ಫೋಟೋಗ್ರಫಿಯ ‘ಹಕ್ಕ ಮತ್ತು ಬುಕ್ಕ’

kumv-020ಶಿವು.ಕೆ. ಮತ್ತು ಮಲ್ಲಿಕಾರ್ಜುನ.ಡಿ.ಜಿ. ಲಂಡನ್ನಿನ ಪ್ರತಿಷ್ಠಿತ ರಾಯಲ್ ಫೋಟೋಗ್ರಫಿ ಸೊಸೈಟಿಯಿಂದ ಅದರ ಪ್ರತಿನಿಧಿ(Associate) ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.ರಾಯಲ್ ಫೋಟೋಗ್ರಫಿ ಸೊಸೈಟಿಯ ಮನ್ನಣೆಗೆ ಪಾತ್ರರಾಗುವುದು ಹೆಮ್ಮೆಯ ಸಂಗತಿ.
ಶಿವು ಪಿಕ್ಟೋರಿಯಲ್ ವಿಭಾಗದಲ್ಲಿ ಪಡೆದಿದ್ದರೆ, ಮಲ್ಲಿಕಾರ್ಜುನ ನೇಚರ್ ವಿಭಾಗದಲ್ಲಿ ಪಡೆದಿರುವರು.
ಈ ಗೌರವಕ್ಕೆ ಪಾತ್ರ್ರಾಗಲು ಬೇಕಾದ ಅರ್ಹತೆಗಳು:
royal-photographic-societyಪಿಕ್ಟೋರಿಯಲ್ ಅಥವಾ ನೇಚರ್ – ಈ ರೀತಿ ಒಂದೇ ವಿಷಯದ ಬೆನ್ನು ಬಿದ್ದು, ಹಲವು ವರ್ಷಗಳ ಸಾಧನೆ, ಪರಿಶ್ರಮವನ್ನು ತಮಗೆ ಬಂದಿರುವ ಅಂತಾರಾಷ್ಟ್ರೀಯ ಪ್ರಶಸ್ತಿಗಳ ಮೂಲಕ ನಿರೂಪಿಸಬೇಕು. ಕನಿಷ್ಟ ಐದು ದೇಶಗಳಲ್ಲಿ ಛಾಯಾಚಿತ್ರಗಳು ಬಹುಮಾನ ಪಡೆದಿರಬೇಕು ಅಥವಾ ಪ್ರದರ್ಶನಗೊಂಡಿರಬೇಕು.
ತಮ್ಮ ಹದಿನೈದು ಉತ್ತಮ ಚಿತ್ರಗಳನ್ನು ರಾಯಲ್ ಫೋಟೋಗ್ರಫಿ ಸೊಸೈಟಿಯವರಿಗೆ ಕಳಿಸಬೇಕು. ಅವನ್ನು ಅವರ ಕಮಿಟಿಯವರು ಪರಿಶೀಲಿಸಿ, ಅತ್ಯುತ್ತಮವಾಗಿದ್ದರೆ ಮಾತ್ರ ಈ ಗೌರವವನ್ನು ಪ್ರಧಾನ ಮಾಡುವರು.
೧೮೫೩ರಲ್ಲಿ  ರಾಯಲ್ ಫೋಟೋಗ್ರಫಿ  ಸೊಸೈಟಿಯಿಂದ  ಇದುವರೆಗೂ  ೧೩೨ ಭಾರತೀಯರು  ಈ  ಗೌರವಕ್ಕೆ  ಪಾತ್ರರಾಗಿದ್ದಾರೆ.  ಈ  ವರ್ಷ  ವಿಶ್ವದಾದ್ಯಂತ  ಈ  ಮನ್ನಣೆ  ೨೯ ಜನ  ಛಾಯಾಗ್ರಾಹಕರಿಗೆ  ಸಿಕ್ಕಿದೆ.  ಅದರಲ್ಲಿ  ಭಾರತೀಯರು  ಇವರಿಬ್ಬರು  ಮಾತ್ರ.

ಸೃಜನ್ ಪನ್

k5

ರಾಧಿಕಾ ಬರೆದ ಐ ಟಿ ಕಥೆ: ಆತಂಕ

-ಎಂ ಜಿ ರಾಧಿಕಾ

I am not convinced with this report.  ಬಯಾಪ್ಸಿ ರಿಪೀಟ್ ಮಾಡೋಣ ನಾಳೆ ಮಧ್ಯಾಹ್ನ ಬನ್ನಿ ಅಂದ್ರು

ಡಾ|| ಪ್ರದೀಪ್ ಹಳದೀಪುರ್. ಮೂರು ತಿಂಗಳಿಂದ ಅಪ್ಪನಿಗೆ ಒಂದೇ ಸಮನೇ ಕೆಮ್ಮು, ಗಂಟಲಲ್ಲಿ ಏನೋ ಸಿಕ್ಕಿ ಹಾಕಿಕೊಂಡಿರುವ ಅನುಭವ, ಆಗಾಗ ಬರುವ ಜ್ವರ, ಸ್ವಲ್ಪ ತೂಕವನ್ನೂ ಕಳೆದುಕೊಂಡಿದ್ದಾನೆ. ಅನಂತ,  ನಾವು  ನಮ್ಮೂರಲ್ಲೇ ಇರ್ಬೇಕಿತ್ತು ಕಣೋ. ಯಾಕೋ ಈ ಬೆಂಗ್ಳೂರಿನ ಹವೆ ನಮಗೆ ಆಗಿ ಬರ್ತಾ ಇಲ್ಲ ಅಂದಿದ್ಲು ಅಮ್ಮ. ಪ್ಯಾರಸೆಟಮಾಲ್, ವಿಕ್ಸ್ ಆಕ್ಷನ್-500, ಹೈಯರ್ ಡೋಸ್ ಆಂಟಿ ಬಯಾಟಿಕ್ ಯಾವುದಕ್ಕೂ ಬಗ್ಗಿರ್ಲಿಲ್ಲ ಕೆಮ್ಮು.  ಒಂದು ಎಕ್ಸ್‌ರೇಯನ್ನೂ  ತೆಗೆಸಿದ್ದಾಯ್ತು ಡಾ||ಭೋಜರಾಜು  ಹತ್ತಿರ. ಅವರೂ ಇನ್ನೊಂದು ಆಂಟಿ ಬಯಾಟಿಕ್ ಬರ್ಕೊಟ್ಟು ವಾರ ಬಿಟ್ಟು ಬನ್ನಿ ಅಂದ್ರು.  ಕೆಫ಼ೆಟೇರಿಯದಲ್ಲಿ ಊಟ ಮಾಡುವಾಗ ಈ ಬಗ್ಗೆ ಹೇಳಿದಾಗ ಪಾರ್ವತಿ ಕೋಟ್ಟೈವೀಡು ಸಲಹೆ ಕೊಟ್ಳು. ಕೆಮ್ಮಿದ್ರೆ ಯಾಕೆ ಜನರಲ್ ಡಾಕ್ಟರ್ ಹತ್ರ ತೋರಿಸ್ತಾ ಇದ್ದೀಯ ಇ.ಎನ್.ಟಿ ಸ್ಪೆಷಲಿಸ್ಟ್ ಹತ್ರ ತೋರಿಸು ಅಂತ. ಅವಳೇ ವಿಳಾಸ ಕೊಟ್ಟಿದ್ದು ಹಳದೀಪುರ್ ಕ್ಲಿನಿಕ್‌ದು.

22

ಪಾರ್ವತಿ ಕೋಟ್ಟೈವೀಡು. ತಮಿಳಿನವಳಾದರೂ ಕಟ್ಟಾ ಕನ್ನಡಾಭಿಮಾನಿ. ತುಂಬಾ ಇಂಟರೆಸ್ಟಿಂಗ್ ಮತ್ತು ಇರಿಟೇಟಿಂಗ್ ಪರ್ಸನಾಲಿಟಿ. ಅವಳನ್ನು ನೋಡಿದ್ರೆ ಉಷಾ ಉತ್ತುಪ್ ಜ್ಞಾಪಕ ಬರುತ್ತೆ. ಹಾಗೇ ಢಾಳಾಗಿ ಅಲಂಕಾರ ಮಾಡ್ಕೊಂಡು ಬರ್ತಾಳೆ. ನನ್ನ ಗಂಡ ಅಮೆರಿಕಾದಿಂದ ತಂದಿದ್ದು ಅಂತ ಫ಼ಾರ್ಮಲ್ ಸೂಟ್ ತೊಟ್ಟು ತನ್ನ ಉದ್ದ ಕೂದಲನ್ನು ಹರಡಿಕೊಂಡು  ಒಮ್ಮೆ ಬಂದರೆ ಇನ್ನೊಮ್ಮೆ ಗೌರಮ್ಮನ ತರಹ ಮದುವೆಗೆ ಬರೋ ಹಾಗೆ ತನ್ನ ಇರೋ ಬರೋ ಒಡವೆಗಳನ್ನೆಲ್ಲ ತೊಟ್ಕೊಂಡು ಕಂಚೀ ರೇಷ್ಮೆ ಸೀರೆಯಲ್ಲಿ ಪ್ರತ್ಯಕ್ಷ. ಇದು ಐ.ಟಿ ಕಛೇರಿನಾ ಅಥವಾ ಮದುವೆ ಮನೇನಾ ಅನ್ನಿಸಿದ್ದಿದೆ ಅನಂತನಿಗೆ. ಎಲ್ಲರ ಮನೇ ವಿಷಯಾನೂ ಅವಳಿಗೆ ಬೇಕು. ಯಾರ ಗಂಡ, ಹೆಂಡತಿ ಎಲ್ಲಿ ಕೆಲ್ಸ ಮಾಡ್ತಾರೆ, ಅವರ ದಾಂಪತ್ಯ ಚೆನ್ನಾಗಿದೆಯಾ ಇಲ್ಲವಾ, ಅತ್ತೆ, ಮಾವ ಚೆನ್ನಾಗಿ ನೋಡ್ಕೋತಾರಾ, ಅತ್ತೆ, ಮಾವನ ಜವಾಬ್ದಾರಿ ಇವರ ಮೇಲೇ ಇದೆಯಾ, ಕತ್ರೀನ ಕೈಫ಼್ ಸಲ್ಮಾನ್ ಆಕಸ್ಮಾತ್ ಮದ್ವೆ ಆಗಿರೋದೇ ನಿಜವಾದರೆ ಅದು ಸರೀನಾ ತಪ್ಪಾ? ಮುಂಬೈನಲ್ಲಿ ಯಾರೋ ಸತ್ತರೆ ನಾವು ತಲೆ ಕೆಡ್ಸಿಕೊಂಡು ಮಾಡೋದಾದರೂ ಏನು ಅಂತ ತನ್ನ ಅಭಿಪ್ರಾಯವನ್ನು ಮುಂದಿಡ್ತಾಳೆ. ನಾನು ಸತ್ಯಂನಲ್ಲಿಲ್ಲ ಅಲ್ಲಿರೋವ್ರ ಬಗ್ಗೆ ಯೋಚನೆ ಮಾಡುವಷ್ಟು ನನಗೆ ಟೈಮ್ ಇಲ್ಲ ಅಂತಲೂ ನಿಸ್ಸಂಕೋಚವಾಗಿ ಹೇಳ್ತಾಳೆ. ಆಫೀಸಿನ ಎಲ್ಲ ಜೋಡಿಗಳ ಹಿನ್ನೆಲೆ, ಅಂಕಿ-ಅಂಶ ಪಾರ್ವತಿಯ ನಾಲಗೆಯ ತುದಿಯಲ್ಲೇ. ಮದುವೆಯ ಕನಸನ್ನು ಕಾಣುತ್ತಿರುವ ಹುಡುಗಿಯರಿಗೆ “ಮೊದಲನೇ ರಾತ್ರಿ”ಯಲ್ಲಿ ಅಂಥದ್ದೇನೂ ನಡೆಯೋದೇ ಇಲ್ಲ. If you are lucky to get a caring husband, it’s less painful ಅಂಥ ಹೇಳಿ ಭಯ, ಮುಜುಗರ ಒಂದೇ ಬಾರಿಗೆ ಹುಟ್ಟಿಸ್ತಾಳೆ. ಯಾವುದೇ ವಿಷಯ ಹೆಚ್ಚು ಜನಕ್ಕೆ ತಲುಪಬೇಕಿದ್ರೆ ಪಾರ್ವತಿಯ ಕಿವಿ ಮುಟ್ಟಿಸಿದರೆ ಸಾಕು ಅನ್ನುವಷ್ಟು ಖ್ಯಾತಿ ಆಕೆಯದು ಆಫ಼ೀಸಿನಲ್ಲಿ! ಥೇಟ್ ನಮ್ಮ ಕ್ರೈಮ್ ಡೈರಿಗಳ ಥರಾ! ಸಾಂತ್ವನ ಸೂಚಿಸುತ್ತ  ಎದುರಲ್ಲಿರುವವರ ಸಮಸ್ಯೆ, ಒಳಗುಟ್ಟುಗಳನ್ನು ಕೇಳಿ  ತಿಳಿಯುವುದು ಆಮೇಲೆ ಜಗತ್ತಿನೆದುರು ಎಲ್ಲವನ್ನೂ ಡಂಗುರ ಸಾರಿ ಸಮಸ್ಯೆ ಹೇಳಿಕೊಂಡವರು ಹಪಹಪಿಸುವಂತೆ ಮಾಡುವ ಮಂದಿಯ ಪೈಕಿ ಈಕೆ. ದೊಡ್ಡಕ್ಕನ ತರಹ ಕೂತು ಯಾರ ಸಮಸ್ಯೆಗಳಿಗೂ ಕಿವಿಯಾಗುವ ಅವಳ probing nature ಒಮ್ಮೊಮ್ಮೆ ಕಿರಿಕಿರಿಯಾಗುವಷ್ಟು ಅತಿ ಅನ್ನಿಸುತ್ತೆ. ಮನುಷ್ಯ ಸ್ವಾರ್ಥಿಯಾಗಿರಬೇಕು ಇಲ್ಲದೇ ಇದ್ದರೆ ಉದ್ಧಾರ ಆಗಲ್ಲ ಅಂದು ಘೋಷಿಸುತ್ತಾಳೆ. ಅಲ್ರೀ ಅನಂತ್‌ಕುಮಾರ್ ನೀವು ನಿಮ್ಮಕ್ಕನಿಗೆ, ಅವಳ ಮಗಳಿಗೆ ಅಂತ ನೀವು ದುಡಿದಿದ್ದೆಲ್ಲ ಕೊಡ್ತಾ ಇದ್ರೆ ನೀವು ಯಾವಾಗ್ರೀ ಬುದ್ಧಿವಂತರಾಗೋದು? ಬೆಂಗ್ಳೂರಲ್ಲಿ ಒಂದು ಅಪಾರ್ಟ್ಮೆಂಟ್ ಇಲ್ದೇ ಇದ್ರೆ ಯಾವ ಹುಡ್ಗೀನೂ ನಿಮ್ಮನ್ನ ಮದುವೆ ಆಗೋಕ್ಕೆ ಮುಂದೆ ಬರಲ್ಲ ಗೊತ್ತಾ ಅಂತ ಒಂದು ಹುಳು ಅವನ ತಲೆಗೆ ಬಿಟ್ರೆ ಸಾಕು. ಅವತ್ತಿಡೀ ಅವನಿಗೆ ಅದೇ ಚಿಂತೆ. ಅಕ್ಕನಿಗೆ ನಾನು ದುಡ್ಡು ಕೊಡೋದು ತಪ್ಪಾ, ಸರೀನಾ ಅಂತ. ಕೊನೆಗೆ ಯಾವ ನಿರ್ಧಾರವನ್ನೂ ತೊಗೊಳ್ಳೊಕ್ಕಾಗದೆ ಅಕ್ಕನ ಫೋನ್ ಬಂದರೆ ಕಟ್ ಮಾಡಿದ್ದ. ಆಮೇಲೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನ್ನಿಸಿ ಸಾರಿ ಅಕ್ಕ,  ಬಿಜ಼ಿ ಇದ್ದೆ ಹೇಳು ಅಂತ ಮರು ಕರೆಯನ್ನೂ ಮಾಡಿದ್ದ.

More

ಬಿಳಿಮಲೆ ಬರೆಯುತ್ತಾರೆ: ’ಹೆಳವನ ಹೆಗಲ ಮೇಲೆ ಕುರುಡ’

೨೯-೩-೨೦೦೯ ರಂದು ದೆಹಲಿಯಲ್ಲಿ ಬಿಡುಗಡೆಯಾಗಲಿರುವ
ಕಡಲ ತಡಿಯ ತಲ್ಲಣ
ಪುಸ್ತಕದ ಕೆಲವು ಪುಟಗಳು

t

ಬೆಂಗಳೂರಿನಿಂದ ಮಡಿಕೇರಿ ಮಾರ್ಗವಾಗಿ ತುಳುನಾಡಿಗೆ ಬರಬೇಕಾದರೆ ನೀವು ಸಂಪಾಜೆ ಘಟ್ಟ ಇಳಿಯಲೇಬೇಕು. ಈ ರಸ್ತೆ ಬೇಡವೆಂದರೆ ಶಿವಮೊಗ್ಗ ಮಾರ್ಗವಾಗಿ ಬಂದು ಆಗುಂಬೆ ಘಟ್ಟ ಇಳಿದರೆ ಕರಾವಳಿ ತಲುಪಬಹುದು. ಇದೂ ಬೇಡವೆಂದರೆ ಚಿಕ್ಕಮಗಳೂರು ಮೂಲಕ ಹಾಯ್ದು ಭಯಾನಕ ಚಾರ್ಮಾಡಿ ಘಾಟಿಯಲ್ಲಿ ಇಳಿದರೆ ತುಳುನಾಡು ಸಿಗುತ್ತದೆ. ಹೋಗಲಿ ಬಿಡಪ್ಪಾ…ಅ॒ಂತ ಹೊಸನಗರ ಮಾರ್ಗವಾಗಿ ಬಂದರೆ ಹುಲಿಕಲ್ ಘಟ್ಟ ತಪ್ಪಿಸುವಂತಿಲ್ಲ. ಹೀಗೆ ತುಳುನಾಡು ತಲುಪ ಬೇಕಾದರೆ ನೀವು ಯಾವುದಾದರೊಂದು ಘಟ್ಟದ ನೆತ್ತಿಯಿಂದ ಅಪಾಯದ ಸಂದು-ಗೊಂದುಗಳಲ್ಲಿ ಹಾದು, ಉಸಿರು ಬಿಗಿ ಹಿಡಿದುಕೊಂಡು ಸಾವಿರಾರು ಅಡಿ ಇಳಿಯಲೇಬೇಕು. ಬಹುಶ: ಇದೇ ಕಾರಣಕ್ಕೆ ಪುರಾಣದ ’ಪಾತಾಳ’ದ ಪರಿಕಲ್ಪನೆಯನ್ನು ಕರಾವಳಿಗೆ ಹಲವರು ಜೋಡಿಸಿದರು. ಪಾತಾಳದ ’ನಾಗಕನ್ಯೆ’ಯರನ್ನು ಕರಾವಳಿಯ ’ಮತ್ಸ್ಯಗಂಧಿ’ ಮೀನುಗಾರ ಮಹಿಳೆಯರೊಡನೆ ಹೋಲಿಸಿ ಖುಷಿ ಪಟ್ಟರು. ಇದನ್ನು ಒಪ್ಪದವರು ಪರಶುರಾಮನು ಕೊಡಲಿ ಬೀಸಿ ಸೃಜಿಸಿದ ನಾಡು ಇದೆಂದು ಬಣ್ಣಿಸಿದರು.

ಅದೇನೇ ಇರಲಿ, ತುಳುನಾಡಿನ ಪೂರ್ವ ದಿಕ್ಕಿಗೆ ರಮ್ಯಾದ್ಭುತ ಪಶ್ಚಿಮ ಘಟ್ಟಗಳ ಸಾಲು. ಪಶ್ಚಿಮಕ್ಕೆ ದಣಿವರಿಯದೆ ನಿರಂತರವಾಗಿ ದಡಕ್ಕೆ ಮುತ್ತಿಡುವ ಕಡಲು. ಬೆಟ್ಟ-ಕಡಲುಗಳ ನಡುವೆ ಸುಮಾರು ೬೦ಕಿ.ಮೀ ಉದ್ದ, ೫೦ಕಿ.ಮೀ. ಅಗಲಕ್ಕೆ ಹರಡಿಕೊಂಡಿರುವ, ಭತ್ತದ ಗದ್ದೆ, ಅಡಿಕೆ ತೋಟ, ತೆಂಗುಗಳ ಸಾಲುಗಳಿರುವ ನಿತ್ಯ ಹರಿದ್ವರ್ಣದ ಪುಟ್ಟ ಊರು. ಜಿಲ್ಲೆಯ ಯಾವುದೇ ಮೂಲೆಯಿಂದ ಇನ್ನೊಂದು ಮೂಲೆಗೆ ಅರ್ಧ ದಿವಸದಲ್ಲಿ ಆರಾಮವಾಗಿ ಓಡಾಡಬಹುದಾದಷ್ಟೇ ದೊಡ್ಡ ಊರು ಇದು.

ಈ ಊರಿನ ಜನ ತಮ್ಮನ್ನು ’ತುಳುವ’ರೆಂದೇ ಗುರುತಿಸಿಕೊಂಡು ಬಂದಿದ್ದಾರೆ. ಆದರೂ ’ತುಳುವ’ ಎಂದರೇನು? ಎಂದು ಸರಿಯಾಗಿ ಯಾರಿಗೂ ತಿಳಿದಿಲ್ಲ. ಹಲಸಿನ ಹಣ್ಣಲ್ಲಿ ’ತುಳುವ-ತುಲುವ’ ಅಂತ ಒಂದು ಪ್ರಬೇಧವಿದೆ. ಮೆತ್ತಗೆಯಾಗಿ ನೀರು ತುಂಬಿಕೊಂಡಿರುವ ಈ ಹಲಸಿನ ಹಣ್ಣಿನ ಹಾಗೆ ಮೆತ್ತನೆಯ ಮಣ್ಣಿರುವ ಊರು ಇದಾಗಿರುವುದರಿಂದ ಆ ಹೆಸರು ಬಂದಿದೆ ಎಂಬುದು ಕೆಲವರ ಅಂಬೋಣ. ತುಳುವ ಹಲಸಿನ ಹಣ್ಣಲ್ಲಿ ಹಲವು ಬಗೆಗಳಿರುವ ಹಾಗೆ ತುಳು ಭಾಷೆಯಲ್ಲಿಯೂ ಹಲವು ಬಗೆಗಳಿವೆ ಎಂಬುದಂತೂ ನಿಜ. ಮಂಗಳೂರಿನ ಕಡೆ ಕನ್ನಡದ ’ತಲೆ’ಗೆ ಶೆಟ್ಟರು ’ತರೆ’ ಎಂದರೆ, ಸುಳ್ಯದ ಕಡೆ ಗೌಡರು ’ಅರೆ’ ಎನ್ನುತ್ತಾರೆ. ಕಾಸರಗೋಡಿನ ದಲಿತರು ’ಚರೆ’ ಎಂದರೆ, ಬೆಳ್ತಂಗಡಿ ಕಡೆ ’ಸರೆ’ ಎನ್ನುತ್ತಾರೆ. ಈ ನಡುವೆ ’ಹರೆ’ಯೂ ಬಳಕೆಯಲ್ಲಿದೆ. ಜೀವಂತ ಭಾಷೆಯ ಲಕ್ಷಣವೇ ಅದರ ಪ್ರಾದೇಶಿಕ ವೈವಿಧ್ಯ. ಇದರ ಜೊತೆಗೆ ಅರೆ ಭಾಷೆ, ಹವ್ಯಕ ಭಾಷೆ, ಕುಂದಾಪುರ ಕನ್ನಡ, ಕೊಂಕಣಿ, ಮಲೆಯಾಳಂ, ತಮಿಳು, ಕೊರಗ ಭಾಷೆಗಳೂ ಈ ಪುಟ್ಟ ಜಿಲ್ಲೆಯಲ್ಲಿ ಇನ್ನೂ ಜೀವಂತವಾಗಿವೆ. ಈಚೆಗೆ ಈ ಪಟ್ಟಿಗೆ ಇಂಗ್ಲಿಷ್ ಮತ್ತು ಹಿಂದಿಯೂ ಸೇರಿಕೊಂಡಿದೆ. ಭಾಷಾಭ್ಯಾಸಿಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯು ಒಂದು ಅದ್ಭುತವಾದ ’ಪ್ರಯೋಗ ಶಾಲೆ’. ದಕ್ಷಿಣ ಕನ್ನಡದ ಜಿಲ್ಲಾ ಕೇಂದ್ರವಾದ ಮಂಗಳೂರನ್ನು ತುಳುವರು ’ಕುಡಲ’, ಕುಡ್ಲ ಎಂದು ಕರೆದರೆ ಮಲೆಯಾಳಿಗಳಿಗೆ ಅದು ’ಮೈಕೆಲ್’, ಇನ್ನು ಕೆಲವರಿಗೆ ’ಮಂಗಳಾವರಂ’.

ಕರ್ನಾಟಕದ ಇತರ ಭಾಗಗಳಿಗಿರುವ ವರ್ಣರಂಜಿತ ಇತಿಹಾಸ ಕರಾವಳಿಗಿಲ್ಲ. ಕರಾವಳಿಯನ್ನಾಳಿದ ಅಳುಪರು, ಬಂಗರು, ಅಜಿಲರು, ಸಾವಂತರು, ಭೈರರಸರೇನೂ ಘಟ್ಟ ಹತ್ತಿ ಹೋಗಿ ರಾಜ್ಯ ವಿಸ್ತಾರ ಮಾಡಲಿಲ್ಲ. ಬಸರೂರಿನ ತುಳುವ ವೀರರು ವಿಜಯನಗರದವರೆಗೆ ಹೋಗಿ ಅಲ್ಲೇ ನೆಲೆ ನಿಂತು, ನಿಧಾನವಾಗಿ ’ತುಳುವ ವಂಶ’ವನ್ನು ಸ್ಥಾಪಿಸಿ, ಅಲ್ಲಿ ಮೆರೆದದ್ದುಂಟು. ’ಕರ್ನಾಟಕ ರಾಜ್ಯ ರಮಾರಮಣ’ ಎಂಬ ಬಿರುದಾಂಕಿತನಾದ ಶ್ರೀ ಕೃಷ್ಣ ದೇವರಾಯನು ತುಳುವ ವಂಶದವನಾಗಿದ್ದ ನಿಜ. ಆದರೆ ಆತನ ಮನೆಮಾತು ತೆಲುಗಾಗಿತ್ತು. ತುಳುವ ವೀರರು ಯಕ್ಷಗಾನ ರಂಗಸ್ಥಳದಲ್ಲಿ ದಿಗ್ವಿಜಯ ಮಾಡುತ್ತಾ ’ಛಪ್ಪನ್ನೈವತ್ತಾರು’ ದೇಶಗಳನ್ನು ಗೆದ್ದ ಕತೆ ಹೇಳುತ್ತಾ ಊರೊಳಗೇ ಜಗತ್ತನ್ನು ಕಾಣುತ್ತಿದ್ದರು. ಕೆಲವು ಜಗದ್ಗುರುಗಳ ಜಗತ್ತು ಕೂಡಾ ೬೦ಕಿ.ಮೀ ಉದ್ದ ಮತ್ತು ೫೦ಕಿ.ಮೀ. ಅಗಲಕ್ಕೆ ಸೀಮಿತವಾಗಿತ್ತು! ಕಾರ್ಕಳದ ಭೈರರಸರು ಮತ್ತು ವೇಣೂರಿನ ಅಜಿಲರು ಕೆತ್ತಿಸಿದ ಎರಡು ಏಕಶಿಲಾ ಗೊಮ್ಮಟ ಮೂರ್ತಿಗಳೇ ಕರಾವಳಿ ಇತಿಹಾಸದ ಮೈಲಿಗಲ್ಲುಗಳು. ವರ್ಷಕ್ಕೆ ಸುಮಾರು ೩೦೦೦ ಮಿಮಿ ಮಳೆ ಬೀಳುವ ಈ ಊರಲ್ಲಿ ಎಲ್ಲವನ್ನೂ ನೀರು ಕೊಚ್ಚಿಕೊಂಡು ಹೋಗಿ ಕಡಲಿಗೆ ಹಾಕಿ ಬಿಡುತ್ತದೆ, ಅದರ ಇತಿಹಾಸವನ್ನು ಕೂಡಾ.

ಇತಿಹಾಸದ ಭಾರವಿಲ್ಲದ ಇಂಥ ಊರುಗಳನ್ನು ಆಧುನಿಕತೆ ಬಹಳ ಬೇಗ ಆವರಿಸಿಕೊಳ್ಳುತ್ತದೆ. ಟಿಪ್ಪೂವಿನ ಮರಣಾನಂತರ (೧೭೯೯) ಬ್ರಿಟಿಷರ ಆಳ್ವಿಕೆಗೆ ಒಳಪಟ್ಟ ಈ ಜಿಲ್ಲೆ ಮತ್ತೆಂದೂ ತಿರುಗಿ ನೋಡಲಿಲ್ಲ. ಬಾಸೆಲ್ ಮಿಶನ್ನಿನ ಪಾದ್ರಿಗಳು ಮುದ್ರಣ ಯಂತ್ರ, ಹಂಚಿನ ಕಾರ್ಖಾನೆಗಳನ್ನು ಮಂಗಳೂರಲ್ಲಿ ಆರಂಭಿಸುವುದರೊಂದಿಗೆ ’ಕೆನರಾ’ದ ಜನಕ್ಕೆ ’ಉದ್ಯಮ ಶೀಲತೆ,’ವ್ಯವಹಾರ ನೈಪುಣ್ಯ’ವನ್ನು ಕಲಿಸಿಕೊಟ್ಟರು. ೨೦ನೇ ಶತಮಾನದ ಆರಂಭಕ್ಕೆ ಈ ಜಿಲ್ಲೆ ’ಆಧುನಿಕ ವಿದ್ಯೆ’ಗೆ ತನ್ನನ್ನು ತೆರೆದುಕೊಂಡಿತು. ಮಳೆಗಾಲದಲ್ಲಿ ಭೋರ್ಗರೆದು ಹರಿಯುತ್ತಾ ಎಲ್ಲವನ್ನು ಕೊಚ್ಚಿಕೊಂಡು ಕಡಲಿಗೆ ಚೆಲ್ಲುವ ಕುಮಾರಧಾರಾ, ನೇತ್ರಾವತಿ, ಶಾಂಭವಿ, ಪಯಸ್ವಿನಿ ಮತ್ತಿತರ ನದಿಗಳು ಬೇಸಗೆಯಲ್ಲಿ ಬತ್ತಿದಾಗ ಕುಡಿಯುವ ನೀರಿಗೆ ಪರದಾಡುವ ತುಳುವರು ಈ ನದಿಗಳನ್ನು ನೋಡುತ್ತಾ ಪದ್ಯ ಬರೆದುಕೊಂಡು ಕುಳಿತುಕೊಳ್ಳಲಿಲ್ಲ. ಕಷ್ಟಪಟ್ಟು ನಾಲ್ಕಕ್ಷರ ಕಲಿತರು. ಕಡವು ದಾಟಿದರು, ದೋಣಿ ಹತ್ತಿದರು, ಪತ್ತೆ ಮಾರಿಯಲ್ಲಿ ಸಾಗಿದರು, ಹಡಗು ಹಿಡಿದರು, ಮುಂಬೈ ತಲುಪಿದರು, ನಿಧಾನವಾಗಿ ದುಬೈಗೆ ಹಾರಿದರು. ಮುಂಬೈಯಲ್ಲಿ ರಾತ್ರಿ ಶಾಲೆಗಳನ್ನು ಸ್ವತ: ತೆರೆದು ವಿದ್ಯೆ ಕಲಿತರು. ಕಷ್ಟ ಪಟ್ಟು ಹಂತಹಂತವಾಗಿ ಮೇಲೇರಿದರು. ಹುಟ್ಟಿದೂರಿನ ಹುಡುಗರಿಗೆ ಆದರ್ಶವಾಗುತ್ತಾ ಅವರಲ್ಲಿ ವಿದ್ಯೆ ಕಲಿಯುವ ಆಸೆ ಹುಟ್ಟಿಸಿದರು. ಪರಿಣಾಮವಾಗಿ ದಕ್ಷಿಣ ಕನ್ನಡದ ಹಳ್ಳಿ ಹಳ್ಳಿಗಳಲ್ಲಿ ಶಾಲೆಗಳು ಆರಂಭವಾದವು. ಶಾಲೆಗೆ ಹೋಗಿ ಬರುವ ರಸ್ತೆಗಳು ಸಿದ್ಧವಾದುವು, ಹೊಳೆಗಳಿಗೆ ಸೇತುವೆಗಳು ರಚಿತವಾದುವು. ಹೀಗೆ ದಕ್ಷಿಣ ಕನ್ನಡ ಜಿಲ್ಲೆಯು ವಿದ್ಯೆಯ ಮೂಲಕ ಪ್ರವರ್ಧಮಾನಕ್ಕೆ ಬಂದ ಕತೆ ಅತ್ಯಂತ ರೋಚಕವಾದುದು. ಮಕ್ಕಳು ವಿದ್ಯೆ ಕಲಿತು ಮುಂಬೈಗೆ ವಲಸೆ ಹೋದ ಆನಂತರ ಅವರು ವರುಷಕ್ಕೊಮ್ಮೆ ಹಿಂದೆ ಬರುವುದನ್ನು ಕಾಯುತ್ತಾ ಕುಳಿತಿರುವ ವೃದ್ಧ ತಂದೆ-ತಾಯಿ, ಅಜ್ಜ-ಅಜ್ಜಿಯರ ಮೌನ ರೋದನಕ್ಕೆ ಮಾತ್ರ ಕಿವಿಗೊಟ್ಟವರು ಕಡಿಮೆ ಎಂದೇ ಹೇಳಬೇಕು. ಶಿವರಾಮ ಕಾರಂತರು ತಮ್ಮ ಕಾದಂಬರಿಗಳಲ್ಲಿ ಈ ಸ್ಥಿತ್ಯಂತರಗಳನ್ನೆಲ್ಲ ಮನಮುಟ್ಟುವಂತೆ ದಾಖಲಿಸಿದ್ದಾರೆ. More

%d bloggers like this: