
ನಾನು ಹುಟ್ಟಿದ ಜಿಲ್ಲೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ.
ನನ್ನ ಜಿಲ್ಲೆಯ ಬಗ್ಗೆ ನನಗೆ ಅತೀವ ಮೋಹ.
ಬೋರ್ಗೆರೆವ ಕಡಲು, ಪಶ್ಚಿಮ ಘಟ್ಟ ಶ್ರೇಣಿ, ಝುಳು ಝುಳು ಹರಿಯುವ ನದಿ, ಹಚ್ಚ ಹಸಿರಿನ ವನಸಿರಿ, ಸದಾ ಕ್ರಿಯಾಶೀಲರಾಗಿರುವ ಜನ- ಪುರಾಣದಲ್ಲಿ ವರ್ಣಿತವಾಗಿರುವ ನಾಗಲೋಕವಿದು.
’ತುಳುನಾಡು’ ಎಂದು ಕರೆಯಲ್ಪಡುವ ಈ ಕರಾವಳಿ ಸಮೃದ್ದವಾದ ಕಲಾ ಪರಂಪರೆಯನ್ನು ಹೊಂದಿದೆ. ಇಲ್ಲಿ ನಾಗಾರಾಧನೆ, ಭೂತಾರಾಧನೆಯಂತ ಆರಾಧನ ಪದ್ದತಿಯಿದೆ. ಕಂಬಳ, ಚೆನ್ನೆಮಣೆ, ಕಾಯಿ ಕುಟ್ಟುವುದು, ಕೋಳಿ ಅಂಕದಂತ ಜಾನಪದ ಕ್ರೀಡೆಗಳಿವೆ. ಆಟಿಕಳಂಜ, ಚೆನ್ನುನಲಿಕೆಯಂತ ಜಾನಪದ ಕುಣಿತವಿದೆ. ಧರ್ಮ ಸಮನ್ವಯಕ್ಕೆ ಕಾರಣವಾದ ಅಲಿ, ಬಬ್ಬರ್ಯ ಭೂತವಿದೆ. ಸರ್ವಧರ್ಮದವರಿಂದಲೂ ಪೂಜಿಸಲ್ಪಡುವ ಅತ್ತೂರು ಚರ್ಚ್ ಇದೆ. ಜೈನ-ಶೈವ ಸಂಗಮದ ಧರ್ಮಸ್ಥಳವಿದೆ. ಉಳ್ಳಾಲದ ದರ್ಗವಿದೆ. ಬಪ್ಪಬ್ಯಾರಿಯಿಂದ ಕಟ್ಟಲಾಗಿದೆಯೆನ್ನುವ ಮುಲ್ಕಿಯ ಕಾರ್ನಾಡ್ ದುರ್ಗಪರಮೇಶ್ವರಿ ದೇವಸ್ಥಾನವಿದೆ.
ಹಾಗಿದ್ದರೂ ನನ್ನ ಜಿಲ್ಲೆಯಿಂದು ಕೋಮು ಗಲಭೆಗಳಿಂದ ತತ್ತರಿಸಿದೆ. ಮಾತೃಮೂಲ ಸಂಸ್ಕೃತಿ ಇನ್ನೂ ಜೀವಂತವಾಗಿರುವ ಈ ನಾಡಿನಲ್ಲಿ ಮಹಿಳೆಯರ ಮೇಲೆ ನಿರಂತರ ಹಲ್ಲೆಗಳಾಗುತ್ತಿದೆ. ಜನ ಭಯಭೀತರಾಗಿದ್ದಾರೆ. ದನಿಯೆತ್ತಿದವರ ಧ್ವನಿಯನ್ನು ಅಡಗಿಸಲಾಗುತ್ತಿದೆ.
ಏನಾದರೂ ಮಾಡಬೇಕಲ್ಲಾ……. ಎಂದಾಗ ಹುಟ್ಟಿಕೊಂಡದ್ದೇ ಈ ಆಲೋಚನೆ.
ನಾನು ಮತ್ತು ಬೆಂಗಳೂರಿನ ಉಷಾ ಕಟ್ಟೆಮನೆ ಸೇರಿ ‘ಕಡಲ ತಡಿಯ ತಲ್ಲಣ’ ಎಂಬ ಪುಸ್ತಕವನ್ನು ಸಂಪಾದಿಸುತ್ತಿದ್ದೇವೆ. ಸೃಷ್ಟಿ ಪ್ರಕಾಶನದ ನಾಗೇಶ್ ಅದನ್ನು ಪ್ರಕಟಿಸುತ್ತಿದ್ದಾರೆ ನಮ್ಮ ಗೆಳೆಯರ ಬಳಗ ಒತ್ತಾಸೆಯಾಗಿ ನಿಂತಿದೆ. ದೆಹಲಿಯಲ್ಲಿ ಮುಂಬಯಿಯಲ್ಲಿ ಮತ್ತು ಬೆಂಗಳೂರಲ್ಲಿ ಪುಸ್ತಕ ಬಿಡುಗಡೆಯಾಗಲಿದೆ.
ತುಳುನಾಡನ್ನು ಕೇಂದ್ರಿಕರಿಸಿರುವ ಈ ಪುಸ್ತಕದಲ್ಲಿ ಕಡಲ ಕಿನಾರೆಯ ಬಹಳಷ್ಟು ಲೇಖಕರ ಬರಹಗಳಿರುತ್ತವೆ. ಅವುಗಳು ಈಗ ತಾನೆ ಅಚ್ಚಿನ ಮನೆ ಪ್ರವೇಶಿಸುತ್ತಲಿದೆ. ಇನ್ನು ಕೆಲವೇ ದಿನಗಳಲ್ಲಿ ಅದು ನಿಮ್ಮ ಕೈ ಸೇರಲಿದೆ. ಅದಕ್ಕೆ ಮೊದಲು ನಿಮ್ಮನ್ನೊಂದು ಸಲಹೆ ಕೇಳೋಣ ಅನಿಸಿತು.’ಕಡಲ ತಡಿಯ ತಲ್ಲಣ’ ಕುರಿತಂತೆ ತಮ್ಮ ಸಲಹೆ ಸೂಚನೆಗಳಿಗೆ ಸ್ವಾಗತವಿದೆ. ನಾವು ಮುನ್ನಡೆಯುವಲ್ಲಿ ಅದು ಸಹಾಯಕವಾಗಬಹುದೆಂಬ ನಂಬಿಕೆ ನಮ್ಮದು.
ಉಷಾ ಕಟ್ಟೆಮನೆ ಮತ್ತು
ಪುರುಷೋತ್ತಮ ಬಿಳಿಮಲೆ
Like this:
Like ಲೋಡ್ ಆಗುತ್ತಿದೆ...
ಇತ್ತೀಚಿನ ಟಿಪ್ಪಣಿಗಳು