ನಮ್ಮೆಲ್ಲರ ಪ್ರೀತಿಯ ಜಿ ಆರ್ ವಿಶ್ವನಾಥ್ ಗೆ ೬೦ ವಸಂತಗಳು ತುಂಬಿತಲ್ಲಾ, ಆ ನೆನಪಿಗೆ ಈ ಹಿಂದೆ ‘ಅವಧಿ’ಯ ‘ಡೋರ್ ನಂ 142’ ಅಂಕಣದಲ್ಲಿ ಪ್ರಕಟವಾಗಿದ್ದ ಒಂದು ಲೇಖನ ಮತ್ತೆ ನಿಮ್ಮ ಮುಂದೆ –
ಕಚ್ಚೆ ಪಂಚೆ, ಕರಿಕೋಟು, ತಲೆಗೆ ಟೊಪ್ಪಿಗೆ, ಕಿವಿಗೆ ಸದಾ ತಗುಲಿಕೊಂಡಿರುವ ಪಾಕೆಟ್ ಟ್ರಾನ್ಸಿಸ್ಟರ್.
ಬೆಂಗಳೂರು ಎಂಬ ಸಂತೆಯಲ್ಲಿ ಕಂಡ ಈ ಮುಖ ನನ್ನೊಳಗೆ ಸದಾ ಕುತೂಹಲ ಹುಟ್ಟುಹಾಕಿತ್ತು. ಟಿವಿ ಇಲ್ಲದ ಕಾಲದಲ್ಲಿ, ಕ್ರಿಕೆಟ್ ಎಂಬುದು ಸಾಂಕ್ರಾಮಿಕ ರೋಗವಾಗಿರದಿದ್ದ ಕಾಲದಲ್ಲಿ ಇಳಿವಯಸ್ಸಿನ ಮುದುಕರೊಬ್ಬರು ಕಿವಿಗೆ ಟ್ರಾನ್ಸಿಸ್ಟರ್ ಅಂಟಿಸಿಕೊಂಡೇ ಇರುತ್ತಾರೆ ಎಂದರೆ ಯಾಕೊ ಥಟ್ಟನೆ ಗಮನ ಸೆಳೆಯುತ್ತದೆ.ಅಮೆರಿಕಾದ ಮಾರುಕಟ್ಟೆಯಲ್ಲಿ ಕಂಡ ಹಚ್ಚ ಹಸುರಿನ ಕೊತ್ತಂಬರಿ ಸೊಪ್ಪಿನ ಹಾಗೆ, ತುಂಬು ದಂತಪಂಕ್ತಿಯಲ್ಲಿ ಉದುರಿದ ಒಂದೇ ಒಂದು ಹಲ್ಲಿನಂತೆ, ಖಾಲಿ ಸಭಾಂಗಣದಲ್ಲಿ ತುಂಬಿದ ಒಂದೇ ಒಂದು ಕುರ್ಚಿಯಂತೆ…
ನಿರ್ಲಿಪ್ತ ಮುಖಕ್ಕೆ ಆ ಟ್ರಾನ್ಸಿಸ್ಟರ್ ದಾಟಿಸುತ್ತಿದ್ದುದಾದರೂ ಏನು ಎಂಬುದೇ ಆ ಕುತೂಹಲ. ಆದರೆ ಇನ್ನೂ ಒಂದು ವಿಶೇಷವಿತ್ತು. ಆ ಹಿರಿಯರು ಕ್ರಿಕೆಟ್ ಸೀಸನ್ ಬಂದಾಗ ಮಾತ್ರ ಟ್ರಾನ್ಸಿಸ್ಟರ್ ಕಿವಿಗೆ ತಗುಲಿಸಿಕೊಳ್ಳುತ್ತಿದ್ದರು. ಕ್ರಿಕೆಟ್ ಎಂಬುದು ಆಗ ಇನ್ನೂ ದುಡ್ಡು ಕಂಡಿರಲಿಲ್ಲ. ಹೀಗಾಗಿ ದಿಢೀರ್ ದುಡ್ಡು ಮಾಡುವ “ಒನ್ ಡೇ”ಗಳೂ ಹುಟ್ಟಿರಲಿಲ್ಲ. ಹಾಗಾಗಿ ಐದು ದಿನಗಳ ಕಾಲದ ಟೆಸ್ಟ್ ಗಳು ಮಾತ್ರವೇ ಕ್ರಿಕೆಟ್ ಆಗಿತ್ತು. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮ್ಯಾಚಿದ್ದರೆ ಐದು ದಿನಗಳ ಕಾಲ ಶಾಲೆ ಕಾಲೇಜಿಗೆ ರಜಾ. ಐದು ದಿನಗಳ ಕಾಲವೂ ಬೆಂಗಳೂರು ಬೀದಿಗಳಲ್ಲಿ ಕಿವಿಗೆ ಟ್ರಾನ್ಸಿಸ್ಟರ್ ತಗುಲಿಸಿಕೊಂಡ ಮಂದಿ.
ಪಡ್ಡೆ ಹುಡುಗರ ಮಧ್ಯೆ ಕರಿ ಟೊಪ್ಪಿಯ ಹಿರಿಯ. ಸದಾ ಬಸ್ ಸ್ಟಾಂಡಿನಲ್ಲಿ ಕಾಣುತ್ತಿದ್ದ ಈ ಹಿರಿಯರು ಒಂದು ದಿನ ಮನೆಯೊಂದರ ಕಾಂಪೌಂಡಿನಲ್ಲಿ ಕಂಡರು. ರಾಜಾಜಿನಗರದ ರಾಮಪ್ಪ ಶಾಪ್ ರಸ್ತೆಯಲ್ಲಿದ್ದ ಸಾಧಾರಣ ಮನೆ ಅದು. ಪಕ್ಕಾ ಮಿಡ್ಲ್ ಕ್ಲಾಸ್ ಮನೆ. ಮನೆಯೊಳಗೆ ಮನೆಯೊಡೆಯ ಇದ್ದಾನೊ ಇಲ್ಲವೊ ಎಂಬುದೂ ಗೊತ್ತಾಗದಂತೆ ತಣ್ಣಗಿರುತ್ತಿದ್ದ ಮನೆ.
ಗಣೇಶನ ಹಬ್ಬ ಬಂತು. ಹುಡುಗರಿಗೆಲ್ಲಾ ಮನೆ ಮನೆಗೆ ಹೋಗಿ ನೂರೊಂದು ಗಣೇಶ ನೋಡುವ ಸಂಭ್ರಮ. ಬೀದಿ ಬೀದಿ ಸುತ್ತಬಹುದಲ್ಲ ಅನ್ನೋದು ಒಂದು ಅಟ್ರಾಕ್ಷನ್. ಅದಕ್ಕಿಂತ ಗಣೇಶ ಇಟ್ಟವರು ಕೊಡುವ ಪ್ರಸಾದ. ಗಣೇಶ ಬೇಕಿಲ್ಲದಿದ್ದರೂ ಪ್ರಸಾದ ಇರಲಿ ಅನ್ನೋ ಆಸೆ.
ಚಡ್ಡಿ ಏರಿಸಿ ಮನೆ ಮನೆ ತಿರುಗುತ್ತಾ ಬಂದಾಗ ಆ ಹಿರಿಯರ ಮನೇನೂ ಸಿಕ್ತು. ಯಥಾ ಪ್ರಕಾರ ಗಣೇಶ ಇಟ್ಟಿದೀರಾ ಕೋರಸ್ ಹೊರಡಿಸಿ ಉತ್ತರಕ್ಕೂ ಕಾಯದೆ ಒಳಗೆ ನುಗ್ಗೋದೇ ಕಸುಬು. ಆ ಮನೆಗೂ ಒಳಗಡೆ ನುಗ್ಗಿದಾಗ “ಷಾಕ್” ಕಾದಿತ್ತು. ಅದು ಮನೆ-ಅಲ್ಲ, ಮ್ಯೂಸಿಯಂ-ಅಲ್ಲ, ಕ್ರಿಕೆಟ್ ಸ್ಟೇಡಿಯಂ.
ಓಹ್! ಇದು ಜಿ ಆರ್ ವಿಶ್ವನಾಥ್ ಮನೆ.
ಗುಂಡಪ್ಪ ರಂಗಪ್ಪ ವಿಶ್ವನಾಥ್ ಮನೆ.
ನಾನು ನೋಡುತ್ತಿದ್ದ ಆ ಹಿರಿಯ ವಿಶ್ವನಾಥ್ ಹೆಸರಲ್ಲಿರುವ “ಜಿ ಆರ್” ಎಂದು ಗೊತ್ತಾದದ್ದೇ ಆಗ.
ಅಡ್ಯನಡ್ಕ ಕೃಷ್ಣಭಟ್ಟರು ತಮ್ಮ ಮಗ ಮೊದಲ ಬಾರಿಗೆ ಸಮುದ್ರ ನೋಡಿದಾಗ ಅವನಿಗೆ ಉಂಟಾದ ಅಚ್ಚರಿಯನ್ನು ಬಣ್ಣಿಸಿದ್ದರು. ಅವನ ಬಾಯಲ್ಲಿ ಮಾತೇ ಹೊರಟಿರಲಿಲ್ಲ. ಕಣ್ಣುಗಳೇ ಎಲ್ಲವನ್ನೂ ಹೇಳಿ ಮುಗಿಸಿತ್ತು. ಆ ಕಣ್ಣುಗಳು ಹೇಳಿದ್ದಕ್ಕೆ ಎಷ್ಟು ಮಾತುಗಳ ಸಪೋರ್‍ಟ್ ಕೊಟ್ಟಿದ್ದರೂ ಆಗುತ್ತಿರಲಿಲ್ಲ.
ಈಗ ನಾನು ಅದೇ ಸ್ಥಿತಿಯಲ್ಲಿದ್ದೆ. ಸದಾ ನಾನು ಕೇಳುತ್ತಿದ್ದ, ಪತ್ರಿಕೆಗಳಲ್ಲಿ ನೋಡುತ್ತಿದ್ದ, ಜಗತ್ತಿನ ಉದ್ದಗಲಕ್ಕೆ ಬೆಳೆದು ನಿಂತಿದ್ದ ಆ ಜಿ ಆರ್ ವಿಶ್ವನಾಥ್ ಮನೆಯಲ್ಲೇ ನಾನು ನಿಂತಿದ್ದೆ.
ಜಿ ಆರ್ ವಿಶ್ವನಾಥ್ ಏಕೋ ನಮಗೆ ಕ್ರಿಕೆಟ್ ಆಟಗಾರ ಮಾತ್ರವಾಗಿರಲಿಲ್ಲ. ಆತ ನೈತಿಕತೆಯ ಒಂದು ಪಾಠವಾಗಿದ್ದ.
ಜಿ ಆರ್ ವಿಶ್ವನಾಥ್ ಗೆ ತಾನು ಔಟಾಗಿದ್ದೇನ ಅನ್ನಿಸಿದ್ದರೆ ಅಂಪೈರ್ ಗೆ ಬೆರಳೆತ್ತುವ ಕೆಲಸವನ್ನೇ ಕೊಡುತ್ತಿರಲಿಲ್ಲ. ತಿರುಗಿ ನೋಡದೆ ಪೆವಿಲಿಯನ್ ಗೆ ಹಿಂದಿರುಗುತ್ತಿದ್ದರು. ಔಟ್ ಕೊಟ್ಟ ನಂತರವೂ ವಿಶ್ವನಾಥ್ ಕ್ರೀಸ್ ನಲ್ಲಿಯೇ ಉಳಿದರು ಎಂದರೆ ಕ್ರೀಡಾಂಗಣದಲ್ಲಿ ನೂರಾರು ಕುರ್ಚಿಯ ಕಥೆ ಮುಗಿಯಿತು ಅಂತಲೇ ಅರ್ಥ. ಔಟಾಗಿ ಪೆವಿಲಿಯನ್ನಿಗೆ ಮರಳುತ್ತಿದ್ದ ಬ್ಯಾಟ್ಸ್ ಮನ್ ನನ್ನು ಮತ್ತೆ ಕರೆದು ಆಡಿಸಿ ಮ್ಯಾಚನ್ನೇ ಕಳೆದುಕೊಂಡ ಕ್ಯಾಪ್ಟನ್ ಒಬ್ಬನಿದ್ದರೆ ಆತ ಜಿ ಆರ್ ವಿಶ್ವನಾಥ್ ಮಾತ್ರ.
ವಿಶ್ವಕಪ್ ನಲ್ಲಿ ಕೇವಲ “ಆಡಿ” ಕಾರಿನ ಮೇಲೆ ಕಣ್ಣಿಟ್ಟೇ ಆಡಿದವರ ಮಧ್ಯೆ ಕ್ಯಾಪ್ಟನ್ ಗಿರಿಯನ್ನೇ ಒತ್ತೆ ಇಟ್ಟು “ಆಡಿ”ಸಿದವರೂ ಇದ್ದರು.
ಜಿ ಆರ್ ವಿಶ್ವನಾಥ್ ಸುನಿಲ್ ಗವಾಸ್ಕರ್ ತಂಗಿಯನ್ನು ಮದುವೆಯಾದರಂತೆ ಅಂತಾ ಸುದ್ದಿ ಬಂದಾಗ ನಾವು ಮರುಗಿದ್ದೂ ಉಂಟು. ಗವಾಸ್ಕರ್ ಆಟದ ಬಗ್ಗೆ ನಮಗೇನೂ ತಕರಾರು ಇರಲಿಲ್ಲ. ಆದರೆ ಎಂತಾ ವಿಶ್ವನಾಥ್ ಅಂತಾ ಚಾಣಾಕ್ಷನ ಬಳಿಗೆ ಎಂದು ಯಾಕೋ ಅನಿಸಿಬಿಟ್ಟಿತ್ತು. ಕ್ರಿಕೆಟ್ ನಲ್ಲಿ ಮುಂಬೈ ದಾದಾಗಿರಿ ನಡೆಯಿತ್ತಿದ್ದ ದಿನಗಳು ಅವು.
ಜಿ ಆರ್ ವಿಶ್ವನಾಥ್ ಅಂದರೆ ಲತಾ ಮಂಗೇಶ್ಕರರ ಹಾಡಿನಂತೆ; ಹತ್ತು ಗವಾಸ್ಕರ್ ಗಳು ಬರಬಹುದು, ಆದರೆ ಇನ್ನೊಬ್ಬ ವಿಶ್ವನಾಥ್ ಬರಲಾರ -ಎಂಬಂತಹ ಸಾಲುಗಳು “ಸುಧಾ”ದಲ್ಲಿತ್ತು.
ಯಾಕೋ ಮನದಾಳದಲ್ಲಿ ಅದು ನಿಂತುಬಿಟ್ಟಿದೆ. ಜಿ ಆರ್ ವಿಶ್ವನಾಥ್ ನಮಗೆ ಜಿ ಆರ್ ವಿಶ್ವನಾಥ್ ಅಲ್ಲ. ನಮ್ಮದೇ ರೀತಿಯ ಮನೆ ಇರುವ ಗುಂಡಪ್ಪ ರಂಗಪ್ಪನವರ ಮಗ ವಿಶ್ವನಾಥ್. ನೂರಾರು ಲೋಗೋ ಬಣ್ಣದ ಟಿ ಶರ್ಟ್ ಇಲ್ಲದ, ಬಿಳಿ ಟೋಪಿ, ಬಿಳಿ ಡ್ರೆಸ್ ಧರಿಸಿದ, ನಗಲೂ ಗೊತ್ತಿಲ್ಲದ ವಿಶ್ವನಾಥ್.
ಬೆಂದು ಆದವ ಬೇಂದ್ರೆ ಅಂತಾರಲ್ಲಾ, ಹಾಗೇ
ಬೆಂದು ಆದವ ವಿಶ್ವನಾಥ್ ಕೂಡಾ…
ಫೆಬ್ರ 13, 2009 @ 23:28:32
ರಾಹುಲ್ ದ್ರಾವಿಡ್ ಬಗ್ಗೆನೂ ಮುಂದೆ ಇದೇ ರೀತಿ ಬರೆಯಬಹುದೇನೋ!