‘ಜುಗಾರಿ ಕ್ರಾಸ್’ ಚರ್ಚೆಗಾಗಿಯೇ ಇರುವ ಅಂಕಣ. ಸದ್ಯದ ಆಗುಹೋಗುಗಳಿಗೆ ಹಿಡಿಯುವ ಕನ್ನಡಿ.
ಕುಂದಾಪುರದ ಒತ್ತಿನೆಣೆಯಲ್ಲಿ ಚಾರ್ಲಿ ಚಾಪ್ಲಿನ್ ಪ್ರತಿಮೆ ಸ್ಥಾಪನೆಗೆ ‘ಆತ ಕ್ರಿಶ್ಚಿಯನ್’ ಎಂಬ ನೆಪ ಒಡ್ಡಿ ಬಂದ ಆರೋಪ ಕುರಿತು ಜೋಗಿ ಬರೆದಿದ್ದರು. ಅದಕ್ಕೆ ಬಂದ ಪ್ರತಿಕ್ರಿಯೆಗಳು, ಬೈಗುಳಗಳು ಸಾಕಷ್ಟು.
ಒಂದು ಮಿತಿಯಾಚೆ ಇದ್ದ ಪ್ರತಿಕ್ರಿಯೆಗಳನ್ನು ದೂರವೇ ಇಟ್ಟು, ಇನ್ನು ಕೇವಲ ಹೊಗಳಿಕೆಯನ್ನೂ ಕೈಬಿಟ್ಟು ಕೆಲವನ್ನು ಪತ್ರಗಳನ್ನು ಪ್ರಕಟಿಸಿದ್ದೆವು. ಆ ಪತ್ರಗಳಿಗೆ ಬಂದ ಎರಡು ಭಿನ್ನ ದಿಕ್ಕಿನಲ್ಲಿ ನಿಂತ ಪ್ರತಿಕ್ರಿಯೆಗಳು ಇಲ್ಲಿವೆ. ಬನ್ನಿ ಚರ್ಚೆಯಲ್ಲಿ ಪಾಲ್ಗೊಳ್ಳಿ
ಜೋಗಿ ಸರ್,
ಬಲು ಜೋರು ಬರೆದಿದ್ದೀರಿ. ಇನ್ನೂ ನಾವೆಲ್ಲಾ ಒಂದಾಗಿ ಈ ಸನಾತನಿ ಸುಡೋ ಹಿಂದೂವಾದಿಗಳಿಗೆ ತಕ್ಕ ಪಾಠ ಕಲಿಸುವ ಸಮಯ ಬಂದಿದೆ. ಕಲಾವಿದ, ಸಾಹಿತಿ, ಹೋರಾಟಗಾರ, ಪತ್ರಕರ್ತರನ್ನು ಅಷ್ಟಾಗಿಯೂ ಜನಸಾಮಾನ್ಯರು ಅವನ ಜಾತಿಯಿಂದ ಗುರುತಿಸಲು ಇಷ್ಟಪಡಲಾರರು. ಅದರಲ್ಲೂ ಲೆಜೆಂಡ್ಗಳನ್ನು ಅದ್ಹೇಗೆ ಜಾತಿ, ಜನಾಂಗ, ಬಣ್ಣ, ಪ್ರದೇಶ, ಧರ್ಮ, ದೇಶ ಎಂದು ಗುರುತಿಸಲಾದೀತು.
ಈ ಮೂರ್ಖರು ಕೇವಲ ದಕ್ಷಿಣ ಕನ್ನಡದಲ್ಲಷ್ಟೆ ಅಲ್ಲ; ಅಂಥವರನ್ನು ಪೋಷಿಸುವ ಪಕ್ಷ, ಸಕರ್ಾರಗಳೇ ಇರುವಾಗ ಇವರು ಇಲ್ಲದ ಜಾಗೆಯಿಲ್ಲ. ಕೆಲವೇ ದಿನಗಳಲ್ಲಿ ಮಹಾನ್ ರಾಷ್ಟ್ರ ನಾಯಕರ ಸಾಲಿನಲ್ಲಿ ಯಡಿಯೂರಪ್ಪ, ಅಡ್ವಾಣಿ, ವಾಜಪೇಯಿ, ಮೋದಿ, ಬಾಳಠಾಕ್ರೆ, ಮುತಾಲಿಕ್, ತೊಗಾಡಿಯಾ ಸೇರಿದಂತೆ ಸಂಘ ಪರಿವಾರದ ಮುಖಂಡರ ಫೋಟೊಗಳನ್ನು ಎಲ್ಲಾ ಸಕರ್ಾರಿ ಮತ್ತು ಸಾರ್ವಜನಿಕ ಕೇಂದ್ರ ಹಾಗೂ ಕಚೇರಿಗಳಲ್ಲಿ ಕಡ್ಡಾಯವಾಗಿ ಜೋತುಬೀಳಿಸಬೇಕು ಎಂಬ ಆರ್ಡರ್ ಬಂದರೂ ಅಚ್ಚರಿಪಡಬೇಕಿಲ್ಲ.
ನಿಮ್ಮ ನೇರ, ಇರಿಯುವ ಬರೆಹದಿಂದ ನಮ್ಮೆಲ್ಲರಲ್ಲೂ ಚೈತನ್ಯ ತುಂಬಿದೆ. ಕೇವಲ ಬರೆಹದ ಮೂಲಕ ಸಾವಿರ ಪುಟಗಳಲ್ಲಿ ಬರೆದರೂ ಇಂಥಹ ಮೂಢರ ಮನಸ್ಸು ಬದಲಾದೀತು ಎಂದು ಬಯಸುವುದೂ ತಪ್ಪು. ಸಾಧ್ಯವಿದ್ದರೆ ನಾವೆಲ್ಲರೂ ಬೀದಿಗಿಳಿದು ಸನಾತನಿಗಳ ಕಿವಿಹಿಂಡುವ ಕಾಲ ಸನ್ನಿಹಿತವಾಗಿದೆ. ಇಲ್ಲದಿದ್ದರೆ ಕೇವಲ ಹೇಮಂತ ಹೆಗಡೆಗೆ ಕೇಳಿದ ಪ್ರಶ್ನೆ ನಮ್ಮ ಪ್ರತಿ ಮಾತಿಗೂ, ಅಕ್ಷರ, ಸೀನು, ಉಗುಳು ಏನೆಲ್ಲಾ ಕ್ರಿಯೆಗಳಿಗೂ ಅನ್ವಯಿಸಿದರೂ ಅಚ್ಚರಿಪಡಬೇಕಿಲ್ಲ.
ನೋಡಿ, ಆಕ್ಟಿವಿಸ್ಟ್ ರೀತಿಯಲ್ಲಿ ಕೆಲಸ ಮಾಡಿದರೆ ಮಾತ್ರ ಏನಾದರೂ ಸಾಧ್ಯವಾದೀತು. ಇಲ್ಲವಾದರೆ ನಮ್ಮನ್ನೆಲ್ಲಾ ಏನೋ ಬರೆತಾವೆ… ಬೊಗಳ್ತಾವೆ… ನಮಗೇನೂ ಆಗಲ್ಲ ಎಂದು ಉಗುಳಿದರೂ ಮುಖ ಒರೆಸಿಕೊಳ್ಳುವ ಭಂಡರು ಭಾವಿಸುವುದರಲ್ಲಿ ಅನುಮಾನವಿಲ್ಲ.
ಅನ್ನಿಸಿದ್ದನ್ನೆಲ್ಲಾ ಬರೆದುಬಿಟ್ಟೆ…
-ಕಲಿಗಣನಾಥ ಗುಡದೂರು
ಜೋಗಿ,
‘ಸನಾತನಿ’ಗಳಾಗಲೀ ’ವಾನರ ಸೇನ’ಯವರಾಗಲೀ ’ಚಡ್ಡಿ’ಮಂದಿಯಾಗಲೀ ಅಲ್ಲದ ಸ್ನೇಹಿತರಿಂದ ಘಟನೆಯ ಸತ್ಯಾಸತ್ಯತೆಯ ಬಗ್ಗೆ ಮಾತಾಡಿದ್ದೆ.
ಯಾಕೆ ಜೋಗಿ? ಹಾದಿ ತಪ್ಪಿಸುವ ಆರೋಪಗಳನ್ನು ಹೊರಿಸುವ ಕೆಲಸ ಯಾಕೆ ನಡೆಯುತ್ತಿದೆ ಈಚೀಚೆಗೆ? ಹೀಗೆ ಜನರನ್ನು ಒಡೆಯುವ ಕೆಲಸ ಈ ಮೊದಲು ವಿಜಯ ಕರ್ನಾಟಕ (ಕೆಲವು ಲೇಖಕರು-ಲೇಖನಗಳ ಮೂಲಕ) ಮಾತ್ರ ಮಾಡುತ್ತಿತ್ತು. ಅವರಿಗೆ ಪೈಪೋಟಿ ನೀಡುವ ಹೊಣೆ ಯಾಕೆ ಹೊತ್ತಿರಿ? ಜನರನ್ನ ಒಡೆಯುವ ಖುಷಿ ಆ ಕ್ಷಣದ್ದು ಮಾತ್ರ. ದಯವಿಟ್ಟು ಇಂಥದನ್ನ ಮಾಡಬೇಡಿ ಅನ್ನೋದು ನನ್ನ ಕಳಕಳಿಯ ವಿನಂತಿ.
ಚಾರ್ಲಿಯಂತಹ ಜಗತ್ಪ್ರತಿಭೆಯನ್ನು ಜಾತಿ- ದೇಶಗಳ ಅಳತೆಗೋಲಿನಿಂದ ಅಳೆಯುವುದಾದರೆ ಅಂತಹವರನ್ನ ಕ್ಯಾಕರಿಸಿ ಉಗಿದೇನು (ಅಕ್ಷರಶಃ). ಹಾಗೆಂದು ಅನಿಷ್ಠಕ್ಕೆಲ್ಲ ಶನೀಶ್ವರ ಕಾರಣ ಎನ್ನುತ್ತ ಮಾತುಮಾತಿಗೂ ’ಹಿಂದುತ್ವ’ದತ್ತ ಬೊಟ್ಟು ಮಾಡುತ್ತ ’ಅವಾಸ್ತವ’ಸಂಗತಿ, ಸುಳ್ಳು ಮಾಹಿತಿಗಳನ್ನು ಸಾಂಕ್ರಾಮಿಕ ರೋಗದಂತೆ ಹಬ್ಬಿಸುತ್ತ ಹೋಗುವುದನ್ನು, ಹೋಗುವವರನ್ನು ಕಂಡೂ ಸುಮ್ಮನಿರಲು ಸಾಧ್ಯವೇ ಇಲ್ಲ ನನ್ನಿಂದ.
ಅಭಿಪ್ರಾಯ ಸ್ವತಂತ್ರ್ಯ ಕಸಿದುಕೊಂಡಿರುವ ಬ್ಲಾಗಿಗರ ಮಧ್ಯೆ ಇರುವುದು ಬೇಡವೆಂದು, ಬ್ಲಾಗಿನಲ್ಲಿ ವಿಚಾರಕ್ಕೆ ಬದಲಾಗಿ ದೊರೆತ ವೈಯಕ್ತಿಕ ನಿಂದನೆಗಳಿಂದ ನೊಂದು, ಬ್ಲಾಗ್ ಸಹವಾಸದಿಂದ ದೂರವಾಗಿದ್ದೆ.
ಏನು ಮಾಡಲಿ? ಇದು ಸರಿ ಅನಿಸದೆ ಹೋದಮೆಲೂ ಪ್ರತಿಕ್ರಿಯಿಸದೆ ಇರುವುದು ಸಾಧ್ಯವಾಗಲಿಲ್ಲ.
ನೀವೂ ಒಡೆಯುವ ಕೆಲಸ ಮಾಡುತ್ತ ಹೋದರೆ ವ್ಯತ್ಯಾಸ ಉಳಿಯುವುದಿಲ್ಲ.
ದಯವಿಟ್ಟು ಈ ಬಗ್ಗೆ ಯೋಚಿಸಿ (ಸಮಯವಿದ್ದರೆ).
ಪ್ರೀತಿಯಿಂದ,
ಚೇತನಾ ತೀರ್ಥಹಳ್ಳಿ
ಇತ್ತೀಚಿನ ಟಿಪ್ಪಣಿಗಳು