ಜೋಗಿ ಬರೆದಿದ್ದಾರೆ: ದಯವಿಟ್ಟು ಕ್ಷಮಿಸಿ

ಮನೆಯೊಳಗೀಗ ಎಳ್ಳೆಣ್ಣೆಯ ಕಿರುದೀಪ, ಮನಸಿನಲ್ಲಿ ಕುರುಡುಗತ್ತಲೆ!

jogi222

ದಯವಿಟ್ಟು ಕ್ಷಮಿಸಿ.

ನನ್ನ ಅಜ್ಞಾನಕ್ಕೆ. ಗಮನಿಸದೇ ಇದ್ದಿದ್ದಕ್ಕೆ. ಆ ವಿಚಾರವಾಗಿ ಯೋಚಿಸದೇ ಉಳಿದದ್ದಕ್ಕೆ. ಹಿಂದುವಾಗಿ ಹಿಂದುಸ್ತಾನದ ಪ್ರಜೆಯಾಗಿ ದಕ್ಷಿಣ ಕನ್ನಡದಲ್ಲಿ ಹುಟ್ಟಿದ್ದಕ್ಕಾಗಿ ಹಾಗೆಲ್ಲ ಯೋಚಿಸದೇ ಇದ್ದದ್ದು ಎಂಥ ದೊಡ್ಡ ತಪ್ಪು ಎಂದು ಈಗ ಅರ್ಥವಾಗುತ್ತಿದೆ.

ಎಷ್ಟು ಸರಳ ಸಂಗತಿ ನೋಡಿ. ಚಾರ್ಲಿ ಚಾಪ್ಲಿನ್ ಅವನು ನಗಿಸಿದಷ್ಟು ಯಾರೂ ನಗಿಸಿಲ್ಲ. ಅವನು ಅಳಿಸುತ್ತಲೇ ನಗಿಸುತ್ತಿದ್ದ. ಮಾತಿಲ್ಲದೆ ನಗಿಸುತ್ತಿದ್ದ. ಸರ್ವಾಧಿಕಾರದ ವಿರುದ್ಧ ಸಿಡಿದೇಳುತ್ತಿದ್ದ. ಮೂಲಭೂತವಾದಿ ಗುಣವನ್ನು ಖಂಡಿಸುತ್ತಿದ್ದ. ನಮಗೆಲ್ಲ ಇಷ್ಟವಾಗುತ್ತಿದ್ದ. ನಾವೆಲ್ಲ ಅವನನ್ನು ಪ್ರೀತಿಸುತ್ತಿದ್ದೆವು. ಮೆಚ್ಚಿಕೊಳ್ಳುತ್ತಿದ್ದೆವು. ಆರಾಧಿಸುತ್ತಿದ್ದೆವು.

image

ಛೇ, ಎಂಥಾ ತಪ್ಪಾಗಿ ಹೋಯಿತು. ಅವನು ಕ್ರಿಶ್ಚಿಯನ್ ಎಂದು ನಮಗೆ ಹೊಳೆದಿರಲೇ ಇಲ್ಲ. ಒಂದು ವೇಳೆ ಹೊಳೆದಿದ್ದರೆ ಅವನನ್ನು ದ್ವೇಷಿಸಬಹುದಿತ್ತು. ಅವನ ಜೋಕುಗಳಿಗೆ ಬಿಮ್ಮನೆ ಕೂತು  ಪ್ರತಿಕ್ರಿಯಿಸದೇ ಉಳಿಯಬಹುದಾಗಿತ್ತು. ಆತನ ಸಿನಿಮಾಗಳನ್ನು ನೋಡಿ ನಗುವವರ ಮೇಲೆ ರೇಗಬಹುದಾಗಿತ್ತು. ನಾಚಿಕೆ ಆಗಬೇಕು ನಿಮ್ಮ ಜನ್ಮಕ್ಕೆ. ಒಬ್ಬ ಕ್ರಿಶ್ಚಿಯನ್ ಮಾಡಿದ ಸಿನಿಮಾಗಳನ್ನು ನೋಡಿ ನಗುತ್ತಿದ್ದೀರಲ್ಲ’ ಎಂದು ಹೀಯಾಳಿಸಬಹುದಿತ್ತು. ಶಕ್ತಿಯಿದ್ದರೆ ತೋಳೇರಿಸಿ ಮೂತಿಗೆರಡು ತಪರಾಕಿ ಕೊಟ್ಟು ಇನ್ನು ಚಾಪ್ಲಿನ್ ಸಿನಿಮಾ ನೋಡಿದರೆ ಜೋಕೆ ಎಂದು ಎಚ್ಚರಿಕೆ ನೀಡಬಹುದಾಗಿತ್ತು.

ಇದರಲ್ಲಿ ನಮ್ಮ ತಪ್ಪೇನಿಲ್ಲ ಬಿಡಿ. ನಮಗೆ ಪಾಠ ಕಲಿಸಿದ ಮೇಷ್ಟ್ರುಗಳೂ ಹಾಗೇ ಇದ್ದರು. ಅವರು ಯಾವತ್ತೂ ಚಾರ್ಲಿ ಚಾಪ್ಲಿನ್ ಕ್ರಿಶ್ಚಿಯನ್ ಎಂದು ಹೇಳಲಿಲ್ಲ. ಅವನ ಜಾತಿಯ ಬಗ್ಗೆ ನಮಗೆ ಹೇಳಿಕೊಡಲೇ ಇಲ್ಲ. ಆಗ ನಾವಿನ್ನೂ ಚಿಕ್ಕವರು. ಎಳೆಯ ಮನಸ್ಸುಗಳಿಗೆ ಇಂಥ ವಿಚಾರಗಳನ್ನು ತಿಳಿಸಿಕೊಡುವುದು ಗುರುಗಳ ಕರ್ತವ್ಯ. ಗುರುದೇವೋ ಮಹೇಶ್ವರ ಎಂದು ನಂಬಿದವರು ನಾವು. ನಮಗೇ ಗುರುಗಳು ಮೋಸ ಮಾಡಿದರೇ? ಅವರನ್ನು ಗುರುಗಳೆಂದು ಹೇಗೆ ಕರೆಯುವುದು.

ಹೋಗಲಿ, ಮೊದಲ ಗುರು ಎಂದು ನಾವು ಕರೆಯುವ ಅಮ್ಮನೂ ಆ ಬಗ್ಗೆ ಹೇಳಲಿಲ್ಲ. ಚಾಪ್ಲಿನ್ ಜಾತಿ ಯಾವುದೆಂದು ಅವಳಿಗೆ ಗೊತ್ತಿತೋ ಇಲ್ಲವೋ? ಗೊತ್ತಿಲ್ಲದೇ ಇದ್ದರೆ ಅವಳ ತಪ್ಪಲ್ಲ. ಗೊತ್ತಿದ್ದೂ ಹೇಳದೇ ಹೋದರೆ ಅದು ಅಪರಾಧವೇ ಸರಿ. ನನ್ನ ಅಜ್ಞಾನದಲ್ಲಿ ಅವಳದೂ ಪಾಲಿದೆ.

ಹೋಗಲಿ, ನಮ್ಮೂರಿನ ಮಂದಿಯಾದರೂ ಹೇಳಿದರೇ? ಮಂಗಳೂರಿನ ನ್ಯೂಚಿತ್ರಾ ಥೇಟರಿನಲ್ಲಿ ಚಾಪ್ಲಿನ್ ಸಿನಿಮಾ ನೋಡಲು ಹೋಗುತ್ತಿದ್ದಾಗ ಅಲ್ಲಿಗೆ ಬರುತ್ತಿದ್ದ  ನಮ್ಮೂರ ಮಂದಿಯಾದರೂ ಹೇಳಬಾರದಿತ್ತೇ? ಎಂಥವರ ಮಧ್ಯೆ ನಾನಿದ್ದೆ ಎಂದು ನೆನೆದರೆ ಪಶ್ಚಾತ್ತಾಪವಾಗುತ್ತದೆ.

ಬೆಂಗಳೂರಿಗೆ ಬಂದ ಮೇಲೂ ಯಾರೂ ಈ ಬಗ್ಗೆ ನನ್ನ ತಿಳುವಳಿಕೆಯನ್ನು ವಿಸ್ತರಿಸಲೇ ಇಲ್ಲ. ಗೆಳೆಯ ಸಿ ಆರ್ ಸಿಂಹ ಮನೆಗೆ ಹೋದಾಗ ಮನೆಯ ಒಂದು ಕಂಬದಲ್ಲೇ ಚಾಪ್ಲಿನ್ ಮೂರ್ತಿ ಕೆತ್ತಿದ್ದರು. ಅವರಿಗೂ ಚಾಪ್ಲಿನ್ ಕ್ರಿಶ್ಚಿಯನ್ ಎಂದು ಗೊತ್ತಿರಲಿಲ್ಲ ಎಂದು ಕಾಣುತ್ತದೆ. ಅವರಿಗೂ ನನಗೆ ಸಿಕ್ಕಂಥ ಗುರುಗಳೇ ಸಿಕ್ಕಿರಬೇಕು. ಮೇಷ್ಟರು ಎಲ್ಲಾ ಊರುಗಳಲ್ಲೂ ಒಂದೇ ಥರ ಇರುತ್ತಾರೆಂದು ಕಾಣುತ್ತದೆ. .

ಸಾಹಿತಿಗಳೂ ಸಮಾಜದ ಕಣ್ತೆರೆಸಬೇಕು ಎನ್ನುತ್ತಾರೆ. ನಾನು ಬಹುವಾಗಿ ಮೆಚ್ಚಿದ ಸಾಹಿತಿಗಳೂ ಈ ಕೆಲಸ ಮಾಡಲಿಲ್ಲ. ಕುಂ. ವೀರಭದ್ರಪ್ಪನವರ ಅನೇಕ ಕತೆ ಕಾದಂಬರಿಗಳ ಅಭಿಮಾನಿಯಾಗಿದ್ದ ನಾನು ಅವರು ಬರೆದ ಚಾರ್ಲಿ ಚಾಪ್ಲಿನ್ ಪುಸ್ತಕವನ್ನು ಓದಿದ್ದೆ. ಅದರಲ್ಲೂ ಅವರು ಈ ಅಂಶವನ್ನು ಮುಚ್ಚಿಟ್ಟಿದ್ದಾರೆ.

ಮೊನ್ನೆ ಮೊನ್ನೆ ದಕ್ಷಿಣ ಕನ್ನಡದ ಒತ್ತೆನೆಣೆ ಎಂಬಲ್ಲಿ ಚಾರ್ಲಿ ಚಾಪ್ಲಿನ್ ಮೂರ್ತಿಯನ್ನು ಸ್ಥಾಪಿಸಲು ಹೊರಟ ಗೆಳೆಯ ನಿರ್ದೇಶಕ ಹೇಮಂತ್ ಹೆಗಡೆಯವರನ್ನು ತಡೆದು ನಿಲ್ಲಿಸಿ ಕೆಲವು ಸನ್ಮಿತ್ರರು ಬುದ್ಧಿವಾದ ಹೇಳಿದ್ದಾರೆ. ಚಾಪ್ಲಿನ್ ಕ್ರಿಶ್ಚಿಯನ್ ಮತಕ್ಕೆ ಸೇರಿದವನು. ಅವನ ಪ್ರತಿಮೆ ಸ್ಥಾಪಿಸಬೇಡಿ ಎಂದಿದ್ದಾರೆ. ಜೊತೆಗೇ ಅವನು ಭಾರತಕ್ಕೆ ಏನ್ರೀ ಮಾಡಿದ್ದಾನೆ ಎಂದು ಕೇಳಿದ್ದಾರೆ.

ಎಂಥಾ ಒಳ್ಳೆಯ ಪ್ರಶ್ನೆ? ಎಂಥಾ ತಿಳುವಳಿಕೆ? ಈ ಕಾಲದಲ್ಲಿ ಜ್ಞಾನದ ಹಂಚಿಕೆ ಎಷ್ಟು ಸಮಗ್ರವಾಗಿ ಆಗುತ್ತಿದೆ. ನಾವು ಎಷ್ಟು ಆಧುನಿಕವಾಗುತ್ತಿದ್ದೇವೆ ಎಂದು ಸಂತೋಷವಾಗುತ್ತಿದೆ. ಅಂಥವರು ನಮ್ಮ ಬಾಲ್ಯ ತಾರುಣ್ಯ ಕಾಲದಲ್ಲೂ ಯಾಕಿರಲಿಲ್ಲ ಎಂದು ಬೇಸರವಾಗುತ್ತದೆ. ನಮ್ಮ ಜೊತೆಗಿದ್ದವರೆಲ್ಲ ಶತದಡ್ಡರೆಂಬ ತೀರ್ಮಾನಕ್ಕೆ ಬಂದಿದ್ದೇನೆ. ಇನ್ನು ಮೇಲೆ ಇಂಥ ಪ್ರಕಾಂಡ ಪಂಡಿತರ ಜೊತೆಗೆ ಓಡಾಡಲು  ನಿರ್ಧರಿಸಿದ್ದೇನೆ. ಆಗಲಾದರೂ ನನ್ನ ಜ್ಞಾನದಿಗಂತ ವಿಸ್ತರಿಸಲಿ. ತಮಸೋಮಾ ಜ್ಯೋತಿರ್ಗಮಯ.

ಜ್ಯೋತಿರ್ಗಮಯ ಎಂದಾಗ ನೆನಪಾಯಿತು. ಇದನ್ನು ರಾತ್ರಿ ಲೈಟ್ ಹಾಕಿಕೊಂಡು ಕಂಪ್ಯೂಟರಿನಲ್ಲಿ ಟೈಪ್ ಮಾಡುತ್ತಿದ್ದೆ. ಅರೇ, ವಿದ್ಯುತ್ ಕಂಡು ಹಿಡಿದವನು ಬೆಂಜಮಿನ್ ಫ್ರಾಂಕ್ಲಿನ್. ಬಲ್ಬ್ ಸಂಶೋಧನೆ ಮಾಡಿದವನು ಥಾಮಸ್ ಆಲ್ವಾ ಎಡಿಸನ್. ಅವರಿಬ್ಬರೂ ಕ್ರಿಶ್ಚಿಯನ್ ಎಂದು ಗೊತ್ತಾಯಿತು. ಇಷ್ಟಾದ ಮೇಲೂ ಬುದ್ಧಿ ಬರದಿದ್ದರೆ ಹೇಗೆ? ತಕ್ಷಣ ಲೈಟ್ ಆರಿಸಿದೆ. ಬಲ್ಬುಗಳನ್ನೆಲ್ಲ ಕಿತ್ತಿಟ್ಟೆ. ಎಳ್ಳೆಣ್ಣೆಯ ದೀಪ ಹಚ್ಚಿ ಕೂತಿದ್ದೇನೆ. ಆ ದೀಪದ ಕುರುಡುಗತ್ತಲಲ್ಲಿ ಬರೆಯಲು ಕುಳಿತಾಗ ಪೆನ್ನು ಕಂಡುಹಿಡಿದವನೂ ಕ್ರಿಶ್ಚಿಯನ್ ಆಗಿದ್ದರೆ ಎಂದು ಗಾಬರಿಯಾಯಿತು. ಯಾಕೆ ಬೇಕು ರಿಸ್ಕು? ಒಂದಷ್ಟು ತಾಳೆಗರಿಗಳಿಗೆ ಹೇಳಿಕಳಿಸಿದ್ದೇನೆ. ಕಂಠಪತ್ರವನ್ನು ತರಿಸುತ್ತಿದ್ದೇನೆ. ತಾಳೆಗರಿಯ ಓಲೆಯಲ್ಲಿ ಕಂಠಪತ್ರವನ್ನು ಶಾಯಿಗೆ ಅದ್ದಿ ಬರೆಯುತ್ತಿದ್ದರೆ ನನ್ನ ಹಿಂದುತ್ವದ ಬಗ್ಗೆ ಆಹಾ ಸಂತೋಷವಾಗುತ್ತಿದೆ. ನಾನು ನಿಜಕ್ಕೂ ಸನಾತನಿಯಾದೆ. ಸತ್ಯಂ ವಧ! ಧರ್ಮಂ ಚರ!

ಇನ್ನು ಮೇಲೆ ರೇಲುಗಾಡಿಗಳಲ್ಲಿ ಹೋಗುವಂತಿಲ್ಲ. ಬಸ್ಸುಗಳಲ್ಲಿ ಪ್ರಯಾಣಿಸುವಂತಿಲ್ಲ. ಕಾರುಗಳಲ್ಲಿ ಚಲಿಸುವಂತಿಲ್ಲ. ಮರದ ಚಪ್ಪಲಿಗಳನ್ನೇ ಹಾಕಿಕೊಂಡು ಓಡಾಡಬೇಕು. ಎಲ್ಲಕ್ಕಿಂತ ಧರ್ಮ ಮುಖ್ಯ. ಅದನ್ನು ಉಳಿಸುವುದೇ ನಮ್ಮ ಗುರಿಯಾಗಬೇಕು. ನಮ್ಮತನವನ್ನು ಕಳಕೊಂಡು ಬದುಕುವುದಾದರೂ ಏಕೆ?

ಅಷ್ಟಕ್ಕೂ ಚಾರ್ಲಿ ಚಾಪ್ಲಿನ್ ಕರ್ನಾಟಕಕ್ಕೆ ಏನು ಮಾಡಿದ್ದಾನೆ? ಮಂಗಳೂರಿಗೆ ಏನು ಮಾಡಿದ್ದಾನೆ? ಮಂಗಳೂರು ಉಡುಪಿ ರಸ್ತೆ ಮಾಡಿಸಿದ್ದಾನಾ? ರಸ್ತೆ ರಿಪೇರಿ ಮಾಡಿಸಿದ್ದಾನಾ? ಆಸ್ಪತ್ರೆ ಕಟ್ಟಿಸಿದ್ದಾನಾ? ಸ್ಕೂಲು ಕಟ್ಟಿಸಿದ್ದಾನಾ? ಏನೂ ಮಾಡಿಲ್ಲ. ಒಂದಷ್ಟು ಸಿನಿಮಾ ಮಾಡಿ ನಗಿಸಿರಬಹುದು? ಅದನ್ನೂ ಅವನು ಉಡುಪಿಯಲ್ಲಿ ಚಿತ್ರೀಕರಿಸಿಲ್ಲ. ಉಡುಪಿ ಕೃಷ್ಣನ ಬಗ್ಗೆ ಸಿನಿಮಾ ಮಾಡಿಲ್ಲ. ಶ್ರೀರಾಮನ ಬಗ್ಗೆ ಸೀರಿಯಲ್ ಮಾಡಿಲ್ಲ? ಅವನ ಮೂರ್ತಿ ಯಾಕೆ ಸ್ಥಾಪಿಸಬೇಕು.

ನಮ್ಮ ಶಿಕ್ಷಣ ಬದಲಾಗಬೇಕು ಅನ್ನುವುದರಲ್ಲಿ ಅರ್ಥವಿದೆ. ಷೇಕ್ಸ್‌ಪಿಯರ್ ಶ್ರೇಷ್ಠ ನಾಟಕಕಾರ ಅನ್ನುವ ಕಾರಣಕ್ಕೆ ಅವನ ನಾಟಕಗಳನ್ನು ಪಠ್ಯ ಮಾಡಿದ್ದಾರೆ. ಅವರಿಗಾದರೂ ಪ್ರಜ್ಞೆಯಿಲ್ಲವೇ? ಷೇಕ್ಸ್‌ಪಿಯರ್ ಕೂಡ ಕ್ರಿಶ್ಟಿಯನ್ ಆಗಿದ್ದ. ಬರ್ನಾರ್ಡ್ ಷಾ, ಆಡೆನ್, ಟಾಲ್‌ಸ್ಟಾಯ್ ಮುಂತಾದವರೂ ಅದೇ ಧರ್ಮದವರು. ಅವರ ಕಾದಂಬರಿಗಳನ್ನೆಲ್ಲ ಕಟ್ಟಿಟ್ಟಿದ್ದೇನೆ. ನಾಳೆಯೋ ನಾಡಿದ್ದೋ ರದ್ದಿಗೆ ಹಾಕಬೇಕು. ಅದರಿಂದ ಬಂದ ಹಣವನ್ನು ದೇವರ ಹುಂಡಿಗೆ ಹಾಕಬೇಕು. ಅಲ್ಲಿಗೆ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಂಡ ಹಾಗೆ.

ಛೇ, ಎಂಥ ತಪ್ಪು ಮಾಡುತ್ತಿದ್ದೇವೆ ನಾವೆಲ್ಲ? ಈ ವಿಚಾರದಲ್ಲಿ ಹೆಣ್ಮಕ್ಕಳೂ ಬುದ್ಧಿ ಕಲಿಯಬೇಕು. ಇನ್ನು ಮೇಲೆ ಮಿಕ್ಸಿ, ಗ್ರೈಂಡರ್ ಬಳಸುವಂತಿಲ್ಲ. ಟೀವಿ, ಫ್ರಿಜ್ಜು ಉಪಯೋಗಿಸುವಂತಿಲ್ಲ. ಅದೆಲ್ಲವನ್ನೂ ಕಂಡು ಹಿಡಿದದ್ದು ಕ್ರಿಶ್ಚಿಯನ್ನರೇ. ಸರ್ಕಾರ ತಕ್ಷಣವೇ ಕಿಟೆಲ್ ಕನ್ನಡ ಪದಕೋಶವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು? ಅವನದೂ ಅದೇ ಜಾತಿ.

ರಾಜ್‌ಕುಮಾರ್ ಏನು ಮಾಡಿದ್ದಾರೆ ಎಂದು ಅನೇಕರು ಕೇಳಿದ್ದರು. ಅವರು ಅತ್ಯುತ್ತಮ ನಟನಾಗಿರಬಹುದು. ಸೊಗಸಾದ ಚಿತ್ರಗಳನ್ನು ನೀಡಿರಬಹುದು. ಚಿತ್ರರಂಗವನ್ನು ಉಳಿಸಿದ ಧೀಮಂತನಾಗಿರಬಹುದು. ಸಾಮಾಜಿಕ ಸಂಬಂಧ, ಸೌಹಾರ್ದ, ಪ್ರೀತಿ, ಕರುಣೆ, ತ್ಯಾಗಗಳನ್ನು ಪ್ರತಿಬಿಂಬಿಸುವಂಥ ಸಿನಿಮಾಗಳನ್ನು ನೀಡಿ ವರ್ಷಾನುಗಟ್ಟಲೆ ನೆನಪಲ್ಲಿ ಉಳಿಯುವ ಗೀತೆಗಳನ್ನು ಹಾಡಿರಬಹುದು. ನಮ್ಮಲ್ಲಿ ಹೊಸ ಉತ್ಸಾಹ, ಟೈತನ್ಯ ತುಂಬಿರಬಹುದು. ಎಲ್ಲರೊಂದೇ ಎಂದು ಸಾರಿರಬಹುದು. ನಮ್ಮ ಸಂಕಷ್ಟದ ಗಳಿಗೆಯಲ್ಲಿ ನೆನಪಾಗಿ ಸಾಂತ್ವನ ನೀಡಿರಬಹುದು.

ಕುವೆಂಪು ಕೂಡ ಅಷ್ಟೇ. ತಮ್ಮ ಪಾಡಿಗೆ ಕತೆ ಬರೆದುಕೊಂಡು, ವಿಶ್ವಮಾನವ ಸಂದೇಶವನ್ನು ಸಾರಿ, ನಮ್ಮ ತವಕ ತಲ್ಲಣಗಳಿಗೆ ದನಿಯಾಗಿರಬಹುದು? ಆದರೆ ಉಡುಪಿಗೆ ಅವರು ಏನು ಮಾಡಿದ್ದಾರೆ. ಒಂದು ದೇವಸ್ಥಾನ, ಆಸ್ಪತ್ರೆ ಕಟ್ಟಿಸಿಲ್ಲ. ರಸ್ತೆಗೆ ಟಾರು ಹಾಕಿಸಿಲ್ಲ. ಉಡುಪಿಯ ಅಭಿವೃದ್ಧಿಗೆ ಏನೇನೂ ಮಾಡಿಲ್ಲ. ಅವರನ್ನು ರಾಷ್ಟ್ರಕವಿ ಎಂದೇಕೆ ಕರೆಯಬೇಕು ಎಂಬ ಪ್ರಶ್ನೆಯನ್ನೂ ನಾಳೆ ಈ ವಿವೇಕವಂತರು ಕೇಳಬಹುದು. ಆ ಅರಿವೂ ಅವರಲ್ಲಿ ಮೂಡಲಿ ಎಂದು ಹಾರೈಸೋಣ.

ಗೆಳೆಯರೇ, ಎಚ್ಚರಿಕೆ. ಚಾಪ್ಲಿನ್, ಐನ್‌ಸ್ಟೀನ್ , ಕಿಟೆಲ್, ಷೇಕ್ಸ್‌ಪಿಯರ್, ಎಡಿಸನ್ ಮುಂತಾದವರ ಬಗ್ಗೆ ಹೇಳುವ ಬರೆಯುವ ಅವರ ಮೂರ್ತಿ ಸ್ಥಾಪಿಸುವ, ಅವರನ್ನು ಪಠ್ಯ ಪುಸ್ತಕದಲ್ಲಿ ಸೇರಿಸುವ ಜನಶತ್ರುಗಳು ಸುತ್ತಲೂ ಇದ್ದಾರೆ. ಅವರ ಬಗ್ಗೆ ಎಚ್ಚರದಿಂದಿರಿ. ಸರ್ಕಾರ ತಕ್ಷಣವೇ ಒಂದು ಸಮಿತಿ ಸ್ಥಾಪಿಸಬೇಕು. ಆ ಸಮಿತಿ ಜಾತೀವಾರು ಪಟ್ಟಿಯನ್ನು ತಯಾರು ಮಾಡಬೇಕು. ಯಾವ ಸಾಹಿತಿ. ಕಲಾವಿದ, ಗಾಯಕ, ಕವಿ, ಸಮಾಜಸೇವಕ ಯಾವ ಜಾತಿ ಎಂಬ ಪಟ್ಟಿ ಎಲ್ಲರಿಗೂ ದೊರಕಬೇಕು. ಯಾರನ್ನು ಓದಬೇಕು, ಯಾರನ್ನೂ ಬಹಷ್ಕರಿಸಬೇಕು ಎಂದು ನಿರ್ಧಾರ ಆಗಬೇಕು. ಆಗಲೇ ಸಮಾಜಕ್ಕೆ ನೆಮ್ಮದಿ.

ನಮ್ಮಲ್ಲಿ ಬುದ್ಧಿಜೀವಿಗಳೆಂದು ಕರೆಸಿಕೊಳ್ಳುವ ಮಂದಿ ಇಂಥ ಕೆಲಸ ಮಾಡಬೇಕು. ನನ್ನಂಥ ಸಾಮಾನ್ಯರಿಗೆ ತಿಳುವಳಿಕೆ ನೀಡಿ ಅರಿವನ್ನು ಹೆಚ್ಚಿಸಬೇಕು. ದಯವಿಟ್ಟು ಇಂಥ ಕಾರ್ಯ ಮೊದಲಾಗಲಿ. ಎಲ್ಲರಲ್ಲೂ ಸದ್ಭುದ್ಧಿ ಮೂಡಲಿ. ಧರ್ಮ ಶಾಶ್ವತವಾಗಿ ಉಳಿಯಲಿ. ಈ ಕಾರ್ಯದಲ್ಲಿ ಎಲ್ಲರೂ ಕೈ ಜೋಡಿಸೋಣ.

ಈ ವಿಚಾರದಲ್ಲಿ ಅಲ್ಪಸ್ವಲ್ಪ ವಿವೇಕ ಇರುವುದು ಪತ್ರಕರ್ತರಿಗೇ. ಹೇಮಂತ್ ಚಾರ್ಲಿ ಚಾಪ್ಲಿನ್ ಮೂರ್ತಿ ಸ್ಥಾಪಿಸುತ್ತೇನೆ ಎಂದು ಹೇಳಿದಾಗ ಪತ್ರಕರ್ತರೊಬ್ಬರು ಯಾಕ್ರೀ ಕನ್ನಡದವರು ಯಾರೂ ಸಿಗ್ಲಿಲ್ವಾ? ನರಸಿಂಹರಾಜು ಮೂರ್ತಿ ಸ್ಥಾಪಿಸಿ’ ಎಂದಿದ್ದರಂತೆ. ಅವರ ವಿವೇಕ ಎಲ್ಲರಿಗೂ ಬರುತ್ತಿದೆ. ಚಾಪ್ಲಿನ್ ಮೂರ್ತಿ ಯಾಕೆ, ವಿವೇಕಾನಂದರ ಮೂರ್ತಿ ಸ್ಥಾಪಿಸಿ ಎಂದು ಯುವಕರು ಹೇಮಂತ್ ಹೆಗಡೆಗೆ ಸಲಹೆ ಮಾಡಿದ್ದಾರಂತೆ.

ಯಾರು ಏನೇ ಮಾಡಲಿ, ನಾನಂತೂ ಕರೆಂಟು ಆರಿಸಿ, ಬಲ್ಬು ಎಸೆದು, ಪೆನ್ನು ಪೇಪರು, ಕಂಪ್ಯೂಟರ್ ಪಕ್ಕಕ್ಕಿಟ್ಟು, ಹರಳೆಣ್ಣೆಯ ದೀಪ ಹಚ್ಚಿಕೊಂಡು ಗಲ್ಲಕ್ಕೆ ಕೈ ಕೊಟ್ಟು ಮಹಾನ್ ಚಿಂತಕನಂತೆ ಕೂತಿದ್ದೇನೆ.

ಕುರುಡುಗತ್ತಲಲ್ಲಿ ಹೊಸ ಜಗತ್ತು ಅತ್ಯಂತ ಸುಂದರವೂ ಸೌಹಾರ್ದಯುತವೂ ಸನಾತನವೂ ಆಗಿ ಕಂಗೊಳಿಸುತ್ತಿದೆ. ಇಂಥ ಜ್ಞಾನೋದಯಕ್ಕೆ ಕಾರಣರಾದ ಎಲ್ಲರಿಗೂ ನನ್ನ ಸಾಷ್ಟಾಂಗ ನಮಸ್ಕಾರ.

ಕಕ್ಕಿಲ್ಲಾಯ ೯೦

invitation-kakkilaya invitation-kakkilayaback

‘ತಿಳಿಗನ್ನಡಿಗರು’ ಬರುತ್ತಾ ಇದ್ದಾರೆ….

ಯಾರೀ ತಿಳಿಗನ್ನಡಿಗರು? ಏನು ಮಾಡಬೇಕೆನ್ನುತ್ತಾರೆ. ಅವರ ಮಾತಲ್ಲೇ ಕೇಳಿ..

ತುಳಿಲು,

ಕನ್ನಡವೆಂಬ ಹಿರಿನುಡಿಯಲ್ಲೇ ಬೇಕಾದಶ್ಟು ಸಾಕಾಗುವಶ್ಟು ಉಶ್ಟೋ ಪದಗಳು ಇದ್ದರೂ, ಬೇರೆನುಡಿಯ,  ಪದಗಳನ್ನು ತುಂಬಿ, ಬರಹಗನ್ನಡವನ್ನು ಅದರ ದಿಟದ ತನದಿಂದ ಸೊಗಡಿನಿಂದ ದೂರಾಗಿಸಿರುವ ಬಗ್ಗೆ ಬೇಸರಗೊಂಡ ನಾವು, ನಮ್ಮ ತಿಳಿವಿನ ಮಟ್ಟದಲ್ಲಿ, ಕನ್ನಡದ್ದೇ ಆದ ಉಲಿಗಳನ್ನು ಬಳಸಿ, ಬರಹಗಳನ್ನು ನೆಗಳಲು ಒಂದು ತಾವನ್ನು ಕಟ್ಟಿಕೊಂಡಿದ್ದೇವೆ. ಕನ್ನಡದಲ್ಲಿ ದೊರೆಯದ ಒರೆಗಳಿಗೆ, ಹೊರನುಡಿಯಿಂದ ಒರೆಗಳನ್ನು ಕನ್ನಡಯಿಸಿ ಬಳಸಿಕೊಳ್ಳವೆವು.

ನಮ್ಮ ಗುರಿ, ಕನ್ನಡದ್ದೇ ಆದ ಒರೆಗಳನ್ನು ಬಳಕೆಯಲ್ಲಿ ಉಳಿಸುವುದು, ಮತ್ತೂ ಬಳಕೆ ತಪ್ಪಿಸಿದ ಒರೆಗಳನ್ನು ಮರುಬಳಕೆಗೆ ತರುವುದೇ ಹೊರತು, ಇದು ಊ ನುಡಿಯ ಬಗ್ಗೆ ಹಗೆದೋರುವ, ಮೇಣ್ ಕೀಳುಗಳೆಯುವ ಮೊಗಸಲ್ಲ.

ತಿಳಿ ಎಂದರೆ ಕನ್ನಡದಲ್ಲಿ ಅಪ್ಪಟ ಎಂಬ ತಿಳಿವೂ ಇದೆ. ಅದಕ್ಕೆ ತಿಳಿಗನ್ನಡ ಎಂದರೆ ಅಪ್ಪಟವಾದ, ಬೆರಕೆಯಲ್ಲದ, ಕನ್ನಡದ್ದೇ ತನದ ಕನ್ನಡ ಎಂಬ ಅರಿತ.

ತಿಳಿಗನ್ನಡದ ಬರಹಗಳನ್ನು ಬರೆದು ಇಲ್ಲಿ ಹೊರತರಲು ಹುರುಪಿರುವವರಿಗೆ, ಊಗಲೂ ನಮ್ಮ ನಲ್ವರುವು.

ತಿಳಿಗನ್ನಡದಲ್ಲಿ ಬರೆಯಲು ಶಂಕರಬಟ್ಟರ ಹೊತ್ತಗೆಗಳು ನೆರವಾಗುವುವು.

ನನ್ನಿ,

ತಿಳಿಗನ್ನಡಿಗರು.

*****

ತಿಳಿಗನ್ನಡದಲ್ಲಿ ಬರೆಯೋರು

ಬರತ ಕುಮಾರ

ಬೇರೂರು – ಚಾಮರಾಜನಗರ

ನೆಲೆಯೂರು – ಬೆಂಗಳೂರು

ಕೆಲಸ – ಹಾರ್‍ಡ್ವೇರ್‍ ಇಂಜಿನಿಯರ್‍

ಮಾಯ್ಸ

ಬೇರೂರು – ನಾಗಮಂಗಲ, ಮಂಡ್ಯ

ನೆಲೆಯೂರು – ಬೆಂಗಳೂರು

ಕೆಲಸ – ಸಾಪ್ಟ್‌ವೇರ್‍ ಇಂಜಿನಿಯರ್‍

ಹರೆಯ – ೨೬

ಮಂಜುನಾತ

ಬೇರೂರು – ವೆಂಕಟಾಪುರ, ಕೋಲಾರ

ನೆಲೆಯೂರು – ಬೆಂಗಳೂರು

ಕೆಲಸ – ಸಿನಿಮ, ಪಾಪೆಗಾರ, ಕಲೆಗಾರ

ಹರೆಯ – ೨೫

ಹೇಳಿಕೆ – “ತಿಳಿಗನ್ನಡ ತಿಳ್ಯೋದು ಅಶ್ಟು ಸುಲಬಾನ.. ಯಾಕೆಂದ್ರೆ ಬೆಂಗ್ಳೂರ್  ಕನ್ನಡದಲ್ಲಿ ಬೆಂದೋಗಿರೋ  ನಂಗೆ ತಿಳಿ ಮಂಡ್ಯ ಕನ್ನಡ ಅರ್‍ತ ಆಗೋದು ತುಂಬಾನೆ ಕಶ್ಟ….ಪುಸ್ತಕದ ಕನ್ನಡ್ದಲ್ಲಿ ಪಳ್ಗೋಗಿರೊ ಕೈಗೆ ಅದ್ನ ಬರೆಯೋದು ಇನ್ನೂ ಕಶ್ಟ…  ಆದ್ರೂ ಒಂದು ಕೈ ನೋಡೇಬಿಡೊಣ… ನನ್ ಕೋಲಾರ್‍ದ ತಿಳೀನ ವಸಿ ಇಲ್ಲಿ ತೋರ್‍ಸೋಣ ಅಂತ ಸುರು ಮಾಡ್ತಾ ಇದೀನಿ…”

ಸಂಗನ ಕಾನಗವ್ಡ

ಬೇರೂರು – ಬಾಗಲಕೋಟೆ

ನೆಲೆಯೂರು – ಬೆಂಗಳೂರು

ಕೆಲಸ – ಸಾಪ್ಟ್‌ವೇರ್‍ ಇಂಜಿನಿಯರ್‍

%d bloggers like this: