
ಪ್ರಿಯ ಚಾಪ್ಲಿನ್,
ಹೇಗಿದ್ದಿ ಮಾರಾಯ? ಮಳೆಯಲ್ಲಿ ಕಣ್ಣೀರಾದರೆ ಬೇರೆಯವರಿಗೆ ಕಾಣದೆಂದು ತಿಳಿದು ನಡೆದ ನೀನು ಸ್ವರ್ಗವನ್ನು ಕ್ಷಣಕ್ಕೂ ಇಷ್ಟಪಟ್ಟಿರಲಾರೆ ಬಿಡು. ನಾನು ಸಣ್ಣ ಹುಡುಗನಾಗಿದ್ದಾಗ ಈ ರಾಮಾಯಣ ಮಹಾಭಾರತಗಳನ್ನು ಅತಿ ರಂಜಕವಾಗಿ ಟಿವಿಗಳಲ್ಲಿ ತೋರಿಸುತ್ತಿದ್ದ ದಿನಗಳಲ್ಲೇ ನಿನ್ನನ್ನು ಮೊದಲು ಕಂಡದ್ದು.ಅವತ್ತು ನೋಡಿದ ರಾಮಾಯಣ ಮಹಾಭಾರತಗಳ ಪುಣ್ಯ ಪುರುಷರು ನನ್ನೊಳಗೆ ಎಷ್ಟು ಉಳಿದಿದ್ದಾರೋ ಗೊತ್ತಿಲ್ಲ? ಆದರೆ ಚಾಪ್ಲಿನ್ ಹೇಳಿ ಕೇಳಿ ಇದು ತಾಯಾಣೆ ದೇವ್ರುದಿಂಡ್ರಾಣೆ ಇಟ್ರೆ ಎಂಥ ಕೊಲೆಪಾತಕತನವು ಮಾಫಿಯಾಗುವಂಥ ದೇಶ.
ಎಲ್ಲೋ ನಮ್ಮ ನೆನಪುಗಳಲ್ಲಿ ತನ್ನಪಾಡಿಗೆ ತಾನಿದ್ದ ನಿನ್ನನ್ನು ಈಗ ಇಲ್ಲಿನವರು statue ಮಾಡಲು ಹೊರಟಿದ್ದಾರೆ, ಜೊತೆಗೊಂದು ಕಂಡೀಷನ್: ಗೋಲ್ಗುಂಬಜ್ ಎದುರು ನಟ ನರಸಿಂಹರಾಜುವನ್ನೋ , ದ್ವಾರಕೀಶರನ್ನೋ ಅಥವಾ ತೆನಾಲಿ ರಾಮಕ್ರಿಷ್ಣನನ್ನೋ ಅಡ್ಡಡ್ಡ ಉದ್ದುದ್ದಾ ಪ್ರತಿಷ್ಠಾಪಿಸಿದರೆ ನಿನ್ನನ್ನು ಎಲ್ಲಿಬೇಕಾದ್ರು ಎಷ್ಟುದ್ದ ಬೇಕಾದ್ರೂ ನಿಲ್ಲಿಸಬಹುದಂತೆ. ಖಂಡಿತ ನೀನಿದನ್ನು ಬಯಸಿರಲಾರೆ. ನಿನ್ನ ಪ್ರತಿಮೆ ರೂಪುಗೊಂಡ ತಕ್ಷಣ ಅದನ್ನು ವಿರೂಪಗೊಳಿಸುವ, ನಿನ್ನ ಹೆಸರನ್ನೇ ಬದಲಿಸಿ ಒಂದು ಹೊಸ ಬಗೆಯ ಅಫಿಡವಿಟ್ ತಯಾರುಮಾಡುವ ಕೆಲಸಗಳು ಇಲ್ಲಿ ಎಗ್ಗಿಲ್ಲದೆ ನಡೆಯುತ್ತವೆ.
ನಿನಗಿದೆಲ್ಲ ಬೇಕಾ ಚಾಪ್ಲಿನ್? ಹಿಟ್ಲರ್ ನನ್ನು ಅಣಕಿಸಿ ಹಂಗಿಸಿ ಗೆದ್ದ ನಿನಗೆ ಇಲ್ಲಿನ ನಿಸ್ಸೀಮರನ್ನು ಅಷ್ಟು ಸುಲಭವಾಗಿ ಗೆಲ್ಲಲು ಸಾಧ್ಯವಿಲ್ಲ. ಮನುಷ್ಯರನ್ನು ವಂಚಿಸುವ, ಸುಟ್ಟು ಸುಲಿದು ತಿಂದುಹಾಕುವ ಹೊಸಬಗೆಯ ಕಲೆಗಳನ್ನು ಜಗತ್ತಿನ ಎಲ್ಲ ಮೂಲೆಯ ನೀಚರು ಇಲ್ಲಿಂದ ಈ ದೇಶದಿಂದ ಕಲಿಯುವುದು ಸಾಕಷ್ಟಿದೆ.
ಮಿತ್ರ ಚಾಪ್ಲಿನ್, ಧರ್ಮದ ಅಮೇಧ್ಯದಲ್ಲಿ ಹೂತುಹೋಗಿರುವ ಈ ದೇಶಕ್ಕೆ ನಿನ್ನನ್ನು ಮುಟ್ಟುವಷ್ಟು ಯೋಗ್ಯತೆ ಖಂಡಿತ ಇಲ್ಲ.
ನಮ್ಮ ನೆನಪುಗಳಲ್ಲಿ ಮಾತ್ರ ನೀನು evergreen…
-ಚಂದ್ರಶೇಖರ್ ಐಜೂರ್
Like this:
Like ಲೋಡ್ ಆಗುತ್ತಿದೆ...
ಇತ್ತೀಚಿನ ಟಿಪ್ಪಣಿಗಳು