‘ಎದೆಯುಬ್ಬಿಸಿ ಹೇಳಿಕೊಳ್ಳುವ ಮಾತುಗಳಿಲ್ಲ ಖಂಡಿತ..! ಬಯಲುಗಾಡಿನ ಹಳ್ಳಿಯ ಹುಡುಗನೊಬ್ಬನ ಅಂತರಾಳದ ತುಡಿತಗಳಿಗೆ ಅಕ್ಷರ ರೂಪಕೊಟ್ಟು ಅದರ ಹೂಗಳನು ಇದೋ ಈ ವಿದ್ಯುನ್ಮಾನದ ಪರದೆಯ ಮೇಲೆ ಅರಳಿಸ ಹೊರಟಿದ್ದಾನೆ….. ಪಯಣದ ದೂರ.. ತೀರವೇನೋ ತಿಳಿಯದ್ದು! ಹರಿದತ್ತ ನದಿಯ ಚಿತ್ತ…… ನಾನು ಎಂಬುವ ಸತ್ಯ- ಅಸತ್ಯಗಳ ನಡುವಿನ ಗೋಡೆ’.
‘ಓದುತ್ತಿರುವುದು ವಾಣಿಜ್ಯದಲ್ಲಿ ಸ್ನಾತಕೋತ್ತರ ಪದವಿ, ಮೈಸೂರು ವಿಶ್ವವಿದ್ಯಾನಿಲಯ ಮಾನಸಗಂಗೋತ್ರಿಯಲ್ಲಿ. ಮಂಡ್ಯ ನಗರವೆಂಬೋ ದೊಡ್ಡ ಹಳ್ಳಿಯಲ್ಲಿ ವಾಸ. ಕವಿತೆ ಓದುವುದೆಂದರೆ ಧ್ಯಾನ.. ಕವಿತೆ ಕಟ್ಟುವುದೆಂದರೆ .. ಪ್ರಾಣ! ‘ ಎನ್ನುವ ರಾಜೇಂದ್ರ ಪ್ರಸಾದ್ ಭೂಮಿಗಂಧ ಆರಂಭಿಸಿದ್ದಾರೆ. ಅದರಿಂದ ಆಯ್ದ ಒಂದು ಕವನ ಇಲ್ಲಿದೆ-
ತಾಕತ್ತು ಇದ್ದರೆ ಹರಾಜು ಹಾಕಿ
ನಗುವ ಮುಖದ ಒಳಗಿನ ಅಸತ್ಯ
ದಹಿಸುವ ಅಪರಿಮಿತ ದೀಪ್ತಿಯ…
ರಕ್ತ ಮೆತ್ತಿದ ಕೈಗಳ ಸಂಕೋಲೆ ಕಳಚಿ
ಬಿಳಿಯ ಗುಲಾಬಿಗಳ ಹಿಡಿಸಿದ
ವಕೀಲನ ವಾಗ್ ಶಕ್ತಿಯ….
ಇದಿಯಾ ತಾಕತ್ತು,
ಅರೆ ಬಟ್ಟೆ ಉಟ್ಟ ಫಕೀರನ ಮುಂದೆ
ಸೂರ್ಯ ಮುಳುಗದ ಸಾಮ್ರಾಜ್ಯ ಅಡ್ದ ಬಿದ್ದು
ಒಪ್ಪಿಕೊಂಡ “ಸತ್ಯಾಗ್ರಹ” ವ
ಎದುರಿಸುವ ಕಿಮ್ಮತ್ತು ಉಂಟೆನೋ….!
ಬಾ ನೋಡಿಯೇ ಬಿಡುವ…
ಕನ್ನಡಕ.. ಬಟ್ಟಲು.. ಗಡಿಯಾರ.. ಮೂರು……?
ಅವನಿತ್ತ ಉಸಿರು… ನೂರೂ ಮಿಕ್ಕ ಕೋಟಿ… ನಾವು!!
ಇದಿಯಾ ತಾಕತ್ತು…? ಹಾಕುವೆಯಾ ಹರಾಜು…..?
ಕೊಳ್ಳುವ ಕಿಮ್ಮತ್ತು ಯಾರಿಗೆ ಉಂಟು…?
ಇತ್ತೀಚಿನ ಟಿಪ್ಪಣಿಗಳು