ ಎಲ್ಲವನ್ನೂ ನುಂಗಲು ಸಜ್ಜಾಗುತ್ತಿದೆ. ಒಂದೆಡೆ ಟಾಟಾ ಹಾಗೂ ಗುಜರಾತ್ ಇನ್ನೊಂದೆಡೆ ಚಿತ್ರ ತಂಡ ಹಾಗೂ ಕರ್ನಾಟಕ.
ಒಂದು ನಿರ್ಧಿಷ್ಟ ಪರಿಸರ ಕಾಳಜಿ ಇಲ್ಲದ ಸರ್ಕಾರ ಮಾತ್ರವೇ ಇಂತಹ ಹಗರಣಗಳನ್ನು ಹುಟ್ಟು ಹಾಕಲು ಸಾಧ್ಯ. ಅಷ್ಟೇ ಅಲ್ಲ ಚಿತ್ರೀಕರಣಕ್ಕೂ ಒಂದು ಸ್ಪಷ್ಟ ನೀತಿ ಇಲ್ಲ. ಚಾರ್ಲಿ ಚಾಪ್ಲಿನ್ ವಿವಾದದಲ್ಲಿ ಪರಿಸರ ರಕ್ಷಣೆ, ಪ್ರತಿಮೆಯ ಎತ್ತರ, ಸಿ ಆರ್ ಜೆಡ್ ಇವುಗಳಿಗೆ ಸಂಬಂಧಿಸಿದಂತೆ ಯಾರೂ ಭಿನ್ನಾಭಿಪ್ರಾಯ ವ್ಯಕ್ತಪಡಿಸಿಲ್ಲ. ಆದರೂ ಸಿ ಆರ್ ಜೆಡ್ ಯೋಜನೆ ಚಾರ್ಲಿ ಚಾಪ್ಲಿನ್ ಪ್ರತಿಮೆ ಸ್ಥಾಪನೆಯಿಂದ ಮಾತ್ರವೇ ಉಲ್ಲಂಘನೆಯಾಗುತ್ತಿದೆ ಎನ್ನುವವರು ದಯವಿಟ್ಟು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡೂ ಕಡಲನ್ನು ಹೇಗೆ ಮುಕ್ಕುತ್ತಿದೆ, ಸಿ ಆರ್ ಜೆಡ್ ಕಾನೂನುಗಳು ಈಗಾಗಲೇ ಹೇಗೆ ಗಾಳಿಗೆ ತೂರಲ್ಪಟ್ಟಿದೆ ಎಂಬುದರ ಅಧ್ಯಯನ ನಡೆಸುವುದು ಅಗತ್ಯವಿದೆ.
ಚಾಪ್ಲಿನ್ ಪ್ರತಿಮೆ ವಿವಾದದಲ್ಲಿ ನಿಜಕ್ಕೂ ಚರ್ಚೆ ಇರುವುದು ಆತ ಕಲಾವಿದ ಎಂಬ ನಂಬಿಕೆಯನ್ನು ಬುಡಮೇಲು ಮಾಡಿ ಆತನನ್ನು ಒಂದು ಧರ್ಮಕ್ಕೆ ಕಟ್ಟಿಹಾಕುವ ಪ್ರಯತ್ನ ನಡೆದ ಬಗ್ಗೆ ಮಾತ್ರ. ಪ್ರತಿಮೆ ಸ್ಥಾಪನೆಗೆ ವಿರೋಧ ಸೂಚಿಸುವವರು ತಮ್ಮ ವಿರೋಧ ಇರುವುದು ಪರಿಸರ ಕಾರಣಕ್ಕೆ ಮಾತ್ರ ಎಂಬ ನಿಲುವು ಹೊಂದಿದ್ದರೆ ಈ ವಿವಾದ ಇಷ್ಟು ‘ಶಾಕ್’ ನೀಡುತ್ತಿರಲಿಲ್ಲ.
ಚಾಪ್ಲಿನ್ ಅನ್ನು ಒಂದು ಧರ್ಮಕ್ಕೆ ಕಟ್ಟಿಹಾಕಬೇಕು ಎಂಬ ಉತ್ಸಾಹ ಇರುವವರೂ ಸಹಾ ಅದನ್ನು ಒಂದು ಚರ್ಚೆಯಾಗಿ ಬೆಳೆಸಿದ್ದಿದ್ದರೆ ನೋಟ, ಅಭಿಪ್ರಾಯಗಳ ವಿನಿಮಯವಾಗುತ್ತಿತ್ತು. ಆದರೆ ಅಸಹನೆ ಎನ್ನುವುದು ಹಾಗೂ ಕಿವಿ ಹಿಂಡಿ ಮಾತು ಕೇಳುವಂತೆ ಮಾಡುವ ಪ್ರಕ್ರಿಯೆ ಇಂದಿನದ್ದೇನೂ ಅಲ್ಲವಲ್ಲ!.
‘ಅವಧಿ’ಯಲ್ಲಿ ನಡೆದ ಚರ್ಚೆಯೂ ಇದಕ್ಕಿಂತ ಭಿನ್ನವಾಗೇನೂ ಇರಲಿಲ್ಲ. ಚರ್ಚೆ ಅನ್ನುವುದಕ್ಕಿಂತ ತಮ್ಮ ಗಂಟಲಿನ ಸಾಮರ್ಥ್ಯದ ಪರೀಕ್ಷೆ ನಡೆಯಿತೇನೋ ಎನ್ನುವ ಅನುಮಾನ ಬರುವಂತಾಯ್ತು. ಯಾವುದೇ ಭಿನ್ನಾಭಿಪ್ರಾಯ ಹೀಗೆಯೇ ತೀರ್ಮಾನವಾಗಿಬಿಡಬೇಕು ಎಂದುಕೊಳ್ಳುವುದೇ ತಪ್ಪು. ಚರ್ಚೆಯ ನಂತರವೂ ಅವರವರದೇ ನಿಲುವು ಇಟ್ಟುಕೊಳ್ಳುವ ರೀತಿಯ ಸಂವಾದ ಅಗತ್ಯವಿದೆ.
ಪರ ವಿರೋಧ ಚರ್ಚೆಯಲ್ಲಿದ್ದವರು ತಮ್ಮ ವಾದವನ್ನು ಮಂಡಿಸುವ ಆವೇಶದಲ್ಲಿ ನಾವು ಸಂತೆಯ ಮಧ್ಯೆ ಇಲ್ಲ ಒಂದು ಮಾಧ್ಯಮದ ಮೂಲಕ ಮಾತನಾಡುತ್ತಿದ್ದೇವೆ ಎಂಬ ಅರಿವನ್ನು ಹಲವು ಬಾರಿ ಕಳೆದುಕೊಂಡರು. ವ್ಯಕ್ತಿ ಚಾರಿತ್ರ್ಯ ಹರಣ, ಕೀಳು ಭಾಷೆ ಎಲ್ಲವೂ ಬಳಕೆಯಾಯಿತು. ಯಾಕೆ ಹೀಗೆ? ನಾವು ಗಂಭೀರವಾಗಿಯೇ ಒಂದು ಚರ್ಚೆ ಬೆಳೆಸಲು ಸಾಧ್ಯವೇ ಇಲ್ಲವೇ?
ಜೋಗಿ ಬರೆದದ್ದು ಅವರ ಓದು, ಅವರ ಅಧ್ಯಯನ, ಅವರ ಚಿಂತನೆಯ ಫಲ. ಅದನ್ನು ಒಪ್ಪಿಬಿಡಿ ಎಂದು ಅವರೂ ಸೇರಿದಂತೆ ಯಾರೂ ಒತ್ತಾಯಿಸಿರಲಿಲ್ಲ. ಅವರ ಲೇಖನಕ್ಕೆ ಇದ್ದ ಭಿನ್ನ ನೋಟಗಳು ಖಂಡಿತಾ ಬೇಕು. ಆದರೆ ಓದಿನ ಕೊರತೆಯೋ, ಅಥವಾ ಅಸಹನೆ ಎಂಬುದು ಒಂದು ಸಂಸ್ಕೃತಿಯಾಗಿ ಬೆಳೆಯುತ್ತಿರುವ ಕಾರಣಕ್ಕೋ, ಮಂಡಿಸಲು ಆಧಾರವಿಲ್ಲದ ಮಾಹಿತಿಯ ಕಾರಣಕ್ಕೋ ವಿಷಯ ಸಂಪೂರ್ಣ ಹಳಿ ತಪ್ಪಿತು.
ಚಾಪ್ಲಿನ್ ಜಾಗ ಪಡೆದದ್ದು ಅವಧಿಯ ‘ಜುಗಾರಿ ಕ್ರಾಸ್’ ಅಂಕಣದಲ್ಲಿ. ಈಗಾಗಲೇ ಜುಗಾರಿ ಕ್ರಾಸ್ ಅನ್ನುವುದು ಚರ್ಚೆ ನಡೆಸಬೇಕಾದ ವಿಷಯಗಳಿಗೆ ಮಾತ್ರ ಮೀಸಲಾಗಿಡಲಾಗಿದೆ. ಅರ್ಥ- ಚರ್ಚೆ ಇರಲಿ, ಆಕ್ರೋಶ ಅಲ್ಲ.
ಇರಲಿ ಒಂದಂತೂ ಸ್ಪಷ್ಟ. ಈ ವಿವಾದ ಬ್ಲಾಗಿಂಗ್ ಅನ್ನು ಇನ್ನಷ್ಟು ಪರಿಣಾಮಕಾರಿ ಮಾಧ್ಯಮವಾಗಿ ಬೆಳೆಸಿದೆ. ಪತ್ರಿಕೆ, ಟೆಲಿವಿಶನ್ ನಲ್ಲಿ ಮಾತ್ರ ನಡೆಯುತ್ತಿದ್ದ ಚರ್ಚೆ ಬ್ಲಾಗ್ ಅಂಗಳಕ್ಕೂ ಬಂದಿದೆ. ಬ್ಲಾಗ್ ತನ್ನ ಶೈಶವ ಅವಸ್ಥೆಯನ್ನು ದಾಟುತ್ತಿದೆ ಎಂಬುದು ಇದರ ಅರ್ಥ. ಇಷ್ಟೆಲ್ಲಾ ಆಕ್ರೋಶ, ಆರ್ಭಟ, ವಾದ, ಮುನಿಸುಗಳ ಮಧ್ಯೆ ಈ ಅಂಶ ಮುಂದಿನ ಬ್ಲಾಗ್ ದಿನಗಳ ಬಗ್ಗೆ ಇನ್ನಷ್ಟು ಉತ್ಸಾಹ ಮೂಡಿಸುತ್ತಿದೆ.
‘ಅವಧಿ’ಯಲ್ಲಿ ಪ್ರತಿಕ್ರಿಯೆಗಳನ್ನು ಎಡಿಟ್ ಮಾಡಬೇಕಾಗಿ ಬಂದ, ಕೆಲವು ಪ್ರತಿಕ್ರಿಯೆಗಳನ್ನು ತಡೆಹಿಡಿಯಬೇಕಾಗಿ ಬಂದ, ಪ್ರತಿಕ್ರಿಯೆಗಳೆಲ್ಲವನ್ನೂ ಪೂರ್ವಾನುಮತಿಗೆ ಅಳವಡಿಸಬೇಕಾಗಿ ಬಂದ ಬೆಳವಣಿಗೆ ಯಾವುದೇ ಒಂದು ಮಾಧ್ಯಮಕ್ಕೆ ಒಳ್ಳೆ ಲಕ್ಷಣವೇನೂ ಅಲ್ಲ. ಚರ್ಚೆಯಲ್ಲಿ ಜವಾಬ್ದಾರಿ ಎಂಬುದು ನಾಪತ್ತೆಯಾದಾಗ, ಕೂಗು ಮಾರಿಗಳ ಸಂಖ್ಯೆ ಹೆಚ್ಚಾದಾಗ, ಮಾತಿನ ಹಾಗೂ ಸಂಖ್ಯೆಯ ಬಲದಿಂದಲೇ ಬಗ್ಗಿಸುವ ತೋಳ್ಬಲ ಪ್ರದರ್ಶನದ ಉತ್ಸಾಹ ಕಂಡಾಗ ಮಧ್ಯಪ್ರವೇಶ ಅಗತ್ಯವಾಯ್ತು.
ಚಾರ್ಲಿ ಚಾಪ್ಲಿನ್ ಕ್ರಿಶ್ಚಿಯನ್ ಎಂದೇ ಅಂದುಕೊಂಡರೂ ಪರವಾಗಿಲ್ಲ. ಅವನ ಸಿನೆಮಾಗಳನ್ನು ಒಮ್ಮೆ ನೋಡಿ. ನಿಮ್ಮ ಕಣ್ಣಂಚು ಒದ್ದೆಯಾಗದಿದ್ದರೆ…ಆಗದಿದ್ದರೂ ಪರವಾಗಿಲ್ಲ.. ಆತ ಕಲಾವಿದನೇ ಅಲ್ಲ ಎಂದಂತೂ ನೀವು ಅನ್ನಲು ಸಾಧ್ಯವೇ ಆಗುವುದಿಲ್ಲ. ಅಂದರೂ ಪರವಾಗಿಲ್ಲ. ನಿಮ್ಮ ನಿಮ್ಮ ಅಭಿಪ್ರಾಯವನ್ನು ನೀವು ಇಟ್ಟುಕೊಳ್ಳುವುದಕ್ಕೆ ನಮ್ಮ ಅಭ್ಯಂತರವೇನೂ ಇಲ್ಲ.
ಇತ್ತೀಚಿನ ಟಿಪ್ಪಣಿಗಳು