೨೯-೩-೨೦೦೯ ರಂದು ದೆಹಲಿಯಲ್ಲಿ ಬಿಡುಗಡೆಯಾಗಲಿರುವ
ಕಡಲ ತಡಿಯ ತಲ್ಲಣ
ಪುಸ್ತಕದ ಕೆಲವು ಪುಟಗಳು
ಬೆಂಗಳೂರಿನಿಂದ ಮಡಿಕೇರಿ ಮಾರ್ಗವಾಗಿ ತುಳುನಾಡಿಗೆ ಬರಬೇಕಾದರೆ ನೀವು ಸಂಪಾಜೆ ಘಟ್ಟ ಇಳಿಯಲೇಬೇಕು. ಈ ರಸ್ತೆ ಬೇಡವೆಂದರೆ ಶಿವಮೊಗ್ಗ ಮಾರ್ಗವಾಗಿ ಬಂದು ಆಗುಂಬೆ ಘಟ್ಟ ಇಳಿದರೆ ಕರಾವಳಿ ತಲುಪಬಹುದು. ಇದೂ ಬೇಡವೆಂದರೆ ಚಿಕ್ಕಮಗಳೂರು ಮೂಲಕ ಹಾಯ್ದು ಭಯಾನಕ ಚಾರ್ಮಾಡಿ ಘಾಟಿಯಲ್ಲಿ ಇಳಿದರೆ ತುಳುನಾಡು ಸಿಗುತ್ತದೆ. ಹೋಗಲಿ ಬಿಡಪ್ಪಾ…ಅ॒ಂತ ಹೊಸನಗರ ಮಾರ್ಗವಾಗಿ ಬಂದರೆ ಹುಲಿಕಲ್ ಘಟ್ಟ ತಪ್ಪಿಸುವಂತಿಲ್ಲ. ಹೀಗೆ ತುಳುನಾಡು ತಲುಪ ಬೇಕಾದರೆ ನೀವು ಯಾವುದಾದರೊಂದು ಘಟ್ಟದ ನೆತ್ತಿಯಿಂದ ಅಪಾಯದ ಸಂದು-ಗೊಂದುಗಳಲ್ಲಿ ಹಾದು, ಉಸಿರು ಬಿಗಿ ಹಿಡಿದುಕೊಂಡು ಸಾವಿರಾರು ಅಡಿ ಇಳಿಯಲೇಬೇಕು. ಬಹುಶ: ಇದೇ ಕಾರಣಕ್ಕೆ ಪುರಾಣದ ’ಪಾತಾಳ’ದ ಪರಿಕಲ್ಪನೆಯನ್ನು ಕರಾವಳಿಗೆ ಹಲವರು ಜೋಡಿಸಿದರು. ಪಾತಾಳದ ’ನಾಗಕನ್ಯೆ’ಯರನ್ನು ಕರಾವಳಿಯ ’ಮತ್ಸ್ಯಗಂಧಿ’ ಮೀನುಗಾರ ಮಹಿಳೆಯರೊಡನೆ ಹೋಲಿಸಿ ಖುಷಿ ಪಟ್ಟರು. ಇದನ್ನು ಒಪ್ಪದವರು ಪರಶುರಾಮನು ಕೊಡಲಿ ಬೀಸಿ ಸೃಜಿಸಿದ ನಾಡು ಇದೆಂದು ಬಣ್ಣಿಸಿದರು.
ಅದೇನೇ ಇರಲಿ, ತುಳುನಾಡಿನ ಪೂರ್ವ ದಿಕ್ಕಿಗೆ ರಮ್ಯಾದ್ಭುತ ಪಶ್ಚಿಮ ಘಟ್ಟಗಳ ಸಾಲು. ಪಶ್ಚಿಮಕ್ಕೆ ದಣಿವರಿಯದೆ ನಿರಂತರವಾಗಿ ದಡಕ್ಕೆ ಮುತ್ತಿಡುವ ಕಡಲು. ಬೆಟ್ಟ-ಕಡಲುಗಳ ನಡುವೆ ಸುಮಾರು ೬೦ಕಿ.ಮೀ ಉದ್ದ, ೫೦ಕಿ.ಮೀ. ಅಗಲಕ್ಕೆ ಹರಡಿಕೊಂಡಿರುವ, ಭತ್ತದ ಗದ್ದೆ, ಅಡಿಕೆ ತೋಟ, ತೆಂಗುಗಳ ಸಾಲುಗಳಿರುವ ನಿತ್ಯ ಹರಿದ್ವರ್ಣದ ಪುಟ್ಟ ಊರು. ಜಿಲ್ಲೆಯ ಯಾವುದೇ ಮೂಲೆಯಿಂದ ಇನ್ನೊಂದು ಮೂಲೆಗೆ ಅರ್ಧ ದಿವಸದಲ್ಲಿ ಆರಾಮವಾಗಿ ಓಡಾಡಬಹುದಾದಷ್ಟೇ ದೊಡ್ಡ ಊರು ಇದು.
ಈ ಊರಿನ ಜನ ತಮ್ಮನ್ನು ’ತುಳುವ’ರೆಂದೇ ಗುರುತಿಸಿಕೊಂಡು ಬಂದಿದ್ದಾರೆ. ಆದರೂ ’ತುಳುವ’ ಎಂದರೇನು? ಎಂದು ಸರಿಯಾಗಿ ಯಾರಿಗೂ ತಿಳಿದಿಲ್ಲ. ಹಲಸಿನ ಹಣ್ಣಲ್ಲಿ ’ತುಳುವ-ತುಲುವ’ ಅಂತ ಒಂದು ಪ್ರಬೇಧವಿದೆ. ಮೆತ್ತಗೆಯಾಗಿ ನೀರು ತುಂಬಿಕೊಂಡಿರುವ ಈ ಹಲಸಿನ ಹಣ್ಣಿನ ಹಾಗೆ ಮೆತ್ತನೆಯ ಮಣ್ಣಿರುವ ಊರು ಇದಾಗಿರುವುದರಿಂದ ಆ ಹೆಸರು ಬಂದಿದೆ ಎಂಬುದು ಕೆಲವರ ಅಂಬೋಣ. ತುಳುವ ಹಲಸಿನ ಹಣ್ಣಲ್ಲಿ ಹಲವು ಬಗೆಗಳಿರುವ ಹಾಗೆ ತುಳು ಭಾಷೆಯಲ್ಲಿಯೂ ಹಲವು ಬಗೆಗಳಿವೆ ಎಂಬುದಂತೂ ನಿಜ. ಮಂಗಳೂರಿನ ಕಡೆ ಕನ್ನಡದ ’ತಲೆ’ಗೆ ಶೆಟ್ಟರು ’ತರೆ’ ಎಂದರೆ, ಸುಳ್ಯದ ಕಡೆ ಗೌಡರು ’ಅರೆ’ ಎನ್ನುತ್ತಾರೆ. ಕಾಸರಗೋಡಿನ ದಲಿತರು ’ಚರೆ’ ಎಂದರೆ, ಬೆಳ್ತಂಗಡಿ ಕಡೆ ’ಸರೆ’ ಎನ್ನುತ್ತಾರೆ. ಈ ನಡುವೆ ’ಹರೆ’ಯೂ ಬಳಕೆಯಲ್ಲಿದೆ. ಜೀವಂತ ಭಾಷೆಯ ಲಕ್ಷಣವೇ ಅದರ ಪ್ರಾದೇಶಿಕ ವೈವಿಧ್ಯ. ಇದರ ಜೊತೆಗೆ ಅರೆ ಭಾಷೆ, ಹವ್ಯಕ ಭಾಷೆ, ಕುಂದಾಪುರ ಕನ್ನಡ, ಕೊಂಕಣಿ, ಮಲೆಯಾಳಂ, ತಮಿಳು, ಕೊರಗ ಭಾಷೆಗಳೂ ಈ ಪುಟ್ಟ ಜಿಲ್ಲೆಯಲ್ಲಿ ಇನ್ನೂ ಜೀವಂತವಾಗಿವೆ. ಈಚೆಗೆ ಈ ಪಟ್ಟಿಗೆ ಇಂಗ್ಲಿಷ್ ಮತ್ತು ಹಿಂದಿಯೂ ಸೇರಿಕೊಂಡಿದೆ. ಭಾಷಾಭ್ಯಾಸಿಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯು ಒಂದು ಅದ್ಭುತವಾದ ’ಪ್ರಯೋಗ ಶಾಲೆ’. ದಕ್ಷಿಣ ಕನ್ನಡದ ಜಿಲ್ಲಾ ಕೇಂದ್ರವಾದ ಮಂಗಳೂರನ್ನು ತುಳುವರು ’ಕುಡಲ’, ಕುಡ್ಲ ಎಂದು ಕರೆದರೆ ಮಲೆಯಾಳಿಗಳಿಗೆ ಅದು ’ಮೈಕೆಲ್’, ಇನ್ನು ಕೆಲವರಿಗೆ ’ಮಂಗಳಾವರಂ’.
ಕರ್ನಾಟಕದ ಇತರ ಭಾಗಗಳಿಗಿರುವ ವರ್ಣರಂಜಿತ ಇತಿಹಾಸ ಕರಾವಳಿಗಿಲ್ಲ. ಕರಾವಳಿಯನ್ನಾಳಿದ ಅಳುಪರು, ಬಂಗರು, ಅಜಿಲರು, ಸಾವಂತರು, ಭೈರರಸರೇನೂ ಘಟ್ಟ ಹತ್ತಿ ಹೋಗಿ ರಾಜ್ಯ ವಿಸ್ತಾರ ಮಾಡಲಿಲ್ಲ. ಬಸರೂರಿನ ತುಳುವ ವೀರರು ವಿಜಯನಗರದವರೆಗೆ ಹೋಗಿ ಅಲ್ಲೇ ನೆಲೆ ನಿಂತು, ನಿಧಾನವಾಗಿ ’ತುಳುವ ವಂಶ’ವನ್ನು ಸ್ಥಾಪಿಸಿ, ಅಲ್ಲಿ ಮೆರೆದದ್ದುಂಟು. ’ಕರ್ನಾಟಕ ರಾಜ್ಯ ರಮಾರಮಣ’ ಎಂಬ ಬಿರುದಾಂಕಿತನಾದ ಶ್ರೀ ಕೃಷ್ಣ ದೇವರಾಯನು ತುಳುವ ವಂಶದವನಾಗಿದ್ದ ನಿಜ. ಆದರೆ ಆತನ ಮನೆಮಾತು ತೆಲುಗಾಗಿತ್ತು. ತುಳುವ ವೀರರು ಯಕ್ಷಗಾನ ರಂಗಸ್ಥಳದಲ್ಲಿ ದಿಗ್ವಿಜಯ ಮಾಡುತ್ತಾ ’ಛಪ್ಪನ್ನೈವತ್ತಾರು’ ದೇಶಗಳನ್ನು ಗೆದ್ದ ಕತೆ ಹೇಳುತ್ತಾ ಊರೊಳಗೇ ಜಗತ್ತನ್ನು ಕಾಣುತ್ತಿದ್ದರು. ಕೆಲವು ಜಗದ್ಗುರುಗಳ ಜಗತ್ತು ಕೂಡಾ ೬೦ಕಿ.ಮೀ ಉದ್ದ ಮತ್ತು ೫೦ಕಿ.ಮೀ. ಅಗಲಕ್ಕೆ ಸೀಮಿತವಾಗಿತ್ತು! ಕಾರ್ಕಳದ ಭೈರರಸರು ಮತ್ತು ವೇಣೂರಿನ ಅಜಿಲರು ಕೆತ್ತಿಸಿದ ಎರಡು ಏಕಶಿಲಾ ಗೊಮ್ಮಟ ಮೂರ್ತಿಗಳೇ ಕರಾವಳಿ ಇತಿಹಾಸದ ಮೈಲಿಗಲ್ಲುಗಳು. ವರ್ಷಕ್ಕೆ ಸುಮಾರು ೩೦೦೦ ಮಿಮಿ ಮಳೆ ಬೀಳುವ ಈ ಊರಲ್ಲಿ ಎಲ್ಲವನ್ನೂ ನೀರು ಕೊಚ್ಚಿಕೊಂಡು ಹೋಗಿ ಕಡಲಿಗೆ ಹಾಕಿ ಬಿಡುತ್ತದೆ, ಅದರ ಇತಿಹಾಸವನ್ನು ಕೂಡಾ.
ಇತಿಹಾಸದ ಭಾರವಿಲ್ಲದ ಇಂಥ ಊರುಗಳನ್ನು ಆಧುನಿಕತೆ ಬಹಳ ಬೇಗ ಆವರಿಸಿಕೊಳ್ಳುತ್ತದೆ. ಟಿಪ್ಪೂವಿನ ಮರಣಾನಂತರ (೧೭೯೯) ಬ್ರಿಟಿಷರ ಆಳ್ವಿಕೆಗೆ ಒಳಪಟ್ಟ ಈ ಜಿಲ್ಲೆ ಮತ್ತೆಂದೂ ತಿರುಗಿ ನೋಡಲಿಲ್ಲ. ಬಾಸೆಲ್ ಮಿಶನ್ನಿನ ಪಾದ್ರಿಗಳು ಮುದ್ರಣ ಯಂತ್ರ, ಹಂಚಿನ ಕಾರ್ಖಾನೆಗಳನ್ನು ಮಂಗಳೂರಲ್ಲಿ ಆರಂಭಿಸುವುದರೊಂದಿಗೆ ’ಕೆನರಾ’ದ ಜನಕ್ಕೆ ’ಉದ್ಯಮ ಶೀಲತೆ,’ವ್ಯವಹಾರ ನೈಪುಣ್ಯ’ವನ್ನು ಕಲಿಸಿಕೊಟ್ಟರು. ೨೦ನೇ ಶತಮಾನದ ಆರಂಭಕ್ಕೆ ಈ ಜಿಲ್ಲೆ ’ಆಧುನಿಕ ವಿದ್ಯೆ’ಗೆ ತನ್ನನ್ನು ತೆರೆದುಕೊಂಡಿತು. ಮಳೆಗಾಲದಲ್ಲಿ ಭೋರ್ಗರೆದು ಹರಿಯುತ್ತಾ ಎಲ್ಲವನ್ನು ಕೊಚ್ಚಿಕೊಂಡು ಕಡಲಿಗೆ ಚೆಲ್ಲುವ ಕುಮಾರಧಾರಾ, ನೇತ್ರಾವತಿ, ಶಾಂಭವಿ, ಪಯಸ್ವಿನಿ ಮತ್ತಿತರ ನದಿಗಳು ಬೇಸಗೆಯಲ್ಲಿ ಬತ್ತಿದಾಗ ಕುಡಿಯುವ ನೀರಿಗೆ ಪರದಾಡುವ ತುಳುವರು ಈ ನದಿಗಳನ್ನು ನೋಡುತ್ತಾ ಪದ್ಯ ಬರೆದುಕೊಂಡು ಕುಳಿತುಕೊಳ್ಳಲಿಲ್ಲ. ಕಷ್ಟಪಟ್ಟು ನಾಲ್ಕಕ್ಷರ ಕಲಿತರು. ಕಡವು ದಾಟಿದರು, ದೋಣಿ ಹತ್ತಿದರು, ಪತ್ತೆ ಮಾರಿಯಲ್ಲಿ ಸಾಗಿದರು, ಹಡಗು ಹಿಡಿದರು, ಮುಂಬೈ ತಲುಪಿದರು, ನಿಧಾನವಾಗಿ ದುಬೈಗೆ ಹಾರಿದರು. ಮುಂಬೈಯಲ್ಲಿ ರಾತ್ರಿ ಶಾಲೆಗಳನ್ನು ಸ್ವತ: ತೆರೆದು ವಿದ್ಯೆ ಕಲಿತರು. ಕಷ್ಟ ಪಟ್ಟು ಹಂತಹಂತವಾಗಿ ಮೇಲೇರಿದರು. ಹುಟ್ಟಿದೂರಿನ ಹುಡುಗರಿಗೆ ಆದರ್ಶವಾಗುತ್ತಾ ಅವರಲ್ಲಿ ವಿದ್ಯೆ ಕಲಿಯುವ ಆಸೆ ಹುಟ್ಟಿಸಿದರು. ಪರಿಣಾಮವಾಗಿ ದಕ್ಷಿಣ ಕನ್ನಡದ ಹಳ್ಳಿ ಹಳ್ಳಿಗಳಲ್ಲಿ ಶಾಲೆಗಳು ಆರಂಭವಾದವು. ಶಾಲೆಗೆ ಹೋಗಿ ಬರುವ ರಸ್ತೆಗಳು ಸಿದ್ಧವಾದುವು, ಹೊಳೆಗಳಿಗೆ ಸೇತುವೆಗಳು ರಚಿತವಾದುವು. ಹೀಗೆ ದಕ್ಷಿಣ ಕನ್ನಡ ಜಿಲ್ಲೆಯು ವಿದ್ಯೆಯ ಮೂಲಕ ಪ್ರವರ್ಧಮಾನಕ್ಕೆ ಬಂದ ಕತೆ ಅತ್ಯಂತ ರೋಚಕವಾದುದು. ಮಕ್ಕಳು ವಿದ್ಯೆ ಕಲಿತು ಮುಂಬೈಗೆ ವಲಸೆ ಹೋದ ಆನಂತರ ಅವರು ವರುಷಕ್ಕೊಮ್ಮೆ ಹಿಂದೆ ಬರುವುದನ್ನು ಕಾಯುತ್ತಾ ಕುಳಿತಿರುವ ವೃದ್ಧ ತಂದೆ-ತಾಯಿ, ಅಜ್ಜ-ಅಜ್ಜಿಯರ ಮೌನ ರೋದನಕ್ಕೆ ಮಾತ್ರ ಕಿವಿಗೊಟ್ಟವರು ಕಡಿಮೆ ಎಂದೇ ಹೇಳಬೇಕು. ಶಿವರಾಮ ಕಾರಂತರು ತಮ್ಮ ಕಾದಂಬರಿಗಳಲ್ಲಿ ಈ ಸ್ಥಿತ್ಯಂತರಗಳನ್ನೆಲ್ಲ ಮನಮುಟ್ಟುವಂತೆ ದಾಖಲಿಸಿದ್ದಾರೆ.
ಇದು ಸರಿಯಾಗಿ ಅರ್ಥವಾಗಬೇಕಾದರೆ ಅವರ ’ಬೆಟ್ಟದ ಜೀವ’ ಓದಬೇಕು. ಹಾಗೆ ನೋಡಿದರೆ ಕರಾವಳಿಯ ಸಮಾಜ ಶಾಸ್ತ್ರಜ್ಞರೆಂದರೆ ಅಲ್ಲಿನ ಸಾಹಿತಿಗಳೇ. ಹೊಸಗನ್ನಡದ ಮುಂಗೋಳಿ ’ಮುದ್ದಣ’ನು ಜಿಲ್ಲೆಗೆ ಆಧುನಿಕತೆ ಪ್ರವೇಶ ಮಾಡುತ್ತಿರುವುದನ್ನು ಅತ್ಯಂತ ಕ್ಷಿಪ್ರವಾಗಿ ಗ್ರಹಿಸಿದ ಸಂವೇದನಾಶೀಲ ಬರೆಹಗಾರ. ಗುಲ್ವಾಡಿ ವೆಂಕಟರಾಯರು ’ಇಂದಿರಾಬಾಯಿ’ ಬರೆದು ವಿಧವಾ ವಿವಾಹ ಮತ್ತು ವಿದ್ಯೆಯ ಅಗತ್ಯವನ್ನು ಸಾಬೀತು ಪಡಿಸುತ್ತಾ ಕನ್ನಡದ ಮೊದಲ ಸಾಮಾಜಿಕ ಕಾದಂಬರಿ ಬರೆದ ಲೇಖಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ತುಳುವಿನಲ್ಲಿ ಬರೆಯಲಾದ ಮಿತ್ಯನಾರಾಯಣ ಕತೆ, ಸತಿ ಕಮಲೆಗಳು ತುಳು ಸಮಾಜದ ಕೆಲವು ಢೋಂಗಿಗಳನ್ನು ತಮಾಷೆಯಾಗಿಯೇ ಬಯಲಿಗೆಳೆದಾಗ ಜನ ಖುಶಿಯಿಂದ ಅದನ್ನು ಓದಿದರೇ ವಿನಾ ಬೇಜಾರು ಮಾಡಿಕೊಳ್ಳಲಿಲ್ಲ. ಇಂಗ್ಲಿಷ್ ಕವಿತೆಗಳ ಮೊದಲ ಅನುವಾದ ಪ್ರಕಟಿಸಿದ ನಾರಾಯಣರಾಯರು, ಕನ್ನಡದ ಮೊದಲ ಸಣ್ಣಕತೆ ಬರೆದ ಪಂಜೆ ಮಂಗೇಶರಾಯರು, ಮೊದಲ ಪ್ರಾಸರಹಿತ ಕವಿತೆ ಬರೆದ ಗೋವಿಂದ ಪೈಗಳು, ಮೊದಲ ನವ್ಯ ಕವಿತೆ ಬರೆದ ಪೇಜಾವರ ಸದಾಶಿವರಾಯರು, ಯರ್ಮುಂಜ ರಾಮಚಂದ್ರರು, ’ಒಂದು ಜನಾಂಗದ ಕಣ್ಣು ತೆರೆಸಿದ ಕವಿ’ ಗೋಪಾಲಕೃಷ್ಣ ಅಡಿಗರು, ನಮ್ಮ ಹೆಮ್ಮೆಯ ಅನಂತಮೂರ್ತಿಯವರು, -ಇವರೆಲ್ಲ ಈ ಜಿಲ್ಲೆಯವರು. ಡಾ.ಶಿವರಾಮ ಕಾರಂತ, ಮುಳಿಯ ತಿಮ್ಮಪ್ಪಯ್ಯ, ಕಡೆಂಗೋಡ್ಲು ಶಂಕರ ಭಟ್ಟ, ಸೇಡಿಯಾಪು ಕೃಷ್ಣ ಭಟ್ಟ, ನಿರಂಜನ, ಸುಬ್ರಾಯ ಚೊಕ್ಕಾಡಿ, ಕ್ರಿಕೆಟ್ ಕಲಿಗಳಾದ ರವಿಶಾಸ್ತ್ರಿ, ಸಂಜಯ್ ಮಂಜ್ರೇಕರ್, ಪ್ರಖ್ಯಾತ ನಟ ಗುರುದತ್ ಮೊದಲಾದ ಅತಿರಥ ಮಹಾರಥರೆಲ್ಲ ಜಿಲ್ಲೆಗೆ ಖ್ಯಾತಿ ತಂದವರು. ಕೆ.ಕೆ.ಹೆಬ್ಬಾರ್, ಗಿರೀಶ್ ಕಾರ್ನಾಡ, ಶ್ಯಾಂ ಬೆನಗಲ್, ಕಮಲಾದೇವಿ ಚಟ್ಟೋಪಾಧ್ಯಾಯ, ಬಿ.ವಿ.ಕಾರಂತರಂಥ ಮೇಧಾವಿಗಳಿಗೂ ಈ ಜಿಲ್ಲೆಯ ನಂಟಿದೆ. ಶ್ರೀ ಎಂ.ವೀರಪ್ಪ ಮೊಯಿಲಿ ಈ ಭಾಗದಿಂದ ಮುಖ್ಯಮಂತ್ರಿ ಗಾದಿಗೇರಿದ ಏಕೈಕ ಸಾಹಿತಿ-ರಾಜಕಾರಣಿ.
ರತ್ನಾಕರ ವರ್ಣಿಯೊಬ್ಬನೇ ಈ ಜಿಲ್ಲೆಯ ಹಳೆಯ ಕವಿ. ೨೦ನೇ ಶತಮಾನದಲ್ಲಿ ಜಿಲ್ಲೆಗೆ ಪ್ರವೇಶಿಸಿದ ಆಧುನಿಕತೆಯು ಅಲ್ಲಿಯ ಶತಮಾನಗಳ ಹಿಂದಿನ ಪರಂಪರೆಯನ್ನು ನಾಶ ಮಾಡಲಿಲ್ಲ ಎಂಬ ಅಂಶ ಅತ್ಯಂತ ಕುತೂಹಲಕರವಾದುದು. ಈ ಪುಟ್ಟ ಜಿಲ್ಲೆಯಲ್ಲಿ ಇಂದಿಗೂ ಸುಮಾರು ೩೬೦ ಭೂತಗಳು ಪಾಡ್ದನ ಹೇಳುತ್ತಾ ಭೂಮಿಯ ಮೇಲೆ ಪ್ರತ್ಯಕ್ಷವಾಗುತ್ತಾ ದುಬೈ, ಮುಂಬೈಯಂಥ ಮಹಾನಗರಗಳಿಂದ ಆಗಮಿಸುವ ಭಕ್ತಾದಿಗಳಿಗೆ ಅಭಯ ಪ್ರದಾನ ಮಾಡುತ್ತವೆ. ಕುಕ್ಕೆ ಸುಬ್ರಹ್ಮಣ್ಯದ ನಾಗಪ್ಪ, ಸಚಿನ್ ತೆಂಡೂಲ್ಕರ್‌ನ ರೋಗಗಳನ್ನು ಗುಣಪಡಿಸುತ್ತಾನೆ. ಸಾವಿರಾರು ಯಕ್ಷಗಾನ ಕಲಾವಿದರು ಪ್ರತಿದಿನ ಸ್ವರ್ಗಲೋಕದಿಂದ ಪಾತಾಳದವರೆಗಣ ೧೪ಲೋಕಗಳನ್ನು ಪ್ರೇಕ್ಷಕರಿಗೆ ತೋರಿಸುತ್ತಲೇ ಇರುತ್ತಾರೆ. ಟಿವಿ ಬಂದ್ ಮಾಡಿ ಓಟದ ಕೋಣಗಳ ಸ್ಪರ್ಧೆ-ಕಂಬಳಕ್ಕೆ ಹೋಗುವ, ಕೋಳಿಕಟ್ಟದಲ್ಲಿ ಕೋಳಿಯ ಮೇಲೆ ಲಕ್ಷಾಂತರ ರೂಗಳ ಬಾಜಿಕಟ್ಟುವ, ಮಂಜುನಾಥನ ಹೆಸರಿನಲ್ಲಿ ಆಣೆ ಮಾಡುವ ಪ್ಯಾಂಟ್‌ಧಾರಿ ಆಧುನಿಕ ಯುವಕರು ಈ ಜಿಲ್ಲೆಯ ಉದ್ದಗಲಕ್ಕೂ ಕಂಡು ಬರುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಉದ್ಯಮಶೀಲತೆಗೆ ಅಲ್ಲಿ ಹುಟ್ಟಿಕೊಂಡ ಬ್ಯಾಂಕುಗಳೇ ಒಳ್ಳೆಯ ಉದಾಹರಣೆ. ಇಲ್ಲಿ ಸುಮಾರು ೨೧ ಬ್ಯಾಂಕ್‌ಗಳು ಜನ್ಮ ತಾಳಿವೆ. ಅದರಲ್ಲಿ ಕಾರ್ಪೊರೇಶನ್ ಬ್ಯಾಂಕ್, ಕೆನರಾ ಬ್ಯಾಂಕ್‌ಗಳು ಇದೀಗ ಶತಮಾನೋತ್ಸವ ಆಚರಿಸುತ್ತಿವೆ. ಕರ್ನಾಟಕ ಬ್ಯಾಂಕ್, ವಿಜಯಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕುಗಳು ದೇಶದಲ್ಲಿಯೇ ಉನ್ನತ ಸ್ಥಾನಗಳಿಸಿಕೊಂಡಿವೆ. ಇದರ ಜೊತೆಗೆ ಬೀಡಿ ಉದ್ಯಮ, ಗೇರು ಬೀಜ ಕಾರ್ಖಾನೆ, ಕೈಮಗ್ಗಗಳ ಕಾರ್ಖಾನೆ, ರಬ್ಬರ್, ಕೋಕೋ ಬೆಳೆ, ಮೀನುಗಾರಿಕೆ ಮತ್ತಿತರ ಉದ್ಯಮಗಳು ಜಿಲ್ಲೆಯ ಸಾವಿರಾರು ಮಂದಿಯ ಬದುಕನ್ನು ಹಸನುಗೊಳಿಸಿವೆ. ಪ್ರಖ್ಯಾತವಾದ ಉಡುಪಿ ಹೋಟೇಲ್‌ಗಳ ಬಗ್ಗೆ ನಾನೇನೂ ಹೇಳಬೇಕಾಗಿಲ್ಲವಲ್ಲ! ಮಣ್ಣಲ್ಲಿ ಏನೂ ಬೆಳೆಯದಿದ್ದರೂ ಹಣ ಬೆಳೆಯುವ ತಂತ್ರವನ್ನು ಕೈವಶ ಮಾಡಿಕೊಂಡಿರುವ ಜಿಲ್ಲೆಯ ’ಬುದ್ಧಿವಂತ’ ಜನರಿಗೆ ’ಪುರುಸೊತ್ತು’ ಎಂದರೇನೆಂದೇ ತಿಳಿಯದು. ಏನೇ ಕೇಳಿದರು ’ಅರ್ಜೆಂಟ್ ಮಾರಾಯ್ರೆ.॒.. ಪುರ್‍ಸೊತ್ತು ಇಲ್ಲ’ ಎಂಬ ಮಾತು ಜಿಲ್ಲೆಯ ಎಲ್ಲೆಡೆಯೂ ಪ್ರತಿಧ್ವನಿಸುತ್ತದೆ. ಯಮದೂತನಂತೆ ವೇಗವಾಗಿ ಓಡುವ ಬಸ್ಸುಗಳು, ಗಲ್ಲಿಗಲ್ಲಿಗೆ ಕಾಣುವ ಎಸ್.ಟಿ.ಡಿ. ಬೂತುಗಳು, ಪ್ರತಿ ಮನೆಗೂ ತಲುಪಿದ ದೂರವಾಣಿಗಳು ಜಿಲ್ಲೆಯನ್ನು ಉಸಿರು ಕಟ್ಟಿಸುವಂತೆ ಬೆಳೆಸಿವೆ.
’ಲಾಭ ಇಲ್ಲದೆ ಈ ಜನ ಏನನ್ನೂ ಮಾಡುವುದಿಲ್ಲ’ ಎಂಬ ಸಣ್ಣ ’ಕು’ಖ್ಯಾತಿ ಪಡೆದ ಈ ಜಿಲ್ಲೆಯ ಜನರಲ್ಲಿ ಸಾಮಾಜಿಕ ಪ್ರಜ್ಞೆ ಸ್ವಲ್ಪ ಕಡಿಮೆ ಎಂಬ ಆರೋಪವಿದೆ. ಕುದ್ಮಲ್ ರಂಗರಾಯರು, ಕಾರ್ನಾಡ ಸದಾಶಿವ ರಾಯ, ಮೊಳಹಳ್ಳಿ ಶಿವರಾಯರಂಥ ಹೋರಾಟಗಾರರ ಹಿನ್ನೆಲೆ ಜಿಲ್ಲೆಗೆ ಇದ್ದರೂ ಅದು ಮತ್ತೆ ಪರಿಣಾಮಕಾರಿಯಾಗಿ ಮುಂದುವರಿಯಲಿಲ್ಲ. ಯಾವುದೇ ಜನಪರ ಹೋರಾಟಗಳಿಗೆ ಈ ನೆಲ ಅಂಥ ಬೆಂಬಲವನ್ನೇನೂ ನೀಡಿಲ್ಲ. ದೇವರಾಜ ಅರಸರು ಜಾರಿಗೆ ತಂದ ’ಉಳುವವನೇ ಹೊಲದೊಡೆಯ’ ಕಾನೂನಿಂದಾಗಿ ಜಿಲ್ಲೆಯಲ್ಲಿ ದೊಡ್ಡ ಪರಿವರ್ತನೆಯೊಂದು ನಡೆದು ಬಿಟ್ಟಿತು. ಆನಂತರ ಅಲ್ಲಿ ಯಾವ ಜನಪರ ಹೋರಾಟಗಳು ನಡೆಯಲಿಲ್ಲ.
ವಿಶ್ವ ಸುಂದರಿ ಐಶ್ವರ್ಯ ರೈ, ಬಿಗ್ ಬಾಸ್ ಧೀರೆ ಶಿಲ್ಪಾ ಶೆಟ್ಟಿ, ವಯಸ್ಸಿಗೆ ಮೀರಿ ಸಾಧನೆ ಮಾಡಿದ ದೀಪಿಕಾ ಪಡುಕೋಣೆ, ಆಸ್ಕರ್ ಖ್ಯಾತಿಯ ಫ್ರೀಡಾ ಪಿಂಟೋ, ಬಾಲಿವುಡ್‌ನ ’ಅಣ್ಣ’ ಸುನಿಲ್ ಶೆಟ್ಟಿ, ಟಿಪ್ಪು ಖಡ್ಗ, ಗಾಂಧಿ ಕನ್ನಡಕಗಳನ್ನು ಭಾರತಕ್ಕೆ ತಂದ ವಿಜಯ iಲ್ಯ ರಂಥವರ ಊರಾದ ತುಳುನಾಡಿನಲ್ಲಿ ಈಗ ಏನೇನೋ ಸಮಸ್ಯೆಗಳು ಹುಟ್ಟಿಕೊಂಡಿವೆ. ಮುಂಬೈಯ ಭೂಗತ ಲೋಕದ ಅನೇಕರು ಈ ಜಿಲ್ಲೆಯವರು. ಕೋಮುವಾದ ಜಿಲ್ಲೆಯನ್ನು ತಲ್ಲಣಗೊಳಿಸಿದೆ. ವಿದ್ಯೆ ಕಲಿತ ಹುಡುಗರು ಮುಂಬೈ ಕಡೆ ಹೋಗುತ್ತಿಲ್ಲ. ’ಹೆಳವನ ಹೆಗಲ ಮೇಲೆ ಕುರುಡ ಕುಳಿತಿದ್ದಾನೆಯೇ?’ ಕಾದು ನೋಡಬೇಕು.
ಪುರುಷೋತ್ತಮ ಬಿಳಿಮಲೆ
ಏಪ್ರಿಲ್ 26, 2009 @ 20:11:14
Ayyayya Encha porlaandu…Superb Picturaisation.
Thanks Sir.
ಏಪ್ರಿಲ್ 14, 2009 @ 16:54:29
wonderful writing. well done.
ಮಾರ್ಚ್ 23, 2009 @ 18:29:19
ಮಂಗಳೂರು ‘ಮೈಕಾಲ’ವಾಗುವುದು ತುಳುವಿನ ಸೋದರ ಭಾಷೆಯಾದ ಬ್ಯಾರಿಯಲ್ಲಿ. ಮಲಯಾಳಿಗಳಿಗೆ ಮಂಗಳೂರೆಂಬುದು ಮಂಗಲಾಪುರವೇ ಸರಿ.
ಮಾರ್ಚ್ 22, 2009 @ 15:37:06
Very good article.
ಮಾರ್ಚ್ 22, 2009 @ 15:33:23
Dear Purushottm Belimale. It is quite interesting to read this article. Dinesh Amin in his column looked this costal Karnataka in social and political context. I am looking forward your permission to use this item in one of a magazine published from Bumbay.
ಮಾರ್ಚ್ 20, 2009 @ 12:20:37
beautiful…and excellent narration… .Sir.
ಮಾರ್ಚ್ 20, 2009 @ 11:43:59
thumba chenda barediddeeri.